ಕಾಂತರಾಜು ಆಯೋಗದ ವರದಿಯನ್ನು ಮನುವಾದಿಗಳೇಕೆ ವಿರೋಧಿಸುತ್ತಿದ್ದಾರೆ?
ಈದೇಶದ ಸಕಲ ಸಂಪನ್ಮೂಲಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ಹಂಚಿಕೆಯಾಗಬೇಕು, ಇಲ್ಲಿರುವ ಅಸಮಾನತೆ ತೊಲಗಬೇಕು ಎನ್ನುವುದೇ ಸ್ವಾತಂತ್ರ್ಯ ಸಿಕ್ಕ ಬೆನ್ನಿಗೇ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದ ಅಂದಿನ ಕಾಂಗ್ರೆಸ್ ನಾಯಕರುಗಳ ಆಶಯವಾಗಿತ್ತು. ಸ್ವಾತಂತ್ರ್ಯಾನಂತರ ಜನರಿಂದ ಪದೇಪದೇ ಆಯ್ಕೆಗೊಂಡ ಕಾಂಗ್ರೆಸ್ ಪಕ್ಷವು ಬಹುದೀರ್ಘಕಾಲ ಈ ದೇಶದ ಆಡಳಿತವನ್ನು ನಡೆಸಿದೆ ಮತ್ತು ಹಲವು ಭಿನ್ನಾಭಿಪ್ರಾಯ, ವಿರೋಧ, ಎಡರುತೊಡರುಗಳ ನಡುವೆಯೂ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನು ಹಂತಹಂತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ತನ್ನ ಪಕ್ಷದ ಸಿದ್ಧಾಂತವನ್ನಾಗಿ ಅಳವಡಿಸಿಕೊಂಡು ಉಳಿಸಿ ಬೆಳೆಸಿಕೊಂಡು ಬಂದಿದೆ.
ಆದರೆ, ಈ ಮೇಲೆ ವಿವರಿಸಲಾದ ಪ್ರಜಾಪ್ರಭುತ್ವದ ಆಶಯ ಅರ್ಥಾತ್ ಕಾಂಗ್ರೆಸ್ ಸಿದ್ಧಾಂತದ ಒಳಹೊರಗನ್ನು ಅರಿಯದವರು ಈಗಲೂ ಕಾಂಗ್ರೆಸ್ ಪಕ್ಷದೊಳಗೆ ಉನ್ನತವಾದ ಹುದ್ದೆಗಳಲ್ಲಿ ಕುಳಿತಿದ್ದಾರೆ. ಅವರು ಚುನಾವಣೆಯಲ್ಲಿ ಗೆಲ್ಲುವುದು ಹಾಗೂ ಅಧಿಕಾರ ಅನುಭವಿಸುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಅಂದುಕೊಂಡಿದ್ದಾರೆ. ಕಾಂಗ್ರೆಸ್‌ನೊಳಗಿರುವ ಅಂತಹ ನಾಯಕರು ಕಾಂಗ್ರೆಸ್‌ನ ಬಹುಮುಖ್ಯವಾದ ಸ್ಥಾನಗಳಲ್ಲಿ ಗೂಟ ಹೊಡೆದು ಕುಳಿತಿರುವುದೇ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಬಲಹೀನಗೊಳ್ಳಲು ಬಹುಮುಖ್ಯವಾದ ಕಾರಣವಾಗಿದೆ.
ಪ್ರಜಾಪ್ರಭುತ್ವದ ಆಶಯಗಳನ್ನು ಅರೆದು ಕುಡಿದಿರುವ ಬೆರಳೆಣಿಕೆಯಷ್ಟು ಸಂಖ್ಯೆಯ ಸಮಾಜವಾದಿ ನಾಯಕರಷ್ಟೇ ದೇಶದಾದ್ಯಂತ ಇಂದು ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿಟ್ಟಿದ್ದಾರೆ ಅಂದರೆ ಅದು ಅತಿಶಯೋಕ್ತಿ ಆಗಲಾರದು. ಹಾಗೆಯೇ ಮತದಾರರು ಕೂಡ ಆ ಜನಪರ ಐಡಿಯಾಲಜಿ ಹೊಂದಿರುವ ನಾಯಕರ ಪರ ನಿಲ್ಲುತ್ತಾರೆ ಎನ್ನುವುದಕ್ಕೆ 2023ರ ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶ ಒಂದು ಚಿಕ್ಕ ಉದಾಹರಣೆ ಕೂಡ ಆಗಿದೆ.
ಹಾಗೆಯೇ ಆ ಸಿದ್ಧಾಂತದ ಜಾರಿಯ ಮುಂದುವರಿದ ಭಾಗವಾಗಿ ನಾಡಿನ ಕಟ್ಟಕಡೆಯ ಕಡುಬಡವರು ಒಂದೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡುವಂತಾಗಬಾರದು ಎಂಬ ಸಾಮಾಜಿಕ ಕಾಳಜಿಯಿಂದ 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ಅರ್ಧ ಗಂಟೆಯಲ್ಲಿ (ಜುಲೈ 2013) ಅಂದರೆ ಸಂಪುಟ ರಚನೆಯಾಗುವ ಪೂರ್ವದಲ್ಲೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದ ಸಿದ್ದರಾಮಯ್ಯನವರು ತನ್ನ ಸರಕಾರದ ಮೂಲಕ 2014ರಲ್ಲಿ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಕಾಂತರಾಜು ಆಯೋಗವನ್ನು ರಚಿಸಿ ಸಮೀಕ್ಷೆಗೆ ಆದೇಶಿಸಿದ್ದರು. ಆ ಪ್ರಕಾರವಾಗಿ 2015ರಲ್ಲಿ ಆ ಸಮೀಕ್ಷೆಯೂ ಮುಗಿದಿತ್ತು. ಆ ಸಮೀಕ್ಷಾ ವರದಿಯ ವಿಂಗಡೀಕರಣ, ದಾಖಲೀಕರಣ, ಡಿಜಿಟಲೀಕರಣ ಮುಂತಾದ ಬಹುಮುಖ್ಯವಾದ ದೀರ್ಘಕಾಲೀನ ಕೆಲಸಗಳನ್ನು ಸಂಪೂರ್ಣಗೊಳಿಸಿ ಇತ್ತೀಚೆಗೆ (29 ಫೆಬ್ರವರಿ 2024) ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆಯವರು ಆಯೋಗದ ವರದಿಯನ್ನು ಸಿದ್ದರಾಮಯ್ಯ ಸರಕಾರಕ್ಕೆ ಒಪ್ಪಿಸಿದ್ದಾರೆ.
ಖಂಡಿತವಾಗಿಯೂ ಈ ವರದಿಯ ಆಧಾರದಲ್ಲಿ ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಸರಕಾರ ಮುಂದಾಗುವಂತಾದರೆ ಅದರಿಂದ ಶತಶತಮಾನಗಳಿಂದಲೂ ಹಿಂದೂ ಧರ್ಮದ ಹಿಂದುಳಿದ ವರ್ಗ ಮತ್ತು ದಲಿತ ವರ್ಗವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಿಸಿ, ಜೀತ ಮಾಡಿಸಿಕೊಂಡು ಮಜಾ ಉಡಾಯಿಸುತ್ತಿದ್ದ ತಮ್ಮ ಸಮುದಾಯಕ್ಕೆ ವಿಪರೀತ ಹಾನಿಯಾಗುತ್ತದೆ ಎಂಬ ಕುರಿತು ಭಯಕ್ಕೆ ಬಿದ್ದಿರುವ ಮನುವಾದಿಗಳು ಅದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸ್ವತಃ ಆ ವರದಿಯ ಫಲಾನುಭವಿ ಜಾತಿ, ಪಂಗಡಗಳ ನಡುವೆ ಇದರಿಂದ ನಿಮ್ಮ ನಿಮ್ಮ ಪಂಗಡಕ್ಕೆ ಹಾನಿಯಾಗುತ್ತದೆ ಎಂಬ ಕಪೋಲಕಲ್ಪಿತ ಸುಳ್ಳು ವದಂತಿಗಳನ್ನು ಹಬ್ಬಿಸತೊಡಗಿದ್ದಾರೆ.
ಆದರೆ ಈ ನಡುವೆ, ಆ ಸಮೀಕ್ಷೆಯ ಹಿಂದಿನ ಪ್ರಾಮಾಣಿಕ ಕಾಳಜಿಯ ಕುರಿತು ಹಾಗೂ ಮನುವಾದಿಗಳು ಹೊಂದಿರುವ ಗುಪ್ತ ಕಾರ್ಯಸೂಚಿಯ ಕುರಿತು ಅರಿವಿಲ್ಲದ ಅಥವಾ ಅರಿವಿದ್ದೂ ಅರಿವಿಲ್ಲದವರಂತೆ ನಟಿಸುವ ಕಾಂಗ್ರೆಸ್‌ನೊಳಗಿನ ಕೆಲವು ಲಿಂಗಾಯತ ಹಾಗೂ ಒಕ್ಕಲಿಗ ನಾಯಕರು ಆ ವರದಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ ಅಥವಾ ಅವರಿಂದ ಅಂತಹ ಹೇಳಿಕೆಗಳು ಬರುವಂತೆ ಮನುವಾದಿಗಳು ನೋಡಿಕೊಳ್ಳುತ್ತಿದ್ದಾರೆ ಮತ್ತು ಅವರವರೊಳಗೆ ಭಿನ್ನಾಭಿಪ್ರಾಯ ತಂದಿಟ್ಟ ಖುಷಿಯಲ್ಲಿ ಹಿಂದಿನಿಂದ ಹೇಳಿಕೊಂಡು ಮುಸಿ ಮುಸಿ ನಗುತ್ತಿದ್ದಾರೆ. ಹಾಗೆಯೇ ಆ ಮನುವಾದಿಗಳು ನಿಜಕ್ಕೂ ಪ್ರಾಮಾಣಿಕರೇ ಆಗಿದ್ದರೆ ತನ್ನ ನೇತೃತ್ವದ ಪಕ್ಷದ ನಾಯಕರ ಮೂಲಕ ಅಂತಹ ಹೇಳಿಕೆಯನ್ನು ಕೊಡಿಸಬಹುದಿತ್ತು. ಹಾಗೆಯೇ ಕಾಂಗ್ರೆಸ್ ನಾಯಕರು ಕೊಡುವ ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಖಂಡಿತವಾಗಿಯೂ ರಾಜಕೀಯವಾಗಿ ನಷ್ಟವಾಗಲಿದೆ ಮತ್ತು ಆ ನಷ್ಟದ ಕುರಿತಾಗಿ ಖಂಡಿತವಾಗಿಯೂ ಸಿದ್ದರಾಮಯ್ಯನವರಿಗೆ ಮತ್ತವರ ಬೆನ್ನ ಹಿಂದಿರುವ ಸಮಾನ ಮನಸ್ಕ ನಾಯಕರಿಗೆ ಸ್ಪಷ್ಟವಾದ ಅರಿವಿದೆ.
ಆದರೆ ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಎಂದೂ ಅಂತಹ ರಾಜಕೀಯ ನಷ್ಟದ ಕುರಿತು ಚಿಂತಿಸಿಲ್ಲವೆನ್ನಬೇಕಾಗುತ್ತದೆ.
ಅವುಗಳಲ್ಲಿ ಬಹುಮುಖ್ಯವಾಗಿ.. ಸ್ವಾತಂತ್ರ್ಯಾನಂತರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನೆಹರೂ ಸಂಪುಟ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಸಿದ್ಧಾಂತದ ಅಂಬೇಡ್ಕರ್ ಸಂವಿಧಾನ ಜಾರಿಗೊಳಿಸಿ ಈ ದೇಶದ ಬಡವರ ಮಕ್ಕಳಿಗೆ ನಿಜ ಅರ್ಥದ ಸ್ವಾತಂತ್ರ್ಯ ನೀಡಿದಾಗಲೂ ಮನುವಾದಿಗಳ ನೇತೃತ್ವದಲ್ಲಿ ಪ್ರಬಲವಾದ ವಿರೋಧಗಳು ಅಂದು ವ್ಯಕ್ತವಾಗಿದ್ದವು ಮತ್ತು ಪಾಶ್ಚಾತ್ಯ ರಾಷ್ಟ್ರಗಳಿಂದ ಎರವಲು ಪಡೆದ ಸಂವಿಧಾನದ ಅಗತ್ಯತೆ ಭಾರತಕ್ಕಿಲ್ಲ. ಭಾರತದಲ್ಲಿ ಸನಾತನ ಧರ್ಮಧಾರಿತವಾಗಿರುವ ಮನುಸ್ಮತಿ ಆಧಾರದಲ್ಲಿ ಸಂವಿಧಾನ ರಚನೆಯಾಗಬೇಕು ಎಂದು ಪ್ರತಿಪಾದಿಸಿದ್ದರು.
ಸಾವಿರಾರು ವರ್ಷಗಳ ಕಾಲದಿಂದಲೂ ಅದೇ ಮನುವಾದಿಗಳಿಂದ ಶಿಕ್ಷಣ ವಂಚಿತರಾಗಿದ್ದ ಬಡವರ ಮನೆಗಳ ಮಕ್ಕಳಿಗೆ ದೇಶದ ಗ್ರಾಮ ಗ್ರಾಮಗಳ ಮೂಲೆ ಮೂಲೆಗಳಲ್ಲಿ ಶಾಲೆಗಳನ್ನು ತೆರೆದು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿ ಮಾಡಿದಾಗಲೂ ಜೀತ ಮಾಡಿಸುವುದು ತಮ್ಮ ಜನ್ಮಸಿದ್ಧಹಕ್ಕು ಎಂಬ ಭ್ರಮೆಯಲ್ಲಿ ಎಲ್ಲರೂ ವಿದ್ಯಾವಂತರಾದರೆ ಜೀತ ಮಾಡುವವರು ಯಾರು? ಜೀತದಾಳುಗಳೇ ಇಲ್ಲವಾದರೆ ಕೃಷಿ ನಡೆಸುವುದು ಹೇಗೆ? ದೇಶದ ಜನ ಮಣ್ಣು ತಿನ್ನುವ ಕಾಲ ಸನ್ನಿಹಿತವಾಗಲಿದೆ ಎಂದು ಘೋರವಾಗಿ ಭೂಮಾಲಕ ವರ್ಗದ ಮೂಲಕ ಅಪಪ್ರಚಾರ ನಡೆಸಿ ವಿರೋಧಿಸಲಾಗಿತ್ತು. ಆನಂತರದಲ್ಲಿ ದೇಶದ ಬಡವರ ಪರವಾದ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳ ಜಾರಿಯ ಕುರಿತೂ ವಿರೋಧ ವ್ಯಕ್ತವಾಗಿತ್ತು.
ಆ ಕಾಲಕ್ಕೆ ಕೇವಲ ಶ್ರೀಮಂತ ವರ್ಗಕ್ಕಷ್ಟೇ ಸೀಮಿತಗೊಂಡಿದ್ದ ಬ್ಯಾಂಕ್ ಸಾಲ ಮುಂತಾದ ಸವಲತ್ತುಗಳನ್ನು ಬಡವರಿಗೂ ಒದಗಿಸುವ ಹಿತದೃಷ್ಟಿಯಿಂದ ಜಾರಿಗೊಳಿಸಿದ ಬ್ಯಾಂಕ್ ರಾಷ್ಟ್ರೀಕರಣಕ್ಕೂ ವಿರೋಧ ವ್ಯಕ್ತವಾಗಿತ್ತು.
ಸಾವಿರಾರು ವರ್ಷಗಳಿಂದ ಭೂಮಿಯ ಮಾಲಕತ್ವದ ಹಕ್ಕು ನಿರಾಕರಿಸಲ್ಪಟ್ಟಿದ್ದ ಕೃಷಿ ಕಾರ್ಮಿಕರನ್ನು ಭೂಮಾಲಕರ ಗುಲಾಮಗಿರಿಯಿಂದ ಮುಕ್ತಗೊಳಿಸುವ ಹಿತದೃಷ್ಟಿಯಿಂದ ಜಾರಿಗೊಳಿಸಿದ ದರಖಾಸ್ತು, ಭೂ ಮಸೂದೆ, ಅಕ್ರಮ ಸಕ್ರಮಗಳ ಮೂಲಕ ಭೂಮಿಯನ್ನು ನೀಡಿ ಶ್ರೀಮಂತಗೊಳಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು.
