ಒಳಮೀಸಲಾತಿ ಜಾರಿ ಏಕೆ ಅನಿವಾರ್ಯ?
ಜಗತ್ತಿನಾದ್ಯಂತ ‘ಸರಕಾರಿ’ ಸವಲತ್ತುಗಳ ಹಂಚಿಕೆ ಭಿನ್ನ ಹೆಸರಿನಡಿ ಜಾರಿಯಲ್ಲಿದೆ. ಆದರೆ ಭಾರತೀಯ ‘ಮೀಸಲಾತಿ’ ಮಾತ್ರ ವಿಶಿಷ್ಟ ಸ್ಥಾನಪಡೆದಿದೆ. ಬಹುಶಃ ಭಾರತದಲ್ಲಿ ಸಾಮಾಜಿಕವಾಗಿ ತುಳಿಯಲ್ಪಟ್ಟ ಜನವರ್ಗಗಳ ಪರವಾಗಿ ತಾಯಿ ಮನಸ್ಸಿನ ಡಾ. ಬಿ.ಆರ್. ಅಂಬೇಡ್ಕರ್ ದನಿಗೂಡಿಸದಿದ್ದರೆ ಇವರನ್ನು ಗುರುತಿಸುವ ಸಂಸದೀಯ ಮಾನದಂಡ ಕಾಯ್ದೆಗಳಲ್ಲಿ ದಾಖಲಾಗುತ್ತಿರಲಿಲ್ಲ. ದಮನಿತರ ವಿಭಿನ್ನ ನೆಲೆಯ ನೋವಿನ ಸಾಮಾಜಿಕ ಸಚಿತ್ರಣಗಳು ಭಾರತದ ವೈವಿಧ್ಯತೆಗಳೊಳಗೆ ಅಡಕವಾಗಿವೆ. ಆದುದರಿಂದ ಹತ್ತಾರು ಅಸ್ಪಶ್ಯರ ಮತ್ತು ಬುಡಕಟ್ಟುಗಳ ಹಾಗೂ ಹಿಂದುಳಿದವರ ಭಾರತಗಳು ಪ್ರಾದೇಶಿಕವಾಗಿ ಅಷ್ಟ ದಿಕ್ಕುಗಳಲ್ಲಿ ಮತ್ತಷ್ಟು ವಿಭಿನ್ನವಾಗಿ ಇಂದಿಗೂ ಜೀವಂತವಾಗಿವೆ. ಇವುಗಳೆಲ್ಲವೂ ಜಾತಿಯನ್ನೇ ತಮ್ಮ ಸಾಮಾಜಿಕ ಜೀವನದೊಳಗೆ ಧರ್ಮವನ್ನಾಗಿ ಅನುಸರಿಸುತ್ತಿವೆ. ಕೇಂದ್ರೀಯ ಕಾಯ್ದೆ (1935) ಅಡಿ ಗುರುತಿಸಿದ್ದ 540 ಪರಿಶಿಷ್ಟ ಜಾತಿಗಳು ಇನ್ನುಳಿದ ಜಾತಿಗಳಿಗಿಂತ ನಿಕೃಷ್ಟವಾಗಿ ಹೊರಗಿನ ಜಾತಿಗಳಾಗಿದ್ದವು (Exterior Castes). ಇವುಗಳಿಗೆ 1950ರ ಸಂವಿಧಾನ ಹಲವಾರು ಸಾಂವಿಧಾನಿಕ ಸಂರಕ್ಷಣೆಗಳನ್ನು ನೇರವಾಗಿ ಕೆಲವು ಕಾಲಂಗಳಲ್ಲಿ ಅಡಕಗೊಳಿಸಿದೆ; ಇನ್ನುಳಿದಂತೆ ಎಲ್ಲರಿಗೂ ಒಳಗೊಳ್ಳುವಂತಹ ಅವಕಾಶಗಳನ್ನು ಇವರಿಗೂ ಪ್ರದತ್ತವಾಗಿಸಿದೆ. ಒಟ್ಟಾರೆ ದೇಶಾದ್ಯಂತವಿರುವ 5,963 ಜಾತಿಗಳಲ್ಲಿ 4,484 ಜಾತಿ/ವರ್ಗ/ಪಂಗಡಗಳಿಗೆ ಮೀಸಲಾತಿಯಿದೆ; 1,263 ಪರಿಶಿಷ್ಟ ಜಾತಿ, 742 ಪಂಗಡಗಳು; 2,479 ಅತಿಹಿಂದುಳಿದವರಿಗೆ ಮೀಸಲಾತಿಯಿದೆ. ಆದರೆ ಇಡಬ್ಲ್ಯುಎಸ್ ಮೀಸಲಾತಿಗೆ ರಾಜ್ಯವಾರು ಸಮುದಾಯಗಳು ಅಖೈರಾಗಿಲ್ಲ.
1956 ವೇಳೆಗೆ ಭಾಷಾವಾರು ರಾಜ್ಯಗಳ ರಚನೆ ಹೇಗಾಯಿತೋ ಹಾಗೆಯೇ ಪ್ರಾಂತಗಳಲ್ಲಿದ್ದ ಜಾತಿಗಳ ಸಾಮಾಜಿಕ ಚಲನೆಗಳಡಿ (Social Movements) ಪರಿಶಿಷ್ಟ ಜಾತಿ/ಪಂಗಡಗಳನ್ನು ಗುರುತಿಸಿ ಪ್ರಾದೇಶಿಕ ನಿಬಂಧನೆಯಡಿ ಮೀಸಲಾತಿ ನೀಡಲಾಯಿತು. ಕರ್ನಾಟಕ ಸಹ ತನ್ನ ಭೂಭಾಗಗಳನ್ನು ಮರಳಿ ಪಡೆಯುವಾಗ, ಮೈಸೂರಿನ 15 ಪರಿಶಿಷ್ಟ ಜಾತಿ; 09 ಪಂಗಡಗಳೊಂದಿಗೆ ಹೈದರಾಬಾದ್ ಮೂಲದಿಂದ 32-04, ಬಾಂಬೆಯಿಂದ 24-19, ಮದ್ರಾಸ್ ಪ್ರಾಂತದಿಂದ 52-22, ಕೊಳ್ಳೇಗಾಲ ತಾಲೂಕಿನಿಂದ 02-02, ದ.ಕನ್ನಡ 04-01, ಉ.ಕನ್ನಡ 01-0 ಹಾಗೂ ಕೊಡಗು 12-06 ಬಂದವು. ಒಟ್ಟಾರೆ ಉಪ ಸಮುದಾಯಗಳ ಸಮಾನಾಂತರ ಉಪ ಪದಗಳನ್ನು ಕ್ರೋಡೀಕರಿಸಿ 101 ಪ.ಜಾತಿ ಮತ್ತು 50 ಪ.ಪಂಗಡಗಳು ಅನುಕ್ರಮವಾಗಿ ಲೀನವಾದವು. ದ.ಕನ್ನಡದ ನಿಮ್ನ ಜಾತಿಗಳ ಮೇಲೆ ಪುಣೆಯ ಆರ್.ಜಿ. ಕಾಕಡೆ ಅಧ್ಯಯನ (1949) ಮಾಡಿ ಮದ್ರಾಸ್‌ನ 52 ಜಾತಿಗಳಲ್ಲಿ ಬಹುತೇಕರಿಗೆ ಪರಿಶಿಷ್ಟರಾಗುವ ಸಾಮಾಜಿಕ ಅರ್ಹತೆಗಳಿಲ್ಲವೆಂದು ರಾಜ್ಯಾಂಗ ಸಭೆಗೆ ಮನವಿ ಮಾಡಿದರೂ ಮದ್ರಾಸಿಗರ ಒತ್ತಡದಲ್ಲಿ ಅವರ ದನಿ ಸೋತಿತು. ಹಾಗೆಯೇ ಮೈಸೂರಿನ ನಾಲ್ಕು ಸ್ಪಶ್ಯ ಜಾತಿಗಳ ಬಗ್ಗೆಯೂ ರಾಷ್ಟ್ರೀಯ 1931 ಜನಗಣತಿ (ಜೆ.ಜೆ.ಹಟನ್:ಸಂ-1:481) 2.40 ಲಕ್ಷ ಜನರನ್ನು ಅಪರಾಧಿಕೃತ ನಿಮ್ನರೆಂದು (Criminal Depressed) ಗುರುತಿಸಿದ್ದ ನಿಲುವಿಗೆ ತದ್ವಿರುದ್ಧವಾಗಿ 1950ರಲ್ಲಿ ಪರಿಶಿಷ್ಟ ಜಾತಿ ಒಳಗೆ ಆಶ್ರಯ ಪಡೆದವು. ಇದು ಮೂಲ ಅಸ್ಪಶ್ಯರ ಮೀಸಲಾತಿ ಬೇನೆಗೂ ಕಾರಣವಾಗಿದೆ. ಆದರೆ, ತೆಲಂಗಾಣ ಮತ್ತು ಸೀಮಾಂಧ್ರ ನಿಮ್ನ ವರ್ಗಗಳ ನಾಯಕರು ಅನ್ಯ ಸ್ಪಶ್ಯ ಜಾತಿಗಳ ಹೇರಿಕೆ ವಿರುದ್ಧ ಹೆಬ್ಬಂಡೆಯಂತೆ ನಿಂತರು. ಹಾಗಾಗಿ ಅದೊಂದು ಅಪ್ಪಟ ಮೂಲ ಅಸ್ಪಶ್ಯರ ಗುಂಪಾಗಿದೆ.
1919ರ ವೇಳೆಗೆ ನಿಮ್ನ ವರ್ಗಗಳ ಚಳವಳಿಕಾರರು ನಿಂದನಾತ್ಮಕ ಜಾತಿ ಪದಗಳ ಬಳಕೆಗೆ ವಿರೋಧಿಸಿ, ಮದ್ರಾಸ್ ಶಾಸನ ಸಭೆಯ ಮುಂದೆ ಅವುಗಳ ರದ್ದತಿಗೆ ಮನವಿ ಸಲ್ಲಿಸಿದ್ದರು. ಅದರನ್ವಯ 1922ರಲ್ಲಿ ಭಾಷಾವಾರು ಜಾತಿಗಳನ್ನು ಗುರುತಿಸಲು ಅನುಮೋದಿಸಿತು. ಆಗ ತಮಿಳು ಭಾಷಿಕರು ಆದಿದ್ರಾವಿಡರಾದರು; ತೆಲುಗರು ಆದಿಆಂಧ್ರೀಯರಾದರೆ; ಕನ್ನಡಿಗರು ಆದಿಕರ್ನಾಟಕರಾದರು. ಆದಿಕರ್ನಾಟಕರಾಗಲು ಹೊಲೆಯ ಮತ್ತು ಮಾದಿಗ ಸಮುದಾಯ ಎರಡೂ ಸಮಪಾಲಿನ ಬೆವರು ಸುರಿಸಿವೆ. ಮೈಸೂರು ಸರಕಾರದ ಆದೇಶದನ್ವಯ 1931 ಜನಗಣತಿ ಹೊಲೆಯ ಮತ್ತು ಮಾದಿಗರನ್ನು ಸದರಿ ಪದದಿಂದ ಸಾರಸಗಟಾಗಿ ಗುರುತಿಸಿದೆ. ಈ ಪದಗಳಿಂದು ಇಬ್ಬರ ನಡುವೆ ಸಂಖ್ಯಾಬಲದ ಹಗ್ಗಜಗ್ಗಾಟದ ಸಾಮಾಜಿಕ ಈರ್ಷೆಯ ವಸ್ತುವಾಗಿದೆ. ಕರ್ನಾಟಕದ ಪರಿಶಿಷ್ಟರಲ್ಲಿ ವಿಭಿನ್ನ ಸಾಮಾಜಿಕ ಗುಣಲಕ್ಷಣಗಳ ಉಪ ಜಾತಿ/ಪಂಗಡಗಳ ಸಮಾಗಮವಾದದ್ದು 1956ರಲ್ಲಿ. ಅದರಿಂದಾಚೆಗೆ ಅವುಗಳ ಸಂಖ್ಯಾಬಲ ಮತ್ತು ಉಪ ಸಮುದಾಯಗಳ ಸಂಖ್ಯೆಯೂ ಹೆಚ್ಚಿದೆ. ಸಂವಿಧಾನ ನಿರ್ಮಾತೃಗಳು ಮೀಸಲಾತಿಯನ್ನು ಲಂಭಾಂತರ ಏಣಿಯ ತುದಿಯಲ್ಲಿ ಅದರ ಶೇಕಡಾವಾರು ಗೊಂಚಲನ್ನು ಕಟ್ಟಿದ್ದರು. ಈ ಏಣಿ ಸಬಲತೆಯಿದ್ದ ಜಾತಿಗಳಿಗೆ ದಕ್ಕುತ್ತಾ ಬಂದಿದೆ ಎಂಬ ವಾದವೂ ಇದೆ. ಆದರೆ ಒಳ ಮೀಸಲಾತಿ ಕಲ್ಪನೆ ಮಾತ್ರ ಪರಿಶಿಷ್ಟರ ಅಂತರ ಸಾಮಾಜಿಕ ಗುಂಪುಗಳನ್ನು ಸಮಾನಾಂತರವಾಗಿ ನಿಲ್ಲಿಸಿ ಅವರವರ ಸಂಖ್ಯಾಬಲಗಳಿಗೆ ಅನುಗುಣವಾಗಿ ಹಂಚುವುದರಿಂದ ಯಾವುದೇ ಸಮುದಾಯದ ಹಕ್ಕುಬಾಧ್ಯತೆಗಳಿಗೆ ಧಕ್ಕೆ ಬರುವುದಿಲ್ಲ.
ಪರಿಶಿಷ್ಟರಲ್ಲಿ ಸ್ವಜಾತಿ ಮತ್ತು ವಿಜಾತಿ ಗುಣಲಕ್ಷಣಗಳನ್ನು ಸರಳವಾಗಿ ಗುರುತಿಸಬಹುದು. ಅವುಗಳ ಆಂತರಿಕ ಸಾಂಸ್ಕೃತಿಕ ಏಕಸ್ವಾಮ್ಯತೆ, ವೃತ್ತಿ ವಿಭಜನೆ, ಅಂತರ ಸಾಮಾಜಿಕ ಮೈತ್ರಿ ತತ್ವಗಳ ಮೂಲಕ ಗುಂಪುಗಳನ್ನಾಗಿ ರಚಿಸಬಹುದು. ಈ ಆಧಾರಗಳಡಿ ಕೇಂದ್ರ ಸರಕಾರ (1980) ಪರಿಶಿಷ್ಟ ಜಾತಿ ಉಪಯೋಜನೆ ಕರಡಿನಲ್ಲಿ 14 ಸಾಂಪ್ರದಾಯಿಕ ಕಸುಬುಗಳನ್ನು ಗುರುತಿಸಿದೆ. ಅದರಲ್ಲಿ ಮಲಿನ ವೃತ್ತಿಯ ಚರ್ಮಕಾರರು (2.11 ಕೋಟಿ) ಮತ್ತು ಜಾಡಮಾಲಿ ಮತ್ತು ಪೌರ ಕಾರ್ಮಿಕರು (17.72 ಲಕ್ಷ) ಅತ್ಯಧಿಕವಾಗಿರುವುದನ್ನು ಸಾದರಪಡಿಸಿದೆ. ಕರ್ನಾಟಕದಲ್ಲಿಯೂ 10 ಬಗೆಯ ಸಾಂಪ್ರದಾಯಿಕ ಗುಂಪುಗಳಿರುವುದನ್ನು ಗುರುತಿಸಿದೆ. ಪ್ರತಿಯೊಂದು ರಾಜ್ಯದಲ್ಲಿರುವ ಪರಿಶಿಷ್ಟರೊಳಗೆ ಇರುವ ಉಪ ಜಾತಿಗಳು ಬಹಿರ್ಮುಖಿ ಮತ್ತು ಅಂತರ್ಮುಖಿ ಸಾಮಾಜಿಕ ವಿಘಟತೆಗಳನ್ನು ಮೈಗೂಡಿಸಿಕೊಂಡು ಬದುಕುತ್ತಿವೆ. ಹಿಂದುಳಿದ ವರ್ಗಗಳು ಮತ್ತು ಸವರ್ಣ ಮೇಲ್ವರ್ಗಗಳಿಗೆ ಬದುಕಿನ ಆಯಾಮಗಳನ್ನು ಕಟ್ಟಿಕೊಳ್ಳಲು ನೈಸರ್ಗಿಕವಾಗಿ ಸಿಗುವ ಸಾರ್ವತ್ರಿಕ ಸಾಮಾಜಿಕ ಸದವಕಾಶ, ಸಾಮಾಜಿಕ ವರ್ತನೆಗಳು ಹಾಗೂ ಸಾಮಾಜಿಕ ಮೈತ್ರಿಗಳು ಅಸ್ಪಶ್ಯರಿಗೆ ಸಮಾನವಾಗಿ ಅಥವಾ ಹೇರಳವಾಗಿ ದೊರೆಯದ ಕಾರಣ ಮೀಸಲಾತಿಯೇ ಅವರ ಬದುಕಿಗೆ ಇರುವ ಊರುಗೋಲಾಗಿದೆ. ಪ್ರಾದೇಶಿಕ ವೈರುಧ್ಯಗಳೂ ಅವರನ್ನು ಇನ್ನಿಲ್ಲದಂತೆ ಹಿಂಡಿಹಿಪ್ಪೆ ಕಾಯಿ ಮಾಡುತ್ತಿರುತ್ತವೆ. ಇವುಗಳ ಜತೆ 150 ಬಗೆಯ ಅಸ್ಪಶ್ಯತೆಯ ಕಾಟ ಹಾಗೂ ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಆಸ್ತಿ ನಾಶಗಳನ್ನು ಅನುಭವಿಸುತ್ತಲೇ ಜೀವನೋಪಾಯಗಳನ್ನು ಕಾಣುತ್ತಿರುತ್ತಾರೆ.
ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ಒಳ ಮೀಸಲಾತಿ ತೀರ್ಪು ಈ ಎಲ್ಲಾ ಬಗೆಯ ಅಂಶಗಳನ್ನು ಸಮತೋಲನ ದೃಷ್ಟಿ ಮತ್ತು ಸಮಾನ ಸಾಮಾಜಿಕ ನ್ಯಾಯ ಪ್ರದತ್ತವಾಗಿಸಲು 6:1 ಬಹುಮತದ ತೀರ್ಪು ನೀಡಿದೆ. ಅದರಲ್ಲಿ ಪ್ರಮುಖವಾಗಿ ಈ ತೀರ್ಪು ಸಂವಿಧಾನದ ನಿರ್ಮಾತೃಗಳು ಅಭಿಮತಿಸಿರುವ ಆಧಾರ ತತ್ವಗಳಿಗೆ ಎಲ್ಲಿಯೂ ಭಂಗವಾಗುವುದಿಲ್ಲ ಎಂಬ ಸಮಷ್ಠಿ ಧೋರಣೆಗಳನ್ನು ಸಾದರಪಡಿಸಿವೆ. ಚಾಲ್ತಿಯಲ್ಲಿರುವ ಉಪ ಸಮುದಾಯಗಳನ್ನು ಅವುಗಳ ಸಾಮಾಜಿಕ ವಂಶ ಪರಂಪರೆಯ ಸಹ ಸಂಬಂಧಗಳ ಮತ್ತು ವೃತ್ತಿ ಸಾಮ್ಯತೆಗಳ ಮೇಲೆ ಗುಂಪುಗಳನ್ನಾಗಿ ವಿಭಜಿಸುವ ಸಾಧ್ಯತೆಗಳನ್ನು ತೀರ್ಪಿನಲ್ಲಿ ಅಭಿವ್ಯಕ್ತಿಸಲಾಗಿದೆ. ಈಗಲೂ ರಾಜ್ಯಗಳು ಕಾಲಹರಣ ಮಾಡಿದರೆ ಸಾಮಾಜಿಕ ಉದ್ವಿಗ್ನತೆಗಳು ವಿಭಿನ ಸ್ವರೂಪದಲ್ಲಿ ವಿಕಾರಗೊಳ್ಳದೆ ಇರಲಾರವು. ಪರಿಚ್ಛೇಧ 341ರಲ್ಲಿ ಅಭಿಮತಿಸಿರುವಂತೆ, ಜಾತಿಗಳನ್ನು ಸೇರಿಸುವಾಗ ಅನುಸರಿಸುವ ಮಾನದಂಡವನ್ನು ಜಾತಿಗಳನ್ನು ಕೈಬಿಡಲು ಅನುಸರಿಸಬೇಕು. ಹಾಗೆಯೇ ಅವುಗಳನ್ನು ಮರುಜೋಡಣೆ ಮಾಡಲು ಸಹ ಇದೇ ಮಾದರಿಯಲ್ಲಿ ಪ್ರದತ್ತ ಅವಕಾಶಗಳನ್ನು ಒಂದು ನೈಜ ದತ್ತಾಂಶಗಳಡಿ ವರ್ಗೀಕರಿಸಬಹುದೆನ್ನುವ ಅಭಿಮತಗಳು ತೀರ್ಪಿನಲ್ಲಿ ಸಾದರವಾಗಿವೆ. ವರ್ಗೀಕರಣ ಮಾಡುವಾಗ ಪರಿಶಿಷ್ಟರೊಳಗಿರುವ ಹಿಂದುಳಿದಿರುವಿಕೆಯ ಅಸ್ತಿತ್ವವನ್ನು ಪರ್ಯಾಲೋಚಿಸಿ ಅವುಗಳಿಗೆ ಸಮಾನತೆಯ ಸದವಕಾಶ ನೀಡುವುದು ಸಾಂವಿಧಾನಿಕ ಕೋಮುವಾರು ಆದೇಶದ ಉದ್ದೇಶವಾಗಿರಬೇಕೆಂದು ಸುಪ್ರೀಂ ಕೋರ್ಟಿನ ತೀರ್ಪು ಹೇಳಿದೆ. ಅಂದರೆ ಯಾವ ಸಮುದಾಯಗಳು ಮೀಸಲಾತಿ ಜಾರಿಯಲ್ಲಿ ಕೊರತೆಯನ್ನು ಅನುಭವಿಸಿವೆಯೋ ಅಂತಹ ಸಮುದಾಯಗಳಿಗೆ ರಾಜ್ಯ ಸಾಂವಿಧಾನಿಕ ಕ್ರಮಗಳಡಿ ಅನುಷ್ಠಾನ ಮಾಡಲು ಮುಂದಾಗಬೇಕೆಂದಿದೆ ತೀರ್ಪು.
