‘ಅಗ್ನಿವೀರ್’ ಬಗ್ಗೆ ಮೋದಿ ಯಾಕೆ ಮಾತೆತ್ತುತ್ತಿಲ್ಲ?
ಚುನಾವಣಾ ಪ್ರಚಾರ ಭಾಷಣ ಪ್ರಾರಂಭಿಸುವಾಗ ಸದಾ ‘‘ಮೇರೇ ಪ್ಯಾರೆ ಭಾಯಿಯೋ ಔರ್ ಬೆಹನೋ...’’ ಎಂದು ಹೇಳುವ ಮೋದೀಜಿ, ‘‘ಮೇರೇ ಪ್ಯಾರೇ ಅಗ್ನಿವೀರೋ...’’ ಎಂದು ಯಾಕೆ ಹೇಳಲಾರರು.?
ದೇಶದ ಸೇನೆಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವ ‘ಅಗ್ನಿವೀರ್’ ಯೋಜನೆ ಪ್ರಧಾನಿ ಮೋದಿಯ ಕ್ರಾಂತಿಕಾರಿ ಯೋಜನೆ ಎಂದು ಭಾರೀ ಪ್ರಚಾರ ನಡೆದಿತ್ತು. ಆದರೆ ಈಗ ಯಾಕೆ ಪ್ರಧಾನಿ ಮೋದಿಯಾಗಲಿ, ಬಿಜೆಪಿಯ ನಾಯಕರಾಗಲಿ ಅದೇ ಅಗ್ನಿವೀರ್ ಬಗ್ಗೆ ಮಾತೆತ್ತುತ್ತಿಲ್ಲ? ಯಾಕೆ ಈ ದೇಶದ ಯುವಜನರು, ಮೊದಲ ಬಾರಿ ವೋಟು ಹಾಕುವವರು ಅಗ್ನಿವೀರರ ಹೆಸರಲ್ಲಿ ವೋಟು ಹಾಕಿ ಎಂದು ಮೋದೀಜಿ ಹೇಳುತ್ತಿಲ್ಲ?
ಎಷ್ಟೆಲ್ಲಾ ಪ್ರತಿಭಟನೆಗಳ ನಂತರ ಪ್ರಧಾನಿ ಮೋದಿ ಅಗ್ನಿವೀರ್ ಯೋಜನೆ ಜಾರಿಗೆ ತಂದರೂ ಚುನಾವಣೆ ಪ್ರಚಾರದಲ್ಲಿ ಮಾತ್ರ ಅದರ ಬಗ್ಗೆ ಮಾತೇ ಇಲ್ಲ. ಯಾಕೆ ಅಗ್ನಿವೀರ್ ಬಗ್ಗೆ ಇಂಥ ಮೌನ?
ನೌಕರಿ ಕೊಡುವುದು ಸರಕಾರದ ಕೆಲಸವಲ್ಲ ಎಂದು ‘ಇಂಡಿಯಾ ಟುಡೇ’ಗೆ ನೀಡಿದ್ದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.
ನೇಮಕಾತಿ ಪತ್ರ ಕೊಟ್ಟು ಪ್ರಚಾರ ಪಡೆಯುವುದು ಪ್ರಧಾನಿಯ ಕೆಲಸವಾದರೆ, ನೌಕರಿ ಕೊಡುವುದು ಯಾಕೆ ಪ್ರಧಾನಿಯ ಕೆಲಸವಾಗುವುದಿಲ್ಲ?
ನೌಕರಿ ಬಗ್ಗೆ ಕೇಳಿದರೆ ಸಾಕು, ಮೋದಿ ಮಾತು ಎಲ್ಲೆಲ್ಲಿಗೋ ಹೋಗುತ್ತದೆ.
ದೇಶದಲ್ಲಿ ಸರಕಾರಿ ನೌಕರಿ ಬಹುದೊಡ್ಡ ವಲಯ. ಅಲ್ಲಿಯೇ ನೌಕರಿ ಕೊಡುವುದು ತಮ್ಮ ಕೆಲಸವಲ್ಲ ಎನ್ನುವ ಮಾತು ಸರಕಾರದಿಂದ ಬಂದರೆ ಏನರ್ಥ?
ನಿರುದ್ಯೋಗದ ವಿಚಾರ ಈಗಲ್ಲ, 2019ರಲ್ಲಿಯೇ ಎದ್ದಿತ್ತು. ಅದಾದ ಮೇಲೂ 5 ವರ್ಷಗಳ ಸಮಯವಿತ್ತು.
ಆದರೆ ನೌಕರಿಗಾಗಿ ಬರೆಯುವ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಬಹಿರಂಗವಾಗುವುದೊಂದು ದೊಡ್ಡ ಕಿರಿಕಿರಿಯಾಯಿತು. ಅದರ ಬಗ್ಗೆ ಕಾನೂನನ್ನೂ ಮಾಡಲಾಯಿತು.
ಅದಾದ ಮೇಲೂ ಯುಪಿಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಯಿತು. 50ರಿಂದ 60 ಲಕ್ಷ ಯುವಕರ ಭವಿಷ್ಯವೇ ಡೋಲಾಯಮಾನವಾಯಿತು.
ನೌಕರಿ ಕೊಡುವುದು ಸರಕಾರದ ಕೆಲಸವಲ್ಲ ಎಂದು ಹೇಗೆ ಹೇಳುತ್ತಾರೆ ಪ್ರಧಾನಿ ಮೋದಿ?
ನೌಕರಿ ಕೊಡುವುದು ಸರಕಾರದ್ದೇ ಕೆಲಸ. ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಸರಕಾರದ್ದೇ ಕೆಲಸ.
ನೌಕರಿ ಕೊಡುವುದು ತಮ್ಮ ಕೆಲಸವಲ್ಲ ಎಂಬುದೇ ಮೋದಿ ನಿಲುವಾದರೆ, ಈಗ ಚುನಾವಣಾ ರ್ಯಾಲಿಯಲ್ಲಿ ಯುವಕರಿಗೆ ನೇರವಾಗಿಯೇ ಅದನ್ನು ಹೇಳಬಹುದಿತ್ತು. ಯಾಕೆ ಹೇಳುತ್ತಿಲ್ಲ?
ನೌಕರಿ ಕೊಡುವುದು ಮೋದಿ ಸರಕಾರದ ಕೆಲಸವಲ್ಲ. ಆದರೆ ಅವರು ಹೇಳಿದಾಗ ಚಪ್ಪಾಳೆ ಹೊಡೆಯುವುದು, ಮೊಂಬತ್ತಿ ಹಚ್ಚುವುದು, ಮನೆಯ ಹೊರಗೆ ಬಾವುಟ ಹಾರಿಸುವುದು ಮಾತ್ರ ಯುವಕರ ಕೆಲಸವೇ?
ಲಕ್ಷಗಟ್ಟಲೆ ಯುವಕರು ಸೇನೆ ಸೇರುವ ಕನಸು ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ವರ್ಷಗಟ್ಟಲೆ ಸಾಕಷ್ಟು ಶ್ರಮವನ್ನೂ ಹಾಕುತ್ತಾರೆ.
ಖಾಸಗಿ ವಲಯದವರು ಲಕ್ಷಗಟ್ಟಲೆ ಜನರನ್ನು ಗೇಟ್ ಕಾಯುವ ಕೆಲಸಕ್ಕೆ ಹಚ್ಚುವುದನ್ನು ನೋಡುತ್ತೇವೆ.
ಅತಿ ಕಡಿಮೆ ಸಂಬಳಕ್ಕೆ ಅವರು ಗಂಟೆಗಳ ಕಾಲ ದುಡಿಯಬೇಕಾಗಿದೆ. ಇದನ್ನು ಯಾರೂ ಕೇಳುವವರಿಲ್ಲ.
