‘ಮೇಕ್ ಇನ್ ಇಂಡಿಯಾ’ ಸಾಧಿಸಿದ್ದೇನು?
‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಶುರುವಾಗಿ 10 ವರ್ಷಗಳು ತುಂಬಿವೆ. ಮೋದಿ ಸರಕಾರ ಅದರ ಸಂಭ್ರಮದಲ್ಲಿದೆ.
ಭಾರತದಲ್ಲಿ ರಫ್ತು ಹೆಚ್ಚಳ, ಸಾಮರ್ಥ್ಯ ನಿರ್ಮಾಣ ಮತ್ತು ಆರ್ಥಿಕ ಬಲವರ್ಧನೆಗೆ ‘ಮೇಕ್ ಇನ್ ಇಂಡಿಯಾ’ ಕಾರಣವಾಗಿದೆ ಎಂದು ವಾರ್ಷಿಕೋತ್ಸವ ಸಂದರ್ಭದಲ್ಲಿ ಬರೆದಿರುವ ವಿಶೇಷ ಲೇಖನದಲ್ಲಿ ಮೋದಿ ಹೇಳಿದ್ದಾರೆ.
ಜಗತ್ತು ಭಾರತದೆಡೆಗೆ ಕುತೂಹಲದಿಂದ ನೋಡಲು ಇದು ಕಾರಣವಾಗಿದೆ ಎಂದೂ ಮೋದಿ ಹೇಳಿಕೊಂಡಿದ್ದಾರೆ.
ಆಮದುದಾರ ದೇಶವಾಗಿ ಮಾತ್ರ ಇರದೆ ರಫ್ತುದಾರ ರಾಷ್ಟ್ರವೂ ಆಗುವುದನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆಯಲ್ಲಿ ಭಾರತದ ಪ್ರಗತಿ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ 10 ವರ್ಷಗಳ ಹಿಂದೆ ಪ್ರಾರಂಭವಾದ ಯೋಜನೆ ಶಕ್ತಿಯುತ ಆಂದೋಲನವಾಗಿ ಪರಿವರ್ತನೆಯಾಗಿದೆ ಎಂದಿದ್ದಾರೆ ಮೋದಿ.
ನಾವು ಕನಸಿನಲ್ಲಿಯೂ ಯೋಚಿಸದ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಛಾಪು ಕಾಣಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಇಲೆಕ್ಟ್ರಾನಿಕ್ಸ್‌ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಇದು ಭಾರತೀಯ ಪ್ರತಿಭೆ ಮತ್ತು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ ಎಂದೆಲ್ಲ ಮೋದಿ ತಮ್ಮ ಲೇಖನದಲ್ಲಿ ಹೇಳಿಕೊಳ್ಳುತ್ತ ಹೋಗಿದ್ದಾರೆ.
ಅವರೇ ತಂದಿರುವ ಯೋಜನೆಯನ್ನು ಅವರು ಹಾಡಿ ಹೊಗಳದೇ ಇರಲು ಸಾಧ್ಯವಿಲ್ಲ. ಆದರೆ ಆ ಹೊಗಳಿಕೆಗಳು ವಾಸ್ತವವನ್ನು ಹೇಳುತ್ತಿವೆಯೇ ಅಥವಾ ಹೊಗಳಿಕೆ ಮಾತ್ರವೆ?
‘ಮೇಕ್ ಇನ್ ಇಂಡಿಯಾ’ ಎಂದು ದೇಶದೊಳಕ್ಕೆ ಜಗತ್ತನ್ನೆಲ್ಲ ಆಹ್ವಾನಿಸುವ ಮೋದಿಯವರ ಈ ಯೋಜನೆ ಅವರ ಬಹುತೇಕ ಯೋಜನೆಗಳ ಹಾಗೆ ಮತ್ತೊಂದು ಶೋಕಿ ಮಾತ್ರವಾಗಿ, ಒಳಗೊಳಗೇ ಪೊಳ್ಳಾಗಿದೆ ಎಂಬುದನ್ನು ಪರಿಣಿತರೇ ಬಿಚ್ಚಿಡುತ್ತಿದ್ದಾರೆ.
