ಇದು ಯಾರಿಗೆ ಅನುಕೂಲ ಮಾಡಿಕೊಡುವ ನಡೆ?
ಜಮ್ಮು-ಕಾಶ್ಮೀರ, ಹರ್ಯಾಣಗಳಿಗೆ ಮಾತ್ರ ಚುನಾವಣಾ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ
ಶುಕ್ರವಾರ ಜಮ್ಮು-ಕಾಶ್ಮೀರ ಹಾಗೂ ಹರ್ಯಾಣಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಚುನಾವಣೆ ಗೆಲ್ಲುವ ಕೌಶಲ್ಯವೇ ಬೇರೆ ಮತ್ತು ಅದು ಮೋದಿ ಸರಕಾರಕ್ಕೆ ಬಹಳ ಚೆನ್ನಾಗಿಯೇ ಗೊತ್ತಿದೆ. ದೇಶದಲ್ಲಿ ಎಲ್ಲಿ ಯಾವಾಗ ಚುನಾವಣೆ ನಡೆಯಬೇಕು, ಎಷ್ಟು ಹಂತಗಳಲ್ಲಿ ಮತ್ತು ಯಾವಾಗ ಯಾವ ಕ್ಷೇತ್ರಗಳಲ್ಲಿ ನಡೆಯಬೇಕು? ಯಾವ ಸಮಯದಲ್ಲಿ ಎಲ್ಲಿ ಚುನಾವಣೆ ನಡೆಯಕೂಡದು ಎನ್ನುವುದನ್ನೆಲ್ಲ ನಿರ್ಧರಿಸುವುದು ಆಡಳಿತದಲ್ಲಿರುವ ಪಕ್ಷವೇ? ಚುನಾವಣಾ ಆಯೋಗ ಎದುರಿಗಷ್ಟೇ ತೋರಿಸಿಕೊಳ್ಳುತ್ತದೆಯೇ? ಹಾಗಾದರೆ ಚುನಾವಣಾ ಆಯೋಗಕ್ಕೆ ನಿಜವಾಗಿಯೂ ಏನು ಕೆಲಸವಿದೆ?
ಯಾವುದೇ ರಾಜ್ಯದ ವಿಧಾನಸಭೆ ಅವಧಿ ಮುಗಿಯಲು ಆರು ತಿಂಗಳುಗಳಿಗಿಂತ ಕಡಿಮೆ ಸಮಯವಿರುವಾಗ ಮತ್ತು ಬೇರೆ ರಾಜ್ಯಗಳಲ್ಲಿಯೂ ಚುನಾವಣೆ ನಡೆಸಬೇಕಿರುವಾಗ ಚುನಾವಣೆ ಸಮಯವನ್ನು ತನಗೆ ಬೇಕಿರುವಂತೆ ಹೊಂದಿಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿರುತ್ತದೆ.
ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿನ ಪ್ರಕಾರ ಸೆಪ್ಟಂಬರ್ 30ರೊಳಗೆ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಬೇಕಿದೆ. ಹರ್ಯಾಣದಲ್ಲಿ ಈಗಿನ ಅಸೆಂಬ್ಲಿ ಅವಧಿ ನವೆಂಬರ್ 3ಕ್ಕೆ ಮುಕ್ತಾಯಗೊಳ್ಳುತ್ತದೆ. ಚುನಾವಣೆ ನಡೆಯಬೇಕಿರುವ ನಾಲ್ಕು ರಾಜ್ಯಗಳಲ್ಲಿ ಎರಡು ರಾಜ್ಯಗಳ ಚುನಾವಣೆಗೆ ಮಾತ್ರವೇ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.
ಜಮ್ಮು-ಕಾಶ್ಮೀರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಗಳಿಗೆ ಮಾತ್ರ ಶುಕ್ರವಾರ ದಿನಾಂಕ ಪ್ರಕಟಿಸಲಾಗಿದೆ. ಅಲ್ಲಿ ನವೆಂಬರ್ 3ರೊಳಗೆ ಹೊಸ ಸರಕಾರ ರಚನೆಯಾಗಬೇಕಾಗುತ್ತದೆ. ಆದರೆ ನವೆಂಬರ್ 26ರೊಳಗೆ ಮಹಾರಾಷ್ಟ್ರದಲ್ಲೂ ಹೊಸ ಸರಕಾರ ರಚನೆಯಾಗಬೇಕಿದೆ. ಹೀಗಿರುವಾಗಲೂ ಹರ್ಯಾಣದ ಚುನಾವಣೆಯನ್ನು ಮಾತ್ರ ಘೋಷಿಸಿ, ಮಹಾರಾಷ್ಟ್ರದ ಚುನಾವಣೆಯನ್ನು ಯಾಕೆ ಘೋಷಿಸಲಾಗಿಲ್ಲ? ಒಂದು ದೇಶ, ಒಂದು ಚುನಾವಣೆ ಎಂದು ಕೆಂಪುಕೋಟೆಯ ಭಾಷಣದಲ್ಲಿ ಮೋದಿ ಪ್ರತಿಪಾದಿಸಿದ್ದ ಮಾರನೇ ದಿನವೇ ಚುನಾವಣಾ ಆಯೋಗ ಹೀಗೆ ಚುನಾವಣಾ ದಿನಾಂಕ ಪ್ರಕಟಿಸುವಲ್ಲಿ ಕಸರತ್ತು ಮಾಡಿದಂತಿದೆ. ಕಳೆದ ಬಾರಿ ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಗಳೆರಡೂ ಒಟ್ಟಿಗೇ ನಡೆದಿದ್ದವು. ಹಾಗಾಗಿಯೇ ನವೆಂಬರ್ ಗಡುವು ಎರಡೂ ರಾಜ್ಯಗಳಿಗೆ ಇದೆ.
ಶುಕ್ರವಾರ ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಸೆಪ್ಟಂಬರ್ 18, ಸೆಪ್ಟಂಬರ್ 25 ಹಾಗೂ ಅಕ್ಟೋಬರ್ 1 -ಈ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ಹರ್ಯಾಣದಲ್ಲಿ ಅಕ್ಟೋಬರ್ 1ರಂದು, ಅಂದರೆ ಜಮ್ಮು ಕಾಶ್ಮೀರದಲ್ಲಿ 3ನೇ ಹಂತದ ಚುನಾವಣೆ ನಡೆಯುವ ದಿನ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಎರಡೂ ರಾಜ್ಯಗಳ ಮತ ಎಣಿಕೆ ನಡೆಯಲಿದೆ.
ಅಕ್ಟೋಬರ್ 4ರಿಂದ ನವೆಂಬರ್ 26ರವರೆಗಿನ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದು ಹೊಸ ಸರಕಾರ ರಚನೆಯಾಗಬೇಕಿದೆ. ಹಾಗಾಗಿ ಅಕ್ಟೋಬರ್ 4ರ ಬೆನ್ನಲ್ಲೇ ಮಹಾರಾಷ್ಟ್ರ ಚುನಾವಣೆ ಘೋಷಣೆಯಾಗಬಹುದು. ಆನಂತರ ಕೇವಲ ಒಂದೂವರೆ ತಿಂಗಳ ಕಾಲಾವಕಾಶ ಸಿಗುತ್ತದೆ. ಏನೇ ಅಂದರೂ 25 ದಿನ ಪ್ರಚಾರಕ್ಕೇ ಹೋಗು ತ್ತದೆ. ಅದು ಈಗ 20 ಅಥವಾ 15 ದಿನಗಳಿಗೂ ಇಳಿಯಬಹುದು.
ಇದನ್ನೀಗ ಚುನಾವಣಾ ಆಯೋಗದ ಬಗೆಗಿನ ಅನುಮಾನವಾಗಿ ನೋಡುವುದೋ ಅಥವಾ ವಿಪಕ್ಷಗಳು ಆರೋಪಿಸುವ ಹಾಗೆ ಚುನಾವಣಾ ಆಯೋಗ ಆಡಳಿತಾರೂಢ ಪಕ್ಷಕ್ಕಾಗಿ ಕೆಲಸ ಮಾಡುತ್ತದೆ ಎಂದು ಭಾವಿಸುವುದೋ? ಬಿಜೆಪಿಗೆ ಅನುಕೂಲವಾಗುವ ಹಾಗೆ ಚುನಾವಣಾ ಆಯೋಗ ದಿನಾಂಕಗಳನ್ನು ನಿಗದಿ ಮಾಡಿತೆ? ಹಾಗಾದರೆ ಅದರ ಪಾರದರ್ಶಕತೆ ಬಗ್ಗೆ ಏನು ಹೇಳುವುದು?
ಚುನಾವಣಾ ಆಯೋಗ ಬಯಸಿದ್ದರೆ ಮಹಾರಾಷ್ಟ್ರ ಚುನಾವಣೆಯ ದಿನಾಂಕವನ್ನೂ ಶುಕ್ರವಾರ ಪ್ರಕಟಿಸುವುದು ಸಾಧ್ಯವಿತ್ತು. ಈಗ ಹರ್ಯಾಣ ಮತ್ತು ಮಹಾರಾಷ್ಟ್ರದ ಹೊಸ ವಿಧಾನಸಭೆ ರಚನೆಯ ನಡುವೆ ಹೆಚ್ಚು ಕಡಿಮೆ ಒಂದು ತಿಂಗಳ ಅಂತರ ಇರುತ್ತದೆ. ಜಮ್ಮು-ಕಾಶ್ಮೀರ ಚುನಾವಣೆ ಬಿಜೆಪಿಗೆ ಸವಾಲಿನದ್ದಾಗಲಿದೆ. ಇಲ್ಲಿಯವರೆಗೆ ದಿಲ್ಲಿಯಿಂದಲೇ ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಅಧಿಕಾರ ಚಲಾಯಿಸಲಾಗುತ್ತಿತ್ತು. ಈಗ ಚುನಾವಣೆ ಘೋಷಣೆಗೂ ಕೆಲ ಗಂಟೆಗಳ ಮೊದಲೇ ಅಲ್ಲಿನ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ರಾಜಕೀಯ ಪಕ್ಷಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ.
ಹರ್ಯಾಣದಲ್ಲಿ ಅಂಥ ದೊಡ್ಡ ಬದಲಾವಣೆಯ ಸಾಧ್ಯತೆ ಇಲ್ಲವಾಗಿರುವುದರಿಂದಲೂ ಇರಬಹುದು, ಚುನಾವಣೆ ದಿನಾಂಕ ಪ್ರಕಟಿಸಲಾಗಿದೆ. ಚುನಾವಣಾ ಆಯೋಗ ಹೀಗೆ ಚುನಾವಣಾ ದಿನಾಂಕ ಘೋಷಿಸು ವುದು ಆಡಳಿತ ಪಕ್ಷದ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಎಂಬ ಅನುಮಾನ ಏಳುವುದು ಏಕೆ?
ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸದಿರಲು ಪ್ರತಿಕೂಲ ಹವಾಮಾನ, ಜಮ್ಮು- ಕಾಶ್ಮೀರದ ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಮುಖ್ಯ ಚುನಾವಣಾ ಆಯುಕ್ತರು ನೀಡಿದ್ಧಾರೆ. ಕಳೆದ ಬಾರಿ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದಿತ್ತು. ಆ ಸಮಯದಲ್ಲಿ ಜಮ್ಮು-ಕಾಶ್ಮೀರದ ಚುನಾವಣೆ ಇರಲಿಲ್ಲ. ಆದರೆ ಈ ಬಾರಿ ನಾಲ್ಕು ಚುನಾವಣೆಗಳು ನಡೆಯಬೇಕಿದೆ ಮತ್ತು ಅದರ ನಂತರ ತಕ್ಷಣವೇ ಐದನೇ ಚುನಾವಣೆ ಇದೆ ಎಂದಿದ್ಧಾರೆ. ಭದ್ರತಾ ಪಡೆಗಳ ಅಗತ್ಯ ಅವಲಂಬಿಸಿ 2 ಚುನಾವಣೆಗಳನ್ನು ಒಟ್ಟಿಗೆ ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇನ್ನೊಂದು ಅಂಶವೆಂದರೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ ಮತ್ತು ಹಲವಾರು ಹಬ್ಬಗಳು ಸಾಲಾಗಿ ಬರುತ್ತಿವೆ ಎಂಬ ಕಾರಣವನ್ನೂ ಮುಖ್ಯ ಚುನಾವಣಾ ಆಯುಕ್ತರು ಕೊಟ್ಟಿದ್ದಾರೆ. ಪಿತೃಪಕ್ಷ, ಗಣೇಶ ಚತುರ್ಥಿ ಮತ್ತು ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬಗಳು ಮಹಾರಾಷ್ಟ್ರದಲ್ಲಿ ಸಾಲಾಗಿ ಬರುತ್ತಿವೆ. ಅಲ್ಲದೆ, ಮತದಾರರ ಪಟ್ಟಿಯನ್ನು ನವೀಕರಿಸುವಲ್ಲಿ ವಿಳಂಬವಾಗಿದೆ ಎಂದು ಕಾರಣ ನೀಡಲಾಗಿದೆ. ಎಲ್ಲಾ ಅಗತ್ಯ ಸಿದ್ಧತೆಗಳು ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಂಡ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಇಲ್ಲಿ ಗಮನಿಸಬೇಕಿರುವ ಸಂಗತಿಯೆಂದರೆ, ಹರ್ಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಬಿಜೆಪಿಯ ಸ್ಥಿತಿ ಚೆನ್ನಾಗಿಲ್ಲ. ಅದು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಸ್ಪಷ್ಟವಾಗಿ ಕಂಡಿದೆ. ಮಹಾರಾಷ್ಟ್ರದಲ್ಲಂತೂ ದೊಡ್ಡ ಸವಾಲೇ ಬಿಜೆಪಿಯೆದುರು ಇದೆ. ನೆಲೆ ಭದ್ರಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಲು ಸ್ವಲ್ಪ ಸಮಯಾವಕಾಶ ಸಿಕ್ಕೀತು ಎಂದು ಈಗ ಸರಕಾರ ಭಾವಿಸಿದ್ದಿರಬಹುದೆ?
ದಶಕಗಳ ಕಾಲ ಶಿವಸೇನೆಯ ಬಲದೊಂದಿಗೆ ಇದ್ದ ಬಿಜೆಪಿಯ ಹಣೆಬರಹ ಅಲ್ಲಿ ಬದಲಾಗಿದೆ. ಮಹಾರಾಷ್ಟ್ರದ ಕಳೆದ ಅಸೆಂಬ್ಲಿ ಚುನಾವಣೆಯನ್ನು ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ಒಟ್ಟಾಗಿ ಎದುರಿಸಿ, ಬಹುಮತ ಪಡೆದಿದ್ದವು. ಆದರೆ, ಶಿವಸೇನೆ ವಿಭಿನ್ನ ನಿಲುವು ತಾಳಿದ್ದರ ಪರಿಣಾಮವಾಗಿ, ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿಯ ಮಹಾ ವಿಕಾಸ್ ಅಘಾಡಿ ಸರಕಾರ ಅಧಿಕಾರಕ್ಕೆ ಬಂದಿತ್ತು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ-ಶಿವಸೇನೆಯ ಶಿಂದೆ ಬಣ-ಎನ್‌ಸಿಪಿಯ ಅಜಿತ್ ಪವಾರ್ ಬಣ ಸೇರಿ ಸರಕಾರ ರಚಿಸಿದ್ದವು. ಏಕನಾಥ ಶಿಂದೆ ಮುಖ್ಯಮಂತ್ರಿಯಾದರು.
ಬಿಜೆಪಿ ಪಾಲಿಗೆ ಮಹಾರಾಷ್ಟ್ರ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ಇವಾವುದೂ ಬಿಜೆಪಿಯ ಕೈಯಲ್ಲಿ ಇಲ್ಲದೆ ಇರುವಾಗ, ಮಹಾರಾಷ್ಟ್ರವೂ ಬಿಜೆಪಿ ಕೈತಪ್ಪಿತೆಂದರೆ ಪೂರ್ತಿ ಭಾಗವೇ ಇಲ್ಲದಂತಾಗುತ್ತದೆ. ಗುಜರಾತ್ ಅನ್ನೂ ಗೆಲ್ಲಲಿದ್ದೇವೆ ಎಂದು ರಾಹುಲ್ ಈಗಾಗಲೇ ಹೇಳಿರುವುದೂ ಬಿಜೆಪಿಯನ್ನು ಕಾಡುತ್ತಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆರೆಸ್ಸೆಸ್ ಬಲ ಬೇಕಿದೆ ಎಂದೆನ್ನಿಸದೇ ಇರಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಬಿಜೆಪಿ ನಾಯಕ ಫಡ್ನವೀಸ್ ಬ್ರಾಹ್ಮಣ ಸಮುದಾಯದವರು. ಇನ್ನೊಂದೆಡೆ ನಿತಿನ್ ಗಡ್ಕರಿ ಕೂಡ ಬ್ರಾಹ್ಮಣ ಸಮುದಾಯದವರು. ಪಕ್ಷದೊಳಗೇ ದೊಡ್ಡ ಸಂಘರ್ಷ ಇರುವ ಈ ಹಂತದಲ್ಲಿ ಮೋದಿ ಪರವಾದ ನೆಲೆ ನಿರ್ಮಾಣಕ್ಕಾಗಿ ಚುನಾವಣಾ ಆಯೋಗ ನೆರವಿಗೆ ನಿಲ್ಲುತ್ತಿದೆಯೇ ಎಂಬ ಅನುಮಾನ ಏಳದೇ ಇರುವುದಿಲ್ಲ.
ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಬಳಿ 103 ಸೀಟುಗಳಿದ್ದವು. ಆದರೆ ಆನಂತರದ ಬೆಳವಣಿಗೆಗಳು, ವಾಮಮಾರ್ಗದಿಂದ ಬಿಜೆಪಿ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಬೀಳಿಸಿ ಅಧಿಕಾರ ಕಿತ್ತುಕೊಂಡ ಬಳಿಕ ಉಂಟಾಗಿರುವ ರಾಜಕೀಯ ಸಮೀಕರಣಗಳು ಬಿಜೆಪಿಯನ್ನು ದುರ್ಗತಿಗೆ ತಳ್ಳಿದವು. ಅದು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡಿತ್ತು.
ತನ್ನ ಮತಗಳನ್ನಲ್ಲದೆ ಶಿವಸೇನೆ ಮತಗಳನ್ನೂ ತನ್ನ ಕಡೆ ತಿರುಗಿಸಿಕೊಳ್ಳುವ ತಯಾರಿಯನ್ನು ಬಿಜೆಪಿ ನಡೆಸಿಕೊಂಡೇ ಬಂದಿದೆ. ಹಾಗಾಗಿಯೇ ಬಾಳಾಸಾಹೇಬ್ ಠಾಕ್ರೆ ಹೆಸರನ್ನೂ, ಶಿವಸೇನೆಯ ಹೆಸರನ್ನೂ ಬಳಸಿಕೊಳ್ಳುವುದು, ಶಿವಸೇನೆಯ ಚಿಹ್ನೆ ಶಿಂದೆೆಗೇ ಸಿಗುವಂತೆ ಮಾಡಿರುವುದು ಎಲ್ಲವೂ ನಡೆದಿದೆ.
ವಿಧಾನಸಭೆ ಚುನಾವಣೆಯಾಗಲಿ, ಲೋಕಸಭೆ ಚುನಾವಣೆಯಾಗಲಿ ಮತದಾನದ ಅಂತರ ಯಾವುದೇ ಪಕ್ಷಕ್ಕೆ ಗಮನಾರ್ಹವಾಗಿ ಕಂಡು ಬಂದಿಲ್ಲ. ಆದರೆ ಶಿವಸೇನೆ ಒಡೆದ ಬಳಿಕ ಹಂಚಿಹೋಗುವ ಮತಗಳ ಬಗ್ಗೆ ಬಿಜೆಪಿಗೆ ಆತಂಕವಿದೆ. ಹೀಗಾಗಿ ಮಹಾರಾಷ್ಟ್ರ ಚುನಾವಣೆಯನ್ನು ಗೆಲ್ಲುವುದು ಹೇಗೆ ಎಂಬ ಚಿಂತೆ ಬಿಜೆಪಿಯನ್ನು ಕಾಡುತ್ತಿದೆ.
ಆರೆಸ್ಸೆಸ್ ಬಿಜೆಪಿ ಜೊತೆಗೆ ನಿಲ್ಲಲಿದೆಯೇ ಇಲ್ಲವೇ ಎಂಬುದು ಒಂದು ಪ್ರಶ್ನೆಯಾದರೆ, ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶ ಮಹಾರಾಷ್ಟ್ರದಲ್ಲಿ ಮತದಾನದ ಮೇಲೆ ಯಾವ ಥರದ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಾಗಿದೆ. ಸ್ವಾಭಿಮಾನದ ಚುನಾವಣೆ ಎಂಬ ಮಾತನ್ನು ಉದ್ಧವ್ ಠಾಕ್ರೆ ಈಗ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಅವರದೇ ಆದ ಅಸ್ತಿತ್ವದ ಸವಾಲು ಇದೆ.
ಇನ್ನು ಕಾಂಗ್ರೆಸ್‌ಗೆ ಇರುವ ಭರವಸೆ ಏನು? 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟು ಗೆದ್ದಿದ್ದ ಕಾಂಗ್ರೆಸ್ 2024ರಲ್ಲಿ 13 ಸೀಟು ಗೆದ್ದು ನಂಬರ್ ಒನ್ ಪಕ್ಷವಾಗಿದೆ. ಹಾಗಾಗಿ ಅದು ದೊಡ್ಡ ಭರವಸೆ ಇಟ್ಟುಕೊಂಡಿದೆ.
ವಿದರ್ಭದ 62 ಸೀಟುಗಳಲ್ಲಿ 15ನ್ನು ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ 32 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ. ಮರಾಠಾವಾಡದಲ್ಲಿ ಕಾಂಗ್ರೆಸ್ 8 ಸೀಟುಗಳನ್ನು ಗೆದ್ದಿತ್ತು. ಅಲ್ಲಿಯೂ ಈ ಬಾರಿ ಎರಡು ಪಟ್ಟು ಗೆಲ್ಲುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಉತ್ತರ ಮಹಾರಾಷ್ಟ್ರದಲ್ಲಿ 5ನ್ನು ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ 15ನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ.
ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಕಂಗೆಟ್ಟಿರುವ ಬಿಜೆಪಿ ಪಾಲಿಗೆ ಸ್ಥಿತಿ ಈಗ ಇನ್ನೂ ಕಠಿಣವಾಗಲಿದೆ. ಗ್ರಾಮಾಂತರ ಮಹಾರಾಷ್ಟ್ರದಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳು ‘ಇಂಡಿಯಾ’ ಮೈತ್ರಿಕೂಟದ ಪಾಲಾಗುವ ಸಾಧ್ಯತೆಯಿದೆ. ಇದು ಬಿಜೆಪಿಗೆ ಬಹು ದೊಡ್ಡ ಪೆಟ್ಟು ಕೊಡಲಿದೆ. ಯಾಕೆಂದರೆ ಗ್ರಾಮೀಣ ಮಹಾರಾಷ್ಟ್ರದ ಪಾಲು ನಗರ ಪ್ರದೇಶಕ್ಕಿಂತ ಶೇ.20ರಷ್ಟು ಜಾಸ್ತಿಯಿದೆ.
ಮೇಲ್ವರ್ಗದವರ ಶೇ.40ಕ್ಕೂ ಹೆಚ್ಚು ಮತಗಳು ‘ಇಂಡಿಯಾ’ ಮೈತ್ರಿಕೂಟದ ಪರ ಇರಲಿವೆ. ಮರಾಠಾ ಸಮುದಾಯದ ಶೇ.40ರಷ್ಟು ಪಾಲು ‘ಇಂಡಿಯಾ’ ಮೈತ್ರಿಕೂಟದ ಜೊತೆಗಿದೆ. ಬಡವರ ಮತಗಳು ಶೇ.70ರಷ್ಟು ‘ಇಂಡಿಯಾ’ ಮೈತ್ರಿಯ ಜೊತೆಗಿದ್ದರೆ, ಶೇ.30ರಷ್ಟು ಬಿಜೆಪಿ ಜೊತೆಗಿವೆ. ಹೀಗೆಲ್ಲ ಇರುವಾಗ, ಚುನಾವಣಾ ಆಯೋಗ ಬಿಜೆಪಿಗೆ ಅನುಕೂಲಕರವಾಗುವ ಹಾಗೆ ಮತದಾನದ ದಿನಾಂಕಗಳನ್ನು ಪ್ರಕಟಿಸಿತೆ? ಮಹಾರಾಷ್ಟ್ರದಲ್ಲಿ ಇಡೀ ವಾತಾವರಣವನ್ನು ತನ್ನ ಪರವಾಗಿ ಮಾಡಿಕೊಳ್ಳಲು ಬಿಜೆಪಿ ಒದ್ದಾಡುತ್ತಿದೆ. ಅದಕ್ಕಾಗಿ ಬಿಜೆಪಿಗೆ ಸಮಯ ಬೇಕಿತ್ತು. ಅಂಥ ಅವಕಾಶವನ್ನು ಅದಕ್ಕೆ ಒದಗಿಸುವ ಹಾಗೆ ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಿಸಿತೆ? ಈ ಪ್ರಶ್ನೆಗಳು ಉಳಿಯುತ್ತವೆ.