ಪರಿಶಿಷ್ಟರಿಗೆ ನೀಡಿರುವ ಕೆನೆ ಪದರ ವಿನಾಯಿತಿಯನ್ನೇಕೆ ಹೀಯಾಳಿಸಲಾಗುತ್ತಿದೆ?
ಭಾರತೀಯ ಮೀಸಲಾತಿ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದ, ಆದರೆ ಹಿಂದುಳಿದ ಸಮುದಾಯದೊಳಗೇ ಇರುವ, ಕೆಲವು ವ್ಯಕ್ತಿ ಅಥವಾ ಕುಟುಂಬಗಳನ್ನು ಉಲ್ಲೇಖಿಸಲು ‘ಕೆನೆ ಪದರ’ ಎಂಬ ನುಡಿಗಟ್ಟನ್ನು ಬಳಸಲಾಗಿದೆ. ಅಂತಹವರನ್ನು ಮೀಸಲಾತಿ ವಿನಾಯಿತಿ ಪಡೆಯದ ಸಾಮಾನ್ಯ ಗುಂಪಿನಲ್ಲಿ ಸೇರಿಸಲಾಗುವುದು. ಇವರು ಸರಕಾರಿ ಪ್ರಾಯೋಜಿತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಯೋಜನ ಪಡೆಯಲು ಅರ್ಹರಾಗುವುದಿಲ್ಲ.
ಮೊತ್ತಮೊದಲ ಬಾರಿಗೆ ಸತ್ತಾನಾಥನ್ ಆಯೋಗವು 1971ರಲ್ಲಿ ಈ ಪದ ಪ್ರಯೋಗಿಸಿತು. ಆ ಪ್ರಕಾರ ಸಿವಿಲ್ ಹುದ್ದೆಗಳ ಮೀಸಲಾತಿಯಿಂದ ಕೆನೆ ಪದರವನ್ನು ಹೊರಗಿಡಬೇಕೆಂದು ನಿರ್ದೇಶಿಸಿತು. ಆನಂತರ 1993ರಲ್ಲಿ ನ್ಯಾ. ರಾಮ ನಂದನ್ ಆಯೋಗವೂ ಸಹ ಇದಕ್ಕೆ ಧ್ವನಿ ಗೂಡಿಸಿತು
ಭಾರತೀಯ ನ್ಯಾಯಾಂಗದ ಪರಿಕಲ್ಪನೆಯಲ್ಲಿ ಮೊದಲು ನ್ಯಾ. ವಿ.ಆರ್. ಕೃಷ್ಣ ಅಯ್ಯರ್ ಅವರು ಕೇರಳ ರಾಜ್ಯ v/s ಎನ್.ಎಂ. ಥಾಮಸ್ ಪ್ರಕರಣದಲ್ಲಿ ಈ ನುಡಿಗಟ್ಟನ್ನು ಪರಿಚಯಿಸಿದರು. ಮತ್ತು ಇಂದ್ರಾ ಸಾಹ್ನಿ v/s ಭಾರತ ಒಕ್ಕೂಟ ಪ್ರಕರಣದಲ್ಲಿ ಹೆಚ್ಚು ಬೆಳಕಿಗೆ ಬಂದು ಅದು ಪ್ರಚಲಿತವಾಯಿತು.
ಮಂಡಲ್ ವರದಿ ಅನುಸರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅನುಷ್ಠಾನಗೊಳಿಸಿದ ನಂತರ ಕೇಂದ್ರ ಸರಕಾರವೇ ತನಗೆ ತೋಚಿದಂತೆ ಕೆನೆ ಪದರವನ್ನು ಹೊರಗಿಡಲು ಸಾಧ್ಯವಾಗುವಂತೆ ಅಧಿಕೃತ ಜ್ಞಾಪನ ಹೊರಡಿಸಿತು. ಆದರೆ ಇಂದ್ರಾ ಸಾಹ್ನಿ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ಸಮಿತಿಯೊಂದನ್ನು ರಚಿಸಿ ಸಮಕಾಲೀನ ವಿಷಯವನ್ನಾಧರಿಸಿದ ಮಾನದಂಡಗಳನ್ನು ರೂಪಿಸಿ ಸಿದ್ಧಪಡಿಸಿದ ಕೆನೆ ಪದರ ನೀತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿತು. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕೇಂದ್ರ ಸರಕಾರ ಪಾಲಿಸಿತು ಎಂಬುದನ್ನು ಪುನಃ ಹೇಳಬೇಕಾಗಿಲ್ಲ. ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಬಹುತೇಕ ರಾಜ್ಯಗಳು ಈ ನೀತಿಯನ್ನು ಅನುಸರಿಸುತ್ತಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆ ಪದರ ಅನ್ವಯ:
ಹಿಂದುಳಿದ ವರ್ಗಗಳಿಗೆ ಅನ್ವಯಿಸುವ ಮಾತನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೇಳಲಾಗುವುದಿಲ್ಲ. ಸ್ವತಂತ್ರ ಭಾರತದಲ್ಲಿ 1950ರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರಾಷ್ಟ್ರಪತಿಗಳ ಆದೇಶದಂತೆ ಅವುಗಳಿಗೆ ಮೀಸಲಾತಿ ದೊರಕುತ್ತಿದೆ. ಅಂದಿನಿಂದಲೂ ಕೆನೆ ಪದರವನ್ನು ಮೀಸಲಾತಿ ಪ್ರಯೋಜನದಿಂದ ಹೊರಗೆ ಇಟ್ಟಿಲ್ಲ. ಆಗೊಮ್ಮೆ- ಈಗೊಮ್ಮೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಯೂ ಕೆನೆ ಪದರವನ್ನು ಹೊರಗಿಡುವ ಬಗ್ಗೆ ಪ್ರಸ್ತಾಪವಾಗುತ್ತಿದೆಯೇ ವಿನಾ ಆದೇಶವೇನು ಹೊರ ಬಿದ್ದಿಲ್ಲ.
ಆಗಸ್ಟ್ 1ರಂದು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ 6:1ರ ಅನುಪಾತದ ತೀರ್ಪಿನಲ್ಲಿ, ನ್ಯಾ. ಗವಾಯಿಯವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸುವಂತೆ ಕೆನೆ ಪದರವನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ವ್ಯಕ್ತ ಪಡಿಸಿದ ಅಭಿಪ್ರಾಯಕ್ಕೆ ಮತ್ತೆ ಮೂವರು ನ್ಯಾಯಾಧೀಶರು ಸಹಮತಿಸಿದ್ದಾರೆ. ಆದರೆ ಅದೊಂದು ‘ವಿಷಯ’ (issue)ವಾಗಿ ಪರಿಗಣಿಸಿ ವಿಚಾರಣೆ ನಡೆದು ಆದೇಶದ ರೂಪದಲ್ಲಿ ಹೊರ ಬಂದಿಲ್ಲ. ಆದರೂ ಪರಿಶಿಷ್ಟ ವರ್ಗಗಳಿಗೆ ಆತಂಕವಿರುವುದು ಸಹಜ. ಆ ಕಾರಣದಿಂದ ಲೋಕಸಭೆಯ ಮತ್ತು ರಾಜ್ಯಸಭೆಯ ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಸದರು ಪ್ರಧಾನಿ ಅವರನ್ನು ಭೇಟಿ ಮಾಡಿ ಕೆನೆ ಪದರವನ್ನು ಹೊರಗಿಡಲು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಕೆನೆ ಪದರದ ಬಗ್ಗೆ ಪ್ರಸ್ತಾಪಿಸಿರುವುದರ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂಬ ಬೇಡಿಕೆಯನ್ನು ಮುಂದಿಟ್ಟರು.
ಕೇಂದ್ರ ಸಚಿವ ಸಂಪುಟದ ಮುಂದೆ ವಿಷಯ ಚರ್ಚೆಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಕೆನೆ ಪದರ ತತ್ವವನ್ನು ಅನ್ವಯಿಸುವುದಿಲ್ಲ ಎಂದು ಸಂಪುಟ ಖಡಾ ಖಂಡಿತವಾಗಿ ಪ್ರತಿಪಾದಿಸಿದೆ ಎಂದು ಸಚಿವ ಸಂಪುಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಶ್ವಿನ್ ವೈಷ್ಣವ್ ಅವರು ತಿಳಿಸಿದರಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಾಂವಿಧಾನಿಕ ನಿಬಂಧನೆಗಳಿಗೆ ಈ ಸರಕಾರ ಬದ್ಧವಾಗಿದೆ ಹಾಗೂ ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನದಲ್ಲಿ ಕೆನೆ ಪದರದ ನೀತಿಗೆ ಅವಕಾಶವಿಲ್ಲ ಎಂಬುದನ್ನು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ವೈಷ್ಣವ್ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಭಡ್ತಿಯಲ್ಲಿ ಕೆನೆ ಪದರ ನೀತಿಯನ್ನು ಅನುಸರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಎಂ. ನಾಗರಾಜ್ ಪ್ರಕರಣದಲ್ಲಿ (2006) ತೀರ್ಪಿತ್ತಿರುವುದು ಸದ್ಯ ವಿಸ್ತೃತ ಸಾಂವಿಧಾನಿಕ ಪೀಠದಲ್ಲಿ ಪುನರ್ ಪರಿಶೀಲನೆಗಿದೆ.
ವಸ್ತುಸ್ಥಿತಿ ಹೀಗಿದ್ದರೂ ಸವರ್ಣೀಯರೆನಿಸಿಕೊಂಡವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೆನೆ ಪದರ ನೀತಿಯನ್ನು ಅಳ ವಡಿಸದಿರುವ ಬಗೆಗೆ ಇಂದಿಗೂ ಕುಹಕವಾಡುತ್ತಿರುವುದು ನಿಲ್ಲಿಸಿಲ್ಲ. ಪ್ರತಿನಿತ್ಯ ಭಾರತದಲ್ಲಿ ಒಂದಲ್ಲ ಒಂದು ಕಡೆ, ಪರಿಶಿಷ್ಟ ಜಾತಿಯವರ ಮೇಲೆ ನಡೆಯುವ ಗೂಂಡಾಗಿರಿ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಅನಿಷ್ಟಗಳ ಬಗ್ಗೆ ಮಾತನಾಡದ ಇವರು, ಪರಿಶಿಷ್ಟ ವರ್ಗಗಳಲ್ಲಿ ಕೆನೆ ಪದರವನ್ನು ಮೀಸಲಾತಿ ಪ್ರಯೋಜನದಿಂದ ಹೊರಗಿಡಲು ತಲೆ ತೂರಿಸುವುದೇಕೆ ಎಂಬುದನ್ನು ತಿಳಿಯಲು ಯಾವುದೇ ವಿಶೇಷವಾದ ಸೂಕ್ಷ್ಮದರ್ಶಕದ ಅಗತ್ಯವಿಲ್ಲ. ಇದು ಒಂದು ರೀತಿಯ ಮೀಸಲಾತಿ ವಿರುದ್ಧ ಮತ್ಸರದಿಂದ ಕೂಡಿದ ಸಂಚುಗಾರಿಕೆ. ಬಹುಶಃ ಇಂತಹ ಹುನ್ನಾರಗಳು ನಡೆಯುವ ಕೇಂದ್ರಸ್ಥಾನ ನಾಗಪುರ. ಪರಿಶಿಷ್ಟ ಜಾತಿಯವರನ್ನೇ ಬಳಸಿಕೊಂಡು ಇಂತಹದ್ದನ್ನೆಲ್ಲ ಹೊರಗೆಡಹುವ ವ್ಯವಸ್ಥಿತ ಚತುರತೆ ನಾಗಪುರದ ಕುಟಿಲಮತಿಗಳಿಗಲ್ಲದೆ ಮತ್ಯಾರಿಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆನೆ ಪದರದ ಪರಿಕಲ್ಪನೆಯನ್ನು ಅವರ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಜೊತೆಗೆ ಸಾಮಾಜಿಕ ತಾರತಮ್ಯವನ್ನೂ ಆಧಾರವಿಟ್ಟುಕೊಂಡು ಪರಿಶೀಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಹೊರಗಿಡಬೇಕಾದ ಕೆನೆ ಪದರದಿಂದಾಗಿ ಮೀಸಲಾತಿ ಪ್ರಯೋಜನಗಳು ಅವರಿಗೇ ದಕ್ಕುತ್ತಿವೆ ಎಂಬ ವಾದವನ್ನು ಸಾಮಾನ್ಯವಾಗಿ ಮುಂದಿಡಲಾಗುತ್ತಿದೆ. ಮೌಲ್ಯಮಾಪನ ದೃಷ್ಟಿಯಿಂದ ನಾವು ಈ ವರ್ಗದಿಂದ ಕೆನೆ ಪದರವನ್ನು ಹೊರಗಿಡೋಣ. ಹಾಗಾದರೆ ಏನಾಗುತ್ತದೆ? ಲಭ್ಯವಿರುವ ವಿವಿಧ ಅಂಕಿ ಅಂಶಗಳ ಪ್ರಕಾರ ಕಾಯ್ದಿರಿಸಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಹಲವು ದಶಕಗಳಿಂದ ತೀವ್ರ ರೀತಿಯ ಪ್ರಯತ್ನಗಳಾದಾಗ್ಯೂ ಅದರಲ್ಲೂ ಉನ್ನತ ವರ್ಗದ ಸೇವೆಗಳಲ್ಲಿ ಇನ್ನೂ ಭರ್ತಿಯಾಗದೆ ಅನೇಕ ಹುದ್ದೆಗಳು ಬಾಕಿ ಉಳಿದಿವೆ ಎಂಬ ಅಂಶ ನಮ್ಮನ್ನು ತೀವ್ರವಾಗಿ ಬೆಚ್ಚಿಬಿಳಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಕೂಡ ಕೆನೆ ಪದರವನ್ನು ಹೊರಗಿಡಬೇಕು ಎಂದು ಹೀಯಾಳಿಸುವವರ ಮಾತು ಮೇಲುಗೈ ಪಡೆದುಕೊಂಡಲ್ಲಿ ಪರಿಣಾಮವನ್ನು ಊಹಿಸಲೂ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಬಹಳಷ್ಟು ಬಾಕಿ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಬೇಕೆಂಬ ಕೋರಿಕೆ ಮೇಲ್ಜಾತಿ- ವರ್ಗದಿಂದ ಅತ್ಯಂತ ನಾಜೂಕಾಗಿ ಸರಕಾರದ ಮುಂದೆ ಬರುತ್ತದೆ. ಇದು ಅಂತಹವರ ಅಂತರಾಳದ ಪ್ರಮುಖ ಕುಟಿಲೋಪಾಯ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಬಂದ ಲಾಗಾಯ್ತಿನಿಂದಲೂ ಈ ಒಳ ಸಂಚಿನ ನುಡಿಗಳನ್ನು ಅವಕಾಶ ಸಿಕ್ಕಾಗೆಲ್ಲ ಅವರು ಆಡುತ್ತಲೇ ಬರುತ್ತಿದ್ದಾರೆ.
