ಮಣಿಪುರ ಮುಂಬರುವ ದಿನಗಳಲ್ಲಿ ಶಾಂತಿಯ ದಿನಗಳನ್ನು ಕಂಡೀತೇ?

ಮಣಿಪುರದಲ್ಲಿ ಸುಮಾರು 2 ವರ್ಷಗಳ ಹಿಂಸಾಚಾರದ ಬಳಿಕ ಕಡೆಗೂ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈಗಲಾದರೂ ಮಣಿಪುರದಲ್ಲಿ ಕೆಲವು ಮಾತುಕತೆಗಳು ನಡೆಯಬಹುದು, ಶಾಂತಿ ಸ್ಥಾಪನೆಯಾಗಬಹುದು ಎಂದು ಜನರು ಆಶಿಸುತ್ತಿದ್ದಾರೆ.
ಸುಮಾರು ಎರಡು ವರ್ಷಗಳಿಂದ, ಮಣಿಪುರದ ಕುಕಿ ಸಮುದಾಯ ಬಿರೇನ್ ಅವರನ್ನು ತೆಗೆದುಹಾಕಬೇಕೆಂದು ಪದೇ ಪದೇ ಒತ್ತಾಯಿಸುತ್ತಿತ್ತು. ಅವರು ಉದ್ದಕ್ಕೂ ಮೈತೈ ಸಮುದಾಯದ ಹಿಂದೆ ನಿಂತು ಪ್ರಚೋದಿಸಿದ್ದಾರೆ ಎಂಬ ಆರೋಪಗಳಿದ್ದವು.
ಸುಮಾರು ಎರಡು ವರ್ಷಗಳಿಂದ ಹಿಂಸಾಚಾರ ನಡೆಯುತ್ತಿದೆ. ಇಲ್ಲಿಯವರೆಗೆ, ಯಾವುದೇ ಶಾಂತಿ ಮಾತುಕತೆ ನಡೆದಿಲ್ಲ.
ನಿಗದಿತ ಶಾಸಕಾಂಗ ಸಭೆಯ ಅಧಿವೇಶನಕ್ಕೆ ಕೇವಲ ಒಂದು ದಿನ ಮೊದಲು ಬಿರೇನ್ ಸಿಂಗ್ ರಾಜೀನಾಮೆ ನೀಡಿದರು. ರಾಜ್ಯಪಾಲರು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಮುಂದುವರಿಯಲು ಸೂಚಿಸಿದ್ದಾರೆ.
ಶುಕ್ರವಾರ ಮಣಿಪುರ ವಿಧಾನಸಭೆ ಅಧಿವೇಶನ ಕರೆಯುವ ಆದೇಶವನ್ನು ರದ್ದುಗೊಳಿಸಲಾಯಿತು.
ಸರಕಾರ ಬೀಳಬಹುದಿತ್ತು. ಅಂಗೀಕರಿಸಬಹುದಾಗಿದ್ದ ಅವಿಶ್ವಾಸ ನಿರ್ಣಯವನ್ನು ಈ ರಾಜೀನಾಮೆಯಿಂದಾಗಿ ಸದ್ಯಕ್ಕೆ ಮುಂದೂಡಲಾಗಿದೆ.
ತಾಂತ್ರಿಕವಾಗಿ, ಬಿಜೆಪಿ ಸರಕಾರ ಇನ್ನೂ ಇದೆ. ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ, ಬೇರೆ ಯಾರಾದರೂ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬುದು ಈಗಿನ ಕುತೂಹಲ.
ಸುಮಾರು 2 ವರ್ಷಗಳ ಕಾಲ ಫೆವಿಕಾಲ್‌ನಂತೆ ಕುರ್ಚಿಗೆ ಅಂಟಿಕೊಂಡಿದ್ದ ಬಿರೇನ್ ಅವರನ್ನು ಹೇಗೆ ಹೊರಹಾಕಲಾಯಿತು?
ಇದರ ಹಿಂದೆ ದೀರ್ಘ ಕಾಲದ ಕಾರಣಗಳಿವೆ ಮತ್ತು ತಕ್ಷಣದ ರಾಜಕೀಯ ಪ್ರಚೋದನೆಗಳೂ ಇವೆ.
ಕಳೆದ ಕೆಲವು ತಿಂಗಳುಗಳಿಂದ, ಅತೃಪ್ತ ಬಿಜೆಪಿ ನಾಯಕರು ಪದೇ ಪದೇ ದಿಲ್ಲಿಗೆ ಬಂದಿದ್ದರು ಮತ್ತು ಪಕ್ಷದ ನಾಯಕರನ್ನು ಭೇಟಿ ಮಾಡಿದ್ದರು. ಮನವಿಗಳನ್ನು ಸಲ್ಲಿಸಿದ್ದರು.
ಮಣಿಪುರದಲ್ಲಿ ಸ್ಪೀಕರ್ ಆಗಿರುವ ಸತ್ಯವ್ರತ್ ಸಿಂಗ್ ಅವರನ್ನು ಮುಖ್ಯಮಂತ್ರಿಯ ಟೀಕಾಕಾರ ಎಂದು ಪರಿಗಣಿಸಲಾಗಿದೆ. ಕಳೆದ ವಾರ ಅವರು ಹೊಸದಿಲ್ಲಿಗೆ ಬಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದರು.
ಅವಿಶ್ವಾಸ ನಿರ್ಣಯ ಬರಲಿರುವುದರ ಬಗ್ಗೆ ಅವರು ನಡ್ಡಾಗೆ ಮಾಹಿತಿ ಕೊಟ್ಟಿದ್ದರು.
ಅವಿಶ್ವಾಸ ನಿರ್ಣಯವನ್ನು ತಪ್ಪಿಸಬಹುದೇ ಅಥವಾ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಗೆಲ್ಲಬಹುದೇ ಎಂಬ ನಡ್ಡಾ ಪ್ರಶ್ನೆಗೆ, ಸರಕಾರ ಬೀಳುತ್ತದೆ ಎಂಬುದನ್ನು ಅವರು ಹೇಳಿದ್ದರು.
ಫೆಬ್ರವರಿ 4ರಂದು ಮಣಿಪುರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಖೇಮ್‌ಚಂದ್ ಸಿಂಗ್ ಕೂಡ ದಿಲ್ಲಿಗೆ ಬಂದಿದ್ದರು. ಅವರು ಕೂಡ ಬಿರೇನ್ ಸಿಂಗ್ ಅವರ ಟೀಕಾಕಾರರೆನ್ನಲಾಗುತ್ತದೆ.ಸರಕಾರ ಕುಸಿಯಲಿದೆ ಎಂದು ಬಿಜೆಪಿ ನಾಯಕತ್ವಕ್ಕೆ ಅವರು ಸ್ಪಷ್ಟವಾಗಿ ತಿಳಿಸಿದ್ದರು.
ಆನಂತರ ರಾಜ್ಯಪಾಲ ಎ.ಕೆ. ಭಲ್ಲಾ ಫೆಬ್ರವರಿ 4 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಸಂಪೂರ್ಣ ವರದಿ ಒಪ್ಪಿಸಿದ್ದರು.
ಹಲವು ತಿಂಗಳುಗಳ ಕಾಲ ಬಿರೇನ್ ಅವರಿಗೆ ಬಿಜೆಪಿಯ ಉನ್ನತ ನಾಯಕತ್ವದಿಂದ ಸಂಪೂರ್ಣ ಬೆಂಬಲವಿತ್ತು. ಅಲ್ಪಸಂಖ್ಯಾತ ಸಮುದಾಯಗಳಿಂದ ಬಹುಸಂಖ್ಯಾತರನ್ನು ಅವರು ಮಾತ್ರ ಉಳಿಸಬಲ್ಲರು. ಇಲ್ಲದಿದ್ದರೆ ಮೈತೈ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಲೆಕ್ಕಾಚಾರದಿಂದಾಗಿ ಅವರು ಅಲ್ಲಿ ಅಧಿಕಾರದಲ್ಲಿ ಕುಳಿತಿರುವುದು ಸಾಧ್ಯವಾಗಿತ್ತು.
