ಬುಲ್ಡೋಜರ್ ನ್ಯಾಯ ಎಂಬ ಘೋರ ಅನ್ಯಾಯ ಕೊನೆಗೊಳ್ಳುವುದೇ?
ಈ ದೇಶದಲ್ಲಿ ಸಂವಿಧಾನವಿದೆ. ಸಂವಿಧಾನ ರೂಪಿಸಿದ ಕಾನೂನುಗಳ ಆಳ್ವಿಕೆಯಿದೆ. ಜನರಿಂದ ಚುನಾಯಿತವಾದ ಸರಕಾರವಿದೆ
ಹೀಗೆ ಜನರಿಂದ ಚುನಾಯಿತವಾದ ಸರಕಾರದ ಕೆಲಸ ಜನರಿಗಾಗಿ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದೋ ಅಥವಾ ಅಧಿಕಾರ ಸಿಕ್ಕಿರುವುದನ್ನು, ಬಹುಮತ ದೊರೆತಿರುವುದನ್ನು ತನಗೆ ಬೇಕಾದುದನ್ನು ಮಾಡಲು ದುರ್ಬಳಕೆ ಮಾಡಿಕೊಳ್ಳುವುದೋ?
ಇದೆಲ್ಲದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಒಂದು ಟಿಪ್ಪಣಿಯನ್ನು ಗಮನಿಸಬೇಕಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ನಡವಳಿಕೆ ಎಂಥದು?
2014ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಬಂದಾಗ, ಪ್ರಕರಣಗಳನ್ನು ಎದುರಿಸುತ್ತಿದ್ದ ನಾಯಕರಲ್ಲಿ ಯಾರು ಬಿಜೆಪಿಗೆ ಸೇರ್ಪಡೆಯಾಗಿದ್ದರೋ ಅವರ ವಿರುದ್ಧದ ಕೇಸ್ ವಾಪಸ್ ಪಡೆಯುವ ನಿರ್ಧಾರ ಮಾಡಿತ್ತು.
ಅದೇ ರೀತಿ ಉತ್ತರ ಪ್ರದೇಶದಲ್ಲಿ 2017ರಲ್ಲಿ ಆದಿತ್ಯನಾಥ್ ಸರಕಾರ ರಚನೆಯಾದಾಗಲೂ, ಆಡಳಿತಾರೂಢ ಬಿಜೆಪಿಯನ್ನು ಸೇರಿಕೊಂಡ ನಾಯಕರ ವಿರುದ್ಧದ ಕೇಸ್‌ಗಳನ್ನು ವಾಪಸ್ ಪಡೆಯಲಾಯಿತು. ನ್ಯಾಯ ವಿಚಾರದಲ್ಲಿ ನ್ಯಾಯಾಂಗ ತೀರ್ಮಾನಿಸುವ ಮೊದಲೇ ಸರಕಾರ ತಾನೇ ತೀರ್ಪು ಕೊಡುವಂತೆ ನಡೆದುಕೊಳ್ಳುತ್ತಿರುವ ಈ ರೀತಿ ಮಾತ್ರ ವಿಲಕ್ಷಣವಾಗಿದೆ.
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ನ್ಯಾಯ ಎಂಬುದು ಬಂತು. ಯಾರ ಮೇಲೆ ತಪ್ಪಿತಸ್ಥ ಎಂಬ ಅನುಮಾನ ಇದೆಯೋ ಆತನ ಮನೆಯ ಮೇಲೆ ಬುಲ್ಡೋಜರ್ ನುಗ್ಗಿಸುವುದು ಶುರುವಾಯಿತು.
ಆರೋಪಿ ಎನ್ನಲಾದವನ ಆರೋಪ ಸಾಬೀತಾಗುವ ಮೊದಲೇ, ಆತ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸುವ ಮೊದಲೇ ಆತನ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಿಹಾಕುವ ಈ ಅನ್ಯಾಯ ಎಂಥದು?
ತಪ್ಪು ಮಾಡಿದವರ ಮನೆಗಳನ್ನೇ ಕೆಡವಿಹಾಕುವ ಯುಪಿ ಸರಕಾರದ ನಡೆ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿ ಆರೋಪಿ ಮಾತ್ರವಲ್ಲ, ಅಪರಾಧಿ ಎಂದೇ ಆದರೂ, ಆ ಕಾರಣಕ್ಕೆ ಯಾರದಾದರೂ ಮನೆಯನ್ನು ಹೇಗೆ ಕೆಡವಲು ಸಾಧ್ಯ ಎಂದು ಕೋರ್ಟ್ ಪ್ರಶ್ನಿಸಿದೆ. ಇನ್ನು ಮುಂದೆ ಹಾಗಾಗುವಂತಿಲ್ಲ ಎಂದು ಎಚ್ಚರಿಕೆ ಕೊಟ್ಟಿದೆ.
ನ್ಯಾ.ಬಿ.ಆರ್. ಗವಾಯಿ ಹಾಗೂ ನ್ಯಾ.ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಮನೆಗಳನ್ನು ಕೆಡವುವಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆಯೇ ಎಂದು ಪ್ರಶ್ನಿಸಿತು.
ಮೊದಲು ನೋಟಿಸ್ ಕೊಡಬೇಕು, ಉತ್ತರ ಕೊಡಲು ಸಮಯ ನೀಡಬೇಕು, ಕಾನೂನು ಪರಿಹಾರಗಳನ್ನು ಕಂಡುಕೊಳ್ಳಲು ಕಾಲಾವಕಾಶ ನೀಡಬೇಕು, ಬಳಿಕ ನೆಲಸಮ ಕಾರ್ಯ ನಡೆಸಬಹುದು ಎಂದು ನ್ಯಾ. ವಿಶ್ವನಾಥನ್ ಹೇಳಿದ್ದಾರೆ. ಈ ಬಗ್ಗೆ ಸಲಹೆಗಳು ಬರಲಿ. ನಾವು ದೇಶಾದ್ಯಂತ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಬಗ್ಗೆ ಹೇಳಿದ್ದರೂ ಯಾವ ಬದಲಾವಣೆಯೂ ಕಾಣುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ. ಯಾವುದೇ ರಾಜ್ಯದಲ್ಲಿ ಚುನಾಯಿತ ಸರಕಾರ ಯಾರದೋ ಮನೆಯನ್ನು ನೆಲಸಮ ಮಾಡಿಬಿಡುವಂತಿಲ್ಲ. ಹಾಗೆಂದು, ಅನಧಿಕೃತ ಕಟ್ಟಡಗಳನ್ನು ನಿರ್ಮಿಸುವವರನ್ನು, ಅತಿಕ್ರಮಣಕಾರಿಗಳನ್ನು ಸುಪ್ರೀಂ ಕೋರ್ಟ್ ರಕ್ಷಿಸುವುದಿಲ್ಲ ಎಂದು ಪೀಠ ಹೇಳಿತು.
ಈ ಸನ್ನಿವೇಶದ ಲಾಭವನ್ನು ಯಾರೂ ಪಡೆಯಬಾರದು. ತಂದೆಗೆ ಪುಂಡಾಟಿಕೆಯ ಮಗ ಇರಬಹುದು. ಆದರೆ ಈ ಕಾರಣಕ್ಕಾಗಿ ಮನೆಯನ್ನು ನೆಲಸಮ ಮಾಡಿದರೆ ಅದು ಸರಿಯಾದ ಕ್ರಮವಲ್ಲ ಎಂದು ನ್ಯಾ. ವಿಶ್ವನಾಥನ್ ಹೇಳಿದ್ದಾರೆ.
ಬುಲ್ಡೋಜರ್ ಹಾಯಿಸಿ ಮನೆಗಳನ್ನೇ ನೆಲಸಮ ಮಾಡುವ ಈ ರೀತಿ 2014ರ ನಂತರ ಕಾಣಿಸಿಕೊಳ್ಳತೊಡಗಿತ್ತು. ಇದು ಸರಕಾರದ ತಾಕತ್ತು ಏನೆಂಬುದು ಗೊತ್ತಾಗಲಿ ಎಂಬ ಧೋರಣೆಯಿಂದ ಶುರುವಾದದ್ದಾಗಿತ್ತು.
ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ಹರ್ಯಾಣದಲ್ಲಿ, ಮಹಾರಾಷ್ಟ್ರದಲ್ಲೂ ಕಾಣಿಸಿತ್ತು. ನಾವು ಜನತೆಯಿಂದ ಆಯ್ಕೆಯಾದವರು, ಹಾಗಾಗಿ ನಾವು ಏನನ್ನೂ ಮಾಡಬಲ್ಲೆವು ಎಂಬ ನಿಲುವು ಅಂಥ ದಾಳಿಗಳಲ್ಲಿ ಇತ್ತು.
