‘ಹೆಣ್ಣು’ ದನಿ ಏಕೆ ಅಡಗಿದೆ?
ಕಳೆದ ಒಂದು ವಾರದಿಂದ ಹಾಸನದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣವು ದಿನದಿನಕ್ಕೂ ಸಿನಿಮೀಯ ತಿರುವುಗಳನ್ನು ಪಡೆಯುತ್ತಿದೆ. ಅಚ್ಚರಿ, ಪರ, ವಿರೋಧ, ಕುಹಕ, ವ್ಯಂಗ್ಯ, ಹಾಸ್ಯ, ವಿಕೃತ ಖುಷಿ ಎಲ್ಲವೂ ನಡೆಯುತ್ತಿವೆ. ಕೆಲವು ಗಂಡಸರಲ್ಲಿ ಈ ವೀಡಿಯೊಗಳನ್ನು ಹೇಗಾದರೂ ದಕ್ಕಿಸಿಕೊಂಡು ನೋಡುವ ಕೆಟ್ಟ ಕುತೂಹಲವಿದ್ದಷ್ಟು, ಈ ಪ್ರಕರಣವನ್ನು ವಿರೋಧಿಸುವ ಸಿಟ್ಟು ಆಕ್ರೋಶ ಇಲ್ಲದಾಗಿದೆ. ಡಿಜಿಟಲ್ ಯುಗದ ಅತಿವೇಗಕ್ಕೆ ಪೆನ್‌ಡ್ರೈವ್‌ನಲ್ಲಿರುವ ಪ್ರತೀ ವೀಡಿಯೊಗೂ ರೆಕ್ಕೆ ಬಂದು ಹಾರುತ್ತಿವೆ. ಹೀಗೆ ಹಾರುವ ವೀಡಿಯೊಗಳು ಸಂತ್ರಸ್ತ ಹೆಣ್ಣುಮಕ್ಕಳನ್ನು ಭಯ, ಆತಂಕ, ದುಗುಡದಲ್ಲಿಟ್ಟಿವೆ. ಜಗತ್ತಿನ ಸೆಕ್ಸ್ ಸ್ಕ್ಯಾಂಡಲ್‌ಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿದರೆ, ಬಹುಶಃ ಇಷ್ಟು ದೊಡ್ಡ ಸಂಖ್ಯೆಯ ಹೆಣ್ಣುಗಳನ್ನು ಲೈಂಗಿಕವಾಗಿ ಬಳಸಿಕೊಂಡ ಚುನಾಯಿತ ಪ್ರತಿನಿಧಿಗಳ ಉದಾಹರಣೆಗಳು ಸಿಗುವುದಿಲ್ಲ. ಪ್ರಕರಣ ಇಷ್ಟು ಗಂಭೀರವಾಗಿದ್ದರೂ, ಮುಂದೆ ರಾಜಕೀಯ ಪ್ರಭಾವ ಬಳಸಿ, ಸಾಕ್ಷ್ಯಗಳಿಲ್ಲದೆ ಪ್ರಜ್ಞಲ್ ನಿರಪರಾಧಿಯೂ ಆಗಬಹುದು. ಆದರೆ ಪೆನ್‌ಡ್ರೈವ್ ವೀಡಿಯೊಗಳು ಈತನೊಬ್ಬ ‘ವಿಕೃತಕಾಮಿ’ ಎಂದು ಸಾಬೀತು ಮಾಡಿವೆ. ಹಾಗಾಗಿ ಈ ಬರಹದಲ್ಲಿ ವಿಕೃತಕಾಮಿ ಎಂದೇ ಬಳಸಿದ್ದೇನೆ.
ಇದೀಗ ಈ ವೀಡಿಯೊಗಳಲ್ಲಿರುವ ಹೆಣ್ಣುಮಕ್ಕಳು ಆತಂಕ, ಭಯ, ದುಗುಡ, ಕ್ಷಣ ಕ್ಷಣವೂ ಏನಾಗುತ್ತೋ ಎನ್ನುವ ಒತ್ತಡದಲ್ಲಿ ತಮ್ಮ ಮೊಬೈಲುಗಳನ್ನು ಸ್ವಿಚ್ ಆಫ್ ಮಾಡಿಕೊಂಡು, ತಮ್ಮ ಮನೆಯ ಗಂಡ, ಮಕ್ಕಳು, ತಂದೆ, ತಾಯಿಯರನ್ನು ಎದುರಿಸಲಾಗದೆ ಉಸಿರುಗಟ್ಟಿದ್ದಾರೆ. ಈ ಸ್ಥಿತಿಯಿಂದ ಇವರು ಹೊರಬರಲು ಬಹಳ ಸಮಯ ಬೇಕು. ಇಂತಹ ಒತ್ತಡದಲ್ಲಿ ಸಾವಿನ ಕದ ತಟ್ಟಲೂಬಹುದು. ಇವರುಗಳ ಈ ಗಂಭೀರ ಸ್ಥಿತಿಯ ಬಗ್ಗೆ ಮಾಧ್ಯಮಗಳು ಸಾವಧಾನದಿಂದ ಯೋಚಿಸುವ ಸ್ಥಿತಿಯಲ್ಲಂತೂ ಇಲ್ಲ. ಹೀಗಿರುವಾಗ ಇಂತಹ ಹೆಣ್ಣುಮಕ್ಕಳು ಆ ವೀಡಿಯೊದಲ್ಲಿರೋದು ನಾನೇ, ನನ್ನನ್ನು ಬಲಾತ್ಕರಿಸಿದ್ದಾನೆ ಎಂದು ಹೇಳಿಕೆ ಕೊಡುವುದು ಕಷ್ಟವಿದೆ. ರಾಜ್ಯ ಸರಕಾರದ ಎಸ್‌ಐಟಿಯವರು ಈ ವೀಡಿಯೊದಲ್ಲಿನ ಮಹಿಳೆಯರನ್ನು ಗುರುತಿಸಿ ಸಂಪರ್ಕಿಸಿದಾಗ, ಈ ಬಗ್ಗೆ ಹೆಚ್ಚು ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಈ ಪ್ರಕರಣ ಹತ್ತಾರು ಪ್ರಶ್ನೆಗಳನ್ನು ಹುಟ್ಟಿಸುತ್ತಿವೆ. ಈ ವಿಕೃತಕಾಮಿ ವೀಡಿಯೊ ರೆಕಾರ್ಡ್ ಮಾಡಿದ್ದು ಎರಡು ಸಾವಿರಕ್ಕಿಂತ ಹೆಚ್ಚು ಮಹಿಳೆಯರಾದರೆ, ವೀಡಿಯೊ ಮಾಡದೆ ಇರುವ ಮಹಿಳೆಯರೂ ಇರಬಹುದು. ಅಂತೆಯೇ ಒತ್ತಡಕ್ಕೆ ಮಣಿದೋ, ಭಯ, ಆತಂಕದಿಂದಲೋ, ಮನಸ್ಸಿಲ್ಲದೆಯೂ ಈ ವಿಕೃತಕಾಮಿಯ ಬಲಾತ್ಕಾರಕ್ಕೆ ಒಳಗಾದವರಿದ್ದಂತೆ, ಈ ಎಲ್ಲವನ್ನೂ ಮೀರಿಯೂ ಛೀಮಾರಿ ಹಾಕಿ ತಿರಸ್ಕರಿಸಿದ ಮಹಿಳೆಯರೂ ಇದ್ದಿರಬೇಕು. ಇಂಥವರು ಈಗ ಸಮಾಧಾನ ಪಟ್ಟುಕೊಂಡು ನಿಟ್ಟುಸಿರು ಬಿಡುತ್ತಿರಬಹುದು. ಆಕಸ್ಮಾತ್ ಇಂತಹವರು ಮಾತನಾಡಿದರೂ ಈ ಪ್ರಕರಣಕ್ಕೆ ಮತ್ತೊಂದು ಆಯಾಮ ದೊರಕಬಹುದು. ಯಾವ ಪ್ರಕರಣ ಬಯಲಿಗೆ ಬರಬಾರದು ಎಂದು ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದನೋ, ಅದೇ ವೀಡಿಯೊಗಳೇ ವಿಕೃತಕಾಮಿಯನ್ನು ಬಲಿಕೊಡಲು ಸಿದ್ಧವಾಗಿವೆ.
ಇರಲಿ, ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಅಥವಾ ಪಾರಾದ ಮಹಿಳೆಯರನ್ನು ಹೊರತುಪಡಿಸಿದರೆ, ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 3 ಕೋಟಿ ಒಂದು ಲಕ್ಷದಷ್ಟು ಮಹಿಳೆಯರಿದ್ದಾರೆ. ಇವರುಗಳ ಪ್ರತಿರೋಧದ ದನಿ ಕೇಳುತ್ತಿಲ್ಲವೇಕೆ? ಈ ಪ್ರಕರಣವನ್ನು ವಿರೋಧಿಸಿ ಶಾಲಾ ಕಾಲೇಜುಗಳ ಹುಡುಗಿಯರೇಕೆ ಬೀದಿಗಿಳಿಯುತ್ತಿಲ್ಲ? ಬೆರಳೆಣಿಕೆಯ ಮಹಿಳಾ ಸಂಘಟನೆಗಳು ದನಿ ಎತ್ತಿದ್ದು ಬಿಟ್ಟರೆ ಉಳಿದೆಲ್ಲಾ ಸಂಘಟನೆಗಳ ಮೌನವೇಕೆ? ಮಹಿಳಾ ಸಾಹಿತಿಗಳೂ ದೊಡ್ಡ ದನಿಯಲ್ಲಿ ಮಾತನಾಡುತ್ತಿಲ್ಲ, ಏಕೆ ಏನಾಗಿದೆ? ಒಂದು ವೇಳೆ ತಾನೋ ತನ್ನ ಅಕ್ಕ ತಂಗಿಯೋ, ಅಮ್ಮನೋ ಸಂತ್ರಸ್ತಳಾಗಿದ್ದರೆ ಎನ್ನುವ ಬಂಧುತ್ವದ ಕಿಚ್ಚು ಹೊತ್ತಿಕೊಳ್ಳುತ್ತಿಲ್ಲವೇಕೆ? ವಿಕೃತಕಾಮಿಯ ಗಂಡುಕುಲ ಏಕೆ ಹೀಗೆ ಮುಗುಮ್ಮಾಗಿದೆ. ತನ್ನ ತಾಯಿ, ಹೆಂಡತಿ, ಮಗಳು, ಅಕ್ಕ, ತಂಗಿಯೋ ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡವರಂತೆ ಯಾಕೆ ವಿಚಲಿತರಾಗುತ್ತಿಲ್ಲ? ಅಥವಾ ಬಹುಪಾಲು ಗಂಡುಗಳು ತನಗೆ ಸುಖನೀಡಬಹುದಾದ ಮಹಿಳೆಯರ ಜತೆ ಕಲ್ಪಿಸಿಕೊಂಡು ವಿಕೃತಕಾಮಿಯ ಸ್ಥಾನದಲ್ಲಿ ಖುಷಿ ಪಡುತ್ತಿದ್ದಾರೆಯೆ? ಇಂತಹ ವಿಕೃತಕಾಮಿ ಗಂಡುಲೋಕಕ್ಕೆ ಕಳಂಕ ಎಂದೂ, ಭಾರತೀಯ ಹಿಂದೂ ಸಂಸ್ಕೃತಿಗೆ ಅಪಮಾನ ಎಂದೂ ಧಾರ್ಮಿಕ ಕಟ್ಟಾಳುಗಳು ಏಕೆ ವಿರೋಧಿಸುತ್ತಿಲ್ಲ.
ಭಾರತ ಜಾತಿವಾದಿ ಗಂಡೆಜಮಾನಿಕೆಯ ದೇಶ. ಅಂತೆಯೇ ಲೈಂಗಿಕತೆಯ ಬಗೆಗೆ ವಿಪರೀತ ಮಡಿವಂತಿಕೆಯ ದೇಶವೂ ಕೂಡ. ಒಂದೆಡೆ ಲೈಂಗಿಕತೆಗೆ ಗಂಡಿಗೆ ಮುಕ್ತತೆಯನ್ನೂ, ಹೆಣ್ಣಿಗೆ ನಿರ್ಬಂಧವನ್ನೂ ಹೇರಿರುವ ದೇಶವೂ ಇದಾಗಿದೆ. ‘ಅಸ್ಪಶ್ಯ’, ‘ದಮನಿತ’, ’ದಲಿತ’ ಜಾತಿಯ ವಿರುದ್ಧ ಉಳಿದೆಲ್ಲಾ ಜಾತಿಗಳು ಒಟ್ಟಾಗಿ ‘ದಮನಿಸುವ ಶಕ್ತಿ’ಯಾಗುವಂತೆ, ಈ ದೇಶದಲ್ಲಿ ಕಲ್ಪಿತ ಶತ್ರು ಧರ್ಮವಾದ ಮುಸ್ಲಿಮ್ ಧರ್ಮದ ವಿರುದ್ಧ ಜಾತಿ, ಲಿಂಗಭೇದ ಮರೆತು ಹಿಂದೂಗಳೆಲ್ಲಾ ಒಟ್ಟಾಗಿ ಆಕ್ರಮಿಸುವಂತೆ, ಹೆಣ್ಣಿನ ವಿರುದ್ಧ ಇಡಿಯಾಗಿ ಗಂಡುಕುಲವೇ ಒಟ್ಟಾಗಿ ‘ಶೋಷಕಶಕ್ತಿ’ಯಾಗುವಂತೆ, ಗಂಡಿನ ವಿರುದ್ಧ ಹೆಣ್ಣುಗಳೆಲ್ಲಾ ದೊಡ್ಡ ಪ್ರತಿರೋಧದ ಶಕ್ತಿಯಾಗಲು ಸಾಧ್ಯವಾಗಿಲ್ಲ. ಅಂತೆಯೇ ಮೇಲ್ಜಾತಿಗಳ ವಿರುದ್ಧ ಉಳಿದೆಲ್ಲಾ ಕೆಳಜಾತಿಗಳು ಒಟ್ಟಾಗಿ ನಡುಕಹುಟ್ಟಿಸುವ ಪವಾಡವೂ ಸಂಭವಿಸಿಲ್ಲ.
