ಇಂತಹ ಚಕ್ರವ್ಯೂಹಗಳು ಧ್ವಂಸಗೊಳ್ಳುವುದು ಯಾವಾಗ?
ದಿಲ್ಲಿ ಕೋಚಿಂಗ್ ಸಂಸ್ಥೆಯಲ್ಲಾಗಿರುವ ಅವಘಡ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.
ಈ ದೇಶದ ಯುವಕರು ಮೂರ್ಖರನ್ನು ತಯಾರಿಸುವ ಕೋಚಿಂಗ್ ಫ್ಯಾಕ್ಟರಿಗಳಿಗೆ ಕಚ್ಚಾ ವಸ್ತುಗಳ ಥರ ಬಳಕೆಯಾಗುತ್ತಿದ್ದಾರೆ. ಒಂದೆಡೆ ಸರಕಾರಿ ನೌಕರಿಯಂತೂ ಇಲ್ಲವೇ ಇಲ್ಲ. ಇನ್ನೊಂದೆಡೆ, ನೌಕರಿ ಹುಡುಕುವುದರಲ್ಲಿಯೇ ತಮ್ಮ ವಯಸ್ಸು ಹಾಗೂ ಮನೆಯ ದುಡ್ಡು ಎರಡನ್ನೂ ಈ ದೇಶದ ಯುವಜನರು ಕಳೆದುಕೊಳ್ಳುತ್ತಾರೆ.
ಏನನ್ನು ಓದಿದ್ದಾರೋ ಅದರ ಎಕ್ಸ್‌ಪೈರಿ ದಿನಾಂಕ ಮೊದಲೇ ತೀರ್ಮಾನವಾಗಿಬಿಟ್ಟಿರುತ್ತದೆ. ಓದಿದ್ದು ಪ್ರಯೋಜನಕ್ಕೆ ಬಾರದೇ ಇರುವುದರಿಂದ, ಸರಕಾರಿ ನೌಕರಿಗೆ ಅರ್ಹ ವಯೋಮಿತಿ ಮುಗಿಯುವವರೆಗೆ ಕೋಚಿಂಗ್ ತೆಗೆದುಕೊಳ್ಳಲು ಹೋಗುತ್ತಾರೆ. ಹೀಗೆ ಭಾರತದ ಯುವಕರನ್ನು ಬರೀ ಕೋಚಿಂಗ್ ತೆಗೆದುಕೊಳ್ಳುವ ಪರಮ ಮೂರ್ಖರನ್ನಾಗಿ ಮಾಡಲಾಗಿದೆ.
ಪ್ರತಿ ಹಂತದಲ್ಲೂ ಅವರು ಮೂರ್ಖರಾಗುತ್ತಲೇ ಹೋಗುತ್ತಾರೆ. ಕೋಚಿಂಗ್ ಯಾಕೆ ಬೇಕಾಗುತ್ತದೆಂದರೆ, ಕ್ಲಾಸಿನಲ್ಲಿ ಓದಿರುವುದೇ ಬೇರೆಯಾಗಿರುತ್ತದೆ. ಕೆಲಸಕ್ಕಾಗಿ ಬರೆಯಬೇಕಾದ ಪರೀಕ್ಷೆಯೇ ಬೇರೆಯಾಗಿರುತ್ತದೆ. ಹೀಗಾಗಿ ಅವರ ಅಂತಿಮ ಕನಸು ಕೋಚಿಂಗ್ ತೆಗೆದುಕೊಳ್ಳುವುದೇ ಆಗಿಬಿಡುತ್ತದೆ. ಅಂತೂ ಕಾಲೇಜು ಓದುವುದೂ ಆಗಬೇಕು, ಕೋಚಿಂಗ್ ತೆಗೆದುಕೊಳ್ಳುವುದೂ ತಪ್ಪುವುದಿಲ್ಲ. ಕೋಚಿಂಗ್‌ನಿಂದ ಎಲ್ಲವೂ ಸರಿಹೋಗುತ್ತದೆ ಎಂದು ನಂಬುವ ಸ್ಥಿತಿಗೆ ಅವರು ಬಂದುಬಿಟ್ಟಿದ್ದಾರೆ.
ದೇಶದಲ್ಲಿ ಶಿಕ್ಷಣಕ್ಕೆ ಬಜೆಟ್ ಹಂಚಿಕೆ ತೀವ್ರ ಕಡಿಮೆಯಾಗುತ್ತಿದೆ. 500 ಟಾಪ್ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ಎಂದು ಹೇಳಿ ಉದ್ಯೋಗದ ಭ್ರಮೆ ಮೂಡಿಸಲಾಗುತ್ತಿದೆ. ಆದರೆ ಕಟು ವಾಸ್ತವ ಬೇರೆಯೇ ಇದೆ.
ದಿಲ್ಲಿಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಕೋಚಿಂಗ್ ಸೆಂಟರ್ ಒಳಗೆ ನುಗ್ಗಿದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದೆ. ಅವರ ಆಕ್ರೋಶ ತೀವ್ರ ಥರದ್ದಾಗಿದೆ. ಅದು ತಮ್ಮ ಜೊತೆಯ ವಿದ್ಯಾರ್ಥಿಗಳನ್ನು ಕಳೆದುಕೊಂಡಿರುವುದಕ್ಕಾಗಿ ಮಾತ್ರವಲ್ಲ, ಕೋಚಿಂಗ್ ಸೆಂಟರ್‌ಗಳು ಮತ್ತು ಕಟ್ಟಡ ಮಾಲಕರು ಹಣ ವಸೂಲಿಯಲ್ಲಿ ತೊಡಗಿರುವುದರ ಬಗೆಗಿನ ಆಕ್ರೋಶವೂ ಆಗಿದೆ.
ತಾನ್ಯಾ ಸೋನಿ, ಶ್ರೇಯಾ ಯಾದವ್ ಮತ್ತು ನವೀನ್ ಡೆಲ್ವಿನ್ ಲೈಬ್ರರಿಯಲ್ಲಿ ಓದುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದೇಶದ ರಾಜಧಾನಿ ದಿಲ್ಲಿಯಲ್ಲಿ ಹೀಗೂ ಸಾವು ಸಂಭವಿಸುತ್ತದೆ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ.
ಇನ್ನೊಂದೆಡೆ ಶಿಕ್ಷಣದ ಅವಸ್ಥೆಯೂ ಯಾವ ಮಟ್ಟಕ್ಕೆ ಬಂದು ಮುಟ್ಟಿದೆಯೆಂದರೆ, ಯುನಿವರ್ಸಿಟಿಗಳು ನಿಷ್ಪ್ರಯೋಜಕವಾಗಿವೆ. ಹಾಗಾಗಿಯೇ ನೌಕರಿಯ ಹುಡುಕಾಟದಲ್ಲಿ ಕೋರ್ಸ್ ಮುಗಿಸುವುದಕ್ಕಾಗಿ ಬರುವ ಯುವಕರ ದಂಡು ಕೋಚಿಂಗ್ ಸೆಂಟರ್‌ಗಳ ಹಾಗೆಯೇ ಹೆಚ್ಚುತ್ತಾ ಹೋಗುತ್ತದೆ.
ಜನರ ದುಡ್ಡಿನಿಂದ ನಡೆಯುವ ಯುನಿವರ್ಸಿಟಿಗಳಲ್ಲಿ ಸರಕಾರದವರು ಬರೀ ತಮ್ಮ ಜನರನ್ನು ಉಪಕುಲಪತಿ ಮಾಡುವುದು ನಡೆಯುತ್ತಿದೆ.
ಶಿಕ್ಷಣಕ್ಕಾಗಿ ಸರಕಾರ ಇಡುವ ಹಣ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ, ಶಿಕ್ಷಣಕ್ಕಾಗಿ ಜನಸಾಮಾನ್ಯರು ಮಾಡುವ ವೆಚ್ಚ ತೀವ್ರವಾಗಿ ಬೆಳೆಯುತ್ತಲೇ ಇದೆ. ಶಾಲೆಯಿಂದ ಹಿಡಿದು ಕಾಲೇಜಿನವರೆಗೆ, ಟ್ಯೂಷನ್‌ನಿಂದ ಹಿಡಿದು ಕೋಚಿಂಗ್‌ವರೆಗಿನ ಜನರ ಶಿಕ್ಷಣದ ಬಜೆಟ್ ಸಿಕ್ಕಾಪಟ್ಟೆ ಹೆಚ್ಚಿದೆ.
ಸರಕಾರದ ಜನ ಶಿಕ್ಷಣದ ಭಾರತೀಕರಣವನ್ನು ಮಾಡುವ ಹೆಸರಲ್ಲಿ ಇಡೀ ದೇಶದ ಸಮಯವನ್ನು ಹಾಳು ಮಾಡುತ್ತಿದ್ದಾರೆ.
ದೊಡ್ಡ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ಎಂದು ಬಜೆಟ್‌ನಲ್ಲಿ ಹೇಳಿದ ಕೂಡಲೇ ಅದು ದೊಡ್ಡ ದೊಡ್ಡ ಹೆಡ್‌ಲೈನ್‌ಗಳಲ್ಲಿ ಬರುತ್ತದೆ.
ಭಾರತದಲ್ಲಿ 25 ಲಕ್ಷ ಕಂಪೆನಿಗಳಿವೆ. ಆದರೆ 500 ಕಂಪೆನಿಗಳಲ್ಲಿ ಇಂಟರ್ನ್ ಶಿಪ್ ಎಂದು ಸರಕಾರ ಹೇಳುತ್ತದೆ. 25 ಲಕ್ಷ ಎಲ್ಲಿ? 500 ಎಲ್ಲಿ? ಇಡೀ ಭಾರತದ ಯುವಕರ ಅಗತ್ಯವನ್ನು ಈ 500 ಕಂಪೆನಿಗಳು ಪೂರೈಸಿಬಿಡುತ್ತವೆಯೆ?
ಈ ವಿಚಾರವನ್ನು ಘೋಷಿಸುವಾಗಲಂತೂ ಹಣಕಾಸು ಸಚಿವೆ ಭಾರೀ ಕ್ರಾಂತಿಕಾರಿ ಯೋಜನೆ ಎಂಬಂತೆ ಅದನ್ನು ಬಿಂಬಿಸಿದರು.
ಕಳೆದ ಕೆಲವು ವರ್ಷಗಳಿಂದ ಮೋದಿ ಸರಕಾರ ಏನನ್ನು ಮಾಡುತ್ತ ಬಂತು ಎಂಬುದು ಗೊತ್ತಿದೆ. ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡುತ್ತ, ದೊಡ್ಡ ದೊಡ್ಡ ಕಂಪೆನಿಗಳಿಗೆ ಉಪಕಾರ ಮಾಡಲು ನಿಂತುಬಿಟ್ಟಿತು. ಆದರೆ ಅದಕ್ಕೆ ಪ್ರತಿಯಾಗಿ ಅವುಗಳಿಂದ ದೇಶಕ್ಕಾದ ಲಾಭವೇನು?.
ಅವುಗಳ ಬಳಿ ಸಂಪತ್ತು ಹೆಚ್ಚುತ್ತ ಹೋಯಿತು. ಅವು ಮಾಡುವ ಹೂಡಿಕೆಯೇನೂ ಹೆಚ್ಚಲಿಲ್ಲ. ಉದ್ಯೋಗಗಳೂ ಇಲ್ಲವಾದವು.
ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ‘‘ಯಾಂತ್ರಿಕತೆಗಿಂತ ಹೆಚ್ಚಾಗಿ ಕೆಲಸಗಾರರನ್ನು ಬಳಸುವಂತೆ ಉದ್ಯಮಗಳನ್ನು ಒತ್ತಾಯಿಸಬೇಕಾಗಿದೆ’’ ಎನ್ನುತ್ತಾರೆ.
