ನಮ್ಮ ಸಂಸದ ಅಭ್ಯರ್ಥಿಯ ಬಳಿ ನಾವೇನು ಕೇಳಬೇಕು?
ಒಬ್ಬ ಲೋಕಸಭಾ ಸಂಸದರ ಕಾರ್ಯಾಚರಣೆಯ ವ್ಯಾಪ್ತಿ ಏನು? ಅವರು ಏನೇನು ಮಾಡಬಹುದು? ಏನು ಮಾಡಲು ಅವರಿಂದ ಸಾಧ್ಯವಾಗದು? ನಮ್ಮೆದುರು ಒಬ್ಬ ಲೋಕಸಭಾ ಚುನಾವಣಾ ಅಭ್ಯರ್ಥಿ ಬಂದರೆ ನಾವು ಅವರಲ್ಲಿ ಏನು ಕೇಳಬೇಕು ಎಂಬುದರ ಅರಿವು ಪ್ರತೀ ಮತದಾರರಿಗಿರಬೇಕು.
ಒಬ್ಬ ಸಂಸದ ಸಾಮಾನ್ಯವಾಗಿ 20ರಿಂದ 30 ಲಕ್ಷ ಮತದಾರರನ್ನು ಪ್ರತಿನಿಧಿಸುತ್ತಾನೆ. ಒಬ್ಬ ಶಾಸಕ ಸಾಮಾನ್ಯವಾಗಿ 3ರಿಂದ 8 ಲಕ್ಷ ಮತದಾರರ ಪ್ರತಿನಿಧಿಯಾಗಿರುತ್ತಾನೆ ಹಾಗೂ ಒಬ್ಬ ಕೌನ್ಸೆಲರ್ ಒಂದು ವಾರ್ಡ್‌ನ 30,000ದಿಂದ 50,000 ಮತದಾರರ ಪ್ರತಿನಿಧಿಯಾಗಿರುತ್ತಾನೆ.
ಸಂಸದರಾದವರು ಲೋಕಸಭಾ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೇಂದ್ರದ ಕಾನೂನುಗಳ ರಚನೆ ಮತ್ತು ತಿದ್ದುಪಡಿಯಲ್ಲಿ ಪಾತ್ರ ವಹಿಸುತ್ತಾರೆ. ಸಂಸದೀಯ ಉಪ ಸಮಿತಿಗಳಲ್ಲಿಯೂ ಸಂಸದರು ಸೇರುವ ಸಾಧ್ಯತೆಯಿರುತ್ತದೆ
ಸಂಸದರು ಸಂಸತ್ತಿನಲ್ಲಿ ಜನರ ದನಿಯಾಗಿರುತ್ತಾರೆ.
ರಾಷ್ಟ್ರೀಯ ವಿಚಾರಗಳಲ್ಲಿ ಅವರು ಮತ ಹಾಕುತ್ತಾರೆ.ಕೇಂದ್ರದ ನೀತಿಗಳ ಅನುಷ್ಠಾನ ಖಾತರಿಪಡಿಸಿಕೊಳ್ಳುವ ಹೊಣೆ ಅವರಿಗಿರುತ್ತದೆ.
ಇನ್ನು ಶಾಸಕರಾದವರು ವಿಧಾನಸಭೆ ಕಲಾಪಗಳಲ್ಲಿ ಭಾಗಿಯಾಗುತ್ತಾರೆ. ರಾಜ್ಯದ ಕಾನೂನುಗಳ ರಚನೆ ಮತ್ತು ತಿದ್ದುಪಡಿಯಲ್ಲಿ ಅವರ ಪಾತ್ರವಿರುತ್ತದೆ. ಶಾಸಕಾಂಗದ ಉಪ ಸಮಿತಿಗಳಲ್ಲಿ ಆತ/ಆಕೆ ಇರಬಹುದಾಗಿದೆ.
ವಿಧಾನಸಭೆಯಲ್ಲಿ ಶಾಸಕರು ಜನರ ದನಿಯಾಗಿರುತ್ತಾರೆ.
