ದಿಲ್ಲಿ ಹತ್ಯಾಕಾಂಡ ನಡೆದು ಐದು ವರ್ಷಗಳಾದರೂ ಸಂತ್ರಸ್ತರು ನ್ಯಾಯ ಮತ್ತು ಪರಿಹಾರಕ್ಕಾಗಿ ಹೋರಾಡುವ ಪರಿಸ್ಥಿತಿ ಇನ್ನೂ ಯಾಕಿದೆ?

2020ರ ದಿಲ್ಲಿ ಗಲಭೆ ನಡೆದು ಐದು ವರ್ಷಗಳೇ ಆಗಿಹೋಗಿವೆ. ಆದರೆ ಸಂತ್ರಸ್ತರು ಮಾತ್ರ ಇನ್ನೂ ಆ ನೋವಿನ ಉರಿಯಲ್ಲಿ ಬೇಯುತ್ತಲೇ ಇದ್ಧಾರೆ.
2020ರ ದಿಲ್ಲಿ ಗಲಭೆಯಲ್ಲಿ ಮುಸ್ಲಿಮರು ಹೆಚ್ಚು ಬಾಧಿತರು ಎಂಬುದು ಸ್ಪಷ್ಟವಾಗಿದೆ. ಮುಸ್ಲಿಮರ 114 ಆಸ್ತಿ ಹಾನಿ ಪ್ರಕರಣಗಳು, 25 ಮಂದಿ ಗಾಯಗೊಂಡಿರುವುದು ಒಟ್ಟು 139 ಪ್ರಕರಣಗಳು ವರದಿಯಾಗಿವೆ.
ಇತರ ಸಮುದಾಯಗಳಿಂದ ಕೇವಲ 5 ಪ್ರಕರಣಗಳಷ್ಟೇ ವರದಿಯಾಗಿವೆ.
2020ರ ದಿಲ್ಲಿ ಹಿಂಸಾಚಾರದ ಐದು ವರ್ಷಗಳ ನಂತರ, ಕಾರ್ವಾನ್ -ಎ-ಮೊಹಬ್ಬತ್ ಅಭಿಯಾನ ಗುಂಪಿನ ವರದಿ ಬಂದಿದೆ.
ಅದು ನಷ್ಟಗಳು, ಕಾನೂನು ಅಡೆತಡೆಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಹೇಳುತ್ತಿದೆ.
ಗಲಭೆಯ ನೋವಿನಿಂದ ಬಳಲುತ್ತಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಅಧಿಕಾರಿಗಳ ವೈಫಲ್ಯವನ್ನು ವರದಿ ಎತ್ತಿ ತೋರಿಸಿದೆ ಎಂದು ‘ದಿ ವೈರ್’ನ ಸಂದರ್ಶನದಲ್ಲಿ ಚರ್ಚಿಸಲಾಗಿದೆ.
‘ದಿ ವೈರ್’ನ ಮೀನಾಕ್ಷಿ ನಡೆಸಿಕೊಟ್ಟಿರುವ ಸಂದರ್ಶನದಲ್ಲಿ ‘ದಿ ವೈರ್’ನ ರಾಜಕೀಯ ಸಂಪಾದಕ ಅಜಯ್ ಆಶೀರ್ವಾದ್ ಮತ್ತು ವರದಿ ತಯಾರಿಸಿರುವ ತಂಡದ ಭಾಗವಾಗಿದ್ದ ವಕೀಲೆ ಸುರೂರ್ ಮಂಧರ್ ಅವರು ಕಾರ್ವಾನ್ -ಎ-ಮೊಹಬ್ಬತ್‌ನ ವರದಿ ಬಗ್ಗೆ ಚರ್ಚಿಸಿದ್ದಾರೆ.
ಗಲಭೆಯ ಭೀಕರತೆಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆ ಕಡಿಮೆಯಿರಬಹುದು, ಆದರೆ ಸ್ವತ್ತುಗಳಿಗೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗಿದ್ದು ಸಂತ್ರಸ್ತರ ಸಂಖ್ಯೆ ದೊಡ್ಡದಿದೆ ಎಂದು ವಕೀಲೆ ಸುರೂರ್ ಹೇಳುತ್ತಾರೆ.