ಸುಪ್ರೀಂ ಕೋರ್ಟಿನ ತೀರ್ಪು ಹೇಳುವುದೇನೆಂದರೆ, ಪರಿಶಿಷ್ಟ ಜಾತಿಗಳು ಸಾಮಾಜಿಕತೆಯಲ್ಲಿ ವಿಜಾತಿಗಳೆನ್ನುವುದು ಸರ್ವವಿಧಿತವಾಗಿಯೂ ಐತಿಹಾಸಿಕ ಮತ್ತು ಪ್ರಾಯೋಗಿಕ ಸಾಕ್ಷ್ಯಗಳಿಂದ ರುಜುವಾತಾಗಿವೆ. ಆದುದರಿಂದ ರಾಜ್ಯವು ತನಗಿರುವ ಪ್ರದತ್ತ ಅಧಿಕಾರದ ಮೇರೆಗೆ ಅನುಚ್ಛೇದ 15(4) ಮತ್ತು 16(4)ಗಳ ಮುಖೇನವೇ ಮುಂದುವರಿದು ವಿಭಜಿಸಲು ಅಂದರೆ ಭಿನ್ನತೆ ಒಳಗಿರುವ ವಿವೇಕಯುಕ್ತ ತತ್ವವನ್ನು ಪ್ರಕಾಶಿಸುವುದು; ವರ್ಗೀಕರಣಕ್ಕಿರುವ ವಿವೇಕಯುಕ್ತ ತತ್ವಗಳಡಿ ಉದ್ದೇಶಗಳನ್ನು ಸರಿಯಾಗಿ ಸಾದರಪಡಿಸಬೇಕೆಂದು ಉಲ್ಲೇಖಿಸಿದೆ. ಇಲ್ಲಿಯ ತನಕ ಅನುಚ್ಛೇದ 341ಕ್ಕೆ ತಿದ್ದುಪಡಿ ಬೇಕೆನ್ನುವ ಪ್ರಚಾರದಲ್ಲಿದ್ದ ಅಭಿಮತಗಳಿಗೆ ಪೂರ್ಣವಿರಾಮ ಹಾಕಿದೆ. ಅಂದರೆ 1956ರಲ್ಲಿ ರಾಷ್ಟ್ರಾಧ್ಯಕ್ಷರ ಪರಿವರ್ತಿತ ಆದೇಶಾನುಸಾರ ಸೇರಲ್ಪಟ್ಟಿರುವ ಪರಿಶಿಷ್ಟರನ್ನು ಗುಂಪುಗಳನ್ನಾಗಿ ಮರುವಿಂಗಡಣೆ ಮಾಡಿ ಸಮಾನಾಂತರ ಹಂಚಿಕೆಯ ಸಿದ್ಧಾಂತದಡಿ ಮೀಸಲಾತಿ ವಿತರಿಸುವುದನ್ನು ಎತ್ತಿಹಿಡಿದಿದೆ. ಈ ವರ್ಗೀಕರಣಕ್ಕೆ ಬೇಕಿರುವ ಪ್ರಸಕ್ತ ನಿಯತಾಂಕ (Current parameters) ಮಾನದಂಡಗಳನ್ನು ಮಾತ್ರ ವೈಜ್ಞಾನಿಕವಾಗಿ ಸಾದರಪಡಿಸ ಬೇಕೆನ್ನುವುದು ತೀರ್ಪಿನ ಸಾರಾಂಶ. ಕರ್ನಾಟಕಕ್ಕೆ ನೆರೆಯ ಎರಡು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳು ನಾಡಿನ ಮಾದರಿ ವರ್ಗೀಕರಣಗಳು ಮುಂದಿನ ನಡೆಗೆ ಕೈಮರವಾಗಲಿದೆ.
ಕೆನೆಪದರ ಪರ ಸಣ್ಣ ಬೆಂಬಲವಿದೆ; ಮತ್ತು ಒಳ ಮೀಸಲಾತಿ ಜಾರಿ ವಿರುದ್ಧ ಎಂದಿನಂತೆ ಪ್ರತಿರೋಧ ವ್ಯಕ್ತವಾಗಿವೆ. ಕೆನೆಪದರ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಪ್ರಸ್ತಾವಿಸಿದ್ದರೂ ಅದರ ಅಂತಿಮ ಸಾರಾಂಶದಲ್ಲಿ (ಭಾಗ-ಇ) ಉಲ್ಲೇಖಿಸದಿರುವುದು ಸ್ಪಷ್ಟವಾಗಿದೆ. ಅಂದರೆ ಕೆನೆಪದರ ಒಳ ಮೀಸಲಾತಿ ಜಾರಿಗೆ ಪರಿಗಣಿಸಬೇಕಿಲ್ಲವೆಂಬುದು ಸಂವಿಧಾನ ಪೀಠದ ನಿಲುವುಗಳಾಗಿವೆ. ಕೆನೆಪದರ ಪರಿಶಿಷ್ಟರಲ್ಲಿ ಬೇಕೆನ್ನುವವರು ಹಿಡಿ ಮಂದಿಯಷ್ಟಿದ್ದಾರೆ. ಇದರ ಅವಶ್ಯಕತೆಯು ಅನ್ಯ ಸಮುದಾಯಗಳಿಗಿದೆ. ಪರಿಶಿಷ್ಟರು ಭೂರಹಿತರೆನ್ನುವುದು ಸರ್ವವಿಧಿತವಾದ ಸಾಮಾಜಿಕ ಸತ್ಯಗಳಾಗಿವೆ. ಅವುಗಳ ಆಸ್ತಿ ರಚನೆ ಮತ್ತು ಸಂಪತ್ತಿನ ಕ್ರೋಡೀಕರಣಗಳೆರಡೂ ವಕ್ರವಾಗಿ ಪ್ರತಿಬಿಂಬಿಸುತ್ತವೆ. ಭಾರತದ ಒಟ್ಟು ಕೃಷಿ ಹಿಡುವಳಿಯಲ್ಲಿ ಪರಿಶಿಷ್ಟ ಜಾತಿಗಳು ಶೇ.8.5ರಷ್ಟು ಮತ್ತು ಪಂಗಡಗಳು ಶೇ.11.27ರಷ್ಟು ಕಾರ್ಯನಿರತ ಹಿಡುವಳಿಗಳನ್ನು ಹೊಂದಿವೆ. ಅವುಗಳಲ್ಲಿ ಪ.ಜಾತಿ ಶೇ. 78 ಮತ್ತು ಶೇ. 56ರಷ್ಟು ಪಂಗಡಗಳು ಮಾರ್ಜಿನಲ್ ಹಿಡುವಳಿಗಳಾಗಿವೆ (Marginal holdings). ಕರ್ನಾಟಕದಲ್ಲಿ ಇವುಗಳು ಅನುಕ್ರಮವಾಗಿ ಶೇ.11.3 ಮತ್ತು ಶೇ.6.0ರಷ್ಟು ಹೊಂದಿವೆ. 75 ವರ್ಷಗಳ ಅಭಿವೃದ್ಧಿಯಲ್ಲಿ ಈ ಸಮುದಾಯಗಳು ಎಷ್ಟು ಆದಾಯ ತೆರಿಗೆ ಪಾವತಿಸಲು ಶಕ್ತರಾಗಿದ್ದಾರೆ? 2011 ಜನಗಣತಿ ಪ್ರಕಾರ ಪ.ಜಾತಿಯ ಶೇ.3.49 ಮತ್ತು ಪಂಗಡದ ಶೇ.3.34ರಷ್ಟು ಕುಟುಂಬಗಳು ಮಾತ್ರ ಆದಾಯ ತೆರಿಗೆ ಪಾವತಿಸಿವೆ.
