ಟಿ.ವೆಂಕಟಸ್ವಾಮಿ ಆಯೋಗದ ವರದಿ ತಿರಸ್ಕರಿಸಲು ಕಾರಣವೇನು?

ಭಾಗ- 2
ಆಯ್ಕೆಯ ಮಾನದಂಡಗಳು
ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾನದಂಡಗಳ ಎಲ್ಲಾ ಆಯಾಮಗಳನ್ನು ಅಳವಡಿಸಿಕೊಂಡಿದೆ.
1. ಸಾಮಾಜಿಕ: 1)ವಸತಿ ಮತ್ತು ನಿವೇಶನ ರಹಿತರು, 2)ಕಚ್ಚಾ ಮನೆ, 3)ಪಕ್ಕಾ ಮನೆ, 4)ನಗರ ಜನಸಂಖ್ಯೆ.
2. ಶೈಕ್ಷಣಿಕ: 1) ಅನಕ್ಷರತೆ, 2) ಶಾಲೆ ತೊರೆದವರು, 3)ಉದ್ಯೋಗ, 4)ಎಸೆಸೆಲ್ಸಿ ವಿದ್ಯಾರ್ಥಿಗಳು, 5)ಎ, ಬಿ ಮತ್ತು ಸಿ ದರ್ಜೆ ನೌಕರರು, 6) ಸ್ವಯಂ ಉದ್ಯೋಗ.
3. ಆರ್ಥಿಕ: 1)ವಾರ್ಷಿಕ ಆದಾಯ, 2)ಭೂಹಿಡುವಳಿ, 3)ಕೃಷಿ ಕಾರ್ಮಿಕರು.
ಟಿ.ವೆಂಕಟಸ್ವಾಮಿ ಆಯೋಗದ ವಿಶೇಷವೆಂದರೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ನೀಡುತ್ತಿರುವಂತೆ ಹಿಂದುಳಿದ ವರ್ಗಗಳಿಗೂ ಭಡ್ತಿಯಲ್ಲಿ ಮೀಸಲಾತಿ ಕೊಡಬೇಕು. ಹಾಗೆ ಮೀಸಲಾತಿ ಕೋಟಾ ತುಂಬದಿದ್ದಲ್ಲಿ, ಮೂರು ವರ್ಷಗಳವರೆಗೆ ಕೋಟಾ ಮುಂದುವರಿಸಿ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಹುದು ಎಂದು ಆಯೋಗ ಶಿಫಾರಸು ಮಾಡಿದೆ.
ಮಾನದಂಡ ಮತ್ತು ಒಳಮಾನದಂಡಗಳನ್ನು ಅನುಸರಿಸಿ, ಶಿಕ್ಷಣ ಮತ್ತು ಉದ್ಯೋಗಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾಗಿ ಮೀಸಲಾತಿ ನೀಡಿದೆ.
ಆಯೋಗವು ಅನುಚ್ಛೇದ 15(4)ರಲ್ಲಿ ಪಟ್ಟಿ ಮಾಡಿದ ಜಾತಿಗಳನ್ನೇ ವಿವಿಧ ಕೋನಗಳಿಂದ ಪರಿಶೀಲಿಸಿ ಸಂವಿಧಾನದ ಅನುಚ್ಛೇದ 16(4)ರ ಅನ್ವಯ ಮೀಸಲಾತಿಗಾಗಿ ಶಿಫಾರಸು ಮಾಡಿದೆ. ಶೇಕಡವಾರು ಮೀಸಲಾತಿಯನ್ನು ಸಹ ಗುಂಪು ‘ಎ’ಗೆ ಶೇ.14, ಗುಂಪು ‘ಬಿ’ ಗೆ ಶೇ.13 ಅನ್ನು ನಿಗದಿಪಡಿಸಿದೆ. ಜೊತೆಗೆ 85 ಶಿಫಾರಸುಗಳನ್ನೂ ಸಹ ಮಾಡಿದೆ.
