ಕ್ಯಾಥರೀನಾ ಏನಾದಳು?
ಪೀತಪತ್ರಿಕೋದ್ಯಮಕ್ಕೆ ಕನ್ನಡಿ
‘ಪತ್ರಿಕೋದ್ಯಮ ಇಂದು ಎಂತಹ ಪಾತಾಳ ತಲುಪಿದೆ’ ಎನ್ನುವುದನ್ನು ನಾನು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಮುದ್ರಣ ಮಾಧ್ಯಮಗಳು ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಕೆಲವು ಪತ್ರಿಕೆಗಳನ್ನು ‘ಪೀತ ಪತ್ರಿಕೆಗಳು’ ಎಂದು ಮುಖ್ಯವಾಹಿನಿಯಿಂದ ದೂರವಿಡಲಾಗುತ್ತಿತ್ತು. ಸಜ್ಜನರು, ಸದಭಿರುಚಿಯಿರುವ ಜನರು ಈ ಪತ್ರಿಕೆಗಳಿಂದ ದೂರವಿರುತ್ತಿದ್ದರು. ಪ್ರಬುದ್ಧರು ಆ ಪತ್ರಿಕೆಗಳನ್ನು ಓದುತ್ತಿರಲಿಲ್ಲ. ಆದರೆ, ಇಂತಹ ಪತ್ರಿಕೆಗಳು ಸಮಾಜದ ಮೇಲೆ ಬೀರುತ್ತಿದ್ದ ಪರಿಣಾಮದಲ್ಲಿ ಅಂದಿಗೂ ಇಂದಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಇಂದು ಪತ್ರಿಕೆಗಳ ಸ್ಥಾನದಲ್ಲಿ ಟಿವಿ ಚಾನೆಲ್‌ಗಳು, ಜಾಲತಾಣಗಳು ಅಂದಿನ ಪೀತ ಪತ್ರಿಕೆಗಳ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆೆ. ಇವುಗಳು ಮುಖ್ಯವಾಹಿನಿಯ ಜೊತೆಗೆ ಅವಿನಾಭಾವವಾಗಿ ಬೆರೆತುಕೊಂಡಿವೆ. ಸಮಾಜದ ಪತನದಲ್ಲಿ ಇವುಗಳ ಪಾತ್ರ ಬಹುದೊಡ್ಡದಿದೆ.
‘ದಿ ಲೋಸ್ಟ್ ಹಾನರ್ ಆಫ್ ಕ್ಯಾಥರೀನಾ ಬ್ಲಮ್’ ಈ ಕಾದಂಬರಿಯನ್ನು ಬರೆದಿರುವುದು ಹೈನ್ರಿಶ್ ಬ್ಯೋಲ್. ನೊಬೆಲ್ ಪ್ರಶಸ್ತಿ ವಿಜೇತ ಲೇಖಕನ ಈ ಕೃತಿ 1974ರಲ್ಲಿ ಪ್ರಕಟವಾಯಿತು. ಪೀತಪತ್ರಿಕೋದ್ಯಮವನ್ನು ಅತ್ಯಂತ ಪರಿಣಾಮಕಾರಿಯಾಗಿ ವಿಡಂಬನೆ ಮಾಡುವ ಈ ಕಾದಂಬರಿ, ತನ್ನ ವ್ಯಂಗ್ಯಗುಣದಿಂದ ಇಂದಿಗೂ ಪ್ರಸ್ತುತ ಅನ್ನಿಸಿಕೊಂಡಿದೆ. 70 ದಶಕದ ಕಾಲಘಟ್ಟದ ಈ ಕಾದಂಬರಿಯ ವಸ್ತು ಇಂದಿಗೂ ಅನ್ವಯವಾಗುವಂತಹದು. ಪತ್ರಿಕೋದ್ಯಮ ವೃತ್ತಿ ದಾರಿ ತಪ್ಪಿದಾಗ ಅದು ಹೇಗೆ ಸಮಾಜದ ಬದುಕಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಲ್ಲದು ಮತ್ತು ಸ್ವತಃ ಪತ್ರಕರ್ತನನ್ನೂ ಒಳ ಹೊರಗಿನಿಂದ ಬಲಿಹಾಕಬಲ್ಲದು ಎನ್ನುವುದನ್ನು ಹೇಳುವ ಕಾದಂಬರಿ ಇದು. ಈ ಕಾದಂಬರಿಯನ್ನು ಕನ್ನಡದ ಹಿರಿಯ ಪತ್ರಕರ್ತರಾಗಿರುವ ಪದ್ಮರಾಜ ದಂಡಾವತಿ ‘ಕ್ಯಾಥರೀನಾ ಏನಾದಳು?’ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ.
1975ರಲ್ಲಿ ಈ ಕಾದಂಬರಿಯ ಇಂಗ್ಲಿಷ್ ಆವೃತ್ತಿ ಪ್ರಕಟಗೊಂಡಾಗ ಕೆಲವು ಕಾರಣಗಳಿಂದ ಸುದ್ದಿಯಾಗಿತ್ತು. ಮುಖ್ಯವಾಗಿ ಕಾದಂಬರಿಯಲ್ಲಿ ಬರುವ ಪತ್ರಿಕೆಗೂ ಅಂದು ಪ್ರಕಟವಾಗುತ್ತಿದ್ದ ‘ಬಿಲ್ಡ್ ಝೈತುಂಗ್’ ಎನ್ನುವ ಪತ್ರಿಕೆಗೂ ಸಾಮ್ಯತೆಗಳಿದ್ದವು ಮತ್ತು ಕಾದಂಬರಿಕಾರ ಇದನ್ನು ‘ಇದು ಆಕಸ್ಮಿಕವಲ್ಲ, ಇದು ಅನಿವಾರ್ಯ’ ಎಂದೂ ಹೇಳಿದ್ದಾರೆ. ಅವರ ವೈಯಕ್ತಿಕ ಜೀವನದ ಮೇಲೆ ಆ ಪತ್ರಿಕೆ ಮಾಡಿದ ಗಾಯವೇ ಇಂತಹದೊಂದು ಕಾದಂಬರಿಯನ್ನು ಬರೆಯಲು ಸ್ಫೂರ್ತಿಯಾಯಿತು ಎನ್ನಲಾಗುತ್ತದೆ.
ಕಾದಂಬರಿ ತೆರೆದುಕೊಳ್ಳುವುದೇ ಪತ್ರಿಕೆಯ ಒಬ್ಬ ವರದಿಗಾರನ ಕೊಲೆಯೊಂದಿಗೆ. ನ್ಯೂಸ್ ಪತ್ರಿಕೆಯ ವರದಿಗಾರ ಟ್ರೋಟ್‌ಗೆಸ್ ಎಂಬಾತನನ್ನು ಗುಂಡಿಟ್ಟು ಕೊಲೆ ಮಾಡಿದ ಕ್ಯಾಥರೀನಾ ನೇರವಾಗಿ ಪೊಲೀಸರಿಗೆ ಶರಣಾಗುತ್ತಾಳೆ. ‘ನಾನು ಯಾಕೆ ಪತ್ರಕರ್ತನನ್ನು ಕೊಂದೆ’ ಎನ್ನುವ ಆಕೆಯ ವಿವರಣೆಗಳೊಂದಿಗೆ ಕಾದಂಬರಿ ಬೆಳೆಯುತ್ತಾ ಹೋಗುತ್ತದೆ. ಅದರ ಜೊತೆ ಜೊತೆಗೇ ಪತ್ರಿಕಾ ವರದಿಗಾರಿಕೆಯ ದುರಂತಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ವಿಚಾರಣೆ ನಡೆಯುತ್ತಿರುವಾಗಲೇ, ಸೋರಿಕೆಯಾದ ಸುದ್ದಿಯ ಆಧಾರದಲ್ಲಿ ಒಬ್ಬಾಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪತ್ರಿಕೆ, ಅದು ಅಂತಿಮವಾಗಿ ಯಾವೆಲ್ಲ ರೀತಿಯಲ್ಲಿ ಒಬ್ಬನ ಬದುಕನ್ನು ದುರಂತಕ್ಕೀಡು ಮಾಡಬಹುದು ಎನ್ನುವುದನ್ನು ಈ ಕಾದಂಬರಿ ಹೇಳುತ್ತದೆ.
ಬಹುರೂಪಿ, ಬೆಂಗಳೂರು ಈ ಕೃತಿಯನ್ನು ಹೊರ ತಂದಿದೆ. 148 ಪುಟಗಳ ಈ ಕಾದಂಬರಿಯ ಮುಖಬೆಲೆ 180 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.