ಯಡಿಯೂರಪ್ಪ ಮತ್ತು ವಿಜಯೇಂದ್ರರ ನಿದ್ದೆಗೆಡಿಸುತ್ತಿರುವ ಭಿನ್ನಮತೀಯರ ಬಣ
ರಾಜ್ಯ ಬಿಜೆಪಿಯಲ್ಲೀಗ ಯಡಿಯೂರಪ್ಪ ಮತ್ತವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತವರ ಜೊತೆಗಿರುವವರದ್ದು ಒಂದು ಬಣವಾದರೆ, ಇಡೀ ಯಡಿಯೂರಪ್ಪನವರ ಕುಟುಂಬವನ್ನೇ ವಿರೋಧಿಸುವವರ ಮತ್ತೊಂದು ಬಣ ಇದೆ.
ಬಹುಶಃ ಇವೆರಡರ ನಡುವೆಯೇ, ಎರಡೂ ಕಡೆಯವರ ಬಗ್ಗೆಯೂ ಅಸಮಾಧಾನವಿರುವವರ, ಆದರೆ ನೇರವಾಗಿ ತೋರಿಸಿಕೊಳ್ಳುವ ಧೈರ್ಯವಿಲ್ಲದವರ ಮತ್ತೊಂದು ಬಣವೂ ಇದ್ದು, ಇದು ನೇರವಾಗಿ ಒಡೆದುಹೋಗದ, ಒಳಗೊಳಗೇ ಕುದಿಯುವ ಸ್ವರೂಪದ ಒಂದು ಬಣ.
ರಾಜ್ಯ ಬಿಜೆಪಿಯೊಳಗೆ ಭಿನ್ನಮತ ತಾರಕಕ್ಕೆ ಮುಟ್ಟಿದೆ ಎಂದು ಈಗ ಅನ್ನಿಸುತ್ತಿರುವುದು, ಮತ್ತೊಂದು ಪಾದಯಾತ್ರೆಗೆ ಬಿಜೆಪಿಯಲ್ಲಿಯೇ ಒಂದು ಬಣ ತಯಾರಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ.
ಮುಡಾ ವಿರುದ್ಧದ ಬಿಜೆಪಿ ಪಾದಯಾತ್ರೆ ಯಾಕೋ ಜೆಡಿಎಸ್ ಹಾಗೂ ಕುಮಾರಸ್ವಾಮಿಯ ಉಪಚುನಾವಣೆ ತಯಾರಿ ಪಾದಯಾತ್ರೆ ರೀತಿ ಮುಗಿದು ಹೋಯಿತು.
ಇಡೀ ಪಾದಯಾತ್ರೆಯಲ್ಲಿ ಮಿಂಚಿದ್ದು ಕುಮಾರಸ್ವಾಮಿ, ಚರ್ಚೆಯಾಗಿದ್ದು ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್.
ಅಂತಹದೊಂದು ಪಾದಯಾತ್ರೆಯ ಬೆನ್ನಲ್ಲೇ ಬಿಜೆಪಿಯೊಳಗಿನ ಈ ಭಿನ್ನಮತೀಯ ಸದ್ದು ಜೋರಾಗಿದೆ.
ಪಾದಯಾತ್ರೆಗೂ ಮೊದಲೇ ಬೆಂಗಳೂರಿನಲ್ಲಿ ಭಿನ್ನಮತೀಯರ ಸಭೆ ನಡೆದಿತ್ತು. ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಆ ಸಭೆಯಲ್ಲಿ ಭಾಗಿಯಾಗಿದ್ದರು.
ಈಗ ಪಾದಯಾತ್ರೆ ಮುಗಿದ ಕೂಡಲೇ ಬೆಳಗಾವಿಯಲ್ಲಿ ಕೂಡ ಸಭೆ ನಡೆದಿದೆ. ಯತ್ನಾಳ್, ಪ್ರತಾಪ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಜೊತೆಗೆ ಅರವಿಂದ ಲಿಂಬಾವಳಿ, ಜಿ.ಎಂ. ಸಿದ್ದೇಶ್ವರ, ಅಣ್ಣಾ ಸಾಹೇಬ್ ಜೊಲ್ಲೆ, ಬಿ.ವಿ. ನಾಯಕ್, ಬಿ.ಪಿ. ಹರೀಶ್ ಹಾಗೂ ಎನ್.ಆರ್. ಸಂತೋಷ್ ಮೊದಲಾದವರು ಪಾಲ್ಗೊಂಡಿದ್ದರು.
ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ವಿಚಾರವನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಪಕ್ಷದ ರಾಜ್ಯಾಧ್ಯಕ್ಷರನ್ನು ದೂರ ಇಟ್ಟು ನಡೆಸುವ ಉದ್ದೇಶದ ಇಂಥ ಮತ್ತೊಂದು ಪಾದಯಾತ್ರೆಗೆ ಹೈಕಮಾಂಡ್ ಒಪ್ಪುವುದು ಸಾಧ್ಯವಿದೆಯೇ?
ಹೈಕಮಾಂಡ್ ಒಪ್ಪಲಾರದು ಎಂಬುದು ಈ ನಾಯಕರಿಗೆ ಗೊತ್ತಿರದ ವಿಚಾರವೇನೂ ಅಲ್ಲ. ಹಾಗಿದ್ದೂ ಹೈಕಮಾಂಡ್‌ಗೆ ಸಂದಿಗ್ಧದ್ದಾಗಬಹುದಾದ ಇಂಥದೊಂದು ಕೋರಿಕೆಯನ್ನು ಭಿನ್ನಮತೀಯ ಬಣ ಇಡಲಿದೆಯೆ?
ಬಹುಶಃ ಮತ್ತೊಂದು ಪಾದಯಾತ್ರೆ ಎಂಬ ನೆಪದಲ್ಲಿ ಹೈಕಮಾಂಡ್ ಜೊತೆ ಮಾತುಕತೆಗೆ ವೇದಿಕೆ ಸೃಷ್ಟಿಸುವುದು ಹಾಗೂ ಅಲ್ಲಿ ತಮ್ಮ ಅಹವಾಲನ್ನು ಹೇಳಿಕೊಳ್ಳುವುದೇ ಈ ಭಿನ್ನಮತೀಯರ ಉದ್ದೇಶವಾಗಿರಬಹುದು. ಮುಖ್ಯವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಡಿವಾಣ ಹಾಕುವುದೇ ಈ ಗುಂಪಿನ ಉದ್ದೇಶ ಇದ್ದ ಹಾಗಿದೆ.
ಇನ್ನೂ ಒಂದು ವಿಚಾರವಾಗಿ ಈ ಭಿನ್ನಮತೀಯರ ವಿರೋಧ ಸ್ಪಷ್ಟವಾಗಿದೆ. ಅದು, ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಪರಸ್ಪರ ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂಬುದರ ಕುರಿತದ್ದು.
ಚುನಾವಣೆಯಲ್ಲಿ ಮಾಡಿಕೊಳ್ಳಲಾಗುತ್ತಿರುವ ಈ ಹೊಂದಾಣಿಕೆ ರಾಜಕಾರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಶ್ರೀಮಂತ ಕುಟುಂಬಗಳ ಸಖ್ಯ ಬೆಳೆಸುತ್ತಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಭಿನ್ನಮತೀಯರ ಜೊತೆ ಗುರುತಿಸಿಕೊಂಡಿರುವ ಶಾಸಕ ಬಿ.ಪಿ. ಹರೀಶ್ ಆರೋಪ.
ಬೆಳಗಾವಿ ಸಭೆ ಬಳಿಕ ಮತ್ತೊಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆಯೂ ಯೋಚಿಸಲಾಗಿದೆ ಎನ್ನಲಾಗುತ್ತಿದೆ. ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಹೇಳುವುದು, ಪಕ್ಷಕ್ಕೆ ಪರ್ಯಾಯ ನಾಯಕತ್ವದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡುವುದು ಭಿನ್ನಮತೀಯರ ಉದ್ದೇಶವೆನ್ನಲಾಗಿದೆ.
ಈಗ ಮೇಲ್ನೋಟಕ್ಕೆ ಕಾಣುವ ಭಿನ್ನಮತೀಯರ ಗುಂಪು ಹೈಕಮಾಂಡ್ ವಿರೋಧಿ ಬಣವಲ್ಲ ಮತ್ತು ರಾಜ್ಯದಲ್ಲಿ ಬಿಜೆಪಿ ಹಾಳಾಗಿ ಹೋಗುವುದನ್ನು ತಡೆಯುವುದಕ್ಕಾಗಿ ನಿಂತಿರುವ ಸಮಾನ ಮನಸ್ಕರಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿರುವವರ ಬಣವಾಗಿದೆ.
ಈ ವಿರೋಧಿ ಬಣವನ್ನು ಮನವೊಲಿಸುವ ಪ್ರಯತ್ನವೂ ರಹಸ್ಯವಾಗಿಯೇ ನಡೆದೂ ಇದೆ ಎನ್ನಲಾಗುತ್ತದೆ.
ಸ್ವತಃ ವಿಜಯೇಂದ್ರ ಅವರೇ ಯತ್ನಾಳ್‌ರಂತಹ ನಾಯಕರ ಮನವೊಲಿಕೆಗೆ ಅಭಯ್ ಪಾಟೀಲ್, ವೀರಣ್ಣ ಚರಂತಿಮಠ ಮತ್ತು ರವಿಕುಮಾರ್ ಅವರ ಮೂಲಕ ಯತ್ನಿಸಿದ್ದರ ಬಗ್ಗೆ ಹೇಳಲಾಗುತ್ತಿದೆ.
ಆದರೆ ಯಡಿಯೂರಪ್ಪ ಕುಟುಂಬದ ಕಟ್ಟಾ ವಿರೋಧಿಯಾಗಿರುವ ಮತ್ತು ವಿರೋಧಿಯಾಗಿಯೇ ಇರಬಯಸುವ ಯತ್ನಾಳ್ ಅಂಥ ಯಾವುದೇ ರಾಜಿ ಸಂಧಾನಗಳಿಗೂ ಬಗ್ಗಿಲ್ಲ ಎನ್ನಲಾಗುತ್ತದೆ.
ಯತ್ನಾಳ್ ಹಿಂದುತ್ವದೊಂದಿಗೆ ರಾಜಿ ಇಲ್ಲದ ನಾಯಕ ಎಂಬ ಇಮೇಜ್ ಮೂಲಕ ಹೈಕಮಾಂಡ್ ಅನ್ನು ಒಲಿಸಿಕೊಂಡು ರಾಜ್ಯ ರಾಜಕೀಯದಲ್ಲಿ ದೊಡ್ಡ ಸ್ಥಾನ ತಲುಪಲು ಬಯಸುತ್ತಿರುವ ನಾಯಕ. ಹಾಗಾಗಿಯೇ ಅವರು ಪ್ರತೀ ಬಾರಿ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುವಾಗ ಮೋದಿ, ಶಾ ಅವರನ್ನು ಹೊಗಳುತ್ತಾರೆ.
ಇಲ್ಲಿ ಗಮನಿಸಬೇಕಿರುವ ಒಂದು ವಿಚಾರವೆಂದರೆ, ಬಿಜೆಪಿ ಹೈಕಮಾಂಡ್ ಒಲವಿಂದಲೇ ರಾಜ್ಯಾಧ್ಯಕ್ಷ ಹುದ್ದೆ ಪಡೆದಿರುವ ವಿಜಯೇಂದ್ರ ವಿರುದ್ಧವೇ ಯಾವ ಮುಲಾಜಿಲ್ಲದೆ ಯತ್ನಾಳ್ ಸೇರಿದಂತೆ ರಾಜ್ಯದ ಕೆಲ ನಾಯಕರು ಮಾತಾಡುತ್ತಾರೆ.
ಹಾಗಾದರೆ, ಅವರಿಗೂ ಹೈಕಮಾಂಡ್ ಮಟ್ಟದಲ್ಲಿಯೇ ಯಾರದೋ ಬೆಂಬಲ ಇದೆ ಎಂಬುದು ಸ್ಪಷ್ಟ. ದಿಲ್ಲಿ ನಾಯಕರ ಅಂಥದೊಂದು ಬೆಂಬಲವಿಲ್ಲದೆ ಯಾರೂ ಹೀಗೆ ಬಹಿರಂಗವಾಗಿ ಭಿನ್ನಮತೀಯರಾಗಿ ತೋರಿಸಿಕೊಳ್ಳಲು ಸಾಧ್ಯವಿಲ್ಲ.
