ಈಶ್ವರಪ್ಪನವರ ಬಂಡಾಯದ ಲಾಭ ಕಾಂಗ್ರೆಸ್ ಪಡೆದುಕೊಳ್ಳಲಿದೆಯೇ?
ಸರಣಿ- 41
ಕೆಲವು ಪ್ರಾಥಮಿಕ ಮಾಹಿತಿಗಳು
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.72.89. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು. 4 ಕ್ಷೇತ್ರಗಳಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಹಾಗೂ ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಈ ಕ್ಷೇತ್ರದ ಒಟ್ಟು ಮತದಾರರು 17,62,000. ಅವರಲ್ಲಿ ಪುರುಷರು 8,70,000, ಮಹಿಳೆಯರು 8,90,000 ಮತ್ತು ಇತರರು 2,000.
ಎರಡು ಉಪಚುನಾವಣೆಗಳೂ ಸೇರಿ 1952ರಿಂದ 19 ಚುನಾವಣೆಗಳು ನಡೆದಿವೆ.
1967ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಜೆ.ಎಚ್. ಪಟೇಲರು ಗೆದ್ದಿದ್ದು ಬಿಟ್ಟರೆ ಆರಂಭದಿಂದ 1991ರವರೆಗೂ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರವಾಗಿತ್ತು.
ಕಾಂಗ್ರೆಸ್ ಹೊರತುಪಡಿಸಿದರೆ ಅತೀ ಹೆಚ್ಚು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದು ಬಿಜೆಪಿಯಾಗಿದೆ. ಒಟ್ಟು 10 ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 6 ಬಾರಿ ಬಿಜೆಪಿ ಗೆದ್ದಿದೆ. ಉಳಿದಂತೆ, ಒಮ್ಮೆ ಎಸ್‌ಎಸ್‌ಪಿ, ಒಮ್ಮೆ ಕೆವಿಪಿ ಹಾಗೂ ಒಮ್ಮೆ ಸಮಾಜವಾದಿ ಪಕ್ಷ ಗೆದ್ದಿವೆ.
1998ರಲ್ಲಿ ಮೊದಲ ಬಾರಿಗೆ ನೆಲೆ ಕಂಡುಕೊಂಡ ಬಿಜೆಪಿ, ಆನಂತರ 2004ರ ಚುನಾವಣೆಯಲ್ಲಿ ಗೆದ್ದಿತು. 2009ರಿಂದ ಸತತವಾಗಿ ಗೆಲ್ಲುತ್ತಾ ಬಂದಿದೆ.
ಒಂದು ಕಾಲದಲ್ಲಿ ಸಮಾಜ ವಾದಿಗಳು ಹಾಗೂ ಹೋರಾಟಗಾರರ ನೆಲೆಬೀಡಾಗಿದ್ದ ಶಿವಮೊಗ್ಗ ಜಿಲ್ಲೆ, ರಾಜ್ಯ ರಾಜಕಾರಣಕ್ಕೆ ಹಲವು ಘಟಾನುಘಟಿ ರಾಜಕಾರಣಿಗಳನ್ನು ನೀಡಿದೆ. ಜಿಲ್ಲೆಯಿಂದ ನಾಲ್ಕು ಜನ ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕಾಗೋಡು ಚಳವಳಿ, ಸಮಾಜವಾದಿ ಚಳವಳಿ, ದಲಿತ ಹಾಗೂ ರೈತ ಚಳವಳಿಗಳು ಈ ನಾಡಿಗೆ ನೀಡಿದ ಕೊಡುಗೆ ದೊಡ್ಡದು.
ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನೇ ತ್ಯಾಗ ಮಾಡಿದ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಪರಿತಪಿಸುತ್ತಿವೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ. ಸರಕಾರಗಳು ಬದಲಾದರೂ ಮುಳುಗಡೆ ಸಂತ್ರಸ್ತರ ಬದುಕು ಮಾತ್ರ ಹಸನಾಗಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ 68 ವರ್ಷಗಳ ಸುದೀರ್ಘ ಚುನಾವಣಾ ಇತಿಹಾಸ ಅವಲೋಕಿಸಿದರೆ, ಈಚಿನ ದಶಕಗಳಲ್ಲಿ ಚುನಾವಣಾ ರಾಜಕಾರಣದ ಹಲವು ಗುರುತರ ಬದಲಾವಣೆಗಳಿಗೆ ಕ್ಷೇತ್ರ ಸಾಕ್ಷಿಯಾಗಿರುವುದು ಕಂಡುಬರುತ್ತದೆ. ರಾಜಕೀಯ ಸಮೀಕರಣ, ಲೆಕ್ಕಾಚಾರಗಳು ಬದಲಾಗಿರುವುದು ಗೋಚರವಾಗುತ್ತದೆ.
ಲೋಕಸಭಾ ಚುನಾವಣೆ ಆರಂಭದಿಂದ, ಸುಮಾರು ನಾಲ್ಕು ದಶಕಗಳ ದೀರ್ಘಾವಧಿವರೆಗೆ ಪಕ್ಷ ಪ್ರತಿಷ್ಠೆಯೇ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಸಾಧಿಸಿತ್ತು. ನಂತರ ಪಕ್ಷ ಪ್ರಾಮುಖ್ಯತೆ ನಗಣ್ಯವಾಗಿ, ವ್ಯಕ್ತಿ ಪ್ರತಿಷ್ಠೆ, ಜಾತಿ ಕಣವಾಗಿ ಮಾರ್ಪಟ್ಟಿತ್ತು.
ಕಳೆದ ಮೂರ್ನಾಲ್ಕು ಅವಧಿಯ ಲೋಕಸಭಾ ಚುನಾವಣೆಗಳನ್ನು ಅವಲೋಕಿಸಿದರೆ, ಕ್ಷೇತ್ರದ ಬದಲಾದ ರಾಜಕೀಯ ಸಮೀಕರಣದ ಅಂಶಗಳು ಸ್ಪಷ್ಟವಾಗುತ್ತವೆ.
ರಾಜಕೀಯ ಸ್ಥಿತಿಗತಿ
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ಶಕ್ತಿಕೇಂದ್ರವಾಗಿದೆ. ಬದಲಾದ ರಾಜಕೀಯ ಬೆಳವಣಿಗೆಗಳು, ಜಾತಿ ಆಧಾರಿತ ಮಾನದಂಡಗಳು, ಅಭಿವೃದ್ಧಿಯ ಮಾನದಂಡಕ್ಕಿಂತ ಹಿಂದುತ್ವದ ಅಮಲು ಚುನಾವಣೆಯ ಪ್ರಮುಖ ಮಾನದಂಡವಾಗತೊಡಗಿತು.
ಇದರಿಂದ ಬಿಜೆಪಿ ಗೆಲುವು ಸುಲಭವಾಗತೊಡಗಿತು. ಹಿಂದೆ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಹೊಂದಿದ್ದ ಬಂಗಾರಪ್ಪ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತಿದ್ದರು. ಬಂಗಾರಪ್ಪ ಕುಟುಂಬದ ಹಿಡಿತದಲ್ಲಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈಗ ಯಡಿಯೂರಪ್ಪ ಕುಟುಂಬದ ನಿಯಂತ್ರಣದಲ್ಲಿದೆ.
ಕದನ ಕಣ
ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ನಟ ಶಿವರಾಜ್ ಕುಮಾರ್ ಪತ್ನಿ ಹಾಗೂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಕಣದಲ್ಲಿದ್ದಾರೆ. ಮೊದಲು ಮಧು ಬಂಗಾರಪ್ಪ ಅವರನ್ನೇ ಯಡಿಯೂರಪ್ಪ ಕುಟುಂಬದ ಎದುರು ಕಣಕ್ಕಿಳಿಸುವ ಯೋಚನೆಯಲ್ಲಿದ್ದ ಕಾಂಗ್ರೆಸ್ ಕಡೆಗೆ ಅವರ ಸೋದರಿ ಗೀತಾ ಅವರಿಗೆ ಟಿಕೆಟ್ ನೀಡಿದೆ. ಈ ಹಿಂದೆ ಜೆಡಿಎಸ್‌ನಿಂದ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋತಿದ್ದ ಗೀತಾ ಅವರು ಈಗ ಕಾಂಗ್ರೆಸ್ ಅಭ್ಯರ್ಥಿ. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಗೀತಾ ಪಾಲಿಗೆ ಬಲವಾಗಲಿದೆ ಎಂಬ ಮಾತುಗಳಿವೆ.
ಬಿಜೆಪಿಗೆ ಈಶ್ವರಪ್ಪ ಬಿಸಿತುಪ್ಪ?
ಈ ನಡುವೆ ಬಿಜೆಪಿಗೆ ಒಂದು ವಿಲಕ್ಷಣ ಬಂಡಾಯ ಎದುರಾಗಿದೆ. ಹಾವೇರಿಯಲ್ಲಿ ಪುತ್ರನಿಗೆ ಟಿಕೆಟ್ ನೀಡಲಿಲ್ಲ ಎಂಬ ಸಿಟ್ಟಿನಿಂದ ಈಶ್ವರಪ್ಪ ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು, ಪಕ್ಷದೊಳಗೆ ಯಾರ ಮಾತಿಗೂ ಬಗ್ಗುತ್ತಿಲ್ಲ. ಶಿವಮೊಗ್ಗಕ್ಕೆ ಮೋದಿ ಬಂದಾಗಲೂ ಅವರನ್ನು ಭೇಟಿಯಾಗಲಿಲ್ಲ. ಈಗ ಅವರು ಬಿಜೆಪಿಗೆ ಬಿಸಿತುಪ್ಪವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಅರಣ್ಯ ಭೂಮಿ ಸಮಸ್ಯೆ, ಮಲೆನಾಡು ಭಾಗಗಳಲ್ಲಿ ಟವರ್ ಸಮಸ್ಯೆ ಹಾಗೂ ಆರು ದಶಕಗಳಿಂದ ಕಗ್ಗಂಟಾಗಿ ಉಳಿದ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕಿನ ಸಮಸ್ಯೆ ಮುಖ್ಯವಾಗಿವೆ.
ಅಲ್ಲದೆ ಉಕ್ಕಿನ ನಗರಿ ಖ್ಯಾತಿಯ ಭದ್ರಾವತಿಯ ವಿಐಎಸ್ ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಸಮಸ್ಯೆ, ರಸ್ತೆ ಸಂಪರ್ಕವಿಲ್ಲದ ಕರೂರು-ಬಾರಂಗಿ ಹೋಬಳಿಗಳಲ್ಲಿರುವ ಕುಗ್ರಾಮಗಳು, ಅಡಿಕೆ ಬೆಳೆ ಮೇಲೆ ನೇತಾಡುತ್ತಿರುವ ಕಾನೂನಿನ ತೂಗುಗತ್ತಿ, ಉಲ್ಬಣಗೊಳ್ಳುತ್ತಿರುವ ಮಂಗನಕಾಯಿಲೆ ಸಮಸ್ಯೆ ಇತ್ಯಾದಿಗಳು ಶಿವಮೊಗ್ಗ ಜಿಲ್ಲೆಯನ್ನು ಕಾಡುತ್ತಿದೆ.
ಯಾರಿಗೆ ಏನು ಸವಾಲುಗಳು?
ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರ ಕೈತಪ್ಪಿರುವುದು, ಜಾತಿ ರಾಜಕೀಯದ ಆರೋಪ, ಕುಟುಂಬ ರಾಜಕಾರಣ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಹಿನ್ನಡೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸದಿರುವುದು ಹಾಗೂ ಪಕ್ಷದೊಳಗಿನ ಮುಸುಕಿನ ಗುದ್ದಾಟ ಬಿಜೆಪಿಗೆ ತೊಡಕಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಕೈಹಿಡಿಯಬಹುದಾದ ಅಂಶಗಳೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದು. ಮನೆಮನೆಗೆ ತಲುಪುತ್ತಿರುವ ಗ್ಯಾರಂಟಿ ಯೋಜನೆ. ಆದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಿಂದ ದೂರ ಇರುವುದು ತೊಡಕಾಗಿದೆ.
ಬಿಜೆಪಿ ಗೆಲುವಿಗೆ ಬೀಳುವುದೇ ಬ್ರೇಕ್?
ಸೂಕ್ಷ್ಮವಾಗಿ ಗಮನಿಸುವುದಾದರೆ, ಸ್ಥಳೀಯ ವಿಚಾರಗಳು ಚುನಾವಣೆಯಲ್ಲಿ ಮುಖ್ಯವಾಗಲಿವೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ದಿನ ಕಳೆದಂತೆ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ನ್ಯಾಯಾಂಗದ ಕಟಕಟೆ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳುಗಡೆ ಸಂತ್ರಸ್ತರ ಆಕ್ರೋಶದ ಕಟ್ಟೆ ಒಡೆದಿದೆ. ಇದರಿಂದಾಗಿ ಬಿಜೆಪಿ ಗೆಲುವಿಗೆ ಬ್ರೇಕ್ ಬಿದ್ದರೂ ಅಚ್ಚರಿಯಿಲ್ಲ.
ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಶಿವಮೊಗ್ಗ ಪ್ರತಿಷ್ಠೆಯ ಕ್ಷೇತ್ರ. ಅಲ್ಲಿನ ಗೆಲುವು ಸೋಲು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅವರು ಹೇಗಾದರೂ ಇಲ್ಲಿ ಗೆದ್ದೇ ಗೆಲ್ಲುವ ಹಠದಲ್ಲಿದ್ದಾರೆ.
ಅತ್ತ ಕಾಂಗ್ರೆಸ್ ಕೂಡ ಈ ಬಾರಿ ಈ ಕ್ಷೇತ್ರವನ್ನು ಗೆಲ್ಲುವ ಪಣ ತೊಟ್ಟಿದೆ. ಮಧು ಬಂಗಾರಪ್ಪ ಸ್ವತಃ ಅಭ್ಯರ್ಥಿ ಎಂಬಂತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂದು ಪ್ರಚಾರ ಮಾಡುತ್ತಿದ್ದಾರೆ.
ಈ ನಡುವೆ ಈಶ್ವರಪ್ಪನವರ ರಂಗಪ್ರವೇಶದಿಂದ ಲೆಕ್ಕಾಚಾರಗಳು ಬದಲಾಗುತ್ತಿವೆ.
ಅಂತಿಮವಾಗಿ ಶಿವಮೊಗ್ಗದ ಮತದಾರ ಯಾರಿಗೆ ಒಲಿಯುತ್ತಾನೆ ಎಂದು ಕಾದು ನೋಡಬೇಕು.