ಆಳುವವರ ಕಣ್ಣಲ್ಲಿ ದೇಶದ ಮುಖ್ಯ ಆದ್ಯತೆಗಳೇಕೆ ಕಡೆಗಣಿಸಲ್ಪಡುತ್ತಿವೆ?

ಫ್ರಾನ್ಸ್ ದೇಶದಲ್ಲಿ ನಾಗರಿಕರು ವೈದ್ಯರ ಬಳಿ ತಪಾಸಣೆಯಿಂದ ಹಿಡಿದು ಔಷಧಿಗಳನ್ನು ಖರೀದಿಸುವವರೆಗೆ ಎಲ್ಲಾ ಆರೋಗ್ಯ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ.
ಆದರೆ ಭಾರತದಲ್ಲಿ ಇಂತಹವನ್ನು ನಿರೀಕ್ಷಿಸುವಂತೆಯೇ ಇಲ್ಲ.
ಇಲ್ಲಿ ಆಸ್ಪತ್ರೆಗಳಿಗಾಗಿ ಮಾಡುವ ಖರ್ಚು ಜನರ ಪೂರ್ತಿ ಉಳಿತಾಯವನ್ನೇ ಖಾಲಿ ಮಾಡುವಷ್ಟಿರುತ್ತದೆ. ಜನರ ಸಾಲದ ಹೊರೆಯೂ ಹೆಚ್ಚಾಗುತ್ತದೆ.
ಹಾಗಾದರೆ ಭಾರತ ಸರಕಾರ ಫ್ರಾನ್ಸ್‌ನಂತೆ ಉಚಿತ ಆರೋಗ್ಯ ಸೇವೆ ನೀಡಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಏಳುತ್ತದೆ.
ಫ್ರಾನ್ಸ್‌ನಲ್ಲಿ ಕೇವಲ 7 ಕೋಟಿ ಜನರಿದ್ದಾರೆ. ಆದರೆ ಭಾರತದಲ್ಲಿ ಸುಮಾರು 150 ಕೋಟಿ ಜನರಿದ್ದಾರೆ. ಹೀಗಾಗಿ ಸರಕಾರ ಅಷ್ಟೆಲ್ಲ ಜನರಿಗೆ ಉಚಿತ ಸೇವೆ ನೀಡಲು ಸಾಧ್ಯವಿಲ್ಲ ಎಂಬುದು ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ಜನರ ವಾದ.
ನಿಜ ಹೇಳಬೇಕೆಂದರೆ ಈ ವಾದದಲ್ಲಿ ಹೆಚ್ಚಿನ ಹುರುಳಿಲ್ಲ.
7 ಕೋಟಿ ಜನರಿರುವ ಫ್ರಾನ್ಸ್‌ನಲ್ಲಿ ಸರಕಾರ ಪ್ರತೀ ವರ್ಷ ಆರೋಗ್ಯಕ್ಕಾಗಿ ಸುಮಾರು 25 ಲಕ್ಷ ಕೋಟಿ ರೂ. ಖರ್ಚು ಮಾಡುತ್ತದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ ಪ್ರತಿಯೊಬ್ಬ ನಾಗರಿಕನೂ ರೂ. 3 ಲಕ್ಷಕ್ಕಿಂತ ಹೆಚ್ಚು ಪಡೆಯುತ್ತಾನೆ.
ಮತ್ತೊಂದೆಡೆ, ಭಾರತದಲ್ಲಿ ಇಷ್ಟೊಂದು ದೊಡ್ಡ ಜನಸಂಖ್ಯೆಯಿದ್ದರೂ, ಕೇಂದ್ರ ಸರಕಾರ ಈ ವರ್ಷ ಆರೋಗ್ಯ ರಕ್ಷಣೆಗಾಗಿ ಕೇವಲ 95,000 ಕೋಟಿ ರೂ. ಬಜೆಟ್ ಅನ್ನು ನಿಗದಿಪಡಿಸಿದೆ. ಅಂದರೆ, ಪ್ರತಿ ನಾಗರಿಕನಿಗೆ ಕೇವಲ 600 ರೂ. ಮಾತ್ರ.
ಭಾರತ ಸರಕಾರದ ಕೇಂದ್ರ ಆರೋಗ್ಯ ಬಜೆಟ್‌ಗೆ ರಾಜ್ಯ ಸರಕಾರಗಳ ವೆಚ್ಚವನ್ನು ಸೇರಿಸಿದರೂ ಸಹ, ಈ ಒಟ್ಟು ಮೊತ್ತ ಸುಮಾರು 7 ಲಕ್ಷ ಕೋಟಿ ರೂ. ಮಾತ್ರ ಆಗುತ್ತದೆ.