ಸಂಶೋಧಕ ವಾಸುಕಿ ಶಾಸ್ತ್ರಿ ಅವರ ಬರಹವೊಂದನ್ನು ಸ್ಕ್ರಾಲ್ ಡಾಟ್ ಇನ್ ಪ್ರಕಟಿಸಿದ್ದು, ಮೋದಿ ಹೇಳುವ ಯಶಸ್ಸಿನ ಕಥೆಗೂ, ಮೇಕ್ ಇನ್ ಇಂಡಿಯಾದ ಅಸಲಿಯತ್ತಿಗೂ ಅಜಗಜಾಂತರ ಕಾಣಿಸುತ್ತಿದೆ.
ವಿದೇಶಿ ಕಂಪೆನಿಗಳು ಭಾರತ ಸರಕಾರ ಕೊಡುವ ಸಬ್ಸಿಡಿ ಆಕರ್ಷಣೆಗೆ ಇಲ್ಲಿ ಬಂದು ಕೂತಿವೆ ಎಂಬುದು ಒಂದು ವಾಸ್ತವವಾದರೆ, ಹಾಗೆ ಬಂದಿರುವ ಮೈಕ್ರಾನ್‌ನಂತಹ ವಿದೇಶಿ ಕಂಪೆನಿಗಳ ಒಟ್ಟು ಬಂಡವಾಳದ ಮುಕ್ಕಾಲು ಪಾಲನ್ನು ಭಾರತವೇ ಕೊಟ್ಟು ಸಾಕುತ್ತಿದೆ ಮತ್ತು ಅವು ಮಾತ್ರ ಭಾರತಕ್ಕೆ ಕಿಂಚಿತ್ ಪಾಲೂ ಕೊಡದೆ ಒಡೆತನ ಸಾಧಿಸಿವೆ ಎಂಬುದು ಇನ್ನೊಂದು ವಾಸ್ತವ. ಇಲ್ಲಿ ನೆಲೆಗೊಂಡು ಅವು ಭಾರತಕ್ಕೆ ಕೊಟ್ಟದ್ದಕ್ಕಿಂತ ಪಡೆದುಕೊಂಡಿರುವುದೇ ಹೆಚ್ಚು ಎನ್ನುವುದು ಇನ್ನೂ ಒಂದು ವಾಸ್ತವ.
ಅನುಕೂಲಕರ ಜಾಗತಿಕ ಪರಿಸ್ಥಿತಿಗಳ ಲಾಭ ಪಡೆಯಲು ಮತ್ತು ಉತ್ಪಾದನೆಯಲ್ಲಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ವಿಫಲವಾಗಿರುವ ಸತ್ಯವನ್ನೂ ಸ್ಕ್ರಾಲ್ ಪ್ರಕಟಿಸಿರುವ ವರದಿ ತೆರೆದಿಟ್ಟಿದೆ.
ವಿದೇಶಿ ನೇರ ಹೂಡಿಕೆ, ಅಂದರೆ ಎಫ್‌ಡಿಐ ಮೂಲಕ ಉತ್ಪಾದನಾ ವಲಯದ ಹೂಡಿಕೆಯ ಪಾಲನ್ನು ಹೆಚ್ಚಿಸುವ ಸವಾಲು ಭಾರತದ ನೀತಿ ನಿರೂಪಕರ ಎದುರು ಇದ್ದೇ ಇತ್ತು. ಆ ಸವಾಲನ್ನು ಮೀರುವುದು ಕಡೆಗೂ ಸಾಧ್ಯವಾಗಿಲ್ಲ.
ಆಗ್ನೇಯ ಏಶ್ಯ ದೇಶಗಳಿಗೆ ಹೋಲಿಸಿದರೆ ಭಾರತ ಎಫ್‌ಡಿಐ ಅನ್ನು ಆಕರ್ಷಿಸುವಲ್ಲಿ ಬಹಳ ಹಿಂದುಳಿದಿದೆ ಎಂಬುದನ್ನು ಅಂತರ್‌ರಾಷ್ಟ್ರೀಯ ವರದಿಗಳು ಹೇಳುತ್ತಿವೆ. ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹ ವಿದೇಶಿ ಹೂಡಿಕೆದಾರರು ಆಗ್ನೇಯ ಏಶ್ಯದತ್ತಲೇ ಒಲವು ತೋರುತ್ತಿರುವುದರ ಬಗ್ಗೆ ಹೇಳುತ್ತಿದೆ.
‘ಮೇಕ್ ಇನ್ ಇಂಡಿಯಾ’ ಒಂದು ರೀತಿಯ ಒತ್ತಾಯವೆಂಬಂತೆ ಅಂದುಕೊಂಡಿರುವ ಹಲವಾರು ಭಾರತೀಯ ಕಂಪೆನಿಗಳು ಮನಸ್ಸಿಲ್ಲದ ಮನಸ್ಸಿನಿಂದ ತೊಡಗಿವೆ ಎಂಬುದು ಸತ್ಯ.
ಆದರೆ ಇದನ್ನು ಮರೆಮಾಚಲು ಯತ್ನಿಸುವ ಮೋದಿ ಸರಕಾರ, ಕಳೆದೆರಡು ದಶಕಗಳಲ್ಲಿ ಎಫ್‌ಡಿಐ ಸಿಕ್ಕಾಪಟ್ಟೆ ಏರಿದೆ ಎಂದು ತೋರಿಸಿಕೊಳ್ಳುತ್ತಿದೆ.
ಆದರೆ ಭಾರತ ಸರಕಾರದ ಅಂಕಿಅಂಶಗಳಿಗೂ, 2020ರಿಂದಲೂ ಏರಿಳಿತ ಮತ್ತು ಸ್ಪಷ್ಟ ಕುಸಿತವನ್ನು ತೋರಿಸುವ ಅಂತರ್‌ರಾಷ್ಟ್ರೀಯ ಅಂಕಿಅಂಶಗಳಿಗೂ ಭಾರೀ ವ್ಯತ್ಯಾಸ ಕಾಣಿಸುತ್ತದೆ.
ಸರಕಾರ ಹೇಳುತ್ತಿರುವ ಪ್ರಕಾರ, 2000ದಿಂದ 2023ರ ಅವಧಿಯಲ್ಲಿನ ಒಟ್ಟು ದೇಶಕ್ಕೆ ಬಂದ ಎಫ್‌ಡಿಐ 919 ಶತಕೋಟಿ ಡಾಲರ್. ಅದರಲ್ಲಿ ಮೋದಿ ಕಾಲದ ಕಳೆದ 9 ವರ್ಷಗಳ ಅವಧಿಯಲ್ಲಿ ಹರಿದುಬಂದ ಎಫ್‌ಡಿಐ 595 ಶತಕೋಟಿ ಡಾಲರ್.
ಇತರ ವಲಯಗಳಿಗೆ ಹೋಲಿಸಿದರೆ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆ ತೀರಾ ಕಡಿಮೆ ಎಂಬುದು ಎದ್ದು ಕಾಣಿಸುವ ಕಟು ವಾಸ್ತವ. 2022-23ರಲ್ಲಿ ಎಫ್‌ಡಿಐ ಈಕ್ವಿಟಿ ಒಳಹರಿವು ಪಡೆದ ಟಾಪ್ 5 ವಲಯಗಳೆಂದರೆ,
ಸೇವಾವಲಯ ಶೇ.16, ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಶೇ.15, ವ್ಯಾಪಾರ ಶೇ.6, ದೂರಸಂಪರ್ಕ ಶೇ.6, ಆಟೋಮೊಬೈಲ್‌ಗಳು ಶೇ.5.
ಆದರೆ, ವಿಶ್ವಸಂಸ್ಥೆಯ ಟ್ರೇಡ್ ಆ್ಯಂಡ್ ಡೆವಲಪ್‌ಮೆಂಟ್ ನ ಡೇಟಾ ಪ್ರಕಾರ, ಎಫ್‌ಡಿಐ ಒಳಹರಿವಿನಲ್ಲಿ ಗಮನಾರ್ಹ ಕುಸಿತ ಕಂಡಿದೆ. 2019ರಿಂದ 2023ರವರೆಗಿನ ಐದು ವರ್ಷಗಳಲ್ಲಿ ಅದರ ಪ್ರಮಾಣ ಸುಮಾರು 240 ಶತಕೋಟಿ ಡಾಲರ್‌ಗಳಷ್ಟಿದೆ. ಒಳಹರಿವಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.29ರಷ್ಟು ಕುಸಿತವಾಗುತ್ತ, 2023ರಲ್ಲಿ 28 ಶತಕೋಟಿ ಡಾಲರ್‌ಗೆ ಕುಸಿದಿದೆ.
