ಟಿ.ವೆಂಕಟಸ್ವಾಮಿ ಆಯೋಗದ ವರದಿ ತಿರಸ್ಕರಿಸಲು ಕಾರಣವೇನು?

ಭಾಗ- 1
ಟಿ.ವೆಂಕಟಸ್ವಾಮಿ ಹಿಂದುಳಿದ ವರ್ಗಗಳ ಆಯೋಗದ ರಚನೆಗೆ ಇದ್ದ ಕಾರಣಗಳನ್ನೊಮ್ಮೆ ಮೆಲುಕು ಹಾಕುವುದು ಪ್ರಶಸ್ತವೆಂದು ಅನಿಸಿದೆ.
ಪ್ರಭು ನಾಲ್ವಡಿ ಅವರು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು, ಅಂದಿನ ದಿವಾನರ ಮಾತಿಗೂ ಸೊಪ್ಪುಹಾಕದೆ ‘ಪ್ರಜೆಗಳ ಕ್ಷೇಮವೇ ನನ್ನ ಕ್ಷೇಮ’ ಎಂದರಿತು, ಹಿಂದುಳಿದ ವರ್ಗಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ 1918ರಲ್ಲಿ ಲೆಸ್ಲಿ ಸಿ.ಮಿಲ್ಲರ್ ಸಮಿತಿಯನ್ನು ರಚಿಸಿದರು. ಸಮಿತಿ ವರದಿ ಆಧರಿಸಿ 1921ರಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ರಾಜ್ಯಗಳು ಪುನರ್‌ವಿಂಗಡಣೆ ಯಾಗುವವರೆಗೂ ಅದು ಜಾರಿಯಲ್ಲಿತ್ತು. ಆನಂತರ ನಾಗನಗೌಡ ಸಮಿತಿಯು ವರದಿ ನೀಡಿತು, ತಾಂತ್ರಿಕ ಕಾರಣಗಳಿಂದ ಅದು ನ್ಯಾಯಾಲಯದಲ್ಲಿ ತಿರಸ್ಕೃತವಾಯಿತು. ಬಳಿಕ ದಶಕಗಳ ಕಾಲ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಯಿತು.
1969ರಲ್ಲಿ, ಅಪ್ಪಟ ರಾಜಕೀಯ ಪಲ್ಲಟದಿಂದ ಕವಲೊಡೆದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತು. ಏಕೀಕೃತ ಕಾಂಗ್ರೆಸ್ ಇಬ್ಭಾಗವಾಯಿತು. ಒಂದು ಭಾಗ ಸಂಸ್ಥಾ ಕಾಂಗ್ರೆಸ್ ಎನಿಸಿಕೊಂಡು ವೀರೇಂದ್ರ ಪಾಟೀಲರ ಕೈವಶವಾಯಿತು. ಮತ್ತೊಂದು ಆಡಳಿತ ಕಾಂಗ್ರೆಸ್ ಎಂದು ಕರೆಸಿಕೊಂಡು ಡಿ. ದೇವರಾಜ ಅರಸರ ಪಾಲಾಯಿತು. 1972ರಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆದು, ಆಡಳಿತ ಕಾಂಗ್ರೆಸ್ ಅಭೂತಪೂರ್ವ ಜಯಗಳಿಸಿ ದೇವರಾಜ ಅರಸರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಅವರಿಗಿದ್ದ ಹಲವಾರು ಕನಸುಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕೆಂಬುದೂ ಒಂದು. ಅಂತೆಯೇ, ಆಗಸ್ಟ್ 8, 1972ರಂದು ಎಲ್.ಜಿ. ಹಾವನೂರ್ ಅಧ್ಯಕ್ಷತೆಯ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ನವೆಂಬರ್ 19,1975ರಲ್ಲಿ ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಆಗಲೂ ವರದಿಯನ್ನು ವಿರೋಧಿಸುವವರಿಗೆ ಬರಗಾಲ ಅಂಥ ಇರಲಿಲ್ಲ.
