ಸಿದ್ದರಾಮಯ್ಯ ರಾಜೀನಾಮೆ ನೀಡುವಂತಾದರೆ ಮುಂದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಸರಕಾರದ ಕಣ್ಸನ್ನೆಯಲ್ಲಿ ನಡೆಯುವ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಳ್ಳುವುದರೊಂದಿಗೆ ಮುಡಾ ಪ್ರಕರಣ ನಿರ್ಣಾಯಕ ಹಂತ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಹೆಚ್ಚು ‘ಕ್ರಿಯಾಶೀಲ’ವಾಗಿರುವುದರಿಂದ ಮತ್ತೀಗ ಮುಡಾ ಪ್ರಕರಣದಲ್ಲಿ ಹಣ ವರ್ಗಾವಣೆ ವಿಷಯ ಇಲ್ಲದಿದ್ದರೂ ವ್ಯಾಪ್ತಿ ಮೀರಿ ದೂರು ದಾಖಲಿಸಿಕೊಂಡಿರುವುದರಿಂದ ಸಿದ್ದರಾಮಯ್ಯ ಅವರ ಬಂಧನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಂಧನದ ಮುಂಚೆ ಅಥವಾ ಆಮೇಲೆ ಸಿದ್ದರಾಮಯ್ಯ ರಾಜೀನಾಮೆಯನ್ನೂ ನೀಡಬಹುದು.
ಈ ರಾಜಕೀಯ ಸ್ಥಿತ್ಯಂತರದ ಮಹತ್ವ ಅಡಗಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಗೊಳ್ಳುವುದರಲ್ಲಿ ಅಲ್ಲ, ಹಿಂದುಳಿದ ವರ್ಗಗಳ ರಾಜಕೀಯ ಹಳಿ ತಪ್ಪುವುದರಲ್ಲಿ ಮಾತ್ರವೂ ಅಲ್ಲ. ಅದಕ್ಕೂ ಮಿಗಿಲಾಗಿ ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಸೈದ್ಧಾಂತಿಕ ಪ್ರಜ್ಞೆಯ ಕುತ್ತಿಗೆ ಮೇಲೆ ಕಾಲಿಟ್ಟು ಹೊಸಕಿಹಾಕುವುದರಲ್ಲಿ.
ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡಿರುವುದು, ಸಾಮಾಜಿಕವಾಗಿ ಮತ್ತು ಸೈದ್ಧಾಂತಿಕವಾಗಿ ಜನರನ್ನು ದಾರಿ ತಪ್ಪಿಸಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ಇದು ಮೊದಲೇನೂ ಅಲ್ಲ, ಕರ್ನಾಟಕದಲ್ಲಿ ಮಾತ್ರವೂ ಅಲ್ಲ. ಹಿಂದುಳಿದ ವರ್ಗಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೇಲೇಳುವುದು ಮೇಲ್ವರ್ಗಗಳಿಗೆ, ಮುಖ್ಯವಾಗಿ ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್‌ಗೆ ಯಾವತ್ತೂ ಬೇಕಿರಲಿಲ್ಲ. ಇದಕ್ಕೆ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ನೇತೃತ್ವದ ಸರಕಾರ ಮಂಡಲ ಆಯೋಗದ ವರದಿಯನ್ನು ಒಪ್ಪಿದ ಮರುಕ್ಷಣವೇ ಆರೆಸ್ಸೆಸ್ ಮತ್ತು ಬಿಜೆಪಿ ದೇಶದುದ್ದಗಲಕ್ಕೂ ಕಾರಿದ ದ್ವೇಷಾಗ್ನಿಗಿಂತಲೂ ಪುರಾವೆ ಬೇಕಿಲ್ಲ. ‘ಮಂಡಲ’ ರಾಜಕಾರಣದ ವಿರುದ್ಧ ‘ಕಮಂಡಲ’ ರಾಜಕಾರಣದ ನಿರೂಪಣೆ ಸೃಷ್ಟಿಸಿ ದೇಶದ ಕೋಮುಸೌಹಾರ್ದಕ್ಕೆ ಕೊಳ್ಳಿ ಇಟ್ಟಿದ್ದಕ್ಕಿಂತಲೂ ಮಿಗಿಲಾದ ಸಾಕ್ಷ್ಯ ಬೇಕಿಲ್ಲ. ಅಂದು ಹೊತ್ತಿಕೊಂಡ ಕೋಮುಸಂಘರ್ಷದ ಕಿಡಿ ಇಂದಿಗೂ ಭಾರತವೆಂಬ ಬಹುಸಂಸ್ಕೃತಿಯ, ಬಹುಸೊಗಸಾದ ನಾಡನ್ನು ಸುಡುತ್ತಲೇ ಇದೆ ಎನ್ನುವುದನ್ನು ಮರೆಯುವಂತಿಲ್ಲ.