ಚಿಪ್‌ಮೇಕರ್ ಮೈಕ್ರಾನ್ ಮತ್ತು ಸ್ಮಾರ್ಟ್‌ಫೋನ್ ತಯಾರಕ ಆ್ಯಪಲ್‌ನ ಹೂಡಿಕೆಗಳಿಂದ ಭಾರತಕ್ಕೆ ಪ್ರಯೋಜನವಾದೀತೆ? ಆಗ್ನೇಯ ಏಶ್ಯ ಸಾಧಿಸಿರುವಂತೆ ವಿಶ್ವಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ತನ್ನದಾಗಿಸಿ ಕೊಳ್ಳಲು ಭಾರತಕ್ಕೆ ಸಾಧ್ಯವಾಗುವುದೆ? ಎಂಬ ಪ್ರಶ್ನೆಗಳಿವೆ.
2023ರ ಜೂನ್‌ನಲ್ಲಿ ಮೈಕ್ರಾನ್ ಹೊಸ ಸ್ಟೋರೇಜ್ ಮತ್ತು ಮೆಮೊರಿ ಚಿಪ್‌ನ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯ ಸ್ಥಾಪಿಸುವುದಾಗಿ ಘೋಷಿಸಿತು. ಮೋದಿಯವರ ಗುಜರಾತಿನಲ್ಲಿ ಮೈಕ್ರಾನ್ ಎರಡು ಹಂತಗಳಲ್ಲಿ 825 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ.
ಕಂಪೆನಿ ಹೇಳಿರುವ ಪ್ರಕಾರ, ಮೊದಲ ಹಂತ 2024ರ ಕೊನೆಯ ವೇಳೆಗೆ ಕಾರ್ಯಗತವಾಗಬೇಕು ಮತ್ತು 2ನೇ ಹಂತ 2025ರ ನಂತರ ಶುರುವಾಗಲಿದೆ. 5,000 ನೇರ ಉದ್ಯೋಗಗಳು ಮತ್ತು ಹೆಚ್ಚುವರಿ 15,000 ಸಮುದಾಯ ಉದ್ಯೋಗ ಸೃಷ್ಟಿಯ ಭರವಸೆಯನ್ನೂ ಕಂಪೆನಿ ಕೊಟ್ಟಿದೆ. ಆದರೆ ಸತ್ಯವೇನೆಂದರೆ ಈ ಕಂಪೆನಿಯನ್ನು ಭಾರತ ಸರಕಾರ ಮತ್ತು ಗುಜರಾತ್ ರಾಜ್ಯ ಸರಕಾರಗಳೇ ಸೇರಿ ಸಾಕಬೇಕಾಗಿದೆ ಎಂಬುದು.
ಒಟ್ಟು ಬಂಡವಾಳದ ಶೇ.70ರಷ್ಟನ್ನು ಭಾರತವೇ ಸಬ್ಸಿಡಿ ರೂಪದಲ್ಲಿ ಒದಗಿಸುತ್ತಿದೆ. ಇದರಲ್ಲಿ ಶೇ.50ರಷ್ಟನ್ನು ಕೇಂದ್ರ ಸರಕಾರ, ಶೇ.20ರಷ್ಟನ್ನು ಗುಜರಾತ್ ಸರಕಾರ ಭರಿಸುತ್ತವೆ.