ಇದು ಫ್ರಾನ್ಸ್‌ನ ಆರೋಗ್ಯ ಬಜೆಟ್ ಮೊತ್ತ 25 ಲಕ್ಷ ಕೋಟಿ ರೂ.ಗಿಂತ ತೀರಾ ಕಡಿಮೆ.
ಪರಿಸ್ಥಿತಿ ಅತ್ಯಂತ ಕೆಟ್ಟದಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಶಿಕ್ಷಣ, ಸಾರ್ವಜನಿಕ ಕಲ್ಯಾಣ ಮತ್ತು ರಕ್ಷಣೆಗಾಗಿ ಕೂಡ ಭಾರತದ ಖರ್ಚು ಫ್ರಾನ್ಸ್‌ಗಿಂತ ತೀರಾ ಕಡಿಮೆ.
2025ರಲ್ಲಿ, ಫ್ರಾನ್ಸ್ ಮಕ್ಕಳ ಶಿಕ್ಷಣಕ್ಕಾಗಿ ಸುಮಾರು 13 ಲಕ್ಷ ಕೋಟಿ ರೂ. ಬಜೆಟ್ ಹೊಂದಿತ್ತು. ಆದರೆ ಭಾರತದಲ್ಲಿ, 2025-26ರಲ್ಲಿ ಶಿಕ್ಷಣಕ್ಕಾಗಿ ಸುಮಾರು 1.3 ಲಕ್ಷ ಕೋಟಿ ರೂ. ಮಾತ್ರ ಖರ್ಚು ಮಾಡುತ್ತಿದೆ. ರಾಜ್ಯಗಳ ಪಾಲನ್ನು ಸೇರಿಸಿದರೂ, ಅದು 5 ಲಕ್ಷ ಕೋಟಿಯಷ್ಟೇ ಆಗುತ್ತದೆ.
ಸಾಮಾಜಿಕ ಕಲ್ಯಾಣದಲ್ಲೂ ಇದೇ ಕಥೆ.
ಈ ವರ್ಷದ ಬಜೆಟ್‌ನಲ್ಲಿ ಬಡವರು, ಕಾರ್ಮಿಕರು ಮತ್ತು ನಿರ್ಗತಿಕರಿಗಾಗಿ 3 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ಹಣ ಸಬ್ಸಿಡಿ, ಪಡಿತರ ಮತ್ತು ಸಣ್ಣಪುಟ್ಟ ನೆರವು ನೀಡುವುದಕ್ಕಾಗಿ ಹೋಗುತ್ತದೆ. ಆದರೆ ಫ್ರಾನ್ಸ್‌ನಲ್ಲಿ ಈ ಮೊತ್ತ ಸುಮಾರು ರೂ. 12 ಲಕ್ಷ ಕೋಟಿಯಷ್ಟಿದೆ.
ನಮ್ಮ ಸಮಸ್ಯೆಗಳು ಬೇರೆ ಬೇರೆ. ನಮ್ಮ ಗಡಿಗಳನ್ನು ರಕ್ಷಿಸಲು ನಾವು ಹೆಚ್ಚು ಖರ್ಚು ಮಾಡಬೇಕು ಎಂದು ಕೆಲವರು ಹೇಳಬಹುದು. ಅದನ್ನೂ ನೋಡುವುದಾದರೆ, ಭಾರತ ತನ್ನ ಸೇನೆ ಮತ್ತು ರಕ್ಷಣೆಗಾಗಿ 6.8 ಲಕ್ಷ ಕೋಟಿ ರೂ. ಖರ್ಚು ಮಾಡುತ್ತದೆ.
ಆದರೆ ಫ್ರಾನ್ಸ್ ರಕ್ಷಣಾ ಬಜೆಟ್ ಕೂಡ ಸುಮಾರು ರೂ. 4 ಲಕ್ಷ ಕೋಟಿಗಳಷ್ಟಿದೆ. ಇದು ಭಾರತಕ್ಕಿಂತ ಕಡಿಮೆಯಿಲ್ಲ. ಫ್ರಾನ್ಸ್ ರಕ್ಷಣೆಗಾಗಿಯೂ ದೊಡ್ಡ ಮಟ್ಟದ ಖರ್ಚು ಮಾಡುತ್ತದೆ. ಅದಕ್ಕೆ ಹೋಲಿಸಿದರೆ, ನಮ್ಮ ಖರ್ಚು ತೀರಾ ದೊಡ್ಡದು ಎನ್ನಿಸುವುದಿಲ್ಲ.
