ಯಾರಿಗೆ ಒಲಿಯಲಿದೆ ಕಲಬುರಗಿ?
ಸರಣಿ- 25
ಕಲಬುರಗಿ ಲೋಕಸಭಾ ಕ್ಷೇತ್ರದ
ಕೆಲವು ಪ್ರಾಥಮಿಕ ಮಾಹಿತಿ:
ಎಸ್ಸಿ ಮೀಸಲು ಕ್ಷೇತ್ರವಾದ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.54.1
ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಒಟ್ಟು ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಅಫ್ಝಲ್ಪುರ, ಜೇವರ್ಗಿ, ಗುರುಮಿಟ್ಕಲ್, ಚಿತ್ತಾಪುರ, ಸೇಡಂ, ಕಲಬುರಗಿ ಗ್ರಾಮಾಂತರ, ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ.
ಇವುಗಳಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಜೆಡಿಎಸ್ ಶಾಸಕರಿ ದ್ದಾರೆ.
ಈ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 22,59,162. ಅವರಲ್ಲಿ ಪುರುಷರು 11,61,800, ಮಹಿಳೆಯರು 10,97,362.
ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರ್ಣಾಯಕರು ಇವರಾದರೂ ಮತ ವಿಭಜನೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಲಿಂಗಾಯತರಲ್ಲದೆ, ಕುರುಬರು ಹಾಗೂ ಕಬ್ಬಲಿಗರ ಮತಗಳೂ ಪ್ರಮುಖ. ಇವರು ಯಾರ ಕಡೆ ಹೆಚ್ಚಿಗೆ ವಾಲುತ್ತಾರೆಯೋ ಅವರಿಗೆ ಲಾಭವಾಗುವ ನಿರೀಕ್ಷೆಯಿದೆ.
ಬಿಜೆಪಿ ಲಿಂಗಾಯತ ಹಾಗೂ ಬಂಜಾರ ಸಮುದಾಯವನ್ನು ನೆಚ್ಚಿಕೊಂಡರೆ, ಕಾಂಗ್ರೆಸ್ ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದವರನ್ನು ನೆಚ್ಚಿಕೊಂಡಿದೆ.
ಹಿಂದಿನ ಚುನಾವಣೆಗಳ
ಫಲಿತಾಂಶ:
2014 ಮತ್ತು 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ಗೆಲುವು ಸಾಧಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿನ
ಮತ ಹಂಚಿಕೆ ವಿವರ:
2009 ಕಾಂಗ್ರೆಸ್‌ಗೆ ಶೇ.45.43,
ಬಿಜೆಪಿಗೆ ಶೇ.43.67
2014 ಕಾಂಗ್ರೆಸ್‌ಗೆ ಶೇ.50.82,
ಬಿಜೆಪಿಗೆ ಶೇ.43.33
2019 ಬಿಜೆಪಿಗೆ ಶೇ.52.14,
ಕಾಂಗ್ರೆಸ್‌ಗೆ ಶೇ. 44.12.
1952ರಿಂದ ಎರಡು ಉಪಚುನಾವಣೆಗಳೂ ಸೇರಿ 19 ಚುನಾವಣೆಗಳು ನಡೆದಿವೆ. 16 ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷವೊಂದೇ ಗೆದ್ದಿದೆ.
ಆರಂಭದಿಂದ 1991ರ ಚುನಾವಣೆ ವರೆಗೆ ಸತತ ಗೆಲುವು ಕಂಡಿದ್ದ ಕಾಂಗ್ರೆಸ್ ಮೊದಲ ಬಾರಿಗೆ 1996ರಲ್ಲಿ ಜೆಡಿಎಸ್ ಎದುರು ಮಣಿಯಿತು. ಆಗ ಜೆಡಿಎಸ್‌ನಿಂದ ಖಮರುಲ್ ಇಸ್ಲಾಂ ಗೆದ್ದಿದ್ದರು.
ಅದರ ನಂತರದ ಚುನಾವಣೆಯಲ್ಲಿ(1998) ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಂಡಿತು. ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಗೆಲುವು ಸಾಧಿಸಿದ್ದರು.
ಆನಂತರ ಮತ್ತೆ ಸತತ ನಾಲ್ಕು ಅವಧಿಗೆ ಕಾಂಗ್ರೆಸ್ ಗೆದ್ದಿತು. 1999, 2004ರಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅಹಮದ್ ಸರಡಗಿ ಗೆದ್ದರೆ, 2009, 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರ ಮತ್ತೆ ಬಿಜೆಪಿಯ ಪಾಲಾಯಿತು. ಬಿಜೆಪಿಯ ಉಮೇಶ್ ಜಾಧವ್ ಹಾಲಿ ಸಂಸದರು.
2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ಖರ್ಗೆ ಪಾತ್ರ:
ಈ ಸಲವೂ ಖರ್ಗೆ ಸುತ್ತಲೇ ಸ್ಥಳೀಯ ರಾಜಕಾರಣ ಸುತ್ತುತ್ತಿದೆ. ಸತತ 9 ಸಲ ವಿಧಾನಸಭೆ, ಎರಡು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ಖರ್ಗೆ, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸೋಲು ಅನುಭವಿಸಿದ್ದರು.
ಬಳಿಕ ರಾಜ್ಯಸಭಾ ಸದಸ್ಯರಾದ ಅವರು ವಿಪಕ್ಷ ನಾಯಕರಾದರು. ಪ್ರಸಕ್ತ ಎಐಸಿಸಿ ಅಧ್ಯಕ್ಷರಾಗಿರುವ ಅವರು ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ವನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಹೀಗಾಗಿ ಅವರು ಈ ಬಾರಿ ಸ್ಪರ್ಧಿಸುತ್ತಾರೆಯೇ? ಇಲ್ಲವೇ ಅವರ ಕುಟುಂಬ ಸದಸ್ಯರು ಕಣಕ್ಕಿಳಿಯುತ್ತಾರೆಯೇ ಅಥವಾ ಬೇರೆಯವರು ಅಭ್ಯರ್ಥಿಯಾಗುತ್ತಾರೆಯೇ ಎನ್ನುವ ಕುತೂಹಲ ಇದೆ.
ಇನ್ನು ಖರ್ಗೆ ಸ್ಪರ್ಧೆಗೆ ನಿರಾಕರಿಸಿದರೆ, ಆರ್‌ಕೆ ಎಂದೇ ಗುರುತಿಸಲ್ಪಡುವ ಅವರ ಅಳಿಯ ರಾಧಾಕೃಷ್ಣ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನೇರವಾಗಿ ರಾಜಕೀಯ ಕ್ಷೇತ್ರದಲ್ಲಿರದಿದ್ದರೂ ರಾಜಕೀಯದ ಎಲ್ಲ ಆಳ, ಅಗಲವನ್ನು ಕಂಡವರು. ಹೀಗಾಗಿ ಅವರ ಹೆಸರಿಗೆ ಒಮ್ಮತ ಮೂಡುತ್ತದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಮತ್ತೊಂದೆಡೆ, ಖರ್ಗೆ ಕಣಕ್ಕಿಳಿದರೆ ಗೆಲುವು ಪಕ್ಕಾ ಎಂದು ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾದರೆ ಕೊನೆ ಘಳಿಗೆಯಲ್ಲಿ ಅವರು ಅಭ್ಯರ್ಥಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನಲಾಗುತ್ತಿದೆ.
ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ಗೆದ್ದುಬೀಗುವ ಉತ್ಸಾಹದಲ್ಲಿದೆ. ಹೈಕಮಾಂಡ್ ಹೇಳಿದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೂಡ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 858 ಮತಗಳ ಅಂತರದಿಂದ ಸೋತಿರುವ ಸುಭಾಷ್ ವಿ.ರಾಠೋಡ್ ಹೆಸರೂ ಕೇಳಿಬರುತ್ತಿದೆ
ಬಿಜೆಪಿಯಿಂದ ಯಾರು?
ಬಿಜೆಪಿಯಲ್ಲಿ ಹಾಲಿ ಸಂಸದ ಡಾ. ಉಮೇಶ ಜಾಧವ್ ಅವರೇ ಅಭ್ಯರ್ಥಿ ಎಂಬುದು ಖಚಿತವಾಗಿಲ್ಲ.
ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದ್ದು, ಇಬ್ಬರಲ್ಲಿ ಅಭ್ಯರ್ಥಿ ಯಾರಾದರೆ ಸೂಕ್ತ ಎನ್ನುವ ಚರ್ಚೆ ಪಕ್ಷದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಚುನಾವಣೆ ಸಂಘರ್ಷಕ್ಕೂ ಸಿದ್ಧ, ಕುಸ್ತಿಗೂ ಸಿದ್ಧ ಎಂದು ಘೋಷಿಸಿದ್ದ ಸಂಸದ ಜಾಧವ್ ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.
ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಸಹ ಟಿಕೆಟ್ ಆಕಾಂಕ್ಷಿಯಾಗಿ ದ್ದಾರೆ.
ಇಲ್ಲಿ ಬಿಜೆಪಿಯ ದೋಸ್ತಿ ಪಕ್ಷ ಜೆಡಿಎಸ್ ಬಲ ಅಷ್ಟಕ್ಕಷ್ಟೇ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ ಇದೆ.
ಇನ್ನು ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಮಾರ್ಚ್ 12ರಂದು ಪ್ರಧಾನಿ ಚಾಲನೆ ನೀಡಲಿದ್ದಾರೆ. ಹಾಲಿ ಸಂಸದ ಜಾಧವ್ ಅವರು ಅದನ್ನೂ ಸಾಧನೆಯಾಗಿ ತೋರಿಸಿ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಆದರೆ ಈ ಬಾರಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸರಕಾರದ ಸಚಿವರ ತವರು ಕಲಬುರಗಿಯನ್ನು ಗೆಲ್ಲುವುದು ಬಿಜೆಪಿಗೆ ಸುಲಭ ಅಲ್ಲ ಎಂಬುದು ಖಚಿತ.