ಸುಳ್ಳು, ದ್ವೇಷ ಹರಡುವ ಮೂಲಗಳನ್ನು ಕಂಡುಹಿಡಿಯಲು ಚುನಾವಣಾ ಆಯೋಗಕ್ಕೆ ಯಾಕೆ ಸಾಧ್ಯವಿಲ್ಲ?
ಬಿಜೆಪಿಯ ಚುನಾವಣಾ ಕಾರ್ಯವೈಖರಿ ಹೇಗಿರುತ್ತದೆಂದರೆ ಅದು ಕೇವಲ ಟಿಕೆಟ್ ಹಂಚಿಕೆ, ರ್ಯಾಲಿ ಇತ್ಯಾದಿಗಳಿಗೆ ಮಾತ್ರ ಸೀಮಿತವೆನ್ನಲಾಗುವುದಿಲ್ಲ. ಚುನಾವಣೆ ಹೊತ್ತಲ್ಲಿ ವಿಪಕ್ಷಗಳ ವಿರುದ್ಧ ಕಳ್ಳಗಿಂಡಿಯಿಂದ ದಾಳಿ ಮಾಡುವುದನ್ನು ಬಿಜೆಪಿಗೆ ಹೇಳಿಕೊಡಬೇಕಿಲ್ಲ.
ಈಗ ಮಹಾರಾಷ್ಟ್ರ ಚುನಾವಣೆ ಹೊತ್ತಲ್ಲೂ ಬಿಜೆಪಿ ಅದರಲ್ಲಿ ಹಿಂದೆ ಬಿದ್ದಿಲ್ಲ. ಸುಳ್ಳು ಆರೋಪಗಳ ಮೂಲಕ ವಿಪಕ್ಷಗಳಿಗೆ ಕಳಂಕ ಹಚ್ಚಲು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪರ ಪ್ರಾಕ್ಸಿ ಪೇಜ್‌ಗಳ ಬಳಕೆ ಜೋರಾಗಿದೆ. ಆ ಪ್ರಾಕ್ಸಿ ಪೇಜ್‌ಗಳು ಮಾಡುತ್ತಿರುವ ವೆಚ್ಚವೇ 35 ಲಕ್ಷ ರೂ.ಗೂ ಹೆಚ್ಚು ಎಂಬುದನ್ನು ‘ನ್ಯೂಸ್ ಲಾಂಡ್ರಿ’ಯಲ್ಲಿ ತನಿಷ್ಕಾ ಸೋಧಿ ಮಾಡಿರುವ ತನಿಖಾ ವರದಿ ಹೇಳುತ್ತಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇಂಥ ಒಂದು ಪ್ರಾಕ್ಸಿ ಪೇಜ್ ವಿಪಕ್ಷ ನಾಯಕರ ವಿರುದ್ಧ ಪ್ರಚಾರಕ್ಕೆ ರೂ. 13 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದೆ.
ಅಂದಹಾಗೆ ಇದು ಕೇವಲ ಒಂದು ಪೇಜ್‌ಗಾಗಿ ಮಾತ್ರ. ಮಹಾರಾಷ್ಟ್ರದಲ್ಲಿ ಈಗ ಇದೇ ರೀತಿಯ ತಂತ್ರ ಬಳಸುತ್ತಿರುವ ಕನಿಷ್ಠ ನಾಲ್ಕು ಮೆಟಾ ಅಥವಾ ಫೇಸ್‌ಬುಕ್ ಪೇಜ್‌ಗಳಿವೆ.
ಸೆಪ್ಟಂಬರ್ 20ರಿಂದ ಅಕ್ಟೋಬರ್ 20ರ ನಡುವೆ ಮೆಟಾ ಜಾಹೀರಾತುಗಳಿಗಾಗಿ ಈ ಪೇಜ್‌ಗಳು 35.38 ಲಕ್ಷ ರೂ. ಖರ್ಚು ಮಾಡಿವೆ.
ಹೀಗೆ ವಿಪಕ್ಷಗಳ ವಿರುದ್ಧದ ಅಪಪ್ರಚಾರಕ್ಕೆ ಬಳಕೆಯಾಗುವ ಈ ಪೇಜ್‌ಗಳು ಅಧಿಕೃತವಾಗಿ ಬಿಜೆಪಿಯ ಹೆಸರಲ್ಲಿಲ್ಲ. ಹಾಗಾಗಿ, ಅವುಗಳನ್ನು ಪಕ್ಷದ ಚುನಾವಣಾ ವೆಚ್ಚದ ಭಾಗವಾಗಿ ಪರಿಗಣಿಸಲಾಗುವುದಿಲ್ಲ.
