ಮೋದಿ ಸರಕಾರವನ್ನು ನಂಬಿದ್ದ ಯುವಜನತೆಗೆ ಸಿಗುತ್ತಿರುವುದಾದರೂ ಏನು?
ನಿರುದ್ಯೋಗಿ ಯುವಕರ ಪ್ರತಿಭಟಿಸುವ ಧ್ವನಿಯನ್ನೂ ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ.
ಮೋದಿ ಸರಕಾರವನ್ನು ನಂಬಿದ್ದ ಯುವಕರು ಮೋಸ ಹೋಗಿ ಬಹಳ ಸಮಯವೇ ಆಗಿದೆ. ವರ್ಷವೂ ಕೋಟಿಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ನಂಬಿ, ತಾವಿನ್ನು ಉದ್ಯೋಗ ಪಡೆಯುವುದು ಸುಲಭ ಎಂದುಕೊಂಡಿದ್ದವರು ಯಾವತ್ತೋ ಭ್ರಮನಿರಸನಗೊಂಡಿದ್ದಾರೆ.
ಗೆಲ್ಲುವುದಕ್ಕಷ್ಟೇ ಯುವಕರನ್ನು ಬಳಸಿಕೊಂಡಿದ್ದ ಮೋದಿ, ನಂತರ ಅವರಿಗೆ ಪಕೋಡ ಮಾರುವುದೂ ಉದ್ಯೋಗವೇ ಅಲ್ಲವೆ ಎಂದು ಹೇಳಿದ್ದೂ ಆಗಿದೆ. ಇದೂ ಸಾಲದು ಎಂಬಂತೆ, ಉದ್ಯೋಗಾಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರೆ, ಆ ಪ್ರತಿಭಟನೆಯ ಸುದ್ದಿಯನ್ನೂ ಹತ್ತಿಕ್ಕುವ ಮಟ್ಟಕ್ಕೆ ಮೋದಿ ಸರಕಾರ ಹೋಗಿದೆ.
ತನ್ನನ್ನು ನಂಬಿದ್ದ ಯುವಕರಿಗೆ ಮೋದಿ ಸರಕಾರ ಕೊಡುತ್ತಿರುವ ಉಡುಗೊರೆ ಇದೇನಾ..? ಈ ಸರಕಾರವನ್ನು ಅಧಿಕಾರಕ್ಕೇರಿಸಿ ಕೂರಿಸಿದ ಆ ಅಮಾಯಕ ಯುವಕರಿಗೆ, ತಮ್ಮ ಉದ್ಯೋಗಕ್ಕಾಗಿ ಕೇಳುವ, ಪ್ರಶ್ನಿಸುವ, ಪ್ರತಿಭಟಿಸುವ ಸ್ಥಿತಿಯೂ ಈ ದೇಶದಲ್ಲಿ ಇಲ್ಲವಾಗಿ ಹೋಯಿತೇ? ಹಾಗಾದರೆ ಇಲ್ಲಿ ಪ್ರಜಾಪ್ರಭುತ್ವ ನಿಜವಾಗಿಯೂ ಇದೆಯಾ..? ಆ ಕಡೆ ಉದ್ಯೋಗವೂ ಇಲ್ಲ, ಈ ಕಡೆ ಪ್ರತಿಭಟಿಸುವ ಹಾಗೂ ಇಲ್ಲ.. ಹಾಗಾದರೆ ಈ ಯುವಕರು ಏನು ಮಾಡಬೇಕು..?
ಈಗ ಯುವಕರ ಪ್ರತಿಭಟನೆಯು ಸುಳ್ಳು ಹೇಳಿ ಅಧಿಕಾರಕ್ಕೇರಿದ, ಉದ್ಯೋಗ ಸೃಷ್ಟಿಯ ಕಥೆ ಹೇಳಿ ವೋಟು ಗಿಟ್ಟಿಸಿದ್ದ ಮೋದಿ ಸರಕಾರದ ಮರ್ಯಾದೆಯನ್ನು ಬೀದಿಗೆ ತಂದು ನಿಲ್ಲಿಸಿದೆ.
