ರಾಜ್ಯ ಬಜೆಟ್ ನಲ್ಲಿ ಕೊಡಗಿನ ಸಮಸ್ಯೆಗಳಿಗೆ ಸಿಗಲಿದೆಯೇ ಪರಿಹಾರ?
ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ರಾಜ್ಯ ಮುಂಗಡಪತ್ರದ ಮೇಲೆ ಕೊಡಗಿನ ಜನರು ಈ ಬಾರಿ ಹತ್ತಾರು ನಿರೀಕ್ಷೆಗಳು ಇಟ್ಟುಕೊಂಡಿದ್ದಾರೆ.
ಕಳೆದ ವರ್ಷ ಜುಲೈ 7ರಂದು ಮಂಡಿಸಿದ್ದ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆಯಾಗಬಹುದೆಂಬ ನಿರೀಕ್ಷೆಗಳು ಇತ್ತು. ಅಲ್ಲದೆ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿರುವುದರಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬಹುದೆಂದು ಊಹಿಸಲಾಗಿತ್ತು. ಆದರೆ, ಯಾವುದೇ ಯೋಜನೆಗಳು ಜಿಲ್ಲೆಗೆ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿರಲಿಲ್ಲ.
ಈ ಬಾರಿಯ ಬಜೆಟ್ ನಲ್ಲಿ ಕೊಡಗಿಗೆ ವಿಶೇಷ ಅನುದಾನ ಹಾಗೂ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಗಳಿವೆ. ಅದಲ್ಲದೆ ಕೊಡಗಿನ ದಶಕಗಳ ಸಮಸ್ಯೆಗಳಿಗೆ ಬಜೆಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಪರಿಹಾರ ನೀಡಲಿದೆಯೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಕಾಫಿ ಬೆಳೆಗಾರರಿಗೆ ಸಿಗುತ್ತಾ ಶುಭ ಸುದ್ದಿ?: ಕೊಡಗು ಕೃಷಿ ಪ್ರಧಾನ ಜಿಲ್ಲೆ.ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ ಕಾಫಿ. ಆದರೆ, ಕಳೆದ ಹಲವು ದಶಕಗಳಿಂದ ಬೆಲೆ ಕುಸಿತ, ಅತಿವೃಷ್ಟಿ, ಅಕಾಲಿಕ ಮಳೆ, ಪ್ರಕೃತಿ ವಿಕೋಪ ಹೀಗೆ ನಾನಾ ಸಮಸ್ಯೆಗಳಿಗೆ ಸಿಲುಕಿ ಕಾಫಿ ಬೆಳೆಗಾರರು ನರಳುತ್ತಿದ್ದಾರೆ. ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ದಶಕಗಳ ಬೇಡಿಕೆಯಾದ ಕಾಫಿ ತೋಟಗಳಿಗೆ 10 ಎಚ್.ಪಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಪೂರೈಕೆ ಕನಸು ಕೇವಲ ಬೇಡಿಕೆಯಾಗಿ ಉಳಿದಿವೆ. ಸರಕಾರ ಬದಲಾಗುತ್ತಾ ಬಂದರೂ ಕಾಫಿ ಬೆಳೆಗಾರರ ಬೇಡಿಕೆಗೆ ಯಾರೂ ಇದುವರೆಗೆ ಸ್ಪಂದಿಸಿಲ್ಲ.
ಜ.25ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಫಿ ಬೆಳೆಗಾರರಿಗೆ 10 ಎಚ್.ಪಿ. ಪಂಪ್ ಸೆಟ್ ಉಚಿತ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ 10 ಎಚ್.ಪಿ. ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಪೂರೈಕೆ ಘೋಷಣೆಯಾಗಬಹುದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಕಾಫಿ ಬೆಳಗಾರರು ಇದ್ದಾರೆ.
ರಸ್ತೆಗಳ ಅಭಿವೃದ್ಧಿಗೆ ಬೇಕಿದೆ ವಿಶೇಷ ಅನುದಾನ: ಕೊಡಗು ಜಿಲ್ಲೆಯಲ್ಲಿ ಇಂದಿಗೂ ರಸ್ತೆಗಳು ಗುಂಡಿಯಿಂದ ಮುಕ್ತಿ ಸಿಕ್ಕಿಲ್ಲ. ಪ್ರತೀ ವರ್ಷ ಸುರಿಯುವ ಮಳೆಯಿಂದ ರಸ್ತೆಗಳ ಹದಗೆಡುತ್ತಿವೆ. ಇಂದಿಗೂ ಗ್ರಾಮೀಣ ಭಾಗದ ಜನರು ಗುಂಡಿಗಳಿಂದ ತುಂಬಿದ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಪ್ರಾಕೃತಿಕ ವಿಕೋಪ,ಅತಿಯಾದ ಮಳೆಯಿಂದ ಜಿಲ್ಲೆಯಲ್ಲಿ ರಸ್ತೆಗಳ ಡಾಂಬರು ಕಿತ್ತು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿವೆ.