ಮಾಧ್ಯಮಗಳ ಇಂದಿನ ಸ್ಥಿತಿಗೆ ಕಾರಣಕರ್ತರು ಯಾರು?
ಪ್ರಧಾನಿಯಾಗಿ ಒಂದೇ ಒಂದು ಪತ್ರಿಕಾ ಗೋಷ್ಠಿ ಯಾಕೆ ನಡೆಸಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.
ಆಜ್‌ತಕ್ ಬಳಗಕ್ಕೆ ನೀಡಿದ ಸಂದರ್ಶನದಲ್ಲಿ ಈ ಪ್ರಶ್ನೆಗೆ ಉತ್ತರಿಸುತ್ತಾ ಮಾಧ್ಯಮಗಳ ಅಗತ್ಯವೇ ಇಲ್ಲ ಎಂಬಂತೆ ಮಾತಾಡಿದ್ದಾರೆ.
ವಿಪರ್ಯಾಸ ಅಂದರೆ ಆಜ್‌ತಕ್‌ನ ನಾಲ್ವರು ಸಂಪಾದಕರು ಪ್ರಧಾನಿ ಪತ್ರಿಕಾ ಗೋಷ್ಠಿ ಮಾಡುವ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಿರುವಾಗ ಕೂತು ನಗಾಡುತ್ತಿದ್ದರು, ಅವರು ಹೇಳಿದ್ದಕ್ಕೆಲ್ಲ ಹೌದೌದು ಎಂಬಂತೆ ತಲೆಯಾಡಿಸುತ್ತಿದ್ದರು.
ಪತ್ರಿಕಾ ಗೋಷ್ಠಿ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ ಮೂರು ವಿಷಯಗಳನ್ನು ಹೇಳಿದ್ದಾರೆ.
ಒಂದು-ನಾನು ಸಂಸತ್ತಿಗೆ ಉತ್ತರದಾಯಿಯೇ ಹೊರತು ಮಾಧ್ಯಮಗಳಿಗಲ್ಲ.
ಎರಡು-ಮಾಧ್ಯಮಗಳು ಈಗ ಮೊದಲಿನ ಹಾಗಿಲ್ಲ. ಬದಲಾಗಿವೆ.
ಮೂರು-ಈಗ ಸಂವಹನಕ್ಕೆ ಏಕಮುಖ ಮಾರ್ಗ ಅಲ್ಲ, ಅದಕ್ಕೆ ಈಗ ಎರಡು ಮಾರ್ಗಗಳಿವೆ. ಜನರೂ ಮಾಧ್ಯಮಗಳಿಲ್ಲದೆಯೂ ತಮ್ಮ ಧ್ವನಿ ಎತ್ತಬಹುದು.
ಹಾಗಾದರೆ ಈ ದೇಶದ ಸಂಸತ್ತಿಗೆ ಉತ್ತರದಾಯಿಯಾಗಿ ನಡೆದುಕೊಂಡಿದ್ದಾರೆಯೇ ಪ್ರಧಾನಿ? ಸಂಸತ್ತಿನ ನೀತಿ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅವರು ಪಾಲಿಸಿದ್ದಾರೆಯೇ?
ಪ್ರಧಾನಿಯಾಗಿ ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆಗೆ ಬೇಕಾದ ವಾತಾವರಣವನ್ನು ಅವರು ಈ ಹತ್ತು ವರ್ಷಗಳಲ್ಲಿ ರೂಪಿಸಿದ್ದಾರೆಯೇ? ಕಳೆದ ಐದು ವರ್ಷಗಳಲ್ಲಿ ಲೋಕಸಭೆಯ ಉಪ ಸ್ಪೀಕರ್ ನೇಮಕ ಯಾಕೆ ಆಗಲೇ ಇಲ್ಲ?
ಯಾಕೆ ಅಷ್ಟೊಂದು ಮಹತ್ವದ ಮಸೂದೆಗಳು ಯಾವುದೇ ಚರ್ಚೆಯೇ ಇಲ್ಲದೆ ಪಾಸಾದವು?
ಈ ಸರಕಾರದ ಅವಧಿಯಲ್ಲೇ ದಾಖಲೆ ಸಂಖ್ಯೆಯಲ್ಲಿ ಸಂಸದರು ಯಾಕೆ ಅಮಾನತಾದರು?
ಯಾಕೆ ಸಂಸತ್ತಿನ ಯಜಮಾನರಾದ ರಾಷ್ಟ್ರಪತಿಯವರನ್ನೇ ನೂತನ ಸಂಸತ್ತಿನ ಉದ್ಘಾಟನೆಗೆ ಆಹ್ವಾನಿಸಲಿಲ್ಲ?
ಇನ್ನು ಮಾಧ್ಯಮಗಳು ಮೊದಲಿನ ಹಾಗಿಲ್ಲ ಎಂಬ ಬಗ್ಗೆ.
ಮಾಧ್ಯಮಗಳನ್ನು ಈ ಪರಿ ಬದಲಾಯಿಸಿದ್ದು ಯಾರು ?
ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ಮಾಧ್ಯಮಗಳ ಗತಿ ಏನಾಗಿದೆ ಈ ದೇಶದಲ್ಲಿ? ಸತ್ಯ ಹೇಳಿದ ಪತ್ರಕರ್ತರ ಗತಿ ಏನಾಗಿದೆ ಇಲ್ಲಿ? ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ನಮ್ಮ ದೇಶ ಎಲ್ಲಿಗೆ ತಲುಪಿದೆ? ಎಂತಹ ಪ್ರಶ್ನೆಗಳನ್ನು ಕೇಳುತ್ತಿವೆ ಇಂದು ಈ ದೇಶದ ಮಾಧ್ಯಮಗಳು? ಪ್ರಶ್ನೆ ಕೇಳುವ, ಅಭಿಪ್ರಾಯ ಹೇಳುವ ವಾತಾವರಣ ಎಲ್ಲಾದರೂ ನಿರ್ಮಾಣ ಮಾಡಿದ್ದಾರೆಯೇ ಪ್ರಧಾನಿ ಮೋದಿ?
ಸಂಸತ್ತಿಗೆ ಉತ್ತರದಾಯಿತ್ವದ ವಿಚಾರವಾಗಿ ಹೇಳುವಾಗ, 17ನೇ ಲೋಕಸಭೆ ಹೇಗೆ ಕಾರ್ಯನಿರ್ವಹಿಸಿತು ಎಂಬ ಪ್ರಶ್ನೆ ಏಳುತ್ತದೆ.
ಅಲ್ಲಿ ಮೂರನೇ ಒಂದು ಭಾಗದಷ್ಟು ಮಸೂದೆಗಳು ಒಂದು ಗಂಟೆಯೊಳಗೆ ಅಂಗೀಕರಿಸಲ್ಪಟ್ಟವು. ದಾಖಲೆಯ ಮಟ್ಟದಲ್ಲಿ ಸಂಸದರ ಅಮಾನತುಗಳು ನಡೆದವು. ಐದು ವರ್ಷಗಳಲ್ಲಿ 274 ಅಧಿವೇಶನಗಳು ಲೋಕಸಭೆಯಲ್ಲಿ ನಡೆದವು. ಇದು ಪೂರ್ಣಾವಧಿಯ ಲೋಕಸಭೆಗೆ ಅತಿ ಕಡಿಮೆ. ಶೇ.16ರಷ್ಟು ಮಸೂದೆಗಳನ್ನು ಮಾತ್ರವೇ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಯಿತು.
ಆದರೆ ಯುಪಿಎ ಮೊದಲ ಮತ್ತು ಎರಡನೇ ಅವಧಿ ಯಲ್ಲಿ ಕ್ರಮವಾಗಿ ಶೇ.60 ಮತ್ತು ಶೇ.71ಕ್ಕಿಂತ ಹೆಚ್ಚು ಮಸೂದೆಗಳನ್ನು ಸ್ಥಾಯಿ ಸಮಿತಿಗಳಿಗೆ ಉಲ್ಲೇಖಿಸಲಾಗಿತ್ತು.
17ನೇ ಲೋಕಸಭೆಯ ಅವಧಿಯಲ್ಲಿ ಚರ್ಚೆ ಮತ್ತು ಮಸೂದೆಗಳ ಅಂಗೀಕಾರಕ್ಕೆ ತೆಗೆದುಕೊಂಡ ಸಮಯವೆಷ್ಟು ಎಂದು ನೋಡಿದರೆ ಗಮನಾರ್ಹ ಕುಸಿತ ಕಂಡಿದೆ.
2019ರ ಬಜೆಟ್ ಅಧಿವೇಶನದಲ್ಲಿ ಒಟ್ಟು ಅವಧಿ 281 ಗಂಟೆಗಳಾಗಿದ್ದು, ಅದರಲ್ಲಿ 125 ಗಂಟೆಗಳನ್ನು ಮಸೂದೆಗಳ ಮೇಲಿನ ಚರ್ಚೆಗೆ ತೆಗೆದುಕೊಳ್ಳಲಾಗಿದೆ.
2023ರ ಚಳಿಗಾಲದ ಅಧಿವೇಶನದ ಒಟ್ಟು ಸಮಯ ಕೇವಲ 62 ಗಂಟೆಗಳು ಮತ್ತು ಅದರಲ್ಲಿ ಮಸೂದೆಗಳ ಮೇಲಿನ ಚರ್ಚೆಗೆ ತೆಗೆದುಕೊಂಡದ್ದು 37 ಗಂಟೆ.
ಈ ಲೋಕಸಭೆಯ 15 ಅಧಿವೇಶನಗಳಲ್ಲಿ ಕೇವಲ ನಾಲ್ಕು ಅಧಿವೇಶನಗಳು ಮಾತ್ರವೇ ಮಸೂದೆಗಳ ಮೇಲಿನ ಚರ್ಚೆ ಮತ್ತು ಅಂಗೀಕಾರಕ್ಕೆ 35 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡವು.
2023ರ ಬಜೆಟ್ ಅಧಿವೇಶನದಲ್ಲಂತೂ ಮಸೂದೆ ಮೇಲಿನ ಚರ್ಚೆ ಮತ್ತು ಅಂಗೀಕಾರ ಒಂದೇ ಗಂಟೆಯಲ್ಲಿ ಮುಗಿದುಹೋದ ಚಮತ್ಕಾರವೂ ನಡೆಯಿತು.
17ನೇ ಲೋಕಸಭೆಯಲ್ಲಿ ಒಟ್ಟು 221 ಮಸೂದೆಗಳು ಅಂಗೀಕಾರಗೊಂಡವು.
ಆದರೆ ಅವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಸೂದೆಗಳು ಪಾಸಾದದ್ದು ಒಂದು ಗಂಟೆಗಿಂತಲೂ ಕಡಿಮೆ ಸಮಯದ ಚರ್ಚೆಯೊಂದಿಗೆ.
17ನೇ ಲೋಕಸಭೆಯಲ್ಲಿ ಕಂಡ ಅತಿ ದೊಡ್ಡ ಪ್ರಜಾಪ್ರಭುತ್ವ ವಿರೋಧಿ ನಡೆಯೆಂದರೆ, ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಸದಸ್ಯರ ಅಮಾನತು ನಡೆದದ್ದು.
ಅಮಾನತುಗೊಂಡ ಒಟ್ಟು ಸಂಸದರು 146.ಲೋಕಸಭೆಯಿಂದ ಅಮಾನತುಗೊಂಡವರ ಸಂಖ್ಯೆಯೇ 100.
ಒಂದೇ ದಿನದಲ್ಲಿ 78 ಸಂಸದರ ಅಮಾನತು ಕೂಡ ಮೋದಿ ಅವಧಿಯ ದಾಖಲೆಯಾಯಿತು. ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಸಂಸದರ ಅಮಾನತು ಮಾಡಿರುವುದು ಸಂಸತ್ ಇತಿಹಾಸದಲ್ಲೇ ಮೊದಲಾಗಿತ್ತು. ಹಿಂದಿನ ಲೋಕಸಭೆಯಲ್ಲಿ 81 ಸದಸ್ಯರ ಅಮಾನತಾಗಿತ್ತು.
ಸಂಸದರ ಅಮಾನತು ಪ್ರಕರಣ, ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಮೋದಿ ನೇತೃತ್ವದ ನಿರಂಕುಶ ಸರಕಾರ ಪ್ರಜಾಪ್ರಭುತ್ವದ ಎಲ್ಲಾ ಶಿಷ್ಟಾಚಾರಗಳನ್ನು ಕಸದ ಬುಟ್ಟಿಗೆ ಎಸೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು.
ಹೀಗೆ ದಾಖಲೆ ಮಟ್ಟದಲ್ಲಿ ಸಂಸದರ ಅಮಾನತು ಮಾಡುವ ಮೂಲಕ ಸಂಸತ್ತಿನಲ್ಲಿ ವಿಪಕ್ಷಗಳೇ ಇಲ್ಲದಂತೆ ಮಾಡಲಾಗಿತ್ತು.
ಅಂದಮೇಲೆ ಇದೆಂಥ ರೀತಿಯ ಪ್ರಧಾನಿಯ ಉತ್ತರದಾಯಿತ್ವ?
ಪ್ರಜಾಸತ್ತಾತ್ಮಕವಲ್ಲದ ಮತ್ತೊಂದು ನಿದರ್ಶನ, ಈ ಲೋಕಸಭೆ ಡೆಪ್ಯೂಟಿ ಸ್ಪೀಕರ್ ಇಲ್ಲದೆಯೇ ನಡೆದು ಮುಗಿದು ಹೋಯಿತು. 17ನೇ ಲೋಕಸಭೆಯು ಉಪ ಸ್ಪೀಕರ್ ಇಲ್ಲದೆ ಅವಧಿ ಮುಗಿಸಿದ ಮೊದಲನೇ ಲೋಕಸಭೆಯಾಯಿತು.
ಲೋಕಸಭೆ ಸಾಧ್ಯವಿರುವಷ್ಟೂ ಬೇಗ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್‌ಗಳನ್ನು ಆಯ್ಕೆ ಮಾಡಬೇಕೆಂದು ಸಂವಿಧಾನದ 93ನೇ ವಿಧಿ ಹೇಳುತ್ತದೆ.
ಹುದ್ದೆ ಖಾಲಿಯಾದಾಗ ಸದನ ಇನ್ನೊಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ಈ ಲೋಕಸಭೆಯಲ್ಲಿ ಅದು ಆಗಲೇ ಇಲ್ಲ. ಈ ವಿಚಾರ ಕಳೆದ ವರ್ಷ ಸುಪ್ರೀಂ ಕೋರ್ಟ್‌ವರೆಗೂ ಹೋಯಿತು. ವಿಚಾರಣೆ ನಡೆಸಿದ್ದ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
93 ಮತ್ತು 178ನೇ ವಿಧಿಗಳನ್ನು ಉಲ್ಲೇಖಿಸಿದ ಕೋರ್ಟ್, ಡೆಪ್ಯೂಟಿ ಸ್ಪೀಕರ್ ಆಯ್ಕೆ ಕಡ್ಡಾಯ ಎಂಬುದನ್ನು ಕೇಂದ್ರ ಸರಕಾರಕ್ಕೆ ನೆನಪಿಸಿತ್ತು ಮತ್ತು ಆಯ್ಕೆ ಮಾಡುವಲ್ಲಿ ವಿಫಲವಾದ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು.
ಉಪಸಭಾಪತಿಯನ್ನು ನೇಮಕ ಮಾಡದಿರುವುದು ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧ ಎಂಬುದು ಸ್ಪಷ್ಟ.
ಸಾಂವಿಧಾನಿಕವಾದ ನಡವಳಿಕೆ ಮತ್ತು ಸಂಪ್ರದಾಯಕ್ಕೆ ಮೋದಿ ಬೆಲೆ ಕೊಡಲಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಇದ್ದುದು.
ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಾಗಿ ದ್ದವರು ಪ್ರಧಾನಿಯಲ್ಲ, ರಾಷ್ಟ್ರಪತಿ ಎಂದೇ ಪರಿಣಿತರು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ, ಮೋದಿ ಸರಕಾರ ಮಾತ್ರ ರಾಷ್ಟ್ರಪತಿಯವರನ್ನು ಕಾರ್ಯಕ್ರಮಕ್ಕೇ ಆಹ್ವಾನಿಸಲಿಲ್ಲ.
ಅದನ್ನು ವಿರೋಧಿಸಿ 19 ವಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿ ದವು. ರಾಷ್ಟ್ರಪತಿಯವರನ್ನು ದೂರ ಇಟ್ಟು, ಸಂಸತ್ ಭವನವನ್ನು ತಾವೇ ಉದ್ಘಾಟಿಸುವ ಮೋದಿ ನಿರ್ಧಾರ ಘೋರ ಅವಮಾನ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ ಎಂದು ವಿಪಕ್ಷಗಳು ಟೀಕಿಸಿದ್ದವು.
ಸಂಸತ್ತಿನೊಂದಿಗೆ ರಾಷ್ಟ್ರಪತಿಯವರದು ಅವಿನಾಭಾವ ಬೆಸುಗೆ. ಅವರೇ ಸಂಸತ್ತಿನ ಯಜಮಾನರು. ಆದರೆ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸದೆ ದೂರ ಇಡಲಾಯಿತು.
ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ವಿಪಕ್ಷಗಳ ಸಂಸದರನ್ನು ಏನೇನೋ ನೆಪ ಮಾಡಿ ಸಂಸತ್ತಿನಿಂದ ಅನರ್ಹಗೊಳಿಸಿಬಿಡುವ ಕೆಲಸವೂ ಆಗಿ ಹೋಯಿತು.
ಪ್ರಧಾನಿ ಮೋದಿ ಎಂದೂ ಸಂಸತ್ತಿಗೆ ಉತ್ತರ ಕೊಡುವುದಕ್ಕೆ, ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆಗೆ ಬೇಕಾದ ವಾತಾವರಣ ಕಲ್ಪಿಸುವುದಕ್ಕೆ ಪ್ರಾಮುಖ್ಯತೆ ಕೊಡಲೇ ಇಲ್ಲ. ಹಾಗಾಗಿ ನಾನು ಸಂಸತ್ತಿಗೆ ಉತ್ತರದಾಯಿ ಎಂಬುದು ಅವರ ಪೊಳ್ಳು ಸಮರ್ಥನೆ.
ಇನ್ನು ಮಾಧ್ಯಮಗಳ ವಿಚಾರಕ್ಕೆ ಬಂದರೆ,
ದೇಶದಲ್ಲಿ ಸ್ವತಂತ್ರ ಪತ್ರಕರ್ತರು ಅತ್ಯಂತ ಅಪಾಯ ಎದುರಿಸುತ್ತಿದ್ದಾರೆ ಎಂಬುದು ಗೊತ್ತೇ ಇರುವ ವಿಚಾರ.
ಮೋದಿ ಆಡಳಿತದಲ್ಲಿ ಸರಕಾರವನ್ನು ಪ್ರಶ್ನಿಸುವ, ಸರಕಾರಕ್ಕೆ ಪ್ರತಿಕೂಲವಾದ ಸತ್ಯಗಳನ್ನು ಬಯಲು ಮಾಡುವ ಪತ್ರಕರ್ತರನ್ನೆಲ್ಲ ದೇಶದ್ರೋಹದ, ಭಯೋತ್ಪಾದನೆಯ ಕೇಸು ಹಾಕಿ ಜೈಲಿಗೆ ಅಟ್ಟುವ ದಬ್ಬಾಳಿಕೆಯೂ ರಾಜಾರೋಷವಾಗಿಯೇ ನಡೆಯುತ್ತಿದೆ. ಪತ್ರಕರ್ತರ ಮೇಲಿನ ಹಲ್ಲೆ, ಪ್ರಾಣ ಬೆದರಿಕೆಗಳಿಗೂ ಕಡಿಮೆಯಿಲ್ಲ.
ಇದೆಲ್ಲವನ್ನೂ ಬಿಂಬಿಸುವ ಜಾಗತಿಕ ಪತ್ರಿಕಾ ಸೂಚ್ಯಂಕ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂತಹ ಅವನತಿಗೆ ಮುಟ್ಟಿದೆಯೆಂಬುದನ್ನು ಹೇಳುತ್ತದೆ.
ಇಂದು ಪತ್ರಕರ್ತರೆದುರು ಎಂತಹ ನಿರಾಶಾದಾಯಕ ಮತ್ತು ಅಸಹಾಯಕ ಸನ್ನಿವೇಶವಿದೆ ಎಂಬ ಸತ್ಯ ತಲ್ಲಣ ಹುಟ್ಟಿಸುತ್ತದೆ.
ಇವತ್ತಿನ ರಾಜಕಾರಣ, ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವಾಗಿರುವ ಪತ್ರಿಕೋದ್ಯಮವನ್ನು ಎಷ್ಟು ಊನಗೊಳಿಸಿದೆ ಎಂಬುದು ಬಹಳ ಅಪಾಯಕಾರಿ ವಾಸ್ತವವೂ ಹೌದು.
ಮೋದಿ ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರು ಒಂದೆಡೆ ಸರಕಾರದಿಂದ ಭೀತಿ ಎದುರಿಸಬೇಕಾಗಿ ಬಂದರೆ, ಇನ್ನೊಂದೆಡೆ ತಾವು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲೂ ಕೆಲಸ ಕಳೆದುಕೊಳ್ಳುವ ಅಥವಾ ತಾರತಮ್ಯಕ್ಕೆ ಒಳಗಾಗುವ ಆತಂಕದ ಸ್ಥಿತಿಯಿದೆ. ಅದಕ್ಕೆ ಕಾರಣ, ಮಾಧ್ಯಮಗಳ ಒಡೆತನ ಹೊಂದಿರುವವರೇ ಮೋದಿಯ ಬಂಟರಾಗಿರುವುದು.
ಇನ್ನು, ಪ್ರಶ್ನೆ ಕೇಳುವ ಮತ್ತು ಅಭಿಪ್ರಾಯ ಹೇಳುವ ಎರಡು ಮಾರ್ಗಗಳ ಬಗ್ಗೆ ಮೋದಿ ಹೇಳುತ್ತಿರುವುದಂತೂ ದೊಡ್ಡ ವಿಪರ್ಯಾಸ. ಇಲ್ಲಿ ಪ್ರಶ್ನೆ ಕೇಳುವ ಸ್ಥಿತಿಯೂ ಇಲ್ಲ, ಅಭಿಪ್ರಾಯ ಹೇಳುವ ಸ್ಥಿತಿಯೂ ಇಲ್ಲ. ಇರುವುದೇನಿದ್ದರೂ ಮೋದಿ ಏನು ಹೇಳುತ್ತಾರೊ ಅದನ್ನು ಕೇಳಿಕೊಂಡಿರಬೇಕಾದ ಸ್ಥಿತಿ.
ದೇಶದಲ್ಲಿ ಅಂತಹದೊಂದು ಭೀತಿಯ ವಾತಾವರಣವನ್ನು ಸೃಷ್ಟಿಸಿರುವವರೇ, ಸಂವಹನಕ್ಕೆ ಎರಡು ಮಾರ್ಗಗಳಿವೆ ಎನ್ನುತ್ತಿರುವುದು ಹಾಸ್ಯಾಸ್ಪದ.
ಈ ಕೆಲವು ದಿನಗಳಲ್ಲಿ ಮೋದಿಯ ಸಾಲು ಸಾಲು ಸಂದರ್ಶನಗಳು ಗೋದಿ ಮೀಡಿಯಾಗಳಲ್ಲಿ ಬಂದಿರುವುದನ್ನು ಹಲವರು ಗಮನಿಸಿರಬಹುದು.
ಹೇಗಿದ್ದವು ಆ ಸಂದರ್ಶನಗಳು?
ಅಲ್ಲಿ, 10 ವರ್ಷ ದೇಶವನ್ನಾಳಿದ ಪ್ರಧಾನಿಗೆ ಎದುರಾಗಲೇಬೇಕಿದ್ದ ಪ್ರಶ್ನೆಗಳೇ ಇರಲಿಲ್ಲ.
ಬೆಲೆ ಏರಿಕೆ, ನಿರುದ್ಯೋಗ ಕುರಿತ ಪ್ರಶ್ನೆ ಮುಖ್ಯವಾಗಿತ್ತು. ಅದು ಬರಲೇ ಇಲ್ಲ. ಅಲ್ಪಸಂಖ್ಯಾತರ ವಿಚಾರದಲ್ಲಿ ದ್ವೇಷ ಹರಡಲಾಗುತ್ತಿರುವ ನಡೆಗಳ ಬಗ್ಗೆ ಪ್ರಶ್ನೆ ಬರಬೇಕಿತ್ತು, ಬರಲಿಲ್ಲ. ಸಾಂವಿಧಾನಿಕ ಹಕ್ಕುಗಳ ರಕ್ಷಣೆ ವಿಚಾರವಾಗಿ ಮೋದಿ ಸರಕಾರ ಮಾಡಿದ್ದೇನು ಎಂಬ ಪ್ರಶ್ನೆ ಬರಬೇಕಿತ್ತು. ಬರಲಿಲ್ಲ. ಮೋದಿ ಸರಕಾರ ಮತ್ತೆ ಮತ್ತೆ ಕೊಚ್ಚಿಕೊಳ್ಳುವ ಅತಿ ದೊಡ್ಡ ಆರ್ಥಿಕತೆಯಿಂದ ಜನಸಾಮಾನ್ಯರಿಗೆ ಏನು ಸಿಗುತ್ತದೆ ಎಂಬ ಪ್ರಶ್ನೆಯನ್ನೂ ಯಾರೂ ಕೇಳಲಿಲ್ಲ. ಮೋದಿ ಹೇಳುವ ಸುಳ್ಳುಗಳ ಬಗ್ಗೆ ಪ್ರಶ್ನೆಗಳು ಸಿಡಿಯಲೇಬೇಕಿತ್ತು, ಸಿಡಿಯಲಿಲ್ಲ.
ಯಾಕೆ ಹೀಗೆ? ಯಾಕೆಂದರೆ ಕೇಳುವ ಸ್ಥಿತಿಯೇ ಇಲ್ಲ ಮತ್ತು ಮೋದಿಯನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಮೀಡಿಯಾಗಳೂ ಇಲ್ಲ.
ಇನ್ನು ಅಭಿಪ್ರಾಯ ಹೇಳುವ ವಿಚಾರ.
ಯಾವತ್ತಾದರೂ ಮೋದಿ ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸಿದ್ದಾರೆಯೇ ಎಂದು ಕೇಳಿಕೊಂಡರೆ ಇಲ್ಲವೆಂಬುದೇ ಉತ್ತರ.
ಅವರೆಂದೂ ಸಂವಾದವನ್ನು ಬಯಸಿದವರಲ್ಲ. ಭಿನ್ನ ನಿಲುವನ್ನು ಗೌರವಿಸಿದವರಲ್ಲ. ಪ್ರತಿಭಟನೆಯನ್ನು ಸಹಿಸಿದವರಲ್ಲ. ಪ್ರತಿಭಟಿಸಿದ ರೈತರನ್ನೂ ಭಯೋತ್ಪಾದಕರು ಎನ್ನುವಲ್ಲಿಯವರೆಗೆ ಜರೆಯಲಾಯಿತು ಎಂಬುದನ್ನು ದೇಶ ಕಂಡಿದೆ.
10 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಮಾಡದ ವಿಚಾರವಾಗಿ ಒಂದು ಟೊಳ್ಳು ಸಮರ್ಥನೆಯನ್ನು ಇಷ್ಟು ದಿನಗಳ ಬಳಿಕ ಕೊಟ್ಟುಕೊಂಡಿದ್ದಾರೆ ಮೋದಿ.
ಮತ್ತು ಆ ಸಮರ್ಥನೆಯ ತುಂಬಾ ಇರುವುದು ಪೊಳ್ಳು, ಜೊಳ್ಳು ಮತ್ತು ಸುಳ್ಳು ಮಾತ್ರ.