ಕಂಡಕಂಡದ್ದಕ್ಕೆಲ್ಲ ರಾಷ್ಟ್ರೀಯ ಹಿತಾಸಕ್ತಿ ನೆಪ ಮಾಡಿ ಪ್ರಶ್ನೆ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುತ್ತಲೇ ಬಂದ ಮೋದಿ ಸರಕಾರ, ಈಗ ಹತಾಶ ಯುವಕರು ತಮ್ಮ ಸಂಕಟ ತೋಡಿಕೊಳ್ಳಲು ಮಾಡಿದ ಪ್ರತಿಭಟನೆಯನ್ನೂ ಅದೇ ರಾಷ್ಟ್ರೀಯ ಭದ್ರತೆ ನೆಪದಲ್ಲೇ ಹತ್ತಿಕ್ಕುತ್ತಿದೆಯೇ?
3ನೇ ಅತಿದೊಡ್ಡ ಆರ್ಥಿಕತೆ ಎಂದು ಕೊಚ್ಚಿಕೊಳ್ಳುತ್ತ ತಿರುಗುವ ವಿಶ್ವಗುರುವಿನ ದೇಶದಲ್ಲಿ ಹಸಿವು ಮತ್ತು ನಿರುದ್ಯೋಗದ ಹೊಡೆತ ಜನತೆಯನ್ನು ಕಂಗೆಡಿಸಿಬಿಟ್ಟಿದೆ. ಯುವಕರಂತೂ ಇನ್ನಿಲ್ಲದಂಥ ಹತಾಶೆಗೆ ಒಳಗಾಗಿದ್ದಾರೆ. ಬಿಜೆಪಿಯ ಬಣ್ಣ ಬಣ್ಣದ ಮಾತುಗಳು, ಘೋಷಣೆಗಳು ಅವರ ಹೊಟ್ಟೆ ತುಂಬಿಸುತ್ತಿಲ್ಲ.
ಇಲ್ಲಿ ಹಸಿದು ಸಾಯುವುದಕ್ಕಿಂತ ಅಲ್ಲಿ ಹೋಗಿ ಸಾಯುವುದೇ ಮೇಲು ಎಂದು ಅದೆಷ್ಟೋ ಯುವಕರು ಉದ್ಯೋಗ ಭದ್ರತೆ, ಜೀವದ ಸುರಕ್ಷತೆ ಎರಡೂ ಇಲ್ಲದ ಇಸ್ರೇಲ್‌ಗೆ ಹೊರಟು ನಿಂತಿದ್ದಾರೆ.
ಇಂಥ ಕರಾಳ ಸ್ಥಿತಿ ಎದುರಿಸುತ್ತಿರುವ ಯುವಕರು ಉದ್ಯೋಗಾವಕಾಶ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದರೆ, ಆ ಸುದ್ದಿಯನ್ನೂ ಅಳಿಸಿಹಾಕುವ ಅತ್ಯಂತ ಕೀಳು ಮಟ್ಟಕ್ಕೆ ಸರಕಾರ ಇಳಿದುಬಿಟ್ಟಿದೆ.
ಮೊನ್ನೆ ಜನವರಿ 30ರಂದು ರೈಲ್ವೆ ಉದ್ಯೋಗಾಕಾಂಕ್ಷಿ ಯುವಕರು, ರೈಲ್ವೆ ಲೋಕೋ ಪೈಲಟ್‌ಗಳಾಗಲು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಬಿಹಾರದ ಪಾಟ್ನಾದಲ್ಲಿ ಪ್ರತಿಭಟನೆ ನಡೆಸಿದ್ದರು.
5,696 ಸಹಾಯಕ ಲೋಕೋ ಪೈಲಟ್‌ಗಳ (ಎಎಲ್‌ಪಿ) ಹುದ್ದೆಗಳಿಗೆ ಅರ್ಜಿಗಳನ್ನು ಕೋರಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹೊರಡಿಸಿದ ಅಧಿಸೂಚನೆಯನ್ನು ಅವರೆಲ್ಲ ವಿರೋಧಿಸಿದ್ದರು. ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬುದಷ್ಟೇ ಅವರ ಒತ್ತಾಯವಾಗಿತ್ತು.
ಹಲವೆಡೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಹಲವು ಪ್ರದೇಶಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಪ್ರತಿಭಟನೆಯಲ್ಲಿ ಬಿಹಾರದಾದ್ಯಂತದ ರೈಲ್ವೆ ಹುದ್ದೆ ಆಕಾಂಕ್ಷಿಗಳು ಭಾಗವಹಿಸಿದ್ದರು. ಅವರಿಗೆ ನಗರದಲ್ಲಿ ಸರಕಾರಿ ಉದ್ಯೋಗಗಳಿಗಾಗಿ ಕೋಚಿಂಗ್ ಸಂಸ್ಥೆಗಳು ಬೆಂಬಲ ನೀಡಿದ್ದವು.
ಆದರೆ ಆ ಪ್ರತಿಭಟನೆಯ ವೀಡಿಯೊಗಳನ್ನು ಯೂಟ್ಯೂಬ್ ನಿರ್ಬಂಧಿಸಿದೆ. ಒಂದು ಚಾನೆಲನ್ನಂತೂ ಸಂಪೂರ್ಣವಾಗಿ ನಿಲ್ಲಿಸಿಯೇ ಬಿಡಲಾಗಿದೆ ಎಂದು ವರದಿಯಾಗಿದೆ. ಪ್ರತಿಭಟನೆಯ ವೀಡಿಯೊಗಳನ್ನು ನಿರ್ಬಂಧಿಸಿರು ವುದಕ್ಕೆ ಯೂಟ್ಯೂಬ್ ಕೊಟ್ಟಿರುವ ಕಾರಣ ಸರಕಾರದ ಆದೇಶ.
ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆ ವಿಚಾರವನ್ನು ಉಲ್ಲೇಖಿಸಿ ಸರಕಾರ ಆದೇಶಿಸಿರುವುದರಿಂದ ಆ ವೀಡಿಯೊಗಳನ್ನು ಯೂಟ್ಯೂಬ್ ತೆಗೆದುಹಾಕಿದೆ. ‘ಕ್ಯಾ ಕಹ್ತಿ ಹೈ ಪಬ್ಲಿಕ್’, ‘ಸಚ್ ಬಿಹಾರ್’ ಮತ್ತು ‘ಆನ್ ಡ್ಯೂಟಿ’ ಚಾನೆಲ್‌ಗಳೂ ಸೇರಿದಂತೆ ಹಲವೆಡೆ ಅಪ್ಲೋಡ್ ಆಗಿದ್ದ ಪ್ರತಿಭಟನೆಯ ವೀಡಿಯೊಗಳನ್ನು ನಿರ್ಬಂಧಿಸಲಾಗಿದೆ.
ಆ ಚಾನೆಲ್‌ಗಳೇ ಹೇಳುವ ಹಾಗೆ, ಆ ವೀಡಿಯೊಗಳಲ್ಲಿ ಹಾಗೆ ಕಾನೂನು ಸುವ್ಯವಸ್ಥೆಗೆ, ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವಂಥ ಯಾವ ಅಂಶಗಳೂ ಇಲ್ಲ. ಆದರೆ ಮೋದಿ ಸರಕಾರಕ್ಕೆ ಮಾತ್ರ ಅದು ಬೇಡವಾಗಿದೆ. ಈ ದೇಶ ಸುಭಿಕ್ಷವಾಗಿದೆ, ಈ ದೇಶದ ಯುವಕರು ತಿಂದುಂಡು ಹಾಯಾಗಿದ್ದಾರೆ, ಎಲ್ಲೆಲ್ಲೂ ಸಮೃದ್ಧಿ ತುಂಬಿ ತುಳುಕುತ್ತಿದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರಿಗೆ, ಉದ್ಯೋಗಗಳ ಸಂಖ್ಯೆ ಹೆಚ್ಚಿಸಿ ಎಂದು ಯುವಕರು ಪ್ರತಿಭಟನೆ ಮಾಡುತ್ತಿರುವುದು ಹೇಗೆ ಸಹ್ಯವಾದೀತು?
ಸುಳ್ಳುಗಳ ಮೇಲೆ ಕಟ್ಟಿರುವ ಗೋಪುರ ಬೀಳುವ ಆತಂಕ ಅದರದ್ದು. ಹಾಗಾಗಿಯೇ ಯುವಕರು ಉದ್ಯೋಗ ಕೇಳಲೂ ಇಲ್ಲ, ಪ್ರತಿಭಟನೆ ಮಾಡಲೂ ಇಲ್ಲ ಎನ್ನುವಂತೆ ಮಾಡಿಬಿಟ್ಟರಾಯಿತು ಅಲ್ಲವೇ? ಎಲ್ಲವೂ ಅವರ ಕೈಯಲ್ಲಿಯೇ ಇದೆ. ಯೂಟ್ಯೂಬ್‌ಗೆ ಕತ್ತರಿ, ಪ್ರಶ್ನಿಸುವ ಮಾಧ್ಯಮಗಳಿಗೆ ಬೆದರಿಕೆ.
ಇನ್ನು ಗೋದಿ ಮೀಡಿಯಾಗಳಂತೂ ಮೋದಿ ಮುಖ ಬಿಟ್ಟು ಪ್ರತಿಭಟಿಸುವ ಹುಡುಗರನ್ನು ತೋರಿಸುವ ಪ್ರಶ್ನೆಯೇ ಇಲ್ಲ. ಅವುಗಳೇನಿದ್ದರೂ ಮೋದಿ ಪರ ಅಷ್ಟೇ. ಮೋದಿ ಪರವೇ ಇರುವ ಯುವಕರ ಪರ ಮಾತ್ರ ಯಾರೂ ಇಲ್ಲ.
ದೇಶದ ನೊಂದ ಯುವಕರಿಗೆ ಬೆಂಬಲವಾಗಿ ನಿಂತು ಅವರ ಪ್ರತಿಭಟನೆಯ ವೀಡಿಯೊ ಹಾಕಿ ಸುದ್ದಿ ಮಾಡಿದ್ದ, ಕಳಕಳಿಯುಳ್ಳ ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಈಗ ಆ ವೀಡಿಯೊಗಳೇ ಮಾಯ.
ಇನ್ನು ಪಾಟ್ನಾದಲ್ಲಿ ‘ಆಶ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ಅನ್ನು ನಡೆಸುತ್ತಿರುವ ಎಸ್.ಕೆ. ಝಾ ಎಂಬವರ ಅದೇ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನಂತೂ ಪೂರ್ಣ ಬಂದ್ ಮಾಡಲಾಗಿದೆ.
ಅದು ಸರಕಾರಿ ಉದ್ಯೋಗಗಳ ಪರೀಕ್ಷೆಗಳಿಗೆ ಆನ್‌ಲೈನ್ ಟ್ಯೂಷನ್ ಅನ್ನು ಒದಗಿಸುವ ಚಾನೆಲ್ ಆಗಿತ್ತು. ಸುಮಾರು 11 ಲಕ್ಷ ಚಂದಾದಾರರನ್ನು ಹೊಂದಿತ್ತು.
ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ದೊಡ್ಡದಾಗಬಹುದು ಎಂದು ಭಾವಿಸಿ ಈ ಕ್ರಮ ಕೈಗೊಂಡಿರಬೇಕು. ನಾವು ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟವರು. ಸರಕಾರ ಗೊಂದಲಕ್ಕೀಡಾಗಿರಬೇಕು. ನಾವು ಯಾವುದೇ ಅಭ್ಯರ್ಥಿಗಳನ್ನು ಪ್ರಚೋದಿಸಿಲ್ಲ ಎಂದು ಝಾ ಮತ್ತೊಂದು ಚಾನೆಲ್ ಮೂಲಕ ಹೇಳಿರುವುದು ವರದಿಯಾಗಿದೆ.
ಲೊಕೊ ಪೈಲಟ್‌ಗಳಿಗೆ ಕೇವಲ 5,000 ಹುದ್ದೆಗಳಿಗಷ್ಟೇ ಅರ್ಜಿ ಕರೆಯಲಾಗಿದೆ.