ಕೇಂದ್ರದಲ್ಲಿ ಕಾನೂನು ಮಂತ್ರಿಯಾಗಿದ್ದ ಕಿರಣ್ ರಿಜಿಜು ಅಂತೂ ನ್ಯಾಯಾಂಗದ ವಿಚಾರವಾಗಿಯೇ ಏನೇನೋ ಮಾತಾಡುವ ಮಟ್ಟಕ್ಕೆ ಹೋಗಿದ್ದರು. ಕಡೆಗೆ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಜನತೆ ತಮ್ಮನ್ನು ಆರಿಸಿದೆ ಎಂಬ ಕಾರಣಕ್ಕಾಗಿಯೇ ನಾವು ನ್ಯಾಯಾಂಗದ ಪಾತ್ರವನ್ನೂ ನಿರ್ವಹಿಸಬಹುದು, ಪೊಲೀಸರ ಪಾತ್ರವನ್ನೂ ನಿರ್ವಹಿಸಬಹುದು ಎಂಬ ಮದ ತಲೆಗೇರಿದ ರೀತಿಯ ನಡವಳಿಕೆ ಅದಾಗಿತ್ತು ಎಂದು ಹೇಳುತ್ತಾರೆ ಖ್ಯಾತ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೇಯಿ.
ಯುಪಿಯಿಂದ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವೆಡೆ ಇಂಥದೇ ಧೋರಣೆಯ ಪ್ರಭಾವ ಕಂಡುಬಂತು. ಇಂಥ ಕಾರ್ಯಾಚರಣೆಗಳು ಸರಿಯಲ್ಲ ಎಂದು ನ್ಯಾಯಾಲಯವೇ ಹೇಳಬೇಕಾಗಿ ಬಂತು.
2017ರ ನಂತರ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲೆಲ್ಲ ಕಂಡ ಈ ವಿದ್ಯಮಾನ, ಹಲವಾರು ಕಟ್ಟಡಗಳ ನೆಲಸಮಕ್ಕೆ ಕಾರಣವಾಗಿದೆ. ಇವರ ಲೆಕ್ಕದಲ್ಲಿ ನ್ಯಾಯಕ್ಕಾಗಿ ಕಾಯುವ ಪ್ರಶ್ನೆಯೇ ಇಲ್ಲ. ತಮಗೆ ಬೇಕಾದವರಲ್ಲ ಎಂಬುದೊಂದು ಕಂಡರೆ ಸಾಕು, ಒಂದು ನೆಪ ಇಟ್ಟುಕೊಂಡು ಉಳಿದ ಪ್ರಕ್ರಿಯೆ ಮುಗಿಸಿಹಾಕಲು ಸರಕಾರ ತುದಿಗಾಲ ಮೇಲೆ ನಿಂತಿರುತ್ತದೆ. ಕಟ್ಟಡ ನೆಲಸಮ ಮಾಡಿಸಿದ್ದನ್ನೇ ತನ್ನ ದೊಡ್ಡ ಸಾಧನೆ ಎಂದು ಸರಕಾರ ಬೀಗುತ್ತದೆ.
ಕಮಲನಾಥ್ ಕಾಲದಲ್ಲೂ ಇಂಥದ್ದು ಪ್ರಾಯೋಗಿಕ ಎನ್ನುವಂತೆ ನಡೆಯಿತು. ಆದರೆ ಶಿವರಾಜ್ ಸಿಂಗ್ ಚೌಹಾಣ್ ಕಾಲದಲ್ಲಿ ಮಾತ್ರ ಇದನ್ನು ಮಾಡೆಲ್ ಎಂಬಂತೆ ಬಳಸುವುದು ಶುರುವಾಗಿತ್ತು.
ಮಧ್ಯಪ್ರದೇಶದಲ್ಲಿ ಇಂಥ ಸಾವಿರ ಪ್ರಕರಣಗಳು ಆಗಿವೆ.
ಉತ್ತರ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು.
ಒಂದೊಂದು ಕಡೆಯಂತೂ ಒಟ್ಟೊಟ್ಟಿಗೇ ಹತ್ತು ಹನ್ನೆರಡು ಮನೆಗಳನ್ನು ನೆಲಸಮಗೊಳಿಸಿ ಒಂದೇ ಸಲಕ್ಕೆ ಹಲವು ಕುಟುಂಬಗಳನ್ನೇ ಬೀದಿಯಲ್ಲಿ ನಿಲ್ಲಿಸಿದ್ದೂ ನಡೆದಿದೆ.ಅಂಥ ಎಲ್ಲ ಕ್ರಮಗಳ ಬಗ್ಗೆ ಕಡೆಗೆ ಸುಪ್ರೀಂ ಕೋರ್ಟ್ ಹೇಳಬೇಕಾಯಿತು.
