ಮದ್ರಸಗಳಿಗಾಗಿ ದೇಶದ ಸರಕಾರ ಮಾಡಬೇಕಾಗಿರುವುದೇನು?
ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ಮದ್ರಸ, ಮಸೀದಿ, ದರ್ಗಾಗಳು ಹಲವು ರೀತಿಯ ದಾಳಿಗಳಿಗೆ ತುತ್ತಾಗುತ್ತಿವೆ. ಇಲ್ಲಿನ ಮದ್ರಸಗಳಲ್ಲಿ ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ಗಡಿ ಭಾಗದ ಜಿಲ್ಲೆಗಳ ಮದ್ರಸಗಳಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ಏಜೆಂಟ್‌ಗಳು ಅಡಗಿ ಕುಳಿತಿದ್ದಾರೆ ಎಂಬ ಆರೋಪವನ್ನು ಹಿರಿಯ ಬಿಜೆಪಿ ನಾಯಕರು ಮಾಡಿದ್ದರು. ಮದ್ರಸಗಳು ಗುಪ್ತಚರರ, ದೇಶ ವಿರೋಧಿ ಭಯೋತ್ಪಾದಕರ ತಾಲೀಮು ಕೇಂದ್ರಗಳಾಗಿವೆ ಎಂಬ ಆರೋಪವನ್ನು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಬಿಡುಗಡೆ ಮಾಡಿದ ವರದಿಯಲ್ಲಿ ಕಾಣಬಹುದು. ಇಮಾಮರುಗಳು ಮತ್ತು ಮೌಲವಿಗಳ ಬದಲಾಗಿ ಐಎಸ್‌ಐ ಏಜೆಂಟರು ಮಸೀದಿಗಳಲ್ಲಿ ಸೇವೆ ಸಲ್ಲಿಸಿ ಭಾರತ ದೇಶವನ್ನು ಛಿದ್ರಗೊಳಿಸುತ್ತಿದ್ದಾರೆ ಎಂದು ಈ ವರದಿ ಹೇಳಿದೆ. 2001ರ ಮೇ ತಿಂಗಳಲ್ಲಿ ಅಂದಿನ ಗೃಹ ಸಚಿವರಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ನೇತೃತ್ವದ ಕಮಿಟಿಯು 137 ಪುಟಗಳ ಒಂದು ವರದಿಯನ್ನು ತಯಾರು ಮಾಡಿತ್ತು. ಮದ್ರಸಗಳನ್ನು ತೀವ್ರವಾದ ತಪಾಸಣೆಗೊಳಪಡಿಸಬೇಕೆಂಬ ಶಿಫಾರಸನ್ನು ಆ ವರದಿಯಲ್ಲಿ ಮಾಡಲಾಗಿತ್ತು.
ಇಂತಹ ಆರೋಪಗಳನ್ನು ತಳ್ಳಿಹಾಕಿ ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ಮಾಡುವುದು ಸ್ವಾಭಾವಿಕವಾಗಿದೆ. ದಿಲ್ಲಿಯನ್ನು ಕೇಂದ್ರವಾಗಿಸಿ ಕಾರ್ಯಾಚರಿಸುತ್ತಿರುವ ‘ಮಿಲ್ಲಿ ಗೆಜೆಟ್’ ಎಂಬ ಮಾಧ್ಯಮ ಸಂಸ್ಥೆಯು, ಪೊಲೀಸರ ಕಣ್ಗಾವಲಿನಲ್ಲಿರುವ ನೇಪಾಳದ ಗಡಿಯನ್ನು ಹಂಚಿಕೊಂಡಿರುವ ಉತ್ತರ ಪ್ರದೇಶದ ಮದ್ರಸಗಳಲ್ಲಿ ತಪಾಸಣೆ ನಡೆಸಿತ್ತು. ಅವರು ತಪಾಸಣೆ ನಡೆಸಿದ ಡಜನ್ ಗಟ್ಟಲೆ ಮದ್ರಸಗಳಲ್ಲಿ ತಥಾಕಥಿತ ಉಗ್ರಗಾಮಿ ಚಟುವಟಿಕೆಗಳನ್ನು ಕಾಣಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಸತ್ಯ. ಮಿಲಿಟರಿ ಟ್ರೈನಿಂಗ್ ಇರುವುದು ಬಿಡಿ, ಅಲ್ಲಿ ಸ್ಪೋರ್ಟ್ಸ್ ಟ್ರೈನಿಂಗ್ ಕೂಡ ಇರಲಿಲ್ಲ. ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ಸಂಘರ್ಷವನ್ನು ತಂದಿಟ್ಟ ಒಂದೇ ಒಂದು ನಿದರ್ಶನವೂ ಸಿಗಲಿಲ್ಲ. ಅಷ್ಟು ಮಾತ್ರವಲ್ಲದೆ ಇಲ್ಲಿನ ಕೆಲವೊಂದು ಮದ್ರಸಗಳಲ್ಲಿ ಹಿಂದೂ ಅಧ್ಯಾಪಕರಿದ್ದರೆ, ಕೆಲವೊಂದು ಮದ್ರಸಗಳಿಗೆ ಆರ್ಥಿಕ ಸಹಕಾರ ನೀಡುವವರಲ್ಲಿ ಹಿಂದೂಗಳೂ ಇದ್ದರು. ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಮದ್ರಸಗಳ ಹೆಸರನ್ನು ಸೂಚಿಸಲು ಅವರಿಗೆ ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಮಪ್ರಕಾಶ್ ಗುಪ್ತ ಅವರಂತಹ ರಾಜಕೀಯ ನಾಯಕರಿಗೂ ಒಂದು ಸೂಕ್ತವಾದಂತಹ ಪುರಾವೆ ಒದಗಿಸಲು ಸಾಧ್ಯವಾಗಲಿಲ್ಲ. ಅದೇ ಸಂದರ್ಭದಲ್ಲಿ, ಡಿಜಿಪಿ ಶ್ರೀ ರಾಮ್ ಅರುಣ್ ಎಂಬವರು, ಇಂಡೋ ನೇಪಾಳ ಗಡಿ ಭಾಗದಲ್ಲಿ ಐಎಸ್‌ಐ ಸಕ್ರಿಯವಾಗಿದೆ ಎಂಬುದನ್ನು ಅಂಗೀಕರಿಸುತ್ತಾ, ಮದ್ರಸಗಳು ಅಡಗು ತಾಣಗಳಾಗಿವೆ ಎಂಬುದನ್ನು ಅಲ್ಲಗಳೆದಿದ್ದರು. ಗಡಿಭಾಗದ ಮದ್ರಸಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಕಾಣಲು ಸಾಧ್ಯವಾಗಿಲ್ಲ ಎಂಬುದನ್ನು ರಾಜಸ್ಥಾನದ ಡಿಜಿಪಿ ಅವರು ಸ್ಪಷ್ಟಪಡಿಸಿದ್ದಾರೆ. ಯಾವುದೋ ಒಂದು ಪ್ರೊಪಗಂಡದ ಭಾಗವಾಗಿ ಮದ್ರಸಗಳನ್ನು ಉಗ್ರ ತಾಣಗಳಾಗಿ ಬಿಂಬಿಸಲಾಗುತ್ತಿದೆ ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದು..
ಭಾರತ ದೇಶದಲ್ಲಿ ಸಾವಿರಾರು ಮದ್ರಸಗಳಿವೆ. ಬಹುತೇಕ ಮಸೀದಿಗಳಲ್ಲಿ ಕುರ್‌ಆನ್ ಮತ್ತು ಇಸ್ಲಾಮಿಕ್ ಪ್ರಾಥಮಿಕ ಶಿಕ್ಷಣವನ್ನು ನೀಡುವ ಧಾರ್ಮಿಕ ಪಾಠಶಾಲೆಗಳನ್ನು ಕಾಣಬಹುದು. ಇಸ್ಲಾಮಿಕ್ ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಉನ್ನತ ಶಿಕ್ಷಣ ಕೇಂದ್ರಗಳನ್ನು ಕಾಣಬಹುದು. ಉಚಿತ ಆಹಾರ, ವಸತಿ ನೀಡುವ ಮದ್ರಸಗಳೇ ಬಡ ಕುಟುಂಬದ ವಿದ್ಯಾರ್ಥಿಗಳ ಆಶಾ ಕೇಂದ್ರ. ಶಿಕ್ಷಣದಲ್ಲಿ ದಲಿತರಿಗಿಂತಲೂ ಹಿನ್ನಡೆ ಅನುಭವಿಸಿರುವ ಮುಸ್ಲಿಮರಿಗೆ ವಿದ್ಯಾಭ್ಯಾಸವನ್ನು ನೀಡುವ ವಿದ್ಯಾಕೇಂದ್ರಗಳಾಗಿ ಮದ್ರಸಗಳು ಬೆಳೆದಿವೆ.
ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಮದ್ರಸಗಳು ಪ್ರಧಾನ ಪಾತ್ರ ವಹಿಸಿವೆ ಎಂಬುದು ಐತಿಹಾಸಿಕ ಸತ್ಯ. ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳಲ್ಲಿ ಬಿರುದನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಮದ್ರಸಗಳ ಸ್ಥಾಪಕರು ಕೂಡ ಭಾಗಿಯಾಗಿದ್ದರು. ಖ್ಯಾತ ಮುಸ್ಲಿಮ್ ವಿದ್ವಾಂಸರು ಕೂಡ 1857ರಲ್ಲಿ ನಡೆದ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಬ್ರಿಟಿಷರನ್ನು ಸೋಲಿಸುವವರೆಗೂ ಪ್ರದೇಶದಲ್ಲಿ ಪ್ರತಿರೋಧದ ಬ್ಯಾನರುಗಳನ್ನು ಎತ್ತಿ ಹಿಡಿದಿದ್ದ ಅನೇಕ ವಿದ್ವಾಂಸರಿದ್ದಾರೆ. ಮೌಲಾನಾ ಉಬೈದುಲ್ಲಾ ಸಿಂಧಿ, ಮೌಲಾನಾ ಬರಕತುಲ್ಲಾ ಖಾನ್ ಭೋಪಾಲಿ ಮುಂತಾದ ಮದ್ರಸ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾರತಕ್ಕೆ ಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕೆಂಬ ಲಕ್ಷ್ಯದೊಂದಿಗೆ ಹೋರಾಡಿದ್ದರು. ಹಿಂದೂ-ಮುಸ್ಲಿಮ್ ಕೋಮು ಶಕ್ತಿಗಳ ಪರವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕಾಲದಲ್ಲಿ ಮುಸ್ಲಿಮ್ ವಿದ್ವಾಂಸರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅಂದಿನ ಮುಸ್ಲಿಮ್ ಲೀಗ್ ಹಾಗೂ ದ್ವಿರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿ ಹಾಗೂ ಧಾರ್ಮಿಕ ಸೌಹಾರ್ದವನ್ನು ಬೆಂಬಲಿಸಿ ಅಖಂಡ ಭಾರತದ ನಿರ್ಮಾಣಕ್ಕಾಗಿ ಕರೆಕೊಟ್ಟ ವಿದ್ವಾಂಸರ ಬಗ್ಗೆ ಇಲ್ಲಿ ಅನೇಕರಿಗೂ ಗೊತ್ತಿಲ್ಲ. ದೇಶದ ಹೊರಗಿನ ಎಲ್ಲಾ ಮದ್ರಸಗಳು ದೋಷ ಮುಕ್ತವಾಗಿವೆ ಎಂದು ನಾನು ಹೇಳುತ್ತಿಲ್ಲ, ಉದಾಹರಣೆಗೆ ಕೆಲವು ತೀವ್ರವಾದಿ ಸಂಘಟನೆಗಳ ಮೂಲ ಕೇಂದ್ರಗಳಾಗಿ ಪಾಕಿಸ್ತಾನದ ಮದ್ರಸಗಳು ಬದಲಾಗಿರಬಹುದು. ಆದರೆ ಭಾರತದ ಮದ್ರಸಗಳಲ್ಲಿ ಈ ರೀತಿ ಚಟುವಟಿಕೆಗಳು ನಡೆದಿದ್ದರ ಬಗ್ಗೆ ಯಾವುದೇ ರೀತಿಯ ಪುರಾವೆ ಇಲ್ಲ
ಮದ್ರಸಗಳನ್ನು ಅಸ್ಥಿರತೆಯ ಸಂಭಾವ್ಯ ಮೂಲಗಳೆಂದು ಗುರಿಯಾಗಿಸುವ ಬದಲು, ಸಂವೇದನಾಶೀಲ ಭಾರತ ಸರಕಾರವು ಮೊದಲನೆಯದಾಗಿ, ನಿರಾಶೆಗೊಂಡ ಮುಸ್ಲಿಮ್ ವರ್ಗಗಳಲ್ಲಿ ಶಿಕ್ಷಣವನ್ನು ಸುಧಾರಿಸಲು ಅವುಗಳನ್ನು ಬಳಸಬಹುದಿತ್ತು. ಇದಲ್ಲದೆ, ಮುಸ್ಲಿಮ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಸುಧಾರಿಸಲು, ಭಾರತದ ಬಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ದೇಶಗಳ ನೀತಿಗಳ ಮೇಲೆ ಪ್ರಭಾವ ಬೀರಲು ಮದ್ರಸಗಳನ್ನು ಬಳಸಬಹುದಿತ್ತು. ದೇಶವು ಈ ಮದ್ರಸಗಳೊಂದಿಗೆ ಜೊತೆಯಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದರೆ, ಅವುಗಳನ್ನು ಹೆಚ್ಚೆಚ್ಚು ದೂರವಿಡುವ ಬದಲು, ಪಾಕಿಸ್ತಾನದೊಳಗಿನ ತೀವ್ರವಾದಿ ಶಕ್ತಿಗಳ ತೀವ್ರಗಾಮಿತನದ ವಿರುದ್ಧ ಪ್ರಮುಖ ವಿದೇಶಾಂಗ ನೀತಿಯ ಗುರಿಗಳನ್ನು ಪೂರೈಸಬಹುದಾಗಿತ್ತು. ಅದೇ ಸಮಯದಲ್ಲಿ ಭಾರತದಲ್ಲಿ ತಮ್ಮ ಅಸ್ಮಿತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂಬ ಮುಸ್ಲಿಮರ ಭಯವನ್ನು ನಿವಾರಿಸಬಹುದು. ದಿಯೋಬಂದ್‌ನ ದಾರ್-ಉಲ್-ಉಲೂಮ್, ಸಹರಾನ್ಪುರದ ಮಝಾಹಿರ್-ಉಲ್-ಉಲೂಮ್ ಮತ್ತು ಲಕ್ನೊದ ನದ್ವತುಲ್-ಉಲಮಾದಂತಹ ಭಾರತೀಯ ಮದ್ರಸಗಳು ಮುಸ್ಲಿಮ್ ಪ್ರಪಂಚದಾದ್ಯಂತ ವ್ಯಾಪಕವಾಗಿ ಗೌರವಿಸಲ್ಪಡುತ್ತವೆ. ವಾಸ್ತವವಾಗಿ, ದಿಯೋಬಂದ್ ದಾರ್-ಉಲ್-ಉಲೂಮ್ ಇಡೀ ಏಶ್ಯದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಮದ್ರಸ ಆಗಿದೆ. ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅನೇಕ ಮುಸ್ಲಿಮರು ಈ ಮದ್ರಸಗಳು ಸ್ಥಾಪಿಸಿದ ನಿಯಮಗಳನ್ನು ಅನುಸರಿಸುತ್ತಾರೆ.