ಚುನಾವಣಾ ಆಯೋಗದ ಎದುರು ಕಣ್ಣಾಮುಚ್ಚಾಲೆ ಆಡುತ್ತಲೇ, ಕೋಮು ಭಾವನೆ ಪ್ರಚೋದಿಸಲು ಇವುಗಳ ಬಳಕೆಯಾಗುತ್ತಿದೆ. ಆದರೆ ಪ್ರಚೋದನೆ ಉಂಟು ಮಾಡಿದ್ದರ ಹೊಣೆ ಹೊರುವುದನ್ನು ಈ ಪ್ರಾಕ್ಸಿ ಪೇಜ್ ಬಳಕೆ ಮೂಲಕ ತಪ್ಪಿಸಿಕೊಳ್ಳಲಾಗುತ್ತದೆ.
ಲೋಕಸಭೆ ಚುನಾವಣೆಗೂ ಮೊದಲು ಇದೇ ರೀತಿಯ ಜಾಹೀರಾತುಗಳನ್ನು ಇತರ ಪೇಜ್‌ಗಳ ಮೂಲಕ ಪ್ರಸಾರ ಮಾಡಲಾಗಿತ್ತು. ಈ ಪೇಜ್‌ಗಳಲ್ಲಿ ಪ್ರಾಯೋಜಿತ ಪೋಸ್ಟರ್‌ಗಳು ಮತ್ತು ವೀಡಿಯೊಗಳು ಇರುತ್ತವೆ. ಅಲ್ಲದೆ ಈ ಪೇಜ್‌ಗಳಲ್ಲಿ ಹಿಂದುತ್ವ ಮತ್ತು ದ್ವೇಷ ಹಬ್ಬಿಸುವ ವಿಷಯಗಳೇ ಇವೆ.
ಅತಿ ಹೆಚ್ಚು ಖರ್ಚು ಮಾಡಿದ ಪೇಜ್‌ಗಳನ್ನು ಉಲ್ಲೇಖಿಸುವುದಾದರೆ, ‘ಲೇಖಾ ಜೋಖಾ ಮಹಾರಾಷ್ಟ್ರಚಾ?’ 13.62 ಲಕ್ಷ ರೂ. ಖರ್ಚು ಮಾಡಿದ್ದು, ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 7ನೇ ಸ್ಥಾನದಲ್ಲಿದೆ.
8.29 ಲಕ್ಷ ರೂ. ಖರ್ಚು ಮಾಡಿದ ‘ಮಹಾ ಬಿಘಾಡಿ’ 12ನೇ ಸ್ಥಾನಕ್ಕೆ ಬಂದಿದೆ.
6.99 ಲಕ್ಷ ರೂ. ಖರ್ಚು ಮಾಡಿದ ‘ಮೋದಿರಾಷ್ಟ್ರ?’ 15ನೇ ಸ್ಥಾನದಲ್ಲಿದೆ.
6.47 ಲಕ್ಷ ರೂ. ಖರ್ಚು ಮಾಡಿದ ‘ದಿಸ್ತೋಯ್ ಫರಾಜ್ ಶಿವಶಾಹಿ ಪರತ್’ 17ನೇ ಸ್ಥಾನದಲ್ಲಿದೆ.
‘ಲೇಖಾ ಜೋಖಾ ಮಹಾರಾಷ್ಟ್ರಚಾ?’ ಫೇಸ್‌ಬುಕ್ ಪೇಜ್ ಶುರುವಾದದ್ದು 2023ರ ಜೂನ್ 13ರಂದು. ಆಗ ಅದರ ಹೆಸರು ‘ದಿ ಕಿಂಗ್‌ಮೇಕರ್’ ಎಂದಿತ್ತು. 10 ದಿನಗಳ ನಂತರ ಹೆಸರನ್ನು ಬದಲಾಯಿಸಿತು. ವಿಳಾಸವನ್ನು ಪುಣೆ ಎಂದು ಉಲ್ಲೇಖಿಸಲಾಗಿದೆ.
‘ಮಹಾ ಬಿಘಾಡಿ’ ಪೇಜ್ ಕೂಡ ಕಳೆದ ವರ್ಷ ಮೇ ತಿಂಗಳಲ್ಲಿ ಶುರುವಾಯಿತು. ವಿಳಾಸ ಮುಂಬೈನ ಧಾರಾವಿಯಲ್ಲಿದೆ.
‘ದಿಸ್ತೊಯ್ ಫರಕ್ ಶಿವಶಾಹಿ ಪರತ್’ ಅನ್ನು 2019ರ ಜುಲೈನಲ್ಲಿ ಶುರು ಮಾಡಲಾಯಿತು. ಅದರ ವಿಳಾಸವೂ ಮುಂಬೈ ಆಗಿದೆ.
ಅದು ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವಿಭಾಗ, ಮೋದಿ ಅಭಿಮಾನಿಗಳ ಪುಟ ಮತ್ತು ಮಹಾಬಿಘಾಡಿ ಈ ಮೂರು ಪೇಜ್‌ಗಳನ್ನಷ್ಟೇ ಫಾಲೋ ಮಾಡುತ್ತಿದೆ.
ಈ ನಾಲ್ಕು ಪೇಜ್‌ಗಳಲ್ಲಿ ಎರಡು, ಅಂದರೆ ದಿಸ್ತೋಯ್ ಫರಕ್ ಶಿವಶಾಹಿ ಪರತ್ ಮತ್ತು ಮಹಾ ಬಿಘಾಡಿ ನಕಲಿ ಪೇಜ್‌ಗಳಾಗಿವೆ ಎಂದು ವರದಿ ಹೇಳುತ್ತದೆ.
ಈ ಪುಟಗಳ ಹೆಚ್ಚಿನ ಪೋಸ್ಟ್‌ಗಳು ಉದ್ಧವ್ ಠಾಕ್ರೆ ಮತ್ತು ರಾಹುಲ್ ಗಾಂಧಿ ವಿರುದ್ಧ ಇವೆ.
ಈ ಪೇಜ್ ಹಾಕಿರುವ ಪೋಸ್ಟರ್‌ಗಳು ಮತ್ತು ವಿಡಿಯೋಗಳು ಮಹಾರಾಷ್ಟ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿವೆ.
ಹಿಂದೂ ವಿರೋಧಿಗಳು ಎನ್ನುವಂತೆ ವಿಪಕ್ಷ ನಾಯಕರನ್ನು ಈ ಪೇಜ್‌ಗಳಲ್ಲಿ ಗುರಿ ಮಾಡಲಾಗಿದೆ. ಈ ಹಿಂದೂ ವಿರೋಧಿಗಳು ಮನೆಯಲ್ಲಿ ಕುಳಿತುಕೊಳ್ಳಲಿ ಎನ್ನುವಂತಹ ಸಂದೇಶಗಳಿರುವುದನ್ನೂ ಗಮನಿಸಬಹುದು.
ದಿಸ್ತೋಯ್ ಫರಕ್ ಶಿವಶಾಹಿ ಪರತ್ ಪೇಜ್‌ನಲ್ಲಿನ ಒಂದು ವೀಡಿಯೊ, ಕರ್ನಾಟಕದಲ್ಲಿ ಕಾಂಗ್ರೆಸ್ ಜಿಹಾದಿಗಳನ್ನು ಬೆಂಬಲಿಸುತ್ತಿದೆ ಎಂದು ಹೇಳುತ್ತದೆ. ಎಂವಿಎ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂದು ಮಹಾರಾಷ್ಟ್ರ ಮತದಾರರಿಗೆ ಆ ಪೇಜ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಮೋದಿರಾಷ್ಟ್ರ ಪೇಜ್‌ನಲ್ಲಿನ ವೀಡಿಯೊದಲ್ಲಿ ಬಿಜೆಪಿ ಬೆಂಬಲಿಗರೊಬ್ಬರು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವೋಟ್ ಜಿಹಾದ್ ಬಗ್ಗೆ ಮಾತನಾಡುತ್ತಿರುವುದು ಇದೆ.
ಇದೇ ಪೇಜ್‌ನ ಮತ್ತೊಂದು ಪೋಸ್ಟರ್‌ನಲ್ಲಿ ‘‘ಲವ್ ಜಿಹಾದ್, ಲ್ಯಾಂಡ್ ಜಿಹಾದ್ ನಂತರ ಈಗ ಮಜ್ದೂರ್ ಜಿಹಾದ್ (ಲೇಬರ್ ಜಿಹಾದ್)’’ ಇದೆ ಎಂದು ಹೇಳುತ್ತಾನೆ.
ಇನ್ನೊಂದು ಪೋಸ್ಟರ್‌ನಲ್ಲಿ ಕಾಂಗ್ರೆಸ್‌ನವರು ಯಾವಾಗಲೂ ಹಿಂದೂ ದೇವತೆಗಳನ್ನು ಅವಮಾನಿಸುತ್ತಾರೆ ಎಂದು ಬರೆಯಲಾಗಿದೆ.
ಮಹಾ ಬಿಘಾಡಿಯಲ್ಲಿನ ಪೋಸ್ಟರ್ 8 ಲಕ್ಷ ವ್ಯೆಸ್ ಅನ್ನು ಗಳಿಸಿದೆ.
ಉದ್ಧವ್ ಮತ್ತು ರಾವುತ್ ಹಿಂದೂ ಧರ್ಮದ ಕಡೆಗೆ ಬೆನ್ನು ತಿರುಗಿಸಿದ್ದಾರೆ ಎಂದು ಆರೋಪಿಸಿದೆ.
ಹೆಚ್ಚಿನ ಪೋಸ್ಟ್‌ಗಳು ದೇವೇಂದ್ರ ಫಡ್ನವೀಸ್ ಪರ ಪ್ರಚಾರ ಮಾಡುವುದರ ಮೇಲೆ ಕೇಂದ್ರೀಕೃತವಾಗಿವೆ.
ಬದ್ಲಾಪುರದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಎನ್‌ಕೌಂಟರ್ ಅನ್ನು ಅನೇಕರು ವೈಭವೀಕರಿಸಿದ್ದಾರೆ.
‘ದಿಸ್ತೋಯ್ ಫರಕ್ ಶಿವಶಾಹಿ ಪರತ್’ನಲ್ಲಿನ ಫಡ್ನವೀಸ್ ಪರ ಪೋಸ್ಟ್‌ಗಳೂ ಹೆಚ್ಚಿನ ವ್ಯೆಸ್ ಪಡೆದಿವೆ.
‘ಲೇಖಾ ಜೋಖಾ ಮಹಾರಾಷ್ಟ್ರಚಾ’ದಲ್ಲಿನ ಜಾಹೀರಾತು, ತೆಲಂಗಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರಿಗಾಗಿ ಯೋಜನೆಗಳು ಹೇಗೆ ವಿಫಲವಾಗಿವೆ, ಆದರೆ ಬಿಜೆಪಿ ಆಡಳಿತದ ರಾಜ್ಯಗಳಾದ ಗೋವಾ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಡ ಮತ್ತು ಮಹಾರಾಷ್ಟ್ರದಲ್ಲಿ ಹೇಗೆ ಯಶಸ್ವಿಯಾಗಿವೆ ಎಂದು ಪಟ್ಟಿಮಾಡುತ್ತದೆ.
ಕೆಲವು ಪೋಸ್ಟ್‌ಗಳು ಎಂವಿಎ ಅಧಿಕಾರಕ್ಕೆ ಬಂದರೆ ಕಲ್ಯಾಣ ಯೋಜನೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ ಎಂಬ ಭಯವನ್ನು ಹುಟ್ಟುಹಾಕಲು ಯತ್ನಿಸಿವೆ.
‘ದಿಸ್ತೋಯ್ ಫರಕ್ ಶಿವಶಾಹಿ’ ಪೋಸ್ಟ್ 6 ಲಕ್ಷಕ್ಕೂ ಹೆಚ್ಚು ವ್ಯೆಸ್ ಕಂಡಿದೆ.
ಉದ್ಧವ್ ಅವರು ತಮ್ಮ ಸರಕಾರವು ಉಚಿತ ಶಿಕ್ಷಣ, ಬಿಲ್ ಮನ್ನಾ ಮತ್ತು ಲಾಡ್ಲಿ ಬೆಹನಾ ಯೋಜನೆಗಳಂತಹ ಮಹಿಳೆಯರ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಿದ್ದಾರೆ ಎಂದು ಇದರಲ್ಲಿ ಸುಳ್ಳು ಹೇಳಲಾಗಿದೆ.
ದಿಸ್ತೋಯ್ ಫರಕ್‌ನಲ್ಲಿನ ಪೋಸ್ಟ್, ಉದ್ಧವ್ ಮುಂಬೈಯನ್ನು ‘ಸ್ಲಮ್‌ನಂತೆ’ ಇರಿಸಲು ಬಯಸುತ್ತಾರೆ, ಆದರೆ ಫಡ್ನವೀಸ್ ನಗರವನ್ನು ‘ಸ್ಲಂ ಮತ್ತು ಅತಿಕ್ರಮಣಮುಕ್ತ’ ಮಾಡಲು ಬಯಸುತ್ತಾರೆ ಎಂದಿದೆ.
ಮೆಟಾದ ಸಮುದಾಯ ಮಾರ್ಗಸೂಚಿಗಳ ಪ್ರಕಾರ, ಜಾಹೀರಾತುಗಳು ಹಿಂಸಾತ್ಮಕ ವಿಷಯ, ಧರ್ಮ, ಲಿಂಗ ಗುರುತಿಸುವಿಕೆ, ಅಂಗವೈಕಲ್ಯ ಅಥವಾ ಮಾನಸಿಕ ಆರೋಗ್ಯದಂತಹ ಗುಣಲಕ್ಷಣಗಳನ್ನು ಸೂಚಿಸುವ ವಿಷಯವನ್ನು ಹೊಂದಿರಬಾರದು.
ಈ ಪುಟಗಳಲ್ಲಿ ಹೆಚ್ಚಿನವು ಅವುಗಳನ್ನು ಸತತ ಉಲ್ಲಂಘಿಸುತ್ತಲೇ ಇವೆ. ಈ ಎಲ್ಲ ಬೇನಾಮಿ ಪೇಜ್‌ಗಳು ಹರಡುತ್ತಿರುವ ಸುಳ್ಳು ಹಾಗೂ ದ್ವೇಷದ ಸಂಪೂರ್ಣ ಲಾಭ ಬಿಜೆಪಿ ಪಡೆಯುತ್ತಿದೆ. ಆದರೆ ಇವುಗಳು ಮಾಡುತ್ತಿರುವ ಸಮಾಜ ವಿರೋಧಿ ಕೆಲಸದ ಯಾವ ಹೊಣೆಗಾರಿಕೆಯೂ ಬಿಜೆಪಿಗೆ ಇಲ್ಲ.
ಖರ್ಚು ಹಾಗೂ ಹೊಣೆ ತೋರಿಸಿಕೊಳ್ಳದೆ ತನ್ನ ಪ್ರಚಾರವನ್ನು ಅಂದರೆ ವಿರೋಧಿಗಳ ವಿರುದ್ಧದ ಅಪಪ್ರಚಾರವನ್ನು ಬಿಜೆಪಿ ಈ ಪ್ರಾಕ್ಸಿ ಪೇಜ್‌ಗಳ ಮೂಲಕ ಮಾಡಿಕೊಳ್ಳುತ್ತಿದೆ.
ಆದರೆ ನಮ್ಮ ದೇಶದ ಚುನಾವಣಾ ಆಯೋಗ ಏನು ಮಾಡುತ್ತಿದೆ?
ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಹೀಗೆ ಸತತ ಸುಳ್ಳು ಹಾಗೂ ದ್ವೇಷ ಹರಡುವ ಪೇಜ್‌ಗಳು ಹೇಗೆ ಸಕ್ರಿಯವಾಗಿವೆ ಎಂದು ಅರ್ಧ ದಿನದೊಳಗೆ ಕಂಡು ಹಿಡಿಯಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲವೇ? ಇಷ್ಟೊಂದು ಲಕ್ಷಗಟ್ಟಲೆ ದುಡ್ಡನ್ನು ಆ ಬೇನಾಮಿ ಪೇಜ್ ನಡೆಸುವವರು ಎಲ್ಲಿಂದ ತರುತ್ತಿದ್ದಾರೆ ಎಂದು ಹುಡುಕುವುದು ಅಸಾಧ್ಯವೇ?
ಚುನಾವಣಾ ಆಯೋಗ ಹಾಗೂ ಪೊಲೀಸರು ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲಿ ಆ ಮಾಹಿತಿ ಪಡೆಯಲು ಸಾಧ್ಯವಿಲ್ಲವೇ?
ತನ್ನ ವೇದಿಕೆಯಲ್ಲಿ ಸುಳ್ಳು, ದ್ವೇಷ, ಅವಹೇಳನಕ್ಕೆ ಆಸ್ಪದವೇ ಇಲ್ಲ ಎಂದು ಕೊಚ್ಚಿಕೊಳ್ಳುವ ಫೇಸ್‌ಬುಕ್ ಏನು ಮಾಡುತ್ತಿದೆ?
ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಬೇಕಾದ ಮಡಿಲ ಮೀಡಿಯಾಗಳು ಏನು ಮಾಡುತ್ತಿವೆ?
ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?