ಬರಬಾರದ ಬರಗಾಲವನ್ನು ಕರೆದವರಾರು ?
ರಾಜ್ಯದ ಉದ್ದಗಲಕ್ಕೂ ಉರಿ ಬಿಸಿಲಿನ ತಾಪ ಏರುತ್ತಾ, ಅಂತರ್ಜಲ ಕುಸಿಯುತ್ತಾ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನದಿಗಳೆಲ್ಲ ಬಡಕಲಾಗಿ, ನೆಲವೆಲ್ಲಾ ಬರಡಾಗಿದೆ. ಬಿಸಿಲಿಗೆ ಶಾಪ ಹಾಕುವವರು ಒಮ್ಮೆ ಮಳೆ ಬಂದಿದ್ರೆ ಚೆನ್ನಾಗಿತ್ತು ಎಂದು ಆಶಿಸುತ್ತಾರೆ. ಮಳೆಗಾಲದಲ್ಲಿ ಅಧಿಕ ಮಳೆ ಬಂದರೆ ಅದೇ ಜನ ಮಳೆಗೆ ಶಾಪ ಹಾಕುತ್ತಾರೆ. ಒಟ್ಟಾರೆ ಪ್ರಕೃತಿ ಎಂದರೆ ತನ್ನ ರಿಮೋಟ್‌ನಲ್ಲಿ ಇರಬೇಕು, ತಾನು ಹೇಳಿದಂತೆ ಕೇಳಬೇಕು ಎನ್ನುವವರ ಮನಸ್ಥಿತಿ ಬದಲಾವಣೆ ಆಗುವಂತಿಲ್ಲ.
ಮಾತೆತ್ತಿದರೆ ಜಾಗತಿಕ ತಾಪಮಾನ ಎಂದು ಬಚಾವ್ ಆಗುವವರೇ ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡುತ್ತಾ ಇರುವ ಬರಗಾಲದ ಬರಡು ನಾಯಕರು.
ಬರಗಾಲಕ್ಕೆ ಆಮಂತ್ರಣ ನೀಡಿರುವವರಾರು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದವರು ನಾವು, ನೀವು ಎಲ್ಲರೂ. ಕೆಲವು ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ ಎಂದು ಸುಮ್ಮನಿರುವಂತಹ ಪ್ರಶ್ನೆ ಇದಲ್ಲ. ನಾವೇ ಬರಗಾಲಕ್ಕೆ ಆಹ್ವಾನ ನೀಡಿ ಅದು ಬಂದ ಮೇಲೆ ನಾವೇ ಅನುಭವಿಸಲೇ ಬೇಕು. ಪ್ರಶ್ನೆಯ ಉತ್ತರ ಎತ್ತರದಲ್ಲಿ ಇರುವ ಕಾರಣ ತತ್ತರವಾಗುವ ಪರಿಸ್ಥಿತಿಯನ್ನು ಆಹ್ವಾನಿತರೇ ಅನುಭವಿಸಬೇಕು.