2020ರಲ್ಲಿ ಗಲಭೆ ವೇಳೆ ಸರಕಾರ ಯಾವ ನಿರ್ಲಕ್ಷ್ಯ ವಹಿಸಿತ್ತೋ ಅದೇ ನಿರ್ಲಕ್ಷ್ಯವನ್ನು ಪರಿಹಾರ ನೀಡುವ ಸಮಯದಲ್ಲೂ ಪಾಲಿಸುತ್ತಿದೆ.
ಆಪ್, ಕಾಂಗ್ರೆಸ್, ಬಿಜೆಪಿ ಎಲ್ಲರೂ ಈ ಕುರಿತು ಗಮನವೇ ಹರಿಸಿಲ್ಲ. ಬಿಜೆಪಿ ಅಂತೂ ದ್ವೇಷವನ್ನೇ ಬಿತ್ತಿದೆ.
ಈಶಾನ್ಯ ದಿಲ್ಲಿಯ ಅಸಂಘಟಿತ ಕ್ಷೇತ್ರದ ಬಡ ಕಾರ್ಮಿಕರನ್ನು ಧರ್ಮದ ಹೆಸರಲ್ಲಿ ವಿಭಜಿಸಲಾಗಿದೆ. ದ್ವೇಷ ಬಿತ್ತಿದ ಕಪಿಲ್ ಮಿಶ್ರಾ ಮತ್ತು ಪರ್ವೇಶ್ ವರ್ಮಾ ಅವರಿಗೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ‘ದಿ ವೈರ್’ನ ಅಜಯ್ ಆಶೀರ್ವಾದ್ ಹೇಳುತ್ತಾರೆ.
ದೇವರಂತೆ ವರ್ತಿಸಬೇಕಿದ್ದ ವೈದ್ಯರ ವರ್ತನೆ ಬಗ್ಗೆಯೂ ವೀಡಿಯೊದಲ್ಲಿ ಚರ್ಚಿಸಲಾಗಿದೆ.
ಹೇಗೆ ಮುಸ್ಲಿಮರನ್ನು ನೀವು ಗಲಭೆಕೋರರು ಎಂದು ಹೇಳಿ ಚಿಕಿತ್ಸೆಯಿಂದ ದೂರ ಇಡಲಾಗಿತ್ತು ಮತ್ತು ಅನೆಸ್ತೀಷಿಯ ಸಹ ನೀಡದೇ ದೊಡ್ಡ ಮಟ್ಟದ ಸರ್ಜರಿ ನಡೆಸಲಾಗಿತ್ತು ಎಂಬುದರ ಬಗ್ಗೆಯೂ ಚರ್ಚೆ ಇದೆ.
ಗುಂಡುಗಳನ್ನು ಶರೀರದಿಂದ ಹೊರತೆಗೆಯದೆ ಗಾಯಾಳುಗಳ ಪ್ರಾಣವನ್ನು ಹೇಗೆ ಅಪಾಯಕ್ಕೆ ತಳ್ಳಲಾಗಿತ್ತು ಮತ್ತು ಸರಿಯಾದ ಚಿಕಿತ್ಸೆ ತ್ವರಿತವಾಗಿ ನೀಡದ ಕಾರಣ ಹೇಗೆ ಶರೀರದ ಅಂಗಗಳು ಶಾಶ್ವತವಾಗಿ ಕಾರ್ಯನಿರ್ವಹಿಸದಂತೆ ಆಗಿ ಹೋಯಿತು ಎಂಬುದರ ಬಗ್ಗೆಯೂ ಚರ್ಚೆ ಇದೆ.
ಮಾನವ ಹಕ್ಕು ಹೋರಾಟಗಾರರ ಮೇಲೂ ಒತ್ತಡ ಹೇರಲಾಗಿತ್ತು ಮತ್ತು 59/2020 ಎಫ್ ಐ ಆರ್ ಅಡಿಯಲ್ಲಿ ಇತರ ಮಾನವ ಹಕ್ಕು ಹೋರಾಟಗಾರರ ಜೊತೆ ನಿಮ್ಮನ್ನೂ ಜೈಲಿಗೆ ಹಾಕಲಾಗುವುದು ಎಂಬ ಬೆದರಿಕೆಯ ವಾತಾವರಣ ಸೃಷ್ಟಿಸಲಾಗಿತ್ತು ಎಂಬುದನ್ನು ವಕೀಲೆ ಸುರೂರ್ ನೆನಪಿಸುತ್ತಾರೆ.
