ಲೆಕ್ಸ್ ಫ್ರಿಡ್ಮನ್‌ರಂತಹವರು ಮಾಡುವ ಮೋದಿ ‘ಸಂದರ್ಶನ’ಗಳಲ್ಲಿ ಸಾರ್ವಜನಿಕ ಮಹತ್ವದ ಪ್ರಶ್ನೆಗಳೇಕೆ ಕಾಣೆಯಾಗುತ್ತಿವೆ?

ಅಮೆರಿಕನ್ ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್‌ಗೆ ಮೋದಿ 3 ಗಂಟೆ ಕಾಲ ನೀಡಿರುವ ಸಂದರ್ಶನವನ್ನು ಅಸಲಿಗೆ ಸಂದರ್ಶನ ಎಂದು ಕರೆಯಬಹುದೇ ಎಂಬ ಪ್ರಶ್ನೆ ಕಾಡುತ್ತದೆ.
ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಆಧ್ಯಾತ್ಮಿಕ ರೀತಿಯಲ್ಲಿ ಮಾತನಾಡಲು ಬಯಸುತ್ತೇನೆ ಎಂದು ಹೇಳಿರುವುದನ್ನು ನೋಡಿದರೆ, ಅವರು ಪತ್ರಕರ್ತನಾಗಿ ಸಂದರ್ಶನ ಮಾಡಿಲ್ಲ.
ದೇಶದ ಜನರು ನೂರೆಂಟು ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವಾಗ, ಚಿಂತೆಯಲ್ಲಿರುವಾಗ, ಪ್ರಧಾನಿ ಪಾಡ್ ಕಾಸ್ಟರ್‌ಗೆ 3 ಗಂಟೆಗಳ ಸಮಯ ನೀಡುವಷ್ಟು ನಿರಾಳವಾಗಿದ್ದರೇ ಎಂಬ ಪ್ರಶ್ನೆಯನ್ನೂ ಇಲ್ಲಿ ಕೇಳಬೇಕಿದೆ.
ಇತ್ತೀಚೆಗೆ ಮೋದಿ ಅವರು ಉದ್ಯಮಿ ನಿಖಿಲ್ ಕಾಮತ್ ಅವರೊಂದಿಗೆ ಪಾಡ್ ಕಾಸ್ಟ್ ಮಾಡಿದ್ದರು ಮತ್ತು ಈಗ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ 3 ಗಂಟೆ 5 ನಿಮಿಷ 41 ಸೆಕೆಂಡುಗಳ ಪಾಡ್ ಕಾಸ್ಟ್ ಮಾತುಕತೆ ನಡೆಸಿದ್ದಾರೆ.
ಇಲ್ಲಿ ಅವರಿಗೆ ಮಣಿಪುರಕ್ಕೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆ ಎದುರಾಗುವುದಿಲ್ಲ. ಡಾಲರ್ ಎದುರು ರೂಪಾಯಿ ಕುಸಿಯುತ್ತಿರುವುದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಟ್ರಂಪ್ ನಿತ್ಯವೂ ಹಾಕುತ್ತಿರುವ ತೆರಿಗೆ ಬೆದರಿಕೆ ಬಗ್ಗೆ ಏನೇನೂ ಮಾತಿಲ್ಲ.
ಅಮೆರಿಕದಲ್ಲಿ ಅದಾನಿ ವಿರುದ್ಧ ಪ್ರಕರಣ ನಡೆಯುತ್ತಿರುವುದರಿಂದ ಭಾರತ ಸರಕಾರ ಟ್ರಂಪ್ ಮುಂದೆ ತಲೆಬಾಗುತ್ತಿದೆಯೇ ಎಂಬುದರ ಬಗ್ಗೆಯೂ ಒಂದೇ ಒಂದು ಪ್ರಶ್ನೆ ಬರಲಿಲ್ಲ.
ಇದು ಪತ್ರಕರ್ತರು ಪತ್ರಕರ್ತರಂತೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ನಿರೀಕ್ಷಿಸಬಹುದಾದ ಸಂದರ್ಶನವೇ ಅಥವಾ ಪತ್ರಿಕೋದ್ಯಮ ಹೇಗಿರಬೇಕು ಎಂಬ ಪ್ರಶ್ನೆಯನ್ನು ಜನರೇ ಇಲ್ಲಿ ನಿರ್ಧರಿಸಬೇಕೆ?
ಪ್ರಧಾನಿಯ ಸಂದರ್ಶನದಲ್ಲಿ ಜನರು ತಮ್ಮ ಸಮಸ್ಯೆಗಳಿಗೆ ಉತ್ತರವೇನಾದರೂ ಸಿಗಬಹುದು ಎಂದು ನಿರೀಕ್ಷಿಸಿದರೆ ತಪ್ಪಲ್ಲ. ಆದರೆ ಮಡಿಲ ಮೀಡಿಯಾಗಳ ಸಂದರ್ಶನಗಳಲ್ಲಿ ಮತ್ತು ಈಗ ಕಾಮತ್ ಮತ್ತು ಲೆಕ್ಸ್ ಫ್ರಿಡ್ಮನ್ ಅವರ ಸಂದರ್ಶನಗಳಲ್ಲಿ ಅಂಥ ಸಾರ್ವಜನಿಕ ಮಹತ್ವದ ಪ್ರಶ್ನೆಗಳು ಇವೆಯೇ?
48 ಗಂಟೆಗಳ ಕಾಲ ಉಪವಾಸ ಮಾಡಿ ಮೋದಿಯವರನ್ನು ಸಂದರ್ಶಿಸಲು ಬಂದಿರುವುದಾಗಿ ಹೇಳುತ್ತಾರೆ ಲೆಕ್ಸ್ ಫ್ರಿಡ್ಮನ್. ಹಾಗಾದರೆ ಉಪವಾಸ ಇದ್ದು ಆನಂತರ ಸಂದರ್ಶನವನ್ನು ನಡೆಸುವ ಒಂದು ರೀತಿಯೂ ಇದೆಯೆ?
ಲೆಕ್ಸ್ ಫ್ರಿಡ್ಮನ್ ಆರಂಭದಲ್ಲೇ ಸ್ಪಷ್ಟಪಡಿಸುವಂತೆ, ಅವರು ಪತ್ರಕರ್ತರಾಗಿ ಸಂದರ್ಶನ ಮಾಡಲು ಬಂದಿಲ್ಲ. ಹಾಗಾದರೆ ಈ ಸಂದರ್ಶನವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು?
ಸಂದರ್ಶನದಲ್ಲಿ ಫ್ರಿಡ್ಮನ್ ಗಾಯತ್ರಿ ಮಂತ್ರ ಜಪಿಸುತ್ತಾರೆ.
ಪ್ರಧಾನಿ ಮೋದಿ ತಮ್ಮ ಉಪವಾಸದ ಬಗ್ಗೆ ವಿವರವಾಗಿ ಹೇಳುತ್ತಾರೆ. ಅವರು ಇಲ್ಲಿ ಆಧ್ಯಾತ್ಮಿಕ ನಾಯಕನಂತೆ ಮಾತನಾಡುತ್ತಿರುವುದು ಕಾಣಿಸುತ್ತದೆ.
ಉಪವಾಸವಿದ್ದು ಸಂದರ್ಶನ ಮಾಡಲು ಬರುವ ಲೆಕ್ಸ್ ಫ್ರಿಡ್ಮನ್ ಅವರ ಐಡಿಯಾ ಈತನಕ ಮಡಿಲ ಮೀಡಿಯಾದ ಮಾಲಕರು ಮತ್ತು ಆ್ಯಂಕರ್‌ಗಳಿಗೂ ಇರಲಿಲ್ಲ.
ಇನ್ನು ಮುಂದೆ ಪ್ರಧಾನಿ ಮೋದಿಯವರನ್ನು ಸಂದರ್ಶಿಸಲು ಮಡಿಲ ಮೀಡಿಯಾದ ಆ್ಯಂಕರ್ ಮೊದಲು ಗಂಗಾ ನದಿಯಲ್ಲಿ ಸ್ನಾನ ಮಾಡಿ, ನಂತರ ತನ್ನ ಶೂ ಮತ್ತು ಚಪ್ಪಲಿಗಳನ್ನು ತೆಗೆದು ಸಂದರ್ಶನಕ್ಕೆ ಹೋಗಬಹುದೇನೋ?