ವರದಿ ಸಲ್ಲಿಕೆ
ಆಯೋಗವು ತನಗೆ ವಹಿಸಿದ ಎಲ್ಲಾ ಪರಿಶೀಲನಾಂಶಗಳ ಮೇಲೆ ಜಾಗರೂಕತೆಯಿಂದ ಕೆಲಸ ನಿರ್ವಹಿಸಿ ವರದಿಯನ್ನು ಪೂರ್ಣಗೊಳಿಸಿ ಸರಕಾರಕ್ಕೆ 1996ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಸಲ್ಲಿಸಿದೆ.
ವರದಿ ವಿರುದ್ಧ ಪ್ರತಿಭಟನೆ
ವರದಿ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿ, ವ್ಯಾಪಕ ಪ್ರತಿಭಟನೆಗೂ ದಾರಿ ಮಾಡಿ ಕೊಟ್ಟಿತು. ವಿಧಾನ ಪರಿಷತ್ ಸದಸ್ಯರುಗಳಾದ ಎಲ್. ಜಿ. ಹಾವನೂರು ಮತ್ತು ಬಿಜೆಪಿಯ ಪುಟ್ಟಸ್ವಾಮಿ ಕೆಲವು ವರ್ಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡಲು ಕೃತಕ ಮಾಹಿತಿಯನ್ನು ಆಧರಿಸಿ ವರದಿ ತಯಾರಿಸಿದೆ ಎಂದು ಆರೋಪಿಸಿ ವರದಿಯನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಹಾವನೂರುರವರು ಪ್ರೊ. ಚೆಲುವರಾಜ ಅವರ ಅಸಮ್ಮತಿ ಟಿಪ್ಪಣಿಯಲ್ಲಿ ಅಡಕವಾಗಿರುವ ಅಂಶಗಳನ್ನು ಗಮನಿಸಿದರೆ ಆಯೋಗದ ಅಧ್ಯಕ್ಷರು ಮತ್ತು ವರದಿಗೆ ಸಹಮತ ವ್ಯಕ್ತಪಡಿಸಿದ ಇನ್ನಿತರ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಹೇಳಿದ್ದರು. ಅಳವಡಿಸಿಕೊಂಡಿದ್ದ 17 ಮಾನದಂಡಗಳು ಅಸಂಬದ್ಧವಾಗಿದ್ದು ಸರಿಯಾದ ಚಿತ್ರಣವನ್ನು ನೀಡಿರಲಿಲ್ಲ ಎಂದಿದ್ದರು.(ಸೋಜಿಗವೆಂದರೆ ಹಾವನೂರು ವರದಿಯನ್ನು ಅನುಸರಿಸಿ ಜಾರಿಗೆ ಕೊಟ್ಟ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಸಂದರ್ಭದಲ್ಲಿ, ನ್ಯಾಯಾಲಯ ಸಾಮಾಜಿಕ ಮಾನದಂಡಗಳ ಬಗ್ಗೆ ವಿವಾದ ಎತ್ತಲಾಗಿ, ಸರಕಾರ ಬೇರೊಂದು ಆಯೋಗ ರಚಿಸುವುದಾಗಿ ಶಪಥಪತ್ರ ನೀಡಿತ್ತು ಎಂಬುದು ಇಲ್ಲಿ ಗಮನಿಸ ಬೇಕಾದ ಅಂಶ)
ಸರಕಾರದ ಪರವಾಗಿ ಅಂದಿನ ಕಾನೂನು ಸಚಿವರಾದ ಎ. ಲಕ್ಷ್ಮೀಸಾಗರ್ ಪತ್ರಿಕಾ ಗೋಷ್ಠಿಯಲ್ಲಿ ಆಯೋಗದ ವರದಿ ಮೇಲೆ ತಕ್ಷಣ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ವರದಿಯ ಮೇಲೆ ಸಾರ್ವಜನಿಕ ಅಭಿಪ್ರಾಯ ಕೇಳಿ ಮುಂದುವರಿಯಲಾಗುವುದು ಎಂದು ಸಮಜಾಯಿಸಿ ನೀಡಿದರು.
ಕೊಡವ ಮತ್ತು ಅಮ್ಮಕೊಡವರಿಗೆ ನ್ಯಾಯ ದೊರಕಿಲ್ಲವಾದ್ದರಿಂದ ಆಯೋಗದ ವರದಿಯನ್ನು ಪುನರ್ ಪರಿಶೀಲಿಸಬೇಕೆಂದು ವಿಧಾನಪರಿಷತ್ ಸದಸ್ಯರಾಗಿದ್ದ ಕೆ. ಪಾಲಿ ಅಯ್ಯಪ್ಪ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು. ಹಾಗೆಯೇ ನಾಯಿರಿ ಸಮಾಜದ ಮುಖಂಡರು, ಉಡುಪಿ ಮತ್ತು ಕುಂದಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಇವರು ಹಿಂದುಳಿದಿರುವ ನಾಯರಿ ಜಾತಿಯನ್ನು ಆಯೋಗ ಪರಿಗಣಿಸದಿರುವುದು ಸರಿಯಲ್ಲವೆಂದು ನಾಯಿರಿ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ
ಮಹಾಸಭಾಧಕ್ಷರಾಗಿದ್ದ ಐ.ಎಂ. ಮಗದಮ್ ಅವರು ಹಾವನೂರು ಮತ್ತು ವೆಂಕಟಸ್ವಾಮಿ ವರದಿಗಳೆರಡನ್ನು ಸರಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದರು. ಕೋರಿಕೆಯನ್ನು ಪರಿಗಣಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಶಾಸಕರುಗಳಾಗಿದ್ದ ಚಂದ್ರಕಾಂತ ಬೆಲ್ಲದ, ಮಲ್ಲಾರಿಗೌಡ ಪಾಟೀಲ್, ಬಿ.ಬಿ. ಶಿವಪ್ಪ, ಲೀಲಾ ದೇವಿ ಪ್ರಸಾದ್ ಮುಂತಾದವರು ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದರು.
ಕೆಥೊಲಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎಸ್. ಆರೋಗ್ಯ ದಾಸ್ ಆಯೋಗದ ವರದಿಯು ಸಂಪೂರ್ಣ ಲೋಪ - ದೋಷಗಳಿಂದ ಕೂಡಿದೆ. ಆದ್ದರಿಂದ ವರದಿಯನ್ನು ತಿರಸ್ಕರಿಸಲು ಮತ್ತು ಪರಿಶಿಷ್ಟ ಜಾತಿಯಿಂದ ಮತಾಂತರ ಹೊಂದಿದ ಕ್ರಿಶ್ಚಿಯನ್ನರನ್ನು ಹಾಗೆ ಒಕ್ಕಲಿಗ, ಲಿಂಗಾಯತರನ್ನು ಕೂಡ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದರು.
ದೇವಾಂಗ, ವಿಶ್ವಕರ್ಮ ಮತ್ತು ಗಾಣಿಗ
ದೇವಾಂಗ ಸಂಘದ ಅಧ್ಯಕ್ಷರಾದ ಕೆ.ಜಿ. ಭಾಸ್ಕರ್ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು. ಹಾಗೆಯೇ ವಿಶ್ವಕರ್ಮ ಸಮಾಜವನ್ನು ಆಯೋಗ ಗಣನೆಗೆ ತೆಗೆದುಕೊಂಡಿಲ್ಲವೆಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲು ಬಯಣ್ಣಾಚಾರ್ಯ ಅವರ ನೇತೃತ್ವದಲ್ಲಿ ಕ್ರಿಯಾ ಸಮಿತಿಯನ್ನು ರಚಿಸಲಾಗಿತ್ತು. ಗಾಣಿಗ ಸಂಘದ ಅಧ್ಯಕ್ಷ ಕೃಷ್ಣಪ್ಪ ಮೆಂಡನ್ ಗಾಣಿಗ ಸಮುದಾಯವು ಪಾರಂಪರಿಕವಾಗಿ ಎಣ್ಣೆ ತಯಾರಿಕೆ ಕಸುಬು ಮಾಡಿಕೊಂಡು ಆರ್ಥಿಕವಾಗಿ ತೀರ ಕನಿಷ್ಠ ಮಟ್ಟದಲ್ಲಿದ್ದರೂ ಗಾಣಿಗರನ್ನು ಸೇರಿಸಿಲ್ಲ ಎಂದು ಕರೆ ಕೊಟ್ಟಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಹಿಂದುಳಿದ ವರ್ಗದ ಪಟ್ಟಿಯಿಂದ ಹೊರಗಿಟ್ಟಿರುವ ಜಾತಿಗಳನ್ನು ಸೇರಿಸಿ, ಇಲ್ಲವೆಂದರೆ ಸಂಪೂರ್ಣವಾಗಿ ವರದಿಯನ್ನು ತಿರಸ್ಕರಿಸಿ ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದರು. ಅಝೀಝ್ ಶೇಟ್ ಅವರು ಮುಸ್ಲಿಮ್ ಕೋಮಿಗೆ ಉಪಪಂಗಡಗಳನ್ನು ಸೇರಿಸುವುದರ ಮೂಲಕ ಹೊಸ ‘ಪರಿಭಾಷೆ’ಯನ್ನು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಮಂಡ್ಯ ಸಂಸತ್ ಸದಸ್ಯರಾದ ಕೆ.ವಿ. ಶಂಕರೇಗೌಡ ಆಯೋಗದ ವರದಿಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ವೆಂಕಟಸ್ವಾಮಿ ಆಯೋಗದ ವರದಿ ಮೂರ್ಖತನದ ವರದಿಯಾಗಿದ್ದು ಅದು ಅವೈಜ್ಞಾನಿಕ ಮತ್ತು ಅವಾಸ್ತವಿಕತೆಯಿಂದ ಕೂಡಿದೆ ಎಂದಿದ್ದರು. ಸಂಸದರಾದ ಎಚ್.ಎನ್. ನಂಜೇಗೌಡ ಮತ್ತು ಪರಿಷತ್ ಸದಸ್ಯರಾದ ಕೆ.ಎನ್. ನಾಗೇಗೌಡ ಅವರುಗಳು ವರದಿಯನ್ನು ತಿರಸ್ಕರಿಸದಿದ್ದಲ್ಲಿ ನಿರಶನ ಹಮ್ಮಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಸಹ ವರದಿ ತಿರಸ್ಕರಿಸದಿದ್ದರೆ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದರು. ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡಸ್ವಾಮಿ ಸಹ ಹೋರಾಟಕ್ಕೆ ಕರೆ ಕೊಟ್ಟಿದ್ದರು. 15 ಜನ ಜನತಾಪಕ್ಷದ ಲಿಂಗಾಯತ ಶಾಸಕರು ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿ, ಕಸುಬು ಮತ್ತು ಆದಾಯ ಇವುಗಳನ್ನು ಮಾನದಂಡವಾಗಿಟ್ಟುಕೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಮಾಜಿಕ ಮಾನದಂಡ ಅರ್ಥ ಕಳೆದುಕೊಂಡಿದೆ. ಆದ್ದರಿಂದ ಆರ್ಥಿಕ ಮಾನದಂಡ ಒಂದನ್ನೇ ಪರಿಗಣಿಸಬೇಕು. ಜಾತಿಯ ಆಧಾರದ ಮೇಲೆ ಹಿಂದುಳಿದವರನ್ನು ಗುರುತಿಸುವುದು ಅತಾರ್ಕಿಕ, ಅವೈಜ್ಞಾನಿಕ ಮತ್ತು ವಿಚಾರಹೀನ ಎಂದು ಪ್ರತಿಪಾದಿಸಿದ್ದರು.