ಸುಪ್ರೀಂ ಕೋರ್ಟ್ ಸಂವಿಧಾನವನ್ನು ವ್ಯಾಖ್ಯಾನಿಸುವ ಮಹತ್ವದ ಕೆಲಸವನ್ನು ಮಾಡುತ್ತದೆ.
ದೇಶದಲ್ಲಿ ಕಾನೂನಿನ ಆಳ್ವಿಕೆ ಇದ್ದರೆ ಪೊಲೀಸರ ಕೆಲಸವೇನು, ನ್ಯಾಯಾಂಗದ ಕೆಲಸವೇನು, ಮುಖ್ಯಮಂತ್ರಿಯ ಕೆಲಸವೇನು ಇವೆಲ್ಲವೂ ಎಲ್ಲರಿಗೂ ಗೊತ್ತಿರಬೇಕಲ್ಲವೆ?
ಎಲ್ಲರೂ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಳ್ಳುತ್ತಾರೆ.
ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಭಾಗವಾಗಿಯೇ ಈ ಬುಲ್ಡೋಜರ್ ಕಾರ್ಯಾಚರಣೆಗಳು ನಡೆಯುತ್ತವೆ.
ಹಾಗಾದರೆ, ಚುನಾಯಿತ ಸರಕಾರವೊಂದು ತನ್ನ ತಾಕತ್ತು ತೋರಿಸುವುದು, ಕಾನೂನಾತ್ಮಕವಾಗಿ ನಡೆದುಕೊಳ್ಳುವ ಮೂಲಕವೋ ಅಥವಾ ಕಾನೂನುಗಳನ್ನೇ ಉಲ್ಲಂಘಿಸಿ, ತಾನೇ ಬೇಕಾದಂತೆ ಕಾನೂನು ಮಾಡಿಕೊಂಡು ದರ್ಪ ಚಲಾಯಿಸುವ ಮೂಲಕವೋ?
ಸಮುದಾಯವೊಂದರ ಮೇಲೆ ಇನ್ನಿಲ್ಲದ ಒತ್ತಡ ಹಾಕಿ, ಭಯಗೊಳಿಸಿ, ಅದರಿಂದ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಒಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ತಂತ್ರವೇ ಇದು?
ಇತರರ ಮನೆ ಮೇಲೆ ಬುಲ್ಡೋಜರ್ ಹರಿಸುವಾಗ ಸಂಭ್ರಮ ಪಟ್ಟವರು, ತಮ್ಮ ಮನೆ ಮುಂದೆ ಬುಲ್ಡೋಜರ್ ಬಂದು ನಿಂತಾಗ ಕಣ್ಣೀರು ಹಾಕುವ ವಿಡಿಯೋಗಳನ್ನು ನಾವೆಲ್ಲರೂ ಕಂಡಿದ್ದೇವೆ.
‘‘ಸೇಡು ತೀರಿಸಿಕೊಳ್ಳುವುದನ್ನು ಯಾವತ್ತಿಗೂ ನ್ಯಾಯ ಎಂದು ಕರೆಯಲು ಸಾಧ್ಯವಿಲ್ಲ. ಯಾವುದೇ ರೀತಿಯ ವಿಚಾರಣೆ ನಡೆಯದೆ, ಜನರ ಮನೆ ಮೇಲೆ ಬುಲ್ಡೋಜರ್ ಹರಿಸಿ ಬಿಡುವುದನ್ನು ನ್ಯಾಯ ಎಂದು ಕರೆಯಲು ಸಾಧ್ಯವಿಲ್ಲ. ಅದು ಸೇಡು ಮಾತ್ರ’’ ಎಂದು ಹೇಳುತ್ತಾರೆ ಹಿರಿಯ ಕಾನೂನು ತಜ್ಞ ಫೈಝಾನ್ ಮುಸ್ತಫಾ.
ಈ ದೇಶದಲ್ಲಿ ಪೊಲೀಸ್ ವ್ಯವಸ್ಥೆಯ ಉದ್ದೇಶ, ನ್ಯಾಯಾಂಗದ ಪಾತ್ರ ಮತ್ತು ಈ ದೇಶದಲ್ಲಿ ಸುಪ್ರೀಂ ಕೋರ್ಟ್‌ನ ಅಗತ್ಯ ಮರೆತು ಒಂದು ಸರಕಾರ ಎಲ್ಲವನ್ನೂ ತಾನೇ ಮಾಡುತ್ತೇನೆ ಎಂದು ಹೊರಡುವಲ್ಲಿನ ನಡೆ ಬುಲ್ಡೋಜರ್‌ಗಿಂತಲೂ ಅಪಾಯಕಾರಿಯಲ್ಲವೆ?