ಮೊನ್ನೆ ಅವರೆಲ್ಲರನ್ನೂ ಮೀರಿಸುವ ಹಾಗೆ ಫ್ರಿಡ್ಮನ್ ಪ್ರತೀ ಪ್ರಶ್ನೆಗೂ ಮೊದಲು ಮೋದಿಯನ್ನು ಹಾಡಿ ಹೊಗಳುತ್ತಿದ್ದರು. ಮಡಿಲ ಮಿಡಿಯಾದವರ ಮಾದರಿಯನ್ನು ಇನ್ನಷ್ಟು ಮುಂದುವರಿಸುವ ಹಾಗೆ ಫ್ರಿಡ್ಮನ್ ಅವರ ಪ್ರಶ್ನೆಗಳಿದ್ದವು.
‘‘ಆಧುನಿಕ ಭಾರತದ ಅಡಿಪಾಯದ ಇತಿಹಾಸವನ್ನು ನೋಡಿದರೆ, ಗಾಂಧಿ ಮತ್ತು ನೀವು ಪ್ರಮುಖ ವ್ಯಕ್ತಿಗಳು’’ ಎಂದು ಫ್ರಿಡ್ಮನ್ ಹೇಳುತ್ತಾರೆ.
ಮಡಿಲ ಮೀಡಿಯಾ ಮತ್ತು ಐಟಿ ಸೆಲ್ 10 ವರ್ಷಗಳಿಂದ ಇದನ್ನೇ ಮಾಡುತ್ತಿವೆ. ನೆಹರೂ ಅವರಿಂದ ಪ್ರಾರಂಭಿಸಿ ಎಲ್ಲರನ್ನೂ ಕಣ್ಮರೆಯಾಗುವಂತೆ ಮಾಡುತ್ತಿವೆ. ಈಗ ಅವುಗಳು ಪ್ರಧಾನಿ ಮೋದಿಯನ್ನು ಗಾಂಧಿಯವರ ವಿರುದ್ಧ ನಿಲ್ಲಿಸುತ್ತಿವೆ. ಗಾಂಧಿಯ ಹಂತಕನನ್ನು ತಮ್ಮ ನಾಯಕ ಎಂದು ಕರೆಯಲೂ ಅವುಗಳು ಹಿಂಜರಿಯುವುದಿಲ್ಲ.
ಒಂದೆಡೆ ವಿಭಜನೆಗೆ ಗಾಂಧಿಯನ್ನು ದೂಷಿಸುತ್ತವೆ.ಮತ್ತೊಂದೆಡೆ ಪ್ರಧಾನಿ ಮೋದಿಯವರು ಗಾಂಧಿಯನ್ನು ಶತಮಾನದ ಶ್ರೇಷ್ಠ ನಾಯಕ ಎಂದು ಕರೆಯುತ್ತಾರೆ.
ಜಾಗತಿಕ ರಾಜಕೀಯದಲ್ಲಿ ಗಾಂಧಿಯನ್ನು ಒಂದು ಇಮೇಜ್ ಹುಟ್ಟುಹಾಕಲು ಬಳಸಲಾಗುತ್ತದೆ ಮತ್ತು ಸ್ಥಳೀಯ ರಾಜಕೀಯದಲ್ಲಿ ವಿಭಜನೆಯಿಂದ ಪ್ರತಿಯೊಂದು ದುಷ್ಟತನಕ್ಕೂ ಜನರನ್ನು ಹೊಣೆಗಾರರನ್ನಾಗಿ ಮಾಡಲು ಬಳಸಲಾಗುತ್ತದೆ.
ಫ್ರಿಡ್ಮನ್ ಅವರ ಪ್ರಶ್ನೆಗಳು ಪ್ರಧಾನಿಗೆ ತಮ್ಮ ಇಮೇಜ್ ಅನ್ನು ನಿರ್ಮಿಸಿಕೊಳ್ಳಲು ಅವಕಾಶ ಕೊಡುತ್ತವೆ ಮತ್ತು ಪ್ರಧಾನಿಯ ಉತ್ತರದಲ್ಲಿ, ತಾವು ದೊಡ್ಡವರಲ್ಲ, ತನ್ನ ಜವಾಬ್ದಾರಿ ದೇಶಕ್ಕಿಂತ ಚಿಕ್ಕದಾಗಿದೆ ಎಂದೆಲ್ಲ ವಿನಮ್ರತೆಯ ಪ್ರದರ್ಶನವಿದೆ.