ಹೈಕಮಾಂಡ್ ಆಶೀರ್ವಾದ ಇಲ್ಲದೆ ಯಾರೂ ರಾಜ್ಯಾಧ್ಯಕ್ಷರ ವಿರುದ್ಧ ಅಷ್ಟು ಕಠಿಣವಾಗಿ ಮಾತಾಡಲು ಸಾಧ್ಯವೇ ಇಲ್ಲ. ಯಾಕೆಂದರೆ, ಇವರಾರೂ ಹೈಕಮಾಂಡ್ ಅನ್ನು ವಿರೋಧಿಸುವ ಭಿನ್ನಮತೀಯರಲ್ಲ. ಇದು ಬಹಳ ಮುಖ್ಯವಾಗಿ ಗಮನಿಸಬೇಕಿರುವ ವಿಚಾರ.
ಹಾಗಾದರೆ ವಿಜಯೇಂದ್ರಗೆ ಕಡಿವಾಣ ಹಾಕಲು ಸ್ವತಃ ಹೈಕಮಾಂಡ್ ಇಂತಹದೊಂದು ಗುಂಪು ರಚನೆಗೆ ಕಾರಣವಾಗಿದೆಯೇ?
ಯತ್ನಾಳ್ ಜೊತೆ ಈಗ ದಾವಣಗೆರೆಯ ಮಾಜಿ ಸಂಸದ ಜಿ.ಎಂ. ಸಿದ್ಧೇಶ್ವರ್ ಸೇರಿದ್ದಾರೆ. ಅಸೆಂಬ್ಲಿ ಟಿಕೆಟ್ ವಂಚಿತ ಅರವಿಂದ ಲಿಂಬಾವಳಿ ಇದ್ದಾರೆ. ಭಿನ್ನಮತೀಯರ ಬೆಳಗಾವಿ ಸಭೆಯಲ್ಲಿ ಎಂ.ಪಿ. ಟಿಕೆಟ್ ವಂಚಿತ ಪ್ರತಾಪ ಸಿಂಹ ಕೂಡ ಕಾಣಿಸಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಬಿಎಸ್‌ವೈಯಿಂದಲೇ ಬಿಜೆಪಿ ಸೋತಿತು ಎಂದು ಹೇಳುತ್ತಿರುವ ಬಿ.ಪಿ. ಹರೀಶ್ ಇದ್ದಾರೆ.
ಅಲ್ಲದೆ ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಕೂಡ ಯಡಿಯೂರಪ್ಪ ವಿಚಾರದಲ್ಲಿ ಅಸಮಾಧಾನಗೊಂಡು ಬೇರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದೆಡೆ ಬಿಜೆಪಿ ಹೈಕಮಾಂಡ್‌ನಲ್ಲಿಯೇ ಕೆಲವರ ಬೆಂಬಲ ಈ ಬಣಕ್ಕಿದೆ ಎನ್ನುವ ಗುಮಾನಿಯಿರುವಾಗಲೇ, ಇದು ಕರ್ನಾಟಕ ಆರೆಸ್ಸೆಸ್‌ನ ಬೆಂಬಲದೊಂದಿಗೆ ನಡೆಯುತ್ತಿರುವ ಆಟವಾಗಿರಬಹುದೇ ಎಂಬ ಅನುಮಾನಗಳು ಕೂಡ ಮತ್ತೊಂದೆಡೆಗಿವೆ.
ಈ ಎರಡೂ ಬಣಗಳಲ್ಲಿ ಯಾರನ್ನೂ ಬದಿಗೆ ಸರಿಸಲು ಹೈಕಮಾಂಡ್‌ಗೆ ಕೂಡ ಸಾಧ್ಯವಿಲ್ಲ. ಯತ್ನಾಳ್ ಅವರಿಗೆ ನಾಯಕತ್ವ ಕೊಡದೇ ಹೋದರೂ, ಈಗಲೂ ತನಗೆ ನಾಯಕತ್ವ ಬೇಕು ಎಂಬ ಅವರ ಬೇಡಿಕೆಯನ್ನು ಹೈಕಮಾಂಡ್ ಒಪ್ಪಲು ಸಾಧ್ಯವಿಲ್ಲವಾದರೂ, ಅವರನ್ನು ಪಕ್ಷದಿಂದ ಹೊರಹಾಕುವುದಕ್ಕೆ ಕೂಡ ಆಗದು.
ಈಗ ಯತ್ನಾಳ್ ಜೊತೆಗೆ ಕಾಣಿಸಿಕೊಂಡಿರುವ ನಾಯಕರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡವರು.