ಸ್ಥಾವರದ ಸಂಪೂರ್ಣ ಮಾಲಕತ್ವ ಹೊಂದಿರುವ ಮೈಕ್ರಾನ್ ಹೂಡಿಕೆ ಮಾಡಲಿರುವುದು ಶೇ.30ರಷ್ಟನ್ನು ಮಾತ್ರ. ಯೋಜನೆಯ ಒಟ್ಟು ವೆಚ್ಚ 2.75 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಮೈಕ್ರಾನ್‌ನ ನಿಜವಾದ ಹೂಡಿಕೆ 825 ಮಿಲಿಯನ್ ಡಾಲರ್ ಮಾತ್ರ. ಹೇಗಿದೆ ನೋಡಿ. ‘ಮೇಕ್ ಇನ್ ಇಂಡಿಯಾ’ ಎಂದು ಕರೆದು ಕರೆದು ಕೂರಿಸಿ ನಾವೇ ಸಾಕಬೇಕಾದ ಸ್ಥಿತಿ.ಇಷ್ಟೊಂದು ಉದಾರ ಮಟ್ಟದಲ್ಲಿ ಸಬ್ಸಿಡಿ ಕೊಟ್ಟು, ನಮಗೆ ಮಾಲಕತ್ವವಾಗಲೀ, ಲಾಭವಾಗಲೀ ಇಲ್ಲದೆ ಇರುವ ಸ್ಥಿತಿ.
ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಪ್ರಕಾರ, ಮೈಕ್ರಾನ್‌ಗೆ ಒದಗಿಸಲಾಗುತ್ತಿರುವ ಸಬ್ಸಿಡಿಗಳ ಮೊತ್ತ ಉನ್ನತ ಶಿಕ್ಷಣಕ್ಕಾಗಿರುವ ಕೇಂದ್ರ ಸರಕಾರದ ಸಂಪೂರ್ಣ ವಾರ್ಷಿಕ ಬಜೆಟ್‌ನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು. ಮತ್ತಿದು ಯಾವುದಕ್ಕಾಗಿ?
ಸರಕಾರದ ಅಂದಾಜಿನ ಪ್ರಕಾರ, ಈ ಯೋಜನೆ ಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಂದರೆ ಪ್ರತೀ ಉದ್ಯೋಗಕ್ಕೆ 4 ಲಕ್ಷ ಡಾಲರ್‌ನಂತೆ ಸರಕಾರ ಕೊಡುತ್ತಿದೆಯೆ?
ಇನ್ನೂ ಒಂದು ವಿಪರ್ಯಾಸವೆಂದರೆ, ಆರ್&ಡಿ ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕೂ ಈ ಸ್ಥಾವರದಲ್ಲಿ ಅವಕಾಶವಿಲ್ಲ. ದೇಶದಲ್ಲಿ ಕಳೆದೊಂದು ದಶಕದಿಂದ ಉನ್ನತ ಶಿಕ್ಷಣ ರಂಗದ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ರಘುರಾಮ್ ರಾಜನ್ ಪ್ರಕಾರ ಸರಕಾರ ಇಷ್ಟೊಂದು ದೊಡ್ಡ ಮೊತ್ತವನ್ನು ದೇಶದ ಉನ್ನತ ಶಿಕ್ಷಣಕ್ಕೆ ಕೊಟ್ಟಿದ್ದರೆ ಅಲ್ಲಾದರೂ ಉತ್ತಮ ಫಲಿತಾಂಶ ಸಿಗುತ್ತಿತ್ತು.
ಆ್ಯಪಲ್-ನಿರ್ಮಿತ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯನ್ನು ಭಾರತದಲ್ಲಿಯೇ ನಿಭಾಯಿಸುವುದರ ಸುತ್ತ ಕೂಡ ಇಂಥದೇ ವಿವಾದಗಳಿವೆ. ಆದರೂ, ಚೀನಾ ಮೇಲಿನ ಅವಲಂಬನೆ ಕಡಿಮೆಯಾಗಿಸಲು ಇದರಿಂದ ಸಾಧ್ಯವಾಗಬಹುದು ಎಂಬ ವಾದಗಳೂ ಇವೆ.
ಮೋದಿ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಕೂಡ ‘ಮೇಕ್ ಇನ್ ಇಂಡಿಯಾ’ದ ದುರ್ಬಲ ಅವಸ್ಥೆಯ ಕಾರಣಗಳನ್ನು ಪಟ್ಟಿ ಮಾಡಿರುವುದರ ಬಗ್ಗೆ ಸ್ಕ್ರಾಲ್ ಬರಹ ಉಲ್ಲೇಖಿಸುತ್ತದೆ.
ಮೋದಿ ಸರಕಾರದ ಕಳೆದ 10 ವರ್ಷಗಳ ಅವಧಿಯಲ್ಲಿ ‘ಮೇಕ್ ಇನ್ ಇಂಡಿಯಾ’ ವಿಷಯವಾಗಿ ಅನುಸರಿಸಿದ ನೀತಿ ಹೇಗೆ ಹೂಡಿಕೆದಾರರ ಹಿಂಜರಿತಕ್ಕೆ ಕಾರಣವಾದವು ಎಂಬುದರ ಬಗ್ಗೆ ಅವರು ಗಮನ ಸೆಳೆದಿದ್ದಾರೆ.
ಒಂದು, ಆದ್ಯತೆಯ ಹಣಕಾಸು ನೆರವು ಮತ್ತು ನೀತಿ ವಿಚಾರವಾಗಿ ಬೆಂಬಲ ನೀಡುವ ಮೂಲಕ ದೇಶದ ಪ್ರಮುಖ ಕಂಪೆನಿಗಳನ್ನು ದೊಡ್ಡ ಯೋಜನೆಗಳಿಗಾಗಿ ಸೆಳೆಯುವುದು ಉದ್ದೇಶವಾಗಿತ್ತು. ಆದರೆ ಸರಕಾರ ಯಾವಾಗ ಬೇಕಾದರೂ ನೀತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಥಟ್ಟನೆ ಬದಲಿಸಿಬಿಡಬಹುದು ಎಂಬ ಭಯ ದೇಶೀಯ ಸಂಸ್ಥೆಗಳು ಹಿಂಜರಿಯಲು ಕಾರಣವಾಯಿತು ಎಂಬುದು ಅವರ ವಿಶ್ಲೇಷಣೆ.
ಎರಡನೆಯದು, ಸ್ಥಳೀಯ ಮತ್ತು ವಿದೇಶಿ ಸಂಸ್ಥೆಗಳಿಂದ ತೆರಿಗೆ ವಸೂಲಿಗೆ ಕಂದಾಯ ಅಧಿಕಾರಿಗಳ ಆಕ್ರಮಣಕಾರಿ ಕ್ರಮಗಳಂಥ ನೇರ ಮತ್ತು ಬಲವಂತದ ನಡೆ.
ಮೂರನೆಯದು, ಜಾಗತಿಕ ಪೂರೈಕೆ ಸರಪಳಿಗೆ ಸಂಬಂಧಿಸಿದ ಅಪಾಯ. ಇಲ್ಲಿಯೂ ಮುಖ್ಯವಾಗಿ ಕಾಡುವುದು ಚೀನಾ ಭಯವೇ.
ಭಾರತ ಅಂತರ್‌ರಾಷ್ಟ್ರೀಯವಾಗಿ ಪೈಪೋಟಿಯೊಡ್ಡಲು ಮತ್ತು ‘ಮೇಕ್ ಇನ್ ಇಂಡಿಯಾ’ ಬಗ್ಗೆ ಹೆಚ್ಚು ಗಮನ ಸೆಳೆಯಲು ಕಚ್ಚಾ ಸಾಮಗ್ರಿಗಳನ್ನು ಪ್ರಪಂಚದ ಯಾವುದೇ ಸ್ಥಳದಿಂದ ತರಿಸಿಕೊಳ್ಳಲು ಕಂಪೆನಿಗಳಿಗೆ ಭರವಸೆ ನೀಡಬೇಕಿತ್ತು. ಆದರೆ, ಮೋದಿ ಸರಕಾರ ಮಾತ್ರ ‘ಮೇಕ್ ಇನ್ ಇಂಡಿಯಾ’ ವಿರುದ್ಧದ ಟೀಕೆಗಳನ್ನು ತಳ್ಳಿಹಾಕುತ್ತಲೇ ಬಂದಿದೆ. ಈಗ ಮೋದಿ ಮೂರನೇ ಅವಧಿಯಲ್ಲಿಯೂ ಯೋಜನೆ ಯನ್ನು ಮುಂದುವರಿಸುವ ಮಾತಾಡಲಾಗುತ್ತಿದೆ.ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಸಾವಿರಾರು ಕೋಟಿಗಳ ಹೂಡಿಕೆ, ಲಕ್ಷಾಂತರ ಉದ್ಯೋಗಗಳ ಸೃಷ್ಟಿ ಎಂದು ಅವರು ಲಕ್ಷ, ಕೋಟಿಗಳ ಮಾತಾಡುವುದು ಮುಂದುವರಿದಿದೆ. ಆದರೆ, ದೊಡ್ಡ ಮಟ್ಟದ ಕೌಶಲ್ಯ ಕೊರತೆ ಮತ್ತು ಭಾರತದಲ್ಲಿನ ಉದ್ಯಮದ ಸಂಕೀರ್ಣತೆಯ ಮೂಲಭೂತ ಸಮಸ್ಯೆಗಳನ್ನು ಉದಾರ ಸಬ್ಸಿಡಿಗಳು ಮತ್ತು ಎಫ್‌ಡಿಐ ಮೂಲಕ ಪರಿಹರಿಸಲಾಗದು ಎಂಬ ಸತ್ಯವನ್ನು ಒಪ್ಪಲು ಮೋದಿ ಸರಕಾರ ತಯಾರಿಲ್ಲ.
ಭಾರತದಲ್ಲಿ ಚೀನಾ ಬಳಿಕ ಅತಿ ಹೆಚ್ಚು ಇಂಜಿನಿಯರ್ ಗಳು ಪ್ರತೀ ವರ್ಷ ಸಿದ್ಧರಾಗುತ್ತಿದ್ದರೂ ಅವರಿಗಿರುವ ಕೌಶಲ್ಯದ ಬಗ್ಗೆ ಕಂಪೆನಿಗಳಿಗೆ ನಂಬಿಕೆ ಬಹಳ ಕಡಿಮೆ ಇದೆ. ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಿಂದ ಅಷ್ಟೇ ಉತ್ತಮ ಇಂಜಿನಿಯರ್‌ಗಳು ಬರುತ್ತಿದ್ದರೂ ಉಳಿದ ಸಾವಿರಾರು ಕಾಲೇಜುಗಳಿಂದ ಗುಣಮಟ್ಟದ ಇಂಜಿನಿಯರ್ ಗಳು ಬರುತ್ತಿಲ್ಲ ಎಂಬ ದೂರು ಬಹಳ ಹಿಂದಿನಿಂದಲೂ ಇದೆ. ಅದು ಇವತ್ತಿಗೂ ಹಾಗೆಯೇ ಇದೆ.
ಉತ್ಪಾದನಾ ವಲಯಕ್ಕೆ ಬೇಕಾದ ಕೌಶಲ್ಯ ಈ ಇಂಜಿನಿಯರ್‌ಗಳಲ್ಲಿ ಇಲ್ಲ ಎಂದೇ ಬಹುತೇಕ ಪ್ರತಿಷ್ಠಿತ ಕಂಪೆನಿಗಳು ಹೇಳುತ್ತವೆ. ನಾವು ಪ್ರತಿಷ್ಠಿತ ಜಾಗತಿಕ ಕಂಪೆನಿಗಳನ್ನು ನಮ್ಮಲ್ಲಿನ ಇಂಜಿನಿಯರ್‌ಗಳು ಮುನ್ನಡೆಸುತ್ತಿದ್ದಾರೆ ಎಂದು ಹೆಮ್ಮೆ ಪಡುತ್ತೇವೆ. ಸರಿ. ಆದರೆ ಕೆಳಹಂತದಲ್ಲಿ ಅದೇ ಪರಿಸ್ಥಿತಿ ಇಲ್ಲ.
ಐಐಟಿ, ಎನ್‌ಐಟಿಯಂತಹ ಕೆಲವೇ ಸಂಸ್ಥೆಗಳನ್ನು ಬಿಟ್ಟರೆ ನಮ್ಮ ನಗರಗಳಲ್ಲಿರುವ ಬಹುತೇಕ ಇಂಜಿನಿಯರಿಂಗ್ ಕಾಲೇಜುಗಳಿಂದ ಬರುತ್ತಿರುವ ಇಂಜಿನಿಯರ್‌ಗಳು ಉತ್ಪಾದನಾ ವಲಯಕ್ಕೆ ಬೇಕಾದ ಕೌಶಲ್ಯ ಇರುವವರಲ್ಲ ಎಂಬುದೇ ವಾಸ್ತವ. ಆ ಗಂಭೀರ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ಯಾವುದೇ ಪ್ರಯತ್ನ ಆಗುತ್ತಿಲ್ಲ.