ಒಂದು ರೀತಿಯಲ್ಲಿ ಅದು ಇಬ್ಬರ ನಡುವಿನ ಖಾಸಗಿ ಮಾತುಕತೆಯ ಹಾಗಿದೆಯೇ ಹೊರತು, ಪ್ರಧಾನಿ ಮತ್ತು ಪತ್ರಕರ್ತರ ನಡುವಿನ ಮಾತುಕತೆಯ ಹಾಗಿಲ್ಲ.
ಪ್ರಧಾನಿಯವರು ಟೀಕೆಯನ್ನು ಪ್ರಜಾಪ್ರಭುತ್ವದ ಆತ್ಮ ಎಂದಿದ್ದಾರೆ. ಆದರೆ ಸಂದರ್ಶಕರನ್ನಾಗಿ ಎಂಥವರನ್ನು ಆರಿಸಿಕೊಳ್ಳಲಾಗಿದೆ ಎಂಬುದು ಅವರು ಟೀಕೆಯನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪ್ರಧಾನಿಯವರು ಕರಣ್ ಥಾಪರ್ ಅವರಂಥ ಸಂದರ್ಶಕರಿಗೆ ಮತ್ತೆ ಸಂದರ್ಶನ ನೀಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಲೆಕ್ಸ್ ಫ್ರಿಡ್ಮನ್ ಯಾರು ಮತ್ತು ಅವರು ಇದಕ್ಕೂ ಮೊದಲು ಯಾರನ್ನು ಸಂದರ್ಶಿಸಿದ್ದಾರೆ ಎಂಬುದನ್ನು ಸಹ ನೋಡಬೇಕು. ಇದರಿಂದ ಮಡಿಲ ಮೀಡಿಯಾ ಆ್ಯಂಕರ್‌ಗಳು ನಮ್ಮ ದೇಶದಲ್ಲಿ ಮಾತ್ರ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಕಳೆದ 6 ವರ್ಷಗಳಿಂದ ಲೆಕ್ಸ್ ಫ್ರಿಡ್ಮನ್ ಡೊನಾಲ್ಡ್ ಟ್ರಂಪ್, ಅವರ ಮಗಳು ಇವಾಂಕಾ ಟ್ರಂಪ್, ಎಲಾನ್ ಮಸ್ಕ್, ಜೆಫ್ ಬೆಜೋಸ್, ವಿವೇಕ್ ರಾಮಸ್ವಾಮಿ, ಮಾರ್ಕ್ ಝುಕರ್‌ಬರ್ಗ್, ಅಮೆರಿಕನ್ ಪತ್ರಕರ್ತ ಟಕರ್ ಕಾರ್ಲ್ಸನ್ ಅವರನ್ನು ಸಂದರ್ಶಿಸಿದ್ದಾರೆ.
ಈ ಎಲ್ಲರೂ ಟ್ರಂಪ್ ಅವರ ರಾಜಕೀಯದ ಜೊತೆಜೊತೆಗೇ ಬರುತ್ತಾರೆ ಮತ್ತು ಕೆಲವರು ಹೊಸ ರೀತಿಯಲ್ಲಿ ಟ್ರಂಪ್‌ಗೆ ತಲೆಬಾಗುತ್ತಿದ್ದಾರೆ.
ಟ್ರಂಪ್ ಕ್ಯಾಂಪ್‌ನ ಮನುಷ್ಯ ಎಂಬ ಕಾರಣಕ್ಕಾಗಿ ಫ್ರಿಡ್ಮನ್ ಅವರನ್ನು ಮೋದಿ ಆಯ್ಕೆ ಮಾಡಿಕೊಂಡಿರಬಹುದೇ?
ಟ್ರಂಪ್ ಅವರು ಪ್ರಧಾನಿ ಮೋದಿಯ ಮೇಲೆ ಒತ್ತಡ ಹೇರಿದ ರೀತಿ, ಅವಮಾನಿಸಿದ ರೀತಿ ಎಲ್ಲವನ್ನೂ ನೋಡಿದ ಮೇಲೆ, ಟ್ರಂಪ್ ಸರಕಾರದ ಜೊತೆ ಹೊಸ ರೀತಿಯ ಪಿಆರ್ ಕಸರತ್ತು ನಡೆಯುತ್ತಿದೆಯೇ? ಅಥವಾ ಫ್ರಿಡ್ಮನ್ ಮೂಲಕ ರಾಜಕೀಯ ನಡೆಯುತ್ತಿದೆಯೇ? ಎಂಬ ಅನುಮಾನ ಕಾಡದೆ ಇರುವುದಿಲ್ಲ.
ನೇಪಾಳದ ನಾಗರಿಕರು ಕೂಡ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಆದರೆ ಟ್ರಂಪ್ ಅವರನ್ನು ವಾಪಸ್ ಕಳುಹಿಸುವಾಗ ಅವರಿಗೆ ಕೈಕೋಳ ಹಾಕಿರಲಿಲ್ಲ. ಆದರೆ ಭಾರತೀಯ ನಾಗರಿಕರನ್ನು ವಾಪಸ್ ಕಳುಹಿಸುವಾಗ ಅವರಿಗೆ ಕೈಕೋಳಗಳನ್ನು ಹಾಕಲಾಗಿತ್ತು.
ಟ್ರಂಪ್ ಭಾರತದ ತೆರಿಗೆ ನೀತಿಯ ಬಗ್ಗೆ ಮೋದಿಯ ಎದುರೇ ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಅವಮಾನಿಸಿ ಮಾತನಾಡಿದರು. ‘‘ನಾವು ಭಾರತದ ಬಣ್ಣ ಬಯಲು ಮಾಡಿದ್ದಕ್ಕೆ ಭಾರತ ತೆರಿಗೆ ಕಡಿಮೆ ಮಾಡಿದೆ’’ ಎಂದು ಕೂಡ ಟ್ರಂಪ್ ಹೇಳಿದರು. ಈ ಅವಮಾನದ ಬಗ್ಗೆ ಭಾರತದ ಪ್ರಧಾನಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ.
ಈ ಸಂದರ್ಶನದಲ್ಲೂ ಅದೇನೂ ನಡೆಯಲಿಲ್ಲ.
ಸಂದರ್ಶನದ ಮೂಲಕ ಯಾವ ಆಟವನ್ನು ಆಡಲಾಗುತ್ತಿದೆ ಎಂದು ಅರ್ಥವಾಗಿಬಿಡುತ್ತದೆ.
‘‘ನೀವು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದೀರಿ ಮತ್ತು ಡೊನಾಲ್ಡ್ ಟ್ರಂಪ್ ಅವರೊಂದಿಗಿನ ನಿಮ್ಮ ಸ್ನೇಹವನ್ನು ಮತ್ತೆ ಬಲಪಡಿಸಿದ್ದೀರಿ. ಸ್ನೇಹಿತ ಮತ್ತು ನಾಯಕನಾಗಿ ಡೊನಾಲ್ಡ್ ಟ್ರಂಪ್ ಬಗ್ಗೆ ನಿಮಗೆ ಏನು ಇಷ್ಟ?’’ ಎಂದು ಫ್ರಿಡ್ಮನ್ ಕೇಳುತ್ತಾರೆ.
ಟ್ರಂಪ್ ಬಗ್ಗೆ ಪ್ರಶ್ನೆ ಫುಟ್ಬಾಲ್ ಮತ್ತು ಕ್ರಿಕೆಟ್ ಕುರಿತು ನಡೆಯುತ್ತಿರುವ ಚರ್ಚೆಯ ನಂತರ ಬರುತ್ತದೆ.
ಈ ಪ್ರಶ್ನೆಯಲ್ಲಿಯೂ ಸಹ, ಸುಂಕದ ಕುರಿತು ಟ್ರಂಪ್ ಅವರ ಹೇಳಿಕೆಗಳ ಉಲ್ಲೇಖವಿಲ್ಲ. ಸ್ನೇಹದ ಬಗ್ಗೆ ಮಾತನಾಡಲಾಗುತ್ತಿದೆ.
ಈ ರೀತಿಯಾಗಿ, ಸಂದರ್ಶನದ ಹೆಸರಿನಲ್ಲಿಯೇ ಸಂದರ್ಶನದ ಸ್ವರೂಪವನ್ನು ಹಾಳುಗೆಡವಲಾಗುತ್ತದೆ.
ಟ್ರಂಪ್ ಬಗ್ಗೆ ಪ್ರಧಾನಿ ಮೋದಿಯನ್ನು ಪ್ರಶ್ನಿಸಲು ಸಿಗುವ ಅವಕಾಶದಲ್ಲಿ ಸುಂಕದ ಮೇಲಿನ ಅವರ ಕ್ರಮಗಳ ಬಗ್ಗೆ ಪ್ರಶ್ನೆಗಳಿರುವುದಿಲ್ಲ.
ಆದರೆ ಸ್ನೇಹಿತನ ಬಗ್ಗೆ ಹೇಳಿ, ಅವರು ಏನು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂದು ಕೇಳಲಾಗುತ್ತದೆ.
ಟ್ರಂಪ್‌ಗೆ ಸಂಬಂಧಿಸಿದ ಪ್ರಶ್ನೆಯಲ್ಲಿ ತೆರಿಗೆಯ ವಿಷಯವೇ ಬರುವುದಿಲ್ಲ ಎನ್ನುವುದನ್ನು ನೋಡಿದರೆ ಈ ಸಂದರ್ಶನ ಟ್ರಂಪ್ ಆಡಳಿತದೊಂದಿಗೆ ಹೊಸ ಸಂಬಂಧ ಬೆಸೆಯುವ ಪ್ರಯತ್ನವಾಗಿದೆ ಎಂಬ ಅನುಮಾನ ಕಾಡದೆ ಇರುವುದಿಲ್ಲ.
ಆದರೆ ಚುನಾವಣಾ ಪ್ರಚಾರದಿಂದ ಇಲ್ಲಿಯವರೆಗೆ ಟ್ರಂಪ್ ಸುಂಕಗಳ ಬಗ್ಗೆ ಏಕೆ ಆಕ್ರಮಣಕಾರಿಯಾಗಿದ್ದಾರೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.
ಟ್ರಂಪ್‌ಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೋದಿ ಏನನ್ನೂ ಹೇಳಲಿಲ್ಲ ಅಥವಾ ಏನನ್ನೂ ಕೇಳಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ,
ಟ್ರಂಪ್ ಭಾರತದ ಕಡೆಗೆ ಆಕ್ರಮಣಕಾರಿಯಾಗಿರುವುದರ ಬಗ್ಗೆ ಮೋದಿ ಏನನ್ನೂ ಹೇಳುವುದಿಲ್ಲ. ಆಕ್ರಮಣಕಾರಿ ಎಂಬ ಪದದ ಬದಲು, ಸಿದ್ಧರಾಗಿದ್ದಾರೆ ಎಂದು ಮೋದಿ ಬಳಸುತ್ತಾರೆ.
ಟ್ರಂಪ್ ಮತ್ತು ಮೋದಿ ಬಗ್ಗೆ ಪ್ರಪಂಚದಾದ್ಯಂತ ಎದ್ದಿರುವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿ ಸಿಕ್ಕಿವೆಯೇ?
ಮೋದಿ ಸರಕಾರದ ಎಲ್ಲಾ ಮಂತ್ರಿಗಳು ಈ ಸಂದರ್ಶನವನ್ನು ಟ್ವೀಟ್ ಮಾಡುತ್ತಿದ್ದಾರೆ ಮತ್ತು ಅದನ್ನು ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಗಾಂಧಿ ಮತ್ತು ಮೋದಿಯನ್ನು ಶ್ರೇಷ್ಠ ವ್ಯಕ್ತಿಗಳು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ಪ್ರಧಾನಿ ಅಭ್ಯರ್ಥಿಯಾದಾಗ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ದೇಶವನ್ನು ಹೇಗೆ ನಡೆಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತು ಎಂಬ ಪ್ರಸ್ತಾಪ ಮಾಡುತ್ತಾರೆ.
ಚೀನಾ ಪೂರ್ವ ಲಡಾಖ್‌ನ ಗಡಿಯನ್ನು ಅತಿಕ್ರಮಿಸಿದಾಗ, ಮೋದಿಯವರು ನಮ್ಮ ಗಡಿಯನ್ನು ಯಾರೂ ಪ್ರವೇಶಿಸಿಲ್ಲ ಅಥವಾ ಯಾರೂ ಒಳನುಗ್ಗಿಲ್ಲ ಅಥವಾ ನಮ್ಮ ಯಾವುದೇ ಜಾಗ ಬೇರೆಯವರ ಆಕ್ರಮಣದಲ್ಲಿಲ್ಲ ಎಂದು ಹೇಳಿದ್ದರು.
ಲೆಕ್ಸ್ ಫ್ರಿಡ್ಮನ್ ಚೀನಾದ ಬಗ್ಗೆ ನೇರ ಪ್ರಶ್ನೆಗಳನ್ನು ಕೇಳಿದರು.
ಇತ್ತೀಚಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಚೀನಾದೊಂದಿಗೆ ಸಂವಾದ ಮತ್ತು ಸಹಕಾರವನ್ನು ಪುನರಾರಂಭಿಸುವ ಆವಶ್ಯಕತೆಯಿದೆ, ಆ ಸ್ನೇಹವನ್ನು ಹೇಗೆ ಬಲಪಡಿಸಬಹುದು ಎಂಬ ಪ್ರಶ್ನೆ ಬಂತು. ಅದಕ್ಕೆ ನಿಡಲಾದ ಉತ್ತರದಲ್ಲಿ ಎಲ್ಲಾ ವಾಸ್ತವಗಳನ್ನು ನಿರ್ಲಕ್ಷಿಸಲಾಗಿದೆ.
ಭಾರತ ಮತ್ತು ಚೀನಾ ನಡುವೆ 5 ವರ್ಷಗಳ ಕಾಲ ಮಾತುಕತೆಯೇ ಇದ್ದಿರಲಿಲ್ಲ ಎಂದು ಮೋದಿ ಹೇಳಿದರು. ಆದರೆ ಆ ಅಂತರವೇನು, ಅದಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟತೆ ಇರಲಿಲ್ಲ.
ಚೀನಾ ಅತಿಕ್ರಮಣ ಮಾಡಿದೆಯೇ ಎಂಬುದಕ್ಕೆ ಉತ್ತರವಾಗಿ ಮೋದಿ, ಎರಡು ನೆರೆಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಗಳು ಸಂಭವಿಸುವುದು ಸಹಜ ಎಂದು ಹೇಳುತ್ತಾರೆ.
ಆದರೆ ಭಿನ್ನಾಭಿಪ್ರಾಯಗಳು ವಿವಾದವಾಗಿ ಬದಲಾಗಬಾರದು ಎಂಬುದು ನಮ್ಮ ಪ್ರಯತ್ನ, ನಮ್ಮ ಪ್ರಯತ್ನ ಆ ದಿಕ್ಕಿನಲ್ಲಿದೆ, ಅದೇ ರೀತಿಯಲ್ಲಿ ನಾವು ಮಾತುಕತೆಗೆ ಒತ್ತು ನೀಡುತ್ತೇವೆ, ವಿವಾದಕ್ಕಲ್ಲ. ಆಗ ಮಾತ್ರ ಸ್ಥಿರವಾದ ಸಹಕಾರಿ ಸಂಬಂಧವು ಎರಡೂ ದೇಶಗಳ ಹಿತದೃಷ್ಟಿಯಿಂದ ಉತ್ತಮವಾಗಿರುತ್ತದೆ ಎನ್ನುತ್ತಾರೆ.
ಆದರೆ ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯ ಎಷ್ಟು ಒಳಗೆ ಪ್ರವೇಶಿಸಿತು, ಅದನ್ನು ತಡೆಯಲು ಭಾರತ ಎಷ್ಟು ಸೈನಿಕರನ್ನು ನಿಯೋಜನೆ ಮಾಡಬೇಕಾಯಿತು?
ಎರಡೂ ದೇಶಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದರೂ ಈಗ ಪ್ರಧಾನಿಯೇ ಹೇಳಿದಂತೆ, ವಿಶ್ವಾಸ ಇನ್ನೂ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿಲ್ಲ.
ಪ್ರಧಾನಿ ಮೋದಿ ತಮ್ಮ ಜೀವನದ ಬಗ್ಗೆ ತಮ್ಮದೇ ಆದ ಕಥೆ ಸೃಷ್ಟಿಸುತ್ತಿದ್ದಾರೆ ಮತ್ತು ಮಾಧ್ಯಮಗಳು ಅದನ್ನೇ ಮತ್ತೆ ಮತ್ತೆ ಪ್ರಕಟಿಸುತ್ತಿವೆ ಎಂಬುದು ಸ್ಪಷ್ಟ.
