ಭಾರತ-ಬಾಂಗ್ಲಾ ಸಂಬಂಧ ಹದಗೆಡಲು ಕಾರಣವೇನು?
ಅಲ್ಲಿ ಹಿಂದೂಗಳು ಮತ್ತು ಭಾರತದ ನಾಗರಿಕರು ಟಾರ್ಗೆಟ್ ಆಗಿಲ್ಲ, ಅವರ ವಿರುದ್ಧ ದ್ವೇಷ ಇಲ್ಲ ಎಂಬುದು ಕೂಡ ನಿಜ. ಆದರೆ ಬಾಂಗ್ಲಾದೇಶಿಗಳ ದ್ವೇಷ ಇರುವುದು ಭಾರತದ ಸರಕಾರದ ವಿರುದ್ಧ.
ಬಾಂಗ್ಲಾ ವಿಚಾರದಲ್ಲಿ ಭಾರತ ಸರಕಾರದ ಹಸ್ತಕ್ಷೇಪದ ಬಗ್ಗೆ ಅಲ್ಲಿ ಆಕ್ರೋಶವಿದೆ. ಕಳೆದ 15 ವರ್ಷಗಳಲ್ಲಿ ಶೇಕ್ ಹಸೀನಾರನ್ನು ಭಾರತ ಸಿಕ್ಕಾಪಟ್ಟೆ ಬೆಂಬಲಿಸಿಕೊಂಡು ಬಂತೆಂಬುದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ವಿದ್ಯಾರ್ಥಿ ಕ್ರಾಂತಿ ಶೇಕ್ ಹಸೀನಾರನ್ನು ಬಾಂಗ್ಲಾ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿ 4 ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಭಾರತ-ಬಾಂಗ್ಲಾ ಸಂಬಂಧ ತೀರಾ ಹದಗೆಟ್ಟಿದೆ, ಕೆಡುತ್ತಲೇ ಇದೆ.
ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ಬಗ್ಗೆ ಭಾರತ ಮತ್ತೆ ಮತ್ತೆ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ ರಾಜಕೀಯ ಹಿಂಸಾಚಾರದ ಹೊರತು, ಯಾರೂ ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಬಾಂಗ್ಲಾ ಹೇಳುತ್ತಿದೆ. ಬಾಂಗ್ಲಾ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಭಾರತದ ಜೊತೆಗೇ ಇವತ್ತು ಬಾಂಗ್ಲಾ ಮಾತುಕತೆ ನಡೆಸುತ್ತಿಲ್ಲ.
ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್ ಬಂಧನದ ಬಳಿಕ ಅಧಿಕೃತ ಹೇಳಿಕೆಯಲ್ಲಿ ಬಾಂಗ್ಲಾ ಆತ ತನ್ನ ದೇಶದ ನಾಗರಿಕ, ಈ ವಿಚಾರದಲ್ಲಿ ಮೂಗು ತೂರಿಸುವುದು ಒಳ್ಳೆಯದಲ್ಲ ಎಂದಿದೆ.
ಬಾಂಗ್ಲಾದೇಶಕ್ಕೆ ವಿಶ್ವಸಂಸ್ಥೆಯ ಶಾಂತಿಪಡೆ ಕಳಿಸಲು ಕೇಂದ್ರ ಸರಕಾರ ವ್ಯವಸ್ಥೆ ಮಾಡಬೇಕೆಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶಿ ಗೃಹ ಸಚಿವಾಲಯದ ಸಲಹೆಗಾರರು ವಿಶ್ವಸಂಸ್ಥೆಯ ಶಾಂತಿಪಡೆ ಕಳಿಸಬೇಕಾದದ್ದು ಭಾರತಕ್ಕೆ ಎಂದು ತಿರುಗೇಟು ನೀಡಿದ್ದಾರೆ.
ಆದರೆ ಬಾಂಗ್ಲಾದೇಶದಲ್ಲಿನ ವಾಸ್ತವ ಏನು?
ನಿಜವಾಗಿಯೂ ಅಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆಯೆ? ಅದು ನಡೆಯುತ್ತಿದೆ ಎಂದಾದರೆ ಮೋದಿ ಸರಕಾರ ಅದನ್ನು ನಿಲ್ಲಿಸಲು ಅಸಮರ್ಥವಾಗಿದೆಯೆ? ಬಾಂಗ್ಲಾದೇಶದ ಸಿಟ್ಟು ಭಾರತ ದೇಶದ ಮೇಲೆಯೋ ಅಥವಾ ಇಲ್ಲಿನ ಸರಕಾರದ ವಿರುದ್ಧವೊ?
ಶೇಕ್ ಹಸೀನಾರನ್ನು ಮತ್ತೆ ಬಾಂಗ್ಲಾದಲ್ಲಿ ಅಧಿಕಾರಕ್ಕೆ ಏರಿಸಲು ಭಾರತ ಸರಕಾರ ಯತ್ನಿಸುತ್ತಿದೆ ಎಂಬ ಭಾವನೆ ಬಾಂಗ್ಲಾದಲ್ಲಿ ಆಕ್ರೋಶ ಮೂಡಿಸಿದೆಯೆ? ಬಾಂಗ್ಲಾದೇಶದಲ್ಲಿ ಗೊಂದಲ ಮತ್ತು ಕೋಮು ಉದ್ವಿಗ್ನತೆ ಹರಡಲು ಷಡ್ಯಂತ್ರ ನಡೆದಿರುವುದು ನಿಜವೇ? ಯಾಕೆ ಎರಡೂ ದೇಶಗಳ ನಡುವೆ ಸಂಬಂಧ ಇಷ್ಟು ಕೆಟ್ಟ ಸ್ಥಿತಿಗೆ ಮುಟ್ಟಿದೆ?
4,000 ಕಿಮೀ ಉದ್ದದ ಗಡಿ ಹಂಚಿಕೊಂಡಿರುವ ಎರಡೂ ದೇಶಗಳ ನಡುವೆ ಇಂಥ ಸಂಘರ್ಷ ತಲೆದೋರಬಾರದು.
ಆದರೆ ಬಾಂಗ್ಲಾ ತಮ್ಮ ರಾಯಭಾರಿಗಳನ್ನು ಭಾರತದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಅಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತಿವೆ. ಇದೆಲ್ಲ ಹೀಗೆಯೇ ಮುಂದುವರಿದರೆ ಬಾಂಗ್ಲಾ ಕೊನೆಗೆ ಚೀನಾ ಜೊತೆಗೆ ನಿಂತರೂ ಅಚ್ಚರಿಯಿಲ್ಲ.
ಬಾಂಗ್ಲಾದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಇಲ್ಲಿ ಈಗ ಹರಡುತ್ತಿರುವ ವದಂತಿಗಳೆಲ್ಲ ನೂರಕ್ಕೆ ನೂರರಷ್ಟು ಸತ್ಯವೂ ಅಲ್ಲ, ಪೂರ್ತಿ ಸುಳ್ಳೂ ಅಲ್ಲ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂಬ ಸುದ್ದಿ ಮಾಡಲು ಭಾರತದ ಮೀಡಿಯಾಗಳು ಇನ್ನಿಲ್ಲದಷ್ಟು ಆತುರ ತೋರಿಸುತ್ತವೆ. ಚಿನ್ಮಯ ಕೃಷ್ಣ ದಾಸ್ ಬಂಧನ ವಿಚಾರವನ್ನಂತೂ ಹಿಂದೂಗಳ ಮೇಲಿನ ದೊಡ್ಡ ದಾಳಿ ಎಂಬಂತೆ ಬಿಂಬಿಸಲಾಯಿತು. ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳೇ ನಡೆದವು.
ಹಿಂದೂಗಳ ಮೇಲೆ ಅಲ್ಲಿ ಹಿಂಸಾಚಾರ ನಡೆದಿದೆ. ಆದರೆ ಹಿಂಸಾಚಾರದ ಎರಡು ಆಯಾಮಗಳನ್ನು ಗಮನಿಸಬೇಕು. ಒಂದು ರಾಜಕೀಯ ಹಿಂಸಾಚಾರ, ಇನ್ನೊಂದು ಕೋಮು ಹಿಂಸಾಚಾರ.
ಶೇಕ್ ಹಸೀನಾ ಅವರ ಆವಾಮಿ ಲೀಗ್ ಪಕ್ಷದ ಜನರ ಮೇಲಿನ ಹಲ್ಲೆಗಳು ಅಲ್ಲೀಗ ಸಾಮಾನ್ಯ. ಅದರಲ್ಲಿ ಹಿಂದೂಗಳು, ಮುಸ್ಲಿಮರು ಇಬ್ಬರೂ ಗುರಿಯಾಗುತ್ತಿದ್ದಾರೆ.ಇದರ ಜೊತೆಗೆ ಕೋಮು ಹಿಂಸಾಚಾರಗಳೂ ನಡೆಯುತ್ತಿವೆ.
ಆದರೆ ಭಾರತದ ಮೀಡಿಯಾಗಳು ಅಲ್ಲಿ ಅರಾಜಕತೆ, ನರಮೇಧ, ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿವೆ ಎಂದು ಭಯಂಕರವಾಗಿ ಬಿಂಬಿಸಲು ಯತ್ನಿಸುತ್ತಿವೆ. ಆದರೆ ಭಾರತ ಸರಕಾರ ಇಂಥ ಪದಗಳನ್ನು ಬಾಂಗ್ಲಾ ವಿಚಾರದಲ್ಲಿ ಬಳಸಿಲ್ಲ ಎಂಬುದು ಗಮನಾರ್ಹ.
ಭಾರತ ಸರಕಾರ ಏಕೆ ಚಿನ್ಮಯ ಕೃಷ್ಣ ದಾಸ್ ರಕ್ಷಣೆಗೆ ಯತ್ನಿಸುತ್ತಿದೆ ಎಂಬುದು ಸ್ವತಂತ್ರ ಪತ್ರಕರ್ತರ ಪ್ರಶ್ನೆಯಾಗಿದೆ. ಅವರು ಭಾರತದ ನಾಗರಿಕನಲ್ಲ, ಬಾಂಗ್ಲಾ ನಾಗರಿಕ. ಇಸ್ಕಾನ್‌ನಿಂದಲೂ ಕೆಲ ಸಮಯದ ಹಿಂದೆಯೇ ಆ ವ್ಯಕ್ತಿ ಹೊರಬಂದಿರುವುದರಿಂದ ಹಾಗೆಯೂ ಹೇಳುವಂತಿಲ್ಲ. ಚಿನ್ಮಯ ಕೃಷ್ಣ ದಾಸ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿವೆ.
ಇನ್ನು ವಾಗ್ದಾಳಿಗಳ ವಿಚಾರ.
ಮೊದಲ ಬಾರಿಗೆ ಶೇಕ್ ಹಸೀನಾ ಸಾರ್ವಜನಿಕ ಹೇಳಿಕೆ ನೀಡಿದ್ದು, ಬಾಂಗ್ಲಾದಲ್ಲಿ ಹಿಂದೂ ನರಮೇಧ ನಡೆದಿದೆ ಎಂದು ಆರೋಪಿಸಿದ್ದಾರೆ.
ಅವರು ಭಾರತದ ಸಹಾಯ ಪಡೆದು ಪುನಃ ಬಾಂಗ್ಲಾದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಬಾಂಗ್ಲಾದಲ್ಲಿ ಸಾವಿರಾರು ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಹಸೀನಾರನ್ನು ಅಂತರ್‌ರಾಷ್ಟ್ರೀಯ ಕೋರ್ಟ್‌ಗೆ ಎಳೆಯಬೇಕೆಂಬುದು ಬಾಂಗ್ಲಾದಲ್ಲಿ ಎಲ್ಲರ ಸಾಮಾನ್ಯ ಒತ್ತಾಯವಾಗಿದೆ.
ಭಾರತ ಮತ್ತು ಬಾಂಗ್ಲಾದೇಶಗಳ ಮೀಡಿಯಾಗಳ ವರದಿಗಳನ್ನು ಗಮನಿಸಿದರೆ ನೀವು ಭೂಮಿಗೂ ಆಕಾಶಕ್ಕೂ ಇರುವ ಅಂತರವನ್ನು ಕಾಣಬಹುದು.
ಬಾಂಗ್ಲಾದಲ್ಲಿ ಇನ್ನೂ ಕೋಮುಸೌಹಾರ್ದ ಗಟ್ಟಿಯಾಗಿದೆ. ಯಾವುದೇ ಉದ್ದೇಶಿತ ದಾಳಿಗಳು ನಡೆಯುತ್ತಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿವೆ.
ಅಲ್ಲಿ ಹಿಂದೂಗಳು ಮತ್ತು ಭಾರತದ ನಾಗರಿಕರು ಟಾರ್ಗೆಟ್ ಆಗಿಲ್ಲ, ಅವರ ವಿರುದ್ಧ ದ್ವೇಷ ಇಲ್ಲ ಎಂಬುದು ಕೂಡ ನಿಜ. ಆದರೆ ಬಾಂಗ್ಲಾದೇಶಿಗಳ ದ್ವೇಷ ಇರುವುದು ಭಾರತದ ಸರಕಾರದ ವಿರುದ್ಧ.
ಬಾಂಗ್ಲಾ ವಿಚಾರದಲ್ಲಿ ಭಾರತ ಸರಕಾರದ ಹಸ್ತಕ್ಷೇಪದ ಬಗ್ಗೆ ಅಲ್ಲಿ ಆಕ್ರೋಶವಿದೆ. ಕಳೆದ 15 ವರ್ಷಗಳಲ್ಲಿ ಶೇಕ್ ಹಸೀನಾರನ್ನು ಭಾರತ ಸಿಕ್ಕಾಪಟ್ಟೆ ಬೆಂಬಲಿಸಿಕೊಂಡು ಬಂತೆಂಬುದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಭಾರತ ಹರಡುತ್ತಿರುವ ಸುಳ್ಳು ಮಾಹಿತಿಗಳ ವಿರುದ್ಧ ಬಾಂಗ್ಲಾದೇಶದ ಪ್ರಮುಖ ಮೀಡಿಯಾ ಸಂಸ್ಥೆಗಳು ಅಭಿಯಾನ ಶುರು ಮಾಡಿವೆ. ಭಾರತದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯನ್ನು ಹೇಗೆ ಇಲ್ಲಿನ ಮಾಧ್ಯಮಗಳು ಉತ್ಪ್ರೇಕ್ಷಿಸುತ್ತಿವೆ ಎಂಬುದರ ಬಗ್ಗೆ ಪ್ರಮುಖ ಸುದ್ದಿ ಸಂಸ್ಥೆಗಳು ನಿತ್ಯವೂ ಸಂಪಾದಕೀಯವನ್ನು ಬರೆಯುತ್ತಿವೆ.
ಆದರೆ ಎರಡೂ ದೇಶಗಳ ನಡುವಿನ ಅನುಮಾನ ಮತ್ತು ದ್ವೇಷ ಈ ಹಂತ ಮುಟ್ಟಿದ್ದು ಹೇಗೆ?
ಇದು 4 ತಿಂಗಳಲ್ಲಿ ಆದದ್ದಲ್ಲ. ದೀರ್ಘ ಸಮಯದಲ್ಲಿ ಇದು ಬೆಳೆಯುತ್ತ ಬಂದಿದೆ.