ವರದಿಯನ್ನು ವಿಧಾನಸಭೆಯ ಅಧಿವೇಶನದಲ್ಲೇ ಸುಡಲಾಯಿತು, ಅಂದಮೇಲೆ ಪ್ರತಿಭಟನೆಯ ಕಾವಿನ ತೀವ್ರತೆಯ ಮಟ್ಟವನ್ನು ಊಹಿಸಬಹುದು. ಇದಾವುದಕ್ಕೂ ಜಗ್ಗದ ದೀನ-ದುರ್ಬಲರ ಕರುಣಾಮಯಿ ಎನಿಸಿದ್ದ ಅರಸು ಫೆಬ್ರವರಿ 22, 1977ರಂದು ಮೀಸಲಾತಿ ವರದಿಯನ್ನು ಜಾರಿಗೆ ಕೊಡುತ್ತಾರೆ.
ವರದಿ ಆಧಾರಿತ ಮೀಸಲಾತಿಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ, ವರದಿಯಲ್ಲಿ ಅಳವಡಿಸಿಕೊಂಡಿರುವ ಸಾಮಾಜಿಕ ಮಾನದಂಡಗಳ ಬಗ್ಗೆ ಮೂಡಿದ ಜಿಜ್ಞಾಸೆಗೆ ಅನುಗುಣವಾಗಿ ಕರ್ನಾಟಕ ಸರಕಾರ ಮತ್ತೊಂದು ಆಯೋಗ ರಚಿಸಲಾಗುವುದು ಎಂದು ಶಪಥಪತ್ರವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿ, ವಿಚಾರಣೆ ಅಂತ್ಯ ಕಂಡಿತು(ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ). ಅಂದಿನ ಗುಂಡೂರಾವ್ ಸರಕಾರ ಶಪಥ ಪತ್ರ ಸಲ್ಲಿಸಿತ್ತು. ಆದರೆ 1983ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಜನತಾಪಕ್ಷ ಬಹುಮತ ಪಡೆದು ಸರಕಾರ ರಚಿಸಿತು. ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆಯವರು ಅಧಿಕಾರಸ್ಥರಾಗುತ್ತಾರೆ. ರಾಮಕೃಷ್ಣ ಹೆಗಡೆಯವರು ಟಿ. ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಎಪ್ರಿಲ್ 4, 1983ರಲ್ಲಿ ರಚಿಸಿದರು. ಅಧ್ಯಕ್ಷರನ್ನು ಹೊರತುಪಡಿಸಿ 15 ಮಂದಿ ಸದಸ್ಯರನ್ನೂ ನೇಮಿಸಿದ್ದರು.
ಸರಕಾರವು 4 ಪರಿಶೀಲನಾಂಶಗಳನ್ನು ನೀಡಿ ಪರಾಮರ್ಶಿಸಲು ಸೂಚಿಸಿತ್ತು. ಆಯೋಗ ವರದಿಯ ಕರಡು ಅಧ್ಯಾಯವನ್ನು ತಯಾರಿಸಲು ಉಪಸಮಿತಿಗಳನ್ನು ರಚಿಸಿದ್ದು ವಿಶೇಷ.
ಆಯೋಗದ ಕಾರ್ಯವಿಧಾನ
ಆಯೋಗವು ಹಿಂದಿನ ಸಮಿತಿ, ಆಯೋಗ, ಹಾಗೆಯೇ ಆತನಕ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಷ್ಟ್ರದ ವಿವಿಧ ಆಯೋಗಗಳ ವರದಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ಗಳ ಹಿನ್ನೆಲೆಯಲ್ಲಿ ಬಂದಂತಹ ತೀರ್ಪುಗಳನ್ನು ಕೂಲಂಕಷ ಅಧ್ಯಯನ ಮಾಡಿದೆ.
ಅಳವಡಿಸಿಕೊಂಡ ವಿಧಾನ
1. ಸಾರ್ವಜನಿಕರಿಗೆ ಪ್ರಶ್ನಾವಳಿಗಳನ್ನು ಕಳುಹಿಸಿ ಉತ್ತರ ಪಡೆಯುವುದು. 2. ರಾಜ್ಯ ಸರಕಾರದ ಇಲಾಖೆ ಮುಖ್ಯಸ್ಥರಿಂದ ಪ್ರಶ್ನಾವಳಿಗೆ ಉತ್ತರ ಪಡೆಯುವುದು.
3. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ನಮೂನೆಗಳು ಸಿದ್ಧಪಡಿಸಿಕೊಳ್ಳುವುದು.
ಹಿಂದುಳಿದಿರುವಿಕೆಯನ್ನು ಗುರುತಿಸಲು ಹಾಕಿಕೊಳ್ಳಬೇಕಾದ ಮಾನದಂಡಗಳು, ಜಾತಿ ಮತ್ತು ಕೋಮುಗಳ ಜನಸಂಖ್ಯೆ, ಅವುಗಳ ಸಾಮಾಜಿಕ ಸ್ಥಿತಿಗಳಾದ ಕಸುಬು, ಶಿಕ್ಷಣ, ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಪ್ರಾತಿನಿಧ್ಯತೆ, ವಸತಿ ಸೌಕರ್ಯ, ಕೌಟುಂಬಿಕ ಕಲ್ಯಾಣ ಕಾರ್ಯಕ್ರಮಗಳ ಅಳವಡಿಕೆ ಮತ್ತು ಕುಡಿತದ ವ್ಯಸನ ಇವುಗಳ ಬಗ್ಗೆ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರಶ್ನಾವಳಿಗಳನ್ನು ಆಯೋಗ ಸಿದ್ಧಪಡಿಸಿತ್ತು. ಸುಮಾರು 714 ಸಂಘ ಸಂಸ್ಥೆಗಳು ಮತ್ತು 6,286 ವಿವಿಧ ವರ್ಗಗಳ ಗಣ್ಯವ್ಯಕ್ತಿಗಳಿಗೆ ಪ್ರಶ್ನಾವಳಿಗಳನ್ನು ನೀಡಿ ಬಹುತೇಕ ಉತ್ತರ ಪಡೆದುಕೊಂಡಿದೆ. ಹಾಗೆಯೇ ರಾಜ್ಯ ಸರಕಾರದ ಸುಮಾರು 205 ಇಲಾಖಾ ಮುಖ್ಯಸ್ಥರುಗಳಿಂದ ಉತ್ತರಗಳನ್ನು ಸಹ ಪಡೆದುಕೊಂಡಿತ್ತು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲು ಪ್ರತಿಯೊಬ್ಬ ಗಣತಿದಾರನಿಗೆ 300 ಮನೆಗಳಂತೆ ಒಟ್ಟು 44,572 ಗಣತಿದಾರರನ್ನು ನೇಮಕ ಮಾಡಲಾಗಿತ್ತು. ಜಾತಿವಾರು ಮತ್ತು ಜಿಲ್ಲಾವಾರು ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿತ್ತು. ಸುಮಾರು 60 ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಿತ್ತು. (ಮುಂದೆ ಇದೇ ಅಂಕಿ ಅಂಶಗಳನ್ನು ನ್ಯಾ. ಚಿನ್ನಪ್ಪರೆಡ್ಡಿ ಆಯೋಗ ಬಳಸಿಕೊಂಡಿದೆ)
ಸ್ಥಳೀಯ ಸಂಸ್ಥೆಗಳ ಪ್ರಾತಿನಿಧ್ಯ
ಆಯೋಗ ಗ್ರಾಮಾಂತರ ಪ್ರದೇಶದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ, ಅವುಗಳು ಶೇಕಡವಾರು ಜನಸಂಖ್ಯೆಗಿಂತ ಹೆಚ್ಚು ಸ್ಥಾನಗಳನ್ನು ಹೊಂದಿವೆ. ಹಾಗೆಯೇ ಕುರುಬ, ಮರಾಠಾ, ಈಡಿಗ, ಈ ಸಮುದಾಯಗಳು ಅವುಗಳ ಶೇಕಡಾವಾರು ಸಂಖ್ಯೆಗನುಗುಣವಾಗಿ ಸ್ವಲ್ಪ ಹೆಚ್ಚು ಕಡಿಮೆ ಸ್ಥಾನ ಗಳಿಸಿಕೊಂಡಿವೆ. ಆದರೆ ಪರಿಶಿಷ್ಟ ಜಾತಿ, ಮುಸಲ್ಮಾನರು, ಬೇಡ ಮತ್ತು ಬೆಸ್ತ ಈ ಜಾತಿ-ಕೋಮುಗಳು ಕಡಿಮೆ ಸ್ಥಾನಗಳನ್ನು ಗಳಿಸಿವೆ.
ತಾಲೂಕು ಅಭಿವೃದ್ಧಿ ಮಂಡಳಿ
ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ, ಮುಸ್ಲಿಮ್ ಮತ್ತು ಮರಾಠಾ ಜಾತಿ/ಕೋಮುಗಳು ಈ ಚುನಾಯಿತ ಸಂಸ್ಥೆಗಳಲ್ಲಿ ಶೇಕಡಾವಾರು ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿವೆ. ಇತರ ಜಾತಿಗಳಾದ ಈಡಿಗ, ಬೆಸ್ತ, ಬೇಡ ಮತ್ತು ಬಲಿಜ ಜಾತಿಗಳು ಅವುಗಳ ಶೇಕಡಾವಾರು ಪ್ರಾತಿನಿಧ್ಯಕ್ಕೆ ಸ್ವಲ್ಪ ಹತ್ತಿರದಲ್ಲಿವೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಇತರ ಜಾತಿಗಳಿಗೆ ಹೋಲಿಸಿದಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿರುವುದನ್ನು ಆಯೋಗ ಮನಗಂಡಿದೆ.
ವಿಧಾನ ಸಭೆ/ಪರಿಷತ್ ಮತ್ತು ಸಂಸತ್
ಸಂಸತ್ ಮತ್ತು ಶಾಸನ ಸಭೆಗಳಲ್ಲಿಯೂ ಲಿಂಗಾಯತರು, ಒಕ್ಕಲಿಗರು, ಈಡಿಗರು, ಬಂಟರು ಮತ್ತು ಬ್ರಾಹ್ಮಣರು ಅವರು ಹೊಂದಿರುವ ಶೇಕಡವಾರು ಜನಸಂಖ್ಯೆಗಿಂತ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುತ್ತಾರೆ. ಇತರ ಕೋಮುಗಳಾದ ಮುಸ್ಲಿಮರು, ಪರಿಶಿಷ್ಟ ಜಾತಿ/ ಪಂಗಡ, ಕುರುಬ ಮತ್ತು ಬೇಡ ಇವುಗಳಿಗೆ ಹೋಲಿಕೆ ಮಾಡಿದಾಗ ಉತ್ತಮ ಪ್ರಾತಿನಿಧ್ಯ ಪಡೆದಿದ್ದರೂ ಒಟ್ಟಾರೆ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ. ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರು ರಾಜಕೀಯ ಪ್ರಾಬಲ್ಯ ಪಡೆದುಕೊಂಡಿವೆ. ಹಾಗೆ ಇನ್ನುಳಿದ ಜಾತಿಗಳಾದ ಅಗಸ, ಹೂಗಾರ ಮುಂತಾದ ಜಾತಿಗಳು ಯಾವುದೇ ಪ್ರಾತಿನಿಧ್ಯವನ್ನು ಪಡೆದಿರುವುದಿಲ್ಲ. ಅಲ್ಪಸಂಖ್ಯಾತ ಹಿಂದುಳಿದ ಅಲೆಮಾರಿಗಳಾದ ಬುಡಬುಡಿಕೆ, ಹೆಳವ, ಸಿಕ್ಕಲಿಗ, ಕಣಿಯನ್, ಮೇಗರ, ಸಿದ್ಧಿ ಇನ್ನೂ ಅನೇಕ ಜಾತಿಗಳು ಸಂಪೂರ್ಣ ಪ್ರಾತಿನಿಧ್ಯ ಪಡೆಯದಿರುವುದನ್ನು ಆಯೋಗ ಕಂಡುಕೊಂಡಿದೆ.
ಶಿಕ್ಷಣ
ಶಿಕ್ಷಣ ಕ್ಷೇತ್ರದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ದಂತ ವೈದ್ಯ, ಭಾರತೀಯ ವೈದ್ಯ ಈ ಎಲ್ಲಾ ಪದ್ಧತಿಗಳಲ್ಲೂ, ತುಲನಾತ್ಮಕ ಅಧ್ಯಯನವನ್ನು ಆಯೋಗ ಮಾಡಿದೆ.
ಉದ್ಯೋಗ
ಬೆರಳಚ್ಚು, ಶೀಘ್ರ ಲಿಪಿಕಾರ, ಪೊಲೀಸ್ ಉಪನಿರೀಕ್ಷಕರ ನೇಮಕ, ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳು, ಅಖಿಲ ಭಾರತ ಸೇವೆಗಳು ಮತ್ತು ಕರ್ನಾಟಕ ಆಡಳಿತ ಸೇವೆಗಳು- ಈ ಎಲ್ಲಾ ಹುದ್ದೆ ಮತ್ತು ನೌಕರಿಗಳ ಜಾತಿವಾರು ಪ್ರಾತಿನಿಧ್ಯವನ್ನು ತಾಳೆ ಮಾಡಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡ ವಿವಿಧ ಸೇವೆಯ ಪತ್ರಾಂಕಿತ ಅಧಿಕಾರಿಗಳು, ಅಖಿಲ ಭಾರತ ಸೇವೆಗಳಿಗೆ ಭಡ್ತಿ ಪಡೆದವರ ವಿವರಗಳನ್ನು ಆಯೋಗ ಸಂಗ್ರಹಿಸಿದೆ. 1972ರ ನಂತರ ಐಎಎಸ್/ಐಪಿಎಸ್ ಮತ್ತು ಐಎಫ್‌ಎಸ್ ನ ಒಟ್ಟು 115 ಹುದ್ದೆಗಳಿಗೆ ಭಡ್ತಿ ಪಡೆದವರ ಮಾಹಿತಿ ನೀಡಿದೆ. ಅವರುಗಳಲ್ಲಿ 27 ಮಂದಿ ಲಿಂಗಾಯತರು, 24 ಬ್ರಾಹ್ಮಣರು, 14 ಪರಿಶಿಷ್ಟ ಜಾತಿ, 11 ಒಕ್ಕಲಿಗರು ಮತ್ತು ಸಣ್ಣ ಸಂಖ್ಯೆಯ ಇತರ ಜಾತಿಯವರು ಇದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ 1977ರ ನಂತರ ಆಯ್ಕೆಗೊಂಡ ‘ಎ’ ದರ್ಜೆಯ ಕರ್ನಾಟಕ ಆಡಳಿತ ಸೇವೆಯ, 99 ಅಧಿಕಾರಿಗಳಲ್ಲಿ 19 ಒಕ್ಕಲಿಗರು, 14 ಲಿಂಗಾಯತರು, 13 ಬ್ರಾಹ್ಮಣರು, 13 ಪರಿಶಿಷ್ಟ ಜಾತಿ ಮತ್ತು 8 ಮುಸ್ಲಿಮರು ಹಾಗೂ ಇನ್ನಿತರ ಜಾತಿಗಳಿಗೆ ಸೇರಿದ ಅಧಿಕಾರಿಗಳು ಸಣ್ಣ ಸಂಖ್ಯೆಯಲ್ಲಿರುವುದನ್ನು ಆಯೋಗ ಗಮನಿಸಿದೆ. ಲೋಕಸೇವಾ ಆಯೋಗದಿಂದ ಕೆಎಎಸ್ ಹುದ್ದೆಗಳಿಗೆ 1977ರಿಂದ 1984ರ ತನಕ ನೇರ ನೇಮಕಾತಿಯಲ್ಲಿ ಆಯ್ಕೆಗೊಂಡ ಬ್ರಾಹ್ಮಣ 13,ಲಿಂಗಾಯತ 14, ಪರಿಶಿಷ್ಟ ಜಾತಿ 13, ಒಕ್ಕಲಿಗ 19, ಮುಸ್ಲಿಮ್ 8 ಮತ್ತು ಕೆಲವು ಸಣ್ಣ ಸಣ್ಣ ಸಂಖ್ಯೆಯ ಇತರ ಜಾತಿಗಳಿವೆ.