ಹೆಣ್ಣು ಸಂಕುಲದ ಘನತೆಯ ಬದುಕಿನ ಸಂಕಲ್ಪದೊಂದಿಗೆ...
ಜನವರಿ 6 ಮತ್ತು 7ರಂದು ದಾವಣಗೆರೆಯಲ್ಲಿ ನಡೆದ ‘ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ’ಯ 7ನೆಯ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಆಡಿದ ಮಾತುಗಳ ಬರಹ ರೂಪದ ಆಯ್ದ ಭಾಗ
ನಾವಿಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದಾಟಿ ಮುಂದೆ ಹೋಗುತ್ತಿದ್ದೇವೆ. ಈ ಎಪ್ಪತ್ತೈದೂ ವರ್ಷಗಳಲ್ಲಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಾವು ರೂಪಿಸಿಕೊಂಡಿರುವ ಸಂವಿಧಾನಕ್ಕೆ ನಿಜವಾಗಿಯೂ ಹತ್ತಿರವಾಗಿದ್ದೇವೆಯೇ ಅಥವಾ ದೂರವಾಗುತ್ತಿ ದ್ದೇವೆಯೇ ಎನ್ನುವ ಪ್ರಶ್ನೆ ನಮಗಿಂದು ಮುಖ್ಯವಾಗಬೇಕು. ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅದೂ ಹೆಣ್ಣನ್ನೂ ಒಳಗೊಂಡು! ಇದನ್ನು ನಮ್ಮ ವ್ಯವಸ್ಥೆಗೆ, ಸಮಾಜಕ್ಕೆ ನೆನಪಿಸಬೇಕಾದ ಅನಿವಾರ್ಯತೆಯೇ ವಿಷಾದನೀಯ. ಹೀಗಾಗಿಯೇ ನಿಜವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ನಾವಿದ್ದೇ ವೆಯೇ? ಬಹುತ್ವ ಭಾರತದ ಆಶಯಗಳಿಂದ ನಾವು ಏಕೆ ಮತ್ತು ಹೇಗೆ ದೂರವಾಗುತ್ತಿದ್ದೇವೆ? ಎನ್ನುವಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿರುವ ತುರ್ತು ಇಂದು ನಮ್ಮ ಮುಂದಿದೆೆ. ಈ ಉತ್ತರದಲ್ಲಿಯೇ ಹೆಣ್ಣು ಸಂಕುಲದ ಘನತೆಯ ಬದುಕಿನ ಹಾಗೂ ಅಳಿವು ಉಳಿವಿನ ಪ್ರಶ್ನೆ ಕೂಡ ಅಡಗಿರುವುದು ಗಮನಾರ್ಹ.
ಪ್ರಜಾತಂತ್ರಕ್ಕೆ ಕಡು ವಿರುದ್ಧವಾದ ಸರ್ವಾಧಿಕಾರ, ದೇಶದೆಲ್ಲ ಜನರಿಗೆ ಹಲವು ಏಕರೂಪದ ನಿಯಮಾವಳಿಗಳ ಹೇರಿಕೆ, ಫ್ಯಾಶಿಸಂನ ಕರಾಳತೆಗಳು, ಬಕಾಸುರ ಬಂಡವಾಳಶಾಹಿಯ ಕಪಿಮುಷ್ಟಿ, ಅಭಿವೃದ್ಧಿಯ ಹೆಸರಿನ ಅಪಸವ್ಯಗಳು, ಮಿತಿಮೀರಿದ ಬಡವ/ಶ್ರೀಮಂತರ ನಡುವಿನ ಅಂತರ, ಎಲ್ಲೆ ಮೀರಿದ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಚುನಾವಣಾ ಅಕ್ರಮಗಳು, ಜೊತೆಗೆ ಹವಾಮಾನ ವೈಪರೀತ್ಯದ ಕರಾಳತೆಗಳು, ಮತೀಯ ದ್ವೇಷ, ಮಹಿಳೆ ಮತ್ತು ತಳಸಮುದಾಯಗಳ ಮೇಲಿನ ಅವಿರತ ಹಿಂಸೆ/ಕ್ರೌರ್ಯದ ಪರಾಕಾಷ್ಠೆಯಲ್ಲಿ ನಲುಗುತ್ತಾ, ನೈತಿಕವಾಗಿ ಹಾಗೂ ಮೌಲ್ಯಯುತವಾಗಿ ಕುಗ್ಗಿ ಹೋಗುತ್ತಿರುವ ಪ್ರಸ್ತುತ ನಮ್ಮ ದೇಶದ ಪ್ರಜಾತಂತ್ರ ಹಿಮ್ಮುಖವಾಗಿ ಹೆಜ್ಜೆ ಇಡುತ್ತಿದೆ ಎನ್ನುವ ಭೀತಿ ನಮ್ಮನ್ನಿಂದು ಕಾಡುತ್ತಿದೆ. ಈ ಸ್ಥಿತಿಯಲ್ಲಿ ಹೆಣ್ಣು ಸಂಕುಲದ ಅಸ್ಮಿತೆಯನ್ನು ಹುಡುಕಿಕೊಂಡು, ಕಳೆದುಹೋಗುತ್ತಿರುವ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯನ್ನು ಮರು ಸ್ಥಾಪಿಸಿಕೊಳ್ಳುವುದಷ್ಟೇ ಅಲ್ಲ, ಈ ಅಪಸವ್ಯಗಳಿಂದ ದೇಶವನ್ನು ಹೊರತಂದು ಸರಿಯಾದ ದಿಕ್ಕಿನ ಕಡೆಗೆ ಕರೆದುಕೊಂಡುಹೋಗುವ ನಿಟ್ಟಿನಲ್ಲಿ ಇಂತಹ ಮಹಿಳಾ ಸಮ್ಮೇಳನಗಳು ಒಂದು ದಿಕ್ಸೂಚಿ ಆಗಬೇಕು. ಇದು ಸಮಾಜದ ತಾಯ್ತನದ ಜವಾಬ್ದಾರಿಯನ್ನು ಹೊತ್ತ ಹೆಣ್ಣುಸಂಕುಲದ ಜವಾಬ್ದಾರಿಯೂ ಹೌದು. ಇಂದು ಸಮಗ್ರ ರಾಜಕೀಯ ಪ್ರಜ್ಞೆ ಇಲ್ಲದ ಯಾವುದೇ ಮೇಲುಮೇಲಿನ ನಿಲುವಿನಿಂದ, ಕೇವಲ ಘೋಷಣೆ, ವಾದ/ಪ್ರತಿವಾದಗಳಿಂದ ಹೆಚ್ಚಿನ ಪ್ರಯೋಜನ ಇಲ್ಲ ಎನ್ನುವಂತಹ ಎಚ್ಚರ ಮೊದಲಿಗೆ ನಮಗಿರಬೇಕು. ನಮ್ಮ ಪ್ರತಿಯೊಂದು ಸಮಸ್ಯೆಯನ್ನೂ ಪೊಲಿಟಿಸೈಸ್(ರಾಜಕೀಯ)ಗೊಳಿಸದ ಹೊರತೂ, ನಮ್ಮ ಸಮಸ್ಯೆಗಳಿಗೆ ಸಮರ್ಪಕ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲದಿರುವುದು ವಾಸ್ತವ.
