ನೊಬೆಲ್ ಶಾಂತಿ ಪ್ರಶಸ್ತಿಗೆ ಗಾಝಾ ಸನ್ನಿವೇಶ ಏಕೆ ಮರೆಯಲಾಗಿದೆ?
ಈ ಸಲದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೀಡಲಾಗಿದೆ. ಪರಮಾಣು ಬೆದರಿಕೆಗಳ ಬಗ್ಗೆ ಜಗತ್ತು ಮಾತನಾಡುವಂತೆ ಮಾಡುವುದು ಪ್ರಶಸ್ತಿಯ ಉದ್ದೇಶವಾಗಿದೆ. ಇದೇ ಉದ್ದೇಶವಾಗಿದ್ದರೆ, ಪ್ರಶಸ್ತಿಯ ವಿಷಯದಲ್ಲಿ ಗಾಝಾ ಸನ್ನಿವೇಶವನ್ನು ಏಕೆ ಮರೆಯಲಾಗಿದೆ ಎಂದು ಕೇಳಿದ್ದಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್.
ಗಾಝಾದಲ್ಲಿನ ವಿನಾಶ ಪರಮಾಣು ದಾಳಿಗಿಂತ ಕಡಿಮೆಯೇ?
ಇದಕ್ಕೂ ಮೊದಲು ಕೂಡ ಪರಮಾಣು ನಿಶ್ಯಸ್ತ್ರೀಕರಣದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಒಬಾಮಾ ಥರದ ಸೂಟುಬೂಟಿನಲ್ಲಿ ಮಿಂಚುವ ಪ್ರಭಾವೀ ವಿಶ್ವ ನಾಯಕನಿಗೂ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. 2009ರಲ್ಲಿ ಅವರಿಗೆ ಶಾಂತಿ ಪ್ರಶಸ್ತಿ ನೀಡಿದಾಗ ಅನೇಕ ಪ್ರಶ್ನೆಗಳು ಎದ್ದಿದ್ದವು.
ಈ ಬಾರಿಯ ಪ್ರಶಸ್ತಿ ಪಡೆದ ಜಪಾನಿನ ನಿಹಾನ್ ಹಿಡಾಂಕ್ಯೊ, ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರನ್ನು ಪ್ರತಿನಿಧಿಸುವ ಸಂಸ್ಥೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ನಿರ್ಮಿಸಲು ಮಾಡಿದ ಅವಿರತ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಪರಮಾಣು ದಾಳಿಯ ಭೀಕರತೆ ಬಗ್ಗೆ ಮಾತಾಡಲಾಗುತ್ತಿದೆ. ಸರಿ. ಆದರೆ ಕಳೆದ ಎರಡು ವರ್ಷಗಳಿಂದ ಉಕ್ರೇನ್ ಮತ್ತು ಕಳೆದೊಂದು ವರ್ಷದಿಂದ ಗಾಝಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಿಂಸೆಯ ಬೀಭತ್ಸ ರೂಪ ಜಗತ್ತಿಗೆ ಕಾಣಿಸಲೇ ಇಲ್ಲವೆ? ಜಗತ್ತನ್ನು ಅದು ಕನಲಿಸಲೇ ಇಲ್ಲವೆ?
ಗಾಝಾ ಮೇಲೆ ಇಸ್ರೇಲ್ ಮಾಡಿದ ಅತಿ ಕ್ರೂರ, ವಿಧ್ವಂಸಕ ಮತ್ತು ಅಮಾನವೀಯ ಬಾಂಬ್ ದಾಳಿ ಯಾವ ಪರಮಾಣು ದಾಳಿಗೆ ಕಮ್ಮಿಯಿದೆ? ಗಾಝಾದಲ್ಲಿ ಇಸ್ರೇಲ್ ಬಾಂಬ್ ದಾಳಿಯಿಂದ ಸಂಭವಿಸಿರುವ ಸಾವುಗಳು ಜಪಾನ್‌ನಲ್ಲಿನ ಪರಮಾಣು ದಾಳಿಯಿಂದಲೂ ಆಗಿರಲಿಲ್ಲ. ಜಪಾನ್‌ನಲ್ಲಿ 35 ಸಾವಿರ ಟನ್‌ನ 2 ಬಾಂಬ್‌ಗಳು ಬಿದ್ದಿದ್ದರೆ, ಗಾಝಾದಲ್ಲಿ 80 ಸಾವಿರ ಟನ್‌ನ ಬಾಂಬ್‌ಗಳು ಬಿದ್ದಿವೆ. ಇನ್ನೂ ಅದೆಷ್ಟು ಬಾಂಬ್‌ಗಳು ಗಾಝಾದಲ್ಲಿ ಅವಶೇಷಗಳಡಿ ಸಿಲಕಿರಬಹುದು ಎಂಬ ಆತಂಕವೂ ಇದೆ.
ಅದೆಷ್ಟೋ ಪತ್ರಕರ್ತರು ತಮ್ಮ ಕುಟುಂಬವನ್ನೂ ಮರೆತು, ಸಾವಿಗೂ ಹೆದರದೆ ಗಾಝಾದಿಂದ ವರದಿಗಾರಿಕೆ ಮಾಡುತ್ತಿದ್ದಾರೆ. ಅಲ್ಲಿನ ಕರಾಳ ಕಥೆಗಳು ಜಗತ್ತಿಗೆ ತಿಳಿಯುವಂತಾಗಿರುವುದು ಅವರ ಅಸಾಧಾರಣ ಧೈರ್ಯ ಮತ್ತು ಎದೆಗುಂದದ ಅವರ ದೃಢತೆಯಿಂದಾಗಿ ಮಾತ್ರ. ಅವರಲ್ಲಿ ಎಷ್ಟೋ ಮಂದಿ ತಮ್ಮ ಕುಟುಂಬದವರೇ ಸಾಯುತ್ತಿರುವುದನ್ನು ಕೇಳುತ್ತಲೇ ವರದಿಗಾರಿಕೆ ಮಾಡಿದವರು ಮತ್ತೆ ಕೆಲವರು ವರದಿ ಮಾಡುತ್ತಲೇ ಬಾಂಬ್ ದಾಳಿಗೆ ತುತ್ತಾದವರು. ಇವರಲ್ಲಿ ಯಾರೂ ಶಾಂತಿಯ ಯೋಧರಾಗಿ ನೊಬೆಲ್ ಪ್ರಶಸ್ತಿ ಸಮಿತಿಗೆ ಕಾಣಿಸಲೇ ಇಲ್ಲವೆ? ಅವರಲ್ಲಿ ಯಾರೊಬ್ಬರನ್ನಾದರೂ ಸನ್ಮಾನಿಸುವ ಮೂಲಕ ಜಗತ್ತಿಗೆ ಶಾಂತಿಯ ಮಹತ್ವ ಕುರಿತ ಸಂದೇಶವನ್ನು ಮುಟ್ಟಿಸುವುದು ಸಾಧ್ಯವಿತ್ತಲ್ಲವೆ? ಎಂದು ಕೇಳಿದ್ದಾರೆ ಪತ್ರಕರ್ತ ರವೀಶ್ ಕುಮಾರ್.
ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುತ್ತಿರುವಾಗ 80 ವರ್ಷಗಳ ಹಿಂದಿನ ಕಹಿ ನೆನಪುಗಳಿವೆ.
ಆ ದುರಂತದಲ್ಲಿ ಬದುಕುಳಿದವರನ್ನು ಕಾಯುವ ಕಾಳಜಿಯೊಂದಿಗಿರುವ ಸಂಸ್ಥೆಗೆ ಈಗ ನೊಬೆಲ್ ಶಾಂತಿ ಪ್ರಶಸ್ತಿಯ ಮೂಲಕ ಸನ್ಮಾನವಾಗುತ್ತಿದೆ.
ನಿಹಾನ್ ಹಿಡಾಂಕ್ಯೊ ಸದಸ್ಯರು 1945ರಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ನಡೆದ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರು. ಬದುಕುಳಿದವರಲ್ಲಿ ಅನೇಕರು ಬಾಂಬ್ ದಾಳಿಯಿಂದ ಬಾಧಿತರಾದವರು. ಪರಮಾಣು ಅಸ್ತ್ರ ಕೊನೆಯಾಗಬೇಕು ಎಂದು ಜಾಗತಿಕ ಚಳವಳಿಯನ್ನು ಮುನ್ನಡೆಸಿದವರು. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ದುರಂತ ಮತ್ತು ಅದರ ಅಮಾನವೀಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದ ಕಾರಣಕ್ಕೆ ಮತ್ತು ಪರಮಾಣು ಮುಕ್ತ ಜಗತ್ತಿನ ಉದ್ದೇಶದ ಅದರ ಮಹತ್ತರ ಕೊಡುಗೆಗಾಗಿ ಈ ಗೌರವ ಲಭಿಸಿದೆ.
ಇದೆಲ್ಲವನ್ನೂ ಒಪ್ಪೋಣ. ನೊಬೆಲ್ ಸಮಿತಿಗೆ ಪರಮಾಣು ಮುಕ್ತ ಜಗತ್ತಿನ ವಿಚಾರ ಮುಖ್ಯ, ಯುದ್ಧ ಮುಕ್ತ ಜಗತ್ತು ಎಂಬುದು ಮುಖ್ಯ.
ಹಾಗಾದರೆ, ಯಾಕೆ ನರಮೇಧವೇ ನಡೆದುಹೋಗಿರುವ ಗಾಝಾ ಸನ್ನಿವೇಶದ ಕರಾಳತೆಯ ಬಗ್ಗೆ ಮನನ ಮಾಡುವ ಮೂಲಕ ಶಾಂತಿಯ ಮಹತ್ವವನ್ನು ಪ್ರತಿಪಾದಿಸಬೇಕಿದೆ ಎಂದು ಅದಕ್ಕೆ ಅನ್ನಿಸದೇ ಹೋಯಿತು?
ಜಪಾನಿನ ನಿಹಾನ್ ಹಿಡಾಂಕ್ಯೊ ಸಾಧನೆ ಸಣ್ಣದಲ್ಲ. ಅದು ಉಲ್ಲೇಖನೀಯ. ಅದರ ಸದಸ್ಯರು ಕಂಡುಂಡ ನೋವು ಕೂಡ ಸಣ್ಣದಲ್ಲ. ಆದರೆ ಅದೇ ವೇಳೆ ಗಾಝಾದಲ್ಲಿ ಈಗ ನಡೆದಿರುವ, ನಡೆಯುತ್ತಿರುವ ದುರಂತ ಕೂಡ ಗಂಭೀರವಾದುದು ಮತ್ತು ಕಳವಳಕಾರಿಯಾದುದು.
ಪರಮಾಣು ಅಸ್ತ್ರ ಮುಕ್ತ ಜಗತ್ತಿನ ಬಗ್ಗೆ ಚರ್ಚೆಗಳಾಗುತ್ತಿರುವಾಗ, ಗಾಝಾದಲ್ಲಿನ ಹಿಂಸೆ ವಿರುದ್ಧ ಸಾವಿರಾರು ಪ್ರತಿಭಟನೆಗಳು ನಡೆದಿವೆ. ಜಗತ್ತಿನಾದ್ಯಂತ ಇಂಥ ಪ್ರತಿಭಟನೆಗಳು ನಡೆದಿದ್ದರೂ ಯಾಕೆ ಇದೆಲ್ಲವೂ ಜಗತ್ತಿಗೆ ಕಾಣದಂತಾಗಿದೆ?
ಈ ಸಲದ ನೊಬೆಲ್ ಪ್ರಶಸ್ತಿ ಪ್ರಕಟಿಸಿದ ನೊಬೆಲ್ ಸಮಿತಿಯ ಪತ್ರಿಕಾ ಪ್ರಕಟಣೆಯಲ್ಲಿ ಗಾಝಾದ ಕರಾಳ ಸನ್ನಿವೇಶದ ಬಗ್ಗೆ ಒಂದೇ ಒಂದು ಶಬ್ದವಿಲ್ಲ. ಹಾಗೆಯೇ ಉಕ್ರೇನ್ ಬಗ್ಗೆಯೂ ಇಲ್ಲ.
ಯುದ್ಧದಾಹಿ ದೇಶಗಳಾದ ಅಮೆರಿಕ, ಇಸ್ರೇಲ್‌ನಿಂದ ಹಿಡಿದು ಬ್ರಿಟನ್‌ವರೆಗೆ ಯಾವ ದೇಶಗಳ ಹೆಸರನ್ನೂ ಎತ್ತದ ನೊಬೆಲ್ ಸಮಿತಿ ಇನ್ನೆಂಥ ಶಾಂತಿಯ ಬಗ್ಗೆ ಮಾತನಾಡಬಲ್ಲದು?
ಪರಮಾಣು ಅಸ್ತ್ರ ಮತ್ತೆ ಬಳಕೆಯಾಗಿಲ್ಲ ಎಂಬುದರ ಬಗ್ಗೆ ನೊಬೆಲ್ ಸಮಿತಿ ತನ್ನ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ. ಆದರೆ ಪರಮಾಣು ಅಸ್ತ್ರ ಬಳಸದೆಯೂ ಅದಕ್ಕಿಂತ ಭೀಕರ ವಿನಾಶ ನಡೆದಿರುವುದರ ಬಗ್ಗೆ ಅದಕ್ಕೇಕೆ ಕಳವಳವಾಗುತ್ತಿಲ್ಲ? ಗಾಝಾ, ಲೆಬನಾನ್, ಯಮನ್, ಸಿರಿಯಾ, ಇರಾಕ್, ಲಿಬಿಯಾ, ಅಫ್ಘಾನಿಸ್ತಾನದಂಥ ದೇಶಗಳ ಇಡೀ ಸಮಾಜ, ರಾಜಕಾರಣ ಎಲ್ಲವೂ ಯುದ್ಧದ ಭೀಕರತೆಯಲ್ಲಿ ಪರಮಾಣು ಅಸ್ತ್ರ ಬಳಕೆಯಿಲ್ಲದೆಯೂ ನಾಶವಾಗುತ್ತಿರುವುದು ಏಕೆ ನೊಬೆಲ್ ಸಮಿತಿಗೆ ಕಾಣಿಸದೇ ಹೋಗಿದೆ? ಗಾಝಾ ವಿಚಾರದಲ್ಲಿನ ನೊಬೆಲ್ ಸಮಿತಿಯ ಈ ಮೌನವೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ ರವೀಶ್ ಕುಮಾರ್
ಗಾಝಾದ ಮೇಲೆ ಪರಮಾಣು ಅಸ್ತ್ರ ಪ್ರಯೋಗದ ಮಾತನ್ನು ಇಸ್ರೇಲ್ ಆಡಿದಾಗ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜಪಾನ್ ಕೂಡ ಅದನ್ನು ವಿರೋಧಿಸಿತ್ತು ಮತ್ತು ಪರಮಾಣು ದಾಳಿಯ ಮಾತೆತ್ತದಂತೆ ಹೇಳಿತ್ತು. ಅಷ್ಟಾಗಿಯೂ ಗಾಝಾದಲ್ಲಿ ಪರಮಾಣು ದಾಳಿಗಿಂತಲೂ ಭೀಕರ ರೀತಿಯಲ್ಲಿ ನರಮೇಧವೇ ನಡೆದುಹೋಗಿದೆ.
ಗಾಝಾದ ಮೇಲೆ ದಾಳಿಗಳು ಶುರುವಾದ ಮೇಲೆ ಪಾಶ್ಚಿಮಾತ್ಯ ಮಾಧ್ಯಮಗಳ ಕ್ರೂರ ರೂಪ ಬಯಲಾಗಿದೆ. ಅಲ್ಲಿ ನಡೆದಿರುವ ಹಿಂಸೆಯನ್ನು ಮರೆಮಾಚುವ ಯತ್ನಗಳನ್ನೇ ಜಾಗತಿಕ ಮಾಧ್ಯಮ ಹೆಚ್ಚಾಗಿ ಮಾಡಿದೆ. ಯುದ್ಧಕ್ಕೆ ಕಾರಣರಾಗುತ್ತಿರುವವರ ಬಗ್ಗೆ ಏನನ್ನೂ ಹೇಳಲಾರದ ಮಾಧ್ಯಮಗಳ ಬಗ್ಗೆಯೂ ವ್ಯಾಪಕ ಟೀಕೆಯಿದೆ.
ಆದರೆ ಪರಮಾಣು ದಾಳಿಯಾದ ನಂತರ ನ್ಯೂಯಾರ್ಕರ್ ಪತ್ರಿಕೆ ಒಂದಿಡೀ ಸಂಚಿಕೆಯನ್ನೇ ಅದಕ್ಕಾಗಿ ಮೀಸಲಿಟ್ಟು ಪ್ರಕಟಿಸಿತು. ಪತ್ರಕರ್ತ ಜಾನ್ ಹರ್ಷಿ ಬರೆದಿದ್ದ 30 ಸಾವಿರ ಪದಗಳ ವರದಿ ಅದರಲ್ಲಿ ಪ್ರಕಟವಾಗಿತ್ತು. ಪತ್ರಿಕೋದ್ಯಮದಲ್ಲಿ ಅದನ್ನು ಮಾಸ್ಟರ್ ಪೀಸ್ ಎಂದೇ ಗುರುತಿಸಲಾಗುತ್ತದೆ. ಆನಂತರ ಅದು ಪುಸ್ತಕದ ರೂಪದಲ್ಲಿ ಪ್ರಕಟವಾಯಿತು. ಅಮೆರಿಕದ ಬಣ್ಣವನ್ನು ಅದು ಬಯಲು ಮಾಡಿತ್ತು. ಅಲ್ಬರ್ಟ್ ಐನ್‌ಸ್ಟೀನ್ ನ್ಯೂಯಾರ್ಕರ್ ನ ಆ ಸಂಚಿಕೆಯ ಒಂದು ಸಾವಿರ ಪ್ರತಿ ಕೊಂಡುಕೊಂಡಿದ್ದರು. ಆದರೆ ಈಗ ಎಂಥ ಮಾಧ್ಯಮಗಳನ್ನು ನೋಡುತ್ತಿದ್ದೇವೆ, ಎಂಥ ಸರಕಾರವನ್ನು ನೋಡುತ್ತಿದ್ದೇವೆ?
ಈ ಹಿಂದೆಯೇ ಜಪಾನ್ ಸಂಸ್ಥೆಗೆ ಪ್ರಶಸ್ತಿ ನೀಡಬಹುದಾಗಿತ್ತು. 80 ವರ್ಷಗಳಿಂದ ಕೆಲಸ ಮಾಡುತ್ತಿರುವ ಅದರ ಕೊಡುಗೆ ಸಣ್ಣದಲ್ಲವೇ ಅಲ್ಲ. ಆದರೆ ಗಾಝಾದ ಕರಾಳತೆ ಮುಖ್ಯವಾಗಿರುವ ಈ ಹೊತ್ತಲ್ಲಿ ಜಪಾನಿನ ಸಂಸ್ಥೆಯನ್ನು ಪ್ರಶಸ್ತಿಗೆ ಆರಿಸಿ, ಏಕೆ ಗಾಝಾ ವಿಚಾರವನ್ನು ಹಿಂದಕ್ಕೆ ಸರಿಸಲಾಯಿತು?