ಲೋಕಸಭಾ ಸ್ಪೀಕರ್ ಆಯ್ಕೆ ಬಿಜೆಪಿ ಪಾಲಿಗೆ ಕಗ್ಗಂಟಾಗಲಿದೆಯೇ?
ಜೂನ್ 26ಕ್ಕೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.
ಲೋಕಸಭಾ ಸ್ಪೀಕರ್ ಹುದ್ದೆ ವಿಚಾರ ಸಂಘರ್ಷಕ್ಕೆ ಎಡೆ ಮಾಡುವ ಸೂಚನೆಗಳು ಸಿಗುತ್ತಿವೆ.
ಬಿಜೆಪಿ ತನ್ನ ಮೈತ್ರಿಪಕ್ಷಗಳಿಗೆ ಸ್ಪೀಕರ್ ಹುದ್ದೆ ಬಿಟ್ಟುಕೊಡಲು ತಯಾರಿಲ್ಲ. ಎನ್‌ಡಿಎ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ, ಆ ಅಭ್ಯರ್ಥಿಗೆ ತನ್ನ ಬೆಂಬಲ ಎಂದೇನೋ ಟಿಡಿಪಿ ಹೇಳುತ್ತಿದೆ.
ಆದರೆ ಇಲ್ಲಿ ಸ್ಪೀಕರ್ ಹುದ್ದೆಗೆ ಅಭ್ಯರ್ಥಿ ಬಿಜೆಪಿಯಿಂದ ಆಗಲಿದ್ದಾರೆಯೇ ಟಿಡಿಪಿಯಿಂದ ಆಗಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
‘ಇಂಡಿಯಾ’ ಒಕ್ಕೂಟ ಟಿಡಿಪಿ ಅಭ್ಯರ್ಥಿಗೆ ಬೆಂಬಲವಾಗಿ ನಿಲ್ಲಲಿದೆ ಎಂಬ ವರದಿಗಳಿವೆ.
ಮೋದಿ ಸರಕಾರದಲ್ಲಿ ಕಿಂಗ್‌ಮೇಕರ್ ಆಗಿರುವ ಜೆಡಿಯು ಅಥವಾ ಟಿಡಿಪಿಗೆ ಸ್ಪೀಕರ್ ಹುದ್ದೆ ಕೊಡಬೇಕೆಂಬುದು ‘ಇಂಡಿಯಾ’ ಒಕ್ಕೂಟದ ಆಗ್ರಹವಾಗಿದೆ.
ಬಿಜೆಪಿಯ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಜೆಡಿಯು ಹೇಳಿದ್ದರೆ, ಆಡಳಿತಾರೂಢ ಮೈತ್ರಿಕೂಟದ ಎಲ್ಲ ಪಕ್ಷಗಳು ಸೇರಿ ನಿರ್ಧರಿಸಬೇಕು ಎಂಬುದು ಟಿಡಿಪಿ ಒತ್ತಾಯ.
ಸದ್ಯಕ್ಕೆ ಈ ಹುದ್ದೆಗೆ ಬಿಜೆಪಿಯಿಂದ ಆಂಧ್ರ ಬಿಜೆಪಿ ಅಧ್ಯಕ್ಷೆಯಾಗಿರುವ ಡಿ. ಪುರಂದೇಶ್ವರಿ ಮತ್ತು ಟಿಡಿಪಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಂ. ಹರೀಶ್ ಬಾಲಯೋಗಿ ಪ್ರಬಲ ಅಭ್ಯರ್ಥಿಗಳೆಂದು ಪರಿಗಣಿತರಾಗಿದ್ದಾರೆ.
ಈ ಮಧ್ಯೆ ‘ಇಂಡಿಯಾ’ ಒಕ್ಕೂಟ ಟಿಡಿಪಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದೆ. ಟಿಡಿಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೆಂಬಲಿಸುವುದಾಗಿ ಶಿವಸೇನೆ ಉದ್ಧವ್ ಬಣದ ಸಂಜಯ್ ರಾವುತ್ ಹೇಳಿದ್ದಾರೆ.
‘‘ಒಂದು ವೇಳೆ ಬಿಜೆಪಿಯೇನಾದರೂ ಸ್ಪೀಕರ್ ಹುದ್ದೆಯನ್ನು ಗಿಟ್ಟಿಸಿಕೊಂಡರೆ ಅದು ಟಿಡಿಪಿ ಮತ್ತು ಜೆಡಿಯು ಎರಡನ್ನೂ ಒಡೆಯಲಿದೆ. ಮಾತ್ರವಲ್ಲ, ಚಿರಾಗ್ ಪಾಸ್ವಾನ್ ಮತ್ತು ಜಯಂತ್ ಚೌಧರಿಯವರ ಪಕ್ಷಗಳಿಗೂ ಕಂಟಕ ತರಲಿದೆ’’ ಎಂದು ರಾವುತ್ ಹೇಳಿದ್ದಾರೆ.
‘‘ತನ್ನನ್ನು ಬೆಂಬಲಿಸಿದವರಿಗೇ ದ್ರೋಹ ಬಗೆಯುವ ಬಿಜೆಪಿ ರೀತಿಯನ್ನು ನಾವು ಕಂಡಿದ್ದೇವೆ’’ ಎಂದು ರಾವುತ್ ಹೇಳಿದ್ದಾರೆ.
‘‘ಬಿಜೆಪಿ ಸ್ಪೀಕರ್ ಹುದ್ದೆಯನ್ನು ತನ್ನದಾಗಿಸಿಕೊಂಡರೆ ಅದು ಜೆಡಿಯು ಮತ್ತು ಟಿಡಿಪಿ ಸಂಸದರನ್ನು ತನ್ನತ್ತ ಸೆಳೆಯಲು ಕುದುರೆ ವ್ಯಾಪಾರ ಶುರು ಮಾಡಲಿದೆ’’ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಕೂಡ ಹೇಳಿದ್ದಾರೆ.
ನಿಯಮದಂತೆ ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಕ್ಕೆ ಸಿಗಬೇಕು. ಕಳೆದ ಐದು ವರ್ಷಗಳಿಂದ ಡೆಪ್ಯೂಟಿ ಸ್ಪೀಕರ್ ಹುದ್ದೆ ಖಾಲಿಯೇ ಇದ್ದು, ಈ ಬಾರಿ ಅದು ತುಂಬಲಿದೆ ಎಂಬುದು ವಿಪಕ್ಷ ಒಕ್ಕೂಟದ ನಿರೀಕ್ಷೆಯಾಗಿದೆ.
ಸ್ಪೀಕರ್ ಹುದ್ದೆಗೆ ತನ್ನದೇ ಅಭ್ಯರ್ಥಿಯನ್ನು ‘ಇಂಡಿಯಾ’ ಒಕ್ಕೂಟ ಕಣಕ್ಕಿಳಿಸಲಿದೆಯೇ ಎಂಬ ಕುತೂಹಲವೂ ಮೂಡಿದೆ.
ಆದರೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಿದಲ್ಲಿ ಅದು ಸ್ಪೀಕರ್ ಹುದ್ದೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ.
ಈ ನಡುವೆ, ಹೊಸ ಸ್ಪೀಕರ್ ಅನ್ನು ಪಕ್ಷಗಳು ನಿರ್ಧರಿಸುತ್ತವೆ. ಅದರಲ್ಲಿ ತನ್ನ ಪಾತ್ರವಿಲ್ಲ ಎಂದು ನಿರ್ಗಮಿತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಮೈತ್ರಿಕೂಟದ ಪಾಲುದಾರರಿಗೆ ನೀಡಬೇಕು ಎಂಬುದು ಟಿಡಿಪಿ ಮತ್ತು ಜೆಡಿಯು ಬೇಡಿಕೆ ಕೂಡ ಆಗಿದೆ ಎನ್ನಲಾಗುತ್ತಿದೆ. ಸ್ಪೀಕರ್ ಹುದ್ದೆಗೆ ಈ ಮೈತ್ರಿಕೂಟದ ನಾಯಕರು ಬೇಡಿಕೆ ಇರಿಸುತ್ತಿರುವುದಕ್ಕೆ ಕಾರಣವೂ ಇದೆ.
ಭವಿಷ್ಯದಲ್ಲಿ ಪಕ್ಷಾಂತರವಾಗುವಂತಹ ಸಂದರ್ಭ ಬಂದಲ್ಲಿ ಸ್ಪೀಕರ್ ಪಾತ್ರವೂ ನಿರ್ಣಾಯಕವಾಗಿರುತ್ತದೆ. ಭವಿಷ್ಯದಲ್ಲಿ ಮತ್ತೆ ಸಮ್ಮಿಶ್ರ ಸರಕಾರವೂ ರಚನೆ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ ಪಕ್ಷಾಂತರಗೊಂಡವರ ಅಮಾನತು ಮಾಡುವ, ಅವರ ಅರ್ಹತೆಯನ್ನು ರದ್ದು ಮಾಡುವ ಅವಕಾಶ ಸ್ಪೀಕರ್‌ಗೆ ಇರುತ್ತದೆ. ಇದೇ ಕಾರಣಕ್ಕೆ ಈ ಉಭಯ ಪಕ್ಷಗಳ ನಾಯಕರು ಲೋಕಸಭೆಯ ಸ್ಪೀಕರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಉಪಸಭಾಪತಿ ಸ್ಥಾನವನ್ನು ವಿರೋಧ ಪಕ್ಷಗಳಿಗೆ ಹಂಚಿಕೆ ಮಾಡದಿದ್ದರೆ, ಅವು ಲೋಕಸಭೆ ಸ್ಪೀಕರ್ ಹುದ್ದೆಗೆ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ವರದಿಯೂ ಇದೆ.
ಬಿಜೆಪಿ ಸ್ಪೀಕರ್ ಹುದ್ದೆಯನ್ನು ತನ್ನ ಬಳಿಯೇ ಇಟ್ಟುಕೊಂಡು, ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಎನ್‌ಡಿಎ ಮೈತ್ರಿಪಕ್ಷಗಳಿಗೆ ನೀಡಲು ಮುಂದಾಗಿದೆ ಎಂಬ ಮಾತುಗಳಿವೆ. ಹಾಗೊಂದು ವೇಳೆ ನಡೆದರೆ, ‘ಇಂಡಿಯಾ’ ಒಕ್ಕೂಟ ಪೈಪೋಟಿಯೊಡ್ಡುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಆದರೆ ಈ ಹಿಂದಿನ ಎರಡು ಅವಧಿಗಳಲ್ಲಿ ಸ್ಪೀಕರ್ ಹುದ್ದೆಯನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಂಡಂತೆ ಈ ಬಾರಿಯೂ ಇಟ್ಟುಕೊಳ್ಳುವುದು ಅದಕ್ಕೆ ಅಷ್ಟು ಸುಲಭವಿಲ್ಲ.
‘‘ಒಕ್ಕೂಟದ ಎಲ್ಲ ಪಕ್ಷಗಳು ಸೇರಿ ಅಭ್ಯರ್ಥಿಯನ್ನು ನಿರ್ಧರಿಸಲಿ’’ ಎಂದು ಟಿಡಿಪಿ ಹೇಳಿರುವುದು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಯಾರು ಸ್ಪೀಕರ್ ಆಗಿ ಆಯ್ಕೆಯಾಗುತ್ತಾರೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿನ ರಾಜಕೀಯ ನಡೆಯೂ ನಿರ್ಧಾರವಾಗಲಿದೆ ಎಂಬುದಂತೂ ನಿಜ.