ಆರೆಸ್ಸೆಸ್ ಮತ್ತು ಬಿಜೆಪಿಗೆ ಅಲ್ಪಸಂಖ್ಯಾತರು ಬೇಕಾಗಿಲ್ಲ. ಎಂಥದೇ ಬಿರುಗಾಳಿ ಬೀಸಿದರೂ ಅಂಬೇಡ್ಕರ್ ಎಂಬ ಹಣತೆ ನಂದುವುದಿಲ್ಲ, ಅಂಬೇಡ್ಕರ್ ಎಂಬ ಅರಿವು ಜಾರದ ಹೊರತು ದಲಿತ ವರ್ಗ ಯಾವತ್ತೂ ಇಡಿಯಾಗಿ ತಮ್ಮ ಕಾರ್ಯಸೂಚಿಗಳಿಗೆ ಮಾರುಹೋಗುವುದಿಲ್ಲ ಎನ್ನುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬಹಳ ಚೆನ್ನಾಗಿ ಗ್ರಹಿಸಿವೆ. ಅದರಿಂದಾಗಿಯೇ ಮೇಲ್ವರ್ಗಗಳ ಹಿತಾಸಕ್ತಿಗಳನ್ನು ಪೊರೆಯಲೆಂದೇ ರಾಷ್ಟ್ರ ರಕ್ಷಣೆ ಮತ್ತು ಸ್ವಯಂ ಸೇವೆ ಹೆಸರಿನಲ್ಲಿ ಜನ್ಮತೆಳೆದಿರುವ ಆರೆಸ್ಸೆಸ್ ಮತ್ತು ಅದರ ಚುನಾವಣಾ ರಾಜಕೀಯ ವಿಭಾಗವಾಗಿರುವ ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗಗಳನ್ನು ಮತ್ತು ಆದಿವಾಸಿಗಳನ್ನು ಗುರಿ ಮಾಡಿಕೊಂಡಿವೆ.
ಹಿಂದುಳಿದ ವರ್ಗಗಳ ನಾಯಕರನ್ನು ಆರೆಸ್ಸೆಸ್ ಮತ್ತು ಬಿಜೆಪಿ ಯಾವ ರೀತಿಯಲ್ಲಿ ಬೆಂಬಿಡದೆ ಕಾಡುತ್ತವೆ ಎನ್ನುವುದನ್ನು ಇನ್ನಷ್ಟು ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಒಮ್ಮೆ ಬಿಹಾರ ರಾಜಕಾರಣದ ಕಡೆ ಕಣ್ಣಾಡಿಸಬೇಕು. ಸೈದ್ಧಾಂತಿಕ ಸ್ಪಷ್ಟತೆ ಹೊಂದಿರುವ, ಎಂದೂ ಬಿಜೆಪಿ ಜೊತೆ ಕೈಜೋಡಿಸದ ಹಿಂದುಳಿದ ವರ್ಗಗಳ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ತಮ್ಮ ಸಂಧ್ಯಾಕಾಲದಲ್ಲಿ ಜೈಲು ಗೋಡೆಗಳ ನಡುವೆ ನರಳಿದ್ದಾರೆ. ರಾಜಿಗೆ ರೆಡಿ ಇರುವ ಇನ್ನೊಬ್ಬ ಹಿಂದುಳಿದ ವರ್ಗಗಳ ನಾಯಕ ನಿತೀಶ್ ಕುಮಾರ್ ಈಗಲೂ ಮುಖ್ಯಮಂತ್ರಿ ಕುರ್ಚಿ ಮೇಲೆ ನಳನಳಿಸುತ್ತಿದ್ದಾರೆ.