ಮುಖ್ಯಮಂತ್ರಿಗಳಿಂದ ಚರ್ಚೆಗೆ ಆಹ್ವಾನ
ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ರಾಜ್ಯದಲ್ಲಿ ಕಂಡುಬಂದ ವಿರೋಧವನ್ನು ತೀವ್ರವಾಗಿ ಗಮನಿಸಿ, ಸೆಪ್ಟಂಬರ್ 22, 1986ರಂದು ಚರ್ಚೆಗೆ ಕೆಲವು ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಹಾಗೂ ರಾಜಕೀಯ ಪ್ರಮುಖರಾದ ಕೆ.ವಿ. ಶಂಕರೇಗೌಡ, ಆಸ್ಕರ್ ಫೆರ್ನಾಂಡಿಸ್, ಎಂ.ಎಸ್. ಗುರುಪಾದ ಸ್ವಾಮಿ, 18 ಮಂದಿ ಶಾಸಕರು, ಖ್ಯಾತ ಸಮಾಜಶಾಸ್ತ್ರಜ್ಞರಾದ ಎಂ.ಎನ್. ಶ್ರೀನಿವಾಸ್, ಡಾ. ಜಿ. ತಿಮ್ಮಯ್ಯ, ಡಾ. ಮಮ್ತಾಝ್ ಅಲಿ ಖಾನ್, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ, ಬಿ. ರಾಚಯ್ಯ, ಅಬ್ದುಲ್ ನಝೀರ್ ಸಾಬ್, ಜಿ. ಬಸವಣ್ಣಪ್ಪ, ಆರ್.ಎಲ್. ಜಾಲಪ್ಪ, ಲಕ್ಷ್ಮೀಸಾಗರ್, ಎಚ್.ಟಿ. ಕೃಷ್ಣಪ್ಪ, ಜೆ. ಎಚ್. ಪಟೇಲ್ ಮತ್ತು ಡಿ. ಮಂಜುನಾಥ್ ಮುಂತಾದವರನ್ನು ಸಭೆಗೆ ಆಹ್ವಾನಿಸಿದ್ದರು.
ಸಭೆಯಲ್ಲಿ ವರದಿಯ ಪರ-ವಿರೋಧ ಚರ್ಚೆಗಿಂತ ಮುಖ್ಯವಾಗಿ, ಏಕಮುಖ ಚರ್ಚೆಯೇ ಪ್ರಾಧಾನ್ಯತೆ ಪಡೆದುಕೊಂಡಿತ್ತು. ಅದೆಂದರೆ - ವರದಿಯನ್ನು ತಿರಸ್ಕರಿಸುವುದು. ವರದಿಯ ಸಕಾರಾತ್ಮಕ ಅಂಶಗಳ ಬಗ್ಗೆ ಚರ್ಚೆಯೇ ನಡೆಯಲಿಲ್ಲ ಎಂಬ ಅಂಶ ಅಂದಿನ ದಿನಪತ್ರಿಕೆಗಳ ವರದಿಯಿಂದ ಕಂಡುಬಂದ ಅಂಶಗಳು. ಸಾಮಾಜಿಕ ತಜ್ಞರು ಚರ್ಚೆಯಲ್ಲಿ ಭಾಗವಹಿಸಿದ್ದರೂ, ಸಂವಿಧಾನದ ವಿಧಿಗಳಾದ 15(4) ಮತ್ತು 16(4)(Adequate representation) ಅನ್ನು ಹಿಂದುಳಿದ ವರ್ಗಗಳನ್ನು ಗುರುತಿಸಲು ಸಂಯೋಜಿಸಬೇಕಾದ ಅಗತ್ಯವಿದೆ. ಎರಡೂ ವಿಧಿಗಳನ್ನು ಒಟ್ಟಾಗಿಯೇ ಓದಿಕೊಳ್ಳಬೇಕು. ಎರಡು ಅಂಶಗಳನ್ನು ವರದಿಯಲ್ಲಿ ಗಣನೆಗೆ ತೆಗೆದುಕೊಂಡಿರುವುದು ಕಂಡುಬರುತ್ತದೆ. ಆದರೂ, ಚರ್ಚೆಯ ಗದ್ದಲದ ನಡುವೆ, ವರದಿಯನ್ನು ತಿರಸ್ಕರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಬದಲಾಗಿ, ಈ ಬಗ್ಗೆ ಸಾಂವಿಧಾನಿಕ ತಜ್ಞರ ಒಂದು ಸಮಿತಿಯನ್ನು ನೇಮಿಸಿ, ಅದು ಕೊಡುವ ವರದಿಯನ್ನು ಪರಿಗಣಿಸುವ ಅವಶ್ಯಕತೆ ಇತ್ತು. ಆದರೆ, ಚರ್ಚೆಯಲ್ಲಿ ಏನು ಪ್ರಸ್ತಾಪವಾಯಿತು ಎಂಬುದು ತಿಳಿದಿಲ್ಲ. ಚರ್ಚೆಯಲ್ಲಿ ಯಾವ ಪತ್ರಕರ್ತರೂ ಭಾಗವಹಿಸಿರಲಿಲ್ಲ. ಹಾಗಾಗಿ ಜನತೆಗೆ ಸಂಪೂರ್ಣ ಮಾಹಿತಿ ದೊರಕಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು, ಯಾವುದೇ ವಿಷಯವನ್ನು, ಹುಸಿ ನಗೆಯ ಮೂಲಕವೇ ಮರುಳು ಮಾಡುವ ಅಥವಾ ನಿರ್ಧಾರ ತೆಗೆದುಕೊಳ್ಳಲು ನಾಜೂಕು ಮನಸ್ಸನ್ನು ಹೊಂದಿದವರು. ಸಾಂವಿಧಾನಿಕ ತಜ್ಞರು, ವೈಜ್ಞಾನಿಕವಾಗಿ, ಪೂರಕ ಮಾನದಂಡಗಳೊಡನೆ, ಸಿದ್ಧಪಡಿಸಿದ ವರದಿ ಎಂದು ಹೇಳಿದ್ದರು.
ಸಂಪುಟದ ತೀರ್ಮಾನ
ಅಕ್ಟೋಬರ್ 7, 1986ರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಸರಕಾರವು ಟಿ.ವೆಂಕಟಸ್ವಾಮಿ ವರದಿಯನ್ನು ತಿರಸ್ಕರಿಸಿ ಹೊಸ ಆಯೋಗವನ್ನು ರಚಿಸಲು ತೀರ್ಮಾನಿಸಿತು ಮತ್ತು ಸರಕಾರವೇ ಹಿಂದುಳಿದ ವರ್ಗದವರನ್ನು ಐದು ಗುಂಪುಗಳಾಗಿ ವಿಂಗಡಿಸಿ ಹೊಸ ಆದೇಶವನ್ನು ಹೊರಡಿಸಲು ತೀರ್ಮಾನಿಸಿತು. ಸರಕಾರದ ಈ ತೀರ್ಮಾನವನ್ನು ಕೆಲವು ಪತ್ರಿಕೆಗಳು ಮತ್ತು ಹೊಸದಾಗಿ ಪಟ್ಟಿಯಲ್ಲಿ ಸೇರಿರುವ ಜಾತಿಗಳ ಮುಖಂಡರು ಸ್ವಾಗತಿಸಿದರೆ, ಕೆಲವು ಸುದ್ದಿ ಮಾಧ್ಯಮಗಳು ಕಟುವಾಗಿ ಟೀಕಿಸಿದ್ದವು.
ವರದಿಯ ತಿರಸ್ಕಾರಕ್ಕೆ ಸರಕಾರ ನೀಡಿದ ಉತ್ತರ ಸಮಂಜಸವಾಗಿರಲಿಲ್ಲ ಎಂಬುದು ಬಲ್ಲವರು ಹೇಳಿದ ಮಾತು. ಸರಕಾರದ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವನ್ನೂ ಸಹ ಯಾವೊಬ್ಬ ನಾಗರಿಕನೂ ಪಡೆದುಕೊಳ್ಳಲಿಲ್ಲ ಎಂಬುದೇ ವಿಷಾದದ ಸಂಗತಿ.
ಒಂದು ವೇಳೆ ಈ ವರದಿಯು ಅನುಷ್ಠಾನಗೊಂಡಿದ್ದ ಪಕ್ಷದಲ್ಲಿ, ನೈಜ ಹಿಂದುಳಿದ ವರ್ಗಗಳಂಥವರಿಗೆ ಮತ್ತು ಪ್ರಾತಿನಿಧ್ಯವೇ ಇಲ್ಲದ ಎಷ್ಟೋ ಅತಿ ಹಿಂದುಳಿದ ಮತ್ತು ಅಲೆಮಾರಿ-ಅರೆ ಅಲೆಮಾರಿ ಜಾತಿಗಳಿಗೂ ಅವಕಾಶ ಲಭಿಸುತ್ತಿತ್ತು.