ಆಮ್ ಆದ್ಮಿ ಪಕ್ಷದ ಸರಕಾರ ಇತ್ತು. ಆದರೆ ಅದರ ಕೈಯಲ್ಲಿ ದಿಲ್ಲಿ ಪೊಲೀಸ್ ಇರಲಿಲ್ಲ, ನಿಜ. ಹಾಗಿದ್ದರೂ ಶಾಂತಿ ಮೆರವಣಿಗೆ ರೀತಿಯ ಕ್ರಮ ಕೈಗೊಂಡು ಗಲಭೆಯನ್ನು ನಿಲ್ಲಿಸಬಹುದಿತ್ತು.
ಅವರು ಹಾಗೇನೂ ಮಾಡಲೇ ಇಲ್ಲ. ಪರಿಹಾರಕ್ಕಾಗಿ ಯೋಜನೆ ಘೋಷಿಸಲಾಯಿತಾದರೂ ಸರಿಯಾದ ಪರಿಹಾರ ನೀಡಲಿಲ್ಲ. ದಿಲ್ಲಿ ಸರಕಾರದ ವಾರ್ಷಿಕ ಬಜೆಟ್ ಸರಿ ಸುಮಾರು 75,000 ಕೋಟಿ ರೂಪಾಯಿಯದ್ದು. ಪರಿಹಾರಕ್ಕೆ ಬೇಕಿರುವ ಹಣ ಕೇವಲ 500 ಕೋಟಿ ರೂಪಾಯಿ. ಅದನ್ನೂ ನೀಡಲಾಗಿಲ್ಲ.
ಪರಿಹಾರ ಬಿಡಿ, ಆಮ್ ಆದ್ಮಿ ಪಕ್ಷದ ಶಾಸಕರೇ ಇದ್ದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡಬಹುದಿತ್ತು,ಅದೂ ನಡೆದಿಲ್ಲ ಎಂದು ಚರ್ಚೆಯ ವೇಳೆ ಸುರೂರ್ ಮತ್ತು ಆಶೀರ್ವಾದ್ ಹೇಳುತ್ತಾರೆ.
2020ರ ದಿಲ್ಲಿ ಹಿಂಸಾಚಾರದಲ್ಲಿ ಮುಸ್ಲಿಮರನ್ನು ಹೆಚ್ಚು ಹಾನಿಗೊಳಗಾದ ಧಾರ್ಮಿಕ ಗುಂಪು ಎಂದು ಗುರುತಿಸಲಾಗಿದೆ.
ಅಶಾಂತಿಯ ಸಮಯದಲ್ಲಿ ಮತ್ತು ಅದರ ನಂತರವೂ ಮುಸ್ಲಿಮ್ ಸಮುದಾಯ ಗುರಿಯಾದದ್ದರ ಬಗ್ಗೆ, ತೀವ್ರ ಹಾನಿಯನ್ನು ಕಂಡ ಬಗ್ಗೆ ವರದಿಗಳಿವೆ.
ತಕ್ಷಣದ ಎಕ್ಸ್‌ಗ್ರೇಷಿಯಾ ಪರಿಹಾರ ಮತ್ತು ಮೃತರ ಕುಟುಂಬಗಳಿಗೆ ಆರಂಭಿಕ ಪರಿಹಾರ ವಿತರಿಸಿದ್ದು ಬಿಟ್ಟರೆ, ಯಾವುದೇ ಹೆಚ್ಚಿನ ಪರಿಹಾರಗಳನ್ನು ನೀಡಲಾಗಿಲ್ಲ.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಿಹಾರ ನೀಡುವ ಕುರಿತು ಜವಾಬ್ದಾರಿ ತೆಗೆದುಕೊಳ್ಳಲೇ ಇಲ್ಲ ಎಂಬುದನ್ನು ವರದಿ ಒತ್ತಿಹೇಳುತ್ತದೆ.
‘ದಿ ಆಬ್ಸೆಂಟ್ ಸ್ಟೇಟ್: ಕಾಂಪ್ರಹೆನ್ಸಿವ್ ಸ್ಟೇಟ್ ಡಿನೈಯಲ್ ಆಫ್ ರಿಪೇರೇಷನ್ ಆ್ಯಂಡ್ ರೀ ಕಂಪೆನ್ಸ್ ಟು ದಿ ಸರ್ವೈವರ್ಸ್ ಆಫ್ 2020 ಡೆಲ್ಲಿ ಪ್ರೋಗ್ರಮ್’ ಎಂಬ ಹೆಸರಿನ ವರದಿ ಇದಾಗಿದೆ. 117 ಪುಟಗಳ ವರದಿಯನ್ನು ಹಿಂಸಾಚಾರಕ್ಕೆ ಐದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಪ್ರಕಟಿಸಲಾಯಿತು.