ಎರಡೂ ದೇಶಗಳ ನಡುವೆ 50 ವರ್ಷಗಳಷ್ಟು ಹಳೆಯ ಸ್ನೇಹವಿದೆ. ಬಾಂಗ್ಲಾ ವಿಮೋಚನೆಗೂ ಮುಂಚೆಯೂ ಎರಡೂ ದೇಶಗಳ ನಡುವೆ ಉತ್ತಮ ಸ್ನೇಹವೇ ಇತ್ತು.
1971ರಲ್ಲಿ ಬಾಂಗ್ಲಾ ಸ್ವತಂತ್ರವಾಯಿತು. ಬಾಂಗ್ಲಾದ ಮೊದಲ ಔಪಚಾರಿಕ ವಿದೇಶ ಸಂಬಂಧ ಕೂಡ ಭಾರತದ ಜೊತೆಗೇ ಆಯಿತು. ಆನಂತರದ ವರ್ಷಗಳಲ್ಲಿ ಬಾಂಗ್ಲಾದ ಭದ್ರತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಭಾರತ ನೆರವಾಯಿತು. ಬಾಂಗ್ಲಾದೊಂದಿಗಿನ ಇವತ್ತಿನ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶ ಕೂಡ ಭಾರತವೇ ಆಗಿದೆ. ಇದು 16 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ.
ಬಾಂಗ್ಲಾದ ಮೂಲಸೌಕರ್ಯ ಅಭಿವೃದ್ಧಿಗೆ ಕೂಡ ಭಾರತ ಮಹತ್ತರ ಕೊಡುಗೆ ನೀಡಿದೆ. ಆರ್ಥಿಕತೆ ವಿಚಾರವಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ, 2007ರ ಸೈಕ್ಲೋನ್, 2020ರ ಆಂಫನ್ ಸಂದರ್ಭದಲ್ಲಿ ಭಾರತವೇ ನೆರವಾಗಿದೆ. ಕೋವಿಡ್ ವೇಳೆ ಬಾಂಗ್ಲಾಕ್ಕೆ ಔಷಧ ಪೂರೈಕೆಯನ್ನೂ ಭಾರತ ಮಾಡಿದೆ. ಆದರೆ, ಬಾಂಗ್ಲಾದ ಆಂತರಿಕ ವ್ಯವಹಾರಗಳಲ್ಲಿ ಭಾರತ ಕೈಯಾಡಿಸುವುದರ ಬಗ್ಗೆ ಅಲ್ಲಿ ಆಕ್ಷೇಪ ತೀವ್ರವಾಗಿದೆ
ವರ್ಷಗಳಿಂದ ಭಾರತ ಸರಕಾರ ಮತ್ತು ಹಸೀನಾ ಬಾಂಧವ್ಯ ಉತ್ತಮವಾಗಿತ್ತು. ಆದರೆ ಹಲವು ವಿಚಾರಗಳಲ್ಲಿನ ನಿಲುವು ಅಲ್ಲಿನ ಜನರಿಗೆ ಸರಿಬರಲಿಲ್ಲ.
1.ನೀರು ಹಂಚಿಕೆ ವಿವಾದ
ಗಂಗಾ ತೀಸ್ತಾ ವಿಚಾರದಲ್ಲಿ ಹಸೀನಾ ನಿಲುವು ಭಾರತದ ಪರ ಎಂಬುದು ಅಲ್ಲಿನ ಜನರ ಭಾವನೆ.
2. ಫರಕ್ಕಾ ಬ್ಯಾರೇಜ್ ವಿವಾದ
ಬಾಂಗ್ಲಾದ ಜಲ ಬಿಕ್ಕಟ್ಟಿಗೆ ಈ ಯೋಜನೆ ಕಾರಣವಾಯಿತೆಂಬುದು ಜನರ ಆಕ್ರೋಶ
3.ವ್ಯಾಪಾರ ಸಂಬಂಧ
ಬಾಂಗ್ಲಾದ ಅತಿ ದೊಡ್ಡ ವ್ಯಾಪಾರ ಪಾಲುದಾರ ಭಾರತ.