ಕೆನೆ ಪದರವನ್ನು ಹೊರಗೆ ಇಡಬೇಕೆಂದು ಪದೇ ಪದೇ ಗಳಹುವವರಿಗೆ ದೂರಾಲೋಚನೆ ಮತ್ತು ದುರಾಲೋಚನೆ ಎರಡೂ ಇವೆ. ಈ ಎರಡರ ಪರಿಣಾಮ ಮೀಸಲಾತಿಗೆ ಭಂಗ ತರುವುದೇ ಆಗಿದೆ. ಇದು ಅವರ ಆಂತರ್ಯದಲ್ಲಿ ಅಡಗಿರುವ ಮಸಲತ್ತು. ಇದಕ್ಕೆ ಪುರಾವೆ ಎಂದರೆ ‘ಸಂಘ’ ದ ಮುಖ್ಯಸ್ಥರು ಮೀಸಲಾತಿಯನ್ನು ಪುನರ್ ವಿಮರ್ಶೆಗೆ ಒಳಪಡಿಸುವ ಅವಶ್ಯಕತೆಗೆ ಇದು ಸನ್ನಿಹಿತ ಕಾಲ ಎಂದು ಹೇಳಿರುವುದು. ಆದರೆ, ಆರ್ಥಿಕ ದುರ್ಬಲ ವರ್ಗದವರಿಗೆ ಯಾವ ಆಯೋಗದ ವರದಿಯೂ ಇಲ್ಲದೆ ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ ಒಳಪಡುವ ಜಾತಿಗಳು ಸಾಕಷ್ಟು ಪ್ರಾತಿನಿಧ್ಯ ಪಡೆದಿರುವುದನ್ನು ಪರಿಶೀಲಿಸದೆ ಮೀಸಲಾತಿ ನೀಡಿ ಅತೀ ಅವಸರದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆ ಅಂಗೀಕರಿಸಿದಾಗ ಬಾಯಿ ಮುಚ್ಚಿಕೊಂಡು ಕುಳಿತಿದ್ದರು ಎಂಬುದು ಸತ್ಯವಲ್ಲವೇ? ಇವರ ಪಿತೂರಿಯನ್ನು ಪರಿಶಿಷ್ಟರು ಅರಿಯದ ಮುಗ್ಧರಲ್ಲ ಎಂಬುದನ್ನು ಅವರು ಮೊದಲು ತಿಳಿಯಬೇಕಾಗಿದೆ.
ಮತ್ತೊಂದು ವಿಷಯವನ್ನು ಸಹ ಆಗಾಗ ಹರಿಯ ಬಿಡುತ್ತಿದ್ದಾರೆ. ಅದೆಂದರೆ-ಮೀಸಲಾತಿಯನ್ನು ನಿರ್ದಿಷ್ಟ ಅವಧಿಗೆ ಮಾತ್ರ ನೀಡಿದೆ ಎಂಬ ಹಸಿ ಹಸಿ ಸುಳ್ಳನ್ನೇ ಹೇಳುವುದು. ಹೌದು, ಅದು ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು. ಸಂವಿಧಾನದ ವಿಧಿ 330 ಮತ್ತು 332ರಂತೆ ರಾಜಕೀಯ ಮೀಸಲಾತಿಗೆ ಮಾತ್ರ ಅನ್ವಯಿಸುವುದು ಅದು. ಬಹುಶಃ ಪದೇ ಪದೇ ಹೇಳುವುದರಲ್ಲಿಯೂ ಕೂಡ ಕಾರಾಸ್ಥಾನವಿದೆ. ಸುಳ್ಳನ್ನು ನೂರು ಸಲ ಹೇಳಿದರೆ ಸತ್ಯವಾಗುವುದು ಎಂಬ ಗೋಬೆಲ್ ಥಿಯರಿಯೇ ಅದು.
ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಅವರು ಕೆ.ಸಿ. ವಸಂತ್ ಕುಮಾರ್ v/s ಕರ್ನಾಟಕ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಕೆನೆ ಪದರಕ್ಕೆ ಅನ್ವಯಿಸುವಂತೆ ಹೀಗೆ ಹೇಳಿದ್ದಾರೆ ....‘‘ಮೀಸಲಿರಿಸದ ಹುದ್ದೆಗಳನ್ನು ಸಮಾಜದ ಕೆನೆ ಪದರದಲ್ಲಿ ಮೇಲುಪದರದವರು ಕಸಿದುಕೊಳ್ಳುವುದು ತಪ್ಪಲ್ಲವೆಂದಾದರೆ ಮೀಸಲಿರಿಸಿದ ಸ್ಥಾನಗಳು ಮತ್ತು ಹುದ್ದೆಗಳನ್ನು ಹಿಂದುಳಿದ ವರ್ಗಗಳ ಕೆನೆ ಪದರ ಕಸಿದು ಕೊಳ್ಳುವುದು ಹೇಗೆ ತಪ್ಪಾಗುತ್ತದೆ?’’
