ಪಂಚಮಸಾಲಿ ಸಮುದಾಯಕ್ಕೆ ‘2ಎ’ಗೇ ಸೇರಿಸಬೇಕೆಂಬ ಹಠವೇಕೆ?
ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಬೆಳಗಾವಿಯಲ್ಲಿ ಬಿರುಸಾದ ಹೋರಾಟ ನಡೆಯುತ್ತಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲೂ ಚರ್ಚೆಯಾಗುತ್ತಿದೆ. ಹೋರಾಟದ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ‘‘ಈಗ ನೀವು ಮಾಡದಿದ್ದರೆ 2028ಕ್ಕೆ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತಹ ಸರಕಾರವನ್ನು ತರುತ್ತೇವೆ’’ ಎಂದು ಶಪಥ ಮಾಡಿದ್ದಾರೆ. ಆದರೆ ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಏಕೆ ಸೇರಿಸಬೇಕು ಎನ್ನುವ ಮೂಲಭೂತ ಪ್ರಶ್ನೆಗೆ ಯಾರೂ ಉತ್ತರ ನೀಡಿಲ್ಲ.
ಜಯಮೃತ್ಯುಂಜಯ ಸ್ವಾಮೀಜಿಯಿಂದ ಹಿಡಿದು ಸಮುದಾಯದ ಎಲ್ಲಾ ಹಿರಿಯ-ಕಿರಿಯ ನಾಯಕರು-ನೇತಾರರೆಲ್ಲರದ್ದೂ ಒಂದೇ ವಾದ. ಪಂಚಮಸಾಲಿಗಳಲ್ಲಿ ಶೇಕಡಾ 80ರಷ್ಟು ಬಡವರಿದ್ದಾರೆ. ಕೃಷಿ ಕಾರ್ಮಿಕರಿದ್ದಾರೆ. ಭೂರಹಿತರಿದ್ದಾರೆ. ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಅದಕ್ಕಾಗಿ ನಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಿ ಎನ್ನುವ ವಾದ. ಹಾಗಾದರೆ ಮತ್ತೊಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ.
ಸಂವಿಧಾನದ ಯಾವುದೇ ವಿಧಿ ಆರ್ಥಿಕವಾಗಿ ಹಿಂದುಳಿದಿರುವಿಕೆ ಕಾರಣಕ್ಕಾಗಿ ಮೀಸಲಾತಿ ನೀಡಿ ಅಥವಾ ಪ್ರವರ್ಗವನ್ನು ಬದಲಾಯಿಸಿ ಎಂದು ಹೇಳಿಲ್ಲ. ಮಂಡಲ್ ತೀರ್ಪಿನಿಂದ ಹಿಡಿದು ಮೀಸಲಾತಿ ಕುರಿತ ಬೇರಾವುದೇ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಕೂಡ ಹೇಳಿಲ್ಲ. ಸಂವಿಧಾನದ ವಿಧಿಗಳು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಮೀರಿ ಪಂಚಮಸಾಲಿ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದಿದೆ ಎಂದು 2ಎ ಪ್ರವರ್ಗಕ್ಕೆ ಸೇರಿಸಲು ಹೇಗೆ ಸಾಧ್ಯ?
ಇಷ್ಟೇ ಆಲ್ಲ, ಇಂದ್ರಾ ಸಹಾನಿ v/s ಕೇಂದ್ರ ಸರಕಾರದ ಪ್ರಕರಣವನ್ನು ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠವು ನೀಡಿರುವ ಐತಿಹಾಸಿಕ ತೀರ್ಪಿನಲ್ಲಿ ‘ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಅಥವಾ ಕೈಬಿಡಲು ಅಥವಾ ಪ್ರವರ್ಗಗಳನ್ನು ಬದಲಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಬೇಕಾಗುತ್ತದೆ’ ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಇದು ಪಂಚಮಸಾಲಿ ಸಮುದಾಯಕ್ಕೂ ಅನ್ವಯವಾಗುತ್ತದೆಯಲ್ಲವೇ?
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಏಕೆ ಬೇಕು ಎನ್ನುವುದಕ್ಕೂ ಹಿನ್ನೆಲೆ ಇದೆ. ಯಾವುದೇ ಸಮುದಾಯದ ಪ್ರವರ್ಗ ಬದಲಾಯಿಸಲು ಶಿಫಾರಸು ಮಾಡುವ ಮೊದಲು ಆಯೋಗ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ದ್ವಿತೀಯ ಮೂಲದ ಮಾಹಿತಿ ತೆಗೆದುಕೊಂಡಿರಬೇಕು. ಎಂಪೆರಿಟಿಕಲ್ ಡೇಟಾ ತೆಗೆದುಕೊಳ್ಳಬೇಕು. ಈ ಮೂರೂ ಆಧಾರಗಳನ್ನು ಇಟ್ಟುಕೊಂಡೇ ಅದು ಯಾವ ಜಾತಿಯನ್ನು ಯಾವ ಪಂಗಡಕ್ಕೆ ಸೇರಿಸಬೇಕು ಎನ್ನುವ ಶಿಫಾರಸು ಮಾಡುತ್ತದೆ. ಹಾಗಾಗಿಯೇ ಬೇರೆಲ್ಲಾ ಆಯೋಗಗಳಿಗಿಂತ ಹೆಚ್ಚಿನ ಮಹತ್ವ ರಾಜ್ಯಗಳ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕಿದೆ.
ಸದ್ಯದ ಮಾಹಿತಿಗಳ ಪ್ರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪಂಚಮಸಾಲಿ ಸಮುದಾಯದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿಲ್ಲ. ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಿಲ್ಲ. ಜೊತೆಗೆ ಪ್ರವರ್ಗ ಬದಲಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸನ್ನೂ ಮಾಡಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಒಂದೊಮ್ಮೆ ಸರಕಾರದ ಮೇಲೆ ಒತ್ತಡ ಹೇರಿ ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಿದರೂ ನ್ಯಾಯಾಲಯ ಈ ಕ್ರಮವನ್ನು ಪುರಸ್ಕರಿಸುವುದಿಲ್ಲ.
ಯಾವುದೇ ಸಮುದಾಯದ ಹಿಂದುಳಿದಿರುವಿಕೆಯನ್ನು ಗುರುತಿಸಲು ಮತ್ತು ಆ ಜಾತಿಯನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು ಎಂದು ನಿರ್ಧರಿಸಲು ಆ ಜಾತಿಯ ಗುಣಲಕ್ಷಣವನ್ನು ಗಮನಿಸಬೇಕು. ಕುರುಬ, ಈಡಿಗ ಸೇರಿ 2ಎ ಪ್ರವರ್ಗದಲ್ಲಿರುವ 102 ಜಾತಿಗಳು ಕುಶಲಕರ್ಮಿ ಜನಾಂಗಗಳು. ಕುಲಕಸುಬುಗಳನ್ನು ಹೊಂದಿರುವ ಸಮುದಾಯಗಳು. ಇದಕ್ಕೆ ವ್ಯತಿರಿಕ್ತವಾಗಿ ಕೃಷಿ ಮತ್ತು ಕೃಷಿ ಕೂಲಿ ಮಾಡುತ್ತಿರುವ ಪಂಚಮಸಾಲಿ ಸಮುದಾಯವನ್ನು ‘ಕುಶಲಕರ್ಮಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಶೇಕಡಾ 15ರಷ್ಟು ಮೀಸಲಾತಿ ಇದೆ ಎನ್ನುವ ಕಾರಣಕ್ಕಾಗಿ ಪಂಚಮಸಾಲಿ ಸಮುದಾಯ 2ಎ ಪ್ರವರ್ಗ ಸೇರಲು ಹಪಹಪಿಸುತ್ತಿದೆ. ಆದರೆ ಈಗಾಗಲೇ 2ಎ ಪ್ರವರ್ಗದ ಸೌಲಭ್ಯಗಳೆಲ್ಲಾ ಕುರುಬರು-ಈಡಿಗರ ಪಾಲಾಗುತ್ತಿವೆ ಎನ್ನುವ ದೂರುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಮಸಾಲಿ ಸಮುದಾಯವೂ 2ಎ ಪ್ರವರ್ಗಕ್ಕೆ ಸೇರಿದರೆ 15, 100, 500, 1,000, 2,000 ಜನಸಂಖ್ಯೆ ಇರುವ ಮೈಕ್ರೊಸ್ಕೋಪಿಂಗ್ ಕಮ್ಯುನಿಟಿಗಳು ಮತ್ತಷ್ಟು ಕಂಗಾಲಾಗಬೇಕಾಗುತ್ತದೆ.
ಪದೇ ಪದೇ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ 2ಎ ಪ್ರವರ್ಗಕ್ಕೆ ಸೇರಿಸಿ ಎಂದು ಕೇಳುತ್ತಿರುವ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಮತ್ತು ನೇತಾರರು ತಮ್ಮ ಜಾತಿಯ ಬಡತನ ನಿವಾರಣೆಗಾಗಿ ಸರಕಾರದಿಂದ ವಿಶೇಷವಾದ ಕಾರ್ಯಕ್ರಮ ಕೇಳಬಹುದು ಎನ್ನುವುದನ್ನೇ ಮರೆತಿದ್ದಾರೆ. ಜೊತೆಗೆ ಮೀಸಲಾತಿ ಎನ್ನುವುದು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ ಎನ್ನುವುದು ಅವರಿಗೆ ತಿಳಿಯದಾಗಿದೆ ಅಥವಾ ತಿಳಿದೂ ತಿಳಿದೂ ‘ರಾಜಕೀಯ ಕಾರಣಕ್ಕಾಗಿ’ ಅರಿಯದವರಂತೆ ನಟಿಸುತ್ತಿದ್ದಾರೆ.
ಸದ್ಯ 3ಬಿ ಪ್ರವರ್ಗದಲ್ಲಿರುವ ಪಂಚಮಸಾಲಿ ಸಮುದಾಯದ ಮುಂದೆ ಇನ್ನೂ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ 3ಬಿ ಪ್ರವರ್ಗದ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ಕೇಳಬಹುದು. ಆಗ ಪಂಚಮಸಾಲಿ ಸಮುದಾಯಕ್ಕೆ ಮಾತ್ರವಲ್ಲದೆ ಆ ಪ್ರವರ್ಗದಲ್ಲಿರುವ 42 ಲಿಂಗಾಯತ ಉಪ ಪಂಗಡಗಳಿಗೂ ಪ್ರಯೋಜನ ಆಗುತ್ತದೆ. ಎರಡನೆಯದಾಗಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇಕಡಾ 10ರಷ್ಟು ಮೀಸಲಾತಿ ಸೌಲಭ್ಯವುಳ್ಳ ಇಡಬ್ಲ್ಯುಎಸ್ ಕೆಟಗರಿಗೆ ವರ್ಗಾಯಿಸುವಂತೆ ಕೇಳಬಹುದು. ಇದ್ಯಾವುದನ್ನೂ ಮಾಡದೆ 5 ಸಾವಿರ ಟ್ರ್ಯಾಕ್ಟರ್-ಬಸ್ಸುಗಳಲ್ಲಿ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ, 2028ಕ್ಕೆ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತಹ ಸರಕಾರವನ್ನು ತರುತ್ತೇವೆ ಎಂದು ಅಬ್ಬರಿಸುವುದು ಸೂಕ್ತವಲ್ಲ. ಮೇಲಾಗಿ ಇದು ತಮ್ಮ ಸಮುದಾಯ ಹಿಂದುಳಿದಿದೆ ಎಂದು ಸಾಬೀತು ಪಡಿಸುವ ಲಕ್ಷಣವೂ ಅಲ್ಲ. ಹೋರಾಟದ ಮುಂಚೂಣಿ ನಾಯಕರ ಅಬ್ಬರ-ಆಗ್ರಹಗಳಲ್ಲೇ ಸಮುದಾಯದ ಸಾಮರ್ಥ್ಯ ಅನಾವರಣಗೊಳ್ಳುತ್ತಿದೆ. ಅದು ಅತ್ಯಂತ ಪ್ರಭಾವಶಾಲಿ ಸಮುದಾಯ ಅಂತ ಸಾರಿ ಹೇಳುತ್ತಿದೆ.
ಇದಕ್ಕೆ ಪೂರಕವಾಗಿ ಪಂಚಮಸಾಲಿ ಸಮುದಾಯದ ಇಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಪ್ರತೀ ಸರಕಾರದಲ್ಲೂ ಒಬ್ಬರೋ ಇಬ್ಬರೋ ಮಂತ್ರಿಗಳಿರುತ್ತಾರೆ. ಪ್ರತೀ ಬಾರಿಯೂ ಎಲ್ಲಾ ಪಕ್ಷಗಳಿಂದ ಎಂಟು-ಹತ್ತು ಶಾಸಕರು ಆಯ್ಕೆಯಾಗಿ ಬರುತ್ತಾರೆ. ವಿಧಾನ ಪರಿಷತ್‌ನಲ್ಲೂ ಇವರ ಪಾರಮ್ಯವಿದೆ. ಸಂಸತ್ತಿನಲ್ಲೂ ಇವರ ಪ್ರಾತಿನಿಧ್ಯವಿದೆ. ಇಂತಹ ಪಂಚಮಸಾಲಿ ಸಮುದಾಯ ‘ತನ್ನ ಪಾಲು’ ಸಾಲದು ಎನ್ನುವುದಾದರೆ 197 ಮುಖ್ಯ ಜಾತಿಗಳು ಮತ್ತು 550 ಉಪಜಾತಿಗಳು ಸೇರಿ ಒಟ್ಟು 747 ಹಿಂದುಳಿದ ಜಾತಿಗಳ ಪೈಕಿ ಈವರೆಗೆ 26 ಸಮುದಾಯಗಳು ಮಾತ್ರ ಶಾಸನಸಭೆ ಪ್ರವೇಶಿಸಿವೆ. ಉಳಿದ 721 ಜಾತಿಗಳಿಗೆ ಇನ್ನೂ ಅದೃಷ್ಟ ಕೂಡಿಬಂದಿಲ್ಲ. ಅವುಗಳ ಪಾಡೇನು? ಈವರೆಗೆ ಗ್ರಾಮ ಪಂಚಾಯತ್ ಸದಸ್ಯನನ್ನೇ ಕಾಣದ ಜಾತಿಗಳ ಪಡಿಪಾಟಿಲು ಏನು? ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸರಕಾರಿ ನೌಕರಿ ಸಿಗದ ಜಾತಿಗಳ ಕರುಣಾಜನಕ ಸ್ಥಿತಿಯನ್ನು ಕೇಳುವವರು ಯಾರು?
ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಿ.ಸಿ. ಪಾಟೀಲ್ ಮತ್ತಿತರರು ‘‘ನೀವು ನಮ್ಮನ್ನು ನೋಡಿ ನಮ್ಮ ಸಮುದಾಯದ ಸ್ಥಿತಿಗತಿಯನ್ನು ನಿರ್ಧರಿಸಬೇಡಿ. ಸಮುದಾಯದಲ್ಲಿರುವ ಬಡವರು, ಕೂಲಿಕಾರ್ಮಿಕರ ಕಡೆಗೆ ಕರುಣೆಯಿಂದ ಕಣ್ಣಾಡಿಸಿ’’ ಎನ್ನುತ್ತಿದ್ದಾರೆ. ಹಾಗಾದರೆ ಸಮುದಾಯವನ್ನು ತಮ್ಮೊಂದಿಗೆ ಮೇಲೆತ್ತಲಾಗದ ಇವರೆಂಥ ನಾಯಕರು ಎಂದು ಕೇಳಬೇಕಾಗುತ್ತದೆ ಅಲ್ಲವೇ? ಅವರುಗಳು ಈಗಲಾದರೂ ಅಮಾಯಕ ಜನರನ್ನು ದಾರಿ ತಪ್ಪಿಸದೆ ಸಮುದಾಯದ ಹಿಂದುಳಿದಿರುವಿಕೆಗೆ ನಿಜವಾದ ಕಾರಣವನ್ನು ಹುಡುಕಬೇಕು.
ಸಮುದಾಯದ ಹಿಂದುಳಿದಿರುವಿಕೆಗೆ ನಿಜವಾದ ಕಾರಣವನ್ನು ಹುಡುಕುವುದರ ಜೊತೆಗೆ ಪಂಚಮಸಾಲಿ ನಾಯಕರು ಜಾತಿ ಜನಗಣತಿ ವರದಿ ಜಾರಿಗಾಗಿಯೂ ಪ್ರಯತ್ನ ನಡೆಸಬೇಕು. ಹಿಂದೆ ಲಿಂಗಾಯತ ಸಮುದಾಯವನ್ನು ವೀರಶೈವದ ಜೊತೆ ಸೇರಿಸಿದ್ದು ಏಕೆ? ಅದರಿಂದಾದ ಅನನುಕೂಲ ಏನು? ಅದರ ಕಾರಣಕರ್ತರು ಯಾರು? ಈಗ ಪಂಚಮಸಾಲಿ ಹೋರಾಟ ಆರಂಭಿಸುವಂತೆ ಹುರಿದುಂಬಿಸಿದವರು ಯಾರು? ಅವರ ಹುನ್ನಾರ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಕಡೆಯದಾಗಿ ಹೀಗೆ ಹಿರಿಯಣ್ಣನಂತಿರುವ ಪಂಚಮಸಾಲಿ ಸಮುದಾಯವೇ ‘ಅರ್ಧ ತಟ್ಟೆಯಲ್ಲಿ’ ಪಾಲು ಕೇಳಿದರೆ ಸಣ್ಣ ಸಮುದಾಯಗಳು, ಅಲೆಮಾರಿಗಳು, ಆದಿವಾಸಿಗಳು, ಮೈಕ್ರೋಸ್ಕೊಪಿಂಗ್ ಕಮ್ಯುನಿಟಿಗಳ ಕತೆ ಏನು? ರಾಜಧಾನಿ ಬೆಂಗಳೂರಿಗೆ ಬರಲಾಗದ, ವಿಧಾನಸೌಧ ಪ್ರವೇಶಿಸಲಾಗದ ಜಾತಿಗಳ ಗತಿ ಏನು?