ರಾಹುಲ್ ಗಾಂಧಿ ಯಾರ ದಾರಿ ಅನುಸರಿಸಿದ್ದಾರೆ?
ವಿದೇಶಕ್ಕೆ ಹೋದಾಗಲೆಲ್ಲ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಇದೀಗ ರಾಹುಲ್ ಗಾಂಧಿ ಕೂಡ ಅವರದೇ ದಾರಿ ಹಿಡಿದಿರುವಂತಿದೆ.
ರಾಹುಲ್ ಗಾಂಧಿ ಅಮೆರಿಕದಲ್ಲಿ ಸಂವಾದದುದ್ದಕ್ಕೂ ಮೋದಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಮಾತ್ರವಲ್ಲ, ಆರೆಸ್ಸೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಕೆಲವೇ ದಿನಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದರು. ವಿದೇಶಿ ನೆಲದಲ್ಲಿ ಭಾರತದ ರಾಜಕಾರಣದ ಬಗ್ಗೆ ಮಾತನಾಡಿದರು. ಅವರು ಏನೂ ಹೇಳದೆ ಸುಮ್ಮನಿರಬಹುದಿತ್ತು ಅಥವಾ ನೋ ಕಮೆಂಟ್ ಎಂದುಬಿಡಬಹುದಿತ್ತು ಅಥವಾ ನನ್ನ ರಾಜಕೀಯ ವಿರೋಧಿಗಳ ಬಗ್ಗೆ ಏನನ್ನೂ ಹೇಳಲಾರೆ. ಯಾಕೆಂದರೆ ವಿದೇಶಿ ನೆಲದಲ್ಲಿ ಭಾರತೀಯರ ವಿರುದ್ಧ ಮಾತಾಡಿದಂತಾಗುತ್ತದೆ ಎಂದು ಹೇಳಿಯೂ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಮೋದಿ ಅದಾವುದನ್ನೂ ಮಾಡಲಿಲ್ಲ. ಕಾಂಗ್ರೆಸ್ ವಿರುದ್ಧ ಮಾತಾಡುವ ಅವಕಾಶವನ್ನು ಬಿಟ್ಟುಕೊಡಲಿಲ್ಲ.
2015ರಲ್ಲಿ ಮೋದಿ ಜರ್ಮನಿಗೆ ಹೋದಾಗಲೂ ಕಾಂಗ್ರೆಸ್ ವಿರುದ್ಧ ಮಾತಾಡಿದರು. ಕಾಂಗ್ರೆಸ್ ಅವಾಂತರಗಳನ್ನೆಲ್ಲ ತಾನು ಸರಿಪಡಿಸಬೇಕಿದೆ ಎಂದರು.
ಕೆನಡಾದಲ್ಲಿಯೂ ಅವರು ಕಾಂಗ್ರೆಸ್ ಹದಗೆಡಿಸಿ ಇಟ್ಟಿದ್ದನ್ನು ತಾನೇ ಸರಿಪಡಿಸುತ್ತಿದ್ದೇನೆ ಎಂಬರ್ಥದಲ್ಲಿ ಹೇಳಿಕೊಂಡರು. ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿಯೂ ಕಾಂಗ್ರೆಸಿಗರ ಬಗ್ಗೆ ಕೆಟ್ಟದಾಗಿ ವಾಗ್ದಾಳಿ ಮಾಡಿದ್ದರು.
ಮಧ್ಯಪ್ರಾಚ್ಯದಲ್ಲೂ ಅದನ್ನೇ ಮುಂದುವರಿಸಿದರು. ಒಮಾನ್‌ನಲ್ಲಿಯೂ, ಕಾಂಗ್ರೆಸ್ ಕಾಲದ ಹಗರಣಗಳು ಮತ್ತು ದುರಾಡಳಿತದಿಂದಾದ ಹಾನಿ ಸರಿಪಡಿಸಲು ತಾನು ಕಷ್ಟಪಡುತ್ತಿರುವುದಾಗಿ ಕೊಚ್ಚಿಕೊಂಡರು.
ಪ್ರಪಂಚದಾದ್ಯಂತ ಹೋದಲ್ಲೆಲ್ಲ ಹಿಂದಿನ ಸರಕಾರಗಳ ವಿರುದ್ಧ ದಾಳಿ ಮಾಡುತ್ತ, ತಾನು ಬಂದ ಮೇಲೆ ಬದಲಾಗಿದೆ ಎಂದು ಹೇಳಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದರು.
ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದರಿಂದ ತಾವು ಭಾರತದಲ್ಲಿ ಹುಟ್ಟಿದ್ದೇವೆ ಎಂದು ಜನ ಪರಿತಪಿಸುತ್ತಾರೆ ಎಂದಿದ್ದರು.
ಶಾಂಘೈನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತ, ‘‘ಮೊದಲು ನೀವು ಭಾರತದ ಬಗ್ಗೆ ನಾಚಿಕೆಪಡುತ್ತಿದ್ದಿರಿ. ಆದರೆ ಈಗ ದೇಶದ ಬಗ್ಗೆ ಹೆಮ್ಮೆಪಡುತ್ತೀರಿ’’ ಎಂದು, ತಾನು ಪ್ರಧಾನಿಯಾದ ನಂತರ ಇದೆಲ್ಲವೂ ಸಾಧ್ಯವಾಗಿದೆ ಎಂದು ತೋರಿಸಿಕೊಂಡರು.
ಕೆನಡಾದಲ್ಲಿ ಮನಮೋಹನ್ ಸಿಂಗ್ ಸರಕಾರದ ಬಗ್ಗೆ ಆಡಿಕೊಂಡಿದ್ದರು. ಕಾಂಗ್ರೆಸ್ ಸರಕಾರದ ಧ್ಯೇಯವೇ ಸ್ಕ್ಯಾಮ್ ಇಂಡಿಯಾ ಆಗಿತ್ತೆಂದು ವ್ಯಂಗ್ಯವಾಡಿದ್ದರು.
2014ರಿಂದ ಶುರು ಮಾಡಿದ್ದನ್ನು ಮೋದಿ ಈಗಲೂ ಮುಂದುವರಿಸಿದ್ದಾರೆ. ಈ ವರ್ಷ ಕೋಪನ್‌ಹೇಗನ್‌ನಲ್ಲಿ ಮಾತನಾಡಿದ ಮೋದಿ, ‘‘ಡಿಜಿಟಲ್ ಇಂಡಿಯಾದ ಪ್ರಾರಂಭ ಇಡೀ ಭಾರತವನ್ನೇ ಬದಲಿಸಿದೆ’’ ಎಂದು ಬಡಾಯಿ ಕೊಚ್ಚಿದ್ದರು.
ಪ್ರಧಾನಿಯಾದ ಮೇಲೆ ಮೋದಿ 79 ಪ್ರವಾಸಗಳನ್ನು ಮಾಡಿದ್ದಾರೆ ಮತ್ತು 70 ದೇಶಗಳಿಗೆ ಭೇಟಿ ನೀಡಿದ್ದಾರೆ.
ಭಾರತದ ಇತಿಹಾಸದಲ್ಲಿಯೇ 50ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ದಾಳಿ ಮಾಡಿದ ಏಕೈಕ ಪ್ರಧಾನಿ ಮೋದಿಯೇ ಆಗಿರಬಹುದು.
ಮೋದಿ ಮಾಡಿದ್ದರಲ್ಲಿ ತಪ್ಪಿದೆಯೆ? ವಿದೇಶಿ ನೆಲದಲ್ಲಿ ರಾಜಕೀಯ ವಾಗ್ದಾಳಿ ಮಾಡುವುದನ್ನು ತಡೆಯಬೇಕೇ?
ದೇಶದ ಪ್ರಧಾನಿಯಾಗಿ ವಿದೇಶದಲ್ಲಿ ಅವರು ದೇಶದೊಳಗಿನ ರಾಜಕೀಯದ ಬಗ್ಗೆ ಹೇಳಬಾರದೆ?
ಮೋದಿಯವರಂತೂ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಲಾರರು.ಬಹುಶಃ ಮೋದಿ ಹಾಗೆ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ ಎನ್ನುವುದಾದರೆ,
ಪ್ರಧಾನಿ ಭಾರತದಿಂದ ಆಚೆ ಹೋದ ತಕ್ಷಣವೇ ಬೇರೆ ವ್ಯಕ್ತಿಯಾಗಿ ಬದಲಾಗಬೇಕೆಂದು ಏಕೆ ನಿರೀಕ್ಷಿಸಬೇಕು?
ಎಲ್ಲಿಯೇ ಆದರೂ ಅವರೇಕೆ ತಮ್ಮ ನಿಲುವು ವ್ಯಕ್ತಪಡಿಸಲು ನಾಚಿಕೆಪಡಬೇಕು ಎನ್ನುವುದಾದರೆ, ಈಗ ರಾಹುಲ್ ಗಾಂಧಿ ಕೂಡ ಮೋದಿ ಹಾದಿಯಲ್ಲೇ ಸಾಗಿದ್ದಾರೆ ಎನ್ನಿಸುವುದಿಲ್ಲವೆ?
ಅಮೆರಿಕದಲ್ಲಿ ಅವರು ಸಂವಾದದುದ್ದಕ್ಕೂ ಮೋದಿ ಸರಕಾರದ ವಿರುದ್ಧ ಹರಿಹಾಯ್ದರು. ಹಾಗೆಯೇ, ಆರೆಸ್ಸೆಸ್ ಸಮುದಾಯಗಳನ್ನು ಒಡೆಯಲು ಯತ್ನಿಸುತ್ತದೆ ಎಂದರು. ಅದು ಇತರ ಧರ್ಮಗಳನ್ನು ಕೀಳೆಂದು ಭಾವಿಸುತ್ತದೆ ಎಂದರು.
ಬಿಜೆಪಿ ಸರಕಾರದ ವಿರುದ್ಧ ನೇರ ದಾಳಿ ನಡೆಸಿದ ಅವರು, ಭಯದ ವಾತಾವರಣ ಸೃಷ್ಟಿಸಲು ಯತ್ನಿಸಿದೆ ಎಂದರು. ವಿವಿಧ ಏಜೆನ್ಸಿಗಳು, ಐಟಿ ಮತ್ತು ಮಾಧ್ಯಮಗಳು ಭಯ ಹರಡಲು ಪ್ರಯತ್ನಿಸಿವೆ ಎಂದರು.
ಮೋದಿ ವಿದೇಶಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದಾಗ, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸ್ವಾತಂತ್ರ್ಯದ ನಂತರದ ಇತಿಹಾಸ ಮತ್ತು ಭಾರತದ ಸಾಧನೆಗಳನ್ನು ಮೋದಿ ಅವಮಾನಿಸುತ್ತಿದ್ದಾರೆ. ಅದು ಅವರ ಅಭ್ಯಾಸವೇ ಆಗಿದೆ ಎಂದು ಆನಂದ್ ಶರ್ಮಾ ಟೀಕಿಸಿದ್ದರು.
ಆಗ ಮೋದಿ ವಿರುದ್ಧ ಆನಂದ್ ಶರ್ಮಾ ಹೇಳಿದ್ದನ್ನೇ ಈಗ ರಾಹುಲ್ ವಿರುದ್ಧ ಬಿಜೆಪಿ ನಾಯಕರು ಮತ್ತು ವಕ್ತಾರರು ಹೆಚ್ಚುಕಡಿಮೆ ಅದೇ ಧಾಟಿಯಲ್ಲೇ ಹೇಳುತ್ತಿದ್ದಾರೆ.
ಸಮುದಾಯಗಳನ್ನು ಒಡೆಯುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ ಎಂಬ ರಾಹುಲ್ ಗಾಂಧಿಯವರ ಟೀಕೆಗೆ ಮತ್ತು ಭಾರತದಲ್ಲಿ ಸಿಖ್ಖರು ತಮ್ಮ ಧಾರ್ಮಿಕ ಅಸ್ಮಿತೆ ಉಳಿಸಿಕೊಳ್ಳಲು ಬಂದಾಗ ಬಿಜೆಪಿಯಿಂದ ನಿರಂತರ ದಾಳಿಯನ್ನು ಎದುರಿಸಿತ್ತು ಎಂಬ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದೆ.
40 ವರ್ಷಗಳ ಹಿಂದೆ ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದವರಿಗೆ ಸಿಖ್ಖರ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ ಎಂಬುದು ಬಿಜೆಪಿ ಪ್ರಶ್ನೆ.
ಕಾಂಗ್ರೆಸ್ ಟೀಕಿಸಿದ್ದರಿಂದ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಏನಾದರೂ ಬದಲಾದರಾ?
ಹಾಗೆಯೇ ಈಗ ಬಿಜೆಪಿ ಟೀಕೆಗಳ ಪರಿಣಾಮವಾಗಿ ರಾಹುಲ್ ಅವರೇನೂ ಸುಮ್ಮನಾಗಲಾರರು.
ಒಂದಂತೂ ನಿಜ.
ಮೋದಿ ಮತ್ತು ರಾಹುಲ್ ಭಾರತದಲ್ಲಿ ಪರಸ್ಪರ ವಾಗ್ದಾಳಿ ನಡೆಸುವ ಹಾಗೆಯೇ ಜಗತ್ತಿನ ಯಾವ ಭಾಗದಲ್ಲೇ ಆದರೂ ಅದನ್ನೇ ಮಾಡುತ್ತಾರೆ. ಹೀಗೆ ಮಾಡುವುದು ತಪ್ಪೆ?
ಗೊತ್ತಿಲ್ಲ.
ಆದರೆ ಅದು ತಪ್ಪೆಂದು ಮೋದಿಯಾಗಲೀ ರಾಹುಲ್ ಆಗಲೀ ಭಾವಿಸುತ್ತಿಲ್ಲ.
ಮೋದಿ ವಿದೇಶದಲ್ಲಿ ಅದನ್ನೇ ಮಾಡಿದಾಗ ಬಿಜೆಪಿ ನಾಯಕರು, ಸಂಘ ಪರಿವಾರ ಹಾಗೂ ಅದರ ಐಟಿ ಸೆಲ್ ಅದನ್ನು ಸಂಭ್ರಮಿಸುತ್ತದೆ.
ಮೋದಿ ಅಲ್ಲಿ ಹೇಳಿದ್ದನ್ನು ಮಹಾ ಸಾಧನೆ, ಮಹಾ ಸಂಶೋಧನೆ ಎಂಬಂತೆ ಇಡೀ ಜಗತ್ತಿಗೆ ತಲುಪಿಸುತ್ತದೆ.
ಆದರೆ ರಾಹುಲ್ ವಿದೇಶಕ್ಕೆ ಹೋಗಿ ಕಹಿ ವಾಸ್ತವಗಳನ್ನು ಹೇಳಿದ ಕೂಡಲೇ ಅದೇ ಬಿಜೆಪಿ ನಾಯಕರು, ಸಂಘ ಪರಿವಾರ ಹಾಗೂ ಅದರ ಐಟಿ ಸೆಲ್ ಬೆಚ್ಚಿ ಬಿದ್ದ ಹಾಗೆ ವರ್ತಿಸುತ್ತವೆ.
ವಿದೇಶದಲ್ಲಿ ಭಾರತಕ್ಕೆ ಅವಮಾನ ಆಯಿತು ಎಂದು ಗೋಳಾಡುತ್ತವೆ.