ಘೋರ ಅಸಮಾನತೆಗಳು ಈ ದೇಶದ ಜನರನ್ನು ಕಾಡುತ್ತಿರುವಾಗ ಏಕರೂಪ ಆದಾಯ ಸಂಹಿತೆ ಜಾರಿ ಯಾಕಿಲ್ಲ?

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಾಗಿದೆ.
ಇಡೀ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ಪ್ರಪ್ರಥಮ ರಾಜ್ಯ ಉತ್ತರಾಖಂಡ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬಹಳ ಹೆಮ್ಮೆಯಿಂದಲೇ ಘೋಷಿಸಿದ್ದಾರೆ. ಈ ಕಾನೂನಿನ ಜಾರಿಯೊಂದಿಗೆ ಸಮಾಜದಲ್ಲಿ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಹಾಗೂ ಹೊಣೆಗಾರಿಕೆಗಳು ಖಾತರಿಯಾಗಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾಯ್ದೆಯ ನಿಯಮಗಳ ಅನುಷ್ಠಾನಕ್ಕೆ ಅನುಮೋದನೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿಗಳ ಅಂಕಿತದ ನಂತರ 2024ರ ಮಾರ್ಚ್ 12ರಂದು ಸಮಾನ ನಾಗರಿಕ ಕಾಯ್ದೆಯ ಅಧಿಸೂಚನೆ ಹೊರಡಿಸಲಾಗಿತ್ತು.
ಏನಿದು ಏಕರೂಪ ನಾಗರಿಕ ಸಂಹಿತೆ?
ಸ್ವಲ್ಪ ಗಮನಿಸುವುದಾದರೆ,
ಯಾವುದೇ ಜಾತಿ, ಧರ್ಮ, ಪ್ರಾಂತ ಭೇದ ಮಾಡದೆ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ.ಸಂವಿಧಾನದ ಆರ್ಟಿಕಲ್ 44ರ ಆಶಯ ಕೂಡ ಅದೇ ಆಗಿದೆ. ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಎಂದು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ.
ಹಾಗೆ ನೋಡಿದರೆ, ದೇಶದಲ್ಲಿ ಕ್ರಿಮಿನಲ್ ಕಾನೂನು ಎಲ್ಲರಿಗೂ ಒಂದೇ ಇದೆ. ಕ್ರಿಮಿನಲ್‌ಗಳಿಗೆ ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಶಿಕ್ಷೆ ನೀಡಲಾಗುತ್ತದೆ. ಆದರೆ, ವೈಯಕ್ತಿಕ ಕಾನೂನು, ಸಿವಿಲ್ ಕಾನೂನಿನಲ್ಲಿ ಮಾತ್ರ ಬದಲಾವಣೆ ಇತ್ತು.
ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಬಂದಾಗ, ಎಲ್ಲ ಕಾನೂನುಗಳೂ ಎಲ್ಲರಿಗೂ ಒಂದೇ ಆಗುತ್ತವೆ. ಈಗ ದೇಶದಲ್ಲಿ ಮೊದಲನೆಯದಾಗಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಿದೆ.
ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಕಂಡ ಬಳಿಕ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಹೆಸರಲ್ಲಿ ಹೊಸ ಧ್ರುವೀಕರಣದ ರಾಜಕೀಯ ಪ್ರಾರಂಭಿಸಿದೆ. ಏಕರೂಪ ನಾಗರಿಕ ಸಂಹಿತೆಗೂ ಮೊದಲು ಮಾಡಬೇಕಾದದ್ದು ಬಹಳಷ್ಟು ಇದೆ ಎಂಬುದನ್ನು ಅದು ಬೇಕೆಂದೇ ಕಡೆಗಣಿಸುತ್ತಿದೆ.
ಯಾವುದೇ ಸರಕಾರ ತನ್ನ ಜನರಿಗಾಗಿ ಮಾಡಬೇಕಾದ ಕೆಲಸಗಳು ಏನಿರುತ್ತವೆ ಎಂಬುದನ್ನು ನೋಡಿದರೆ, ಅದರ ವ್ಯಾಪ್ತಿ ಬಹಳ ದೊಡ್ಡದಿದೆ.
ಸಂವಿಧಾನದ ವಿಧಿ 36 ರಿಂದ 51ರವರೆಗೆ ರಾಜ್ಯ ನೀತಿಯ ವಿಭಿನ್ನ ನಿರ್ದೇಶಕ ತತ್ವಗಳನ್ನು ವಿವರಿಸಲಾಗಿದೆ.
ಅವನ್ನು ಸ್ಥೂಲವಾಗಿ ಗಮನಿಸುವುದಾದರೆ,
ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವಿರುವ ವ್ಯವಸ್ಥೆಯನ್ನು ನಿಶ್ಚಿತಗೊಳಿಸುವ ಮತ್ತು ಸಂರಕ್ಷಿಸುವ ಮೂಲಕ ಜನತೆಯ ಕಲ್ಯಾಣಕ್ಕೆ ರಾಜ್ಯ ಆದ್ಯತೆ ನೀಡಬೇಂಬುದು ರಾಜ್ಯ ನೀತಿಯ ವಿಭಿನ್ನ ನಿರ್ದೇಶಕ ತತ್ವಗಳ ಆಶಯ.
ವಿಶೇಷವಾಗಿ, ಆದಾಯದಲ್ಲಿನ ಅಸಮಾನತೆ ಕಡಿಮೆ ಮಾಡಲು ಪ್ರಯತ್ನಿಸಬೇಕು. ವೈಯಕ್ತಿಕವಾಗಿ ಮಾತ್ರವಲ್ಲದೆ, ಬೇರೆ ಬೇರೆ ಪ್ರದೇಶ, ವೃತ್ತಿಗಳ ಜನರಲ್ಲಿ ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆ ಇಲ್ಲವಾಗಿಸಲು ಪ್ರಯತ್ನಿಸಬೇಕು.
ಸಮಾನ ಜೀವನ ನಿರ್ವಹಣೆ ಹಕ್ಕು, ಎಲ್ಲರ ಹಿತಸಾಧನೆಗೆ ಸಹಾಯಕವಾಗುವಂತೆ ಸಂಪತ್ತಿನ ಹಂಚಿಕೆ, ಲಿಂಗ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ, ಮಕ್ಕಳ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು, ಆರೋಗ್ಯಕರ ಮತ್ತು ಘನತೆಯ ವಾತಾವರಣದಲ್ಲಿ ಮಕ್ಕಳ ಬೆಳವಣಿಗೆಗೆ ಅವಕಾಶ, ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು, ಗ್ರಾಮ ಪಂಚಾಯತ್‌ಗಳ ಸಂಘಟನೆ, ಕೆಲಸ, ಶಿಕ್ಷಣ ಮತ್ತು ಸರಕಾರದ ನೆರವು ಪಡೆಯುವ ಹಕ್ಕಿನ ರಕ್ಷಣೆ, ಕೆಲಸ ಮಾಡಲು ನ್ಯಾಯೋಚಿತ ಮತ್ತು ಮಾನವೋಚಿತ ಪರಿಸ್ಥಿತಿಗಳಿರುವಂತೆ ಹಾಗೂ ಪ್ರಸೂತಿ ಪ್ರಯೋಜನ ಸಿಗುವಂತೆ ನೋಡಿಕೊಳ್ಳುವುದು, ಕೆಲಸಗಾರರಿಗೆ ಜೀವನ ನಿರ್ವಹಣಾ ಮಜೂರಿ ಮತ್ತು ಉತ್ತಮ ಜೀವನಮಟ್ಟವನ್ನು ನಿಶ್ಚಿತಗೊಳಿಸುವ ಕೆಲಸ ಸ್ಥಿತಿಗಳನ್ನು ನಿರ್ಮಿಸುವುದು, ಕೈಗಾರಿಕೆಗಳ ಆಡಳಿತದಲ್ಲಿ ಕೆಲಸಗಾರರು ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವುದು, ಸಹಕಾರ ಸಂಘಗಳ ಸಂವರ್ಧನೆ, ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆ ಇರುವಂತೆ ಪ್ರಯತ್ನಿಸುವುದು, ಆರು ವರ್ಷ ತುಂಬುವವರೆಗಿನ ಶೈಶವಾವಸ್ಥೆಯ ಎಲ್ಲ ಮಕ್ಕಳ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದು, ಅನುಸೂಚಿತ ಜಾತಿ, ಬುಡಕಟ್ಟು, ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ, ಪೌಷ್ಟಿಕತೆಯ ಮಟ್ಟ ಮತ್ತು ಜೀವನಮಟ್ಟವನ್ನು ಹೆಚ್ಚಿಸುವುದು, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು, ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ, ಪರಿಸರ ಸಂರಕ್ಷಣೆ, ಸುಧಾರಣೆ ಹಾಗೂ ಅರಣ್ಯ, ವನ್ಯಜೀವಿಗಳ ರಕ್ಷಣೆ, ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕ, ಸ್ಥಳ, ವಸ್ತುಗಳ ಸಂರಕ್ಷಣೆ, ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು, ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಂವರ್ಧನೆ ಇಷ್ಟನ್ನು ರಾಜ್ಯ ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಒಂದು ರಾಜ್ಯವಾಗಿ ಉತ್ತರಾಖಂಡ ದೇಶದಲ್ಲೇ ಮೊದಲನೆಯದಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುತ್ತಿರುವುದಾಗಿ ಹೆಮ್ಮೆಪಡುವಾಗ, ಅದು ಈ ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದೆ ಎಂಬ ಪ್ರಶ್ನೆ ಏಳುತ್ತದೆ.
ನಮ್ಮ ನಡುವೆಯೇ ಈಗ ಎಷ್ಟು ದೊಡ್ಡ ಅಸಮಾನತೆ ಇದೆ ಎಂಬುದನ್ನು ಸ್ವಲ್ಪ ವಿವರವಾಗಿ ನೋಡಬೇಕು.
ಆಕ್ಸ್‌ಫಾಮ್ ಹೇಳುವ ಪ್ರಕಾರ, ಭಾರತದಲ್ಲಿರುವುದು ತೀವ್ರ ಅಸಮಾನತೆ.ಇದರ ವಿರುದ್ಧ ಹೋರಾಡಿ, ಬಡತನವನ್ನು ನಿವಾರಿಸಬೇಕಿರುವ ಅಗತ್ಯದ ಬಗ್ಗೆಯೂ ಅದು ಕರೆ ನೀಡುತ್ತದೆ.
ಭಾರತದಲ್ಲಿ ವಿಶೇಷವಾಗಿ ಕಳವಳಕಾರಿ ಸಂಗತಿಯೆಂದರೆ, ಜಾತಿ, ಧರ್ಮ, ಪ್ರದೇಶ ಮತ್ತು ಲಿಂಗದ ಮೂಲಕ ಈಗಾಗಲೇ ಛಿದ್ರಗೊಂಡಿರುವ ಸಮಾಜಕ್ಕೆ ಆರ್ಥಿಕ ಅಸಮಾನತೆಯೂ ಸೇರ್ಪಡೆಯಾಗುತ್ತಿದೆ ಎಂಬುದರ ಬಗ್ಗೆ ಅದು ಗಮನ ಸೆಳೆಯುತ್ತದೆ.
ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ಇದು ಅತ್ಯಂತ ಅಸಮಾನ ದೇಶಗಳಲ್ಲಿ ಒಂದಾಗಿದೆ ಎಂಬ ಕಟು ವಾಸ್ತವದ ಬಗ್ಗೆಯೂ ಅದು ಹೇಳುತ್ತದೆ.
ಕಳೆದ ಮೂರು ದಶಕಗಳಿಂದ ಅಸಮಾನತೆ ತೀವ್ರವಾಗಿ ಏರುತ್ತಿದೆ. ಶ್ರೀಮಂತರು ಕ್ರೋನಿ ಕ್ಯಾಪಿಟಲಿಸಂ ಮತ್ತು ಆನುವಂಶಿಕತೆಯ ಮೂಲಕ ಸೃಷ್ಟಿಯಾದ ಸಂಪತ್ತಿನ ದೊಡ್ಡ ಪಾಲನ್ನು ಅನುಭವಿಸುತ್ತಿದ್ದಾರೆ ಎಂದು ಆಕ್ಸ್ ಫಾಮ್ ಹೇಳುತ್ತದೆ. ಬಡವರು ಇನ್ನೂ ಕನಿಷ್ಠ ವೇತನವನ್ನು ಗಳಿಸಲು ಮತ್ತು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಹೆಣಗಾಡುತ್ತಿರುವಾಗ ಇನ್ನೊಂದು ವರ್ಗದವರು ಹೆಚ್ಚು ವೇಗವಾಗಿ ಶ್ರೀಮಂತರಾಗುತ್ತಿದ್ದಾರೆ ಎನ್ನುತ್ತದೆ ಅದು.
ಬೆಳೆಯುತ್ತಿರುವ ಆರ್ಥಿಕ ಅಂತರಗಳು ಮತ್ತು ಹೆಚ್ಚುತ್ತಿರುವ ಅಸಮಾನತೆಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಕೂಡ ಅದು ಎಚ್ಚರಿಸುತ್ತದೆ. ಅಸಮಾನತೆ ಎಷ್ಟು ಭಯಾನಕವಾಗಿದೆ ಎಂಬುದನ್ನು ಕೆಲವು ಪ್ರಮುಖ ಸಂಖ್ಯೆಗಳೊಂದಿಗೆ ನೋಡುವುದಾದರೆ,
1. ಭಾರತೀಯ ಜನಸಂಖ್ಯೆಯ ಅಗ್ರ ಶೇ.10ರಷ್ಟು ಜನರು ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇ.77ರಷ್ಟನ್ನು ಹೊಂದಿದ್ದಾರೆ. 2017ರಲ್ಲಿನ ಒಟ್ಟು ಸಂಪತ್ತಿನ ಶೇ.73ರಷ್ಟು ಪಾಲು ಅತ್ಯಂತ ಶ್ರೀಮಂತ ಶೇ. 1ರಷ್ಟು ಮಂದಿಯ ಕೈಯಲ್ಲಿತ್ತು. ಆದರೆ ಜನಸಂಖ್ಯೆಯ ಅರ್ಧದಷ್ಟು ಬಡವರನ್ನು ಒಳಗೊಂಡಿರುವ 67 ಕೋಟಿ ಭಾರತೀಯರ ಸಂಪತ್ತಿನಲ್ಲಿ ಕಂಡುಬಂದಿದ್ದ ಹೆಚ್ಚಳ ಶೇ. 1ರಷ್ಟು ಮಾತ್ರವಾಗಿತ್ತು.
2. ಭಾರತದಲ್ಲಿ 119 ಬಿಲಿಯನೇರ್‌ಗಳಿದ್ದಾರೆ. 2000ದಲ್ಲಿ ಅವರ ಸಂಖ್ಯೆ ಕೇವಲ 9 ಇತ್ತು. 2017ರಲ್ಲಿ 101ಕ್ಕೆ ಏರಿತು. 2018ರಿಂದ 2022ರ ಅವಧಿಯಲ್ಲಿ ಭಾರತದಲ್ಲಿ ಪ್ರತಿದಿನವೂ 70 ಹೊಸ ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
3. ಒಂದು ದಶಕದಲ್ಲಿ ಬಿಲಿಯನೇರ್‌ಗಳ ಸಂಪತ್ತು ಸುಮಾರು 10 ಪಟ್ಟು ಹೆಚ್ಚಾಗಿದೆ ಮತ್ತು ಅವರ ಒಟ್ಟು ಸಂಪತ್ತು 2018-19 ರ ಆರ್ಥಿಕ ವರ್ಷದ ಭಾರತದ ಸಂಪೂರ್ಣ ಕೇಂದ್ರ ಬಜೆಟ್‌ಗಿಂತ ಹೆಚ್ಚಾಗಿದೆ, ಅದು 24,422 ಬಿಲಿಯನ್ ರೂ.
4. ಅನೇಕ ಸಾಮಾನ್ಯ ಭಾರತೀಯರು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ 6.3 ಕೋಟಿ ಜನರು ಪ್ರತೀ ವರ್ಷ ಆರೋಗ್ಯ ವೆಚ್ಚಗಳಿಂದಾಗಿಯೇ ಇನ್ನಷ್ಟು ಬಡವರಾಗುತ್ತಿದ್ದಾರೆ. ಅಂದರೆ ಪ್ರತೀ ಸೆಕೆಂಡಿಗೆ ಸುಮಾರು ಇಬ್ಬರಂತೆ ಬಡವರಾಗುತ್ತಿದ್ದಾರೆ.
5. ಗ್ರಾಮೀಣ ಭಾರತದ ಕನಿಷ್ಠ ವೇತನದ ಕೆಲಸಗಾರನಿಗೆ, ಭಾರತದ ಪ್ರಮುಖ ಉಡುಪು ಕಂಪೆನಿಯ ಉನ್ನತ ಸಂಬಳದ ಸಿಇಒ ಒಂದು ವರ್ಷದಲ್ಲಿ ಗಳಿಸುವಷ್ಟು ಹಣವನ್ನು ಗಳಿಸಲು ಬೇಕಾಗುವ ವರ್ಷಗಳೆಷ್ಟು ಗೊತ್ತೆ?.
941 ವರ್ಷಗಳು!
ಹಾಗಾದರೆ ಅದ್ಯಾವ ಪರಿ ಆದಾಯ ಅಸಮಾನತೆ ಇದೆ ಇಲ್ಲಿ ಎಂದು ನಾವು ಊಹಿಸಬೇಕಾಗಿದೆ.
ಇನ್ನೂ ಕೆಲವು ಕಟು ವಾಸ್ತವಗಳನ್ನು ಆಕ್ಸ್‌ಫಾಮ್ ಗುರುತಿಸಿದೆ.
ಬಿಹಾರದ ಪಾಟ್ನಾದಲ್ಲಿರುವ ಗಾರ್ದಾನಿಬಾಗ್ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಬಡ ಜನರ ಪಾಲಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಎಲ್ಲರಿಗೂ ಸೇವೆ ಸಲ್ಲಿಸಲು ಸಾಕಷ್ಟು ಆರೋಗ್ಯ ಕೇಂದ್ರಗಳಿಲ್ಲ ಮತ್ತು ಇರುವ ಕೇಂದ್ರಗಳಲ್ಲಿ ಸೌಲಭ್ಯಗಳು ಸುಸಜ್ಜಿತವಾಗಿಲ್ಲ. ಜೊತೆಗೇ ಸಿಬ್ಬಂದಿ ಕೊರತೆಯಿದೆ.ಬಡ ಜನರಿಗೆ ಬೇರೆ ದಾರಿಯಿಲ್ಲ. ಅವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಕ್ತರಲ್ಲ.
ಭಾರತ ಸರಕಾರ ತನ್ನ ಶ್ರೀಮಂತ ನಾಗರಿಕರಿಗೆ ತೆರಿಗೆ ವಿಧಿಸದಿದ್ದರೂ, ಸಾರ್ವಜನಿಕ ಆರೋಗ್ಯ ರಕ್ಷಣೆಯ ಮೇಲಿನ ಅದರ ಖರ್ಚು ವಿಶ್ವದ ಅತ್ಯಂತ ಕಡಿಮೆ ಸ್ಥಾನದಲ್ಲಿದೆ ಎಂಬುದು ಮತ್ತೊಂದು ಕಟು ವಾಸ್ತವ.
ಇದೇ ವೇಳೆ ಸರಕಾರ ಪ್ರಬಲವಾದ ವಾಣಿಜ್ಯ ಆರೋಗ್ಯ ಕ್ಷೇತ್ರವನ್ನು ಹೆಚ್ಚು ಹೆಚ್ಚು ಉತ್ತೇಜಿಸಿದೆ. ಇದರ ಪರಿಣಾಮವಾಗಿ, ಯೋಗ್ಯವಾದ ಆರೋಗ್ಯ ವ್ಯವಸ್ಥೆ ಹಣವನ್ನು ಹೊಂದಿರುವವರಿಗೆ ಮಾತ್ರ ಲಭ್ಯವಿರುವ ಐಷಾರಾಮಿಯಾಗಿದೆ.