ಆದರೆ ಮೋದಿ ಎಷ್ಟು ಕಾಲ ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನೇ ಹೇಳಿಕೊಂಡು ಇರುತ್ತಾರೆ? ಅವರ ತಂದೆ ಚಹಾ ಮಾರುತ್ತಿದ್ದರು; ಅವರಿಗೆ ಧರಿಸಲು ಬೂಟುಗಳು ಇರಲಿಲ್ಲ ಎಂದು ಸಾರ್ವಜನಿಕರು ಎಷ್ಟು ಕಾಲ ಕೇಳಿಸಿಕೊಳ್ಳುತ್ತಲೇ ಇರಬೇಕು?
ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಯಾವಾಗ ಬದಲಾಯಿತು ಎಂದು ಹೇಳಲಾಗುವುದಿಲ್ಲ. ಅವರ ಬಾಲ್ಯದ ಬಗ್ಗೆ ನಡೆಯುವ ಎಲ್ಲಾ ಮಾತುಕತೆಗಳಲ್ಲಿ, ಅವರು ತಮ್ಮ ಪದವಿಗಳ ಬಗ್ಗೆ ಮಾತನಾಡುವುದಿಲ್ಲ. ತಮ್ಮ ಸಹಪಾಠಿಗಳ ಬಗ್ಗೆ, ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆಯೂ ಮಾತನಾಡುವುದಿಲ್ಲ.
ಹೆಚ್ಚಿನ ಭಾರತೀಯರ ಜೀವನ ಬಡತನ ಮತ್ತು ಹೋರಾಟದ ಜೀವನವಾಗಿದೆ. ಕೋಟ್ಯಂತರ ಜನರು ವಲಸೆ ಹೋಗುತ್ತಿದ್ದಾರೆ ಮತ್ತು ಕಡಿಮೆ ವೇತನದಲ್ಲಿ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ.
ಆದರೆ 12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಮತ್ತು 11 ವರ್ಷಗಳಿಂದ ಪ್ರಧಾನಿಯಾಗಿರುವ ವ್ಯಕ್ತಿ ನಿರ್ಲಿಪ್ತತೆ ಬಗ್ಗೆ ಮಾತಾಡುತ್ತಾರೆ.
ಚುನಾವಣೆಯ ಸಮಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಅವರು ಭಾಷೆಯ ಎಲ್ಲಾ ಮಿತಿಗಳನ್ನು ದಾಟುವುದು ಕೂಡ ಗೊತ್ತಿರುವ ವಿಚಾರವೇ ಆಗಿದೆ.
ಪ್ರಧಾನಿಯಾಗಿ ಏಕೆ ಅವರು ಸಂದರ್ಶನದಲ್ಲಿ ತಮ್ಮನ್ನು ವ್ಯಕ್ತಪಡಿಸಿಕೊಳ್ಳುವುದಿಲ್ಲ?
ಪ್ರತೀ ಬಾರಿಯೂ ಅವರ ಸಂದರ್ಶನದ ಬಹುಪಾಲು ಭಾಗ ಬಾಲ್ಯದ ಮಾತುಕತೆ ಮತ್ತು ಆಧ್ಯಾತ್ಮಿಕ ವಿಷಯಗಳಿಂದಲೇ ತುಂಬಿರುವುದು ಏಕೆ?
ಪ್ರಧಾನಿ ಮೋದಿ 10 ವರ್ಷಗಳಲ್ಲಿ ಒಂದೇ ಸುದ್ದಿಗೋಷ್ಠಿ ನಡೆಸಲು ಸಾಧ್ಯವಾಗಲಿಲ್ಲ. ಆದರೆ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ 3 ಗಂಟೆ 5 ನಿಮಿಷ 41 ಸೆಕೆಂಡುಗಳ ಕಾಲ ಮಾತನಾಡುತ್ತಾರೆ.
ಆದರೆ ಇದು ಪ್ರಧಾನಿಯ ಸಂದರ್ಶನವಾಗಿತ್ತೇ ಅಥವಾ
ಅವರ ಮನ್ ಕಿ ಬಾತ್ ಆಗಿತ್ತೇ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.