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾಕಾ ಕಾಲೇಲ್ಕರ್ ಆಯೋಗದ ಮುಂದೆ ಸಾಕ್ಷಿದಾರರಾಗಿ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರು ಕೆನೆ ಪದರಕ್ಕೆ ಅನ್ವಯಿಸುವಂತೆ ಹೇಳಿರುವ ಮಾತು ಬಹು ಅರ್ಥಗರ್ಭಿತವಾಗಿವೆ. ‘‘ಕೆನೆ ಪದರಕ್ಕೆ ಮೀಸಲಾತಿ ತಪ್ಪಿಸುವುದರ ಅನಿವಾರ್ಯ ಪರಿಣಾಮವು, ಹಿಂದುಳಿದ ವರ್ಗಗಳಿಂದ ಅತ್ಯುತ್ತಮ ಪ್ರತಿಭಾವಂತರನ್ನು ಕೈಬಿಟ್ಟಂತಾಗುತ್ತದೆ. ಹಿಂದುಳಿದ ವರ್ಗಗಳಿಂದ ಉತ್ತಮ ಪ್ರತಿಭಾವಂತರನ್ನು ಹೊರತೆಗೆಯುವುದು ಎಂದರೆ ನಾವು ಮೀಸಲಾತಿಯೇತರ ಕೋಟಾದಿಂದ ಬಂದ ಪ್ರಥಮ ದರ್ಜೆ ಸರಕಿನೊಂದಿಗೆ ಸ್ಪರ್ಧಿಸಲು ಎರಡನೆಯ ದರ್ಜೆ ಅಥವಾ ಮೂರನೇ ದರ್ಜೆಯ ಸರಕನ್ನು ಮಾತ್ರ ಆಯ್ಕೆ ಮಾಡಿದ್ದೇವೆ ಎಂದರ್ಥ. ನೀವು ಕೆನೆ ಪದರದ ಹೆಸರಿನಲ್ಲಿ ಹಿಂದುಳಿದ ವರ್ಗಗಳಲ್ಲಿನ ಉತ್ತಮ ಪ್ರತಿಭಾವಂತರನ್ನು ಮತ್ತು ಹೆಚ್ಚಿನ ಅರ್ಹತೆಯುಳ್ಳವರನ್ನು ತೆಗೆದು ಹಾಕಿದ್ದಲ್ಲಿ ನಮಗೆ ಸಿಗುವುದು ಅಷ್ಟೇನೂ ಪ್ರತಿಭಾವಂತರಲ್ಲದವರು ಮತ್ತು ಅರ್ಹರಲ್ಲದವರು ಮಾತ್ರವೇ ಹೊರತು ಉತ್ತಮರಲ್ಲ..... ನೀವು ಕೆನೆ ಪದರದ ಹೆಸರಿನಲ್ಲಿ ಹೆಚ್ಚಿನ ಅರ್ಹತೆಯುಳ್ಳ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಹೊರ ಹಾಕಿದಲ್ಲಿ ಆಡಳಿತದ ದಕ್ಷತೆಯ ಗತಿ ಏನಾಗುತ್ತದೆ? ಅನುಚ್ಛೇದ 335ರಲ್ಲಿ ಆಡಳಿತ ದಕ್ಷತೆಯನ್ನು ಹಿಂದುಳಿದ ವರ್ಗಗಳ, ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿ ದೃಢವಾಗಿ ಬಳಸಲಾಗಿದೆ. ಬದಲಾಗಿ ಅವರ ಪರವಾಗಿ ಕೂಡ ಅದನ್ನು ಏಕೆ ಬಳಸಬಾರದು. ನೀವು ಹಿಂದುಳಿದ ವರ್ಗಗಳಲ್ಲಿನ ಅತ್ಯುತ್ತಮ ಪ್ರತಿಭಾವಂತರನ್ನು ತೆಗೆದುಹಾಕಿ ಅವರಲ್ಲಿ ಕೆಳದರ್ಜೆ ಪದರದ ವ್ಯಕ್ತಿಗೆ ಮಾತ್ರ ಒಂದು ಹುದ್ದೆಯನ್ನು ಕೊಟ್ಟಲ್ಲಿ ಆಡಳಿತ ದಕ್ಷತೆಗೆ ಹಾನಿಯಾಗುವುದಿಲ್ಲವೇ? ಅಂತಹ ಪ್ರಕ್ರಿಯೆಗೆ ಅನುಚ್ಛೇದ 335 ಅಡ್ಡ ಬರುವುದಿಲ್ಲವೇ? ಅನುಚ್ಛೇದ 335ರ ಸ್ಪಷ್ಟ ಆಜ್ಞೆಯ ಬೆಳಕಿನಲ್ಲಿ, ನೀವು ಕೆನೆ ಪದರದ ಹೆಸರಿನಲ್ಲಿ ಪ್ರತಿಭಾವಂತ ಹಿಂದುಳಿದ ವರ್ಗಗಳ ವ್ಯಕ್ತಿಗಳನ್ನು ಈಗಲೂ ಹೊರಹಾಕಬಹುದೇ?’’ (ವಿಶೇಷ ವರದಿ-2000, ಪ್ರೊ. ರವಿವರ್ಮ ಕುಮಾರ್ ಆಯೋಗ)
ಬಾಬಾ ಸಾಹೇಬರ ದೂರದೃಷ್ಟಿ ಕೆನೆ ಪದರವನ್ನು ಹೊರ ತೆಗೆಯದೆ ಪ್ರತಿಭಾವಂತರನ್ನು ಸೃಷ್ಟಿಸುವುದು ಆಗಿದೆ. ಪ್ರತಿಭಾವಂತರನ್ನು ಹೊರಗಿಟ್ಟು ಅನರ್ಹ ವ್ಯಕ್ತಿಗಳನ್ನು ಸರಕಾರಿ ಹುದ್ದೆಗಳಿಗೆ ನೇಮಕ ಮಾಡಿದಲ್ಲಿ, ದಕ್ಷತೆಗೆ ಧಕ್ಕೆಯಾಗುತ್ತದೆ ಎಂಬುದೇ ಅವರ ಮಾತಿನ ಅರ್ಥ.
ಹಿಂದುಳಿದ ವರ್ಗಗಳಲ್ಲಿ ಕೂಡ ಕೆನೆ ಪದರವನ್ನು ಹೊರ ತೆಗೆಯುವುದು ಸರಿಯಲ್ಲ. ಹಾಗೊಂದು ವೇಳೆ ತೆಗೆದಲ್ಲಿ ದಕ್ಷರನ್ನು ಹೊರಗಿಟ್ಟಂತಾಗುತ್ತದೆ ಎಂಬ ಈ ಮಾತು ಹಿಂದುಳಿದ ವರ್ಗಗಳಿಗೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುತ್ತದೆ. ಆದರೆ ಸರ್ವೋಚ್ಚ ನ್ಯಾಯಾಲಯವೂ ಕೆನೆ ಪದರವನ್ನು ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸುವ ಹಾಗೆ ನೋಡಿಕೊಳ್ಳಬೇಕೆಂದು ಆದೇಶ ನೀಡಿದೆ.
ಕುಹಕಿಗಳು ಬಾಬಾ ಸಾಹೇಬರನ್ನು ಋಜು ಮಾರ್ಗದಲ್ಲಿ ಅರ್ಥ ಮಾಡಿಕೊಂಡಿದ್ದ ಪಕ್ಷದಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆ ಪದರವನ್ನು ಮೀಸಲಾತಿಯಿಂದ ಹೊರ ತೆಗೆಯಿರಿ ಎಂಬ ಮಾತು ಬರುತ್ತಿರಲಿಲ್ಲ. ಇಂಥ ಕೊಂಕು ಮಾತುಗಳು ಮಾತ್ರ ಬಾಬಾ ಸಾಹೇಬರನ್ನು ಅರಿಯದ ಅವಿವೇಕಿಗಳಿಂದ ಬರುತ್ತವಷ್ಟೆ.