ರಾಹುಲ್ ಮನವಿಗೆ ಪ್ರಧಾನಿ ಸ್ಪಂದಿಸಿಯಾರೇ?
ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಮೂರನೇ ಭೇಟಿ
‘‘ನಾನು ನಿಮ್ಮ ಸೋದರನಾಗಿ ಬಂದಿದ್ದೇನೆ...’’
ಹೀಗೆಂದು ಮಣಿಪುರದ ಹಿಂಸಾಗ್ರಸ್ತ ಜನರ ಕೈ ಹಿಡಿದು ಭರವಸೆ ತುಂಬಿದ್ದಾರೆ ರಾಹುಲ್ ಗಾಂಧಿ.
ಯಾವ ಕೆಲಸವನ್ನು ಪ್ರಧಾನಿ ಮೋದಿ ಯಾವತ್ತೋ ಮಾಡಬೇಕಿತ್ತೋ ಅದನ್ನು ರಾಹುಲ್ ಮಾಡುತ್ತಾ ಇದ್ದಾರೆ.
ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ, ಅವರಿಗೆ ಧೈರ್ಯ ತುಂಬುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಆ ಕೆಲಸವನ್ನು ರಾಹುಲ್ ಮಾಡುತ್ತಿದ್ದಾರೆ.
ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ನೀಡಿದರು.
ಮಣಿಪುರದಲ್ಲಿ ಹಿಂಸಾಚಾರ ಶುರುವಾದ ಬಳಿಕ ಇದು ಅವರ ಮೂರನೇ ಭೇಟಿಯಾಗಿದೆ.
ಅವರು ಅಲ್ಲಿಗೆ ಹೋಗುವಾಗಲೂ ಅಲ್ಲಿ ಹಿಂಸೆ, ಗುಂಡು ಹಾರಾಟ ಇತ್ಯಾದಿ ನಡೆದಿದೆ. ಅಂದರೆ ಒಂದು ವರ್ಷದಿಂದಲೂ ಆ ರಾಜ್ಯದ ಜನ ಹಿಂಸೆಯ ನೆರಳಿನಲ್ಲೇ ದಿನ ದೂಡುತ್ತಿದ್ದಾರೆ. ಆದರೆ ಅಲ್ಲಿನ ಸರಕಾರ, ಸಿಎಂ ಎಲ್ಲರೂ ಹಾಗೇ ಅಧಿಕಾರ ಅನುಭವಿಸುತ್ತಾ ಹಾಯಾಗಿದ್ದಾರೆ.
ಈಗಲಾದರೂ ಮಣಿಪುರಕ್ಕೆ ಬನ್ನಿ ಎಂದು ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದಾರೆ ರಾಹುಲ್ ಗಾಂಧಿ. ಒಂದು ವರ್ಷ ಎರಡು ತಿಂಗಳಿಂದ ಅಲ್ಲಿಗೆ ಒಮ್ಮೆಯೂ ಹೋಗದ ಪ್ರಧಾನಿ ಈಗಲಾದರೂ ಹೋಗುತ್ತಾರೆಯೇ?
ಇದೇಕೆ ಮಣಿಪುರಕ್ಕೆ ಇಷ್ಟು ದೊಡ್ಡ ಶಿಕ್ಷೆ? ಯಾಕೆ ಆ ರಾಜ್ಯದ ಜೊತೆ ಇಷ್ಟು ಭೇದಭಾವ?
ಈ ಬಾರಿಯ ರಾಹುಲ್ ಭೇಟಿಗೆ ವಿಶೇಷ ಮಹತ್ವವಿದೆ. ಅವರಲ್ಲಿಗೆ ಕೇವಲ ಕಾಂಗ್ರೆಸ್ ನಾಯಕರಾಗಿ ಹೋಗಿಲ್ಲ.
ಅವರೀಗ ದೇಶದ ವಿಪಕ್ಷ ನಾಯಕ. ಹಾಗಾಗಿ ರಾಹುಲ್ ರ ಈ ಭೇಟಿಗೆ ಭಾರೀ ಮಹತ್ವವಿದೆ. ಇಡೀ ದೇಶ ಹಾಗೂ ಭಾರತ ಸರಕಾರ ಕೂಡಾ ರಾಹುಲ್ ಭೇಟಿಯನ್ನು ಗಮನಿಸುತ್ತಿದೆ.
ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ರಾಹುಲ್, ‘‘ನಾನು ನಿಮ್ಮ ಸಹೋದರನಾಗಿ ಇಲ್ಲಿಗೆ ಬಂದಿದ್ದೇನೆ, ಮಣಿಪುರದಲ್ಲಿ ಶಾಂತಿಯನ್ನು ಮರಳಿಸುವುದಕ್ಕಾಗಿ ನಾನು ನಿಮ್ಮೊಂದಿಗೆ ಕೈಜೋಡಿಸಬಯಸುತ್ತೇನೆ’’ ಎಂದರು.
ಅದಕ್ಕೂ ಮೊದಲು ಅವರು ರಾಜ್ಯಪಾಲೆ ಅನಸೂಯಾ ಉಯಿಕೆ ಅವರನ್ನು ಭೇಟಿ ಮಾಡಿದ್ದರು.
ಜನರ ಕಷ್ಟ ಆಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಇಲ್ಲಿಗೆ ಮೂರನೇ ಬಾರಿಗೆ ಬಂದಿದ್ದೇನೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿರಬಹುದು ಎಂದುಕೊಂಡಿದ್ದೆ. ಆದರೆ ಇಲ್ಲಿ ನೋಡಿದ ಬಳಿಕ ನಿರಾಸೆಯಾಗಿದೆ’’ ಎಂದರು.
‘‘ಶಾಂತಿ ಮರುಕಳಿಸುವುದು ಈಗಿನ ಅಗತ್ಯವಾಗಿದೆ. ಹಿಂಸಾಚಾರ ಎಲ್ಲರಿಗೂ ನೋವು ತರುತ್ತದೆ. ಸಾವಿರಾರು ಕುಟುಂಬಗಳು ನಷ್ಟ ಅನುಭವಿಸಿವೆ. ರಾಜ್ಯ ಸಂಪೂರ್ಣವಾಗಿ ಎರಡು ಹೋಳಾಗಿದೆ. ಇದು ಪ್ರತಿಯೊಬ್ಬರ ದುರಂತವಾಗಿದೆ ಎಂದರು. ಇಲ್ಲಿ ಶಾಂತಿ ನೆಲೆಸಲು ಕಾಂಗ್ರೆಸ್ ಪಕ್ಷ ಏನು ಬೇಕಾದರೂ ಮಾಡಲು ಸಿದ್ಧ. ನಾವು ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದೇವೆ ಮತ್ತು ನಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಲು ನಾವು ಬಯಸುತ್ತೇವೆ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ’’ ಎಂದು ರಾಹುಲ್ ಹೇಳಿದರು.
ಇಲ್ಲಿ ನಡೆದಿರುವ ಪ್ರಗತಿ ನಮಗೆ ತೃಪ್ತಿ ತಂದಿಲ್ಲ ಎಂದರು.
‘‘ಈ ವಿಷಯವನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ, ಅದು ನನ್ನ ಉದ್ದೇಶವಲ್ಲ’’ ಎಂದು ಹೇಳಿದರು.
‘‘ನಾನು ಜನರ ಮಾತುಗಳನ್ನು ಕೇಳಲು, ಅವರಲ್ಲಿ ವಿಶ್ವಾಸ ಮೂಡಿಸಲು ಮತ್ತು ವಿಪಕ್ಷದಲ್ಲಿರುವವನಾಗಿ ಸರಕಾರದ ಮೇಲೆ ಒತ್ತಡ ಹೇರುವುದಕ್ಕೆ ಪ್ರಯತ್ನಿಸಲು ಇಲ್ಲಿಗೆ ಬಂದಿದ್ದೇನೆ’’ ಎಂದರು.
ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
‘‘ಪ್ರಧಾನಿ ಇಲ್ಲಿಗೆ ಬರುವುದು, ಮಣಿಪುರದ ಜನರ ಕಷ್ಟ ಆಲಿಸುವುದು, ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಒಂದೆರಡು ದಿನ ಬಿಡುವು ಮಾಡಿಕೊಂಡು ಮಣಿಪುರದ ಜನತೆಗೆ ಸಾಂತ್ವನ ಹೇಳಲು ಬರಬೇಕು’’ ಎಂದರು.
ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ದಿನಗಟ್ಟಲೆ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದರು.
ಆಮೇಲೆ ಒಂದು ವರ್ಷ ಎರಡು ತಿಂಗಳಲ್ಲಿ ಪ್ರಧಾನಿ ಮೋದಿ ಬಹುಶಃ ಭೇಟಿ ನೀಡದ ಭಾರತದ ರಾಜ್ಯಗಳೇ ಇಲ್ಲ. ಚುನಾವಣಾ ಪ್ರಚಾರದಲ್ಲಂತೂ ದೇಶದ ಮೂಲೆಮೂಲೆಗೂ ಹೋಗಿ ಬಂದರು ಪ್ರಧಾನಿ ಮೋದಿ.
ಈ ನಡುವೆ ಹಲವು ಬಾರಿ ವಿದೇಶ ಪ್ರವಾಸಕ್ಕೂ ಹೋದರು. ಈಗ ಮೂರನೇ ಬಾರಿ ಪ್ರಧಾನಿಯಾದ ಮೇಲೆ ಮತ್ತೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ.
ಈ ಅವಧಿಯಲ್ಲಿ ಅವರು ಅದೆಷ್ಟೋ ಗಣ್ಯರ ಮದುವೆಗಳಿಗೆ, ಇನ್ನಿತರ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿದ್ದಾರೆ. ಹತ್ತು ಹಲವು ಕ್ರಿಕೆಟಿಗರು, ನಟರು, ಉದ್ಯಮಿಗಳನ್ನು ಭೇಟಿಯಾಗಿದ್ದಾರೆ. ಅದೆಷ್ಟೋ ಸೆಲೆಬ್ರಿಟಿಗಳಿಗೆ ಶುಭಾಶಯ, ಅಭಿನಂದನೆ ಕೋರಿ ಸಂದೇಶ ಪ್ರಕಟಿಸಿದ್ದಾರೆ.
ಆದರೆ ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಒಂದೇ ಒಂದು ಬಾರಿ ಪ್ರಧಾನಿ ಮಣಿಪುರಕ್ಕೆ ಹೋಗಲೇ ಇಲ್ಲ.
ಅಷ್ಟಕ್ಕೂ ಅಲ್ಲಿರುವುದು ಅವರದೇ ಪಕ್ಷದ ಸರಕಾರ.
ಇದಕ್ಕಿಂತ ಘೋರ ತಾತ್ಸಾರ ಒಬ್ಬ ಪ್ರಧಾನಿ ಒಂದು ರಾಜ್ಯದ ಬಗ್ಗೆ ತೋರಿಸಲು ಸಾಧ್ಯವೇ?
ಇದು ರಾಜ್ಯಕ್ಕೆ ರಾಹುಲ್ ಅವರ ಮೂರನೇ ಭೇಟಿಯಾಗಿತ್ತು.
ಹಿಂಸಾಚಾರ ಶುರುವಾದ ಸುಮಾರು ಎರಡು ತಿಂಗಳ ನಂತರ ಅವರು ಮೊದಲ ಸಲ ಜನಾಂಗೀಯ ಕಲಹ ಪೀಡಿತ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರಕ್ಕೆ ಭೇಟಿ ನೀಡಿದ್ದರು.
ಅದಾದ ಬಳಿಕ ‘ಭಾರತ ಜೋಡೊ ಯಾತ್ರೆ’ಯ ಎರಡನೇ ಹಂತದಲ್ಲಿ ಮಣಿಪುರಕ್ಕೆ ಬಂದಿದ್ದರು.
ಮಣಿಪುರದಿಂದಲೇ ಅವರ ‘ಭಾರತ ಜೋಡೊ ನ್ಯಾಯ ಯಾತ್ರೆ’ ಆರಂಭವಾಗಿತ್ತು.
ಈಗ ಮೂರನೇ ಭೇಟಿಯ ವೇಳೆಯಲ್ಲಿಯೂ ಮಣಿಪುರ ಶಾಂತವಾಗಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ, ರಾಹುಲ್ ಗಾಂಧಿ ಮಣಿಪುರದ ಜಿರಿಬಾಮ್ ಜಿಲ್ಲೆಗೆ ತಲುಪುವ ಕೆಲವೇ ತಾಸುಗಳ ಮೊದಲು ಅಲ್ಲಿ ಗುಂಡಿನ ದಾಳಿ ನಡೆದಿತ್ತು.
ಜಿರಿಬಾಮ್ ಮತ್ತು ತಮೆಂಗ್ಲಾಂಗ್ ಜಿಲ್ಲೆಗಳ ಗಡಿಯಲ್ಲಿರುವ ಫೈಟೋಲ್ ಗ್ರಾಮದ ಬಳಿ ಈ ಗುಂಡಿನ ದಾಳಿ ನಡೆದಿತ್ತು.
ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರನ್ನು ಬಂಧಿಸಿ ಮಣಿಪುರ ಪೊಲೀಸರಿಗೆ ಹಸ್ತಾಂತರಿಸಿದ್ದಾಗಿ ವರದಿಯಾಗಿದೆ.