ಈ ಎಚ್ಚರದ ಅರಿವಿನಲ್ಲಿ ದೇಶದ ಮಹಿಳಾ ಸಂಕುಲವನ್ನು ಪ್ರಜಾತಂತ್ರದ ಒಳಗೆ ಒಳಗೊಳ್ಳುವ ಪ್ರಯತ್ನ ಎಷ್ಟು ಪ್ರಮಾಣದಲ್ಲಿ ಆಗಿದೆೆ ಎನ್ನುವುದನ್ನು ಮೊದಲಿಗೆ ಪರಿಶೀಲನೆ ಮಾಡಬೇಕಿದೆ. ಇಷ್ಟೂ ವರ್ಷಗಳಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಹೇಗೆಲ್ಲಾ ಬದಲಾವಣೆಗಳಾಗಿವೆ ಎಂದು ನೋಡಿದರೆ- ಮೇಲ್ನೋಟಕ್ಕೆ ಹೆಣ್ಣುಮಕ್ಕಳ ಶಿಕ್ಷಣ, ಉದ್ಯೋಗ ಪ್ರಮಾಣ, ಅವರ ಸಮುದಾಯದೆಡೆಗಿನ ಚಲನೆ, ಎಲ್ಲ ಕ್ಷೇತ್ರದಲ್ಲೂ ಪಾಲ್ಗೊಳ್ಳುತ್ತಿರುವಂತಹ ಧನಾತ್ಮಕ ಬದಲಾವಣೆಗಳೇನೋ ಎದ್ದು ಕಾಣುತ್ತಿವೆ. ಆದರೆ ದೇಶದ ಜನಸಂಖ್ಯೆಯ ಅಂದಾಜು ಅರ್ಧದಷ್ಟಿರುವ ಮಹಿಳೆಯರು, ಈ ಸಮಾಜದಲ್ಲಿ ತಮ್ಮ ಸಾಮಾಜಿಕ/ರಾಜಕೀಯ ಅಸ್ತಿತ್ವವನ್ನು, ನಾಯಕತ್ವದ ಗುಣವನ್ನು ಸಶಕ್ತವಾಗಿ ಕಂಡುಕೊಳ್ಳಲಿಕ್ಕೆ ಸಾಧ್ಯ ಆಗಿದೆಯೇ ಎಂದು ಆಳಕ್ಕಿಳಿದು, ಬಹುಮುಖಗಳಲ್ಲಿ, ಬಹು ಆಯಾಮಗಳಲ್ಲಿ ವಿಶ್ಲೇಷಿಸಿದರೆ ಮಾತ್ರ ಮುಚ್ಚಿಟ್ಟ ಕಟುಸತ್ಯಗಳು ನಮಗೆ ಅರಿವಾಗಲು ಸಾಧ್ಯ. ಆಗ ಮಾತ್ರ, ನಾವು ಗೂಟಕ್ಕೆ ಕಟ್ಟಿದ ಹಸುವಿನ ಹಾಗೆ ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತಿದ್ದೇವೆ, ಮುಂದಕ್ಕೆ ಚಲಿಸಲು ಸಾಧ್ಯ ಆಗುತ್ತಿಲ್ಲ ಎನ್ನುವಂತಹ ಸತ್ಯ ಅರ್ಥವಾಗಲು ಸಾಧ್ಯ.
ನಮ್ಮ ಹೆಚ್ಚಿನ ಹೆಣ್ಣುಮಕ್ಕಳು ಇಂದಿಗೂ ದೇಶದ ಪ್ರಮುಖ ನಿರ್ಧಾರಗಳನ್ನು, ನಿರ್ಣಯಗಳನ್ನು ತೆಗೆದುಕೊಳ್ಳುವಂತಹ, ಕಾಯ್ದೆ, ನೀತಿ, ನಿಯಮ ರೂಪಿಸುವಂತಹ ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯವಾಗಿಲ್ಲದಿರುವುದು ನಿಖರವಾಗಿ ಗೋಚರಿಸುತ್ತಿದೆ. ಅದು ನಮ್ಮ ಸಂಸತ್ತು, ವಿಧಾನಸಭೆ, ರಾಜಕೀಯ ಕ್ಷೇತ್ರ, ಸರಕಾರದ ಆಡಳಿತಾತ್ಮಕ ಹಂತಗಳಲ್ಲಿ, ಯಾವುದೇ ಬೃಹತ್ ಸಂಸ್ಥೆಗಳಲ್ಲಿ, ನ್ಯಾಯಾಂಗದಲ್ಲಿ, ಸಾಮಾಜಿಕವಾಗಿ... ಹೀಗೆ ಎಲ್ಲ ಕ್ಷೇತ್ರಗಳ ಉನ್ನತ ಹಂತಗಳಲ್ಲೂ ಇಂದಿಗೂ ಬೆರಳೆಣಿಕೆಯಷ್ಟು ಮಹಿಳೆಯರನ್ನು ಮಾತ್ರ ಕಾಣಲು ಸಾಧ್ಯವಾಗಿದೆ. ಹಾಗೆ ಉನ್ನತ ಸ್ಥಾನವನ್ನು ಅಲಂಕರಿಸಿರುವ ಮಹಿಳೆಯರೂ ಎಷ್ಟರ ಮಟ್ಟಿಗೆ ನಮ್ಮ ಸನಾತನ ಪಿತೃಪ್ರಧಾನ ಮೌಲ್ಯಗಳಿಂದ ಬಿಡಿಸಿಕೊಂಡು, ಸಂವಿಧಾನದ ಸಮಾನತೆಯ ಆಶಯಕ್ಕೆ ಬದ್ಧವಾಗಿ ಸ್ವಾಯತ್ತತೆ ಮತ್ತು ಆತ್ಮಾಭಿಮಾನದಿಂದ ಕೆಲಸ ಮಾಡಲು ಸಾಧ್ಯವಾಗಿದೆ ಎನ್ನುವುದು ಮತ್ತೊಂದು ಪ್ರಶ್ನೆ. ಇದೆಲ್ಲದರ ನಡುವೆ ಕೂಡ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಮಟ್ಟಕ್ಕೆ ಏರಬೇಕು, ದೊಡ್ಡದನ್ನು ಸಾಧಿಸಬೇಕು ಎನ್ನುವಂತಹ ಹೆಣ್ಣುಮಕ್ಕಳ ಛಲ ಕೂಡ ಮುಕ್ಕಿಲ್ಲದೆ ಮುಂದುವರಿಯುತ್ತಿದೆ. ಹೆಣ್ಣಿನ ಈ ಧೀಮಂತಿಕೆಯೇ ನಮ್ಮ ಪುರುಷ ಪ್ರಧಾನ, ಪುರುಷಾಳ್ವಿಕೆಯ ಸಮಾಜಕ್ಕೆ ನುಂಗಲಾಗದ ತುತ್ತಾಗಿದೆ. ಇದೇ ಪುರುಷ ಅಹಮಿಕೆಯ ಕಾರಣದಿಂದಲೇ ಹೆಣ್ಣನ್ನು ಹೇಗಾದರೂ ಸರಿ ದಮನಿಸಬೇಕು, ಅಂಚಿಗೆ ನೂಕಬೇಕು, ಅವಳನ್ನು ತಾನು ಹೇಳಿದ ಹಾಗೆ ಕೇಳುವಂತೆ- ಅಧೀನದಲ್ಲಿ ಇಟ್ಟುಕೊಂಡು ಆಳಬೇಕು ಎನ್ನುವಂತಹ ಕ್ರೂರ, ಹಿಂಸಾತ್ಮಕ ಪ್ರಯತ್ನಗಳು ವರ್ಷದಿಂದ ವರ್ಷಕ್ಕೆ ವ್ಯಾಪಕವಾಗುತ್ತಿದೆ.
ನಮ್ಮ ನಡುವೆ ಹೆಣ್ಣುಮಕ್ಕಳ ಅತ್ಯಾಚಾರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಾಬರಿ ಹುಟ್ಟಿಸುತ್ತಿದೆ. ಕಳೆದೊಂದು ದಶಕದಲ್ಲಿ ಶೇ. 1,200ರಷ್ಟು ಅತ್ಯಾಚಾರಗಳು ಹೆಚ್ಚಾಗಿವೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತಿವೆ! ಅದರಲ್ಲೂ ಸಾಮೂಹಿಕ ಅತ್ಯಾಚಾರಗಳು, ಪುಟ್ಟ ಪುಟ್ಟ ಕಂದಮ್ಮಗಳ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಇನ್ನಿಲ್ಲದಷ್ಟು ವ್ಯಾಪಕವಾಗುತ್ತಿದೆ. ಹದಿನೈದು ನಿಮಿಷಕ್ಕೆ ಒಬ್ಬ ಹೆಣ್ಣುಮಗಳು ಈ ದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗುವಂತಹ, ಪ್ರತೀ ಎರಡು ನಿಮಿಷಕ್ಕೆ ಒಬ್ಬ ಹೆಣ್ಣುಮಗಳು ದೌರ್ಜನ್ಯಕ್ಕೆ ಒಳಗಾಗುವಂತಹ ಸ್ಥಿತಿಗೆ ಹೆಣ್ಣು ಸಂಕುಲ ತಲುಪಿರುವುದು ಅತ್ಯಂತ ಆತಂಕಕಾರಿಯಾಗಿದೆ. ಇವೆಲ್ಲ ಕೂಡ ದಾಖಲಾದ ದೌರ್ಜನ್ಯಗಳು. ಮರ್ಯಾದೆಗೆ ಅಂಜಿ- ದಾಖಲಾಗದ ಅತ್ಯಾಚಾರಗಳು, ದೌರ್ಜನ್ಯಗಳ ಪ್ರಮಾಣ ಅದಿನ್ನೆಷ್ಟಿದೆಯೋ ಗೊತ್ತಿಲ್ಲ! ಇದರ ಜೊತೆಗೆ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಕೊಲೆ, ಆ್ಯಸಿಡ್ ದಾಳಿ, ಬೆತ್ತಲೆಗೊಳಿಸಿ ಅಪಮಾನಿಸುವ ಘಟನೆಗಳು, ಮರ್ಯಾದಾಹೀನ ಹತ್ಯೆಗಳು, ಕದ್ದೊಯ್ದು ಮಾರಾಟ ಮಾಡಿ ವೇಶ್ಯಾವಾಟಿಕೆಗೆ ನೂಕುವುದು... ಒಂದೇ ಎರಡೇ? ಈ ಪ್ರತಿಯೊಂದು ಕ್ರೂರ ಘಟನೆಗಳಿಗೂ ಸಾವಿರಾರು ಜ್ವಲಂತ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಇದ್ಯಾವುದೂ ನಮ್ಮ ರಾಜಕೀಯ ನಾಯಕರಿಗೆ, ಆಡಳಿತಶಾಹಿಗೆ ಮುಖ್ಯವಾದ ವಿಷಯವಾಗಿಯೇ ಇಲ್ಲವಲ್ಲ? ನಮ್ಮ ಬಹಳಷ್ಟು ಪ್ರಜ್ಞಾವಂತ ಜನಸಮೂಹದ ಆತ್ಮಸಾಕ್ಷಿಯನ್ನೂ ಇವು ಕಲಕುತ್ತಿಲ್ಲವಲ್ಲಾ? ನಾವೇನು ಬದುಕಿದ್ದೇವೆಯೋ ಸತ್ತು ಹೋಗಿದ್ದೇವೆಯೋ ಎಂದು ಚಿವುಟಿ ನೋಡಿಕೊಳ್ಳಬೇಕಿದೆ! ನಮಗೂ ಈ ಅಪಸವ್ಯಗಳಿಗೂ ಏನೂ ಸಂಬಂಧವೇ ಇಲ್ಲ ಎಂದು ಹೆಚ್ಚಿನ ಯುವಜನರೂ ತಟಸ್ಥರಾಗಿಬಿಟ್ಟಿದ್ದಾರಲ್ಲಾ ಆ ನೋವು ತೀವ್ರವಾಗಿ ಕಂಗೆಡಿಸುತ್ತದೆ. ನಿಜಕ್ಕೂ ಈ ದೇಶಕ್ಕೆ ಭವಿಷ್ಯ ಇದೆಯೇ?