ಮಹಾ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಬೇಡಿಕೆಗಳೂ ಹೆಚ್ಚಾದವು. ರಾಜ್ಯದ ಎಲ್ಲಾ ನದಿಗಳೂ ನಗರಗಳ ಬೇಡಿಕೆಗೆ ತಕ್ಕಂತೆ ತಾಯಿ ಮಗುವಿಗೆ ಮೊಲೆಹಾಲು ನೀಡಿದಂತೆ ದಾಹ ತೀರಿಸಿದವು. ಆದರೆ ನದಿಗಳ ನೀರು ಕುಡಿದ ಜನರು ನದಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದರು? ನದಿಗಳ ವೇದನೆ, ರೋದನಕ್ಕೆ ಎಷ್ಟು ಕಿವಿಯಾಗಿ ಸ್ಪಂದಿಸಿದರು? ತಾವು ನೀರು ಕುಡಿದ ನದಿಗಳ ಮೇಲೆ ಪೂಜ್ಯ ಭಾವನೆಗಳನ್ನು ಇಟ್ಟುಕೊಳ್ಳಬೇಕಾದ ಜನತೆ ಅದೇ ನದಿಗಳಿಗೆ ತ್ಯಾಜ್ಯಗಳನ್ನು ಎಸೆದು ಕೃತಾರ್ಥರಾದರು. ನಗರಗಳಲ್ಲಿ ಬಡಾವಣೆ, ಫ್ಲ್ಯಾಟ್, ಮನೆ, ಹೋಟೆಲ್, ಆಸ್ಪತ್ರೆ, ವಾಣಿಜ್ಯ ಸಂಕೀರ್ಣಗಳು ಹೆಚ್ಚುತ್ತಿದ್ದಂತೆಯೇ ನೀರಿನ ಬೇಡಿಕೆಯೂ ಹೆಚ್ಚಾಗುತ್ತಿದೆ. ಆದರೆ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ನದಿ ಮೂಲಗಳ ಸೂಕ್ಷ್ಮ ಪ್ರದೇಶಗಳು ಬಡಕಲಾಗುತ್ತಾ, ನದಿಗಳ ಮೇಲೆ ಅಸಂಬದ್ಧ ಯೋಜನೆಗಳನ್ನು ಮಾಡುತ್ತಾ, ನದಿಗಳು ಬರಿದಾಗುತ್ತಾ ನೀರಿನ ಅಸಮತೋಲನವಾಗುತ್ತಾ ಬರುತ್ತಿದೆ. ದೇವಸ್ಥಾನಗಳಲ್ಲಿ ಪೂಜೆ ಹರಕೆ ತೀರಿಸಿ ತೀರ್ಥವನ್ನು ಪರಮ ಪವಿತ್ರವೆಂದು ಕುಡಿದು, ಅದೇ ನದಿಗೆ ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್, ಕಸಗಳನ್ನು, ಸತ್ತ ನಾಯಿ, ಬೆಕ್ಕುಗಳನ್ನು ಎಸೆದು ಬಿಟ್ಟರೆ???
ಇಂದು ರಾಜ್ಯದ ಯಾವುದೇ ನಗರ ಬೆಳೆಯುವುದಿದ್ದರೆ ಅದರ ಹಿಂದೆ ಒಂದಲ್ಲಾ ಒಂದು ರೀತಿಯಲ್ಲಿ ಪಶ್ಚಿಮ ಘಟ್ಟಕ್ಕೆ ಹೊಡೆತ ಬೀಳುತ್ತಲೇ ಇರುತ್ತದೆ.
ಇಡೀ ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿಯೇ ಆಗಿರುವ ಪಶ್ಚಿಮ ಘಟ್ಟದ ಮೇಲೆ ಇಂದು ಸರಕಾರಗಳ ಅವಿವೇಕತನದ, ಅವೈಜ್ಞಾನಿಕ ಪರಿಸರ ವಿನಾಶಕ ಯೋಜನೆ, ಚಿಂತನೆಗಳ ಮೂಲಕ ಗೀರು ಗಾಯಗಳು ಆಗುತ್ತಾ ಸಹಿಸಲಸಾಧ್ಯವಾದ ಏಟುಗಳು ಬೀಳುತ್ತಲೇ ಇವೆ. ಪಶ್ಚಿಮ ಘಟ್ಟದ ಮೇಲೆ ಈ ರೀತಿ ಹೊಡೆತ ಬಿದ್ದರೆ ಅದು ನಮ್ಮ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತವೆ.