ಅದರ ಬೆನ್ನಲ್ಲೇ ಜಿಲ್ಲೆಯಲ್ಲಿ ಕುಕಿ-ಜೊ ಮತ್ತು ಮೈತೈಗಳ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿರುವುದಾಗಿ ಭದ್ರತಾ ಮೂಲಗಳು ಹೇಳಿದ್ದಾಗಿ ತಿಳಿದುಬಂದಿದೆ.
ರಾಹುಲ್ ವಿಪಕ್ಷ ನಾಯಕರಾಗಿ ಮಣಿಪುರ ಭೇಟಿಗೆ ಹೋಗಿರುವುದು ಬಿಜೆಪಿಯ ನಿದ್ದೆಗೆಡಿಸಿದೆ.
ಪ್ರಧಾನಿಯಾಗಿದ್ದು ಮೋದಿಯವರಾದರೂ, ದೇಶ ಸುತ್ತಿ ಸಂತ್ರಸ್ತರನ್ನು ಭೇಟಿಯಾಗುತ್ತಾ ಇರುವುದು ರಾಹುಲ್ ಗಾಂಧಿ. ಸಾಲದ್ದಕ್ಕೆ ರಾಹುಲ್‌ಗೀಗ ಅಧಿಕೃತ ಸ್ಥಾನಮಾನವೂ ಇದೆ. ಅವರು ಹೋದಲ್ಲಿ ಸರಕಾರ, ರಾಜ್ಯಪಾಲರು ಅವರನ್ನು ಭೇಟಿಯಾಗಬೇಕು. ಅವರ ಮಾತು ಆಲಿಸಬೇಕು.
ಇದು ಬಿಜೆಪಿಯಲ್ಲಿ ತಳಮಳ ತಂದಿದೆ.
ಯಥಾ ಪ್ರಕಾರ ಮಣಿಪುರ ಸಂಘರ್ಷಕ್ಕೆ ಕಾಂಗ್ರೆಸ್ ಅನ್ನೇ ಹೊಣೆ ಮಾಡುವ ಅದರ ಚಾಳಿಯೂ ಮುಂದುವರಿದಿದೆ.
ಆದರೆ ರಾಹುಲ್ ಅವರ ಪ್ರಾಮಾಣಿಕ ಕಳಕಳಿಯನ್ನು ಗುರುತಿಸುವುದು ಬಿಜೆಪಿ ನಾಯಕರಿಗೆ ಬೇಡವಾಗಿದೆ. ಯಾಕೆಂದರೆ ಅವರಾರಿಗೂ ಮಣಿಪುರ ವಿಚಾರದಲ್ಲಿ ಕಳಕಳಿ ಇಲ್ಲ. ಅವರಿಗೆ ಸಂಘರ್ಷ ಪೀಡಿತ ಮಣಿಪುರದಿಂದಲೇ ಲಾಭ ಎನ್ನುವಂಥ ಸ್ಥಿತಿಯಿದೆ.
ಆದರೆ ಬಿಜೆಪಿಯ ಇಂತಹ ರಾಜಕೀಯದ ನಡುವೆ ಮಣಿಪುರದ ಜನರ ಸ್ಥಿತಿ ಮಾತ್ರ ಅತಂತ್ರವಾಗಿದೆ. ಅವರ ಈ ಸ್ಥಿತಿ ಇನ್ನೂ ಎಷ್ಟು ಕಾಲ ಹೀಗೇ ಮುಂದುವರಿಯುತ್ತದೊ ಗೊತ್ತಿಲ್ಲ.
ಯಾಕಾಗಿ ಅವರು ಈ ಶಿಕ್ಷೆ ಅನುಭವಿಸಬೇಕಾಗಿದೆ? ಅವರ ಬದುಕು ಮತ್ತೆ ಹಳಿಗೆ ಬರುವುದು ಬಿಜೆಪಿಗೆ ಏಕೆ ಬೇಕಾಗಿಲ್ಲ?
ಅವರದೇ ಸರಕಾರ ಮಣಿಪುರದಲ್ಲಿದ್ದು ಮಾಡುತ್ತಿರುವುದೇನು?
ಒಂದು ಅಸಹ್ಯಕರ ರಾಜಕೀಯ ಎಂತಹ ಸ್ಥಿತಿಯನ್ನು ತಂದಿಡಬಲ್ಲುದು? ಮತ್ತದು ಅಮಾಯಕ ಜನರ ಪಾಲಿಗೆ ಘೋರ ಶಿಕ್ಷೆಯಾಗಿ ಕಾಡಬಹುದು ಎಂಬುದಕ್ಕೆ ಮಣಿಪುರದ ಇವತ್ತಿನ ದುರವಸ್ಥೆ ಕಟುವಾದ ಉದಾಹರಣೆಯಾಗಿದೆ.