ದೇಶ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪ್ರಮುಖ ತಾಣವಾಗಿದ್ದರೂ, ಭಾರತದ ಬಡ ರಾಜ್ಯಗಳು ಆಫ್ರಿಕಾಕ್ಕಿಂತ ಹೆಚ್ಚು ಶಿಶು ಮರಣ ಪ್ರಮಾಣವನ್ನು ಹೊಂದಿವೆ.
ಜಾಗತಿಕ ತಾಯಂದಿರ ಸಾವುಗಳಲ್ಲಿ ಭಾರತದಲ್ಲಿನ ಪ್ರಮಾಣ ಶೇ.17 ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವುಗಳಲ್ಲಿ ಶೇ.21ರಷ್ಟಿದೆ.
ಇನ್ನು ಭಾರತದಲ್ಲಿ ಶೈಕ್ಷಣಿಕ ಅಸಮಾನತೆ ಎಂಥದು ಎಂಬುದನ್ನು ಗಮನಿಸುವುದಾದರೆ, ಪ್ರಾಥಮಿಕ ಶಾಲಾ ಮಟ್ಟದಲ್ಲಿ ಸುಮಾರು ಶೇ. 100 ದಾಖಲಾತಿಯನ್ನು ಸಾಧಿಸಿದೆಯಾದರೂ, ವಿವಿಧ ಅಂಚಿನಲ್ಲಿರುವ ಗುಂಪುಗಳಲ್ಲಿ ಎದ್ದುಕಾಣುವ ಅಸಮಾನತೆಗಳು ಮುಂದುವರಿದಿವೆ.
ವಿದ್ಯಾರ್ಥಿಗಳು ಉನ್ನತ ಶ್ರೇಣಿಗಳಿಗೆ ಮುಂದುವರಿದಂತೆ ದಾಖಲಾತಿ ದರಗಳು ವೇಗವಾಗಿ ಕಡಿಮೆಯಾಗುತ್ತವೆ. ಮುಸ್ಲಿಮ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವಿಚಾರದಲ್ಲಿ ಈ ಕುಸಿತ ತೀವ್ರವಾಗಿದೆ.ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದೇ ರೀತಿಯ ಪ್ರವೃತ್ತಿಗಳು ಕಂಡುಬರುತ್ತವೆ, ಅಲ್ಲಿ ಬಾಲ್ಯ ವಿವಾಹದಂತಹ ಸಾಂಸ್ಕೃತಿಕ ಅಂಶಗಳು ಮಾಧ್ಯಮಿಕ ಶ್ರೇಣಿಗಳಲ್ಲಿ ಕಡಿಮೆ ಹಾಜರಾತಿ ದರಗಳಿಗೆ ಕಾರಣವಾಗುತ್ತವೆ.
ವಸತಿ ವಿಚಾರಕ್ಕೆ ಬರುವುದಾದರೆ, 2030ರ ವೇಳೆಗೆ ಭಾರತದಲ್ಲಿ ಕೈಗೆಟುಕುವ ವಸತಿಗಳು 3.12 ಕೋಟಿ ಯೂನಿಟ್‌ಗಳನ್ನು ತಲುಪುವ ನಿರೀಕ್ಷೆಯಿದ್ದು, ಇದರ ಮಾರುಕಟ್ಟೆ ಮೌಲ್ಯ 67 ಟ್ರಿಲಿಯನ್ ರೂ. ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ನೈಟ್ ಫ್ರಾಂಕ್ ವರದಿ ಹೇಳಿವೆ. ಆದರೆ ಸಿಐಐ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಈಗಾಗಲೇ 1.01 ಕೋಟಿ ಯೂನಿಟ್‌ಗಳ ಕೊರತೆಯಿದೆ.
ಇನ್ನು ಜಾತಿ ಅಸಮಾನತೆ ಎಂಥದು ಎಂಬುದರ ಚಿತ್ರವಂತೂ ಕರಾಳವಾದುದು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನ್ನಲಾಗುವ ಭಾರತೀಯ ಮಾಧ್ಯಮಗಳಲ್ಲಿ ಶೇ. 90ರಷ್ಟು ನಾಯಕತ್ವ ಸ್ಥಾನಗಳನ್ನು ಮೇಲ್ಜಾತಿ ವರ್ಗಗಳೇ ಆಕ್ರಮಿಸಿಕೊಂಡಿವೆ ಎಂದು ವರದಿ ಹೇಳುತ್ತದೆ.
ಸುಮಾರು 43 ಭಾರತೀಯ ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳನ್ನು ಒಳಗೊಂಡ ವರದಿ, ನಾಯಕತ್ವದಲ್ಲಿರುವವರ ಸಾಮಾಜಿಕ ಸ್ಥಾನ ಮತ್ತು ಸಂಸ್ಥೆಗಳು ನೇಮಿಸಿಕೊಂಡಿರುವ ಪತ್ರಕರ್ತರ ಜಾತಿ ಇತ್ಯಾದಿ ಹಿನ್ನೆಲೆಯನ್ನು ಅಧ್ಯಯನ ಮಾಡಿದೆ.
ಭಾರತೀಯ ಮಾಧ್ಯಮಗಳಲ್ಲಿ ಸುಮಾರು ಶೇ.90 ನಾಯಕತ್ವದ ಸ್ಥಾನಗಳನ್ನು ಮೇಲ್ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ. ಆದರೆ, ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿ ಕೂಡ ಭಾರತದ ಮುಖ್ಯವಾಹಿನಿಯ ಮಾಧ್ಯಮದ ಮುಖ್ಯಸ್ಥರಾಗಿಲ್ಲ ಎಂದು ವರದಿ ಹೇಳಿದೆ.
ವೈವಿಧ್ಯತೆಯೇ ಭಾರತದ ಪ್ರಧಾನ ಗುಣ. ಆದರೆ ವಿವಿಧ ಸಮುದಾಯಗಳ ಪ್ರಾತಿನಿಧ್ಯ ವಿಚಾರ ಬಂದಾಗ, ನಮ್ಮ ನ್ಯಾಯಾಂಗದಲ್ಲಿಯೂ ಕಾಣಿಸುತ್ತಿರುವ ಸಮಸ್ಯೆಯಾಗಿದೆ ಎಂಬುದನ್ನು 2023ರ ಸುಪ್ರೀಂ ಕೋರ್ಟ್ ರೆವ್ಯೆ ಹೇಳಿದೆ.
ನ್ಯಾಯಾಂಗದಲ್ಲಿಯೂ ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯದ ಕೊರತೆ ದಿಗ್ಭ್ರಮೆಗೊಳಿಸುವ ಮಟ್ಟಿಗೆ ಇದೆ ಎಂದು ಅದರಲ್ಲಿ ಹೇಳಲಾಗಿದೆ.
ಕಾಲೇಜುಗಳಂಥ ಶೈಕ್ಷಣಿಕ ಕೇಂದ್ರಗಳು ಜಾತಿವಾದದ ಕೇಂದ್ರಗಳಾಗುತ್ತಿರುವ ಅಪಾಯದ ಬಗ್ಗೆಯೂ ವರದಿಗಳಿವೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ಆರ್‌ಟಿಐ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿದ ವರದಿಯೊಂದು ಪಿಎಚ್.ಡಿ. ಪ್ರವೇಶ ಪ್ರಕ್ರಿಯೆಯಲ್ಲಿ ಜಾತಿ ತಾರತಮ್ಯವನ್ನು ಎತ್ತಿ ತೋರಿಸಿದೆ.
ಪಿಎಚ್.ಡಿ. ಅಭ್ಯರ್ಥಿಗಳ ಅಂಕಗಳನ್ನು ವಿಶ್ಲೇಷಿಸಿದಾಗ, ಕೆಲವು ವಿಭಾಗಗಳಲ್ಲಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕಗಳನ್ನು ಗಳಿಸಿದ್ದರೂ ಸಂದರ್ಶನಗಳಲ್ಲಿ ಮೀಸಲಾತಿ ಇಲ್ಲದ ವರ್ಗದ ಅಭ್ಯರ್ಥಿಗಳಿಗಿಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ ಎಂಬುದನ್ನು ವರದಿ ಪತ್ತೆ ಮಾಡಿದೆ.
8 ಐಐಟಿಗಳು ಮತ್ತು 7 ಐಐಎಂಗಳಲ್ಲಿ ಶೇ.80ಕ್ಕಿಂತ ಹೆಚ್ಚು ಬೋಧಕವರ್ಗ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂಬುದನ್ನು 2024ರ ಡಿಸೆಂಬರ್ ವರದಿ ಹೇಳಿದೆ.
