ವಿಮಾನಕ್ಕೆ ಬಾಂಬ್ ಬೆದರಿಕೆ ಬಂದರೆ ಏರ್‌ಲೈನ್ಸ್‌ಗಳು ತೆಗೆದುಕೊಳ್ಳುವ ಕ್ರಮಗಳೇನು?
ಕಳೆದೆರಡು ವಾರಗಳಿಂದ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಕರೆಗಳು ವಿಮಾನಯಾನ ಸಂಸ್ಥೆಗಳನ್ನು ತಲ್ಲಣಗೊಳಿಸಿದ್ದು, ವಾಯುಯಾನ ಸುರಕ್ಷತೆಯ ಬಗ್ಗೆ ದೇಶಾದ್ಯಂತ ತೀವ್ರ ಕಳವಳಗಳಿಗೆ ಕಾರಣವಾಗಿವೆ. ಎಲ್ಲ ಬಾಂಬ್ ಬೆದರಿಕೆಗಳು ಹುಸಿಯಾಗಿದ್ದರೂ ಅವು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗೆ ತೀವ್ರ ಅಡ್ಡಿಯನ್ನುಂಟು ಮಾಡಿದ್ದವು ಮತ್ತು ಪ್ರಯಾಣಿಕರು ಹಾಗೂ ಸಿಬ್ಬಂದಿಯು ಅನನುಕೂಲವನ್ನು ಅನುಭವಿಸುವಂತಾಗಿತ್ತು.
ಬಾಂಬ್ ಬೆದರಿಕೆಗಳ ಸುರಿಮಳೆಗೆ ವಿಮಾನಯಾನ ಸಂಸ್ಥೆಗಳು ತ್ವರಿತವಾಗಿ ಪ್ರತಿಕ್ರಿಯಿಸಿದ್ದವು. ತಮ್ಮ ಭಯೋತ್ಪಾದನೆ ನಿಗ್ರಹ ಶಿಷ್ಟಾಚಾರಗಳಿಗೆ ಚಾಲನೆ ನೀಡಿದ ಅವು ಭದ್ರತಾ ಬೆದರಿಕೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನೆರವು ಮತ್ತು ತನಿಖೆಗಾಗಿ ನಾಗರಿಕ ವಾಯುಯಾನ ಸಚಿವಾಲಯವನ್ನು ಸಂಪರ್ಕಿಸಿದ್ದವು.
‘‘ಶೇ.೯೯.೯೯ರಷ್ಟು ಬೆದರಿಕೆಗಳು ನಕಲಿಯಾಗಿರುತ್ತವೆ ಎನ್ನುವುದು ನಮಗೆ ಗೊತ್ತು, ಆದರೆ ಉಳಿದ ಶೇ.೦.೦೧ ಪ್ರಕರಣಗಳಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳಲು ಯಾರೂ ಬಯಸುವುದಿಲ್ಲ. ಅದಕ್ಕಾಗಿಯೇ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾದ ನಿರ್ಗಮನ ಪೂರ್ವ ಭದ್ರತಾ ತಪಾಸಣೆಗಳ ಹೊರತಾಗಿಯೂ ಹೆಚ್ಚಿನವು ನಕಲಿಯಾಗಿರುತ್ತವೆ ಎನ್ನುವುದು ಗೊತ್ತಿದ್ದರೂ ಬಾಂಬ್ ಬೆದರಿಕೆಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ’’ ಎಂದು ಸಚಿವಾಲಯದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹಾರಾಟದ ನಡುವೆ ಬಾಂಬ್ ಬೆದರಿಕೆ ಬಂದರೆ ಎಚ್ಚರಿಕೆಯನ್ನು ಹೊರಡಿಸಲಾಗುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿಯ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ(ಬಿಎಟಿಸಿ)ಯ ಸಭೆಯನ್ನು ತಕ್ಷಣವೇ ಕರೆಯಲಾಗುತ್ತದೆ. ಬೆದರಿಕೆಯನ್ನು ತೂಗಿ ನೋಡಿದ ಬಳಿಕ ಬಿಎಟಿಸಿ ಮುಂದಿನ ಕ್ರಮದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳುತ್ತದೆ.
ಬೆದರಿಕೆಯನ್ನು ‘ನಿರ್ದಿಷ್ಟ’ ಎಂದು ಪರಿಗಣಿಸಿದರೆ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ)ನ್ನು ಸಂಪರ್ಕಿಸಿದ ಬಳಿಕ ಮುಂದಿನ ಕ್ರಮವನ್ನು ತೆಗೆದುಕೊಳ್ಳುವಂತೆ ಪೈಲಟ್‌ಗಳಿಗೆ ಸೂಚಿಸಲಾಗುತ್ತದೆ. ಹಾರಾಟದ ಸ್ಥಳವನ್ನು ಆಧರಿಸಿ ನಿರ್ಗಮನ ವಿಮಾನ ನಿಲ್ದಾಣಕ್ಕೆ ಮರಳುವಂತೆ, ನಿಗದಿತ ಗಮ್ಯಸ್ಥಾನಕ್ಕೆ ಹೋಗುವಂತೆ ಅಥವಾ ವಿಮಾನವನ್ನು ಸಮೀಪದ ವಿಮಾನ ನಿಲ್ದಾಣದಲ್ಲಿ ಇಳಿಸುವಂತೆ ಪೈಲಟ್‌ಗಳಿಗೆ ತಿಳಿಸಲಾಗುತ್ತದೆ
ಇನ್ನೂ ಹಾರಾಟವನ್ನು ಆರಂಭಿಸಿರದ ವಿಮಾನಕ್ಕೆ ಬೆದರಿಕೆ ಬಂದರೆ ಬಿಟಿಎಸಿ ಜೊತೆ ಸಮಾಲೋಚನೆಯ ಬಳಿಕ ಸಮಗ್ರ ಭದ್ರತಾ ತಪಾಸಣೆಗಳಿಗಾಗಿ ವಿಮಾನವನ್ನು ನಿಲ್ದಾಣದಲ್ಲಿಯ ಪ್ರತ್ಯೇಕ ಸ್ಥಳಕ್ಕೆ ಸಾಗಿಸಲಾಗುತ್ತದೆ.
ಈಗಾಗಲೇ ಭಾರತೀಯ ವಾಯುಪ್ರದೇಶದಿಂದ ಹೊರಗಿರುವ ಅಂತರ್‌ರಾಷ್ಟ್ರೀಯ ವಿಮಾನಯಾನಕ್ಕೆ ಬೆದರಿಕೆ ಬಂದರೆ ಆಗ ಭಾರತೀಯ ಏಜೆನ್ಸಿಗಳು ಅಂತರ್‌ರಾಷ್ಟ್ರೀಯ ಎಟಿಸಿ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಿಮಾನವನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.
ಈ ನಡುವೆ ಸತತ ಬಾಂಬ್ ಬೆದರಿಕೆಗಳ ಸಮಸ್ಯೆಯನ್ನು ಪರಿಹರಿಸಲು ಭಾರತ ಸರಕಾರ ಮತ್ತು ನಾಗರಿಕ ವಾಯುಯಾನ ಸಚಿವಾಲಯ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ.