ಯತ್ನಾಳ್ ಉಚ್ಚಾಟನೆಯೊಂದಿಗೆ ಎಲ್ಲವೂ ಮುಗಿದು ಹೋಗುತ್ತದೆಯೇ?

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯೇನೋ ಆಗಿದೆ. ಆದರೆ ಇದು ಬಿಜೆಪಿಯೊಳಗೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಕೂಡ ಕುತೂಹಲಗಳು ಮೂಡಿವೆ.
ಈ ವರೆಗೆ ಪಕ್ಷದೊಳಗಿದ್ದು ಬಿಜೆಪಿಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾಗಿದ್ದ ಯತ್ನಾಳ್ ಈಗ ಉಚ್ಚಾಟನೆ ಬಳಿಕವೂ ಪಕ್ಷದ ಪಾಲಿಗೆ ಇಕ್ಕಟ್ಟಿನ ಸ್ಥಿತಿ ಬರಲು ಕಾರಣರಾಗುವರೇ ಎಂಬ ಪ್ರಶ್ನೆ ಎದ್ದಿದೆ.
ಯತ್ನಾಳ್ ಉಚ್ಚಾಟನೆ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಕುಟುಂಬಕ್ಕೆ ಮಣೆ ಹಾಕಿದೆ ಎಂದು ಟೀಕಿಸಲಾಗುತ್ತಿದೆ.
ಯತ್ನಾಳ್ ಉಚ್ಚಾಟನೆ ನಂತರದ ಕೆಲವು ಬೆಳವಣಿಗೆಗಳನ್ನು ಗಮನಿಸಬೇಕು.
ಮುಖ್ಯವಾಗಿ, ಉಚ್ಚಾಟನೆ ಬಳಿಕ ಯತ್ನಾಳ್ ಒಬ್ಟಂಟಿಯಾಗಲಿದ್ದಾರೆ ಎಂಬ ಪಕ್ಷದವರ ನಿರೀಕ್ಷೆ ಸುಳ್ಳಾದಂತಿದೆ. ಯತ್ನಾಳ್ ಬಲಕ್ಕೆ ಅವರ ಬೆಂಬಲಿಗರು ಮಾತ್ರವಲ್ಲ, ಮಠಾಧೀಶರೂ ನಿಂತಿರುವುದು ಮೊದಲ ಪ್ರಮುಖ ಬೆಳವಣಿಗೆ.
ಎರಡನೆಯದಾಗಿ, ಯತ್ನಾಳ್ ಉಚ್ಚಾಟನೆ ವಿಜಯಪುರ ಜಿಲ್ಲಾ ಬಿಜೆಪಿಗೆ ಹೊಡೆತ ಕೊಟ್ಟಂತೆ ಕಾಣುತ್ತಿದೆ.
ಮೂರನೆಯದಾಗಿ, ಭಿನ್ನಮತೀಯರ ಸಭೆಯ ಸುದ್ದಿ.
ಇದೆಲ್ಲದರ ನಡುವೆಯೇ, ಬಿಜೆಪಿ ಅಡ್ಜಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಎಚ್ಚರಿಸಿ ಯತ್ನಾಳ್ ಬರೆದಿರುವ ಸುದೀರ್ಘ ಪೋಸ್ಟ್ ಒಂದು ಕೂಡ ಬಿಜೆಪಿ ನಾಯಕರನ್ನು ಆಳವಾಗಿ ತಿವಿಯುವ ಹಾಗಿದೆ.
ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಭಾರೀ ಕೋಲಾಹಲ ಕಾಣಿಸತೊಡಗಿದೆ. ಅವರ ಉಚ್ಚಾಟನೆಯನ್ನು ಖಂಡಿಸಿ ಪಕ್ಷದ ನಗರ ಮಂಡಲದ ಪ್ರಮುಖ ಮುಖಂಡರು ಸಾಲು ಸಾಲು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವರದಿಗಳಿವೆ. ಈ ಬೆಳವಣಿಗೆಯಿಂದ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಗೊಂದಲ ತಲೆದೋರಿದ್ದು, ಪಕ್ಷದ ಆಂತರಿಕ ಬಿಕ್ಕಟ್ಟು ಹೆಚ್ಚಿದಂತಾಗಿದೆ.
ಇನ್ನೊಂದೆಡೆ, ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ವರೆಗೆ ಉಚ್ಚಾಟನೆ ಮಾಡಿದ ಬಿಜೆಪಿ ನಾಯಕರ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅನೇಕ ಸಂಘಟನೆ ಹಾಗೂ ಸಮುದಾಯದ ಮುಖಂಡರು ಯತ್ನಾಳ್ ಬೆನ್ನಿಗೆ ನಿಂತಿದ್ದು, ಉಚ್ಚಾಟನೆ ಹಿಂಪಡೆಯುವಂತೆ ಬಿಜೆಪಿಗೆ ಒತ್ತಾಯಿಸುತ್ತಿದ್ದಾರೆ.
ಮುಖ್ಯವಾಗಿ ಮಠಾಧೀಶರು ಯತ್ನಾಳ್ ಪರವಾಗಿ ನಿಂತಿದ್ದು, ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ಮತ್ತು ಗಡುವು ಕೊಟ್ಟಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ.
ಈ ಉಚ್ಚಾಟನೆ ಹಿಂಪಡೆಯದೇ ಹೋದರೆ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರ ಬನ್ನಿ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಚಾಟನೆ ಮಾಡುವಂತೆ ಮಾಡಿವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರದೇ ಇರುವ ಅಂಶಗಳು ಇಲ್ಲಿವೆ ಎಂದು ಹೇಳುವ ಮೂಲಕ ಬಿಜೆಪಿಯ ರಾಜ್ಯ ನಾಯಕತ್ವದ ಕಡೆಗೇ ಅವರು ಬೆರಳು ಮಾಡಿದ್ದಾರೆ.
ಮುಂದೆ ಒಂದು ದಿನ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಇದು ಪ್ರಧಾನಿ ವಿರುದ್ಧದ ಹೋರಾಟ ಅಲ್ಲ. ಯಾರು ಅಟ್ಟಹಾಸ ಮೆರೆದಿದ್ದಾರೋ ಅವರ ವಿರುದ್ಧದ ಹೋರಾಟ. ಬಿಜೆಪಿ ಹೈಕಮಾಂಡ್ ಕೂಡಲೇ ಈ ಆದೇಶ ವಾಪಸ್ ಪಡೆದು ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ತಮಗೆ ಕುಟುಂಬ ರಾಜಕಾರಣ ಬೇಕು ಎಂದು ನೇರವಾಗಿ ಹೇಳಲಿ ಎಂದ ಸ್ವಾಮೀಜಿ, ಈ ಬಗ್ಗೆ ಎಲ್ಲವನ್ನೂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಯತ್ನಾಳ್ ಅವರು ನಾಯಕನಾಗಿ ಬೆಳೆಯುವುದನ್ನು ಸಹಿಸದ ಯಡಿಯೂರಪ್ಪ ಅವರ ಮಾತನ್ನು ಕೇಳಿ ಉಚ್ಚಾಟಿಸಲಾಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಕುತಂತ್ರದಿಂದ ಈ ಉಚ್ಚಾಟನೆ ಮಾಡಲಾಗಿದೆ ಎಂದು ನೇರವಾಗಿಯೇ ಅವರು ಆರೋಪಿಸಿದ್ದಾರೆ.
ಎಪ್ರಿಲ್ 10ರೊಳಗೆ ಉಚ್ಚಾಟನೆ ಆದೇಶ ಹಿಂಪಡೆಯದಿದ್ದರೆ ಎಪ್ರಿಲ್ 13ರಿಂದ ಸಮಾಜದ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದು ಈಗ, ಯತ್ನಾಳ್ ಉಚ್ಚಾಟನೆಯಿಂದ ಗೆದ್ದೆ ಎಂದುಕೊಂಡಿರುವ ವಿಜಯೇಂದ್ರ ಎದುರಿನ ದೊಡ್ಡ ಸವಾಲಿನ ಹಾಗೆ ಕಾಣಿಸುತ್ತಿದೆ.
ಇನ್ನೊಂದು ಬೆಳವಣಿಗೆಯಲ್ಲಿ, ಈವರೆಗೂ ಯತ್ನಾಳ್ ಜೊತೆಗೆ ಗುರುತಿಸಿಕೊಂಡವರಲ್ಲಿ ಪ್ರಮುಖರಾದ ರಮೇಶ್ ಜಾರಕಿಹೊಳಿ ಕೂಡ, ‘‘ಯತ್ನಾಳ್ ಈಗಲೂ ಒಬ್ಬಂಟಿಯಲ್ಲ, ನಾವೆಲ್ಲ ಜೊತೆಗಿದ್ದೇವೆ’’ ಎಂದಿದ್ದಾರೆ. ಉಚ್ಚಾಟನೆ ವಿಚಾರ ಮರುಪರಿಶೀಲಿಸುವಂತೆ ಕೇಳುವುದಾಗಿಯೂ ಅವರು ಹೇಳಿದ್ದಾರೆ. ದೊಡ್ಡ ಸಮುದಾಯದ ನಾಯಕನಾಗಿರುವ ಯತ್ನಾಳ್ ಅವರ ಸಾಮರ್ಥ್ಯವನ್ನು ಬಿಜೆಪಿ ಬಳಸಿಕೊಳ್ಳಬೇಕಿತ್ತು ಎಂದಿದ್ದಾರೆ.