ಕಾರ್ವಾನ್-ಎ-ಮೊಹಬ್ಬತ್ ಅಭಿಯಾನದ ನೇತೃತ್ವ ವಹಿಸಿದವರಾದ ವಕೀಲೆ ಸುರೂರ್ ಮಂದರ್ ಮತ್ತು ಸ್ವಾತಿ ದ್ರಾಯಕ್, ಸಂಶೋಧಕರಾದ ಆಕಾಂಕ್ಷಾ ರಾವ್, ಆಯುಷಿ ಅರೋರಾ ಮತ್ತು ಸೈಯದ್ ರುಬೀಲ್ ಹೈದರ್ ಝೈದ್ ಮತ್ತು ಹರ್ಷ್ ಮಂದರ್ ಈ ವರದಿ ಸಿದ್ಧಪಡಿಸಿದ್ದಾರೆ.
ಪರಿಹಾರ, ಪುನರ್ವಸತಿ ಮತ್ತು ಪರಿಹಾರದಲ್ಲಿನ ನ್ಯೂನತೆಗಳನ್ನು ಇದು ವಿವರಿಸುತ್ತದೆ. ಬದುಕುಳಿದವರು ನ್ಯಾಯ ಮತ್ತು ಆರ್ಥಿಕ ನೆರವು ಪಡೆಯುವಲ್ಲಿ ನಿರಂತರ ಅಡ್ಡಿ ಎದುರಿಸುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸುತ್ತದೆ.
ದಿಲ್ಲಿ ಸರಕಾರ ಪರಿಹಾರಕ್ಕಾಗಿ 153 ಕೋಟಿ ರೂ.ಗಳನ್ನು ಕೋರಿದ್ದರೂ, ಕೇವಲ 21 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಲಾಯಿತು.
ಈಶಾನ್ಯ ದಿಲ್ಲಿ ಗಲಭೆ ದಾವೆಗಳ ಆಯೋಗ (ಎನ್‌ಇಡಿಆರ್‌ಸಿಸಿ) ಬಹಳಷ್ಟು ಸಲ ಅನುಮೋದನೆ ನೀಡಿದ್ದರ ಹೊರತಾಗಿಯೂ ಯಾವುದೇ ಪರಿಹಾರವನ್ನು ವಿತರಿಸಲಾಗಿಲ್ಲ. ಆಸ್ತಿ ನಷ್ಟವನ್ನು ಅಂದಾಜಿಸುವಷ್ಟಕ್ಕೇ ಸರಕಾರದ ಕೆಲಸ ನಿಂತುಹೋಗಿದೆ. ಪರಿಹಾರ ವಿತರಿಸುವ, ನ್ಯಾಯ ಒದಗಿಸುವ ಕರ್ತವ್ಯವನ್ನೇ ಮರೆಯಲಾಗಿದೆ.
ಹಿಂಸಾಚಾರದ ಸಮಯದಲ್ಲಿ, ದಿಲ್ಲಿ ಪೊಲೀಸರು ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲು ವಿಫಲರಾದರು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ಹೆಚ್ಚಿನ ಜೀವಹಾನಿ ತಡೆಯಬೇಕಾಗಿದ್ದ ಸಮಯದಲ್ಲಿ ಉನ್ನತ ಅಧಿಕಾರಿಗಳು ಧಾರ್ಮಿಕ ಸಮಾರಂಭಗಳಲ್ಲಿ ತೊಡಗಿದ್ದರು.
ರಾಜ್ಯ ಸರಕಾರ ಆರಂಭದಲ್ಲಿ ಪರಿಹಾರ ಕ್ಯಾಂಪ್‌ಗಳನ್ನು ಸ್ಥಾಪಿಸಲಿಲ್ಲ. ಆನಂತರ ಮೊದಲೇ ಅಸ್ತಿತ್ವದಲ್ಲಿದ್ದ ನಿರಾಶ್ರಿತ ನೆಲೆಗಳನ್ನು ಮರುರೂಪಿಸಿತು. ಅದು ಸೂಕ್ಷ್ಮತೆಯಿಲ್ಲದ ಮತ್ತು ಅಸಮರ್ಪಕ ನಿರ್ಧಾರವಾಗಿತ್ತೆಂದು ವರದಿಯಲ್ಲಿ ಖಂಡಿಸಲಾಗಿದೆ.
