ಕೇದಾರನಾಥದ ಚಿನ್ನದ ಹಗರಣದಲ್ಲಿ ಯಾರ ಪಾತ್ರವಿದೆ?
ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಆರೋಪಕ್ಕೆ ಉತ್ತರ ನೀಡುವವರು ಯಾರು?
ಅಯೋಧ್ಯೆಯಾಯಿತು, ಬದರೀನಾಥ ಆಯಿತು, ಈಗ ನೋಡಿದರೆ ಕೇದಾರನಾಥ...
ಯಾಕೋ ಹಿಂದೂ ಧಾರ್ಮಿಕ ಕೇಂದ್ರಗಳ ವಿಷಯದಲ್ಲಿ ಬಿಜೆಪಿ ಮತ್ತೆ ಮತ್ತೆ ಮುಗ್ಗರಿಸುತ್ತಲೇ ಇದೆ.
ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕೇದಾರನಾಥ ಧಾಮದಲ್ಲಿ 228 ಕೆಜಿ ಚಿನ್ನ ನಾಪತ್ತೆಯ ಬೃಹತ್ ಹಗರಣ ನಡೆದಿದೆಯೆ?
ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಕೇದಾರನಾಥ ದೇವಾಲಯದಲ್ಲಿ ‘ಚಿನ್ನ ನಾಪತ್ತೆ ಹಗರಣ’ದ ಬಗ್ಗೆ ಆರೋಪ ಮಾಡಿದ್ದಾರೆ.
ದಿಲ್ಲಿಯಲ್ಲಿ ಮತ್ತೊಂದು ಕೇದಾರನಾಥ ದೇವಾಲಯದ ನಿರ್ಮಾಣದ ಸುದ್ದಿಯ ಬಳಿಕ ಉಂಟಾದ ಗದ್ದಲದ ನಡುವೆಯೇ ಅವರ ಈ ಗಂಭೀರ ಆರೋಪ ಬಂದಿದೆ.
ಆದರೆ ದಿಲ್ಲಿಯಲ್ಲಿ ಏಕೆ ಕೇದಾರನಾಥ ಧಾಮದ ಸಾಂಕೇತಿಕ ರೂಪವನ್ನು ನಿರ್ಮಿಸಲಾಗುತ್ತಿದೆ?
ದಿಲ್ಲಿಯಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು.
ಆದರೆ ಅವಿಮುಕ್ತೇಶ್ವರಾನಂದ ಸ್ವಾಮಿ ಆರೋಪದ ಬಗ್ಗೆ ಈಗ ಮೋದಿ ಸರಕಾರ ಏನು ಕ್ರಮ ತೆಗೆದುಕೊಳ್ಳಬಹುದು?
ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. ಈಗ ಇದಕ್ಕೆ ಯಾರು ಹೊಣೆಯೋ ಅವರು ದಿಲ್ಲಿಯಲ್ಲಿ ಕೇದಾರನಾಥವನ್ನು ನಿರ್ಮಿಸುವುದಾಗಿ ಹೇಳುತ್ತಿದ್ದಾರೆ ಎಂದು ಶಂಕರಾಚಾರ್ಯ ಅವರು ನೇರ, ನಿಷ್ಠುರವಾಗಿ ಆರೋಪಿಸಿದ್ದಾರೆ.
ಶಂಕರಾಚಾರ್ಯ ಹಿಂದೂಗಳ ಅತ್ಯುನ್ನತ ಧಾರ್ಮಿಕ ಗುರುಗಳು. ದೇಶದಲ್ಲಿ ಅಂತಹ ಧಾರ್ಮಿಕ ಗುರುಗಳು ಕೇವಲ ನಾಲ್ವರು ಮಾತ್ರ ಇದ್ದಾರೆ. ಅವರೇ ಈಗ ಕೇದಾರನಾಥದಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.
ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದ ಬಗ್ಗೆ ಏಕೆ ಯಾರೂ ಚಕಾರ ಎತ್ತುತ್ತಿಲ್ಲ? ಎಂಬುದು ಅವರ ಪ್ರಶ್ನೆ.
ಅಲ್ಲಿ ಹಗರಣ ಮಾಡಿ ಈಗ ದಿಲ್ಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ?
ಹೀಗೇನಾದರೂ ಆದರೆ ಮತ್ತೊಂದು ಹಗರಣ ನಡೆಯಲಿದೆ ಎಂದಿದ್ದಾರೆ ಶಂಕರಾಚಾರ್ಯ.
ಪವಿತ್ರ ಧಾರ್ಮಿಕ ಕೇಂದ್ರದಲ್ಲಿ ಕೆ.ಜಿ.ಗಟ್ಟಲೆ ಚಿನ್ನ ನಾಪತ್ತೆಯಾಗಿದೆ ಎಂದರೆ ಅದು ಸಣ್ಣ ವಿಚಾರವಲ್ಲ.
ಕೇದಾರನಾಥ ಮಂದಿರ ಸಿಸಿಟಿವಿ ನಿಗಾದಡಿಯೇ ಇರುತ್ತದೆ. ಅದರ ಸಂಪರ್ಕ ಉನ್ನತಾಧಿಕಾರಿಯ ಕಚೇರಿಯಲ್ಲಿರುತ್ತದೆ.
ವರದಿಗಳ ಪ್ರಕಾರ, ಮುಂಬೈ ವ್ಯಾಪಾರಿಯೊಬ್ಬರು ಮಂದಿರಕ್ಕೆ 23.78 ಕೆಜಿ ಚಿನ್ನ ದಾನವಾಗಿ ನೀಡಿದ್ದರು. ಅದು ಇಲ್ಲವಾಗಿದೆ ಎಂಬ ವರದಿಗಳಿದ್ದವು. ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಗ ಸರಕಾರ ಹೇಳಿದ್ದು ಕೂಡ ವರದಿಯಾಗಿತ್ತು.
ಆದರೆ ಅಲ್ಲಿ 228 ಕೆಜಿ ಚಿನ್ನದ ಪ್ರಸ್ತಾಪ ಇರಲಿಲ್ಲ. ಅದನ್ನು ಸಂಚಿನ ಭಾಗವೆಂದು ಕೇದಾರನಾಥ ಮಂದಿರ ಸಮಿತಿ ಹೇಳಿತ್ತು.
125 ಕೆಜಿ ಚಿನ್ನಲೇಪಿತ ಕಲಾಕೃತಿ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಮುಖ್ಯ ಅರ್ಚಕರು ಆರೋಪಿಸಿದ ಬಳಿಕ ಮಂದಿರ ಸಮಿತಿ ಈ ಆರೋಪ ಮಾಡಿತ್ತು.
ಈಗ ನಾಪತ್ತೆಯಾಗಿರುವ ಚಿನ್ನ 23 ಕೆಜಿಯೊ... 228 ಕೆಜಿಯೊ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.
ಕೇದಾರನಾಥ ಧಾಮ ದಿಲ್ಲಿ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ರೌತೇಲ ಹೇಳಿಕೆ ಪ್ರಕಾರ, ದಿಲ್ಲಿಯಲ್ಲಿನದು ಕೇದಾರನಾಥದ ಪ್ರತಿರೂಪ.
ಅಂದರೆ ಧಾಮವಲ್ಲ, ಮಂದಿರದ ಪ್ರತಿರೂಪ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದರು.
ಆದರೆ ಧಾಮಕ್ಕೂ ಮಂದಿರಕ್ಕೂ ಏನು ವ್ಯತ್ಯಾಸ?
ದಿಲ್ಲಿಯಲ್ಲಿ ಕೇದಾರನಾಥ ಮಂದಿರ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಗಳು ನಡೆದಿವೆ.
ಕೇದಾರನಾಥ ಮಂದಿರಕ್ಕೆ ದಿಲ್ಲಿಯಲ್ಲಿ ಹೀಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ.
ದಿಲ್ಲಿಯಲ್ಲಿ ಕೇದಾರದ ಪ್ರತಿರೂಪ ನಿರ್ಮಾಣದ ಉದ್ದೇಶ ಬೇರೆ ಏನೋ ಇದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಹೀಗಾಗಿ ಅರ್ಚಕ ಸಮುದಾಯ ಇದನ್ನು ವಿರೋಧಿಸಲು ಶುರು ಮಾಡಿದೆ.
ಟ್ರಸ್ಟ್ ಪೋಸ್ಟರುಗಳು ಹೇಳುವ ಕಥೆಯೇ ಬೇರೆ. ಅದು ಆಧ್ಯಾತ್ಮಿಕ ಮಾತ್ರವಾಗಿಲ್ಲ, ರಾಜಕೀಯವೂ ಇದೆ.
ಬಿಜೆಪಿಯ ಅನೇಕ ನಾಯಕರುಗಳ ಜೊತೆ ಸಂಬಂಧವಿದೆ.ಇವೆಲ್ಲವೂ ರಾಜಕೀಯ ಕಾರಣಗಳಿಗಾಗಿ ಆಗುತ್ತಿದೆ ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಕೂಡ ಆರೋಪಿಸಿದ್ದಾರೆ.
ಹಿಮಾಲಯದ ತಪ್ಪಲಿನಲ್ಲಿಯೇ ಕೇದಾರವಿದೆ.
ಇದನ್ನು ಶಿವಪುರಾಣದಲ್ಲಿಯೇ ಉಲ್ಲೇಖಿಸಲಾಗಿದೆ.
ಹೀಗಿರುವಾಗ ಕೇದಾರನಾಥ ದೇವಾಲಯವನ್ನು ದಿಲ್ಲಿಗೆ ಯಾಕೆ ಸ್ಥಳಾಂತರಿಸಬೇಕು??
ದಿಲ್ಲಿಯಲ್ಲಿ ಹೇಗೆ ಕೇದಾರನಾಥ ಸ್ಥಾಪನೆ ಸಾಧ್ಯ? ಎಂಬುದು ಅವರ ಪ್ರಶ್ನೆ.
‘‘ಶಿವನಿಗೆ ಹಲವು ನಾಮಗಳಿವೆ. ಯಾವ ಹೆಸರಿನಲ್ಲಿ ಬೇಕಾದರೂ ದೇವಸ್ಥಾನ ನಿರ್ಮಿಸಲಿ. ಆದರೆ ಕೇದಾರನಾಥವನ್ನು ದಿಲ್ಲಿಗೆ ಸ್ಥಳಾಂತರಿಸಲು ಬಿಡುವುದಿಲ್ಲ’’ ಎಂದಿದ್ದಾರೆ ಶಂಕರಾಚಾರ್ಯ.
ಇವೆಲ್ಲವು ರಾಜಕೀಯ ಕಾರಣಗಳಿಗೆ ಆಗುತ್ತಿದೆ ಎಂಬುದು ಸ್ವಾಮೀಜಿಗಳ ಆಕ್ಷೇಪದ ಹಿಂದಿರುವ ತಕರಾರು.
ಈಗ ಅರ್ಚಕ ಸಮುದಾಯದ ವಿರೋಧವೆದ್ದಿದೆ.
ಶಂಕರಾಚಾರ್ಯರ ಹೇಳಿಕೆಯೂ ಬಂದಿದೆ.
ಕೇದಾರನಾಥದಲ್ಲಿ ವಿಧಾನಸಭೆ ಉಪಚುನಾವಣೆ ನಡೆಯುವುದಿದೆ. ಈ ವಿವಾದ ಉಪಚುನಾವಣೆ ಜೊತೆಗೆ ಬೆಸೆದುಕೊಂಡಿದ್ದಾದಲ್ಲಿ, ದಿಲ್ಲಿಯಲ್ಲಿ ಕೇದಾರನಾಥ ಭೂಮಿಪೂಜೆ ಕೂಡ ಉಪಚುನಾವಣೆ ಜೊತೆ ಸಂಬಂಧ ಹೊಂದಿರಬಹುದಲ್ಲವೆ? ಎಂಬ ಅನುಮಾನವೂ ಮೂಡಿದೆ.
ಮೋದಿ ಸರಕಾರ ಹಾಗೂ ಬಿಜೆಪಿ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಹೇಗೆ ಬೇಕಾದರೂ, ಎಷ್ಟು ಬೇಕಾದರೂ ಬಳಸಿಕೊಳ್ಳುತ್ತದೆ ಎಂಬುದು ಸ್ಪಷ್ಟ.
ಅಯೋಧ್ಯೆ, ರಾಮ ಮಂದಿರ ವಿಚಾರದಲ್ಲಿ ಅದು ಹೇಗೆ ನಡೆದುಕೊಂಡಿತು ಎಂಬುದನ್ನು ಇಡೀ ದೇಶವೇ ನೋಡಿದೆ.
ಅದಕ್ಕೆ ತಕ್ಕ ಪಾಠವನ್ನೂ ಅಲ್ಲಿನ ಜನ ಬಿಜೆಪಿಗೆ ಕಲಿಸಿದ್ದಾರೆ. ಇಲ್ಲಿಯೂ ಜನರೇ ಪಾಠ ಕಲಿಸಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.