ರಾಜ್ಯದ ವಿಚಾರಗಳಲ್ಲಿ ಮತ ಹಾಕುವ ಅಧಿಕಾರವಿರುತ್ತದೆ.ರಾಜ್ಯದ ನೀತಿಗಳ ಅನುಷ್ಠಾನ ಖಾತರಿಪಡಿಸಿಕೊಳ್ಳುವ ಹೊಣೆ ಹೊಂದಿರುತ್ತಾರೆ.
ಇನ್ನು ಕೌನ್ಸೆಲರ್ ಆದವರು ನಗರ ಕೌನ್ಸಿಲ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಮೇಯರ್ ಆಯ್ಕೆಯಲ್ಲಿ ಅವರ ಪಾತ್ರವಿರುತ್ತದೆ. ಪಾಲಿಕೆ ನಿರ್ವಹಿಸಬೇಕಿರುವ ರಸ್ತೆ, ಕಸ ನಿರ್ವಹಣೆ ಮತ್ತು ವಿದ್ಯುತ್ ವಿಚಾರಕ್ಕೆ ತನ್ನ ವಾರ್ಡ್‌ಗೆ ಸಂಬಂಧಿಸಿ ಆತ/ಆಕೆ ಹೊಣೆಗಾರರು.
ಸ್ಥಾಯಿ ಸಮಿತಿಯ ಸದಸ್ಯರಾಗಲೂಬಹುದು.
ನಗರ ಬಜೆಟ್ ಅಂಗೀಕಾರದಲ್ಲಿ ಪಾತ್ರವಿರುತ್ತದೆ.
ಹೀಗೆ ಅಧಿಕಾರ ವ್ಯಾಪ್ತಿಯ ಕುರಿತ ತಿಳುವಳಿಕೆಯಿದ್ಧಾಗ ಒಬ್ಬ ಎಂಪಿ ಅಭ್ಯರ್ಥಿಗೆ ಕೇಳಬೇಕಿರುವುದೇನು ಎಂಬುದರ ಬಗ್ಗೆ ಕೂಡ ನಮಗೆ ಸ್ಪಷ್ಟತೆ ಇರಲು ಸಾಧ್ಯ.
ನಮ್ಮ ಲೋಕಸಭೆಯಲ್ಲಿ ಒಟ್ಟು 543 ಸಂಸದರು ಇರುತ್ತಾರೆ. ಅವರಲ್ಲಿ ಕರ್ನಾಟಕದ ಸಂಸದರು 28.
ಈಗ ನಡೆಯುತ್ತಿರುವುದು ಲೋಕಸಭೆ ಚುನಾವಣೆ.
ಅಭ್ಯರ್ಥಿಯಾಗಿ ಮತ ಯಾಚಿಸಲು ಬರುವವರನ್ನು ಕೇಳಲು, ಒಬ್ಬ ಎಂಪಿಯ ಅಧಿಕಾರ ವ್ಯಾಪ್ತಿ ಏನು ಎಂಬುದನ್ನು ತಿಳಿದು ತಯಾರಾಗಿರಬೇಕು. ಹಾಗಾಗಿ, ರಸ್ತೆ ಗುಂಡಿ ಬಿದ್ದಿದೆ, ಕಸ ರಾಶಿಯಾಗಿದೆ ಎಂದೆಲ್ಲ ಎಂಪಿ ಅಭ್ಯರ್ಥಿಯ ಮುಂದೆ ಗೋಳು ಹೇಳಿಕೊಳ್ಳುವುದು ಸರಿಯಲ್ಲ.
ಯಾಕೆಂದರೆ ಅದು ಎಂಪಿಯಾಗಬೇಕಾದವನಿಗೆ ಸಂಬಂಧಿಸಿದ್ದೂ ಅಲ್ಲ, ಚುನಾವಣೆಯ ವಿಷಯವೂ ಅಲ್ಲ.