ಸಂಸತ್ತಿನ ಒಳಗೆ, ಸಂಸತ್ತಿನ ಹೊರಗೆ, ಪೊಲೀಸ್ ಪಡೆ, ಮಾಧ್ಯಮಗಳಿಂದ ಇದಕ್ಕೆ ಸಂಪೂರ್ಣ ಬೆಂಬಲವಿತ್ತು. ಅಮಿತ್ ಶಾ ಆಶೀರ್ವಾದವೂ ಇತ್ತು.
ಪಕ್ಷದ ಒಳಗಿದ್ದವರು, ಪಕ್ಷದ ಹೊರಗಿನವರು, ಬಿರೇನ್ ಅವರನ್ನು ವಿರೋಧಿಸುತ್ತಿದ್ದವರು, ಸತ್ಯವನ್ನು ಹೇಳಲು ಪ್ರಯತ್ನಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೂ ಬೆದರಿಕೆ ಒಡ್ಡಲಾಯಿತು. ಹಲ್ಲೆ ನಡೆಸಲಾಯಿತು.
ರಾಜ್ಯದಲ್ಲಿ ಬಿರೇನ್ ಅವರನ್ನು ಪ್ರಶ್ನಿಸಲು ಧೈರ್ಯ ಮಾಡಿದ ಬಿಜೆಪಿ ನಾಯಕರ ಆಸ್ತಿಗಳನ್ನು ಧ್ವಂಸ ಮಾಡಲಾಗುತ್ತಿತ್ತು ಅಥವಾ ಅವರ ಆಸ್ತಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿತ್ತು.
ಈ ರೀತಿ ಜೀವ ಮತ್ತು ಆಸ್ತಿಯ ಭಯವನ್ನು ಸೃಷ್ಟಿಸುವ ಮೂಲಕ, ಹೊಸದಿಲ್ಲಿಯ ಬೆಂಬಲವನ್ನು ತೋರಿಸುವ ಮೂಲಕ ಬಿರೇನ್ ಸೀಂಗ್ ನಿರಾಳವಾಗಿ ಮುಂದುವರಿದಿದ್ದರು.
ಆದರೆ ಜನರ ಜೀವಗಳನ್ನು ಉಳಿಸಲು ಮಣಿಪುರದಲ್ಲಿ ಶಾಂತಿಯನ್ನು ತರಲು ಪ್ರಯತ್ನಗಳು ನಡೆದವು.
ಎಲ್ಲಾ ಬಿರೇನ್ ವಿರೋಧಿ ಪಡೆಗಳು ಒಂದಾದ ಕಾರಣ ಈಗ ಪರಿಸ್ಥಿತಿ ತಿರುವು ಪಡೆದಿದೆ. ಒಂದೆಡೆ ಭಿನ್ನಮತೀಯ ಬಿಜೆಪಿ ಶಾಸಕರು ಇತರ ಪಕ್ಷಗಳನ್ನು ತಮ್ಮ ಜೊತೆಗೂಡಿಸಿಕೊಂಡರೆ, ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿಯವರೂ ಬಿರೇನ್ ವಿರುದ್ಧ ತಿರುಗಿಬಿದ್ದರು. ಆದ್ದರಿಂದ ಈ ಬಾರಿ ಬಿಜೆಪಿ ವಿಭಿನ್ನವಾಗಿ ಕೆಲಸ ಮಾಡಬೇಕಾಯಿತು ಮತ್ತು ಬಿರೇನ್ ಅವರನ್ನು ಮನೆಗೆ ಕಳಿಸಬೇಕಾಯಿತು.