ನಾವು ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ ರಕ್ಷಣೆಗೆ ಹೆಚ್ಚು ಖರ್ಚು ಮಾಡುತ್ತಿಲ್ಲ ಎನ್ನುವಾಗ, ಬೇರೆ ಎಲ್ಲಿ ಖರ್ಚು ಮಾಡುತ್ತಿದ್ದೇವೆ? ದೇಶದ ಹಣ ಎಲ್ಲಿಗೆ ಹೋಗುತ್ತಿದೆ? ನಮಗಿಂತ ಕಡಿಮೆ ಜಿಡಿಪಿ ಹೊಂದಿರುವ ದೇಶಗಳು ಖರ್ಚು ಮಾಡುವಷ್ಟು ಹಣವನ್ನು ಕೂಡ ನಾವು ಏಕೆ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ?
2025-26ರ ಭಾರತದ ಒಟ್ಟು ಬಜೆಟ್ ಸುಮಾರು 50 ಲಕ್ಷ ಕೋಟಿ ರೂಪಾಯಿಗಳಷ್ಟಿದೆ.
ಇದೇ ವೇಳೆ ಫ್ರಾನ್ಸ್‌ನ ಬಜೆಟ್ 140 ಲಕ್ಷ ಕೋಟಿ ಮೊತ್ತದ್ದಾಗಿದ್ದು, ನಮ್ಮದು ಅದರ ಸರಿಸುಮಾರು ಮೂರನೇ ಒಂದು ಭಾಗವಾಗಿದೆ ಎಂದು ವರದಿಯೊಂದು ಹೇಳುತ್ತದೆ.
ಭಾರತದ ಜಿಡಿಪಿ 4.3 ಟ್ರಿಲಿಯನ್ ಡಾಲರ್. ಫ್ರಾನ್ಸ್ ಜಿಡಿಪಿ ಸುಮಾರು 3.17 ಟ್ರಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಹೀಗಿರುವಾಗಲೂ ನಮ್ಮ ಬಜೆಟ್ ಗಾತ್ರ ಕಡಿಮೆಯಾಗಿದೆ.
ಇದರ ಹಿಂದೆ ಹಲವು ಕಾರಣಗಳಿವೆ.
ಭಾರತದ ಬಹುಪಾಲು ಸಂಪತ್ತು ದೇಶದ ಕೆಲವೇ ಪ್ರತಿಶತ ಜನರ ಒಡೆತನದಲ್ಲಿದೆ ಮತ್ತು ಉಳಿದ ಜನರ ತಲಾ ಆದಾಯ ತುಂಬಾ ಕಡಿಮೆಯಾಗಿದೆ. ಆದಾಯ ತೆರಿಗೆ ಪಾವತಿಸುವುದು ಹಾಗಿರಲಿ, ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ ಅವರ ಬಳಿ ಹಣವಿಲ್ಲವಾಗಿದೆ.
ಹೀಗಾಗಿ, ಭಾರತದಲ್ಲಿ ಜಿಡಿಪಿಯ ಶೇ. 12-13ರಷ್ಟು ಮಾತ್ರ ತೆರಿಗೆಗಳ ಮೂಲಕ ಬರುತ್ತದೆ. ಆದರೆ ಫ್ರಾನ್ಸ್‌ನಲ್ಲಿ ಜಿಡಿಪಿಯ ಸುಮಾರು ಶೇ. 50ರಷ್ಟು ವಿವಿಧ ತೆರಿಗೆಗಳ ಮೂಲಕ ಸರಕಾರಕ್ಕೆ ಬರುತ್ತದೆ.
ನಮ್ಮ ದೇಶದ ಬಜೆಟ್‌ನ ಬಹುಪಾಲು ಭಾಗ, ಅಂದರೆ ಸುಮಾರು ಶೇ. 20ರಷ್ಟು, ಅಂದರೆ 10 ಲಕ್ಷ ಕೋಟಿ ಹಣ ದೇಶ ತೆಗೆದುಕೊಂಡ ಸಾಲದ ಬಡ್ಡಿ ಪಾವತಿಸುವುದಕ್ಕೇ ಹೋಗುತ್ತದೆ.
ದೇಶದ ಬಾಹ್ಯ ಸಾಲವೇ 717.9 ಶತಕೋಟಿ ಡಾಲರ್. ಈ ಸಾಲದಲ್ಲಿ ಶೇ. 64.6 ಅಂದರೆ ಸರಿಸುಮಾರು 464 ಶತಕೋಟಿ ಡಾಲರ್ ಸರಕಾರೇತರ ಸಾಲವಾಗಿದೆ. ಅಂದರೆ ಈ ಸಾಲವನ್ನು ಭಾರತೀಯ ಬ್ಯಾಂಕುಗಳು ಮತ್ತು ಭಾರತೀಯ ಕಂಪೆನಿಗಳು ತೆಗೆದುಕೊಳ್ಳುತ್ತವೆ. ಈ ಸಾಲಕ್ಕೆ ಭಾರತ ಸರಕಾರ ನೇರ ಹೊಣೆಗಾರವಲ್ಲವಾದರೂ, ಇದು ಪರೋಕ್ಷ ಪರಿಣಾಮ ಬೀರುತ್ತದೆ.
ಸರಕಾರ ಎರಡು ರೀತಿಯಲ್ಲಿ ಸಾಲ ಪಡೆಯುತ್ತದೆ. ಒಂದು, ದೇಶದೊಳಗೆ ಬಾಂಡ್‌ಗಳನ್ನು ನೀಡುವ ಮೂಲಕ.ಎರಡನೆಯದಾಗಿ, ಇತರ ದೇಶಗಳು ಮತ್ತು ವಿದೇಶಿ ಸಂಸ್ಥೆಗಳಿಂದ ಪಡೆಯುತ್ತದೆ.
ಹೊರಗಿನಿಂದ ಪಡೆದ ಯಾವುದೇ ಸಾಲವನ್ನು ಬಾಹ್ಯ ಸಾಲ ಎನ್ನಲಾಗುತ್ತದೆ. ಭಾರತದ ಬಾಹ್ಯ ಸಾಲದ ಸುಮಾರು ಶೇ. 33ರಷ್ಟು ವಿಶ್ವ ಬ್ಯಾಂಕ್ ಮತ್ತು ಏಶ್ಯನ್ ಅಭಿವೃದ್ಧಿ ಬ್ಯಾಂಕ್‌ನಂತಹ ಸಂಸ್ಥೆಗಳಿಂದ ಬಂದಿದೆ. ಇದಲ್ಲದೆ, ಜಪಾನ್‌ನಂತಹ ದೇಶಗಳಿಂದಲೂ ಭಾರತ ಶೇ. 16ರಷ್ಟು ಸಾಲ ಪಡೆಯುತ್ತದೆ.
ಭಾರತದ ಒಟ್ಟು ಬಾಹ್ಯ ಸಾಲದ ಶೇ. 55ರಷ್ಟನ್ನು ಯುಎಸ್ ಡಾಲರ್‌ಗಳಲ್ಲಿ, ಶೇ. 6ರಷ್ಟನ್ನು ಜಪಾನೀಸ್ ಯುವಾನ್‌ನಲ್ಲಿ, ಶೇ.4.7 ರಷ್ಟು ಸಾಲವನ್ನು ಐಎಂಎಫ್‌ನ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ಮೂಲಕ ಮತ್ತು ಶೇ. 3ರಷ್ಟು ಸಾಲವನ್ನು ಯೂರೋದಲ್ಲಿ ತೆಗೆದುಕೊಳ್ಳಲಾಗಿದೆ.
ಬಾಹ್ಯ ಸಾಲ ತುಂಬಾ ಅಪಾಯಕಾರಿ. ಇದನ್ನು ನಿಯಂತ್ರಿಸದಿದ್ದರೆ, ಅದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ.
ಇತ್ತೀಚೆಗೆ ಕೇಂದ್ರ ಸರಕಾರ ಕೆಲ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಭಾರತದ ಮೇಲಿನ ಬಾಹ್ಯ ಸಾಲ, ಅಂದರೆ ವಿದೇಶಗಳಿಂದ ಪಡೆದ ಸಾಲ ವೇಗವಾಗಿ ಹೆಚ್ಚುತ್ತಿದೆ ಎಂದು ಆ ಅಂಕಿಅಂಶಗಳು ತೋರಿಸಿವೆ.
ಡಿಸೆಂಬರ್ 2023ರ ಅಂಕಿಅಂಶಗಳನ್ನು ನೋಡಿದರೆ, ಭಾರತದ ಒಟ್ಟು ಬಾಹ್ಯ ಸಾಲ 687 ಬಿಲಿಯನ್ ಡಾಲರ್ ಆಗಿದೆ. ಡಿಸೆಂಬರ್ 2024ರಲ್ಲಿ ಇದು 717.9 ಬಿಲಿಯನ್ ಡಾಲರ್‌ಗೆ ಏರಿದೆ. ಅಂದರೆ ಸುಮಾರು 70 ಬಿಲಿಯನ್ ಡಾಲರ್ (ಶೇ. 10ಕ್ಕಿಂತ ಹೆಚ್ಚು) ಹೆಚ್ಚಳ.
ಸೆಪ್ಟಂಬರ್ 2024ರಿಂದ ಡಿಸೆಂಬರ್ 2024ರವರೆಗಿನ ಡೇಟಾವನ್ನು ನೋಡಿದರೆ, ಕೇವಲ 3 ತಿಂಗಳಲ್ಲಿ ಭಾರತದ ಬಾಹ್ಯ ಸಾಲ 712 ಬಿಲಿಯನ್ ಡಾಲರ್‌ಗಳಿಂದ 717.9 ಬಿಲಿಯನ್ ಡಾಲರ್‌ಗೆ ಏರಿದೆ. ಅಂದರೆ, ಕೇವಲ 3 ತಿಂಗಳ ಅಲ್ಪಾವಧಿಯಲ್ಲಿ ಸುಮಾರು 6 ಬಿಲಿಯನ್ ಡಾಲರ್‌ಗಳ ಹೆಚ್ಚಳ.
2010ರವರೆಗೆ ಭಾರತದ ಬಾಹ್ಯ ಸಾಲ ಕೇವಲ 290 ಬಿಲಿಯನ್ ಡಾಲರ್ ಆಗಿತ್ತು. ನಂತರ 2019ರವರೆಗಿನ 10 ವರ್ಷಗಳಲ್ಲಿ ಅದು 561 ಬಿಲಿಯನ್ ಡಾಲರ್ ಮುಟ್ಟಿತು.ಈಗ ಅದು 700 ಬಿಲಿಯನ್ ಡಾಲರ್ ದಾಟಿದೆ.
ಭಾರತದ ಬಾಹ್ಯ ಸಾಲದ ಹೆಚ್ಚಳದಿಂದಾಗಿ, ಜಿಡಿಪಿಗೆ ಸಾಲದ ಅನುಪಾತವೂ ಹೆಚ್ಚುತ್ತಿದೆ. ಈ ಅನುಪಾತ ಕಡಿಮೆಯಿದ್ದಷ್ಟೂ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ಸಾಲ ಮತ್ತು ಜಿಡಿಪಿ ಅನುಪಾತ ಎಂದರೆ ನಮ್ಮ ಒಟ್ಟು ಜಿಡಿಪಿಗೆ ಹೋಲಿಸಿದರೆ ನಮ್ಮ ಬಾಹ್ಯ ಸಾಲ ಎಷ್ಟು ಎಂಬುದು.
ಸದ್ಯ ನಮ್ಮ ಜಿಡಿಪಿ ಸುಮಾರು 4 ಟ್ರಿಲಿಯನ್ ಡಾಲರ್‌ಗಳು ಮತ್ತು ಸಾಲ 717 ಬಿಲಿಯನ್ ಡಾಲರ್.
ಅಂದರೆ, ನಮ್ಮ ಜಿಡಿಪಿಯ ಸುಮಾರು ಶೇ.19.1ರಷ್ಟು ಸಾಲವಿದೆ ಮತ್ತು ಅದು ನಿರಂತರವಾಗಿ ಹೆಚ್ಚುತ್ತಿದೆ.
ಅದೇ ಸಮಯದಲ್ಲಿ, ಚೀನಾದಂತಹ ದೇಶಗಳ ಸಾಲ ಮತ್ತು ಜಿಡಿಪಿ ಅನುಪಾತ ನಮ್ಮದಕ್ಕಿಂತ ತುಂಬಾ ಕಡಿಮೆ.
ಚೀನಾದ ಜಿಡಿಪಿ ಸುಮಾರು 20 ಟ್ರಿಲಿಯನ್ ಡಾಲರ್.
ಆದರೆ ಅವರ ಸಾಲ ಸುಮಾರು 2 ಟ್ರಿಲಿಯನ್ ಆಗಿದೆ.ಅಂದರೆ ಚೀನಾದ ಜಿಡಿಪಿಯ ಶೇ.10ರಷ್ಟು ಮಾತ್ರ ಸಾಲವಿದೆ.
ಕಳೆದ ದಶಕದಲ್ಲಿ ಭಾರತದ ಬಾಹ್ಯ ಸಾಲ ಏಕೆ ವೇಗವಾಗಿ ಹೆಚ್ಚುತ್ತಿದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಸರಕಾರ ಹೆಚ್ಚಿನ ಸಾಲಗಳನ್ನು ತೆಗೆದುಕೊಳ್ಳುತ್ತಿದೆ.
ಕೆಲ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗಾಗಿ ಖಂಡಿತವಾಗಿಯೂ ಸಾಲ ತೆಗೆದುಕೊಳ್ಳಲಾಗುತ್ತದೆ. ಆದರೆ ಪ್ರಶ್ನೆ ಏನೆಂದರೆ, ಈ ಯೋಜನೆಗಳ ಅಗತ್ಯವಿದೆಯೇ ಎಂಬುದು.
2014ರ ಜನವರಿಯಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಒಂದು ಕಾರ್ಯಕ್ರಮದಲ್ಲಿ ಅವರು, 8-9 ವರ್ಷಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತವೆ. ಸ್ವಾತಂತ್ರ್ಯದ ವಜ್ರ ಮಹೋತ್ಸವ ಆಚರಿಸುತ್ತಿರುವಾಗ ದೇಶದಲ್ಲಿ ಬುಲೆಟ್ ರೈಲುಗಳ ಕೆಲಸ ಪೂರ್ಣಗೊಳಿಸಬೇಕು ಎಂದಿದ್ದರು.
ಆಗ ಜಗತ್ತು ಭಾರತವನ್ನು ಹೊಸ ರೀತಿಯಲ್ಲಿ ನೋಡಲು ಪ್ರಾರಂಭಿಸುತ್ತದೆ ಎಂದಿದ್ದರು.
ಈ ಭಾಷಣದ ನಾಲ್ಕು ತಿಂಗಳ ನಂತರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2015ರಲ್ಲಿ ಅವರು, ಅಹಮದಾಬಾದ್‌ನಿಂದ ಮುಂಬೈಗೆ ಬುಲೆಟ್ ರೈಲು ಓಡಿಸುವುದಾಗಿ ಘೋಷಿಸಿದರು.
ಈ ಯೋಜನೆಗೆ 2017ರ ಸೆಪ್ಟಂಬರ್ 14ರಂದು ಅಡಿಪಾಯ ಹಾಕಲಾಯಿತು. ಈ 1.08 ಲಕ್ಷ ಕೋಟಿ ರೂ. ಯೋಜನೆಗಾಗಿ ಜಪಾನ್‌ನಿಂದ ಭಾರೀ ಸಾಲ ಪಡೆಯಲಾಯಿತು.
2022ರ ವೇಳೆಗೆ ಬುಲೆಟ್ ರೈಲು ಓಡಿಸುವ ಗುರಿ ನಿಗದಿಪಡಿಸಲಾಯಿತು. ನಂತರ ಅದನ್ನು 2023, ನಂತರ 2026 ಮತ್ತು ಈಗ 2028ಕ್ಕೆ ವಿಸ್ತರಿಸಲಾಗಿದೆ.
ನಿರಂತರವಾಗಿ ಹೆಚ್ಚುತ್ತಿರುವ ಗಡುವುಗಳು ಈ ಯೋಜನೆಯ ವೆಚ್ಚವನ್ನೂ ಹೆಚ್ಚಿಸಿವೆ. ಈಗ ಅದು ಸುಮಾರು ರೂ. 1.5 ಲಕ್ಷ ಕೋಟಿಗೆ ಏರಬಹುದು.
ಇಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ ನಂತರವೂ, ಬುಲೆಟ್ ಟ್ರೈನ್ ನಷ್ಟದಲ್ಲಿಯೇ ಇದ್ದರೆ, ಅದನ್ನು ಕೆಟ್ಟ ಹೂಡಿಕೆ ಎಂದು ಪರಿಗಣಿಸಬೇಕಾಗುತ್ತದೆ.
ಜಪಾನ್‌ನ ಬುಲೆಟ್ ರೈಲನ್ನು ಬಿಟ್ಟರೆ, ಫ್ರಾನ್ಸ್, ದಕ್ಷಿಣ ಕೊರಿಯಾ, ತೈವಾನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳ ಬುಲೆಟ್ ರೈಲುಗಳು ಸಹ ನಷ್ಟದಲ್ಲಿವೆ. ತೈವಾನ್‌ನ ಬುಲೆಟ್ ರೈಲು 1.5 ಬಿಲಿಯನ್ ಡಾಲರ್ ನಷ್ಟದಲ್ಲಿದೆ. ಚೀನಾದ ಬುಲೆಟ್ ರೈಲು 7.17 ಬಿಲಿಯನ್ ಡಾಲರ್ ನಷ್ಟದಲ್ಲಿದೆ.ಅರ್ಜೆಂಟೀನಾ ಬುಲೆಟ್ ರೈಲಿನ ಯೋಚನೆಯನ್ನೇ ಬಿಟ್ಟಿದೆ.
ಬುಲೆಟ್ ರೈಲು ದರ ಬಹುತೇಕ ವಿಮಾನ ದರಕ್ಕೆ ಸಮಾನವಾಗಿರುವುದರಿಂದ ಅದನ್ನು ಕೈಬಿಡಲಾಗಿದೆ. ಭಾರತದಲ್ಲಿ ಇದು ವಿಮಾನ ದರಕ್ಕಿಂತ ಹೆಚ್ಚಾಗಿರುತ್ತದೆ.
ಅಹಮದಾಬಾದ್‌ನಿಂದ ಮುಂಬೈಗೆ ಬುಲೆಟ್ ರೈಲು ದರ 4,000 ರೂ.ಗಳಿಂದ 5,000 ರೂ. ಆಗಲಿದೆ.
ದೇಶದ ತಲಾ ಆದಾಯ ವಾರ್ಷಿಕವಾಗಿ 2 ಲಕ್ಷ ರೂ.
ಅಂದರೆ ತಿಂಗಳಿಗೆ ಸರಿಸುಮಾರು 16,000 ರೂ.
ಈಗ ಪ್ರಶ್ನೆ ಏನೆಂದರೆ, ಮಾಸಿಕ 16,000 ರೂ. ಗಳಿಸುವ ಜನರು ಈ ಬುಲೆಟ್ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವೆ?
ಕೆಲವರು ಇದು ಶ್ರೀಮಂತರಿಗೆ ಮಾತ್ರ ಎಂದು ಹೇಳುತ್ತಾರೆ. ಆದರೆ ಶ್ರೀಮಂತರು ಅದರಲ್ಲಿ ಪ್ರಯಾಣಿಸುತ್ತಾರೆಯೆ?
ಈ ರೈಲು ಅಹಮದಾಬಾದ್‌ನಿಂದ ಮುಂಬೈಗೆ ಹೋಗಲು 2 ಗಂಟೆ ಬೇಕು. ಆದರೆ ಅಹಮದಾಬಾದ್‌ನಿಂದ ಮುಂಬೈಗೆ ವಿಮಾನದಲ್ಲಿ ಕೇವಲ 1 ಗಂಟೆ 15 ನಿಮಿಷ ಸಾಕು.
ವಿಮಾನ ದರ ಕೂಡ ಕೇವಲ 2,500 ರೂ.ಗಳಿಂದ 3,000 ರೂ. ಹೀಗಿರುವಾಗ ಶ್ರೀಮಂತರು ಯಾಕಾದರೂ ಬುಲೆಟ್ ರೈಲಿನಲ್ಲಿ ಪ್ರಯಾಣಿಸುತ್ತಾರೆ?
ಬಡವರು ಸಾಮಾನ್ಯ ರೈಲುಗಳನ್ನು ಬಳಸುತ್ತಾರೆ ಮತ್ತು ಶ್ರೀಮಂತರು ವಿಮಾನವನ್ನು ಬಳಸುತ್ತಾರೆ. ಹಾಗಾದರೆ ಬುಲೆಟ್ ರೈಲಿನಲ್ಲಿ ಯಾರು ಪ್ರಯಾಣಿಸುತ್ತಾರೆ?
ಭಾರತದ ಸಾಲ ಹೆಚ್ಚಾಗಲು ಎರಡನೇ ಪ್ರಮುಖ ಕಾರಣ ರೂಪಾಯಿ ದುರ್ಬಲಗೊಳ್ಳುವುದು.
ರೂಪಾಯಿ ಮೌಲ್ಯ ಕುಸಿದಾಗಲೆಲ್ಲಾ ಭಾರತದ ಸಾಲವೂ ಹೆಚ್ಚಾಗುತ್ತದೆ.
