ಬಿನ್ನವತ್ತಳಿಕೆ ರಾಜಕಾರಣದಿಂದ ಮಾದಿಗರ ವಿಮುಕ್ತಿ ಯಾವಾಗ?
ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಸ್ವಾಭಾವಿಕವಾಗಿ ಅನುಭವಿಸುವ ಅವಕಾಶ ಸಿಕ್ಕಿರಲಿಲ್ಲ. ಪೂನಾ ಒಪ್ಪಂದದ ಮೇರೆಗೆ 1935ರ ಕೇಂದ್ರೀಯ ಕಾಯ್ದೆಯ 1936ರ ಆದೇಶದಲ್ಲಿ ರಾಜಕೀಯ ಮೀಸಲಾತಿ ಅಳವಡಿಕೆಯಾಯಿತು. ಸಂವಿಧಾನ ಜಾರಿಯಾದ ತರುವಾಯ ಅದರ ವಿಸ್ತೃತವಾದ ಭೂಮಿಕೆ ಸಿದ್ಧವಾಯಿತು. 1956ರಲ್ಲಿ ಭಾಷಾವಾರು ಪ್ರದೇಶಗಳ ರಚನೆಯಿಂದ ಭೂಭಾಗಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಪರಸ್ಪರ ಹಂಚಿಕೆಯಾದವು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಜಕೀಯ ಬೆಳವಣಿಗೆಯನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಆರಂಭಿಕ ರಾಜಕಾರಣ 1952ರಿಂದ ತುರ್ತು ಪರಿಸ್ಥಿತಿ ತನಕ. ಎರಡನೆಯದು ಜನತಾ ಪಕ್ಷ ಸರಕಾರ ಪತನದಿಂದ ಅಡ್ವಾಣಿ ರಥ ಯಾತ್ರೆ. ಮೂರನೆಯದು ಬಾಬರಿ ಮಸೀದಿಯ ಧ್ವಂಸದ ತರುವಾಯ. ಬಹುಶಃ ಇವುಗಳನ್ನು ದೇಶಿಯ ವೇಷ್ಠಿ ರಾಜಕೀಯ ಲಕ್ಷಣವಾಗಿಯೂ ನೋಡಬಹುದು. ಈ ಪರಿಕಲ್ಪನೆಗಳನ್ನು ಸದ್ಯದ ಮಟ್ಟಿಗೆ ಕರ್ನಾಟಕ ದಲಿತ ರಾಜಕೀಯ ಆಗುಹೋಗುಗಳ ನೆಲೆಗಟ್ಟಿನಡಿ ವಿಶ್ಲೇಷಿಸುವ ಅವಶ್ಯಕತೆಯೂ ಇದೆ. ಪರಿಶಿಷ್ಟರ ಸಮಾಜೋಸಾಂಸ್ಥಿಕ ಸ್ವರೂಪಗಳು ನಾಲ್ಕೈದು ಪ್ರಾದೇಶಿಕ ಭಿನ್ನತೆಗಳಿಂದ ಕೂಡಿದೆ. ಅದರಲ್ಲೂ ಪರಿಶಿಷ್ಟ ಜಾತಿ ಒಳ ಸಮುದಾಯಗಳಲ್ಲಿಯೂ ಭಿನ್ನತೆಗಳಿವೆ. ಅವುಗಳು ವೃತ್ತಿ ಮತ್ತು ಜೀವನಾಧಾರಗಳಲ್ಲಿ ಅಷ್ಟೇ ವೈವಿಧ್ಯಗಳಿಂದ ಕೂಡಿದೆ.
101 ಉಪ ಸಮುದಾಯಗಳಲ್ಲಿ ಅತ್ಯಂತ ಅನೈರ್ಮಲ್ಯದ ವೃತ್ತಿದಾರ ಸಮುದಾಯಗಳೆಂದರೆ ಮಾದಿಗ ಮತ್ತು ಅದರ ಉಪ ಸಮುದಾಯಗಳಾಗಿವೆ. ಇವರಲ್ಲಿ ಪ್ರಾದೇಶಿಕ ಭಾಷೆಗಳನ್ನಾಡುವ ಕನ್ನಡ, ತೆಲುಗು, ಮರಾಠಿ, ತಮಿಳು ಹಾಗೂ ಮಲಯಾಳಂ ಉಪಜನ ಸಮುದಾಯಗಳಿವೆ. ಅನೈರ್ಮಲ್ಯ ವೃತ್ತಿಯಿಂದಲೇ ಅತಿ ಹೆಚ್ಚು ಆಸ್ತಿರಹಿತರು, ಮೌಲ್ಯ ಅತ್ಯಂತ ಕಡಿಮೆಯ ಸಾಂಸ್ಥಿಕ ಚರ-ಸ್ಥಿರಾಸ್ತಿಗಳ ರಚನೆ, ವಸತಿಹೀನರು ಮತ್ತು ಅಧಿಕ ಕೃಷಿಯಾಳುಗಳಾಗಿದ್ದಾರೆ. ಸಂಧಿಗುಂದಿಗಳಲ್ಲಿರುವ ಹರಕಲು ಮುರಕಲು ಮನೆಗಳು. ಸಂಪ್ರದಾಯಿಕವಾಗಿ ಚರ್ಮ ಸಂಬಂಧಿ ಕಸುಬು ಅವಲಂಬಿತರು. ಮೈಸೂರು ಪ್ರಾಂತಕ್ಕೆ ಬೇರೆ ಭೂಪ್ರದೇಶಗಳು ಬಂದಮೇಲೆ ಮಾದಿಗರ ಜನಸಂಖ್ಯೆ ಏರಿಕೆಯಾಯಿತು. ಸಾಮಾನ್ಯವಾಗಿ ಜಾತಿ ಶ್ರೇಣಿಯಲ್ಲಿ ಅಧಿಕ ಜನರು ಸಾಂಪ್ರದಾಯಿಕ ವೃತ್ತಿ ಅವಲಂಬಿತರೆಂದಾಗ ಪರಾವಲಂಬಿತನ ತುಂಬಿರುತ್ತದೆ. ಈ ಅಂತರಗಳು ಜಾತಿಯ ಶ್ರೇಣಿ ಮುಖೇನ ನೈರ್ಮಲ್ಯ ಹಾಗೂ ಅನೈರ್ಮಲ್ಯದ ಅಳತೆಗೋಲಿನಡಿ ಅದರ ಸಿರಿವಂತಿಕೆ ನಿರ್ಧಾರವಾಗುತ್ತದೆ. ಗ್ರಾಮದ ಆಯಗಾರರ ಫಸಲು ಸ್ವೀಕಾರ ಶ್ರೇಣಿಯಲ್ಲಿ ಕಡೆಯವನಾಗಿ ನಿಲ್ಲುವವನೇ ಚರ್ಮಕಾರ ಮತ್ತು ಪೌರಕಾರ್ಮಿಕ. 1976ರ ತನಕ ಮಾದಿಗರು ಹೊಂದಿದ್ದ ರಾಜಕೀಯ ಪ್ರಾತಿನಿಧ್ಯಗಳಿಗೆ ಯಾವುದೇ ಅಡ್ಡಿಆತಂಕಗಳಿರಲಿಲ್ಲ. ಈ ಕಾಲಘಟ್ಟದಲ್ಲಿಯೇ 1956ರಲ್ಲಿ ವಿಧಿಸಿದ್ದ ಪ್ರಾದೇಶಿಕ ನಿಬಂಧನೆ ಸಡಿಲಿಕೆಯಾದ ಕಾರಣ ಬೋವಿ, ಬಂಜಾರ, ಕೋರಚ-ಕೋರಮ ಸಮುದಾಯಗಳು ರಾಜ್ಯಾದ್ಯಂತ ಮೀಸಲಾತಿಗೆ ಭಾಜನರಾದವು.
ಹಿಂದಿನಿಂದಲೂ ಬುಸುಗುಡುತ್ತಿದ್ದ ಸ್ಪಶ್ಯ ಮತ್ತು ಅಸ್ಪಶ್ಯರೆಂಬ ಸಾಮಾಜಿಕ ಒಳನೋಟ ಬಹಿರಂಗವಾಗಿ ಬೆಂಕಿಯುಂಡೆಯಂತೆ 1978ರ ಚುನಾವಣೆಯಲ್ಲಿ ಸಿಡಿಯಿತು. ಈ ಒಳಭೇದ ನೀತಿ ನೇರವಾಗಿ ಮಾದಿಗರ ರಾಜಕೀಯದ ಮೇಲೆ ಮೊದಲು ಪ್ರಯೋಗವಾಯಿತು. ಬಹುಶಃ ಈ ಮರ್ಮಾಘಾತದಿಂದ ಮಾದಿಗ ಸಮಾಜ ಸುಧಾರಣೆ ಕಾಣಲಿಲ್ಲ. ಅಲ್ಲಿಂದ ಸುರುವಾದ ಮಾದಿಗರ ಬಿನ್ನವತ್ತಳಿಕೆ ರಾಜಕಾರಣ ಇಂದಿಗೂ ಅಂತ್ಯ ಕಂಡಿಲ್ಲ. ಹಾಗಾದರೆ, ಮಾದಿಗರು ಸಂಘಟಿತರಲ್ಲವೇ? ರಾಜ್ಯದಲ್ಲಿ ಯಾವುದೇ ಸಮುದಾಯ ಕಟ್ಟದಷ್ಟು ಜಾತಿ ಸಂಘಟನೆಗಳನ್ನು ಸ್ಥಾಪಿಸಿರುವ ಕೀರ್ತಿ ಮಾದಿಗ ಸಮಾಜಕ್ಕಿದೆ. ಸಂಘ ಒಂದಿದ್ದರೆ ಸಾಕೇ. ಜನರನ್ನು ಸಬಲೀಕರಣಕ್ಕೆ ಕ್ರೋಡೀಕರಿಸುವ ಜನಶಕ್ತಿಯಲ್ಲಿ ಚೈತನ್ಯವಿರಬೇಕಷ್ಟೇ. ಇವರ ಸಂಘಟಿತ ಮನೋಧರ್ಮದೋಳಗೆ ವಿಘಟಿತತೆ ಮೈತುಂಬಿದೆ. ಪಾರಂಪರಿಕವಾಗಿ ಮೃದು ಸಾಮಾಜಿಕ ಧೋರಣೆಗಳಡಿ ಅತಿಯಾಗಿ ಬಂಧಿಸಿಕೊಂಡಿರುವ ಕಾರಣ ಸಾರ್ವತ್ರಿಕ ವಿಮೋಚನೆಗೆ ಅಗೋಚರ ಬೇಲಿ ಹಾಕಿಕೊಂಡಿದೆ. ಇಂದಿಗೂ ಈ ಸಮುದಾಯವನ್ನು ದೇವದಾಸಿ ಪದ್ಧತಿ ಮತ್ತು ಅನೇಕ ಅನಿಷ್ಟ ಪದ್ಧತಿಗಳು ಬೆಂಬಿಡದೆ ಕಾಡುತ್ತಿವೆ. ಇಂತಹ ಲಕ್ಷ್ಮಣ ರೇಖೆ ದಾಟಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಮೊದಲಿಗೆ ಈ ಸಮುದಾಯದ ಅತ್ಯಧಿಕ ಶರಣ/ಶರಣೆಯರು ಬಸವಣ್ಣನವರಿಗೆ ಹೆಗಲಾದರು. ಅದು ಸಹ ಇವರ ವಿಮೋಚನೆಗೆ ಅಸ್ತ್ರವಾಗದೆ, ಒಂದು ಪರಿವರ್ತಿತ ಪಂಥೀಯರಾದರು. ಸಾಮಾಜಿಕವಾಗಿ ಒಳಗೊಳ್ಳದ ಅಷ್ಟಾವರಣರಹಿತ ಅಸ್ಪಶ್ಯ ಅನುಯಾಯಿಗಳಾದರು. ಭಾರತೀಯ ಚರ್ಮಕಾರರ ಬಹುತೇಕ ಮಧ್ಯಯುಗೀನ ಧಾರ್ಮಿಕ ಚಳವಳಿಗಳೆಲ್ಲವೂ ವ್ಯಥೆಯ ಕಥನವಾಗಿವೆ. 1932ರಲ್ಲೇ ಮಾದಿಗರು ಜಾತಿ ಸಂಘ ಆರಂಭಿಸಿದ್ದರೂ ಅದು ಇವರ ವಿಮೋಚನಾ ದೀಪವಾಗಲಿಲ್ಲ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳ ಸ್ಥಾಪನೆಯಲ್ಲಿಯೂ ಶೂನ್ಯ ಸಂಪಾದನೆ.