ಇಂತಹದೊಂದು ದುರದೃಷ್ಟದಿಂದ ಯುವಕರನ್ನು ಪಾರು ಮಾಡಲು ಸೇನೆಯಲ್ಲಿ ಒಂದು ಅವಕಾಶವಿತ್ತು. ಕಡೆಗೆ ಅಂತಹ ಅವಕಾಶಕ್ಕೂ ಈ ಸರಕಾರ ಕಲ್ಲು ಹಾಕಿತು.
ನಾಲ್ಕೇ ವರ್ಷದ ಕೆಲಸ ಯಾರಿಗೆ ಬೇಕು? ಅದಾದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸಬೇಕಾದವರು ಯಾರು?
ಪ್ರಧಾನಿ 15 ವರ್ಷದವರೆಗೂ ಅಧಿಕಾರದಲ್ಲಿ ಇರಬಹುದು ಎಂದಾದರೆ, ಸೈನಿಕರು ಮಾತ್ರ ನಾಲ್ಕೇ ವರ್ಷಕ್ಕೆ ನೌಕರಿ ಕಳೆದುಕೊಂಡು ಮನೆ ಸೇರಬೇಕೆ?
ಮೋದಿ 75 ವರ್ಷ ಕಳೆದ ಬಳಿಕವೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಬಹುದು ಎಂದಾದರೆ ಸದೃಢ ಯುವಕರು ನಾಲ್ಕೇ ವರ್ಷಕ್ಕೆ ಸೈನಿಕನ ಕೆಲಸ ಯಾಕೆ ಕಳಕೊಳ್ಳಬೇಕು ?
ಇದನ್ನೇ ಮೋದಿ ಬಯಸುವುದಾದರೆ, ‘‘ಮೇರೆ ಪ್ಯಾರೇ ಅಗ್ನಿವೀರ್’’ ಎಂದು ಯಾಕೆ ಯುವಕರನ್ನು ಕರೆಯುತ್ತಿಲ್ಲ ಮೋದಿ?
ನಾಲ್ಕು ವರ್ಷಕ್ಕೆ ಸೇನೆಯ ಉದ್ಯೋಗ ಮುಗಿಸುವ ಬದಲು ಊರಲ್ಲೇ ಹೋಂ ಗಾರ್ಡ್ ಕೆಲಸಕ್ಕೆ ಸೇರುವುದು ಒಳ್ಳೆಯದು ಎಂದು ಯುವಕರು ಭಾವಿಸಬೇಕಾದ ಸ್ಥಿತಿಯನ್ನು ತಂದಿಟ್ಟಿದೆ ಈ ಸರಕಾರ.
ಮೋದಿ ಮೌನವಾಗಿದ್ದಾರೆ ಎಂದ ಮೇಲೆ ಅಗ್ನಿವೀರ್ ಬಗ್ಗೆ ಮಡಿಲ ಮೀಡಿಯಾಗಳು ಕೂಡ ಮಾತಾಡುವುದಿಲ್ಲ. ಈ ಕೆಲವೇ ದಿನಗಳಲ್ಲಿ 40ಕ್ಕೂ ಹೆಚ್ಚು ಸಂದರ್ಶನಗಳನ್ನು ಮೋದಿ ಕೊಟ್ಟಿದ್ದಾರೆ. ಯಾವುದರಲ್ಲೂ ಮೋದಿಗೆ ಯಾವ ಪತ್ರಕರ್ತನೂ ಅಗ್ನಿವೀರ್ ಬಗ್ಗೆ ಕೇಳಿಯೇ ಇಲ್ಲ.
ಅಗ್ನಿವೀರ್ ಗೇಮ್ ಚೇಂಜರ್ ಎಂದೆಲ್ಲ ಹೇಳಿದ್ದ ಮೋದಿಗೆ, ಈಗ ಅದು ಈ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಬಹುದು ಎಂದೇಕೆ ಅನಿಸುತ್ತಿಲ್ಲ?
ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಉದ್ಧವ್ ಠಾಕ್ರೆ, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್ ಮತ್ತು ಅಖಿಲೇಶ್ ಯಾದವ್ ತಮ್ಮ ಸರಕಾರ ಬಂದರೆ ಅಗ್ನಿವೀರ್ ರದ್ದುಪಡಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ ಬೇಡದ್ದಕ್ಕೆಲ್ಲ ಕೌಂಟರ್ ಕೊಡುವ ಮೋದಿಯವರಿಂದ ಇದಕ್ಕೆ ಮಾತ್ರ ಕೌಂಟರ್ ಬರಲೇ ಇಲ್ಲ.
ಈ ಬಗ್ಗೆ ವಿಪಕ್ಷಗಳಿಗೆ ಖಡಕ್ ಆಗಿ ಉತ್ತರಿಸುವುದು ಯಾಕೆ ಸಾಧ್ಯವಾಗುತ್ತಿಲ್ಲ?
ಲಕ್ಷಗಟ್ಟಲೆ ಯುವಕರ ಕಥೆಯೇನು ಎಂಬ ಚಿಂತೆ ಅವರನ್ನು ಕಾಡುವುದೇ ಇಲ್ಲ. ಸೇನೆ ಎಂದ ಮೇಲೆ ಒಂದೇ ರೀತಿ ಇರಬೇಕು. ಅಲ್ಲಿ ಹೀಗೇಕೆ ಭೇದಭಾವ?
ದೇಶಕ್ಕಾಗಿ ಹೋರಾಡುತ್ತಾರೆ ಎಂದಮೇಲೆ ಇಬ್ಬರಿಗೂ ಪೆನ್ಷನ್ ಸಿಗಬೇಕು, ಇಬ್ಬರ ಕುಟುಂಬದ ಸುರಕ್ಷತೆಯೂ ಆಗಬೇಕಲ್ಲವೆ? ಎಂಬ ಪ್ರಶ್ನೆಯನ್ನು ರಾಹುಲ್ ಮತ್ತೆ ಮತ್ತೆ ಕೇಳಿದ್ಧಾರೆ?.
ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ಹಿಮಾಚಲ ಪ್ರದೇಶ ಹಾಗೂ ಬಹಳಷ್ಟು ರಾಜ್ಯಗಳಲ್ಲಿ ಲಕ್ಷಗಟ್ಟಲೆ ಯುವಕರು ಸೇನೆ ಸೇರಲು ತಯಾರಾಗಿದ್ದರು.
ಹಿಮಾಚಲ ಪ್ರದೇಶದಲ್ಲಂತೂ ಅಗ್ನಿವೀರ್ ದೊಡ್ಡ ವಿಷಯ. ಅಲ್ಲಿ ಸೇನೆಯಲ್ಲಿ ಕೆಲಸ ಮಾಡುವ ಯುವಕರು ಕಳಿಸುವ ಹಣದಿಂದಲೇ ಲಕ್ಷಗಟ್ಟಲೆ ಜನರ ಜೀವನ ಸಾಗುತ್ತದೆ.
ಆ ರಾಜ್ಯದಲ್ಲಿ ಒಂದೂವರೆ ಲಕ್ಷ ನಿವೃತ್ತ ಯೋಧರಿದ್ದಾರೆ. ಅದೇ ವೇಳೆ ಲಕ್ಷಗಟ್ಟಲೆ ಯುವಕರು ಸೇನೆಯಲ್ಲಿದ್ದಾರೆ.
ಹರ್ಯಾಣದಲ್ಲಂತೂ ಸೇನಾ ಗ್ರಾಮಗಳೇ ಇದ್ದವು. ಸೇನೆ ಸೇರಲು ತಾ ಮುಂದು ನಾ ಮುಂದು ಎನ್ನುತ್ತಿದ್ದ ಎಷ್ಟೋ ಯುವಕರು ಅಗ್ನಿವೀರ್ ಯೋಜನೆ ಬಂದಮೇಲೆ ಸೇನೆ ಸೇರುವ ಯೋಚನೆಯನ್ನೇ ಬಿಟ್ಟಿದ್ದಾರೆ. ಎಷ್ಟೋ ಸಾವಿರ ಯುವಕರು ಜಮೀನು ಮಾರಿ ವಿದೇಶಕ್ಕೆ ಹೋಗಿಬಿಟ್ಟಿದ್ದಾರೆ.
ಹರ್ಯಾಣದಲ್ಲಿ ಯುವಕರು, ಅವರ ಕುಟುಂಬದವರು ಅಗ್ನಿ ವೀರ್ ಹೆಸರು ಹೇಳಿದರೆ ಉರಿದು ಬೀಳುವಂತಹ ಸ್ಥಿತಿಯಲ್ಲಿದ್ದಾರೆ. ಅದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾರು ಅಗ್ನಿ ವೀರ್ ರದ್ದು ಪಡಿಸುತ್ತಾರೋ ಅವರಿಗೇ ನಮ್ಮ ವೋಟು ಎಂದು ಹೇಳುತ್ತಿದ್ದಾರೆ.
ಮೋದಿ ಸರಕಾರ ಈ ದೇಶದ ಯುವಕರ ಸ್ಥಿತಿಯನ್ನು ಇಲ್ಲಿಗೆ ತಂದುಮುಟ್ಟಿಸಿದೆ. ಇಷ್ಟಾಗಿಯೂ ಅವರು ಯುವಕರ ಮುಂದೆ ಭ್ರಮೆಗಳನ್ನು ಬಿತ್ತುವುದನ್ನು ನಿಲ್ಲಿಸಿಲ್ಲ.
ಉದ್ಯೋಗಕ್ಕಾಗಿ ಹಗಲಿರುಳೂ ಶ್ರಮಿಸುವ ಯುವಕರ ಎದುರು ದ್ವೇಷದ ಆಟ ಆಡಕೂಡದು.
ಯಾರು ಯಾವುದೇ ಪಕ್ಷವನ್ನು ಬೆಂಬಲಿಸಲಿ, ಅವರ ಉದ್ಯೋಗದ ಕನಸನ್ನು ಯಾರೂ ಚೂರು ಚೂರು ಮಾಡಕೂಡದು. ಯಾರನ್ನು ಬೆಂಬಲಿಸಬೇಕು, ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದು ಅವರವರ ಸ್ವಾತಂತ್ರ್ಯ.
ದುಡಿಯುವುದಕ್ಕಾಗಿ ಪ್ರಾಮಾಣಿಕ ಯತ್ನದಲ್ಲಿರುವ ಯುವಜನತೆಯ ಎದುರು ರಾಜಕೀಯದವರ ವ್ಯವಹಾರ ಬಿಟ್ಟು ಕಳಕಳಿಯಿಂದ ಯೋಚಿಸುವ ಜರೂರು ಇದೆ.
ಧರ್ಮದ ಅಮಲಿನಲ್ಲಿ ಮುಳುಗಿಸುವ ರಾಜಕೀಯ ಬಿಟ್ಟು ಯುವಕರಿಗಾಗಿ ಯೋಚಿಸಬೇಕಿದೆ, ಅವರೊಡನೆ ಮಾತಾಡಬೇಕಿದೆ.
ಇಲ್ಲದೇ ಹೋದಲ್ಲಿ ಒಂದು ದಿನ ಅವರು ರಾಜಕಾರಣಿಗಳ ಮಾತಿಗೆ ಕಿವಿಗೊಡುವುದನ್ನೇ ನಿಲ್ಲಿಸುವುದು ಖಂಡಿತ.