ಬಿಹಾರ: ವೈದ್ಯನ ಗುಪ್ತಾಂಗ ಕತ್ತರಿಸಿ ಗ್ಯಾಂಗ್ ರೇಪ್ ಪ್ರಯತ್ನ ತಡೆದ ನರ್ಸ್!
PC: x.com/ndtvfeed
ಪಾಟ್ನಾ: ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ ಪ್ರಕರಣದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿರುವ ನಡುವೆಯೇ ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರದ ಪ್ರಯತ್ನ ನಡೆದಿದೆ. ಅತ್ಯಾಚಾರ ಯತ್ನ ನಡೆಸಿದವರ ಪೈಕಿ ಒಬ್ಬ ವೈದ್ಯನಾಗಿದ್ದು, ನರ್ಸ್ ಬ್ಲೇಡ್ ನಿಂದ ವೈದ್ಯನ ಗುಪ್ತಾಂಗವನ್ನು ಕತ್ತರಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಮಷ್ಟಿಪುರ ಜಿಲ್ಲೆಯ ಗಂಗಾಪುರ ಎಂಬಲ್ಲಿ ಆರ್ ಬಿ ಎಸ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್, ಬುಧವಾರ ರಾತ್ರಿ ಇನ್ನೇನು ಕೆಲಸ ಮುಗಿಸಬೇಕು ಎಂಬ ಹಂತದಲ್ಲಿ ಆಡಳಿತಾಧಿಕಾರಿ ಡಾ.ಸಂಜಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ಮದ್ಯಪಾನ ಮಾಡಿ ಬಂದು ನರ್ಸ್ ಮೇಲೆ ಅತ್ಯಾಚಾರ ಎಸಗುವ ಪ್ರಯತ್ನ ಮಾಡಿದರು.
ಈ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನರ್ಸ್, ಬ್ಲೇಡ್ ತೆಗೆದುಕೊಂಡು ವೈದ್ಯನ ಶಿಶ್ನ ಕತ್ತರಿಸಿದರು. ಆ ಹಂತದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿ, ಆಸ್ಪತ್ರೆಯ ಹೊರಗಿನ ಹೊಲದಲ್ಲಿ ಅಡಗಿಕೊಂಡರು ಎಂದು ಪೊಲೀಸರು ವಿವರಿಸಿದ್ದಾರೆ.
ಪೊಲೀಸರ ತಂಡ ಆಸ್ಪತ್ರೆಗೆ ಧಾವಿಸಿದ್ದು, ನರ್ಸ್ ಸುರಕ್ಷೆಯನ್ನು ಖಾತರಿಪಡಿಸಿ, ಮೂವರು ಆರೋಪಿಗಳನ್ನು ಬಂಧಿಸಿತು. ಇತರ ಇಬ್ಬರು ಆರೋಪಿಗಳನ್ನು ಸುನೀಲ್ ಕುಮಾರ್ ಗುಪ್ತಾ ಮತ್ತು ಅವಧೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಗುಂಪು ಆಸ್ಪತ್ರೆಗೆ ಒಳಗಿನಿಂದ ಬೀಗ ಜಡಿದು, ಸಿಸಿಟಿವಿಗಳ ಸ್ವಿಚ್ ಆಫ್ ಮಾಡಿ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿತ್ತು. ನರ್ಸ್ ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯ ಶ್ಲಾಘನೀಯ ಎಂದು ಡಿವೈಎಸ್ಪಿ ಸಂಜಯ್ ಕುಮಾರ್ ಪಾಂಡೆ ಹೇಳಿದ್ದಾರೆ.