ಔಷಧ ಕ್ರಮಾನುಷ್ಠಾನಗಳನ್ನು ನಿರೂಪಿಸುವ ಫಾರ್ಮಸಿಸ್ಟರು
ಇಂದು ವಿಶ್ವ ಫಾರ್ಮಸಿಸ್ಟ್ ದಿನ
ವೈದ್ಯರುಗಳು ಸೂಚಿಸಿದ ಔಷಧಗಳ ಸೇವನಾ ವಿಧಾನಗಳನ್ನು ತಿಳಿಸುವ ಫಾರ್ಮಸಿಸ್ಟರು ಫಾರ್ಮಸಿಯ ಸರ್ವಾಂಗಗಳ ಕಾರ್ಯ ವೈಖರಿಗಳನ್ನು ಕೌಶಲದಿಂದ ಅರ್ಥೈಸಲು ಸಾಧ್ಯ. ಔಷಧಗಳ ಕ್ರಮಾನುಷ್ಠಾನಗಳನ್ನು ನಿರೂಪಿಸುವ ಫಾರ್ಮಸಿಸ್ಟರು ಫಾರ್ಮಸಿ ವಿಜ್ಞಾನದಲ್ಲಿ ಶಿಕ್ಷಣ ಪಡೆದಿರಬೇಕು ಮತ್ತು ಫಾರ್ಮಸಿ ಪರಿಷತ್ತಿನಲ್ಲಿ ನೋಂದಾಯಿತರಾಗಬೇಕು ಅನ್ನುವುದು ಔಷಧ ನಿಯಂತ್ರಣ ಇಲಾಖೆಯ ನಿಯಮ.
ಸೆಪ್ಟಂಬರ್ 25ರಂದು ವಿಶ್ವ ಫಾರ್ಮಸಿಸ್ಟ್ ದಿನಾಚರಣೆ. ಹಲವು ವಲಯಗಳಲ್ಲಿ ಬಹುಸ್ತರಗಳಲ್ಲಿ ವೃತ್ತಿನಿರತರಾದ ಫಾರ್ಮಸಿಸ್ಟರು ಜನಾದರಣೀಯವಾಗಿ ಸಾಮಾಜಿಕ ಬದ್ಧತೆಯಿಂದ ಕ್ರಿಯಾಶೀಲರಾಗಬೇಕೆಂದು ಫಾರ್ಮಸಿಸ್ಟ್ ದಿನಾಚರಣೆಯ ಕಾಳಜಿ. ಟರ್ಕಿ ದೇಶದ ಫಾರ್ಮಸಿಸ್ಟರ ಸಂಘಟನೆಯ ಪ್ರಸ್ತಾವದಿಂದ ಫಾರ್ಮಸಿಸ್ಟ್ ದಿನದ ಜಾಗತಿಕ ಆಚರಣೆಗೆ ಪ್ರೇರಣೆ ದೊರಕಿತು. ಇಂಟರ್‌ನ್ಯಾಷನಲ್ ಫಾರ್ಮಸಿ ಫೆಡರೇಷನ್ ಎಂಬ ಅಂತರ್‌ರಾಷ್ಟ್ರೀಯ ಸಂಸ್ಥೆಯ ನೇತೃತ್ವ (ಎಫ್‌ಐಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರೋತ್ಸಾಹಗಳಿಂದ ಕಾರ್ಯನಿರತ ಫಾರ್ಮಸಿಸ್ಟರ ಒಗ್ಗೂಡುವಿಕೆಗೆ ಸೂಕ್ತ ಸನ್ನಿವೇಶ ಲಭ್ಯವಾಯಿತು.
ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಅಥವಾ ಗ್ರಾಹಕರ ಔಷಧದ ಅಪೇಕ್ಷೆಗೆ ಸ್ಪಂದಿಸುವ ನಿಟ್ಟಿನಲ್ಲಿ ಫಾರ್ಮಸಿಸ್ಟರ ಪಾತ್ರ ಪರಿಗಣನೀಯ. ಈ ವರ್ಷದ ಫಾರ್ಮಸಿಸ್ಟ್ ದಿನದ ಧ್ಯೇಯ ವಾಕ್ಯದ ಗಮನಾರ್ಹ ವಿಚಾರವೂ ಅದೇ ಆಗಿರುತ್ತದೆ.
ಫಾರ್ಮಸಿ ಕೌನ್ಸಿಲ್ ಅಥವಾ ಫಾರ್ಮಸಿ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದ ಫಾರ್ಮಸಿ ಕಾಲೇಜುಗಳಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಅಂದರೆ ,D.Pharma,B. Pharma .M.Pharma ಇತ್ಯಾದಿ ವ್ಯಾಸಂಗಗಳ ಅವಕಾಶಗಳಿವೆ. ಡಾಕ್ಟರ್ ಇನ್ ಫಾರ್ಮಸಿ Pharma- D, ಸಂಶೋಧನೆ ಅಂದರೆ ಪಿಎಚ್.ಡಿ. ಇತ್ಯಾದಿ ವಿಜ್ಞಾನದಲ್ಲಿ ತಳ ಮಟ್ಟದಿಂದ ತೊಡಗಿ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಜನೆಗಳು ವಿಸ್ತಾರ.
ಪ್ರಾಧ್ಯಾಪಕರು, ಸಂಶೋಧಕರು ಫಾರ್ಮಸಿ ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿರುವ ವರಿಷ್ಠರು. ಫಾರ್ಮಸಿ ಪದವಿ, ಸ್ನಾತಕೋತ್ತರ ಪದವಿ ಪಡೆದು ಅರ್ಹತಾ ಪರೀಕ್ಷೆ ತೇರ್ಗಡೆಯಾಗಿ ಔಷಧ ಪರಿವೀಕ್ಷಕರಾಗಿ, ಔಷಧ ನಿಯಂತ್ರಣ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಫಾರ್ಮಸಿಸ್ಟರು ಮೇರು ಶಿಖರದ ಔಷಧ ವಿದ್ಯಾ ಪ್ರವೀಣರು.
ಔಷಧಗಳು ಅಥವಾ ಮದ್ದುಗಳು ಮಾನವೀಯ ಸೇವಾವ್ಯಾಪ್ತಿಯ ಅಮೂಲ್ಯ ವೈಜ್ಞಾನಿಕ ಸತ್ವ. ಜಗತ್ತಿನಾದ್ಯಂತ ಮದ್ದುಗಳು ಪರಸ್ಪರ ವಿನಿಮಯ, ಆಮದು, ರಫ್ತು, ಉತ್ಪಾದನೆ ಹೀಗೆ ಅವಶ್ಯಕ ಸಾಮಗ್ರಿ ಔಷಧಗಳು ಸದ್ಬಳಕೆ ಆಗುವಂತೆ, ದುರ್ಬಳಕೆ ಆಗದಂತೆ ಕಾರ್ಯನಿರ್ವಹಿಸಲು ಜಾಗತಿಕ ಫಾರ್ಮಸಿಸ್ಟರ ಸಂಘಟನೆ ನೀತಿ ರೂಪಿಸುತ್ತಿರುವುದು ವಿಶ್ವ ಫಾರ್ಮಸಿಸ್ಟ್ ದಿನಾಚರಣೆಗೆ ಪ್ರಸ್ತುತ.
ಉಚಿತ ಔಷಧ ವಿತರಿಸುವ ಸರಕಾರಿ ಆಸ್ಪತ್ರೆಗಳಲ್ಲಿ ಸರಕಾರಿ ಸೇವೆಯಲ್ಲಿರುವ ಫಾರ್ಮಸಿಸ್ಟರು ಔಷಧ ಸೇವನಾ ಕ್ರಮನುಷ್ಠಾನಗಳನ್ನು ತಿಳಿಸುತ್ತಾರೆ. ಖಾಸಗಿ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ, ಔಷಧ ಅಂಗಡಿ ಅಥವಾ ಮೆಡಿಕಲ್ ಶಾಪ್‌ಗಳಲ್ಲಿಯೂ ಫಾರ್ಮಸಿಸ್ಟರು ಉದ್ಯೋಗಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಖಂ ಔಷಧ ಸಂಗ್ರಹಗಾರ ಕೇಂದ್ರಗಳಲ್ಲಿಯೂ ಫಾರ್ಮಸಿಸ್ಟರು ಕ್ರಿಯಾಶೀಲರು.
ಫಾರ್ಮಸಿಗಳ ಕಾರ್ಯವೈಶಿಷ್ಟ್ಯಗಳು:
ಔಷಧಗಳನ್ನು ನಿಯಮಾನುಸಾರ ಸೂಕ್ತ ವಾತಾವರಣದಲ್ಲಿ ಶೇಖರಿಸುವುದು. ಗ್ರಾಹಕರ ಅಥವಾ ರೋಗಿಗಳ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುವಷ್ಟು ಪ್ರಮಾಣವನ್ನು ಔಷಧಗಳ ಸಂಗ್ರಹವಾಗಿ ಇರಿಸಿಕೊಳ್ಳುವುದು. ಸ್ಥಳೀಯ ವೈದ್ಯರು, ಜನಪ್ರಿಯ ವೈದ್ಯರು, ತಜ್ಞ ವೈದ್ಯರುಗಳು ಮಾನ್ಯ ಮಾಡುವ ಗುಣಮಟ್ಟದ ಔಷಧಗಳ ಬ್ರಾಂಡ್ ಗಳನ್ನು ಬಳಸುವುದು. ವೈದ್ಯರು ನೀಡಿದ ಪ್ರಿಸ್ಕ್ರಿಪ್ಶನ್ ಪ್ರಕಾರ ಔಷಧಗಳನ್ನು ವಿತರಿಸುವುದು. ವೈದ್ಯರು ಸೂಚಿಸಿದ ಮದ್ದುಗಳು ಅಥವಾ ಔಷಧಗಳು ಲಭ್ಯವಾಗಿದ್ದರೆ ಸಂಬಂಧಪಟ್ಟ ವೈದ್ಯರಲ್ಲಿ ವಿನಂತಿಸಿ ಒಪ್ಪಿಗೆ ಪಡೆದು ಬದಲಿ ಔಷಧಿ ನೀಡುವುದು. ಈ ಕಾರ್ಯಗಳನ್ನು ವೃತ್ತಿನಿರತ ಫಾರ್ಮಸಿಸ್ಟರು ಶ್ರದ್ಧೆಯಿಂದ ನಿರ್ವಹಿಸಬೇಕು.
ಔಷಧಗಳ ಜೀವಿತಾವಧಿಗಳ ಬಗ್ಗೆ ಫಾರ್ಮಸಿಸ್ಟರಿಗೆ ಸದಾ ಗಮನವಿರುವುದು ಅವಶ್ಯಕ. ಅಲ್ಪ ಜೀವಿತಾವಧಿ ಅಥವಾ ಹತ್ತಿರದ ಜೀವಿತಾವಧಿ ಇರುವ ಔಷಧಗಳನ್ನು ಕಂಪೆನಿಗಳಿಗೆ ಮತ್ತು ರಖಂ ಸಂಗ್ರಹಗಾರರಿಗೆ ಹಿಂದಿರುಗಿಸುವುದು ಫಾರ್ಮಸಿ ಕಾರ್ಯಾನುಷ್ಠಾನದ ರೂಢಿ.
ಸಣ್ಣ ಅಕ್ಷರಗಳಲ್ಲಿ ಚಿಕ್ಕದಾಗಿ ಬರೆಯಲ್ಪಡುವ ಕೆಲವಾರು ಔಷಧಗಳ ಮತ್ತು ಇಂಜೆಕ್ಷನ್‌ಗಳ ಲೇಬಲ್‌ಗಳನ್ನು ನವೀಕರಿಸಿ ಸ್ಫುಟವಾಗಿ, ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸಲು ಫಾರ್ಮಸಿಸ್ಟರು ಆಗ್ರಹ ಪಡಿಸುವುದು ಅಗತ್ಯ. ಪ್ಯಾಕಿಂಗ್ ಗಳಲ್ಲಿ ಮತ್ತು ಲೇಬಲ್‌ಗಳಲ್ಲಿ ರಾಸಾಯನಿಕಗಳ ವಿವರ ಮದ್ದಿನ ಹೆಸರು, ಉತ್ಪಾದನಾ ಸಂಖ್ಯೆ, ಮಾರಾಟದ ದರ ಸ್ಪಷ್ಟವಾಗಿ ಕಾಣಿಸುವಂತೆ ಔಷಧ ಉತ್ಪಾದನಾ ಕಂಪೆನಿಗಳು ಸುಧಾರಿತ ವ್ಯವಸ್ಥೆ ಜಾರಿಗೆ ತಂದಾಗ ಫಾರ್ಮಸಿಸ್ಟರಿಗೆ ಮತ್ತು ಜನತೆಗೆ ಹಿತ.
Batch no , Expiry date , ಮಾರಾಟದ ದರ, ರಾಸಾಯನಿಕಗಳ ವಿವರ ಇವಿಷ್ಟು ವಿವರಗಳು ಲೇಬಲ್‌ಗಳಲ್ಲಿ ಸೂಕ್ತವಾಗಿ ಕಾಣುವಂತೆ ಮುದ್ರಣಗೊಳ್ಳಬೇಕಾದುದು ಅಗತ್ಯ.
ಔಷಧಿ ಲಭ್ಯತೆ, ಪೂರೈಕೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ:
ಕೆಲವಾರು ಸಂದರ್ಭಗಳಲ್ಲಿ ಅನೇಕ ಔಷಧಗಳು ಅಲಭ್ಯವಾಗುತ್ತವೆ. ತುರ್ತು ಔಷಧಗಳು ಕೆಲವೊಮ್ಮೆ ಪೂರೈಕೆ ಕಡಿಮೆ ಇದ್ದಾಗ, ಫಾರ್ಮಸಿಗಳ ಆಡಳಿತ ವರ್ಗದಿಂದ ಅನುಮತಿ ಪಡೆದು ಅಂತಹ ಔಷಧಿಗಳನ್ನು ಲಭ್ಯವಿರುವ ಪ್ರದೇಶ ಅಥವಾ ಫಾರ್ಮಸಿಯಿಂದ ತರಿಸಿಕೊಂಡು ಔಷಧಿ ವಿತರಿಸುವುದು ಫಾರ್ಮಸಿಸ್ಟರ ಹೊಣೆಗಾರಿಕೆ.
ಅಧಿಕ ಗ್ರಾಹಕರು ಅಥವಾ ರೋಗಿಗಳು ಔಷಧಾಪೇಕ್ಷೆಯಿಂದ ಕಾಯುತ್ತಿದ್ದಾಗಲೂ ಅವರೆಲ್ಲರಿಗೂ ಔಷಧ ಸೇವನಾ ಕ್ರಮನುಷ್ಠಾನಗಳನ್ನು ಯಥಾವತ್ತಾಗಿ ನಿರೂಪಿಸಿ ಔಷಧಿ ವಿತರಿಸುವುದು ಫಾರ್ಮಸಿಸ್ಟರ ಕರ್ತವ್ಯ. ಎಲ್ಲ ಹಂತಗಳಲ್ಲಿ ಎರಡು ಬಾರಿ ಪರಿಶೀಲನೆ ಪರಿಗಣನೀಯ.
ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯು ಸರ್ವಾಂಗ ಗಳಲ್ಲಿ ವೃತ್ತಿ ನಿರತರಾದ ಎಲ್ಲ ಫಾರ್ಮಸಿಸ್ಟರಿಗೆ ಮತ್ತು ಫಾರ್ಮಸಿ ಸಿಬ್ಬಂದಿಗೆ ಉತ್ಸಾಹ ತುಂಬಲಿ ಎಂದು ಹಾರೈಸುವುದು ಅರ್ಥಪೂರ್ಣ.