ಸಂಗೀತ ಜಗತ್ತಿನ ಮಾನವೀಯ ಮಾಂತ್ರಿಕ ಕಲಾವಿದ ಝಾಕಿರ್ ಹುಸೇನ್
ಸುಮಾರು 30 ವರ್ಷಗಳ ಹಿಂದೆ ಅಮೆರಿಕದ ಚಿಕಾಗೊ ನಗರದಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಚಿಕಾಗೊನಗರದ ಪ್ರಾಯೋಜಕತ್ವದ ಜೊತೆಗೆ ಉಳಿದ ಮೂರು ಪ್ರಾಯೋಜಕರಲ್ಲಿ ನಾನೂ ಒಬ್ಬನಾಗಿದ್ದೆ. ಅಂದು ನಗರದ ಎಲ್ಲಾ ಬೀದಿಗಳು ಜನರಿಂದ ತುಂಬಿಹೋಗಿತ್ತು. ಕರಿಯರು, ಬಿಳಿಯರು, ಕಿರಿಯರು, ಹಿರಿಯರು, ಮಹಿಳೆಯರು, ಮಕ್ಕಳು ಹೀಗೆ ವಯಸ್ಸಿನ ಮಿತಿಯೇ ಇಲ್ಲದಂತೆ ಜನಕಿಕ್ಕಿರಿದು ತುಂಬಿದ್ದರು. ಕಾರ್ಯಕ್ರಮದ ಸಭಾಂಗಣವಂತೂ ಜೇನುಗೂಡಿನಂತೆ ಭಾಸವಾಗುತ್ತಿತ್ತು. ಅಂದಿನ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಜಗತ್ತಿ ಶ್ರೇಷ್ಠ ಕಲಾವಿದ, ತಬಲಾ ಮಾಂತ್ರಿಕ, ಸಂಗೀತ ಕ್ಷೇತ್ರದ ದಿಗ್ಗಜ ಝಾಕಿರ್ ಹುಸೇನ್. ಎರಡು ಗಂಟೆಗಳ ಕಾಲ ಸತತವಾಗಿ ತಬಲಾವನ್ನು ನುಡಿಸಿದ ಝಾಕಿರ್ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು. ಸಭಾಂಗಣದಲ್ಲಿ ಅಷ್ಟು ಸಮಯ ತಬಲಾದ ನಿನಾದ ಬಿಟ್ಟರೆ ಬೇರೆ ಯಾವ ಸಣ್ಣಸದ್ದ್ದೂ ಕೇಳಲಿಲ್ಲ. ಆ ಸಂಜೆ ನನ್ನೊಳಗೆ ಮಾತ್ರವಲ್ಲದೆ ನೆರೆದಿದ್ದ ಸಮಸ್ತ ಪ್ರೇಕ್ಷಕರಲ್ಲಿಯೂ ಅಚ್ಚಳಿಯದ ನೆನಪುಗಳನ್ನು ಉಳಿಸಿಬಿಟ್ಟಿತು.
ನಾವು ಬೇಕಾದಷ್ಟು ಇಂತಹ ಕಾರ್ಯಕ್ರಮಗಳನ್ನು ಪ್ರಖ್ಯಾತ ವ್ಯಕ್ತಿಗಳನ್ನು ಕರೆಸಿ ಆಯೋಜಿಸಿದ್ದೆವು. ಆದರೆ ಇವರಿಗೆ ಸಿಕ್ಕ ಮನ್ನಣೆ ಬೇರೆ ಯಾವ ಕಲಾವಿದನಿಗೂ ಸಿಕ್ಕಿದ್ದನ್ನು ನಾನಂತೂ ನೋಡಲೇ ಇಲ್ಲ. ಹುಚ್ಚೇಳುವುದೆಂದರೆ ಇದೇ ಎಂದೆನಿಸುತ್ತದೆ. ಕಾರ್ಯಕ್ರಮದ ನಂತರ ಊಟಕ್ಕೆ ಹೋಗಿದ್ದೆವು. ಅವರ ಸರಳ ಮತ್ತು ಮುಗ್ಧ ವ್ಯಕ್ತಿತ್ವದ ಪರಿಚಯವಾಯಿತು. ಕಲಿತಿರುವ ಅಹಂಭಾವವಿಲ್ಲ. ಪ್ರಖ್ಯಾತಿಯ ದುರಹಂಕಾರವಿಲ್ಲ. ತಿಳಿಹಾಸ್ಯ ಸ್ವಭಾವದ ಮಗುವಿನಂತಹ ಮನಸ್ಸಿನ ಮಾನವೀಯ ವ್ಯಕ್ತಿ.
ಝಾಕಿರ್ ಹುಸೇನ್ ತನ್ನ ಮೂರನೇ ವರ್ಷಕ್ಕೆ ತಬಲಾದೊಂದಿಗೆ ಆಟವಾಡಲು ಪ್ರಾರಂಭಿಸಿದವರು. ತಂದೆ ಉಸ್ತಾದ್ ಅಲ್ಲಾರಖ್ ಮಗನ ಆಸಕ್ತಿಯನ್ನು ಗಮನಿಸಿ ಅದೇ ಮಾರ್ಗದಲ್ಲಿ ಮುಂದುವರಿಯುವಂತೆ ಉತ್ತೇಜಿಸಿದರು. ಮಗನ ಆಶಯಗಳಿಗೆ ರೆಕ್ಕೆ ಕಟ್ಟಿ ವಿಶಾಲವಾದ ಸಂಗೀತ ಕ್ಷೇತ್ರದ ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರಲುಬಿಟ್ಟರು. ಉಸ್ತಾದ್ ಅಲ್ಲಾರಖ್ ಖುರೇಶಿ ಪ್ರಸಿದ್ಧ ಪಂಜಾಬ್ ಘರಾನಗೆ ಸೇರಿದವರು. ಭಾರತೀಯ ಸಂಗೀತ ಪರಂಪರೆಯಲ್ಲಿ ಈ ಘರಾನಗಳು ಬಹುಮುಖ್ಯವಾದವು. ಉಸ್ತಾದ್ ಅಲ್ಲಾರಖ್ ಕೂಡ ಸಂಗೀತದಲ್ಲಿ ಹೆಸರು ಮಾಡಿದವರೇ ಆಗಿದ್ದರು. ಝಾಕಿರ್‌ಗೆ ತಂದೆಯ ತಬಲಾವೇ ಆಟದ ವಸ್ತ್ತುವಾಗಿತ್ತು. ಅದರೊಂದಿಗೆ ಆಡುತ್ತಲೇ ಬೆಳೆದ ಝಾಕಿರ್‌ಗೆ ಅದನ್ನು ಒಲಿಸಿಕೊಳ್ಳ್ಳುವುದು ಕಷ್ಟವಾಗಲಿಲ್ಲ. ಅವರು ತಂದೆಯ ಮತ್ತು ಪಂಜಾಬ್ ಘರಾನದ ಪರಂಪರೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದರು.