ದೇಶಾದ್ಯಂತ 73.15 ಕೋಟಿ ಪಾನ್‌ಕಾರ್ಡ್ ಪಡೆದವರಿದ್ದಾರೆ (ಪುರುಷ-42.10 ಕೋಟಿ ಮತ್ತು ಮಹಿಳೆ 31.05 ಕೋಟಿ). ಹಾಗಾದರೆ ಇವರೆಲ್ಲರೂ ಆದಾಯ ತೆರಿಗೆ ಪಾವತಿದಾರರೆ? ಖಂಡಿತವಾಗಿಯೂ ಇಲ್ಲ. 2023-24ರಲ್ಲಿ ಕೇವಲ 8.18 ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.0.06ರಷ್ಟು ಮಾತ್ರ ತೆರಿಗೆ ಪಾವತಿದಾರರು. ಜಿಡಿಪಿಗೆ ತೆರಿಗೆಯ ಕೊಡುಗೆ ಶೇ.11.6ರಷ್ಟಿದೆ. ಒಇಸಿಡಿ ದೇಶಗಳಲ್ಲಿ ಈ ಪಾಲು ಮೂರು ಪಟ್ಟು ಹೆಚ್ಚಿದೆ. ಪರಿಶಿಷ್ಟರಲ್ಲಿ ಆದಾಯ ತೆರಿಗೆ ಪಾವತಿಸುವವರು ಸಾಮಾನ್ಯವಾಗಿ ಮೇಲ್ದರ್ಜೆ ನೌಕರರು, ಸಣ್ಣ ಪ್ರಮಾಣದಲ್ಲಿರುವ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿದರೆ ಒಟ್ಟು ಕುಟುಂಬಗಳಲ್ಲಿ ಶೇ. 4ಕ್ಕಿಂತ ಕಡಿಮೆಯಿದ್ದಾರೆ. ಇಂತಹ ಆರ್ಥಿಕ ವೈರುಧ್ಯವಿರುವ ಸಮುದಾಯದೊಳಗೆ ಕೆನೆಪದರ ಅಳವಡಿಕೆ ಕಷ್ಟಸಾಧ್ಯವಾಗುತ್ತದೆ. ತುಸು ಆರ್ಥಿಕ ಸಮೃದ್ಧಿ ಕಂಡವರಿಗೂ ಸಾಮಾಜಿಕ ಅಪಮಾನಗಳ ವರ್ತುಲಗಳಾಚೆ ಬರಲಾಗುತ್ತಿಲ್ಲ.
ಉತ್ತರ ಭಾರತದ ಚಮ್ಮಾರ ಸಮುದಾಯಗಳು ಏಕೆ ಒಳ ಮೀಸಲಾತಿ ವಿರೋಧಿಸುತ್ತಿವೆಯೆಂದರೆ ಈ ಭಾಗದಲ್ಲಿ ಗರಿಷ್ಠ ಪ್ರಮಾಣದ ಮೀಸಲಾತಿ ಅನುಭವಿಸುವವರು ಇವರಾಗಿದ್ದಾರೆ. ಸಹಜವಾಗಿ ವಿರೋಧಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಚಮ್ಮಾರ ಸಮುದಾಯಗಳು ಒಳ ಮೀಸಲಾತಿ ಬೇಕೆನ್ನುತ್ತಿವೆ ಎಂದರೆ ಈ ಭಾಗಗಳಲ್ಲಿ ಸಮಾನ ಸಾಮಾಜಿಕ ನ್ಯಾಯದಡಿ ಸಮಾನಾಂತರ ಗುಣಾಂಶ ಮತ್ತು ಸಂಖ್ಯಾ ಪ್ರಮಾಣಾನುಸಾರ ಗುಂಪುವಾರು ಹಂಚುಣ್ಣುವ ತತ್ವಗಳಿಗೆ ಬೆಂಬಲಿಸಿವೆ. ಸುಮಾರು 3 ದಶಕಗಳಿಂದ ಒಳ ಮೀಸಲಾತಿ ಹೋರಾಟ ಹಾದಿಯಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳು ನಿರ್ದಯವಾಗಿ ಸುಟ್ಟುಕೊಂಡಿವೆ. ಇವುಗಳಿಗೆ ಸುಪ್ರೀಂಕೋರ್ಟು ತೀರ್ಪಿನ ಮೂಲಕ ಅದರ ಆಶಯಗಳನ್ನು ಈಡೇರಿಸಿಕೊಳ್ಳುವ ಪರ್ವಕಾಲ ಬಂದಿದೆ. ಒಳ ಮೀಸಲಾತಿ ಚಳವಳಿ ದೇಶದಲ್ಲಿ ಹುಟ್ಟಿದಾಗ ಭಾಜಪ ರಾಜಕಾರಣ ಮುನ್ನೆಲೆಯಲ್ಲಿರಲಿಲ್ಲ. ಈ ವಿಚಾರದಲ್ಲಿ ಕೈಯಾಡಿಸಿದೆ ಎಂಬ ಆರೋಪದಡಿ ಒಳ ಮೀಸಲಾತಿ ಜಾರಿಗೆ ರಾಜ್ಯಗಳು ಕನ್ನಡಿ ಹಿಡಿದು ಓಡಾಡಿದರೆ ಆಳುವ ಪಕ್ಷಗಳು ಅನೇಕ ರಾಜಕೀಯ ತಾಪತ್ರಯಗಳನ್ನು ಅನುಭವಿಸುತ್ತವೆ.