ಆದರೆ ಇಲ್ಲಿನ ಉತ್ಪನ್ನಗಳು ಬಾಂಗ್ಲಾದ ಉದ್ಯಮಕ್ಕೆ ಹೊಡೆತ ಕೊಡುತ್ತಿದ್ದು, ಅವನ್ನು ನಿಷೇಧಿಸಬೇಕೆಂಬುದು ಅಲ್ಲಿ ಕೇಳಿಬಂದಿರುವ ಒತ್ತಾಯ.
4.ಗುಪ್ತಚರ ಬಿಕ್ಕಟ್ಟು
ಬಾಂಗ್ಲಾದೇಶದ ಮೇಲೆ ಭಾರತ ಗೂಢಚರ್ಯೆ ನಡೆಸುತ್ತಿದೆ ಎಂಬ ಮಾತುಗಳು ಸಾಕಷ್ಟು ಸಮಯದಿಂದಲೂ ಇವೆ. ಬಾಂಗ್ಲಾದಲ್ಲಿ ಭಾರತದ ಅಂತರ್ ರಾಷ್ಟ್ರೀಯ ಗೂಢಚರ ಸಂಸ್ಥೆ ‘ರಾ’ ಸಕ್ರಿಯವಾಗಿದ್ದು, ಅದು ಅಲ್ಲಿನ ರಾಜಕೀಯ ತೀರ್ಮಾನಗಳ ಮೇಲೆಯೂ ಪ್ರಭಾವ ಬೀರುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ನೇರ ಪುರಾವೆ ಇವತ್ತಿನವರೆಗೂ ಇಲ್ಲವಾದರೂ, ಅನುಮಾನ ಮಾತ್ರ ಕಡಿಮೆಯಿಲ್ಲ.
ಇನ್ನು, ಬಾಂಗ್ಲಾದಲ್ಲೂ ಅದಾನಿ ಆ್ಯಂಗಲ್ ಒಂದಿದೆ.
ಅಲ್ಲಿನ ಸರಕಾರದ ಜೊತೆ ಅದಾನಿ ಮಾಡಿಕೊಂಡಿರುವ ವಿದ್ಯುತ್ ಖರೀದಿ ಒಪ್ಪಂದದ ಬಗ್ಗೆಯೂ ಅಲ್ಲಿ ಸಾಕಷ್ಟು ಪ್ರಬಲ ವಿರೋಧ ಇತ್ತು. ಪ್ರಧಾನಿ ಮೋದಿಯವರ ಬಾಂಗ್ಲಾ ಭೇಟಿಯ ಬಳಿಕ ನಡೆದ ಈ ಒಪ್ಪಂದದಿಂದ ಭಾರತಕ್ಕೂ ಪ್ರಯೋಜನವಿಲ್ಲ, ಬಾಂಗ್ಲಾಕ್ಕೂ ಪ್ರಯೋಜನವಿಲ್ಲ. ಬರೀ ಅದಾನಿ ಒಬ್ಬರಿಗೇ ಭರ್ಜರಿ ಲಾಭವಾಗಲಿದೆ ಎಂದು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಬಾಂಗ್ಲಾ ದೇಶ ದುಬಾರಿ ಬೆಲೆ ತೆತ್ತು ಅದಾನಿಯಿಂದ ವಿದ್ಯುತ್ ಖರೀದಿ ಮಾಡುವಂತೆ ಮಾಡಲಾಗಿತ್ತು ಎಂದು ವರದಿಯಾಗಿತ್ತು.
ಭಾರತ ಸರಕಾರ ಹಸೀನಾ ಹೊರತಾಗಿ ಅಲ್ಲಿನ ಇತರ ಪಕ್ಷಗಳ ಜೊತೆ ಸಂಬಂಧವನ್ನೇ ಬೆಳೆಸಿಕೊಳ್ಳಲು ಹೋಗಿಲ್ಲ.ಈಗ ಅಲ್ಲಿನ ಸಾವಿರಾರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿರುವ ಹಸೀನಾ ವಿರುದ್ಧದ ಆಕ್ರೋಶವೇ, ಆಕೆಗೆ ಇವತ್ತಿನವರೆಗೂ ಆಶ್ರಯ ಕೊಟ್ಟಿರುವ ಭಾರತ ಸರಕಾರದ ವಿರುದ್ಧ ತಿರುಗಿದೆ.
ಏಕೆ ಭಾರತ ಬಾಂಗ್ಲಾದ ವಿದ್ಯಾರ್ಥಿ ಸಮುದಾಯವನ್ನು ಎದುರು ಹಾಕಿಕೊಳ್ಳುವ ಇಂಥ ರಾಜಕೀಯ ತೀರ್ಮಾನವನ್ನು ತೆಗೆದುಕೊಂಡಿತು? ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಭಾರತ ಏಕೆ ಯೋಚಿಸಲಿಲ್ಲ ಎಂಬ ಪ್ರಶ್ನೆಗಳಿವೆ.
ಬದಲಾಗಿ, ಬಾಂಗ್ಲಾದಲ್ಲಿ ಹಿಂದೂ ವಿರೋಧಿ ಹಿಂಸಾಚಾರ ನಡೆಯುತ್ತಿದೆ, ನರಮೇಧ ನಡೆಯುತ್ತಿದೆ ಎಂಬ ಅಪಪ್ರಚಾರ ನಾಲ್ಕೇ ತಿಂಗಳಲ್ಲಿ 50 ವರ್ಷಗಳ ಉತ್ತಮ ಬಾಂಧವ್ಯವನ್ನು ಹಾಳುಗಡವಿಬಿಟ್ಟಿದೆ.
ಒಂದು ವೇಳೆ ಹಿಂದೂ ನರಮೇಧವೇ ಅಲ್ಲಿ ನಡೆದಿದ್ದರೆ, ಅದರ ಬಗ್ಗೆ ಮೀಡಿಯಾ ಮೂಲಕ ಅಬ್ಬರಿಸುವುದು ಬಿಟ್ಟು ಸೂಪರ್ ಪವರ್ ಭಾರತದ ಬಳಿ ಅದನ್ನು ನಿಲ್ಲಿಸಲು ಬೇರೆ ದಾರಿಯಿಲ್ಲವೆ?
ಉಕ್ರೇನ್-ರಶ್ಯ ಯುದ್ಧ ನಿಲ್ಲಿಸುವ ಸಾಮರ್ಥ್ಯ ನಮ್ಮ ಪ್ರಧಾನಿಗೆ ಇದೆ ಎಂದಾದರೆ ಬಾಂಗ್ಲಾದಂತಹ ಸಣ್ಣ ದೇಶಕ್ಕೆ ಹೇಳುವ ಹಾಗೆ ಹೇಳಿ ಅಲ್ಲಿ ಹಿಂದೂಗಳ ಮೇಲಿನ ಆಕ್ರಮಣ ನಿಲ್ಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ?
ಯಾಕೆ ಮಾಲ್ದೀವ್ಸ್ ಅಂಥ ದೇಶಗಳ ಜೊತೆ ತೋರಿಸಿದ ರಾಜತಾಂತ್ರಿಕ ಚಾಣಾಕ್ಷತನವನ್ನು ಬಾಂಗ್ಲಾದ ಮಧ್ಯಂತರ ಸರಕಾರದ ಜೊತೆ ತೋರಿಸಲು ಭಾರತ ಸರಕಾರಕ್ಕೆ ಆಗಿಲ್ಲ?
ಇದರ ಬದಲು ದ್ವೇಷ ಹರಡುವುದಕ್ಕೆ ಭಾರತ, ಭಾರತದ ಮಡಿಲ ಮೀಡಿಯಾ ನಿಂತುಬಿಟ್ಟಿರುವುದು ಏನನ್ನೂ ಅಂತಿಮವಾಗಿ ಕೊಡಲಾರದು.