ಚುನಾವಣೆ ಬೇಗ ನಡೆದರೂ ತಡವಾದರೂ, ವಿಪಕ್ಷ ಮೈತ್ರಿಕೂಟದ ಎದುರಿಗಿವೆ ಮುಖ್ಯ ಪ್ರಶ್ನೆಗಳು
ಬಿಜೆಪಿ ವಿರುದ್ಧ ಹೋರಾಡಲು ಒಟ್ಟಾಗಲೇಬೇಕಿದೆ ಎಂಬುದು ಪ್ರತಿಪಕ್ಷಗಳಿಗೆ ಅರಿವಾಗಲು ಒಂಭತ್ತು ವರ್ಷಗಳು ಬೇಕಾದವು. ಆಡಳಿತ ಪಕ್ಷವನ್ನು ಸೋಲಿಸುವ ಉತ್ತಮ ಅವಕಾಶ ಈ ಒಗ್ಗಟ್ಟಿನಲ್ಲಿದೆ ಎಂದು ಈಗ INDIA ಒಕ್ಕೂಟ ಭಾವಿಸಿದೆ.
ಕಳೆದ ವಾರ, ಮುಂಬೈನಲ್ಲಿ ನಡೆದ ಪ್ರಮುಖ ಸಭೆಯಲ್ಲಿ, ಅತ್ಯಂತ ಅಪರೂಪದ ಸನ್ನಿವೇಶಗಳು ಕಂಡವು. ದೀರ್ಘಾವಧಿಯ ಪ್ರತಿಸ್ಪರ್ಧಿಗಳಾದ ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್, ಎಎಪಿ ಮತ್ತು ಕಾಂಗ್ರೆಸ್ ಒಟ್ಟಿಗೇ ಇದ್ದವು. ಮಮತಾ ಬ್ಯಾನರ್ಜಿ ಅವರು ಉದ್ಧವ್ ಠಾಕ್ರೆ ಅವರಿಗೆ ರಾಖಿ ಕಟ್ಟಿದರು. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆಗಿನ ತಮ್ಮ ಸಹಜ ಹಗೆತನ ಬದಿಗಿಟ್ಟಿರುವುದು ಗಮನ ಸೆಳೆಯಿತು. ಈ ಒಕ್ಕೂಟ ಎಷ್ಟು ಬಲವಾಗಿದೆಯೆಂದರೆ, ಪ್ರಧಾನಿ ಮತ್ತು ಅವರ ಪಕ್ಷದ ಮಂದಿ ಈ ಮೈತ್ರಿಯನ್ನು ತುಂಬ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರೆಲ್ಲ ಮೈತ್ರಿಕೂಟವನ್ನು ನಿರಂತರವಾಗಿ ಆಡಿಕೊಳ್ಳುವುದನ್ನು ನೋಡಿದರೇ ಇದು ಗೊತ್ತಾಗುತ್ತದೆ.
ಈ ಹಿಂದೆಯೂ ಪ್ರತಿಪಕ್ಷಗಳ ಮೈತ್ರಿಕೂಟಗಳು ರಚನೆಯಾದದ್ದಿದೆ. ೧೯೭೭ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಕೆಲವೇ ವಾರಗಳಲ್ಲಿ ಜನತಾ ಪಕ್ಷ ಇಂದಿರಾ ಗಾಂಧಿಯವರನ್ನು ಸೋಲಿಸಿತು. ಇದು ಹಳೆಯ ಕಾಂಗ್ರೆಸ್, ಸಮಾಜವಾದಿಗಳು ಮತ್ತು ಜನಸಂಘದ ಸದಸ್ಯರನ್ನು ಒಳಗೊಂಡಿತ್ತು. ಇನ್ನು ೧೯೮೯ರ ನ್ಯಾಷನಲ್ ಫ್ರಂಟ್, ವಿ.ಪಿ. ಸಿಂಗ್ ಅವರ ಜನತಾ ದಳ ಮತ್ತು ತೆಲುಗು ದೇಶಂ ಪಕ್ಷಗಳು ಎರಡು ವರ್ಷಗಳಲ್ಲಿ ಎರಡು ಸರಕಾರಗಳನ್ನು ರಚಿಸಿದವು. ೧೯೯೬ರ ಚುನಾವಣೆಯ ನಂತರ ರಚನೆಯಾದ ೧೩ ಪಕ್ಷಗಳ ಯುನೈಟೆಡ್ ಫ್ರಂಟ್ ಕೂಡ ಎರಡು ಸರಕಾರಗಳನ್ನು ರಚಿಸಿತು. ಆದರೂ, ಆಂತರಿಕ ವಿರೋಧಾಭಾಸಗಳಿಂದಾಗಿ ಈ ಪ್ರತಿಯೊಂದು ಪ್ರಯೋಗಗಳು ವಿಫಲವಾಗಿವೆ ಎನ್ನುವುದು ಕೂಡ ನಿಜ. INDIA ಮೈತ್ರಿಯೂ ಮುಂದೆ ಏನಾಗುತ್ತದೆ ಎಂಬುದನ್ನು ಹೇಳಲಾಗದು. ೨೦೨೪ಕ್ಕೆ ಸೀಟು ಹಂಚಿಕೆಯಂಥ ವಿಷಯಗಳಲ್ಲಿ ಚುನಾವಣೆಗೆ ಮುಂಚೆಯೇ ಆಂತರಿಕ ಭಿನ್ನಾಭಿಪ್ರಾಯಗಳು ಉದ್ಭವಿಸುವುದಿಲ್ಲ ಎಂದು ಯಾರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಆಮ್ ಆದ್ಮಿ ಪಕ್ಷ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಸೀಟು ಹಂಚಿಕೆ ಮತ್ತು ಒಮ್ಮತದ ಅಭ್ಯರ್ಥಿಗಳನ್ನು ಹಾಕುವುದು ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ. ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಪರ ಕೆಲಸ ಮಾಡಲು ಮಮತಾ ಬ್ಯಾನರ್ಜಿ ಒಪ್ಪುತ್ತಾರೆಯೇ? ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಅಭ್ಯರ್ಥಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸುತ್ತಾರೆಯೇ? ಪ್ರತಿಸ್ಪರ್ಧಿಗಳ ಪರ ಪ್ರಚಾರ ಮಾಡಲು ಪಕ್ಷಗಳು ಹೇಗೆ ತಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡುತ್ತವೆ? ಶರದ್ ಪವಾರ್ ಅವರನ್ನು ಕಾಂಗ್ರೆಸ್ ಯಾವಾಗಲೂ ಅನುಮಾನದಿಂದಲೇ ನೋಡುತ್ತಿದೆ. ಶಿವಸೇನೆ-ಬಿಜೆಪಿ ಸರಕಾರವನ್ನು ಅವರ ಸೋದರನ ಪುತ್ರ ಅಜಿತ್ ಪವಾರ್ ಸೇರಿರುವುದು ಈ ಅನುಮಾನ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಇತ್ತೀಚೆಗೆ ಅವರಿಬ್ಬರೂ ಭೇಟಿಯಾದಾಗ ಕಾಂಗ್ರೆಸ್ ಅದರ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿತ್ತು. ಇನ್ನು ಬಿಹಾರ ಮತ್ತೊಂದು ಸವಾಲಾಗಿ ಪರಿಣಮಿಸಲಿದೆ. ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ, ಆದರೆ ನಿತೀಶ್ ಕುಮಾರ್ ಮನಸ್ಸಿನಲ್ಲೇನಿದೆ? ಇದು ನಿಗೂಢವಾಗಿಯೇ ಇದೆ. ಮುಂಬೈ ಸಭೆಯಲ್ಲಿ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು. ಆದರೆ ಅವರು ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ. ಮತ್ತೊಬ್ಬ ನಾಯಕ ಹುಟ್ಟಿಕೊಳ್ಳುವುದನ್ನು ಕಂಡರೆ ಅವರು ಸುಮ್ಮನಾಗುವುದಿಲ್ಲ. ಇವು ಅನಿಯಂತ್ರಿತ, ಅಮೂರ್ತ ಪ್ರಶ್ನೆಗಳಲ್ಲ. ಅವುಗಳನ್ನು ಶೀಘ್ರದಲ್ಲೇ ನಿಭಾಯಿಸಬೇಕಿರುವುದು ಮೈತ್ರಿಕೂಟದ ಎದುರು ಇರುವ ದೊಡ್ಡ ಬಿಕ್ಕಟ್ಟು.
ಈಗ ಎದುರಾಗುತ್ತಿರುವ ದೊಡ್ಡ ಪ್ರಶ್ನೆಯೆಂದರೆ, INDIA ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗುತ್ತದೆಯೇ ಎಂಬುದು. ಯಾರೂ ದೃಢವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಬಿಜೆಪಿ ಸುಮ್ಮನೆ ಕೂರುವುದಿಲ್ಲ ಮತ್ತು ತನ್ನದೇ ಆದ ರಣತಂತ್ರಗಳನ್ನು ಹೊಂದಿರುತ್ತದೆ. ಈ ನಡುವೆ ಸರಕಾರ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದ್ದು, ಅದರಲ್ಲಿ ಸರಕಾರ ಏನನ್ನು ಘೋಷಿಸಲು ಉದ್ದೇಶಿಸಿದೆ ಎಂಬ ಬಗ್ಗೆ ಸದ್ಯಕ್ಕಿರುವುದು ಊಹಾಪೋಹಗಳು ಮಾತ್ರ. ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವಾಗಿ ಪ್ರಸ್ತಾಪ ಮಂಡಿಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಕ್ಕೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕುರಿತು ಚರ್ಚಿಸಲು ಉನ್ನತ ಸಮಿತಿ ರಚಿಸಲಾಗಿದೆ. ಬಿಜೆಪಿ ಯಾವುದೋ ರಾಜಕೀಯ ಅಜೆಂಡಾವನ್ನು ನಿಗದಿಪಡಿಸಿದೆ ಮತ್ತು ವಿರೋಧ ಪಕ್ಷಗಳು ಅದರ ವಿರುದ್ಧ ದಾಳಿ ಮಾಡುವುದರಲ್ಲಿ ತೊಡಗಿವೆ.
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಬಿಜೆಪಿ ತನ್ನ ಬೆಂಬಲಿಗರನ್ನು ಹುರಿದುಂಬಿಸಲು ಮತ್ತು ತನ್ನ ಮತಗಳನ್ನು ಕ್ರೋಡೀಕರಿಸಲು ಉದ್ದೇಶಿಸಿದೆಯೇ? ಈಗಾಗಲೇ, ೨೦೧೯ರ ಪುಲ್ವಾಮಾ ದಾಳಿಯಲ್ಲಿ ೪೦ ಭಾರತೀಯ ಸೈನಿಕರು ಸಾವನ್ನಪ್ಪಿದ ಘಟನೆ ಮತ್ತು ‘ಸರ್ಜಿಕಲ್ ಸ್ಟ್ರೈಕ್’ ಎಂದು ಕರೆಯಲ್ಪಡುವ ದಾಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದು ಮತದಾರರನ್ನು ಉತ್ತೇಜಿಸಿತು ಮತ್ತು ರಾಷ್ಟ್ರೀಯತೆಯ ಭಾವನೆಗಳನ್ನು ಮೂಡಿಸಿತು. ಈ ಬಾರಿ ಏನಾಗಲಿದೆ?
INDIA ಮೈತ್ರಿಕೂಟವನ್ನು ಈಗಷ್ಟೇ ರಚಿಸಲಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಏಕ ಕಾಲದಲ್ಲಿ ಚುನಾವಣೆ ಎಂದೇನಾದರೂ ಆದರೆ ಮೈತ್ರಿರಂಗವಾಗಿ ಹೋರಾಡುವ ತಾಕತ್ತು ಪ್ರತಿಪಕ್ಷಗಳಲ್ಲಿ ಇದೆಯೇ? ಈಗಲೇ ಚುನಾವಣೆ ನಡೆದರೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಗೆಲುವು ಸಾಧಿಸಲಿವೆ ಎಂದು ಎರಡು ಸಮೀಕ್ಷೆಗಳು ಹೇಳಿವೆ. ಸಹಜವಾಗಿ, ಸಮೀಕ್ಷೆಗಳು ಆಗಾಗ್ಗೆ ತಪ್ಪಾಗುತ್ತವೆ. ಸಮೀಕ್ಷೆಗಳ ಪ್ರಕಾರ ಇತ್ತೀಚೆಗೆ ಕರ್ನಾಟಕದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಬೇಕಿತ್ತು, ಇದನ್ನು ದೂರದರ್ಶನ ಚಾನೆಲ್‌ಗಳು ಎತ್ತಿ ತೋರಿಸಿದ್ದವು. ಹಾಗಾಗಲಿಲ್ಲ. ಆದರೂ, ಈಗ INDIA ಚುನಾವಣೆಗೆ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬ ಪ್ರಶ್ನೆ ನಿಜವಾಗಿಯೂ ಏಳುತ್ತದೆ.
ಮೈತ್ರಿಕೂಟದ ವಿವಿಧ ಪಕ್ಷಗಳ ನಡುವಿನ ಬಾಂಧವ್ಯ ಹೃದಯಸ್ಪರ್ಶಿ ಯಾಗಿದೆ ಎಂಬುದನ್ನೇನೋ ಒಪ್ಪಬಹುದು. ಆದರೆ ಸ್ಪಷ್ಟವಾಗಿ, ಚುನಾವಣೆ ಎದುರಿಗಿರುವ ಈ ಹೊತ್ತಿನಲ್ಲಿ INDIA ಮೈತ್ರಿಕೂಟದ ಕೆಲಸಗಳು ಬಹಳ ಇವೆ. ಬಿಜೆಪಿಗೆ ಆತಂಕವಾಗಿರುವುದು ನಿಜವಾದರೂ, ಅದು ವಿಪಕ್ಷ ಮೈತ್ರಿಕೂಟದ ಕೆಲಸವನ್ನು ಕಡಿಮೆಯಾಗಿಸದು. ವಾಸ್ತವವಾಗಿ, ಹಿಂದಿನ ಚುನಾವಣೆ ಬಹುಶಃ ಅದರ ಪರವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಭಿನ್ನಾಭಿಪ್ರಾಯಗಳು ಬೆಳೆಯಲು ಸಮಯ ಇರುವುದಿಲ್ಲ. ಅದು ಗೆಲ್ಲದಿರಬಹುದು. ಅದು ಕಷ್ಟ ಎಂಬ ಮಾತುಗಳೂ ಇವೆ. ಆದರೆ ಮೈತ್ರಿಕೂಟ ಬಿಜೆಪಿಗೆ ಕಠಿಣ ಪೈಪೋಟಿಯನ್ನು ಒಡ್ಡುವುದಂತೂ ನಿಜ. ಈ ಬಾರಿ ಬಿಜೆಪಿಗೆ ಮುನ್ನಡೆಯುವುದು ಅಷ್ಟು ಸುಲಭವಲ್ಲ.
(ಕೃಪೆ: