ನಮ್ಮ ಪಕ್ಷದಲ್ಲಿ ಯಾರೂ ಅಸಮಾಧಾನಿತರಿಲ್ಲ: ವಿ. ಸೋಮಣ್ಣ
ತುಮಕೂರು: ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ವಿ. ಸೋಮಣ್ಣ ಅವರು, ಡಿ. 6 ರ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
ವಿಧಾನ ಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ ಬಳಿಕ ಬಹಳ ನಿರಾಶರಾಗಿದ್ದ ಸೋಮಣ್ಣ ತಮ್ಮ ನೋವನ್ನು ಸಿದ್ದಲಿಂಗ ಸ್ವಾಮೀಜಿ ಅವರಲ್ಲಿ ತೋಡಿಕೊಂಡರು.
ಅಮಿತ್ ಶಾ ಅವರು ಬಂದು ಎರಡೂವರೆ ಗಂಟೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ನಾನು ಇಲ್ಲ ಅಂತ ಹೇಳಿದೆ. ಪಿಎಂ ಮೋದಿ ದೆಹಲಿಗೆ ಕರೆಸಿದರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು. ನೀನು ನಿಂತುಕೊ ಅಂತಾ ಹೇಳಿದಾಗ ಏನ್ ಮಾಡಬೇಕು” ಎಂದು ಹತಾಶೆಯಿಂದ ಹೇಳಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 7, 8 ಮತ್ತು 9 ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಅವರೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತೇನೆ ಎಂದರು.
ನಮ್ಮ ಪಕ್ಷದಲ್ಲಿ ಯಾರೂ ಅಸಮಾಧಾನಿತರಿಲ್ಲ. ನಮ್ಮದೇ ಆದತಂಹ ಶಕ್ತಿ, ದೂರದೃಷ್ಟಿಯ ಚಿಂತನೆ ಇದೆ. ಹಾಗಾಗಿ ಡಿ. 7,8 ಮತ್ತು 9 ರಂದು ನಾವೆಲ್ಲರೂ ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ನಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹೇಳಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, , ಸಿ.ಎಂ. ರಾಜಪ್ಪ, ದಾಸೇಗೌಡ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಶ್ರೀಧರ್, ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಬಾವಿಕಟ್ಟೆ ನಾಗಣ್ಣ, ಶಿವಪ್ರಸಾದ್, ಸಿದ್ಧಗಂಗಾ ಆಸ್ಪತ್ರೆಯಡಾ. ಪರಮೇಶ್ವರ್, ಆರ್. ಬಸವರಾಜು, ಗ್ಯಾಸ್ ಬಾಬು, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.