ಕೆಲವರಿಗೆ ಯಡಿಯೂರಪ್ಪನವರಿಂದಾಗಿ ಟಿಕೆಟ್ ಕೈತಪ್ಪಿದ ಸಿಟ್ಟು ಇದ್ದರೆ, ಕೆಲವರಿಗೆ ಯಡಿಯೂರಪ್ಪ ಆಪ್ತರ ಸಂಚಿನಿಂದಾಗಿ ತಮಗೆ ಸೋಲಾಗಿದೆ ಎಂಬ ಸಿಟ್ಟಿದೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಸತತವಾಗಿ ಕೆಂಡ ಕಾರುತ್ತ ಬಂದಿರುವ ಯತ್ನಾಳ್ ಈಗ ಇವರೆಲ್ಲರಿಗೂ ನಾಯಕರಾಗಿದ್ದಾರೆ. ಈ ಭಿನ್ನಮತೀಯರ ಗುಂಪು ರಾಜ್ಯದ ಇಡೀ ಬಿಜೆಪಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಬಲವನ್ನೇನೂ ಹೊಂದಿಲ್ಲ. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ವಿಚಲಿತಗೊಳಿಸುವ ಕೆಲಸವನ್ನಂತೂ ಮಾಡಲಿದೆ, ಅವರ ನಿದ್ದೆಗೆಡಿಸುತ್ತಲೇ ಇರಲಿದೆ ಎಂಬುದು ನಿಜ.
ಈಗ ಪ್ರಶ್ನೆಯೇನೆಂದರೆ, ಈ ಭಿನ್ನಮತೀಯರ ನಡೆಗೆ ದಿಲ್ಲಿ ನಾಯಕರು ಬ್ರೇಕ್ ಹಾಕುತ್ತಾರೆಯೇ ಅಥವಾ ಈ ಬಣವನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ನಿಯಂತ್ರಿಸುವ ಸಲುವಾಗಿ ಬಳಸಲು ಹಾಗೆಯೇ ಉಳಿಸಿಕೊಳ್ಳಲಿದ್ದಾರೆಯೇ ಎಂಬುದು.
ಇದೇನೇ ಇದ್ದರೂ, ಕಾಂಗ್ರೆಸ್ ಸರಕಾರದ ವಿರುದ್ಧ ಪಾದಯಾತ್ರೆ, ಘೋಷಣೆ, ಆರೋಪಗಳನ್ನೆಲ್ಲ ಮಾಡುತ್ತಿರುವ, ಹೇಗಾದರೂ ಸಿದ್ದರಾಮಯ್ಯ ಸರಕಾರವನ್ನು ಬೀಳಿಸಲು ನೋಡುತ್ತಿರುವ ಬಿಜೆಪಿಯೇ ಭಿನ್ನಮತದ ಭಾರದಿಂದ ಕುಸಿಯುವ ಹಾಗಾಗಿದೆ ಎಂಬುದು ತಮಾಷೆಯಂತಿದೆ.
ಚನ್ನಪಟ್ಟಣ ಉಪಚುನಾವಣೆ ಬಿಜೆಪಿಗೆ ಇನ್ನೊಂದು ತಲೆಬಿಸಿ ತರಲಿದೆ. ಅಲ್ಲಿ ಬಿಜೆಪಿ ಟಿಕೆಟ್ ಕೊಡದಿದ್ದರೆ ತಾನು ಬಂಡಾಯ ಸ್ಪರ್ಧಿಸುವುದು ಖಚಿತ ಎಂದು ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್ ಘೋಷಿಸಿಬಿಟ್ಟಿದ್ದಾರೆ.
ಆದರೆ ಅಲ್ಲಿ ನಿಖಿಲ್‌ರನ್ನೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಆ ಸೀಟಲ್ಲಿ ಅವರೇ ಎಂಎಲ್‌ಎಯಾಗಿದ್ದವರು. ಹಾಗಾಗಿ ಅಲ್ಲಿನ ವಿಷಯದಲ್ಲಿ ಅವರೂ ರಾಜಿ ಮಾಡಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.
ಈ ಬಿಜೆಪಿಯೊಳಗಿನ ಕಾಲೆಳೆಯುವ ರಾಜಕೀಯ ಇನ್ನೂ ಹೀಗೆಯೇ ಮುಂದುವರಿಯಲಿದೆಯೇ? ಹೌದೆಂದಾದರೆ ಎಲ್ಲಿಯವರೆಗೆ ಎಂಬುದನ್ನು ಕಾದು ನೋಡಬೇಕಿದೆ.