2020ರ ಗಲಭೆಯ ಸಂತ್ರಸ್ತರಿಗೆ ನಿಗದಿ ಮಾಡಲಾಗಿದ್ದ ಪರಿಹಾರದ ಮೊತ್ತ 1984ರ ಸಿಖ್ ವಿರೋಧಿ ಹಿಂಸಾಚಾರದ ನಂತರ ನೀಡಲಾದ ಪರಿಹಾರಕ್ಕಿಂತ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಗಿದೆ ಎಂಬುದನ್ನು ವರದಿ ಹೇಳುತ್ತದೆ.
ಸ್ವತಂತ್ರವಾಗಿ ಪರಿಹಾರವನ್ನು ವಿತರಿಸುವ ಬದಲು, ದಿಲ್ಲಿ ಸರಕಾರ ಹೈಕೋರ್ಟ್ ಮೂಲಕ ಎನ್‌ಇಡಿಆರ್‌ಸಿಸಿಗೆ ಜವಾಬ್ದಾರಿಯನ್ನು ವರ್ಗಾಯಿಸಿತು ಎಂಬುದನ್ನು ವರದಿಯಲ್ಲಿ ಗಮನಿಸಲಾಗಿದೆ.
ಆಯೋಗ ಹಾನಿಯನ್ನು ಮೌಲ್ಯಮಾಪನ ಮಾಡುವ ಕೆಲಸ ನಿರ್ವಹಿಸಬೇಕಿತ್ತು. ಹಾಗಿದ್ದೂ ಅದು ಸಾರ್ವಜನಿಕ ವಿಚಾರಣೆಗಳನ್ನು ನಡೆಸಿಲ್ಲ ಅಥವಾ ಬದುಕುಳಿದವರೊಂದಿಗೆ ಅವರೇನು ಕೇಳುತ್ತಿದ್ದಾರೆ ಎಂಬುದನ್ನು ಆಲಿಸುವ ವ್ಯವಧಾನ ತೋರಿಸಲಿಲ್ಲ. ಇದರ ಪರಿಣಾಮವಾಗಿ ಸಂತ್ರಸ್ತರ ಅರ್ಜಿಗಳು ದಿಕ್ಕೆಟ್ಟ ಸ್ಥಿತಿ ಮುಟ್ಟುವಂತಾಯಿತು.
ಸಂತ್ರಸ್ತರೇನೋ ತಮ್ಮ ದಾಖಲೆಗಳನ್ನು ಸಲ್ಲಿಸಿದರು. ಆದರೆ ಅದರ ಬಗ್ಗೆ ಅವರಿಗೆ ಯಾವುದೇ ಸ್ವೀಕೃತಿ ಪತ್ರ ನೀಡಲಿಲ್ಲ. ಅದರಿಂದಾಗಿ ಅವರು ಇನ್ನಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅಧಿಕಾರಶಾಹಿಯ ವ್ಯವಸ್ಥಿತ ಆಟ ಇಲ್ಲಿ ನಡೆದಿತ್ತು ಮತ್ತು ಸಂತ್ರಸ್ತರು ನಿಜವಾಗಿಯೂ ನಿರಾಸೆ ಅನುಭವಿಸುವ ಸ್ಥಿತಿ ತಲೆದೋರಿತು.
ತಮಗೆ ಬರಬೇಕಾದ ಪರಿಹಾರಕ್ಕಾಗಿ ಅರ್ಜಿ ಮತ್ತು ದಾಖಲೆ ಸಲ್ಲಿಸಿರುವ ಬಗ್ಗೆಯೇ ಅವರ ಬಳಿ ಯಾವುದೇ ಆಧಾರವಿಲ್ಲದೆ, ಹೆಸರು ನೋಂದಾಯಿಸಿದ್ದರ ಬಗ್ಗೆ ಅನಿಶ್ಚಿತತೆ ಉಂಟಾಯಿತು.