2018ರಲ್ಲಿ 64,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆರು ವರ್ಷಗಳಿಂದ ನೇಮಕಾತಿ ಕಡಿಮೆಯಾಗಿದೆ. ಕನಿಷ್ಠ 30,000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬುದು ಉದ್ಯೋಗಾಕಾಂಕ್ಷಿಗಳ ನಿರೀಕ್ಷೆಯಾಗಿತ್ತು.
ಕಟು ವಾಸ್ತವ ಏನೆಂದರೆ, ಸಾವಿರಾರು ಹುದ್ದೆಗಳು ಖಾಲಿಯೇ ಇವೆ. ಸರಕಾರ ಭರ್ತಿ ಮಾಡುತ್ತಿಲ್ಲ.
ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ (ಎಐಎಲ್‌ಆರ್‌ಎಸ್‌ಎ) ಮಾಜಿ ಕಾರ್ಯಾಧ್ಯಕ್ಷ ಎನ್.ಬಿ. ದತ್ತಾ ಅವರ ಪ್ರಕಾರ, ರೈಲ್ವೆಯಲ್ಲಿ ದಶಕಗಳಿಂದಲೂ ಲೋಕೋ ಪೈಲಟ್‌ಗಳ ಕೊರತೆಯಿದೆ. ಇನ್ನೂ ಸಾವಿರಾರು ಹುದ್ದೆಗಳು ಖಾಲಿ ಇವೆ. ಲೋಕೋ ಪೈಲಟ್‌ಗಳು 16 ಗಂಟೆ ಕೆಲಸ ಮಾಡಬೇಕಿದ್ದು, ರಜೆಯೂ ಸಿಗುತ್ತಿಲ್ಲ. ಆದರೆ ಸರಕಾರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಅಭ್ಯರ್ಥಿಗಳ ಬೇಡಿಕೆ ಸರಿಯಾಗಿಯೇ ಇದೆ. ಆದರೆ ಅವರಿಗೆ ಮತ್ತು ಅವರನ್ನು ಬೆಂಬಲಿಸುವವರಿಗೆ ಸರಕಾರ ಕಿರುಕುಳ ನೀಡುತ್ತಿದೆ.
ಈ ಜನವರಿಯಲ್ಲಿ, ಎಐಎಲ್‌ಆರ್‌ಎಸ್‌ಎ ರೈಲ್ವೇ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಒಟ್ಟು 16,373 ಲೋಕೋ ಪೈಲಟ್ ಹುದ್ದೆಗಳು ಖಾಲಿಯಿದ್ದು, ಇವುಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಕೇಳಿತ್ತು.
ಕಳೆದ ವರ್ಷ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ರೈಲ್ವೆಯಲ್ಲಿ 2.93 ಲಕ್ಷ ಹುದ್ದೆಗಳು ಖಾಲಿ ಇವೆ ಎಂದಿದ್ದರು.
ಸರಕಾರ ಯುವಕರ ಮಾತನ್ನು ಕೇಳುತ್ತಿಲ್ಲ. ಸಾಕಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಸರಕಾರ ಭರ್ತಿ ಮಾಡಬಹುದೇನೋ ಎಂದು ನಿರೀಕ್ಷಿಸುತ್ತಿದ್ದಾರೆ. ಪರೀಕ್ಷೆಗಾಗಿ ಹಗಲಿರುಳು ಕಷ್ಟಪಡುತ್ತ ಹೈರಾಣಾಗುತ್ತಲೇ ಇದ್ದಾರೆ.
ಮೋದಿ ಸರಕಾರಕ್ಕೆ ಮಾತ್ರ ಆ ಯುವಕರ ನೋವು ಅರ್ಥವಾಗುತ್ತಲೇ ಇಲ್ಲ. ಯಾಕೆಂದರೆ ಅದಕ್ಕೀಗ ಅಧಿಕಾರದಲ್ಲಿರಲು ಆ ಯುವಕರು ಬೇಕಾಗಿಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿರುವುದು, ಮೊನ್ನೆಮೊನ್ನೆಯಷ್ಟೇ ಅದನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಸುಮ್ಮನೆ ಅಲ್ಲ.