ಮೂಳೆ ಮುರಿತಕ್ಕೆ ಯಾರ ಬಳಿ ಹೋಗಬೇಕು, ಹೃದಯ ತೊಂದರೆಗೆ ಯಾರ ಬಳಿ ಹೋಗಬೇಕು ಎಂಬುದು ನಮಗೆ ಸ್ಪಷ್ಟ. ಹಾಗೆಯೇ ಎಂಪಿ ಆಗಲಿರುವವರ ಬಳಿ ಏನನ್ನು ಕೇಳಬೇಕೋ ಅದನ್ನೇ ಕೇಳಬೇಕು.
ಕೌನ್ಸೆಲರ್ ಕೆಲಸಕ್ಕಿಂತಲೂ ಎಂಎಲ್‌ಎ ಮತ್ತು ಎಂಪಿಗಳ ಪಾತ್ರ ಬೇರೆ ಇರುತ್ತದೆ. ಅವರು ಜೀವನ ಮಟ್ಟ ಉತ್ತಮಗೊಳಿಸುವ ಹೊಣೆ ಹೊಂದಿರುತ್ತಾರೆ.
ಎಂಎಲ್‌ಎ ರಾಜ್ಯ ವ್ಯಾಪ್ತಿಯಲ್ಲಿ ಅದನ್ನು ನಿರ್ವಹಿಸಿದರೆ, ಎಂಪಿಯಾದವರು ರಾಷ್ಟ್ರಮಟ್ಟದಲ್ಲಿ ಆ ಜವಾಬ್ದಾರಿ ನಿರ್ವಹಿಸುತ್ತಾರೆ.
ಶಾಸಕರು ಮತ್ತು ಸಂಸದರು ಬೇರೆ ಬೇರೆ. ಭಾರತದ ಸಂವಿಧಾನ ಅವರ ಪಾತ್ರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.
ನಮ್ಮಲ್ಲಿ ಮೂರು ಪಟ್ಟಿಗಳಿವೆ:
ಒಂದು ಕೇಂದ್ರ ಪಟ್ಟಿ, ಎರಡನೆಯದು ರಾಜ್ಯ ಪಟ್ಟಿ. ಮೂರನೆಯದು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸೇರಿ ರೂಪಿಸುವ ನೀತಿಗಳ ಸಹವರ್ತಿ ಪಟ್ಟಿ.
ರಾಜ್ಯ ಪಟ್ಟಿಯಲ್ಲಿ ಬರುವ ವಿಷಯಗಳು:
ಪೊಲೀಸ್, ಕಾರ್ಮಿಕ, ಕೃಷಿ, ನೀರಾವರಿ ಮತ್ತು ವಾಣಿಜ್ಯ.
ಸಹವರ್ತಿ ಪಟ್ಟಿಯಲ್ಲಿ:
ಶಿಕ್ಷಣ, ಅರಣ್ಯ, ಕಾರ್ಮಿಕ ಸಂಘಟನೆಗಳು, ಮದುವೆ, ದತ್ತು, ಉತ್ತರಾಧಿಕಾರ.
ಕೇಂದ್ರ ಪಟ್ಟಿಯಲ್ಲಿ:
ರಕ್ಷಣೆ, ರೈಲ್ವೆ, ಬ್ಯಾಂಕಿಂಗ್, ಕರೆನ್ಸಿ, ವಿದೇಶ ವ್ಯವಹಾರ, ಸಂಪರ್ಕ ಇತ್ಯಾದಿ.
ನಾವು ಸಂಸದರನ್ನು ಕೇಳಬೇಕಿರುವುದು ಕೇಂದ್ರ ಮತ್ತು ಸಹವರ್ತಿ ಪಟ್ಟಿಯಲ್ಲಿನ ವಿಷಯಗಳ ಬಗ್ಗೆ.
ಸಂಸತ್ತಿನಲ್ಲಿ ತನ್ನ ಮತದಾರರ ಪ್ರತಿನಿಧಿಯಾಗಿರುವ ಸಂಸದ, ನೀತಿ ರಚನೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.
ಪ್ರಸ್ತಾವಿತ ನೀತಿಯ ಪರ ಅಥವಾ ವಿರುದ್ಧ ನಿಲುವು ತೆಗೆದುಕೊಳ್ಳಬೇಕಿರುತ್ತದೆ. ತನ್ನ ವಾದಗಳನ್ನು ಮಂಡಿಸಬೇಕಿರುತ್ತದೆ ಮತ್ತು ಪ್ರಸ್ತಾವಿತ ನೀತಿಯನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ತನ್ನ ಪಾತ್ರ ನಿರ್ವಹಿಸಬೇಕಿರುತ್ತದೆ.