ಕಾರವಾನ್-ಎ-ಮೊಹಬ್ಬತ್ ತಂಡವು ಪರಿಹಾರ ನೀಡಲು ಪರಿಶೀಲಿಸುವ ಮೌಲ್ಯಮಾಪಕರ ಅರ್ಹತೆಗಳು, ಮಾನದಂಡಗಳು ಮತ್ತು ಮಾರ್ಗಸೂಚಿಗಳ ಕುರಿತು ವಿವರಗಳನ್ನು ಕೋರಿ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿತು.ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
146 ದಾಖಲಿತ ಪರಿಹಾರ ಪ್ರಕರಣಗಳಲ್ಲಿ, ಶೇ. 81 ಆಸ್ತಿ ಹಾನಿಗೆ ಸಂಬಂಧಿಸಿದ್ದರೆ, ಶೇ. 18 ದೈಹಿಕ ಗಾಯಗಳಿಗೆ ಸಂಬಂಧಿಸಿವೆ. ಆದರೆ ಯಾವುದಕ್ಕೂ ನಿಜವಾದ ಪರಿಹಾರ ಸಿಕ್ಕಿಲ್ಲ.
ಈಶಾನ್ಯ ದಿಲ್ಲಿಯ ಕುಟುಂಬಗಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳ ಬಗ್ಗೆಯೂ ವರದಿ ಹೇಳುತ್ತದೆ.
ಅಲ್ಲಿ ಸುಮಾರು ಅರ್ಧದಷ್ಟು ಕುಟುಂಬಗಳು ಪಡಿತರ ಚೀಟಿಗಳನ್ನು ಅವಲಂಬಿಸಿವೆ ಮತ್ತು ಹೆಚ್ಚಿನ ಕುಟುಂಬಗಳಿಗೆ ಡಿಜಿಟಲ್ ವಹಿವಾಟು ಗೊತ್ತಿಲ್ಲ. ಇದರಿಂದಾಗಿ ಸಂತ್ರಸ್ತರು ಪರಿಹಾರ ಪ್ರಕ್ರಿಯೆ ಏನಾಯಿತು ಎಂದು ತಿಳಿಯುವುದು, ಅದರ ಬೆನ್ನು ಹತ್ತುವುದು ಕಷ್ಟಕರವಾಗಿದೆ.
ದಿಲ್ಲಿ ಪೊಲೀಸರ ತನಿಖೆಗಳು ಮುಸ್ಲಿಮ್ ಹೋರಾಟಗಾರರನ್ನೇ ಗುರಿಯಾಗಿಸಿ ಕೊಂಡಿದ್ದವೆಂಬುದು ವಿಪರ್ಯಾಸ. ಹೆಚ್ಚಾಗಿ ಮುಸ್ಲಿಮ್ ಹೋರಾಟಗಾರರನ್ನೇ ಪೊಲೀಸರು ಬಂಧಿಸಿದ್ದಾರೆ. ಆದರೆ ನಿಜವಾಗಿಯೂ ಶಿಕ್ಷೆ ಅನುಭವಿಸಬೇಕಿದ್ದ, ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ರಾಜಕಾರಣಿಗಳು ಶಿಕ್ಷೆಗೆ ಗುರಿಯಾಗಿಲ್ಲ.
ಆ ಹತ್ಯಾಕಾಂಡದಲ್ಲಿ ಭಾಗಿಯಾದ ಬಿಜೆಪಿ ಹಾಗೂ ಆರೆಸ್ಸೆಸ್‌ನವರನ್ನು ದಿಲ್ಲಿ ಪೊಲೀಸರೇ ಹೇಗೆ ರಕ್ಷಿಸಿದರು, ಹೇಗೆ ಸಾಕ್ಷ್ಯ ನಾಶ ಮಾಡಿದರು, ಹೇಗೆ ಮುಸ್ಲಿಮ್ ಸಮುದಾಯವನ್ನು ಗುರಿ ಮಾಡಿ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುತ್ತಾ ಹೋದರು ಎಂಬ ಬಗ್ಗೆಯೇ ಈ ಹಿಂದೆ ವರದಿಗಳು ಬಂದಿವೆ
ಉಮರ್ ಖಾಲಿದ್ ಪ್ರಕರಣವೊಂದರಲ್ಲೇ ಅದೆಷ್ಟು ವಿರೋಧಾಭಾಸಗಳಿವೆ. ಗಾಂಧೀಜಿ ಹೇಳಿದ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ, ಒಗ್ಗಟ್ಟು, ಸೌಹಾರ್ದ ಇರಲಿ ಎಂದು ಹೇಳಿದ್ದ ಉಮರ್ ಖಾಲಿದ್ ಅನ್ನು ಹೇಗೆ ಏನೇನೋ ಆರೋಪ ಹೊರಿಸಿ ಬಂಧಿಸಲಾಯಿತು?