ಅವರ ರಾಜೀನಾಮೆ ವಿಷಯ ಮರುಪರಿಶೀಲನೆಗೆ ಒತ್ತಾಯಿಸುವ ಸಂಬಂಧ ಭಿನ್ನಮತೀಯರೆಲ್ಲ ಸಭೆ ಸೇರುವ ಬಗ್ಗೆಯೂ ಅವರು ಹೇಳಿದ್ದಾರೆ.
ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿ ಒಂದರ ಮೇಲೊಂದು ಸವಾಲು ಎಳೆದುಕೊಳ್ಳುವ ಹಾಗಾಗಲಿದೆಯೆ?
ಯಾಕೆಂದರೆ, ಈಗಾಗಲೇ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಇಬ್ಬರೂ ಬಿಜೆಪಿಗೆ ಸೆಡ್ಡು ಹೊಡೆದವರಂತೆ ಓಡಾಡುತ್ತಿದ್ದಾರೆ. ಅವರು ಬಿಜೆಪಿಯ ಉಸ್ತುವಾರಿ ಬಂದರೂ ಅಲ್ಲಿ ಹಾಜರಾಗದೆ, ಕಾಂಗ್ರೆಸ್ ಜೊತೆಗೆ ಕಾಣಿಸಿಕೊಳ್ಳುತ್ತಾರೆ. ಡಿ.ಕೆ. ಶಿವಕುಮಾರ್ ಅವರ ಔತಣಕೂಟದಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ವಿರುದ್ಧ ಪಕ್ಷ ಏನು ಬೇಕಾದರೂ ಮಾಡಿಕೊಳ್ಳಲಿ ಎಂಬಂತೆ ಅವರ ನಡೆಯಿದೆ.
ಹೀಗಿರುವಾಗಲೇ ಹಲವು ದಿಕ್ಕುಗಳಿಂದ ಅದು ತನಗೆ ಮುಜುಗರ ಉಂಟುಮಾಡಲೆಂದೇ ತಯಾರಾಗಿರುವ ನಾಯಕರ ವಿವಿಧ ಬಗೆಯ ಆಟಗಳನ್ನು ವಿಜಯೇಂದ್ರ ಎದುರಿಸಬೇಕಾಗಿ ಬರಬಹುದು ಎನ್ನಲಾಗುತ್ತಿದೆ.
ಇಲ್ಲಿ ಶಿವರಾಮ್ ಹೆಬ್ಬಾರ್ ಆಡಿರುವ ಮಾತನ್ನು ಗಮನಿಸಬೇಕು.
ಯತ್ನಾಳ್ ಉಚ್ಚಾಟನೆ ಪರಿಣಾಮ ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದಿದ್ದಾರೆ.
ಇದೇ ವೇಳೆ ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಗಿರುವುದನ್ನು ಪ್ರಸ್ತಾಪಿಸಿದ್ದಾರೆ. ಶಾಸಕರಾದ ಸುನೀಲ್ ಕುಮಾರ್, ಆರ್. ಅಶೋಕ್ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು. ದೊಡ್ಡ ನಾಯಕರು ಆರಾಮಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ ಅವರು ಬೇರೆ ಏನೋ ಸುಳಿವು ಕೊಡುವವರಂತೆ ಮಾತಾಡಿದ್ದಾರೆ.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳುವ ಪ್ರಕಾರ, ಯತ್ನಾಳ್ ಉಚ್ಚಾಟನೆ ಒಂದು ಎಚ್ಚರಿಕೆ ಮಾತ್ರ. ಯಾಕೆಂದರೆ, ಯತ್ನಾಳ್ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬಿಜೆಪಿಗೆ ಶಕ್ತಿ ಇದ್ದರೆ ಅವರನ್ನು ಶಾಶ್ವತವಾಗಿ ಪಕ್ಷದಿಂದ ವಜಾ ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಬಾಲಕೃಷ್ಣ ಹೇಳುವ ಹಾಗೆ, ಯತ್ನಾಳ್ ಥರದವರು ಇಲ್ಲದೆ ಬಿಜೆಪಿ ಹೆಚ್ಚು ಸಕ್ರಿಯ ಎನ್ನಿಸುವುದು ಸಾಧ್ಯವಿಲ್ಲ. ಬಿಜೆಪಿಗೆ ಏನಿದ್ದರೂ ರಮೇಶ್ ಬಿದೂರಿ ಥರದವರು, ಗಿರಿರಾಜ್ ಸಿಂಗ್ ಥರದವರು, ಅನುರಾಗ್ ಠಾಕೂರ್ ಥರದವರು ಬೇಕು. ಹೊಡಿ ಬಡಿ ಎನ್ನಬೇಕು, ಗುಂಡಿಕ್ಕಿ, ಕೊಲ್ಲಿ ಎನ್ನಬೇಕು, ಮುಸ್ಲಿಮರನ್ನು ಭಯೋತ್ಪಾದಕರು ಎನ್ನುವವರು ಬೇಕು. ನಿರಂತರವಾಗಿ ಕೋಮುದ್ವೇಷ ಹರಡುವ, ಪ್ರಚೋದನಕಾರಿ ಭಾಷಣ ಮಾಡುವ ಯತ್ನಾಳ್ ಥರದವರು ಇಲ್ಲದೆ ಬಿಜೆಪಿ ಹೇಗೆ ಸಕ್ರಿಯ ಎನ್ನಿಸಿಕೊಳ್ಳಲು ಸಾಧ್ಯ?
ಯತ್ನಾಳ್ ಮೊನ್ನೆಯಷ್ಟೇ ಉಚ್ಚಾಟನೆಯಾದರು. ಆದರೆ ಇಲ್ಲಿಯವರೆಗೂ ಅವರು ಪಕ್ಷದೊಳಗೆ ರಾಜ್ಯ ನಾಯಕತ್ವದ ವಿರುದ್ಧ ಸತತವಾಗಿ ಟೀಕಿಸುತ್ತಿದ್ದಾಗ ಯಾರ ಕೃಪಾಶೀರ್ವಾದದಲ್ಲಿ ಆ ಧೈರ್ಯ ತೋರಿಸುತ್ತಿದ್ದರು?
ಈಗ ಅವರನ್ನು ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಜವಾಗಿಯೂ ಧೈರ್ಯದಿಂದ ಅದನ್ನು ಮಾಡಿದೆಯೆ? ಅಥವಾ ಬಾಲಕೃಷ್ಣ ಹೇಳಿರುವ ಹಾಗೆ ಅದೊಂದು ಎಚ್ಚರಿಕೆಯ ಕ್ರಮ ಮಾತ್ರವೆ?
ಈಗ ಅವರ ಉಚ್ಚಾಟನೆಗೆ ವ್ಯಕ್ತವಾಗುತ್ತಿರುವ ವಿರೋಧದ ಹಿಂದೆಯೂ ಹೈಕಮಾಂಡ್ ಭಾಗವೇ ಆಗಿರಬಹುದಾದ ಶಕ್ತಿಗಳು ಕೆಲಸ ಮಾಡುತ್ತಿರಬಹುದೆ?
ಈ ಹೊತ್ತಿನಲ್ಲಿ, ಯತ್ನಾಳ್ ಅವರು ರಾಜ್ಯ ಬಿಜೆಪಿಯನ್ನು ಕುಟುಕುವುದನ್ನು ಉಚ್ಚಾಟನೆ ನಂತರವೂ ನಿಲ್ಲಿಸಿಲ್ಲ ಎಂಬುದನ್ನು ಕೂಡ ನಿರ್ಲಕ್ಷಿಸಲು ಆಗುವುದಿಲ್ಲ. ಅವರು ಸುಮ್ಮನೆ ಏನೋ ಮಾತಾಡುತ್ತಿದ್ದಾರೆ ಎಂದೇನೂ ಅನ್ನಿಸುವುದಿಲ್ಲ. ಅವರು ಬರೆದಿರುವ ಸುದೀರ್ಘ ಎಕ್ಸ್ ಪೋಸ್ಟ್ ಅನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.
ಅಡ್ಜಸ್ಟ್‌ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ ಎಂದು ಅದರಲ್ಲಿ ಅವರು ಹೇಳಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯಕತೆ ಪಕ್ಷಕ್ಕಿಲ್ಲ ಎಂದು ಕಟುವಾಗಿ ಹೇಳಿದ್ದಾರೆ.
ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್‌ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ ಎಂದು ಅವರು ಹೈಕಮಾಂಡ್‌ಗೂ ತಿವಿದಿದ್ದಾರೆ.
ಈಗ, ಯತ್ನಾಳ್ ಉಚ್ಚಾಟನೆಯೊಂದಿಗೆ ಬಿಎಸ್‌ವೈ ಬಣಕ್ಕೆ ಗೆಲುವಾದಂತಾಗಿರುವುದೇನೊ ಹೌದು. ಆದರೆ ಇದೆಲ್ಲವೂ ಇಲ್ಲಿಗೇ ನಿಲ್ಲುತ್ತದೆಯೇ ಎಂಬುದೇ ಪ್ರಶ್ನೆ.