ಸಂಸದರು ಮಂತ್ರಿಗಳಿಗೆ ಮೌಖಿಕ ಅಥವಾ ಲಿಖಿತ ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ತುರ್ತು ಸಮಸ್ಯೆಗಳನ್ನು ಎತ್ತಿ ಹೇಳಬಹುದಾಗಿರುತ್ತದೆ.
ಕೇಂದ್ರ ಬಜೆಟ್ ಅನ್ನು ಸಿದ್ಧಪಡಿಸುವಾಗ ಹಣಕಾಸು ಸಚಿವಾಲಯಕ್ಕೆ ಸಲಹೆಗಳನ್ನು ನೀಡಬಹುದು ಮತ್ತು ಅದರ ಚರ್ಚೆಯಲ್ಲಿ ಭಾಗವಹಿಸಬೇಕು.
ಸಂಸತ್ತಿನ ಹೊರಗೆ ಕೂಡ ಸಂಸದ ನಿರ್ವಹಿಸಬೇಕಿರುವ ಹಲವು ಜವಾಬ್ದಾರಿಗಳಿವೆ. ಕೇಂದ್ರ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ತನ್ನ ಕ್ಷೇತ್ರದಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕು.
ಸಂಸದರು ಸ್ಥಳೀಯ ಶಾಲೆ, ರೈಲು ನಿಲ್ದಾಣ ಅಥವಾ ಯಾವುದೇ ಸಾರ್ವಜನಿಕ ಕಚೇರಿಗೆ ಭೇಟಿ ನೀಡಬಹುದು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಅದನ್ನು ಬಳಸಿಕೊಂಡು ಸಂಸದರು ನೀತಿಗೆ ಬದಲಾವಣೆಗಳನ್ನು ಪ್ರಸ್ತಾಪಿಸಬಹುದು ಅಥವಾ ಕೆಲಸ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಫಾರಸು ಮಾಡಬಹುದು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (MPLAD) ಪ್ರತೀ ಸಂಸದರಿಗೆ ರೂ. 5 ಕೋಟಿ ಇರುತ್ತದೆ. ಕೇಂದ್ರ ಬಜೆಟ್‌ನ ಲಕ್ಷ ಕೋಟಿಗಳಿಗೆ ಹೋಲಿಸಿದರೆ ಇದು ಅತ್ಯಲ್ಪವಾಗಿದ್ದರೂ, ಇದನ್ನು ಸಮುದಾಯಗಳಿಗೆ ಸಂಬಂಧಿಸಿದ ಅರ್ಥಪೂರ್ಣ ಯೋಜನೆಗಳಲ್ಲಿ ಬಳಸಬಹುದು.
ಮತದಾರರಲ್ಲಿ ಕೆಲವರಿಗೆ ನಗರದ ಬೆಳವಣಿಗೆ ವಿಚಾರವಾಗಿ ಆಸಕ್ತಿ ಮತ್ತು ಅರಿವು ಇರುತ್ತದೆ. ಕೆಲವರು ರೈಲ್ವೆ ವಿಚಾರವಾಗಿ ತಿಳುವಳಿಕೆ ಹೊಂದಿರುತ್ತಾರೆ.
ಯುವಕರಲ್ಲಿ ಹಲವರು ನಮ್ಮ ನಗರದ ಮೇಲೆ ಪ್ರಭಾವ ಬೀರುವ ಪರಿಸರ ಮತ್ತು ಹವಾಮಾನ ಬಿಕ್ಕಟ್ಟಿನ ಬಗ್ಗೆ ಕಳಕಳಿಯೊಂದಿಗೆ ಯೋಚಿಸುವವರಿದ್ದಾರೆ.
ಶಿಕ್ಷಣ ಯಾವಾಗಲೂ ಬಹಳ ಸಕಾಲಿಕ ವಿಷಯವಾಗಿರುತ್ತದೆ. ಉದ್ಯೋಗ ಸೃಷ್ಟಿ ಮತ್ತು ನಿರುದ್ಯೋಗ ವಿಚಾರವಂತೂ ದೇಶದಲ್ಲಿ ಸದ್ಯದ ಬಹಳ ನಿರ್ಣಾಯಕ ವಿಷಯ.
ಕೆಲವರು ವಿದೇಶಿ ಸಂಬಂಧಗಳು ಮತ್ತು ಆರ್ಥಿಕ ನೀತಿಯ ಬಗ್ಗೆ ಆಳವಾದ ಕಳಕಳಿ ಹೊಂದಿರಬಹುದು.
ಹೀಗೆ ತಮಗೆ ಯಾವುದರ ಬಗ್ಗೆ ಆಸಕ್ತಿಯಿದೆಯೋ ಆ ವಿಚಾರಗಳನ್ನು ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವವರ ಬಳಿ ಕೇಳಬಹುದಾಗಿದೆ.
ಕರ್ನಾಟಕದ ಮಟ್ಟಿಗೆ ಈ ಸಲವಂತೂ ತೆರಿಗೆ ಅನ್ಯಾಯ ಬಹಳ ಚರ್ಚೆಯಲ್ಲಿ ಇರುವ ವಿಷಯ. ಎರಡನೇ ಅತಿ ಹೆಚ್ಚು ತೆರಿಗೆದಾರ ರಾಜ್ಯವಾದ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಅನ್ಯಾಯ ಮಾಡಿದೆ ಎಂಬುದು ಈಗಿನ ಬಹು ದೊಡ್ಡ ದೂರು. ಈ ವಿಚಾರವನ್ನು ಎಂಪಿ ಅಭ್ಯರ್ಥಿಯ ಮುಂದೆ ಇಡಬಹುದು.
ಅದರ ಬಗ್ಗೆ ಆ ಅಭ್ಯರ್ಥಿಯ ದೃಷ್ಟಿಕೋನವೇನು? ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನಿಜವಾಗಿಯೂ ಅನ್ಯಾಯವಾಗಿದೆ ಎಂಬುದು ಆತ/ಆಕೆಯ ನಿಲುವೇ ಅಥವಾ ತೆರಿಗೆ ಹಂಚಿಕೆ ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಸಮರ್ಥಿಸುತ್ತಾರೆಯೇ ಎಂಬುದನ್ನು ತಿಳಿಯಬಹುದು.
ನಿರುದ್ಯೋಗ ಸಮಸ್ಯೆ ಈಗಿನ ಮತ್ತೊಂದು ಬಹು ದೊಡ್ಡ ವಿಷಯ. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಯಾವ ನೀತಿಗಳನ್ನು ಬದಲಾಯಿಸಬೇಕು? ಂI ಅನೇಕ ಉದ್ಯೋಗಗಳನ್ನು ಕಿತ್ತುಕೊಳ್ಳುವ ಸಾಧ್ಯತೆಯಿದೆಯೇ? ಹಾಗಿದ್ದಲ್ಲಿ ದೇಶದಲ್ಲಿನ ಭವಿಷ್ಯದ ಉದ್ಯೋಗಗಳ ಬಗ್ಗೆ ಅವರ ಅಭಿಪ್ರಾಯವೇನು? ಉದ್ಯೋಗ ಸೃಷ್ಟಿ ವಿಚಾರವಾಗಿ ಅವರ ಮನಸ್ಸಿನಲ್ಲಿ ಏನೇನು ಯೋಜನೆಗಳಿವೆ ಇತ್ಯಾದಿ ಪ್ರಶ್ನೆಗಳನ್ನು ಕೇಳಬಹುದು.
ಬೆಲೆ ಏರಿಕೆ ವಿಚಾರ ಕೂಡ ಸಂಸದ ಅಭ್ಯರ್ಥಿಗಳನ್ನು ಕೇಳಲೇಬೇಕಾದ ವಿಷಯವಾಗಿದೆ.
ಇನ್ನು ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುತ್ತದೆ. ರೈಲ್ವೆಗೆ ರಾಜ್ಯದ ಜನರ ಏಕೈಕ ಲಿಂಕ್ ಸಂಸದರೇ ಆಗಿರುತ್ತಾರೆ.
ಕರ್ನಾಟಕದಲ್ಲಿನ ಅಭಿವೃದ್ಧಿಯಾಗದ ರೈಲು ಜಾಲಗಳು ಮತ್ತು ರೈಲು ಸೇವೆಗಳ ಬಗ್ಗೆ ಎಂಪಿ ಅಭ್ಯರ್ಥಿಗಳನ್ನು ಕೇಳಲು ಸಾಕಷ್ಟಿದೆ. ರಾಜ್ಯಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಅವರು ಏನು ಮಾಡಲಿದ್ದಾರೆ ಎಂಬುದನ್ನು ಕೇಳಬಹುದು.
ಹವಾಮಾನ ಬದಲಾವಣೆ ವಿಚಾರ ಕೂಡ ಜವಾಬ್ದಾರಿಯುತ ಮತದಾರರು ಕೇಳಬೇಕಿರುವಂಥದ್ದು.
ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯದ ಕಠೋರ ವಾಸ್ತವ ನಮ್ಮನ್ನು ಬಾಧಿಸುತ್ತಿದೆ. ಮಳೆಯಾಗುವಿಕೆ ಅಸ್ತವ್ಯಸ್ತವಾಗಿದೆ. ಚಳಿಗಾಲ ಕೂಡ ಬೇಸಿಗೆಯಂತೆ ಇರುತ್ತದೆ. ಇವೆಲ್ಲದರ ವಿಚಾರವಾಗಿ ಎಂಪಿ ಅಭ್ಯರ್ಥಿಯ ಬಳಿ ಚರ್ಚಿಸಲು ಅವಕಾಶವಿದೆ.
ಅಂತರ್‌ರಾಷ್ಟ್ರೀಯ ಸಂಬಂಧಗಳು ಮತ್ತೊಂದು ಮುಖ್ಯ ವಿಷಯ. ರಶ್ಯ-ಉಕ್ರೇನ್ ಯುದ್ಧದ ಕುರಿತು ನಮ್ಮ ರಾಜತಾಂತ್ರಿಕ ನಿಲುವಿನ ಬಗ್ಗೆ ಸಂಸದ ಅಭ್ಯರ್ಥಿಯ ಅಭಿಪ್ರಾಯ ಏನೆಂದು ಕೇಳಬಹುದು.
ಮುಂದಿನ ಐದು ವರ್ಷಗಳಲ್ಲಿ ನಾವು ರಫ್ತು ರಾಷ್ಟ್ರವಾಗುವುದು ಹೇಗೆ? ಆಮದುಗಳನ್ನು ಕಡಿಮೆ ಮಾಡುವಲ್ಲಿ ದೇಶೀಯ ಮಾರುಕಟ್ಟೆಗೆ ಉತ್ಪಾದನೆ ಎಷ್ಟು ಮುಖ್ಯ? ಇಸ್ರೇಲ್‌ಗೆ ನಮ್ಮ ಜನರನ್ನು ಕಾರ್ಮಿಕರನ್ನಾಗಿ ಕಳಿಸುತ್ತಿರುವುದು ಎಷ್ಟು ಸರಿ? ಅಂತಹ ಸ್ಥಿತಿ ನಮಗೇಕೆ ಎದುರಾಗಿದೆ? ಮೊದಲಾದ ಪ್ರಶ್ನೆಗಳನ್ನು ಕೇಳಬಹುದಾಗಿದೆ.
ಅಲ್ಲದೆ, ಅಭ್ಯರ್ಥಿಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಈ.ಡಿ. ದಾಳಿಗಳ ವಿಚಾರ, ಚುನಾವಣಾ ಬಾಂಡ್‌ಗಳು, ಆರ್‌ಟಿಐ ಮುಂತಾದ ಹಲವು ವಿಚಾರಗಳಲ್ಲಿ ಅವರ ನಿಲುವನ್ನು ತಿಳಿಯಲು ಪ್ರಶ್ನೆ ಹಾಕಬಹುದು.
ಸಂಸದರಾದವರು ಎಷ್ಟು ಕ್ರಿಯಾಶೀಲವಾಗಿ ತಮ್ಮ ಹೊಣೆ ನಿರ್ವಹಿಸುವಲ್ಲಿ ತೊಡಗಿದ್ಧಾರೆ ಎಂದು ತಿಳಿಯಲು www.sansad.in ವೆಬ್‌ಸೈಟ್ ಪರಿಶೀಲಿಸಬಹುದು. ಸಂಸದರೊಬ್ಬರು ಸಂಸತ್ತಿನ ಚರ್ಚೆಗಳಲ್ಲಿ ಭಾಗವಹಿಸಿರುವ ವಿಚಾರ, ರಾಜ್ಯಕ್ಕೆ ಸಂಬಂಧಿಸಿ ಅವರು ಪ್ರಶ್ನೆ ಕೇಳಿರುವ ವಿಚಾರವೆಲ್ಲ ಅಲ್ಲಿ ಗೊತ್ತಾಗುತ್ತದೆ. ಸಂಸದರ ನಿಧಿಯನ್ನು ಅವರು ಹೇಗೆ ಬಳಕೆ ಮಾಡಿದರು ಎಂಬುದರ ಮಾಹಿತಿಯನ್ನು ಕೂಡ ಸಂಸದರನ್ನು ಕೇಳಿ ಪಡೆಯಬಹುದು.
ಒಳ್ಳೆಯ ಸಂಸದ ಎನ್ನಿಸಿಕೊಳ್ಳಲು ಸಾಧ್ಯವಾಗುವುದು ಹೇಗೆ?
ಆಡಳಿತ ಮತ್ತು ಸಾರ್ವಜನಿಕ ನೀತಿ ವಿಚಾರದಲ್ಲಿ ಉತ್ತಮ ಅನುಭವ ಇರಬೇಕು.
ರಾಜಕೀಯದಲ್ಲಿ ಅನುಭವ ಮತ್ತು ಚುನಾಯಿತ ಪ್ರತಿನಿಧಿಯಾಗಲು ಸೂಕ್ತ ಎನ್ನಿಸಿಕೊಳ್ಳುವ ಗುಣ ಇರಬೇಕು.
ಸಮಾಜದ ಎಲ್ಲಾ ವರ್ಗಗಳೊಂದಿಗೆ ಅರ್ಥಪೂರ್ಣ ಸಂವಹನ ಹೊಂದಿರಬೇಕು.
ಸಾರ್ವಜನಿಕರಿಗೆ ಹೆಚ್ಚು ಕೈಗೆ ಸಿಗುವಂತಿರಬೇಕು ಮತ್ತು ಸ್ಪಂದಿಸುವವರಾಗಿರಬೇಕು.
ಹಾಗಾಗಿ ನೆನಪಿಡಿ. ನಿಮ್ಮ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ಬಂದು ಬೇಕಾಬಿಟ್ಟಿ ಮಾತಾಡಿದರೆ, ಅವರಲ್ಲಿ ಈ ಪ್ರಶ್ನೆಗಳನ್ನು ಕೇಳಿ. ಉದ್ಯೋಗ ಸೃಷ್ಟಿ ಬಗ್ಗೆ, ಶಿಕ್ಷಣದ ಬಗ್ಗೆ, ಬೆಲೆ ಏರಿಕೆ ಬಗ್ಗೆ, ತೆರಿಗೆ ಪಾಲಿನ ಅನ್ಯಾಯದ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ, ಕಾರ್ಮಿಕರ ಹಿತಾಸಕ್ತಿ ಬಗ್ಗೆ, ದೇಶದ ಗಡಿ ರಕ್ಷಣೆ ಬಗ್ಗೆ ಕೇಳಿ.
ಏನೇನೋ ಅಸಂಬದ್ಧ ಮಾತಾಡಿ ಹೋಗಲು ಬಿಡಬೇಡಿ.
► ಕೃಪೆ: Deccan Herald