ಪಶ್ಚಿಮ ಘಟ್ಟದ ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆ, ಗಾಂಜಾ - ಟಿಂಬರ್ ಮಾಫಿಯಾ, ನೀರಿಲ್ಲದಿದ್ದರೂ ಬಲಾತ್ಕಾರವಾದ ನದಿ ತಿರುವು ಯೋಜನೆ, ಮಾನವ ನಿರ್ಮಿತ ಕಾಡ್ಗಿಚ್ಚು...ಹೀಗೇನೇ ಮುಂದುವರಿದು ಜಲ ಸ್ಫೋಟ, ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ದುರಂತಗಳನ್ನು ನಾವೇ ಸೃಷ್ಟಿಸಿಯಾದ ಮೇಲೆ ಬರಗಾಲ ಬರದೇ ಇನ್ನೇನು ಬರಬೇಕು?
ನಮ್ಮ ರಾಜಕೀಯ ವ್ಯವಸ್ಥೆ ಪಶ್ಚಿಮ ಘಟ್ಟದಲ್ಲಿ ಅದರ ಧಾರಣಾ ಶಕ್ತಿಯನ್ನೂ ಲೆಕ್ಕಿಸದೇ ಹಣ ಲೂಟಿ ಹೊಡೆಯುವ ಅಸಮರ್ಪಕ ಯೋಜನೆಗಳನ್ನು ಮಾಡಿದಾಗ ರಾಜ್ಯದ ಜನತೆ ಎಷ್ಟು ಪ್ರಶ್ನಿಸಿದ್ದಾರೆ? ಎಷ್ಟು ಪ್ರತಿಭಟಿಸಿದ್ದಾರೆ? ಎಷ್ಟು ಕಾನೂನು ಹೋರಾಟ ಮಾಡಿದ್ದಾರೆ? ಪ್ರಶ್ನಿಸಬೇಕಾದ ಜನತೆ ಪಕ್ಷ, ಧರ್ಮ, ಜಾತಿ, ರಾಜಕೀಯ ಅಂತ ಅದೇ ಗುಂಗಿನಲ್ಲಿ ಇದ್ದು ಮತ್ತೆ ಅದೇ ಪ್ರಕೃತಿ ವಿರೋಧಿ ರಾಜಕಾರಣಿಗಳನ್ನೇ ಆಯ್ಕೆ ಮಾಡಿದರೆ ಬರಗಾಲ ಬರದೇ ಇನ್ನೇನು ಬರಬೇಕಿತ್ತು??
ನೀರೇ ಇಲ್ಲವೆಂದು ವೈಜ್ಞಾನಿಕ ವರದಿ ಇದ್ದರೂ ಎತ್ತಿನ ಹೊಳೆ ಎಂಬ ಅರ್ಥವಿಲ್ಲದ ಅಸಂಬದ್ಧ ಯೋಜನೆಯನ್ನು ಮಾಡಿ ನಮ್ಮ ರಾಜಕೀಯ ವ್ಯವಸ್ಥೆ ಕೋಟಿ, ಕೋಟಿ ಹಣ ಲೂಟುತ್ತಿದ್ದರೂ ನೇತ್ರಾವತಿಯನ್ನೇ ನಂಬಿರುವ ಕರಾವಳಿ ಜನರು ಈ ಎತ್ತಿನ ಹೊಳೆ ಯೋಜನೆಯ ವಿರುದ್ಧ ಎಷ್ಟು ಚಳವಳಿ ಮಾಡಿದರು? ಈ ಯೋಜನೆಯಲ್ಲಿ ನೇತ್ರಾವತಿಯ ಸೂಕ್ಷ್ಮ ಜೀವ ವೈವಿಧ್ಯ ಪ್ರದೇಶಗಳಲ್ಲಿ ಮಳೆ ನೀರು ಅಡವಿ ಕಣಿವೆಗಳಲ್ಲಿ ಇಂಗುವ ಪ್ರದೇಶಗಳಲ್ಲಿ ಬೆಟ್ಟಗಳನ್ನು ಕೊರೆದು, ಅಡವಿಯನ್ನು ಕಡಿದು, ನೀರು ಸೋಸುವ ಶಿಲಾ ಪದರಗಳನ್ನು ಡೈನಮೈಟು ಮೂಲಕ ಸ್ಫೋಟಿಸಿ, ಇದೀಗ ಮಳೆಗಾಲದ ನೀರು ಬಿಡಿ ವರ್ಷ ಪೂರ್ತಿ ನೀರು ಜಲ ಪದರಗಳಲ್ಲಿ ಉಳಿಯದೆ ಬರಗಾಲದ ಬಾಗಿಲು ತೆರೆಯುತ್ತಿದೆ ಎಂದರೆ ಇದು ಪಶ್ಚಿಮ ಘಟ್ಟದ ತಪ್ಪೇ, ನೇತ್ರಾವತಿಯ ತಪ್ಪೇ??
ಇದು ಒಂದು ನೇತ್ರಾವತಿಯ ಕಥೆಯಲ್ಲ, ಅಘನಾಶಿನಿ, ಕಾವೇರಿ, ಕಾಳಿ, ಶರಾವತಿ, ಗಂಗಾವಳಿ, ಹೇಮಾವತಿ, ವಾರಾಹಿ, ಸೌಪಾರ್ಣಿಕಾ, ಪಾಲಾರ್, ತುಂಗಭದ್ರಾ...ಎಲ್ಲಾ ನದಿಗಳೂ ನಿರಂತರವಾಗಿ ಕಣ್ಣೀರು ಹಾಕುತ್ತಿದ್ದರೂ ಕ್ಯಾರೇ ಮಾಡದ ಈ ನದಿಗಳ ಫಲಾನುಭವಿಗಳೇ ಸುಮ್ಮನಿದ್ದಾಗ ಬರಗಾಲ ಬರದೇ ಇನ್ನೇನಾಗಬೇಕು ?
ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ಸಂಕುಲಗಳು ಅಲ್ಲಿ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿರುವುದರಿಂದ ಒಂದು ಜೀವಿಗೆ ಸಮಸ್ಯೆ ಆದರೂ ಅದನ್ನೇ ನಂಬಿಕೊಂಡು ಇರುವ ಇನ್ನೊಂದು ಜೀವಿಗೆ ತೊಂದರೆ ಆಗಿಯೇ ಆಗುತ್ತದೆ. ಅಲ್ಲಿ ಬೆಟ್ಟದ ಮೇಲೆ ಹೊದಿಕೆಯಾಗಿರುವ ಹುಲ್ಲುಗಾವಲು ಮತ್ತು ಗಿರಿ, ಕಣಿವೆಗಳಲ್ಲಿ ಇರುವ ಶೋಲಾ ಅಡವಿಗೂ ನೇರ ಸಂಬಂಧವಿದೆ. ಹುಲ್ಲಗಾವಲು ಪ್ರದೇಶವು ಮಳೆಗಾಲದ ಮಳೆ ನೀರನ್ನು ತನ್ನ ಒಡಲ ಒಳಗೆ ಇರುವ ಜಲ ನಾಡಿಗಳಲ್ಲಿ ಕಣಿವೆಯಲ್ಲಿ ಇರುವ ಶೋಲಾ ಅಡವಿಗೆ ಸರಬರಾಜು ಮಾಡಿ ಆ ನೀರು ವರ್ಷ ಪೂರ್ತಿ ಹಂತ, ಹಂತವಾಗಿ ಹೊಳೆಗೆ ಹರಿದು ಹೊಳೆಗಳು ಜೀವಂತ ವಾಗಿರುವಂತೆ ಪಾತ್ರ ವಹಿಸುತ್ತವೆ. ಈ ಸೂಕ್ಷ್ಮ ಜೀವ ಸಂಕುಲದ ಸಂಕಲೆಯನ್ನು ಅರಿಯದ ನಮ್ಮನ್ನಾಳುವ ಜನ ಪ್ರತಿನಿಧಿಗಳು ‘ಅಭಿವೃದ್ಧಿ’ ಎಂಬ ನೆಪದಲ್ಲಿ , ಅಗೋಚರವಾಗಿ ಅವರದೇ ಸ್ವಾರ್ಥದ ಕಾರಣದಿಂದ ಪಶ್ಚಿಮ ಘಟ್ಟದ ನೆಮ್ಮದಿಗೆ ಏಟು ನೀಡುತ್ತಾ ಬಂದಿರುವ ಕಾರಣ ಬರಬಾರದ ಬರಗಾಲ ಬರುತ್ತಾ ಇದೆ.
ಇಲ್ಲಿ ರಾಜಕೀಯ ವ್ಯವಸ್ಥೆಯನ್ನು ದೂರುವುದಕ್ಕಿಂತಲೂ ರಾಜ್ಯದ ಜನತೆ ಪಶ್ಚಿಮ ಘಟ್ಟದ ಮೇಲೆ, ನದಿಗಳ ಮೇಲೆ ಎಷ್ಟು ಗೌರವ, ಕಾಳಜಿ, ಅಭಿಮಾನ ಇಟ್ಟುಕೊಂಡಿದೆ? ಕೇವಲ ಮೋಜು, ಗೌಜಿ, ಗಮ್ಮತ್‌ಗೇ ಕಾಡು ಇರುವುದು, ತ್ಯಾಜ್ಯ, ಪ್ಲಾಸ್ಟಿಕ್ ಎಸೆಯಲೆಂದೇ ಕಾಡು, ನದಿಗಳಿರುವುದು, ಹೋಮ್ ಸ್ಟೇ ಯಲ್ಲಿ ಡಿಜೆ ಪಾರ್ಟಿ ಮಾಡಲೆಂದೇ ಅಡವಿತಾಣಗಳು ಇರುವುದು ಎಂಬ ವಿಕೃತ ಮನೋಭಾವದ ಜನರಿಗೆ ಅದರ ಪರಿಣಾಮವಾಗಿ ಬರಗಾಲ ಬರದೇ ಇನ್ನೇನು ಬರಬೇಕು?
ಪಶ್ಚಿಮ ಘಟ್ಟದಿಂದ ನಾವೆಷ್ಟು ಪ್ರಾಕೃತಿಕ ಜೀವಂತಿಕೆಯನ್ನು ಪಡೆದುಕೊಂಡಿದ್ದೇವೆ? ಪಶ್ಚಿಮ ಘಟ್ಟ ನಾಶವಾದರೆ ನಾವೆಷ್ಟು ಸಮಸ್ಯೆಗೆ ಒಳಗಾಗುತ್ತೇವೆ ಎಂಬುದನ್ನು ಅರಿಯದೆ ಪಶ್ಚಿಮ ಘಟ್ಟವೆಂದರೆ ಅದು ಕೇವಲ ವ್ಯಾವಹಾರಿಕ ಬದುಕು ಅಷ್ಟೇ ಎನ್ನುವ ಸ್ವಾರ್ಥ ಜನರಿಗೆ ಬರಗಾಲವೇ ಪ್ರಕೃತಿ ನೀಡುವ ದೊಡ್ಡ ಗಿಫ್ಟ್.
ಈಗಾಗಲೇ ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಚಂಡ ಮಾರುತ ದಂತಹ ಪ್ರಾಕೃತಿಕ ದುರಂತಗಳು ನಾವು ಪ್ರಕೃತಿಯ ಮೇಲೆ ಮಾಡಿರುವ ದಬ್ಬಾಳಿಕೆ, ದೌರ್ಜನ್ಯಗಳ ಪ್ರತೀಕಾರ ಮತ್ತು ಫಲಿತಾಂಶ.
ಬರದಿರಲಿ ಮತ್ತೆ ಬರಗಾಲ...ಎಂಬ ಧ್ಯೇಯ, ಗುರಿಗಳನ್ನು ಇಟ್ಟುಕೊಂಡು ನಾವು ಪ್ರಕೃತಿ ಸಂರಕ್ಷಣೆ ಮಾಡದೆ ಇದ್ದರೆ ಇನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಅದೆಷ್ಟು ಪ್ರಾಕೃತಿಕ ದುರಂತಗಳನ್ನು ಅನುಭವಿಸಬೇಕು?
ನಾವು ಹಿಂದೊಮ್ಮೆ ರಾಜಸ್ಥಾನದಲ್ಲಿ 40 ಡಿಗ್ರಿ ತಾಪ ಮಾನ ಅಂತ ಕೇಳಿ ಆತಂಕ ಗೊಂಡಿದ್ದೆವು.. ಆದರೆ ಈಗ ಮೊನ್ನೆ ಜನವರಿ ತಿಂಗಳಲ್ಲಿ ಕರಾವಳಿಯಲ್ಲಿ 33 ಡಿಗ್ರಿ....!?? ತಾಪ ಹೆಚ್ಚುತ್ತಲೇ ಇದೆ, ಉರಿ ಬಿಸಿಲು ಕಾಡುತ್ತಲೇ ಇದೆ. ಇದೀಗ ಮಾರ್ಚ್, ಇನ್ನೂ 4 ತಿಂಗಳು ಯಾವ ತಾಪ ಯಾವ ಪ್ರತಾಪವನ್ನು ಬೀರಿ ಏನೆಲ್ಲಾ ಆಗಲಿದೆಯೋ?
ನಾವು, ನೀವು ನಮಗಲ್ಲದಿದ್ದರೂ ನಿಮಗಲ್ಲದಿದ್ದರೂ ನಿಮ್ಮ ಮಕ್ಕಳ ಭವಿಷ್ಯಕ್ಕಾದರೂ ಪ್ರಕೃತಿಯನ್ನು ಸಂರಕ್ಷಣೆ ಮಾಡದೇ ಇದ್ದರೆ??
ಮುಂದೊಂದು ದಿನ ನಿಮ್ಮ ಮಕ್ಕಳು ನಿಮ್ಮನ್ನು ‘‘ಅಪ್ಪಾ ನನಗೆ ಒಳ್ಳೆಯ ಕಾರು ಕೊಟ್ಟಿದ್ದಿ, ನನಗೆ ಒಳ್ಳೆಯ ಸೈಟು ಕೊಟ್ಟಿದ್ದಿ, ನನ್ನ ಹೆಸರಲ್ಲಿ ಎಫ್‌ಡಿ, ಶೇರ್ ಇಟ್ಟಿದ್ದಿ....ಆದರೆ ನನಗೆ ಕುಡಿಯುವ ನೀರು ಎಲ್ಲಿಟ್ಟಿದ್ದಿ?’’ ಎಂದು ಪ್ರಶ್ನಿಸಿದಾಗ ಅಪ್ಪ ನೀರು ಕೊಡಲಾಗದೇ ಕೇವಲ ಕಣ್ಣೀರನ್ನು ಕೊಡಬೇಕಾದ ಸಂದರ್ಭ ಬರಬಹುದು. ಯೋಚಿಸಿ, ಬರಗಾಲ ಬರದಂತೆ ಪ್ರತೀ ಮನೆಗಳ ಪ್ರತೀ ಮನ, ಮನ ಗಳಲ್ಲಿ ಪ್ರಕೃತಿ ಸಂರಕ್ಷಣೆ ಒಂದೇ ನಮ್ಮ ಭವಿಷ್ಯದ ಸುಗಮ ದಾರಿ ಎಂಬುದನ್ನು ಅರಿತರೆ ಮಾತ್ರ ಇಲ್ಲಿ ಅಪಾಯ, ದುರಂತಗಳಿಂದ ಬಚಾವ್ ಆಗಬಹುದು.