ಝಾಕಿರ್ ಹುಸೇನರ ಪ್ರಸಿದ್ಧಿ ಕೇವಲ ತಬಲಾವನ್ನು ಚೆನ್ನಾಗಿ ನುಡಿಸುತ್ತಾರೆಂದು ಮಾತ್ರವಲ್ಲ. ಅದಕ್ಕೆ ಹಲವು ಘನವಾದ ಕಾರಣಗಳಿವೆ. ಆವರೆಗೂ ತಬಲಾವು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮುಖ್ಯವಾದ ವಾದ್ಯವಾಗಿರಲಿಲ್ಲ, ಆದರೆ ಅದನ್ನು ಮುಖ್ಯವಾದ ವಾದ್ಯವನ್ನಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲಬೇಕು. ಅದರಲ್ಲಿ ಅವರು ಮಾಡುತ್ತಿದ್ದ ವಿಶೇಷ ಪ್ರಯೊಗಗಳು, ಹೊಸ ಹೊಸ ಅನ್ವೇಷಣೆಗಳು, ಸಂಗೀತದಲ್ಲಿಯೂ ಸೃಜಶೀಲತೆಯನ್ನು ಕಾಣುವ ಅವರ ವ್ಯಕ್ತಿತ್ವ, ಇದೆಲ್ಲದಕ್ಕೂ ಕಳಶಪ್ರಾಯದಂತೆ ಇದ್ದ ಅವರ ಮುಗ್ಧತೆ ಮತ್ತು ಮಾನವೀಯ ಅಂತಕರಣ ಅವರನ್ನು ಆ ಕ್ಷೇತ್ರದಲ್ಲಿ ದಿಗ್ಗಜನ ಸ್ಥಾನಕ್ಕೇರಿಸಿತು. ಈ ವ್ಯಕ್ತಿತ್ವದಿಂದಲೇ ಅವರು ಜಗತ್ತಿನ ಇತರ ಕಲಾವಿದರಿಗಿಂ
ತ ಶ್ರೇಷ್ಠ ಮತ್ತು ಸರ್ವೋಚ್ಚ ಸ್ಥಾನಕ್ಕೇರಿದ್ದಾರೆ. ಅವರ ವ್ಯಕ್ತಿತ್ವವನ್ನು ಬಲ್ಲ ಪ್ರತಿಯೊಬ್ಬರೂ ಈ ಮಾತನ್ನು ಸಮ್ಮತಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಂದಿಗೂ ಅವರಲ್ಲಿ ನಾನು ಕಲಿತಿದ್ದೇನೆ ಎನ್ನುವ ಮನೋಧೋರಣೆಯನ್ನು ನೋಡಲು ಸಾಧ್ಯವಿರಲಿಲ್ಲ. ಸದಾ ಕಲಿಕೆಯ ಮನಸ್ಥಿತಿ ಅವರನ್ನು ಎತ್ತರೆತ್ತರಕ್ಕೆ ಬೆಳೆಸಿತು.
ಸಂಗೀತದ ಮೇಲೆ ಅವರಿಗೆ ಹಿಡಿತವೆಷ್ಟಿತ್ತೆೆಂದರೆ ಸ್ಯಾನ್‌ಫ್ರಾನ್ಸಿಸ್ಕೋದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸಂಗೀತ ಕಾಲೇಜಿಗೆ ಸೇರುವಷ್ಟೊತ್ತಿಗಾಗಲೇ ಅವರು ವಾಶಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಕಲಿಸುತ್ತಿದ್ದರು. ಆಗ ಅವರ ವಯಸ್ಸು ಕೇವಲ 19. ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅವರ ಪಾಂಡಿತ್ಯವು ಅವರ ತಂದೆಯ ಸಮಕಾಲೀನರಾದ ಪಂಡಿತ್ ರವಿಶಂಕರ್, ಅಲಿ ಅಕ್ಬರ್ ಖಾನ್‌ರೊಂದಿಗೆ ಸೇರಿ, ಶಿವಕುಮಾರ್ ಶರ್ಮಾ, ಹರಿಪ್ರಸಾದ್ ಚೌರಾಸಿಯಾ, ಸಾರಂಗಿ, ಉಸ್ತಾದ್ ಸುಲ್ತಾನ್ ಖಾನ್ ಜೊತೆಗಿನ ಜುಗಲ್ಬಂದಿಗಳು ಪ್ರಾರಂಭದಲ್ಲಿ ಸುಮಧುರವಾದ ಪರಿಹಾಸ್ಯವಾಗಿದ್ದರೆ ನಂತರದಲ್ಲಿ ಧ್ಯಾನಾಸಕ್ತರನ್ನಾಗಿಸುತ್ತಿತ್ತು.
ಎಲ್ಲಾ ಆಧುನಿಕ ತಂತ್ರಜ್ಞಾನಕ್ಕೂ ತಬಲಾವನ್ನು ಒಗ್ಗಿಸುವ ಕಲೆಗಾರಿಕೆ ಅವರಿಗೆ ತುಂಬಾ ಚೆನ್ನಾಗಿ ಕರಗತವಾಗಿತ್ತು. ತಬಲಾವನ್ನು ಅವರು ಕೇವಲ ವಾದ್ಯವಾಗಿ ಬಳಸುತ್ತಿರಲಿಲ್ಲ, ನುಡಿಸುತ್ತಿರಲಿಲ್ಲ. ಅದಕ್ಕೆ ವಿಶಿಷ್ಟವಾದ ಸುಮಧುರ ನುಡಿಯುವ ಗುಣವಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಅದರೊಂದಿಗೆ ಆತ್ಮೀಯವಾದ ಸ್ನೇಹವನ್ನು ಸಂಪಾದಿಸಿಕೊಂಡಿದ್ದ ಅವರು ಲೀಲಾಜಾಲವಾಗಿ ಅದರೊಂದಿಗೆ ಆಟವಾಡುವುದನ್ನು, ಮಾತಿಗಿಳಿಯುತ್ತಿದ್ದುದ್ದನ್ನು, ಸಂವಾದಿಸುವುದನ್ನು ನೋಡುಗರು ಗುರುತಿಸಬಹುದಿತ್ತು. ಅವರ ವ್ಯಕ್ತಿತ್ವವನ್ನು, ಜೀವನವನ್ನು ಒಂದು ವಾಕ್ಯದಲ್ಲಿ ತಬಲಾ ಎನ್ನುವಷ್ಟು ಅದರಲ್ಲಿ ಅವರು ಬೆರೆತುಹೋಗಿದ್ದರು. ತಬಲಾವೇ ಅವರ ವ್ಯಕ್ತಿತ್ವವಾಗಿ ಹೋಗಿತ್ತು.
ಅವರ ಹೊಸ ಹೊಸ ಅನ್ವೇಷಣೆಗಳಿಗೆ, ಸೃಜನಾತ್ಮಕವಾಗಿ ಆಲೋಚಿಸುವುದಕ್ಕೆ ಅವರು ಕೇಳಿಕೊಂಡು ಬೆಳೆದ ಅಮೀರ್ ಕುಸ್ರುವಿನ ಹೊಸ ಸಂಯೋಜನೆ ‘ಕಯಾಲ್’ನ ಕಥೆಗಳು ಪ್ರೇರಣೆಯಾದವು. ಸಂಪ್ರದಾಯವಾದಿ ಸಂಗೀತಗಾರರಿಗಿದ್ದ ಜಡತ್ವ ಅವರಿಗಿರಲಿಲ್ಲ. ಎಲ್ಲಾ ಸಂದರ್ಭಕ್ಕೂ, ಸನ್ನಿವೇಶಕ್ಕೂ, ಪ್ರಕಾರಗಳಿಗೂ ಮತ್ತು ಎಲ್ಲಾ ವಾದ್ಯಗಳೊಂದಿಗೂ ತಬಲಾವನ್ನು ಅತ್ಯದ್ಭುತವಾಗಿ ಜೊತೆಗೂಡಿಸುವ ವಿದ್ವತ್ ಅವರದ್ದು. ವೇದಿಕೆಯ ಪ್ರದರ್ಶನಗಳು ಮಾತ್ರವಲ್ಲದೇ ಭಾರತೀಯ ಮತ್ತು ಅನೇಕ ವಿದೇಶೀಯ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿ ಖ್ಯಾತಿಯನ್ನು ಪಡೆದಿದ್ದ ಅವರನ್ನು ಭಾರತೀಯರ ಮನೆಮಾತಾಗಿಸಿದ್ದು ಮಾತ್ರ ‘ವಾಹ್ ತಾಜ್’ ಚಹಾ ಜಾಹೀರಾತು. ಅದು ಕೇವಲ ಜಾಹೀರಾತು ಮಾತ್ರವಾಗಿರಲಿಲ್ಲ. ಗುಂಗುರು ಕೂದಲ ಆಕರ್ಷಕ ನಗುವಿನ ಯುವ ಝಾಕಿರ್ ತಬಲಾ ನುಡಿಸುತ್ತಾ ಕಾಣಿಸಿಕೊಂಡಿದ್ದ ಮತ್ತು ಹೊಸ ಸಂಯೋಜನೆಯಾದ ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತವನ್ನು ಮುಖ್ಯವಾಹಿನಿಯ ಆಧುನಿಕತೆಗೆ ಒಗ್ಗಿಸಿದ್ದು ಆ ಚಹಾ ಬ್ರಾಂಡನ್ನು ಶಾಶ್ವತವಾಗಿ ಜನಜನಿತವಾಗುವಂತೆ ಮಾಡಿಬಿಟ್ಟಿತು. ಜಗತ್ತಿನಾದ್ಯಂತ ಅವರಿಗೆ ಬುಹುದೊಡ್ಡ ಅಭಿಮಾನಿ ಪರಂಪರೆಯೇ ಇತ್ತು.
ಸಂಗೀತದ ಭಾಷೆ ಸಾರ್ವತ್ರಿಕವಾದದ್ದು ಎಂದು ದೇಶದ ಗಡಿಗಳನ್ನು, ಸಂಸ್ಕೃತಿಗಳನ್ನು, ನಾಗರಿಕತೆಯನ್ನು ದಾಟಿ ಬೆಳೆದ ಝಾಕಿರ್ ಸಾಬೀತು ಪಡಿಸಿದರು. ಸಂಗೀತದಲ್ಲಿ ಅವರು ಮಾಡಿದ ನವನವೀನ ಪ್ರಯೋಗದಂತೆ ಸಂಗೀತಕ್ಕೆ ಮಾನವೀಯತೆ ಮತ್ತು ಮುಗ್ಧತೆಯ ಸ್ಪಶರ್ವನ್ನು ನೀಡಿ ಸಂಯೋಜಿಸಿದ್ದು ಅವರನ್ನು ಜಗದ್ವಿಖ್ಯಾತ ಶ್ರೇಷ್ಠ ಕಲಾವಿದನನ್ನಾಗಿ ಮಾಡಿತು. ನೂರಾರು ಜನ ಸಂಗೀತಗಾರರಿದ್ದಾರೆ ಆದರೆ ಸಂಗೀತಗಾರನಿಗೂ ಕಲಾವಿದನಿಗೂ ಬಹಳಷ್ಟು ವ್ಯತ್ಯಾಸವಿದೆ. ಸಂಗೀತ ಕೇವಲ ಮನೋರಂಜನೆ ಮಾತ್ರವಲ್ಲ, ಅದು ನಮ್ಮನ್ನು ಮಾಂತ್ರಿಕಗೊಳಿಸಬೇಕು, ಮಂತ್ರಮುಗ್ಧರನ್ನಾಗಿಸಬೇಕು. ಇದು ಹೀಗೆ ನಡೆಯುತ್ತಲೇ ಇರಲಿ ಎಂದೆನಿಸಬೇಕು. ನಿಲ್ಲುವ ಸಂದರ್ಭ ಬಂದಾಗ ಅಯ್ಯೋ ನಿಲ್ಲದೇ ಇರಲಿ, ಇನ್ನೂ ಇನ್ನೂ ಮುಂದುವರಿಯಲಿ ಎನ್ನುವ ಭಾವ ಪ್ರೇಕ್ಷಕರನ್ನಾವರಿಸಬೇಕು. ನಮ್ಮನ್ನು ನಾವು ಮರೆಯುವಂತೆ ಮಾಡುವ, ಬೇರೆಯದೇ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ಯುವ, ಆ ಸೊಗಸಾದ ಕ್ಷಣಗಳಿಗೆ ಅಂತ್ಯವೇ ಇರಬಾರದು ಎನ್ನುವಂತೆ ಮಾಡುವವನೇ ಶ್ರೇಷ್ಠ ಕಲಾವಿದ. ನಾನು ನೋಡಿದ ಮಟ್ಟಕ್ಕೆ ಭಾರತದಲ್ಲಿ ರವಿಶಂಕರ್ ಅವರ ನಂತರ ಜನರನ್ನು ಮೈಮರೆಯುವಂತೆ ಮಾಡುತ್ತಿದ್ದ ಕಲಾವಿದನೆಂದರೆ ಝಾಕಿರ್ ಹುಸೇನ್ ಮಾತ್ರ.