ಇವತ್ತಿಗೂ ಉಮರ್ ಖಾಲಿದ್ ಜೈಲಿನಲ್ಲೇ ಇದ್ದಾರೆ, ಅವರ ಜಾಮೀನು ಅರ್ಜಿ ದಿನಾಂಕ ಬರುವುದೇ ಇಲ್ಲ
ದಿಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳ ಪಕ್ಕದಲ್ಲೇ ನಿಂತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಕಪಿಲ್ ಮಿಶ್ರಾ ಇವತ್ತು ದಿಲ್ಲಿ ಬಿಜೆಪಿ ಸರಕಾರದಲ್ಲಿ ಸಚಿವ. ಇನ್ನೊಬ್ಬ ಪ್ರಚೋದನಕಾರಿ ಭಾಷಣಕಾರ ಪರ್ವೇಶ್ ವರ್ಮಾ ದಿಲ್ಲಿ ಬಿಜೆಪಿ ಸರಕಾರದಲ್ಲಿ ಡಿಸಿಎಂ. ಗಲಭೆಗೆ, ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟವರು, ಅದರಲ್ಲಿ ಭಾಗಿಯಾದವರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಸಂತ್ರಸ್ತ ಸಮುದಾಯದ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ
ಹದಿಹರೆಯದವರಿಂದ ವೃದ್ಧರವರೆಗೆ ಅಂದರೆ 17ರಿಂದ 80 ವರ್ಷ ವಯಸ್ಸಿನವರ ವರೆಗೆ ಬದುಕುಳಿದವರು ಅನುಭವಿಸುತ್ತಿರುವ ಕಷ್ಟ ಹೇಳಿ ಮುಗಿಯುವಂಥದ್ದಲ್ಲ.
ಅವರು ಆರ್ಥಿಕ ಪರಿಹಾರವನ್ನೂ ಪಡೆದಿಲ್ಲ, ವೈದ್ಯಕೀಯ ನೆರವೂ ಅವರಿಗೆ ಸಿಕ್ಕಿಲ್ಲ. ಮಾತ್ರವಲ್ಲದೆ, ಶೈಕ್ಷಣಿಕವಾಗಿಯೂ ಅವರು ಅಡಚಣೆಗಳನ್ನು ಎದುರಿಸುವಂತಾಗಿದೆ. ಯಾವ ಮಾಹಿತಿಯನ್ನೂ ಸಂಬಂಧಿಸಿದವರಿಗೆ ಸರಿಯಾಗಿ ಮುಟ್ಟಿಸಲಾಗುತ್ತಿಲ್ಲ.
ಅಲ್ಲದೆ ಗಡುವುಗಳು ಮತ್ತೆ ಮತ್ತೆ ಬದಲಾಗುತ್ತಿವೆ.
ಇದರಿಂದಾಗಿ, ಸಂತ್ರಸ್ತರು ಪರಿಹಾರ ಯೋಜನೆಗಳ ಬಗ್ಗೆ ತಿಳಿಯುವುದಿಲ್ಲ ಎಂದು ವರದಿ ಎತ್ತಿ ತೋರಿಸುತ್ತದೆ.
ಅಧಿಕಾರಶಾಹಿ ವಿಳಂಬಗಳು ಮತ್ತು ದೃಢವಾದ ಕ್ರಮಗಳ ಕೊರತೆ ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ. ಅದು ಗಲಭೆಯ ಕರಾಳತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಗಲಭೆ ಸಂತ್ರಸ್ತರು ಪರಿಹಾರವಿಲ್ಲದೆ, ನ್ಯಾಯ ಸಿಗದೆ, ಸ್ಪಷ್ಟತೆಯೇ ಇಲ್ಲದಂತಾಗಿ, ಇನ್ನೂ ಸಂಕಷ್ಟದಲ್ಲಿಯೇ ಇದ್ದಾರೆ.