ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಪಟೋಲೆ ಪಾದ ತೊಳೆದ ಕಾರ್ಯಕರ್ತ!
ವೀಡಿಯೊ ವೈರಲಾಗುತ್ತಿದ್ದಂತೆ ಭುಗಿಲೆದ್ದ ವಿವಾದ
ನಾನಾ ಪಟೋಲೆ | Photo : PTI
ಅಕೋಲಾ : ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ನಾನಾ ಪಟೋಲೆ ಅವರ ಪಾದಗಳನ್ನು ತೊಳೆಯುತ್ತಿರುವ ವೀಡಿಯೊ ವೈರಲಾಗಿದೆ.
ಘಟನೆಯ ವೀಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆಡಳಿತಾರೂಢ ಬಿಜೆಪಿ ಪಕ್ಷವು, ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರನ್ನು ಅವಮಾನಿಸಿದೆ ಎಂದು ಟೀಕಿಸಿದೆ.
ಸೋಮವಾರ, ಅಕೋಲಾ ಜಿಲ್ಲೆಯ ವಡೇಗಾಂವ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪಟೋಲೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾನಾ ಪಟೋಲೆ ಅವರು ವಾಹನದಿಂದ ಇಳಿಯುತ್ತಿರುವಾಗ ಪಕ್ಷದ ಕಾರ್ಯಕರ್ತರೊಬ್ಬರು ಪಟೋಲೆ ಅವರ ಪಾದಗಳಿಗೆ ನೀರು ಸುರಿದು ಸ್ವಚ್ಛಗೊಳಿಸುತ್ತಿರುವುದು ವೈರಲ್ ವೀಡಿಯೊದಲ್ಲಿ ಸೆರೆಯಾಗಿದೆ.
ವೈರಲ್ ವೀಡಿಯೊ, ವಿವಾದದದ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಪಟೋಲೆ, ಸಂತ ಗಜಾನನ ಮಹಾರಾಜರ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ತಮ್ಮ ಪಾದಗಳಿಗೆ ಕೆಸರುಬಿದ್ದಿತ್ತು. ಹತ್ತಿರದಲ್ಲಿ ಯಾವುದೇ ನಲ್ಲಿ ನೀರು ಲಭ್ಯವಿಲ್ಲದ ಕಾರಣ ಕಾರ್ಯಕರ್ತರೊಬ್ಬರು ಬಾಟಲಿಯಿಂದ ನೀರು ಹಾಕಿದರು ಎಂದು ಹೇಳಿದ್ದಾರೆ.
ರೈತರು ಸಾಲದ ಹೊರೆಯಲ್ಲಿ ಸಿಲುಕಿದ್ದು, ಅವರ ಸಂಕಷ್ಟದಿಂದ ಹೊರತರಬೇಕಾದ ಅಗತ್ಯವಿದ್ದರೂ, ಆಡಳಿತ ವ್ಯವಸ್ಥೆ ಕಾಳಜಿ ವಹಿಸುತ್ತಿಲ್ಲ ಎಂದು ಪಟೋಲೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.