ಹೀಗೊಂದು ಯೋಚನೆ ಮಾಡೋಣ. ಒಂದು ವೇಳೆ ವಿಕೃತಕಾಮಿ ಗಂಡಿನ ಸ್ಥಾನದಲ್ಲಿ ಅವಿವಾಹಿತ ಮಹಿಳಾ ರಾಜಕಾರಣಿಯೊಬ್ಬಳಿದ್ದು, ಹೀಗೆ ತನ್ನ ಬಯಕೆಗೆ ಸಾವಿರಾರು ಗಂಡುಗಳನ್ನು ಬಳಸಿಕೊಂಡಿದ್ದರೆ, ಈ ರಾಜ್ಯ, ದೇಶದ ಪ್ರತಿಕ್ರಿಯೆ ಹೇಗಿರುತ್ತಿತ್ತು? ಆಗ ಮಹಿಳೆಯರೆಲ್ಲಾ ದಿಢೀರ್ ಒಟ್ಟಾಗಿ ಇವಳಿಂದ ಹೆಣ್ಣುಕುಲ ತಲೆತಗ್ಗಿಸುವಂತಾಗಿದೆ, ನಮ್ಮ ಸಂಸ್ಕೃತಿಗೆ ಕಳಂಕವಾಗಿದೆ ಎಂದು ಹೆಣ್ಣುಮಕ್ಕಳೇ ಅವಳ ವಿರುದ್ಧ ನಿಲ್ಲುತ್ತಿದ್ದರು. ಬಳಕೆಗೊಂಡ ಗಂಡುಗಳು ತಮ್ಮ ಗಂಡಸ್ತನದ ವೀಡಿಯೊ ತೋರಿಸಿಕೊಂಡು ಮೀಸೆ ತಿರುವಿಕೊಂಡು ತಿರುಗುತ್ತಿದ್ದರು. ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾದ ರಾಜರ ಕತೆಗಳು ಮತ್ತು ಇಂತಹ ಪರಂಪರೆ ‘ಗಂಡು’ ಎಷ್ಟು ಮದುವೆಯಾದರೇನು? ಎಷ್ಟು ‘ಹೆಣ್ಣು’ಗಳನ್ನು ಬಳಸಿಕೊಂಡರೇನು? ಅವನು ಗಂಡಸಲ್ಲವೇ ಎನ್ನುವ ಬಲವಾದ ನಂಬಿಕೆಯನ್ನು ಹೆಣ್ಣಿನ ತಲೆಯಲ್ಲಿ ಬೇರೂರಿಸಲಾಗಿದೆ. ಇದೇ ಮನಸ್ಥಿತಿ ಇಂದಿನ ವಿಕೃತಕಾಮಿಯ ಪ್ರಕರಣದಲ್ಲಿ ಮಹಿಳೆಯರು ದನಿ ಎತ್ತದಂತೆ ಮಾಡಿದೆ. ಇದಕ್ಕೆ ವಿರುದ್ಧವಾಗಿ ಅವನು ಗಂಡಸು ಎಷ್ಟು ಹೆಣ್ಣುಗಳನ್ನು ಬೇಕಾದರೂ ಬಳಸಿಕೊಳ್ಳುತ್ತಾನೆ, ಅವನ ಬಳಿ ಹೋಗುವ ಹೆಣ್ಣುಗಳಿಗೆ ಪ್ರಜ್ಞೆ ಇರಲಿಲ್ಲವೇ ಎಂದು ಗಂಡುಗಳು ಕೊಂಕು ನುಡಿಯುತ್ತಿದ್ದಾರೆ. ಈ ಭಾರತೀಯ ಕೊಳೆತ ಮನಸ್ಥಿತಿಯ ಕಾರಣಕ್ಕೆ ಈ ಪ್ರಕರಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗಂಡುಗಳು ದನಿ ಎತ್ತುತ್ತಿಲ್ಲ. ಬಹುತೇಕ ಗಂಡುಗಳ ಒಳಗೆ ಒಬ್ಬ ‘ಪ್ರಜ್ವಲ್’ ಅಡಗಿ ಕೂತಿದ್ದಾನೆ. ಅಂತಹ ಅವಕಾಶ ಒದಗಿಬಂದಿಲ್ಲದ ಕಾರಣಕ್ಕೆ ಇವರುಗಳು ಸಜ್ಜನರಾಗಿದ್ದಾರೆ.
ಇನ್ನೊಂದು ಮಗ್ಗುಲಿನಿಂದ ಪರಿಶೀಲಿಸೋಣ. ಈ ವಿಕೃತಕಾಮಿ ದಲಿತ ಕೆಳಜಾತಿ ಗಂಡಾಗಿದ್ದು ಮೇಲ್ಜಾತಿ ಹೆಣ್ಣುಗಳನ್ನು ಬಳಸಿಕೊಂಡಿದ್ದರೆ, ಆತ ಮುಸ್ಲಿಮನಾಗಿದ್ದು ಹಿಂದೂ ಮಹಿಳೆಯರನ್ನು ಬಳಸಿಕೊಂಡಿದ್ದರೆ ಇಡೀ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿತ್ತು. ಇದಕ್ಕೆ ಹುಬ್ಬಳ್ಳಿಯ ನೇಹಾ ಪ್ರಕರಣವೇ ಸಾಕ್ಷಿ. ಈ ವಿಕೃತಕಾಮಿ ಮೇಲ್ಜಾತಿ, ಪ್ರಬಲ ರಾಜಕೀಯ ಮನೆತನದ ಗಂಡಸಾಗಿರುವ ಕಾರಣಕ್ಕೆ ಇಡೀ ಪ್ರಕರಣ ಸಿನಿಮೀಯ ರೀತಿಯಲ್ಲಿ ಬದಲಾಗುತ್ತಿದೆ. ಆತನನ್ನು ಬಚಾವು ಮಾಡಬೇಕಾದ ನಿರೂಪಣೆಗಳೂ ಸಿದ್ಧಗೊಳ್ಳುತ್ತಿವೆ.
ಗಂಡೆಜಮಾನಿಕೆಯ ನೋಟಕ್ರಮ ಹೇಗಿದೆಯೆಂದರೆ, ಪ್ರತೀ ಅತ್ಯಾಚಾರ ಪ್ರಕರಣವಾದಾಗಲೂ ಅತ್ಯಾಚಾರಕ್ಕೆ ಒಳಗಾಗುವ ಸಂತ್ರಸ್ತೆಯ ಸ್ಥಾನದಲ್ಲಿ ತಮ್ಮ ಮನೆಯ ಹೆಣ್ಣುಗಳಿರುತ್ತಾರೆಂದು ಭಾವಿಸಿ ಹೆಣ್ಣುಗಳಿಗೆ ರಕ್ಷಿಸಿಕೊಳ್ಳುವ ಪಾಠ ಮಾಡುತ್ತಾರೆಯೇ ಹೊರತು, ಅತ್ಯಾಚಾರ ಮಾಡುವ ಗಂಡುಗಳಲ್ಲಿ ತಮ್ಮ ಮನೆಯ ಗಂಡಸರೂ ಇರಬಹುದಲ್ಲ ಎಂದು ಗಂಡುಗಳಿಗೆ ಅತ್ಯಾಚಾರ ಎಸಗದಂತೆ ತಿದ್ದಿ ಬುದ್ಧಿ ಹೇಳುವ ಪರಿಪಾಠ ನಮ್ಮ ಕುಟುಂಬಗಳಿಗಿನ್ನೂ ಸಾಧ್ಯವಾಗಿಲ್ಲ. ಈಗಾಗಲೇ ವಿಶ್ಲೇಷಿಸಿದಂತೆ ಜಾತಿವಾದಿ ಗಂಡಹಮಿಕೆಯ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗದ ಹೊರತು ವಿಕೃತಕಾಮಿ ಪ್ರಜ್ವಲ್‌ನಂತಹ ಪ್ರಕರಣಗಳು ಮೊದಲೂ ಅಲ್ಲ, ಕೊನೆಯೂ ಆಗಲಾರವು.