ಆದರೆ ಹಣಕಾಸು ಸಚಿವೆ 500 ಕಂಪೆನಿಗಳಲ್ಲಿ ಮಾತ್ರ ಇಂಟರ್ನ್‌ಶಿಪ್ ಅವಕಾಶ ಎನ್ನುತ್ತಾರೆ. ಹಾಗಾದರೆ ಈ 500 ಕಂಪೆನಿಗಳೇ ದೇಶದ ಯುವಕರಿಗೆ ಬೇಕಾದುದನ್ನೆಲ್ಲ ಕೊಡಬಲ್ಲವೆ?
ಇಂಟರ್ನ್‌ಶಿಪ್ ನಂತರ ನಿಜವಾಗಿಯೂ ಉದ್ಯೋಗ ಸಿಗುತ್ತದೆಯೇ?
ಸರಕಾರ ಇಂಟರ್ನ್‌ಶಿಪ್ ಸಂದರ್ಭದಲ್ಲಿ ಕೊಡುವ 5,000 ರೂಪಾಯಿಯೇ ಯುವಕರ ಭವಿಷ್ಯವನ್ನು ಕಟ್ಟಿಬಿಡುತ್ತದೆಯೆ?
ಸರಕಾರದ ಹಣ ಪಡೆದು ಇಂಟರ್ನ್‌ಶಿಪ್ ಮಾಡುವ ಅವರನ್ನೂ ಕಂಪೆನಿಗಳು ಶೋಷಣೆ ಮಾಡಲಾರವೆ?
ಈ ಪ್ರಶ್ನೆಗಳನ್ನು ವಿಪಕ್ಷಗಳು ಎತ್ತಿವೆ.
ಸರಕಾರದ ವಿರುದ್ಧ ದನಿಯೆತ್ತುವ ಯೂಟ್ಯೂಬರ್‌ಗಳನ್ನು ಹಣಿಯಲು, ಅವರ ದನಿ ದಮನಿಸಲು ಕಾನೂನು ಮಾಡಹೊರಟಿರುವ ಸರಕಾರಕ್ಕೆ ನಿರುದ್ಯೋಗ ನಿವಾರಿಸುವ ಕಾನೂನು ಮಾಡಲು ಮಾತ್ರ ಗೊತ್ತಿಲ್ಲ.
ಸಂಸತ್ತಿನಲ್ಲಿ ಹೇಳುವುದೇ ಬೇರೆ, ಆನಂತರ ನಿಧಾನಕ್ಕೆ ಮಾಧ್ಯಮಗಳಿಗೆ ಕೊಡುವ ಹೇಳಿಕೆಗಳಲ್ಲಿ ಬಿಚ್ಚಿಡುವ ಒಂದೊಂದೇ ಒಳಸುಳಿಗಳೇ ಬೇರೆ.
ದಿಲ್ಲಿಯಲ್ಲಿ ನಡೆದ ದುರಂತಕ್ಕೆ ಯಾರು ಹೊಣೆಗಾರರು ಎಂಬುದೇ ಗೊತ್ತಾಗುತ್ತಿಲ್ಲ. ಆದರೆ ವಿದ್ಯಾರ್ಥಿಗಳು ಬಲಿಯಾದರು ಎಂಬುದಷ್ಟೆ ಕಟು ಸತ್ಯ.
ಶಿಕ್ಷಣದ ಅತಿ ಕೆಟ್ಟ ಸ್ಥಿತಿ ಮತ್ತು ನಿರುದ್ಯೋಗ ಯಾವ ಮಟ್ಟದ್ದೆಂದರೆ, ರಾಜಧಾನಿ ದಿಲ್ಲಿಯಲ್ಲಿ ಕೂಡ ಮಿಠಾಯಿ ಅಂಗಡಿಗೂ ಕೋಚಿಂಗ್ ಸೆಂಟರ್‌ಗೂ ವ್ಯತ್ಯಾಸವೇ ಇಲ್ಲದಂಥ ಅವಸ್ಥೆಯನ್ನು ಕಾಣುತ್ತೇವೆ.
ಕಳೆದ 10 ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಎಷ್ಟು ಹದಗೆಟ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಈ ಕೋಚಿಂಗ್ ಸಂಸ್ಥೆಗಳು ಬೆಳೆದುಕೊಂಡುಬಿಟ್ಟಿವೆ.
ಕೋಚಿಂಗ್ ಮಾತ್ರವೇ ತಮಗೆ ಕಡೇ ಅವಕಾಶ ಎಂದು ವಿದ್ಯಾರ್ಥಿಗಳು ನಂಬಿದ್ದಾರೆ.
ಹಾಗಾಗಿಯೇ ಯುವಕರು ಯುನಿವರ್ಸಿಟಿಗಳಿಂದ ಪಾರಾಗಿ, ಕೋಚಿಂಗ್‌ಗೆ ಶರಣಾಗುತ್ತಾರೆ. ಇಲ್ಲಿ ಮಾತ್ರ ಅವರ ಲೂಟಿಯೇ ನಡೆಯುತ್ತದೆ.
ಈ ಮಾಯಾ ಜಾಲದಲ್ಲಿ ಎಲ್ಲರೂ ಬಿದ್ದು ಒದ್ದಾಡುತ್ತಾರೆ. ಹೀಗಾಗಿಯೇ ಕೋಚಿಂಗ್ ಸೆಂಟರ್‌ಗಳಿಗೂ ಕಾಲೇಜು, ಯುನಿವರ್ಸಿಟಿಗಳ ಮಾನ್ಯತೆ ಸಿಕ್ಕಿಬಿಟ್ಟಿದೆ.
ಕೋಚಿಂಗ್ ಸೆಂಟರ್‌ಗಳಿಗೆ ಪ್ರವೇಶಕ್ಕೂ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ತಯಾರಿಗಾಗಿ ಹಾಸ್ಟೆಲುಗಳು ತೆರೆದುಕೊಂಡಿವೆ. ಕೋಚಿಂಗ್ ಎಂಬ ತಂತ್ರದಲ್ಲಿ ಹೀಗೆ ಗಳಿಕೆಯ ಜಾಲವೇ ನಿರ್ಮಾಣವಾಗಿಬಿಟ್ಟಿದೆ.
ಕೇರಳ ಸಿವಿಲ್ ಸರ್ವಿಸ್ ಅಕಾಡಮಿ ವೆಬ್‌ಸೈಟ್ ಪ್ರಕಾರ, 2005ರಿಂದ ಅಕಾಡಮಿ ನಡೆಯುತ್ತಿದೆ.
ರಾಷ್ಟ್ರಮಟ್ಟದ ವಿವಿಧ ಪರೀಕ್ಷೆಗಳಿಗಾಗಿ ಯುವಕರಿಗೆ ಉಚಿತ ತರಬೇತಿ ನೀಡುವುದು ಇದರ ಕೆಲಸ.
ಎಎಪಿ ಕೂಡ ಉಚಿತ ಕೋಚಿಂಗ್ ಯೋಜನೆ ಶುರು ಮಾಡಿದೆ. ಯುಪಿಎಸ್‌ಸಿಯಿಂದ ಹಿಡಿದು ನೀಟ್ ವರೆಗೂ ಉಚಿತ ಕೋಚಿಂಗ್ ನೀಡುತ್ತದೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡಮಿಯಲ್ಲಿ ಯುಪಿಎಸ್‌ಸಿ ಕೋಚಿಂಗ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.
ಜಾರ್ಖಂಡ್‌ನಲ್ಲಿಯೂ ಮುಖ್ಯ ಮಂತ್ರಿ ಶಿಕ್ಷಣ ಪ್ರೋತ್ಸಾಹ ಯೋಜನೆ ಯಿದೆ. ಅದು ಕೂಡ ಕೋಚಿಂಗ್ ಸೌಲಭ್ಯವನ್ನು ಉಚಿತವಾಗಿ ಕೊಡುತ್ತದೆ.
ಕೋಚಿಂಗ್ ಎಂಬುದರಿಂದ ಬಿಡುಗಡೆ ಎಂಬುದಂತೂ ಇಲ್ಲವೇ ಇಲ್ಲ.
ಕೋಚಿಂಗ್ ಮೂಲಕ ಕಮಾಯಿ ಇತ್ಯಾದಿಗಳ ಬಗ್ಗೆ ಹೇಳುವುದರಿಂದಲೂ ಉಪಯೋಗವೇನಿಲ್ಲ. ಎಂಥ ಕೆಟ್ಟ ಸ್ಥಿತಿ ಇದೆಯೆಂದರೆ, ವಿರೋಧಿಸುವುದಕ್ಕೂ ಆಗದೆ ಒಪ್ಪಿಕೊಳ್ಳಬೇಕಾಗಿದೆ. ಕೋಚಿಂಗ್ ಸೆಂಟರ್‌ಗಳ ವ್ಯವಹಾರ ಪಾರದರ್ಶಕವಾಗದೆ ಇದಕ್ಕೆ ಪರಿಹಾರವಿಲ್ಲ.
ಸೆಂಟ್ರಲ್ ಕನ್ಸೂಮರ್ ಪ್ರೊಟೆಕ್ಷನ್ ಅಥಾರಿಟಿ ಕಳೆದ ವರ್ಷ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಖಾನ್ ಸ್ಟಡಿ ಗ್ರೂಪ್‌ಗೆ 5 ಲಕ್ಷ ರೂ., ಚಾಹಲ್ ಅಕಾಡಮಿಗೆ 1 ಲಕ್ಷ ರೂ., ಬೈಜೂಸ್ ಐಎಎಸ್‌ಗೆ 10 ಲಕ್ಷ ರೂ. ಹಾಗೂ ರಾವ್ ಐಎಎಸ್‌ಗೆ 1 ಲಕ್ಷ ರೂ. ದಂಡ ವಿಧಿಸಿತ್ತು. ಆದರೆ ಇವೆಲ್ಲದರ ಹೊರತಾಗಿಯೂ ಕೋಚಿಂಗ್ ಕಾರುಬಾರು ಜೋರಾಗಿ ನಡೆಯುತ್ತಲೇ ಇರುತ್ತದೆ.
ಕೋಚಿಂಗ್ ಸಂಸ್ಥೆಗಳು ಕಾನೂನಿಗಿಂತ ಮೇಲಿರುವಂತೆ ಆಗಿರುವುದು ಹೇಗೆ ಎಂಬುದೇ ಪ್ರಶ್ನೆ.
ಸರಕಾರ ಕೋಚಿಂಗ್ ಸೆಂಟರ್‌ಗಳಲ್ಲಿನ ವ್ಯವಹಾರಗಳ ಮೇಲೆ ಏಕೆ ಕಣ್ಣಿಡುವುದಿಲ್ಲ? ಏಕೆ ಕಾರ್ಯಾಚರಣೆ ನಡೆಸುವುದಿಲ್ಲ?
ದೇಶದ ಯಾವುದೇ ನಗರದಲ್ಲೂ ಕೋಚಿಂಗ್ ಸೆಂಟರ್‌ಗಳ ಆಟ ಜೋರಾಗಿಯೇ ನಡೆಯುತ್ತದೆ. ಮಾಮೂಲಿ ಇಂಗ್ಲಿಷ್ ಕಲಿಯುವುದಕ್ಕೆ ಕೂಡ ಜನ ಕೋಚಿಂಗ್ ಸೆಂಟರ್‌ಗಳಿಗೆ ಲಕ್ಷಾಂತರ ರೂ. ಸುರಿಯುತ್ತಿದ್ದಾರೆ. ಇದು ನಮ್ಮೆಲ್ಲರನ್ನೂ ಸಿಲುಕಿಸಿಬಿಟ್ಟಿರುವ ಚಕ್ರವ್ಯೆಹವಾಗಿದೆ.
ದೊಡ್ಡ ದೊಡ್ಡ ಅಧ್ಯಾಪಕರು ಒಂದೊಂದು ವಿಷಯದ ಅಧ್ಯಯನದಲ್ಲಿ ತಮ್ಮ ಜೀವನವನ್ನೇ ತೇದಿರುತ್ತಾರೆ.ಅಂಥವರೆಲ್ಲರೂ ಇಂದು ಕಾಣದಾಗಿದ್ದಾರೆ.
ಇಂದು ಕೋಚಿಂಗ್ ನೀಡುವ ವಂಚಕ ಚಾನೆಲ್‌ಗಳಲ್ಲಿ ಸಂದರ್ಶನ ಕೊಡುತ್ತಾನೆ. ತನ್ನನ್ನು ತಾನು ಹೀರೊ ಎಂಬಂತೆ ತೋರಿಸಿಕೊಳ್ಳುತ್ತಾನೆ. ಪ್ರತೀ ವಿಷಯದ ಬಗ್ಗೆ, ಪ್ರತೀ ನಾಯಕನ ಬಗ್ಗೆ ಮಾತಾಡುತ್ತಾನೆ. ಧರ್ಮ, ರಾಜಕಾರಣ, ಭಾರತೀಯತೆ ಎಲ್ಲದರ ಬಗ್ಗೆ ಮಾತಾಡುತ್ತಾನೆ.
ಈ ಮಟ್ಟದಲ್ಲಿ ಇಂದು ಕೋಚಿಂಗ್ ಎಂಬುದು ಅಸಡ್ಡಾಳಾಗಿ ಬೆಳೆದಿದೆ.
ಈಗ ವಿದ್ಯಾರ್ಥಿಗಳು ಮಾಡುತ್ತಿರುವ ಪ್ರತಿಭಟನೆ ಕೂಡ ಮಹಿಳಾ ಕುಸ್ತಿಪಟುಗಳು ಮಾಡಿದ್ದ ಪ್ರತಿಭಟನೆಯ ಹಾಗೆಯೇ ಮುಗಿದುಹೋಗುತ್ತದೆ. ಐದು ತಿಂಗಳ ಕಾಲ ಅವರು ಜಂತರ್ ಮಂತರ್‌ನಲ್ಲಿ ಧರಣಿ ಕೂತಿದ್ದರು. ಸೋತುಹೋದರು, ಹತಾಶರಾದರು. ಕಡೆಗೆ ನಿಲ್ಲಿಸಿಬಿಟ್ಟರು. ಇದೇ ಸ್ಥಿತಿ ಈಗ ಪ್ರತಿಭಟಿಸುವವರ ವಿಷಯದಲ್ಲಿಯೂ ಆಗುವುದರಲ್ಲಿ ಅನುಮಾನವಿಲ್ಲ.
ರವಿ ಮೌನ್ ಎಂಬ ಯುವಕ ಉದ್ಯೋಗಕ್ಕಾಗಿ ರಶ್ಯಕ್ಕೆ ಹೋದರು. ಅಲ್ಲಿ ಜೈಲಿನ ಭಯ ಮುಂದಿಟ್ಟು ಸೇನೆಗೆ ಸೇರಿಸಲಾಯಿತು. ಒಂದು ವರ್ಷ ಸೇನೆಗಾಗಿ ಕೆಲಸ ಮಾಡಿದರಷ್ಟೇ ಬಿಡುಗಡೆ ಎಂದು ಹೆದರಿಸಲಾಯಿತು. ಆ ಯುವಕ ರಶ್ಯಕ್ಕಾಗಿ ಹೋರಾಡುತ್ತಲೇ ಮಡಿದರು. 2 ಲಕ್ಷ ರೂ. ಸಂಬಳದ ಕನಸು ಕಂಡಿದ್ದ ಯುವಕ ಹಾಗೆ ಇಲ್ಲವಾಗಿ ಹೋದರು.
ರಶ್ಯ ಸೇನೆಗೆ ಬಲವಂತದಿಂದ ಸೇರಿಸಿಕೊಳ್ಳಲಾದ ಮತ್ತು ಯುದ್ಧದಲ್ಲಿ ಸಾವಿಗೀಡಾದ ಐದನೇ ಭಾರತೀಯ ರವಿ ಮೌನ್ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳುತ್ತಾರೆ.