ದೇವರಾಜ ಅರಸರ ನಿರ್ಗಮನದ ರಾಜಕಾರಣದಲ್ಲಿ ಜನತಾ ಪಕ್ಷ ಅಧಿಕ ಮೀಸಲು ಕ್ಷೇತ್ರಗಳನ್ನು ಗೆಲ್ಲಲು ಪರಿಶಿಷ್ಟರೊಳಗೆ ಸ್ಪಶ್ಯರೆಂಬ ಮಡಿವಂತಿಕೆಯ ರಾಜಕೀಯ ಪಗಡೆಗಳನ್ನು ಉರುಳಿಸಿತು. ಅದರ ಬೆನ್ನ ಹಿಂದೆ ಬೆಳೆದ ಭಾಜಪ ಈ ಸೂತ್ರವನ್ನು ಅತ್ಯಂತ ನಾಜೂಕಾಗಿ ಬಿತ್ತನೆ ಮಾಡಿ ಫಸಲು ಪಡೆಯುತ್ತಾ ಬಂದಿದೆ. ಜನತಾ ಪಕ್ಷ /ಜನತಾದಳ ಮಾದಿಗರನ್ನು ಕಾಂಗ್ರೆಸ್ ಕಟ್ಟಾಳುಗಳೆಂದು ಮೂದಲಿಸುತ್ತಾ ಸರಿಯಾದ ಪ್ರಾತಿನಿಧ್ಯವನ್ನು ನೀಡಲಿಲ್ಲ. ಈ ಪಕ್ಷದಲ್ಲಿ ಡಿ. ಮಂಜುನಾಥ್ ಮತ್ತು ರಮೇಶ ಜಗಜಿಣಗಿ ಸಾಕಷ್ಟು ಶ್ರಮವಿಟ್ಟರೂ ಅವರ ನೇತಾರರು ಆರೇಳು ಸ್ಥಾನಕ್ಕೆ ಇಳಿಸಿಬಿಡುತ್ತಿದ್ದರು. ಚಲವಾದಿ ಸಮುದಾಯ ಅಧಿಕ ಕಾಂಗ್ರೆಸ್ ನಾಯಕರನ್ನು ಹೊಂದಿದ್ದರೂ ಜನತಾ ಪಕ್ಷದೊಳಗೆ ಅಷ್ಟೇ ಸ್ಥಾನಮಾನಗಳನ್ನು ದಕ್ಕಿಸಿಕೊಳ್ಳುತ್ತಿದ್ದರು. 1980ರ ವೇಳೆಗೆ ಈ ಸಮಾಜದೊಳಗೆ ಸೃಜಿಸಿದ್ದ ಶೈಕ್ಷಣಿಕ ಪ್ರಗತಿ ಮತ್ತು ಪರ್ಯಾಯ ಸಾಂಸ್ಕೃತಿಕ ಪರಿವರ್ತನೆಯ ಮೂಲಕ ದಲಿತ ರಾಜಕಾರಣವನ್ನು ಸಾಂಸ್ಕೃತಿಕವಾಗಿ ನಿಯಂತ್ರಿಸುವ ಪ್ರಭಾವಶಾಲಿಗಳಾಗಿದ್ದರು. ಈ ಸಮಾಜದ ಪ್ರಜ್ಞಾವಂತರು ಭಾಜಪ ಕಂಡರೆ ಸಾವಿರ ಗಾವುದ ದೂರ ನಿಲ್ಲುತ್ತಿದ್ದವರು ಅಲ್ಲೊಂದು ಹೆಗ್ಗುರುತು ಕೆತ್ತಿದ್ದಾರೆ. ಆದರೆ ಮಾದಿಗರನ್ನು ಭಾಜಪ ನಂಬಿಕಸ್ಥರೆಂದು ಹಾದಿಬೀದಿಯಲ್ಲಿ ಕೊಂಡಾಡುತ್ತಿದ್ದರೂ ರಾಜಕೀಯ ಮತ್ತು ಇತರ ಸರಕಾರಿ ಸವಲತ್ತುಗಳನ್ನು ಸ್ವೀಕರಿಸುವಾಗ ಸಂಪೂರ್ಣವಾಗಿ ಮುಗ್ಗರಿಸಿದ್ದಾರೆ.
ಮಾದಿಗ ರಾಜಕಾರಣ ತುರ್ತುಪರಿಸ್ಥಿತಿಯ ತರುವಾಯ ಅಧೋಗತಿಯತ್ತ ಸಾಗುತ್ತಾಬಂದಿದೆ. ದಿ. ಎನ್.ರಾಚಯ್ಯ ಮತ್ತು ಅವರ ಸಮಕಾಲೀನರು ಮುಂದಿನ ಪೀಳಿಗೆಯನ್ನು ತರಬೇತಿ ಮಾಡಿ ಅಖಾಡಕ್ಕೆ ಇಳಿಸಲಿಲ್ಲ. ಅತ್ತ ಜನತಾ ರಾಜಕಾರಣ ಮಾದಿಗರ ಬೆಳವಣಿಗೆಗೆ ಯಾವುದೇ ರಸಗೊಬ್ಬರ ಹಾಕಲಿಲ್ಲ. ಇನ್ನು ಕಾಂಗ್ರೆಸ್ ಮಾದಿಗರು ಹೆಚ್ಚಿನ ಸ್ಥಾನ ಬೇಡಿದಾಗಲೆಲ್ಲ ಆ ಕ್ಷೇತ್ರದಲ್ಲಿ ನೀವು ಗೆಲ್ಲಲಾಗದು; ಈ ಕ್ಷೇತ್ರಕ್ಕೆ ನಿಮ್ಮಿಂದ ಹಣ ಸುರಿಯಲು ಆಗುವುದಿಲ್ಲವೆಂಬ ಸಬೂಬು ಹೇಳುತ್ತದೆ. ಭಾಜಪ ಮುಗಿಲು ತೋರಿಸಿ ಸಣ್ಣ ಕಂದಕ ದಾಟಿಸುವ ಗುಣದೊಳಗೆ ಸ್ಪಶ್ಯ ರಾಜಕಾರಣದ ಹಿತಾಸಕ್ತಿ ಕಾಪಾಡಲು ಹಗಲಿರುಳು ಶ್ರಮಿಸುತ್ತಿರುತ್ತದೆ. ಪ್ರತಿಯೊಂದು ರಾಜಕೀಯ ಪಕ್ಷದಲ್ಲಿರುವ ಚಲವಾದಿಗಳು ಸಮುದಾಯದ ಕೊಂಡಿಯಾಗಿರುತ್ತಾರೆ. ಬಹುತೇಕ ಮಾದಿಗ ರಾಜಕಾರಣಿಗಳು ಎರಡು ಮತ್ತು ಮೂರನೇ ಸಾಲಿನ ರಾಜಕಾರಣ ಬೆಳೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದರ ಛಾಯೆ ಕಳೆದ ವಿಧಾನಸಭಾ ಮತ್ತು ಈಗಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಅನ್ವೇಷಣೆ ಮಾಡುವಾಗ ಬೆಳಕಿಗೆ ಬಂದಿರುವ ನಾಚಿಗೇಡಿನ ಸಂಗತಿಗಳಾಗಿವೆ. ಪ್ರತಿಯೊಂದು ಪಕ್ಷದ ರಾಜಕಾಣಿಗಳು ಬಹಿರಂಗದಲ್ಲಿ ಜಾತ್ಯತೀತರಾಗಿದ್ದರೂ, ಅಂತರಂಗದಲ್ಲಿ ಮಾತ್ರ ತಮ್ಮವರ ಉದ್ಧಾರಕರಾಗಿದ್ದಾರೆ. ಆದರೆ ಮಾದಿಗರಿಂದ ಸಮಾನ ಸಾಮಾಜಿಕ ಬಾಳ್ವೆ ಕಾಣಲು ಒಳ ಮೀಸಲಾತಿ ಹೋರಾಟ ಆರಂಭವಾಯಿತು. ಅದರ ಫಲಶೃತಿ ಎರಡು ಅಪಾಯಗಳನ್ನು ಮಾದಿಗರಿಗೆ ತಂದೊಡ್ಡಿದೆ. ಬಹಿರಂಗವಾಗಿ ಇತರ ಪರಿಶಿಷ್ಟರ ಅವಕೃಪೆಗೆ ಒಳಗಾಗುವುದು. ಮತ್ತೊಂದು ನಿರಾಯುಧರಾಗಿ ಹಿಂದುಳಿದ ವರ್ಗಗಳ ಮಾನಸಿಕ ಬೆಂಬಲವಿಲ್ಲದೆ ರಾಜಕಾರಣದಲ್ಲಿ ಏಕಾಂಗಿ ಈಜಾಡಿ ಸೋಲುವುದು. ಉತ್ತರ ಕರ್ನಾಟಕ ಜಿಲ್ಲೆಗಳ ಬಹುತೇಕ ಹಿಂದುಳಿದ ವರ್ಗಗಳ ಭಾಜಪ ಮತ್ತು ಕಾಂಗ್ರೆಸ್ ರಾಜಕಾರಣಿಗಳು ಬಹಿರಂಗವಾಗಿಯೇ ಮಾದಿಗರ ರಾಜಕಾರಣಕ್ಕೆ ಪಾದರಸ ಸುರಿಯುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಒಂದು ವೇಳೆ, ಈ ಸಮುದಾಯದ ಮತದಾರರ ಋಣ ಸಂದಾಯ ಉತ್ತರದಾಯಿತ್ವ ಅವರಲ್ಲಿ ಉಳಿದಿದ್ದರೆ, ಗ್ರಾಮ ಪಂಚಾಯತ್(6,011), ತಾಲೂಕು (175) ಮತ್ತು ಜಿಲ್ಲಾ ಪಂಚಾಯತ್(30) ಹಾಗೂ ನಗರ ಸ್ಥಳೀಯ ಸಂಸ್ಥೆಗಳ (318) ಚುನಾವಣೆಗಳಲ್ಲಿ ಸಮಾನ ಪ್ರಾತಿನಿಧ್ಯಗಳಿಗೆ ಬೆಂಬಲ ನೀಡುತ್ತಿದ್ದರು.
ಭಾಜಪ ಮತ್ತು ಕಾಂಗ್ರೆಸ್‌ನಲ್ಲಿ ಬಾಹ್ಯದಲ್ಲಿ ಬಲಿಷ್ಠ ಮಾದಿಗ ನಾಯಕರಿದ್ದರೂ ಅಂತರಂಗದಲ್ಲಿ ಸಮುದಾಯದ ಹಿತಾಸಕ್ತಿ ಕಾಪಾಡುವ ಸಾಮರ್ಥ್ಯವಿಲ್ಲದವರೆಂದು ಸಾಬೀತಾಗಿವೆ. ಇದಕ್ಕೆ ಕಾರಣ ಒಳ ಸಮುದಾಯಗಳ ನಡುವಿನ ಸಾಂಸ್ಕೃತಿಕ ರಾಜಕಾರಣದ ಒಡನಾಟದಲ್ಲಿ ಉಸಿರಾಡಿ ಬೆಳೆಯದಿರುವುದು ಮತ್ತು ಅನ್ಯ ಸಮುದಾಯಗಳ ಬಾಹುಳ್ಯದಲ್ಲಿ ಪ್ರಬಲತೆಯನ್ನು ಹೊಂದಿಲ್ಲದಿರುವುದು. ಬಾಬರಿ ಮಸೀದಿ ಧ್ವಂಸ ತರುವಾಯ ಭಾಜಪ ಪ್ರತಿ ಚುನಾವಣೆಯನ್ನು ಅತ್ಯಂತ ಸಿರಿವಂತಿಕೆಯಿಂದ ನಿರ್ವಹಿಸುತ್ತಿರುವ ಕಾರಣ ಕಾಂಗ್ರೆಸ್‌ನ ಮಾದಿಗರು ಸೋತಿರುವುದೇ ಜಾಸ್ತಿ. ಏಕೆಂದರೆ, ಬಾಹ್ಯ ಸಮುದಾಯಗಳಿಂದಲೂ ಇವರಿಗೆ ಸಕಾಲಿಕ ಸಹಾಯಗಳು ಸಿಗುವುದಿಲ್ಲ ಮತ್ತು ಮತದಾನ ವರ್ಗಾವಣೆಯಾಗದ ಕಾರಣ ಬಹುತೇಕ ಕ್ಷೇತ್ರಗಳಲ್ಲಿ ಆರಂಭದಲ್ಲೇ ಮುಗ್ಗರಿಸಿ ಬಿಡುತ್ತಾರೆ. ಮಾದಿಗರಲ್ಲಿರುವ ಸಂಪನ್ಮೂಲಗಳು ಸಂಘಟಿತ ಪ್ರಯತ್ನಗಳಿಗೆ ಕ್ರೋಡೀಕೃತವಾಗುತ್ತಿಲ್ಲ. ಆದರೆ ಚಲವಾದಿ ಸಮುದಾಯದ ಅಭ್ಯರ್ಥಿಗಳು ಸಹ ವೈಯಕ್ತಿಕವಾಗಿಯೂ ಮತ್ತು ಸಾಮುದಾಯಿಕವಾಗಿಯೂ ಸದೃಢತೆ ಗಳಿಸಿರುವ ಕಾರಣ ಸ್ಪಶ್ಯ ಪರಿಶಿಷ್ಟರನ್ನು ಎದುರಿಸುವಷ್ಟು ಬಲಿಷ್ಠರಾಗಿದ್ಧಾರೆ. ‘‘ಹೆಂಡ ಕುಡಿದಾಗ ಮೀಸೆ ಮ್ಯಾಲೆಗ್ಯಾನ; ಮಳೆ ಬಂದಾಗ ಮನಿ ಮ್ಯಾಲೆ ಗ್ಯಾನ’’ ಎಂಬಂತೆ ಚುನಾವಣೆ ಬಂದಾಗಷ್ಟೇ ಮಾದಿಗ ರಾಜಕಾರಣ ಜಾಗೃತವಾಗುತ್ತದೆ. ಇನ್ನುಳಿದ ದಿನಗಳಲ್ಲಿ ಸಂಘಟನಾ ಚಾತುರ್ಯಗಳನ್ನು ಕೈಚೆಲ್ಲಿ ಮೈಮರೆಯುತ್ತದೆ. ಒಂದು ಸಮುದಾಯದ ರಾಜಕಾರಣ ಬಲಿಷ್ಠವಾಗಬೇಕಾದರೆ ಅದರಲ್ಲಿ ಹುದುಗಿರುವ ಸಾಮಾಜಿಕ ಮೃದು ಧೋರಣೆಗಳನ್ನು ನೈಜ ಶಿಕ್ಷಣ ಗಳಿಕೆಯ ಮೂಲಕ ತುಳಿಯುತ್ತಿರಬೇಕು. ಆಗ, ತಲೆಮಾರಿನಿಂದ ತಲೆಮಾರಿಗೆ ಉತ್ಕೃಷ್ಟವಾದ ಯುವ ಪೀಳಿಗೆ ವೃದ್ಧಿಯಾಗುತ್ತದೆ. ಹಾಗೆಯೇ ಉಪ ಸಮುದಾಯಗಳ ಒಳಗಿರುವ ಅಂತರ ಸಾಮಾಜಿಕ ವೈರುಧ್ಯಗಳನ್ನು ತುಳಿದು ಮೈತ್ರಿ ಭಾವದಲ್ಲಿ ಮುನ್ನಡೆಯುತ್ತಿರಬೇಕು. ಈ ಪ್ರಕ್ರಿಯೆಗಳು 1980 ರಿಂದಲೂ ಚರ್ಮಕಾರ ಉಪ ಸಮುದಾಯಗಳಲ್ಲಿ ಕಸಿ ಕಟ್ಟದಿರುವ ಕಾರಣ ಅವುಗಳ ರಾಜಕಾರಣದ ಅವನತಿಗೆ ಮೂಲವಾಗಿವೆ. ಈ ಹಿಂದೆ ಉಪ ಸಮುದಾಯಗಳನ್ನು ಸಂಭಾಳಿಸುವ ಕಸುವುಗಳಿದ್ದವು. ಈಗ ಎರವಲು ಮತ್ತು ತುರುಕಿದ ಪ್ರಭಾವಗಳಿಂದ ಆ ಸಮನ್ವಯತೆಯ ಪರದೆಯಲ್ಲಿ ರಂಧ್ರಗಳಾಗುತ್ತಿವೆ.
ರಾಜಕೀಯ ಪಕ್ಷವೊಂದಕ್ಕೆ ಒಬ್ಬ ವ್ಯಕ್ತಿ ಬೇಡವಾದರೆ ಇನ್ನೊಬ್ಬ ಮಗದೊಬ್ಬ ಎಂಬಂತೆ ಆರೋಹಣ ಕ್ರಮದಲ್ಲಿ ನಾಯಕರು ಸಿಗುತ್ತಿರಬೇಕು. ಈ ರೀತಿಯ ಅನ್ವೇಷಣೆ ಇಂದಿಗೂ ಸಾಧ್ಯವಾಗದಂತಹ ವಿಷಮ ಸ್ಥಿತಿ ರಾಜ್ಯದಲ್ಲಿದೆ. ಆದುದರಿಂದ ಅವರವರ ಪಕ್ಷಗಳ ಹೈಕಮಾಂಡ್ ಮುಂದೆ ವಿವಿಧ ಭಂಗಿಯಲ್ಲಿ ನಿಂತು ಬಿನ್ನವತ್ತಳೆ ರಾಜಕಾರಣ ಮಾಡುತ್ತಿದ್ದಾರೆ. ಹಾಗಾದರೆ ಈ ವಿಷವರ್ತುಲದಿಂದ ಹೊರಬರಲು ಸಾಧ್ಯವಿಲ್ಲವೆ?. ಸಾಧ್ಯವಿದೆ.
ಮಾದಿಗ ಸಮುದಾಯದಲ್ಲಿ ರಾಜಕೀಯ ಉನ್ನತಿಗಾಗಿ ಬಹು ಆಯಾಮದ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಕ್ರಮಗಳು ದೈನಂದಿನ ಮಂತ್ರಗಳಾಗಬೇಕಿದೆ. ಇದನ್ನು ಸಾಧಿಸಲು ಉಪ ಸಮುದಾಯಗಳ ನಡುವಿನ ಸಾಂಸ್ಕೃತಿಕ ಮತ್ತು ಭಾಷಿಕ ಸಂಕುಚಿತತೆಗಳೆಲ್ಲವೂ ಸಮಾಧಿಯಾಗಬೇಕು. ಮೇಲುನೋಟಗಳಲ್ಲಿ ಬಲಿಷ್ಠರೆಂದು ಕಾಣುವ ನಾಯಕರ ಸಣ್ಣತನ ಅಳಿದು ಸಮುದಾಯದ ಸಾಂಘಿಕ ಪ್ರಜ್ಞೆ ಜೀವಜಲವಾಗಿ ಚಿಮ್ಮಬೇಕಿದೆ. ಆವಾಗ ಅವರ ಮಂಡನೆಗಳಿಗೆ ಅವರವರ ಪಕ್ಷಗಳ ವೇದಿಕೆಯಲ್ಲಿ ಅಪ್ಪಿಕೊಳ್ಳುವ ಮನೋಧರ್ಮ ಧಾರಣವಾಗುತ್ತದೆ. ಇವ್ಯಾವುವೂ ಸಾಧಿತವಾಗದಿದ್ದರೆ ಹಿಂಬಾಲಕ ರಾಜಕಾರಣಿಗಳಾಗುತ್ತಾರೆ. ಇಲ್ಲವೇ ಬೇಡಿಕೆಯ ಪುಟಗಳ ಸಾಕ್ಷೀಕರಿಸುವ ಬಿನ್ನವತ್ತಳೆ ರಾಜಕಾರಣದಲ್ಲಿ ಮಾದಿಗರು ಮಂಗರಮಾಯವಾಗುತ್ತಾರೆ. ನಿಂದನಾತ್ಮಕ ರಾಜಕಾರಣಕ್ಕಿಂತ ಮೈತ್ರಿ ರಾಜಕಾರಣ ಅನಿವಾರ್ಯತೆಯನ್ನು ಅರಿಯಬೇಕಿದೆ. ಒಂದುವೇಳೆ ಮಾದಿಗರು ಸದಾ ನಿಂದನಾತ್ಮಕ ರಾಜಕಾರಣಕ್ಕೆ ಶರಣಾದರೆ ಬಹುತೇಕ ಹಿಂದುಳಿದ ವರ್ಗಗಳ ಪಕ್ಷ ರಾಜಕಾರಣಿಗಳನ್ನು ಅವರನ್ನು ಮುದ್ದಾಡುವ ಪರಿಶಿಷ್ಟ ಜಾತಿಗಳನ್ನು ಮಾತ್ರ ಓಲೈಸಿ ಅಧಿಕಾರ ಸವಿಯುತ್ತಾರೆ. ಆದುದರಿಂದ, ಮಾದಿಗರಿಗೆ ಜ್ಞಾನಪೂರ್ಣ ಸಾಮಾಜಿಕ ಪರಿವರ್ತನೆ ಜತೆ ವಿವೇಕಪೂರ್ಣ ರಾಜಕೀಯ ಮುನ್ನೋಟ ಧಾರಣವಾದಾಗ ರಾಜ್ಯ ರಾಜಕಾರಣದಲ್ಲಿ ಯಶಸ್ವಿಯಾಗುತ್ತಾರೆ.