ಐಐಟಿ ಮುಂಬೈ ಮತ್ತು ಐಐಟಿ ಖರಗ್‌ಪುರಗಳಲ್ಲಿ, 700ಕ್ಕೂ ಹೆಚ್ಚು ಬೋಧಕವರ್ಗದ ಹುದ್ದೆಗಳಲ್ಲಿ ಶೇ.90ರಷ್ಟನ್ನು ಸಾಮಾನ್ಯ ವರ್ಗಕ್ಕೆ ಸೇರಿದ ಜನರೇ ಹೊಂದಿದ್ದಾರೆ ಎಂಬುದನ್ನು ಅಂಕಿಅಂಶಗಳು ನಿರೂಪಿಸಿವೆ.
ಹಲವು ವರ್ಷಗಳಿಂದ ಈ ತಾರತಮ್ಯ ಬೆಳೆದುಕೊಂಡೇ ಬಂದಿದೆ. 2018ರಿಂದ 2023ರ ಅವಧಿಯಲ್ಲಿ 19,000 ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿಗಳು ಮತ್ತು ಐಐಎಂಗಳಿಂದ ಹೊರಗುಳಿದಿದ್ದಾರೆ ಎಂದು ಸ್ವತಃ ಕೇಂದ್ರ ಸರಕಾರ ಕೂಡ 2023ರಲ್ಲಿ ಹೇಳಿದೆ.
2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ಪಿ.ಎಚ್‌ಡಿ. ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ನಂತರ, ಈ ತಾರತಮ್ಯವನ್ನು ಪರಿಹರಿಸಲು ರೋಹಿತ್ ವೇಮುಲ ಕಾಯ್ದೆ ತರಬೇಕೆನ್ನುವಂಥ ಬೇಡಿಕೆಗಳೂ ಸೇರಿದಂತೆ ಅನೇಕ ರೀತಿಯ ಒತ್ತಾಯಗಳು ಬಂದಿವೆ. ಆದರೂ, ಡಾ. ಪಾಯಲ್ ತಡ್ವಿ ಮತ್ತು ಇತ್ತೀಚೆಗೆ ದರ್ಶನ್ ಸೋಲಂಕಿ ಸೇರಿದಂತೆ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿವಾದಕ್ಕೆ ಬಲಿಯಾಗುತ್ತಲೇ ಇದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ತಾರತಮ್ಯದ ಕುರಿತು ಡೇಟಾ ಸಲ್ಲಿಸಲು ಮೊನ್ನೆ ಜನವರಿ 5ರಂದು ಯುಜಿಸಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂಬುದನ್ನು ಗಮನಿಸಬೇಕು.
ಜಾತಿ ದೂರುಗಳ ಕುರಿತ ಡೇಟಾ ಸಲ್ಲಿಸಲು, ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಕ್ರಮಗಳ ಕುರಿತು ವರದಿ ನೀಡಲು, ವಿಶ್ವವಿದ್ಯಾನಿಲಯಗಳಲ್ಲಿನ ಸಮಾನ ಅವಕಾಶ ಸೆಲ್‌ಗಳ ಕುರಿತು ವರದಿ ಕೊಡಲು ನ್ಯಾಯಾಲಯ ಯುಜಿಸಿಯನ್ನು ಕೇಳಿದೆ.
ಇಷ್ಟೆಲ್ಲಾ ಘೋರ ಅಸಮಾನತೆಗಳು ಈ ದೇಶದ ಜನರನ್ನು ಕಾಡುತ್ತಿರುವಾಗ, ದೇಶದ ಬಹುಪಾಲು ಸಂಖ್ಯೆಯ ಒಂದು ವರ್ಗ ಬಡತನ, ತಾರತಮ್ಯಗಳ ಹಲವಾರು ಅಪಾಯಗಳನ್ನು ಎದುರಿಸುತ್ತಿರುವಾಗ, ಅದಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದೊಂದೇ ಹೆಮ್ಮೆಯ ವಿಷಯವಾಗುತ್ತದೆಯೆ?