ನಮ್ಮ ಮುಂದಿರುವಂತಹ ಹೆಣ್ಣು ಸಂಕುಲದ ಎಲ್ಲ ಬಹುಮುಖಿ ಸಮಸ್ಯೆಗಳಿಗೆ ಮೂಲಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಲು, ಬಹು ಆಯಾಮಗಳಲ್ಲಿ ನಾವು ಯೋಚಿಸಿ ಹೆಜ್ಜೆಗಳನ್ನು ಇಡಬೇಕಿದೆ.
ಮೊದಲನೆಯದಾಗಿ ಹೆಣ್ಣುಮಕ್ಕಳು ಕೇವಲ ವೋಟ್‌ಬ್ಯಾಂಕ್‌ಗಳಾಗಿ ಅಲ್ಲ- ಎಲ್ಲ ಹಂತಗಳಲ್ಲೂ ಅರ್ಧದಷ್ಟು ರಾಜಕೀಯ ನಾಯಕತ್ವವನ್ನು ಪ್ರತಿಷ್ಠಾಪಿಸುವ ದಿಕ್ಕಿನಲ್ಲಿ ಒಗ್ಗೂಡಿ ಪ್ರಯತ್ನಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಅರ್ಧದಷ್ಟು ತೊಡಗುವಂತಾಗೋದಷ್ಟೇ ಅಲ್ಲ, ಸಮರ್ಪಕವಾಗಿ ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಆಗುವ ಹಾಗೆ ಮಾಡುವಂತಹ ಸವಾಲನ್ನು ಕೂಡ ಪ್ರಥಮ ಜವಾಬ್ದಾರಿಯಾಗಿ ನಾವು ಸ್ವೀಕರಿಸಬೇಕು.
ಎರಡನೆಯದಾಗಿ ಹೆಣ್ಣಿನ ಮೇಲಿನ ಎಲ್ಲ ಬಗೆಯ ಹಿಂಸೆ, ಕ್ರೌರ್ಯಕ್ಕೆ ತಡೆಯೊಡ್ಡಲು ಬೇಕಾದ ರಚನಾತ್ಮಕ, ಸಂಘಟನಾತ್ಮಕ, ವಿಕೇಂದ್ರೀಕೃತ ಕಾರ್ಯ ಯೋಜನೆಗಳನ್ನು ಚರ್ಚಿಸಿ, ಆಮೂಲಾಗ್ರವಾಗಿ ಸಿದ್ಧಪಡಿಸಿಕೊಳ್ಳಬೇಕು. ಜೊತೆಗೆ, ಹೆಣ್ಣು ಸಂಕುಲ ಇಲ್ಲಿ ನೆಮ್ಮದಿಯಾಗಿ, ಘನತೆ, ಗೌರವದಿಂದ ಬದುಕಲಿಕ್ಕೆ ಏನೆಲ್ಲ ಬೇಕು? ಎನ್ನುವುದರ ಕುರಿತು, ಸರಕಾರದ ಎದುರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಶಕ್ತವಾದ ಬೇಡಿಕೆಯನ್ನು ಸರಿಯಾದ ಸಮಯಗಳಲ್ಲಿ ಇಡುವಂತಹ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಜೊತೆಗೆ ಇದನ್ನು ಆಗು ಮಾಡಲು ಸರಕಾರದ ಪ್ರತಿಹಂತದ ಅನುಷ್ಠಾನದಲ್ಲಿ ಜವಾಬ್ದಾರಿಯುತ ಹೆಣ್ಣುಮಕ್ಕಳು ಸೇರ್ಪಡೆಯಾಗಲು ಬೇಕಾದಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಮೂರನೆಯದಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ದಮನಿಸುವ ಮನಸ್ಥಿತಿಯನ್ನು ಮೂಲಮಟ್ಟದಲ್ಲಿ ಬದಲಾಯಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಸಮಗ್ರವಾಗಿ ಯೋಚಿಸಿ ಪರಿಹಾರಗಳನ್ನು ವಿಕೇಂದ್ರೀಕೃತ ನೆಲೆಯಲ್ಲಿ ಅನುಷ್ಠಾನಕ್ಕೆ ತರಬೇಕು.