ಆರೆಸ್ಸೆಸ್ ಮತ್ತು ಬಿಜೆಪಿ ಆದಿವಾಸಿಗಳತ್ತ ಹೆಚ್ಚು ಲಕ್ಷ್ಯ ನೀಡಿವೆ ಎಂಬುದಕ್ಕೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿರುವುದು ಮಾತ್ರ ಉದಾಹರಣೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಹಿಂದೆ ಆರೆಸ್ಸೆಸ್ ಪ್ರಚಾರಕರಾಗಿದ್ದಾಗ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದು ಗುಜರಾತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ನಗರ ಪ್ರದೇಶಗಳಲ್ಲಿ ಅಲ್ಲ, ಬದಲಿಗೆ ಆದಿವಾಸಿಗಳ ಹಾಡಿಗಳಲ್ಲಿ.
ಹಿಂದುಳಿದ ವರ್ಗಗಳ ಮತ್ತು ಕರ್ನಾಟಕ ರಾಜಕಾರಣಕ್ಕೆ ಮರಳುವುದಾದರೆ ‘ಉಳುವವನೇ ಒಡೆಯ’ ಕಾನೂನು ತಂದು ಭೂರಹಿತ ದಲಿತ-ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ಕಾರಣಕ್ಕೆ, ರಾಜಕೀಯವೆಂಬ ಪ್ರಬಲರ ಪಡಸಾಲೆಗೆ ದನಿ ಇಲ್ಲದವರನ್ನೂ ದೂಡಿದ ದಿವಂಗತ ಡಿ. ದೇವರಾಜ ಅರಸು ಅವರನ್ನು ಇಲ್ಲಿನ ಮೇಲ್ವರ್ಗದ ಅಸಾಮಿಗಳು ಪರಿ ಪರಿಯಾಗಿ ಕಾಡಿದ್ದು ಇತಿಹಾಸದ ಪುಟ ಪುಟಗಳಲ್ಲಿ ದಾಖಲಾಗಿದೆ. ಅವರ ವಿರುದ್ಧ ಪ್ರತಿಪಕ್ಷದವರು ಮತ್ತು ಸ್ವಪಕ್ಷೀಯರು ಜೊತೆಜೊತೆಯಾಗಿ ಕತ್ತಿ ಮಸೆದು, ನೂರಾರು ಬಾರಿ ಹೈಕಮಾಂಡ್‌ಗೆ ದೂರು ನೀಡಿ ಕಡೆಗೂ ರಾಜಕೀಯವಾಗಿ ದೇವರಾಜ ಅರಸು ಅವರನ್ನು ಮುಗಿಸಿದರು. ಅವರ ನಂತರ ಯಾರು ಬಂದರು? ಹೇಗೆ ಬಂದರು ಎಂಬ ಪ್ರಶ್ನೆಗಳಿಗೆ ಸಿಗುವ ಉತ್ತರಗಳಲ್ಲಿ ಆಗ ನಡೆದ ಷಡ್ಯಂತ್ರ-ಕುತಂತ್ರಗಳು ಎಂಥವು ಎನ್ನುವುದು ಅರ್ಥವಾಗುತ್ತವೆ.
ನಂತರ ಹಿಂದುಳಿದ ವರ್ಗಗಳ ನಾಯಕರ ಪೈಕಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಧರಂಸಿಂಗ್ ಅಧಿಕಾರ ಉಳಿಸಿಕೊಳ್ಳಲು ಪಡಿಪಾಟಲುಪಟ್ಟರು. ಬಡವರ ಪರ ಬಂಗಾರಪ್ಪ ಇಟ್ಟ ಹೆಜ್ಜೆಗಳು ಅವರನ್ನು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಿತ್ತು. ರಾಜಕೀಯವಾಗಿ ಅವರನ್ನು ಇನ್ನಷ್ಟು ದಿನ ಬಾಳಿಸಬೇಕಾಗಿತ್ತು. ಆದರೆ ಎರಡೇ ವರ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಆಮೇಲೆ ಬಿಜೆಪಿ ಸೇರಿ ಕರ್ನಾಟಕದಲ್ಲಿ ಆ ಪಕ್ಷ ಬೆಳೆಯಲು ಪ್ರಮುಖ ಪಾತ್ರವಹಿಸಿದರು. ಬಂಗಾರಪ್ಪ ಅವರಿಂದ ಬಿಜೆಪಿಗೆ ಅನುಕೂಲವಾಯಿತೇ ವಿನಃ ಬಿಜೆಪಿಯಿಂದ ಬಂಗಾರಪ್ಪ ಅವರಿಗೆ ಬಿಡುಗಾಸಿನ ಪ್ರಯೋಜನ ಆಗಲಿಲ್ಲ. ಬಿಜೆಪಿಯಲ್ಲೂ ಅವರನ್ನು ಮೂಲೆಗುಂಪು ಮಾಡಲು ‘ಮೇಲ್ವರ್ಗದ ಮಹಾನಾಯಕ’ರೇ ಕಾರಣರಾದರು.
ವೀರಪ್ಪ ಮೊಯ್ಲಿ ಮೀಸಲಾತಿ ಪ್ರಮಾಣವನ್ನು ಶೇ. 73ಕ್ಕೆ ಹೆಚ್ಚಿಸಲು ಪ್ರಯತ್ನಿಸಿದರು. ಬಡವರ ಮಕ್ಕಳೂ ಮೆಡಿಕಲ್ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಪೂರಕವಾಗುವಂತೆ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದರು. ವೀರಪ್ಪ ಮೊಯ್ಲಿ ಅವರ ಸರಕಾರ ತಂದ ಸಿಇಟಿ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಯಿತು. ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡಿದರು. ಬೆಂಗಳೂರು ಸಿಲಿಕಾನ್ ಸಿಟಿಯಾಗಲು ಅಡಿಗಲ್ಲಿಟ್ಟವರೇ ವೀರಪ್ಪ ಮೊಯ್ಲಿ. ಅದರ ಖ್ಯಾತಿ ಹೋಗಿದ್ದು ಎಸ್.ಎಂ. ಕೃಷ್ಣ ಅವರಿಗೆ. ಜಾತಿ ಬಲ ಇಲ್ಲದ ಕಾರಣಕ್ಕೆ ವೀರಪ್ಪ ಮೊಯ್ಲಿ ಕೂಡ ತೆರೆಗೆ ಸರಿಯಬೇಕಾಯಿತು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ರಚಿಸಿದ ಸರಕಾರದಲ್ಲಿ ಹಿಂದುಳಿದ ವರ್ಗದ ನಾಯಕ ಧರಂಸಿಂಗ್ ಮುಖ್ಯಮಂತ್ರಿಯಾದರು, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಎರಡೇ ವರ್ಷಗಳ ಅವಧಿಯಲ್ಲಿ ಈ ಇಬ್ಬರನ್ನೂ ರಾಜಕೀಯವಾಗಿ ಆಪೋಶನ ತೆಗೆದುಕೊಂಡವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹೀಗೆ ಹಿಂದುಳಿದ ವರ್ಗಗಳ ನಾಯಕರನ್ನು ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಮಟ್ಟ ಹಾಕಲು ನಿರಂತರವಾದ ಪ್ರಯತ್ನ ನಡೆಯುತ್ತಲೇ ಇದೆ. ಅದರ ಮಧ್ಯೆಯೂ ಸಿದ್ದರಾಮಯ್ಯ ಎಲ್ಲಾ ವಿರೋಧಗಳನ್ನು ಮೆಟ್ಟಿ ನಿಂತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇದೇ ನಿಜವಾದ ಸಂಘರ್ಷ; ಒಂದೆಡೆ ಆರೆಸ್ಸೆಸ್, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಒಂದು ವರ್ಗದಿಂದ ಹಿಂದುಳಿದ ವರ್ಗಗಳ ನಾಯಕರನ್ನು ಮತ್ತು ಹಿತಾಸಕ್ತಿಯನ್ನು ಮಟ್ಟಹಾಕುವ ಯತ್ನ ಇನ್ನೊಂದೆಡೆ ಸಿದ್ದರಾಮಯ್ಯ ಅವರಿಂದ ಮೆಟ್ಟಿ ನಿಲ್ಲುವ ಪ್ರಯತ್ನ.