2014ರಲ್ಲಿ ಗೆಲ್ಲುವುದಕ್ಕೆ ಮೋದಿ ಉದ್ಯೋಗ ಎಂಬ ಮಾಯಾಜಿಂಕೆಯನ್ನು ಈ ಯುವಕರ ಮುಂದೆ ಓಡಿಸಿದ್ದರು. ಈಗ ಬರುವ ಚುನಾವಣೆ ಗೆಲ್ಲಲು ರಾಮಮಂದಿರ ಇದೆ.
ನಿರುದ್ಯೋಗದ ನಡುವೆಯೂ ಅದೆಷ್ಟೋ ಯುವಕರನ್ನು ರಾಮಭಕ್ತಿಯಲ್ಲಿಯೇ ಮುಳುಗಿಸಲಾಗಿದೆ. ಧರ್ಮದ ಉನ್ಮಾದ ತುಂಬಿಸಲಾಗಿದೆ.
ಅದೆಷ್ಟೋ ಯುವಕರು ಈ ಉನ್ಮಾದ ತುಂಬಿಕೊಂಡು ತಮ್ಮ ಬದುಕನ್ನು ತಾವೇ ಹಾಳು ಮಾಡಿಕೊಳ್ಳುತ್ತಿರುವುದರ ನಡುವೆಯೇ ದೊಡ್ಡ ಸಂಖ್ಯೆಯ ಯುವಕರು ಮೋದಿ ಸರಕಾರದ ಭ್ರಮೆಯಿಂದ ಹೊರಬರುತ್ತಿದ್ದಾರೆ.
ಅದಕ್ಕೆ ಈಗ ಅವರು ಕೂಡ ಮೋದಿ ಸರಕಾರಕ್ಕೆ ಶತ್ರುಗಳ ಹಾಗೆ ಕಾಣಿಸತೊಡಗಿದ್ದಾರೆ. ಅವರು ಪ್ರತಿಭಟಿಸಿದರೆ ಅದರ ವೀಡಿಯೊ ಕೂಡ ಯೂಟ್ಯೂಬ್‌ನಲ್ಲಿ ಇರದ ಹಾಗೆ ಮೋದಿ ಸರಕಾರ ನೋಡಿಕೊಳ್ಳುತ್ತಿದೆ.
ಬಡತನ, ಹಸಿವು ಸೂಚ್ಯಂಕ ಸುಳ್ಳು ಎನ್ನುವುದು,ದೇಶದೊಳಗಿನ ಪ್ರತಿಭಟನೆಗಳನ್ನು ಹೀಗೆ ಹತ್ತಿಕ್ಕುವುದು, ವಿರೋಧ ಪಕ್ಷದವರ ಮೇಲೆ ಐಟಿ, ಈ.ಡಿ. ಛೂ ಬಿಡುವುದು, ಮಾರಿಕೊಂಡ ಮಾಧ್ಯಮಗಳ ಮುಂದೆ ಬಂದು ಸಬ್ ಛಂಗಾಸಿ ಅನ್ನುವುದು ಇದೇ ಮೋದಿ ಸರಕಾರದ ಸಾಧನೆ.
ಇದೆಲ್ಲದರ ನಡುವೆ, ಮೋದಿಯನ್ನು ನಂಬಿ ತಲೆಮೇಲೆ ಹೊತ್ತು ಮೊೆದಾಡಿದ ದೇಶದ ಯುವಜನತೆ ಇಂದು ಕೆಟ್ಟ ಪರಿಸ್ಥಿತಿ ಎದುರಿಸುವಂತಾಗಿರುವುದು ಮಾತ್ರ ನಿಜಕ್ಕೂ ಶೋಚನೀಯ ಸ್ಥಿತಿ.
ಈಗ ಎಲ್ಲೆಲ್ಲೂ ರಾಮಭಜನೆ ಮಾತ್ರ ಕೇಳಿಸುತ್ತಿದೆ.
ಆರ್ಥಿಕತೆ, ಉದ್ಯೋಗದ ಸಮಸ್ಯೆಗಳನ್ನು ಕೇಳುವವರು ಯಾರು?
ಯಾರೂ ಇಲ್ಲ.