ರವಿ ಭಾರತೀಯ. ಆದರೆ ಅವರನ್ನು ಈಗ ಹುತಾತ್ಮ ಎನ್ನುತ್ತಾರೆಯೇ?
ಮಾಸ್ಕೊಗೆ ಹೋದ ಮೋದಿ ಡಿನ್ನರ್ ವೇಳೆ ರಶ್ಯ ಸೇನೆಯಲ್ಲಿನ ಭಾರತೀಯ ಯುವಕರ ಬಿಡುಗಡೆಗೆ ಪುಟಿನ್ ಬಳಿ ಒತ್ತಾಯಿಸಿದರು ಎಂಬುದು ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಯಿತು. ಅಲ್ಲಿಗೆ ಎಲ್ಲವೂ ಮರೆತೂ ಹೋಯಿತು. ಅದರ ಬಗ್ಗೆ ಔಪಚಾರಿಕ ಘೋಷಣೆಯೂ ಆಗಲಿಲ್ಲ.
ಅಲ್ಲಿಂದ ಬಿಡುಗಡೆಯಾಗಿ ಬರಲಿರುವವರು ಎಷ್ಟು ಭಾರತೀಯ ಯುವಕರು ಎಂಬುದನ್ನು ಕೂಡ ಸರಕಾರ ನಿಖರವಾಗಿ ಹೇಳದೆ 9-10 ಎಂದು ಆಡುಭಾಷೆಯಲ್ಲಿ ಹೇಳುವ ಮಟ್ಟಕ್ಕೆ ಆ ವಿಷಯವನ್ನು ಲಘುವಾಗಿ ಪರಿಗಣಿಸಿದೆ.
ಅವರ ಹೆಸರು ಪ್ರಕಟಿಸಬೇಕೆಂದು ರಶ್ಯ ಸೇನೆಯ ಪಾಲಾಗಿರುವ ಯುವಕರ ಕುಟುಂಬದವರು ಕೇಳುತ್ತಿದ್ದಾರೆ. ಆ ಕುಟುಂಬದವರ ಪ್ರಕಾರ, ಅವರ ಕಡೆಯವರ ಹೆಸರು ಬಿಡುಗಡೆಯಾಗುವವರಲ್ಲಿ ಇಲ್ಲ.
ಮತ್ತೊಂದು ವರದಿಯ ಪ್ರಕಾರ, ಉದ್ಯೋಗದ ಕನಸು ಕಟ್ಟಿಕೊಂಡು ವಿದೇಶಕ್ಕೆ ಹೋದ ಯುವಕ ಮ್ಯಾನ್ಮಾರ್, ಕಾಂಬೋಡಿಯಾದಲ್ಲಿ ಸೈಬರ್ ಅಪರಾಧಿಯಾಗಿ ಅವರು ಹೇಳಿದಂತೆ ಕೇಳಿಕೊಂಡಿರುವ ಸ್ಥಿತಿಯಿದೆ.
ಹೇಗೆ ಇದೆಲ್ಲ ಆಗುತ್ತಿದೆ? ಹೇಗೆ ನಕಲಿ ದಾಖಲಾತಿ ಸೃಷ್ಟಿಸಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ? ಮತ್ತು ಹೇಗೆ ಅಂತಿಮವಾಗಿ ಅವರನ್ನು ಅಪರಾಧಿ ಪಟ್ಟ ಕಟ್ಟಿ ನಿಲ್ಲಿಸಿಬಿಡಲಾಗುತ್ತಿದೆ?
ಓದುವ ಅನಿವಾರ್ಯತೆ ಇರುವ, ಕೆಲಸದ ಅನಿವಾರ್ಯತೆ ಇರುವ ಈ ದೇಶದ ಯುವಕರು ಅಸುರಕ್ಷತೆಯ ಚಕ್ರವ್ಯೆಹದಲ್ಲಿ ಕಳೆದುಹೋಗುತ್ತಿದ್ಧಾರೆ.
ಇಂತಹ ಚಕ್ರವ್ಯೆಹಗಳು ಧ್ವಂಸಗೊಳ್ಳುವುದು ಯಾವಾಗ?