ಸಿದ್ದರಾಮಯ್ಯ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುತ್ತಾರೆ. ಸಂವಿಧಾನವೇ ನಮ್ಮ ಸಿದ್ಧಾಂತ ಎನ್ನುತ್ತಾರೆ. ಆರೆಸ್ಸೆಸ್ ಮತ್ತು ಬಿಜೆಪಿ ಸಂವಿಧಾನ ವಿರೋಧಿಗಳು ಎನ್ನುವುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡುತ್ತಿರುತ್ತಾರೆ. ಬುದ್ಧನ ಶಾಂತಿಮಂತ್ರವನ್ನು ಪಠಿಸುತ್ತಾ ಆರೆಸ್ಸೆಸ್ ಮತ್ತು ಬಿಜೆಪಿ ಸಮಾಜದಲ್ಲಿ ಕೋಮುಸಂಘರ್ಷ ಸೃಷ್ಟಿಸಿ ಅಶಾಂತಿಗೆ ಎಡೆಮಾಡಿಕೊಡುತ್ತಿವೆ ಎಂದು ಒತ್ತಿ ಹೇಳುತ್ತಿರುತ್ತಾರೆ. 12ನೇ ಶತಮಾನದಲ್ಲೇ ಸಮಸಮಾಜದ ಕಲ್ಪನೆಯನ್ನು ನೀಡಿದ ಬಸವಣ್ಣನನ್ನು ಅಡಿಗಡಿಗೂ ಹಾಡಿಹೊಗಳಿ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾವೇ ಅಸಮಾನತೆ ಎಂದು ಅರಿವು ಮೂಡಿಸುತ್ತಿರುತ್ತಾರೆ. ಸಿದ್ದರಾಮಯ್ಯ ಮಾತುಗಳಲ್ಲಿ ಕುವೆಂಪು, ನಾರಾಯಣಗುರು ಮತ್ತಿತರ ಮಹನೀಯರ ಸಾರ-ಸಂದೇಶಗಳು ಹರಿದು ಬರುತ್ತಲೇ ಇರುತ್ತವೆ. ಇದಲ್ಲದೆ ನರೇಂದ್ರ ಮೋದಿ ಅವರ ನೀತಿ-ನಿಲುವುಗಳನ್ನು ಕಟು ಶಬ್ದಗಳಿಂದ ಟೀಕಿಸುತ್ತಾರೆ. ಕೇಂದ್ರ ಸರಕಾರ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದಾಖಲೆ ಸಮೇತ ವಿವರಿಸುತ್ತಾರೆ. ಎಲ್ಲದರಲ್ಲೂ ಇಷ್ಟು ಸ್ಪಷ್ಟತೆ ಇರುವ ಮತ್ತೊಬ್ಬ ಮುಂಚೂಣಿ ನಾಯಕ ರಾಜ್ಯ ರಾಜಕಾರಣದಲ್ಲಿ ಇಲ್ಲ ಎನ್ನುವುದು ಸತ್ಯ.
ಅಹಿಂದ ವರ್ಗಗಳು ಕಾಂಗ್ರೆಸ್ ಪಕ್ಷವನ್ನು ಮೊದಲಿಂದಲೂ ಬೆಂಬಲಿಸಿವೆಯಾದರೂ 2006ರಿಂದ ಈಚೆಗೆ, ಮೊದಲ ಬಾರಿಗೆ ಜೆಡಿಎಸ್ ಜೊತೆ ಸೇರಿ ಬಿಜೆಪಿ ಸರಕಾರ ಮಾಡಿದ ನಂತರ, ಗಣಿ ಲಾಬಿ ಶುರುವಾದ ನಂತರ, ಆಪರೇಷನ್ ಕಮಲ ಆರಂಭಿಸಿದ ನಂತರ, ಬಿಜೆಪಿ ಚುನಾವಣೆಗಳಿಗೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಸಂಸ್ಕೃತಿ ಹುಟ್ಟುಹಾಕಿದ ನಂತರ ಅಹಿಂದ ವರ್ಗಗಳು ಸ್ವಲ್ಪ ಮಟ್ಟಿಗೆ ಚದುರಿವೆ. ಅವು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಕಡೆ ಹೋಗದೆ ಇರಲು ಇರುವ ಏಕೈಕ ತಡೆಗೋಡೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಪಕ್ಷ ಬಿಟ್ಟ ನಂತರ ಜೆಡಿಎಸ್ ಗಳಿಸಿದ ಅತಿ ಹೆಚ್ಚು ಸೀಟುಗಳೆಂದರೆ 40, 2013ರಲ್ಲಿ.
ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಚುನಾವಣಾ ರಾಜಕಾರಣದ ಸಾಮರ್ಥ್ಯ ಎರಡನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಆರೆಸ್ಸೆಸ್ ಮತ್ತು ಬಿಜೆಪಿ ಕಡೆಯಿಂದ ಹೆಚ್ಚುಕಮ್ಮಿ 2013ರಿಂದಲೂ ‘ಸಿದ್ದರಾಮಯ್ಯ ಮೇಲ್ಜಾತಿ ವಿರೋಧಿ’ ಎಂಬ ನಿರೂಪಣೆ ಹೆಣೆಯುವ ಪ್ರಯತ್ನಗಳಾಗುತ್ತಲೇ ಇವೆ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ‘ಪ್ರತ್ಯೇಕ ಲಿಂಗಾಯತ ಧರ್ಮ’ದ ವಿಷಯ ಇಟ್ಟುಕೊಂಡು ‘ಸಿದ್ದರಾಮಯ್ಯ ಲಿಂಗಾಯತ ವಿರೋಧಿ’ ಎಂಬ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿತ್ತು.
ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರೂಪಿಸಿದ್ದು ಕೇವಲ ಸ್ವಪಕ್ಷೀಯರನ್ನು ಹಣಿಯಲು ಮಾತ್ರವಲ್ಲ. ಮೆಲ್ಲಗೆ ಕುರುಬರ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನವಾಗಿತ್ತು. ಇದಾದ ಮೇಲೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ಕಾವು ಕೊಟ್ಟಿದ್ದರಲ್ಲೂ ಇದ್ದದ್ದು ‘ಟಾರ್ಗೆಟ್ ಸಿದ್ದರಾಮಯ್ಯ’ ಎಂಬ ಅಜೆಂಡಾವೇ. ಇದಾದ ಮೇಲೂ ರಾಜ್ಯದ ಅತಿದೊಡ್ಡ ಹಿಂದುಳಿದ ಜಾತಿಯಾದ ಕುರುಬ ಸಮುದಾಯದ ಮತಗಳು ಬಿಜೆಪಿ ಕಡೆ ಹೋಗದಂತೆ ತಡೆದು ನಿಲ್ಲಿಸಿರುವವರು ಸಿದ್ದರಾಮಯ್ಯ.
ಪ್ರಮುಖವಾಗಿ ಇದೇ ಸಿದ್ದರಾಮಯ್ಯ ಕಾರಣಕ್ಕೆ 2023ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಅವರು ಹಲವು ತೊಡಕುಗಳ ನಡುವೆಯೂ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಜಾತಿ ಜನಗಣತಿ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಲು ಆರಂಭಿಸಿದರು. ದಿಲ್ಲಿಯಲ್ಲಿ, ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ಬಹಿರಂಗಗೊಳಿಸಿದರು. ಇಂಥ ಸೈದ್ಧಾಂತಿಕ ಸ್ಪಷ್ಟತೆ, ಆಳವಾದ ವಿಷಯ ಜ್ಞಾನ, ದೊಡ್ಡ ಪ್ರಮಾಣದ ಜನ ಬೆಂಬಲ ಇರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸದೆ ಕರ್ನಾಟಕದಲ್ಲಿ ತಮ್ಮ ಆಟ ನಡೆಯುವುದಿಲ್ಲ ಎನ್ನುವುದು ಆರೆಸ್ಸೆಸ್ ಮತ್ತು ಬಿಜೆಪಿಗೆ ತುಂಬಾ ಚೆನ್ನಾಗಿ ಮನವರಿಕೆಯಾಗಿದೆ. ಜೊತೆಗೆ ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಅದೇ ಕಾರಣಕ್ಕೆ ಈಗ ಬಹಿರಂಗವಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಅಖಾಡ ಪ್ರವೇಶಿಸಿವೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಆರೆಸ್ಸೆಸ್, ಬಿಜೆಪಿ ಮತ್ತು ಜೆಡಿಎಸ್ ಸಂಘಟಿತ ಹೋರಾಟಕ್ಕೆ ಸಿಕ್ಕಿರುವ ಮೊದಲ ಯಶಸ್ಸಾಗುತ್ತದೆ.
ರಾಜಕಾರಣದಲ್ಲಿ ಕೆಲವೊಮ್ಮೆ ಆಟವನ್ನು ಶುರುಮಾಡಬಹುದು, ಆದರೆ ನಾವು ಅಂದುಕೊಂಡಂತೆ ಕೊನೆಗಾಣಿಸಲು ಸಾಧ್ಯವಾಗುವುದಿಲ್ಲ. ಆ ರೀತಿ ಏನಾದರೂ ಆದರೆ ಮಾತ್ರ ಸಿದ್ದರಾಮಯ್ಯ ಈಗಿನ ಹೋರಾಟದಲ್ಲಿ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ ಅವರು ದುರಂತ ನಾಯಕ ಆಗುವುದನ್ನು ಯಾರೂ ತಪ್ಪಿಸಲಾರರು.
ಹಿರಿಯ ರಾಜಕಾರಣಿಯೊಬ್ಬರು ಈ ಲೇಖಕನ ಜೊತೆ ಮಾತನಾಡುತ್ತಾ ‘ಆರೆಸ್ಸೆಸ್ ಮತ್ತು ಬಿಜೆಪಿ ತಾವು ಅಂದುಕೊಂಡಂತೆ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವುದರಲ್ಲಿ ಗೆದ್ದಿವೆ. ಆದರೆ ಸಿದ್ದರಾಮಯ್ಯ ಅವರನ್ನು ಇಷ್ಟಪಡುವ ಅಹಿಂದ ವರ್ಗ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಬಿಜೆಪಿ ಬಗ್ಗೆ ಮುನಿದರೆ ಹಿಂದೆ ವೀರೇಂದ್ರ ಪಾಟೀಲರ ಪ್ರಕರಣದಲ್ಲಿ ಕಾಂಗ್ರೆಸ್ ಯಾವ ಪರಿಸ್ಥಿತಿಯನ್ನು ಎದುರಿಸುತ್ತಿದೆಯೋ ಬಿಜೆಪಿಗೂ ಮುಂದಿನ ದಿನಗಳಲ್ಲಿ ಅಂತಹುದೇ ದುಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು. ಭವಿಷ್ಯವನ್ನು ಅಷ್ಟು ಖಚಿತವಾಗಿ ವ್ಯಾಖ್ಯಾನಿಸುವುದಾದರೂ ಹೇಗೆ?