ಈಗ ಸಂಖ್ಯಾಬಲವಿಲ್ಲ, ಅವಿಶ್ವಾಸ ನಿರ್ಣಯದಲ್ಲಿ ಸೋಲಾಗುತ್ತದೆ ಎಂಬುದು ಅರ್ಥವಾಗಿತ್ತು.ಇದರೊಂದಿಗೆ, ಬಿರೇನ್ ನಿರ್ಗಮನದ ಹಿಂದಿನ ಕಾನೂನು ಅಂಶವಾದ ಇನ್ನೊಂದು ರಾಜಕೀಯೇತರ ಅಂಶ ಹೆಚ್ಚು ಕಳವಳಕಾರಿಯಾಗಿದೆ.
ಏಕೆಂದರೆ ಅವರ ವಿರುದ್ಧ ಮಾಡಲಾದ ಆರೋಪಗಳು, ಅವರ ವಿರುದ್ಧ ಬಂದಿರುವ ಟೇಪ್‌ಗಳಿಂದ ಹಿಂಸಾಚಾರವನ್ನು ಮುಖ್ಯಮಂತ್ರಿಯೇ ಪ್ರಚೋದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಟೇಪ್‌ಗಳನ್ನು ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಚಾರಣಾ ಆಯೋಗಕ್ಕೆ ಸಲ್ಲಿಸಲಾಗಿದೆ. 2024ರ ಸೆಪ್ಟಂಬರ್‌ನಲ್ಲಿ ಹೊರಬಂದ ಈ ಟೇಪ್‌ಗಳನ್ನು ಆಯೋಗಕ್ಕೆ ಹಸ್ತಾಂತರಿಸಲಾಯಿತು.
ಕಳೆದ ವಾರ, ಸುಪ್ರೀಂ ಕೋರ್ಟ್ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದಿಂದ ಮುಚ್ಚಿದ ಲಕೋಟೆಯ ವರದಿಯನ್ನು ಕೇಳಿತು.
ಈ ಟೇಪ್‌ಗಳಲ್ಲಿರುವುದು ಬಿರೇನ್ ಧ್ವನಿಯಾಗಿರುವ ಸಾಧ್ಯತೆ ಶೇ.93 ಎಂದು ಕಂಡುಕೊಳ್ಳಲಾಗಿದೆ. ಧ್ವನಿ ಅವರ ಧ್ವನಿಯೊಂದಿಗೆ ಹೊಂದಿಕೆಯಾಗುತ್ತದೆ.
ಇದು ತುಂಬಾ ಗಂಭೀರ ಪರಿಣಾಮಗಳನ್ನು ಹೊಂದಿರುವ ಟೇಪ್ ಆಗಿದೆ. ಏಕೆಂದರೆ ಈ ಟೇಪ್‌ನಲ್ಲಿರುವ ವಿಷಯವನ್ನು ಮುಚ್ಚಿದ ಬಾಗಿಲಿನ ಸಭೆಯಲ್ಲಿ ರೆಕಾರ್ಡ್ ಮಾಡಲಾಗಿದೆ.
ಬಿರೇನ್ ಸಿಂಗ್ ಸೂಚನೆಯಂತೆ ಮಣಿಪುರ ಪೊಲೀಸ್ ಪಡೆಗೆ ನಿಷೇಧಿತ ಉಗ್ರಗಾಮಿ ಗುಂಪುಗಳನ್ನು ಸೇರಿಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕುಕಿಗಳ ವಿರುದ್ಧ ಹೋರಾಡಲು ಮತ್ತು ಅವರನ್ನು ಕೊಲ್ಲಲು ನಮ್ಮ ದೇಶದ ಪೊಲೀಸ್ ಪಡೆಗೆ ನಿಷೇಧಿತ ಉಗ್ರಗಾಮಿ ಗುಂಪನ್ನು ತರಲಾಗಿದೆ.
ಅಮಿತ್ ಶಾ ಆದೇಶಗಳನ್ನು ಕೂಡ ಹೇಗೆ ಧಿಕ್ಕರಿಸಲಾಗಿದೆ ಮತ್ತು ಕುಕಿ ಪ್ರದೇಶಗಳ ಮೇಲೆ ಬಾಂಬ್‌ಗಳನ್ನು ಬೀಳಿಸಲಾಗಿದೆ ಎಂಬುದನ್ನು ಸಹ ಈ ಟೇಪ್ ಬಯಲು ಮಾಡಿದೆ. ಅವರು ಕಾನೂನನ್ನು ಉಲ್ಲಂಘಿಸಿದ್ದಾರೆ ಮಾತ್ರವಲ್ಲ, ಕೇಂದ್ರ ಗೃಹ ಸಚಿವಾಲಯವನ್ನು ನಿರ್ಲಕ್ಷಿಸಿದ್ದಾರೆ. ಇದರೊಂದಿಗೆ, ಸರಕಾರಿ ಸ್ವಾಮ್ಯದ ಶಸ್ತ್ರಾಸ್ತ್ರಗಳನ್ನು ಬಳಸಿದ ಮೈತೈ ಸಮುದಾಯವನ್ನು ಅವರು ಹೇಗೆ ರಕ್ಷಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ಈ ಟೇಪ್‌ಗಳು ನ್ಯಾಯಾಲಯದಲ್ಲಿ ನಿಜವೆಂದು ಸಾಬೀತಾದರೆ, ಇದು ಅಪರೂಪದ ಪ್ರಕರಣವಾಗಿರುತ್ತದೆ.
ಮುಖ್ಯಮಂತ್ರಿಯೊಬ್ಬರು ಜನಾಂಗೀಯ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅದನ್ನು ಅನುಮೋದಿಸುತ್ತಿದ್ದಾರೆ ಎಂದು ಕಂಡುಬಂದಿದೆ.
ಬಿರೇನ್ ಸಿಂಗ್ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. 2016ರಲ್ಲಿ ಬಿಜೆಪಿಗೆ ಸೇರಿದರು. 2017ರಲ್ಲಿ ಅವರು ಮಣಿಪುರದ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾದರು.
ಅವರು ಸರ್ವಾಧಿಕಾರಿಯಂತಿದ್ದಾರೆ ಎಂದು ಪಕ್ಷದ ಸಹೋದ್ಯೋಗಿಗಳೇ ಹೇಳುತ್ತಿದ್ದರು.
2019ರಲ್ಲಿ ಅವರು ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಟೀಕಿಸಿದ್ದ ಪತ್ರಕರ್ತ ಕೆ.ಸಿ. ವೈಕಮ್ ಅವರನ್ನು ಬಂಧಿಸಿದ್ದರು.
ಇದೆಲ್ಲದರ ಹೊರತಾಗಿಯೂ, ಬಿರೇನ್ ಸಿಂಗ್ ಎರಡನೇ ಅವಧಿಗೆ ಸ್ಪಷ್ಟ ಬಹುಮತ ಪಡೆದಿದ್ದರು. ಅವರು ಎರಡನೇ ಅವಧಿಗೆ ಪ್ರವೇಶಿಸುವ ಹೊತ್ತಿಗೆ ಅವರ ನಾಯಕತ್ವ ಶೈಲಿ ಇನ್ನಷ್ಟು ಆಕ್ರಮಣಕಾರಿಯಾಗಿತ್ತು.
ಬಿರೇನ್ ಅತಿಕ್ರಮಣದ ಹೆಸರಿನಲ್ಲಿ, ಎನ್‌ಆರ್‌ಸಿ ಹೆಸರಿನಲ್ಲಿ ಮತ್ತು ಕುಕಿಗಳು ವಿದೇಶಿಯರು ಮತ್ತು ಮ್ಯಾನ್ಮಾರ್‌ನಿಂದ ಬಂದವರು ಎಂದು ಪದೇ ಪದೇ ಹೇಳುವ ಮೂಲಕ ಅವರನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದರು ಎಂಬುದು ಕುಕಿ ಸಮುದಾಯದ ಆರೋಪ.
ಕುಕಿಗಳು ಕ್ರೂರವಾಗಿ ಹತ್ಯೆಯಾಗುತ್ತಿದ್ದರು. ಹಲ್ಲೆಗಳು ನಡೆಯುತ್ತಿದ್ದವು. ಆದರೆ ಬಿರೇನ್ ಸಿಂಗ್ ಏನನ್ನೂ ಮಾಡಲಿಲ್ಲ. ಪ್ರತಿಯಾಗಿ, ಬಿರೇನ್ ಸಶಸ್ತ್ರ ಮೂಲಭೂತವಾದಿ ಸಂಘಟನೆಗೆ ಬೆಂಬಲವಾಗಿದ್ದರು. ಕುಕಿಗಳ ವಿರುದ್ಧ ಹಿಂಸಾಚಾರ ಹರಡುತ್ತಿದ್ದರು ಎಂದು ಆರೋಪಿಸಲಾಗಿದೆ.
ರಾಜಕೀಯ ಒತ್ತಡವನ್ನು ಬದಿಗಿಟ್ಟು, ಸಾರ್ವಜನಿಕ ಅಸಮಾಧಾನವನ್ನು ನೋಡಿದರೆ, ಅದು ಕೂಡ ಸಾಕಷ್ಟು ಸ್ಪಷ್ಟವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರದ ಎರಡೂ ಸ್ಥಾನಗಳನ್ನು ಎನ್‌ಡಿಎ ಕಳೆದುಕೊಂಡಿತು. ಕಾಂಗ್ರೆಸ್ ಗೆದ್ದಿತ್ತು. ಕಾಂಗ್ರೆಸ್ ಮಣಿಪುರದಲ್ಲಿ ಎಲ್ಲಿಯೂ ಹೆಚ್ಚು ಜನಪ್ರಿಯವಾಗಿಲ್ಲ. ಆದರೆ ಜನರು ಅಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವಷ್ಟು ಬಿಜೆಪಿ ವಿರುದ್ಧ ಕೋಪಗೊಂಡಿದ್ದರು.
ರಾಜ್ಯದಲ್ಲಿ 2025ರಲ್ಲಿ ಸಾಮಾನ್ಯ ಸ್ಥಿತಿ ಮರಳುತ್ತದೆಯೆ? ಮುಂದೆ ಮಣಿಪುರದಲ್ಲಿ ಏನಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಕುಕಿ ಗುಂಪುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಕೂಡ ಕುತೂಹಲಕಾರಿ.
ಕುಕಿ ಗುಂಪಿನ ಬೇಡಿಕೆಯೆಂದರೆ, ಪ್ರತ್ಯೇಕ ಆಡಳಿತ ವಲಯ ಬೇಕು ಎಂಬುದು.
ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಇಡೀ ರಾಜ್ಯದಲ್ಲಿ ASPA ವಿಧಿಸಲಾಗುತ್ತದೆ, ಇದರಿಂದ ಏಕರೂಪದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ಆಗ ಕೇಂದ್ರ ಪಡೆಗಳು ಇಡೀ ರಾಜ್ಯದಲ್ಲಿ ಪೂರ್ವಭಾವಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಲೂಟಿ ಮಾಡಲಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರಾಜ್ಯ ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
ಕಳೆದ 20-21 ತಿಂಗಳುಗಳಲ್ಲಿ ಹಿಂಸಾಚಾರ ಎಸಗಿದವರನ್ನು ಹೇಗೆ ಶಿಕ್ಷಿಸಲಾಗುತ್ತದೆ? ಅವರ ವಿರುದ್ಧ 10,000ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. ಆದರೆ ಅವರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ತನ್ನ ಕರ್ತವ್ಯವನ್ನು ಮರೆತಿದ್ದ ಮುಖ್ಯಮಂತ್ರಿ ಈಗ ರಾಜೀನಾಮೆ ನೀಡಿದ್ದಾಗಿದೆ. ಮಣಿಪುರ ಈಗಲಾದರೂ ಸಹಜ ಸ್ಥಿತಿಗೆ ಮರಳುತ್ತದೆ ಎಂದು ಖಂಡಿತವಾಗಿಯೂ ಆಶಿಸಬಹುದು.