ಭಾರತದ ಹೆಚ್ಚಿನ ಬಾಹ್ಯ ಸಾಲ ಡಾಲರ್‌ಗಳಲ್ಲಿದೆ. ಆದ್ದರಿಂದ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಾಗಲೆಲ್ಲಾ, ಸಾಲದ ಮೇಲೆ ಅದು ನೇರ ಪರಿಣಾಮ ಬೀರುತ್ತದೆ. ಅದೇ ಪ್ರಮಾಣದ ಡಾಲರ್‌ಗಳನ್ನು ಮರುಪಾವತಿಸಲು ನಾವು ಹೆಚ್ಚು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಕಳೆದ ಒಂದು ವರ್ಷದಲ್ಲಿ ಹೆಚ್ಚಿದ 70 ಶತಕೋಟಿ ಡಾಲರ್ ಸಾಲದಲ್ಲಿ, ರೂಪಾಯಿ ದುರ್ಬಲಗೊಂಡ ಕಾರಣ ಸರಿಸುಮಾರು 12 ಶತಕೋಟಿ ಡಾಲರ್ ಸಾಲ ಹೆಚ್ಚಾಗಿದೆ.
ಅಂದರೆ, ರೂಪಾಯಿ ಮೌಲ್ಯ ಕಡಿಮೆಯಾಗದಿದ್ದರೆ, ನಮ್ಮ ಸಾಲ ಇಷ್ಟೊಂದು ಹೆಚ್ಚಾಗುತ್ತಿರಲಿಲ್ಲ. ರೂಪಾಯಿ ಮೌಲ್ಯ ಕುಸಿಯುವುದು ನಮ್ಮ ಬಾಹ್ಯ ಸಾಲವನ್ನು ನೇರವಾಗಿ ಹೆಚ್ಚಿಸುತ್ತಿದೆ.
ಜನರ ಕಲ್ಯಾಣಕ್ಕಾಗಿ ನಮ್ಮ ಖರ್ಚು ಕಡಿಮೆ ಇರುವುದಕ್ಕೆ ಹೆಚ್ಚಿನ ಜನಸಂಖ್ಯೆ ಕಾರಣವಲ್ಲ. ನಿಜವಾದ ಸಮಸ್ಯೆ ಎಂದರೆ ನಮ್ಮ ಸಂಪನ್ಮೂಲಗಳ ಅಸಮರ್ಪಕ ಬಳಕೆ.
ನಾವು ನಮ್ಮ ಜನರ ಮೂಲಭೂತ ಅಗತ್ಯಗಳಿಗಾಗಿ ಹೆಚ್ಚು ಖರ್ಚು ಮಾಡಬೇಕೇ ಅಥವಾ ಆಕರ್ಷಕ ಮತ್ತು ನಷ್ಟ ತರುವ ಯೋಜನೆಗಳಿಗೆ ಹೆಚ್ಚು ಖರ್ಚು ಮಾಡಬೇಕೇ? ಜನರು ತಮ್ಮ ಅಗತ್ಯ ಖರ್ಚುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ನಿಭಾಯಿಸುವಂತೆ ಅವರನ್ನು ಆರ್ಥಿಕವಾಗಿ ಸಬಲರಾಗಿಸುವುದು ಮುಖ್ಯವೇ ಅಥವಾ ದುಬಾರಿ ಟಿಕೆಟ್‌ಗಳ ಬುಲೆಟ್ ರೈಲು ಮುಖ್ಯವೇ?
ಜನರು ತಮ್ಮ ಶಿಕ್ಷಣ, ಆರೋಗ್ಯ, ವಸತಿ ಅಗತ್ಯಗಳನ್ನು ಯಾವುದೇ ಚಿಂತೆಯಿಲ್ಲದೆ ಪೂರೈಸಿಕೊಳ್ಳುವಂತೆ ಮಾಡುವುದು ಮುಖ್ಯವೇ ಅಥವಾ ಲಕ್ಷಾಂತರ ಕೋಟಿಗ ಫ್ಯಾನ್ಸಿ ಯೋಜನೆಗಳನ್ನು ಜಾರಿ ಮಾಡುವುದು ಮುಖ್ಯವೇ?
ಈಗ ಭಾರತ ಸರಕಾರ ತನ್ನ ಆದ್ಯತೆಗಳನ್ನು ಮರು ವ್ಯಾಖ್ಯಾನಿಸಬೇಕಾಗಿದೆ.