ಸಾವಿರಾರು ವರ್ಷಗಳಿಂದ ಕೇವಲ ಕುಲಕಸುಬಿಗಷ್ಟೇ ಸೀಮಿತಗೊಂಡು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಬಡವರ ಮನೆಯ ಮಕ್ಕಳಿಗೆ ಮೀಸಲಾತಿಯ ಮೂಲಕ ವಿದ್ಯೆ ನೀಡಿ, ದೊಡ್ಡ ದೊಡ್ಡ ಸರಕಾರಿ ಹುದ್ದೆಗೇರುವಂತೆ ಮಾಡಿದಾಗಲೂ ವಿರೋಧ ವ್ಯಕ್ತವಾಗಿತ್ತು.
ರಾಜೀವ್ ಗಾಂಧಿಯವರ ಆಡಳಿತದಲ್ಲಿ ದೇಶದಲ್ಲಿ ಕಂಪ್ಯೂಟರ್ ಕ್ರಾಂತಿ ನಡೆಸಿದಾಗಲೂ ‘ಹೊಟ್ಟೆಗೆ ಹಿಟ್ಟಿಲ್ಲ. ಜುಟ್ಟಿಗೆ ಮಲ್ಲಿಗೆ ಹೂ’ ಎಂದು ಅಪಪ್ರಚಾರ ನಡೆಸುವ ಮೂಲಕ ಹೀನಾಯವಾಗಿ ವಿರೋಧಿಸಿದ್ದರು.
ಮನಮೋಹನ್ ಸಿಂಗ್ ಸರಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಈ ದೇಶದಲ್ಲಿನ ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡದಂತೆ ಮಾಡುವ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೊಳಿಸಿದಾಗಲೂ ಇಂತಹ ಯೋಜನೆಗಳಿಂದ ಬಡ ಜನ ಸೋಮಾರಿಗಳಾಗುತ್ತಾರೆ ಎಂದು ಅಪಪ್ರಚಾರ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು.
ಅದೇ ಮನಮೋಹನ್ ಸಿಂಗ್ ಸರಕಾರ ಭ್ರಷ್ಟಾಚಾರ ನಿರ್ಮೂಲನೆಯ ಹಿತದೃಷ್ಟಿಯಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದಾಗಲೂ ಸರಕಾರದ ಮಾಹಿತಿಗಳು ಸೋರಿಕೆಯಾಗುವ ಮೂಲಕ ದೇಶದ ಭದ್ರತೆಗೆ ಅಪಾಯ ಒದಗಲಿದೆ ಎಂದು ಅಪಪ್ರಚಾರ ನಡೆಸುವ ಮೂಲಕ ವಿರೋಧಿಸಿದ್ದರು. ಬಡವರ ಮನೆಯ ಮಕ್ಕಳಿಗೆ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಕೂಡ ಶಿಕ್ಷಣ ದೊರಕುವಂತಾಗಬೇಕು ಎಂಬ ಕಳಕಳಿಯಿಂದ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದಾಗಲೂ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತದೆ ಎಂದು ಅಪಪ್ರಚಾರ ನಡೆಸುವ ಮೂಲಕ ವಿರೋಧಿಸಿದ್ದರು.
ಗ್ರಾಮಾಂತರ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದಾಗಲೂ ದೊಡ್ಡ ರೈತರ ತೋಟದ ಕೆಲಸಕ್ಕೆ ಕಡಿಮೆ ಸಂಬಳಕ್ಕೆ ಆಳುಗಳು ಸಿಗಲಾರರು ಎಂದು ಬಿಂಬಿಸುವ ಮೂಲಕ ವಿರೋಧಿಸಿದ್ದರು.
ಅದೆಲ್ಲಾ ಏಕೆ? ಇತ್ತೀಚೆಗೆ ಸಿದ್ದರಾಮಯ್ಯ ಸರಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುವ ಮೂಲಕ ಮನೆಯ ಹಿರಿಯ ಮಹಿಳೆ ತನ್ನ ಔಷಧ ಮುಂತಾದ ಖರ್ಚಿಗಾಗಿ ಸಂಬಂಧಿಕರ ಮುಂದೆ, ಮಕ್ಕಳ-ಮೊಮ್ಮಕ್ಕಳ ಮುಂದೆ ಕೈಚಾಚದಂತೆ ಮಾಡಿದಾಗ ಆ ಹಣಕ್ಕಾಗಿ ಅತ್ತೆ-ಸೊಸೆ ಹೊಡೆದಾಡುತ್ತಾರೆ ಎಂದು ಅಪಪ್ರಚಾರ ನಡೆಸಿದ್ದರು.
ಗೃಹಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಉಚಿತ ನೀಡಿದಾಗ ವಿದ್ಯುತ್ ಇಲಾಖೆ ದಿವಾಳಿಯಾಗುತ್ತದೆ ಎಂದು ಅಪಪ್ರಚಾರ ನಡೆಸಿದ್ದರು.
ಶಕ್ತಿ ಯೋಜನೆಯ ಮೂಲಕ ರಾಜ್ಯದ ಬಡ ಮಹಿಳೆಯರು ಉದ್ಯೋಗ ನಿಮಿತ್ತ ಅಥವಾ ತೀರ್ಥಯಾತ್ರೆಯ ನಿಮಿತ್ತ ರಾಜ್ಯಾದ್ಯಂತ ಉಚಿತವಾಗಿ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವ ಸವಲತ್ತು ನೀಡಿದಾಗಲೂ ವಿರೋಧ ವ್ಯಕ್ತವಾಗಿತ್ತು ಹಾಗೆ ತಿರುಗುವ ಮಹಿಳೆಯರ ಫೋಟೊ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವ ಮೂಲಕ ಅವಾಚ್ಯವಾಗಿ ನಿಂದಿಸಿ ಅಪಪ್ರಚಾರ ಕೂಡಾ ಮಾಡಲಾಗಿತ್ತು.
ಆದರೂ ವಿರೋಧಿಸುವವರು ವಿರೋಧಿಸುತ್ತಲೇ ಇರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಧ್ಯೇಯವಾದ ಈ ದೇಶದ ಸರ್ವ ಸಂಪನ್ಮೂಲಗಳೂ ಈ ದೇಶದ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ನಮಗೆ ಅಧಿಕಾರ ಇದ್ದಾಗ ಆ ನಿಟ್ಟಿನಲ್ಲಿ ನಾವು ಕಾರ್ಯಾಚರಿಸಬೇಕು ಎಂಬ ಧ್ಯೇಯದಿಂದ ಸಿದ್ದರಾಮಯ್ಯ ಸರಕಾರ ಈ ಸಮೀಕ್ಷೆಯನ್ನು ನಡೆಸಿದೆ. ಹಾಗೆಯೇ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರನ್ನು ಕಾಂಗ್ರೆಸ್ ಆಡಳಿತದಲ್ಲೂ ಮುಂದುವರಿಕೆ ಮಾಡುವ ಮೂಲಕ ಅಪೂರ್ಣಗೊಂಡಿದ್ದ ವರದಿಯನ್ನು ಸಂಪೂರ್ಣಗೊಳಿಸಲು ಕಾಲಾವಕಾಶ ನೀಡಿ ಇದೀಗ ಮೊನ್ನೆಯಷ್ಟೇ ಆ ವರದಿಯನ್ನು ಅತ್ಯಂತ ಕಾಳಜಿಯಿಂದ ಸ್ವೀಕರಿಸಿದೆ ಎನ್ನುವುದು ಖಂಡಿತವಾಗಿಯೂ ಇತಿಹಾಸದಲ್ಲಿ ದಾಖಲಾಗುವ ಅಂಶವಾಗಿದೆ.
ಇಷ್ಟಾಗಿಯೂ ಕಾಂತರಾಜು ಆಯೋಗದ ವರದಿಯನ್ನು ಈತನಕವೂ ಯಾರೂ ಓದಿಲ್ಲವಾದರೂ ಅದನ್ನು ಸಿದ್ದರಾಮಯ್ಯನವರ ಸರಕಾರ ಸ್ವೀಕರಿಸಿದೊಡನೆಯೇ, ಮನುವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದರೆ ಅದರಲ್ಲಿ ಖಂಡಿತವಾಗಿಯೂ ಹಿಂದುಳಿದ ವರ್ಗಕ್ಕೆ ಪೂರಕವಾದ ಅಂಶಗಳು ಅಡಕವಾಗಿದೆ ಎಂದೇ ಅರ್ಥ. ಆ ಕಾರಣಕ್ಕಾಗಿಯಾದರೂ ಸಾಮಾನ್ಯ ಜನರು ಆ ವರದಿಯನ್ನು ಬೆಂಬಲಿಸಬೇಕಿದೆ.