ಕೊನೆಯದಾಗಿ ಸ್ವತಃ ಹೆಣ್ಣುಮಕ್ಕಳು ನಾವು, ನಮ್ಮ ಕೀಳರಿಮೆಗೆ ಕಾರಣಗಳೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ- ನಮ್ಮ ದೌರ್ಬಲ್ಯ, ಸಣ್ಣತನಗಳನ್ನು ಮೆಟ್ಟಿ ನಿಂತು, ವೈಯಕ್ತಿಕತೆಯನ್ನು ಮೀರಿ, ಒಟ್ಟು ಮಹಿಳಾ ಸಂಕುಲ ಸಂಘಟಿತವಾಗಿ, ಸಶಕ್ತವಾದ ಹೆಜ್ಜೆಗಳನ್ನೂರಿ ಸಮಾಜದಲ್ಲಿ ನೆಲೆ ನಿಲ್ಲುವಂತಾಗುವ ದಾರಿಗಳನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಯುವಜನಾಂಗವನ್ನೂ ಒಳಗೊಂಡು, ಅವಿರತ ಚಿಂತನಮಂಥನಗಳು ನಡೆಯಬೇಕು. ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ -ಯಾವುದನ್ನೂ ಗುಲಾಮಗಿರಿಗೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕಲಿಕ್ಕೆ ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ, ಸಹೋದರಿತ್ವದ ಆಶಯದ ಜೊತೆಗೆ, ಒಗ್ಗೂಡಿ ಕಂಡುಕೊಳ್ಳುವಂತಾಗಬೇಕು. ಈ ಆಶಯ ಕೇವಲ ಮಾತಾಗಿ ಉಳಿಯದೇ ಕೃತಿಯ ರೂಪದಲ್ಲಿ ಕಾರ್ಯಗತವಾಗುವೆಡೆಗೆ ನಮ್ಮ ಹೆಜ್ಜೆಗಳು ಸಾಗಬೇಕಿದೆ.
ಇದಕ್ಕಾಗಿ ತಕ್ಷಣದ ಒಂದು ಪ್ರಸ್ತಾವನೆ- ಹೆಣ್ಣುಸಂಕುಲದ ಮೇಲೆ ಮಿತಿಮೀರಿ ಹೋಗುತ್ತಿರುವಂತಹ ಕ್ರೌರ್ಯ, ಹಿಂಸೆ, ದೌರ್ಜನ್ಯವನ್ನು ಖಂಡಿಸಿ ಎಲ್ಲಾ ಮಹಿಳಾ, ಸಮಾನಮನಸ್ಕ, ಪ್ರಗತಿಪರ ಸಂಘಟನೆಗಳು, ಪಕ್ಷಾತೀತವಾಗಿ ಒಗ್ಗೂಡಿ, ಇದೇ ಮಾರ್ಚ್ 8ರ ಈ ಬಾರಿಯ ಮಹಿಳಾ ದಿನಾಚರಣೆಯನ್ನು ದೇಶಾದ್ಯಂತ, ಹಳ್ಳಿಹಳ್ಳಿಗಳಲ್ಲೂ ‘ಕರಾಳ ಮಹಿಳಾ ದಿನಾಚರಣೆ’ ಯಾಗಿ ಆಚರಿಸುವ ಮೂಲಕ ಸರಕಾರಕ್ಕೆ, ವ್ಯವಸ್ಥೆಗೆ, ಪುರುಷಾಳ್ವಿಕೆಯ ಸಮಾಜಕ್ಕೆ ಹೆಣ್ಣುಸಂಕುಲದ ಪ್ರತಿರೋಧವನ್ನು ಸಶಕ್ತವಾಗಿ ಮುಟ್ಟಿಸುವಂತಾಗಬೇಕು.