ಮದ್ರಸಗಳನ್ನು ಟೀಕಿಸುವವರು ಯಾರೂ ಯಾವತ್ತೂ ಮದ್ರಸಗಳಿಗೆ ಭೇಟಿ ನೀಡಿದವರಲ್ಲ ಮತ್ತು ಅವರು ಹೇಳುತ್ತಿರುವುದೆಲ್ಲವೂ ಶುದ್ಧ ಕಿವಿಮಾತುಗಳಾಗಿವೆ. ಮದ್ರಸಗಳನ್ನು ಈ ರೀತಿ ಟಾರ್ಗೆಟ್ ಮಾಡುವುದು ಹಿಂದೂ-ಮುಸ್ಲಿಮ್ ಕೋಮುವಾದಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಆ ಮೂಲಕ ಹಿಂದೂ-ಮುಸ್ಲಿಮ್ ಅಂತರ್‌ಧರ್ಮೀಯ ಸಂವಾದದ ಸಾಧ್ಯತೆ ಕ್ಷೀಣಿಸುತ್ತದೆ. ಅದಲ್ಲದೆ ಕೆಲವು ಮದ್ರಸ ವಿದ್ಯಾರ್ಥಿಗಳಿಗೆ ಇತರ ಧರ್ಮೀಯ ಜನರನ್ನು ನೋಡಿ ಕಲಿಯುವ ಸಾಧ್ಯತೆಯೂ ಇಲ್ಲವಾಗುತ್ತದೆ. ಮದ್ರಸಗಳನ್ನು ಗುರಿಯಾಗಿಸಿದರೆ ಮುಸ್ಲಿಮರಿಗೆ ಶೈಕ್ಷಣಿಕ ಬಿಕ್ಕಟ್ಟಿನಿಂದ ಪರಿಹಾರ ಸಿಗಬಹುದು ಎಂದು ಭಾವಿಸಿದರೆ ಅದು ಕೇವಲ ಭ್ರಮೆ ಆಗುತ್ತದೆ. ಮದ್ರಸದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಪ್ರಸಕ್ತ ಪಠ್ಯಕ್ರಮ ಮತ್ತು ಬೋಧನಾ ಶೈಲಿಯ ಬಗ್ಗೆ ಜಾಗೃತರಾಗಿದ್ದಾರೆ. ಭಾರತೀಯ ಮುಸ್ಲಿಮ್ ಬುದ್ಧಿಜೀವಿಯಾದ ನಜಾತುಲ್ಲಾ ಸಿದ್ದೀಕಿ ಅವರು ಬರೆದ ‘ಧಾರ್ಮಿಕ ಮದ್ರಸಗಳು-ಸಮಸ್ಯೆ ಮತ್ತು ನಿರೀಕ್ಷೆಗಳು’ ಎಂಬ ಕೃತಿಯಲ್ಲಿ, ‘‘ಆಧುನಿಕ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ತಮ್ಮ ನಂಬಿಕೆಯ ಬಗ್ಗೆ ಇರುವ ತಿಳುವಳಿಕೆಯನ್ನು ವಿಸ್ತಾರಗೊಳಿಸಲು ಅನುವಾಗುವ ಹಾಗೆ ಪಠ್ಯಕ್ರಮವನ್ನು ಸುಧಾರಿಸುವ ತುರ್ತು ಅಗತ್ಯವನ್ನು ಮುಸ್ಲಿಮರು ಮನಗಂಡಿದ್ದಾರೆ. ಆದರೆ ಬಲವಂತವಾಗಿ ಇದನ್ನು ಹೇರಲು ಸಾಧ್ಯವಿಲ್ಲ ಎಂಬುದು ಬಹುತೇಕ ಮುಸ್ಲಿಮರ ವಾದ. ಶಾಂತಿಯುತವಾದ ಒಂದು ವಾತಾವರಣ ಸೃಷ್ಟಿ ಆದರೆ ಮಾತ್ರ ಈ ಬದಲಾವಣೆ ಸಾಧ್ಯ.
ಅವರ ವಿರುದ್ಧ ದಾಳಿಗಳನ್ನು ಪ್ರಚೋದಿಸುವುದು ಮತ್ತು ಮುಸ್ಲಿಮ್ ವಿರೋಧಿ ಭಯೋತ್ಪಾದನೆಯ ಜ್ವಾಲೆಯನ್ನು ಪ್ರಚೋದಿಸುವುದರಿಂದ ಸುಧಾರಣೆಯ ಹಾದಿ ಕಠಿಣವಾಗುವುದಲ್ಲದೆ, ಉಗ್ರಗಾಮಿತ್ವದ ಭಯವನ್ನು ಹೆಚ್ಚಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಂಬಲದೊಂದಿಗೆ ತೀವ್ರಗಾಮಿ ಹಿಂದೂ ಶಕ್ತಿಗಳು ಭಾರತದ ಮದ್ರಸಗಳ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಅಭಿಯಾನವು, ಮುಸ್ಲಿಮರ ಹಕ್ಕುಗಳನ್ನು ಅವರ ನಂಬಿಕೆ ಮತ್ತು ಅಸ್ಮಿತೆಯ ಪ್ರಜ್ಞೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸೃಷ್ಟಿಸಲಾದ ಸಂಸ್ಥೆಗಳ ಮೇಲಿನ ಮತ್ತೊಂದು ದಾಳಿಯಾಗಿ ನಾವು ಕಾಣಬೇಕಾಗಿದೆ’’ ಎಂದಿದ್ದಾರೆ.