17ನೇ ಲೋಕಸಭೆ -ಕಾಯಾ;ವಾಚಾ;ಮನಸಾ
ಸ್ವಾತಂತ್ರ್ಯದ ನಂತರ ಐದು ವರ್ಷಗಳ ಪೂರ್ಣಾವಧಿಗೆ ಕಾರ್ಯಾಚರಿಸಿದ ಲೋಕಸಭೆಗಳ ಪೈಕಿ ಅತ್ಯಂತ ಕಡಿಮೆ ದಿನಗಳಲ್ಲಿ (274ದಿನ) ಸದನ ಕಲಾಪ ನಡೆಸಿದ ಲೋಕಸಭೆ ಎಂಬ ಹೆಗ್ಗಳಿಕೆಯ ಜೊತೆಗೆ, ಸಂವಿಧಾನದ 93ನೇ ವಿಧಿಯನ್ವಯ ಲೋಕಸಭೆಗೆ ನೇಮಿಸಬೇಕಾಗಿದ್ದ ಉಪಸ್ಪೀಕರ್ ಹುದ್ದೆಯನ್ನು ಕೊನೆಯ ತನಕವೂ ಭರ್ತಿ ಮಾಡದೆ ಉಳಿದ ಮೊದಲ ಲೋಕಸಭೆ ಎಂಬ ಬಿರುದು ಸಹಿತ 17ನೇ ಲೋಕಸಭೆಯ ಕಲಾಪಗಳು ಮುಕ್ತಾಯಗೊಂಡಿದ್ದು, ದೇಶ ಸಾರ್ವತ್ರಿಕ ಚುನಾವಣೆಯತ್ತ ಮುಖಮಾಡಿದೆ. ಸಂವಿಧಾನ ಅಪಾಯದಲ್ಲಿದೆ ಎಂಬ ಮಾತುಗಳು ಮತ್ತೆ ಮತ್ತೆ ಕೇಳಿಬರುತ್ತಿರುವಾಗಲೇ, ಸಂವಿಧಾನದ ದೀಪಧಾರಿಗಳ (ರಾಷ್ಟ್ರಪತಿ, ಉಪರಾಷ್ಟ್ರಪತಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭಾ ಸ್ಪೀಕರ್) ಮೌನ, ನಿಷ್ಕ್ರಿಯತೆ, ಪಕ್ಷಪಾತ ಇತ್ಯಾದಿಗಳೂ ಮಡುಗಟ್ಟುತ್ತಿವೆ.
ಮುಂದಿರುವ ಚುನಾವಣೆಗಳ ಹಿನ್ನೆಲೆಯಲ್ಲಿ, 17ನೇ ಲೋಕಸಭೆಯ ಒಟ್ಟು ಸಾಧನೆಯನ್ನು ಪ್ರಜ್ಞಾವಂತ ಮತದಾರರು ಗುರುತಿಸಿಕೊಂಡು, ರಾಜಕೀಯದ ಬಣ್ಣ-ರಾಡಿಗಳಿಗೆ ಬಲಿಯಾಗದೆ, ಸಂಸತ್ತಿನಲ್ಲಿ ನಮ್ಮನ್ನು ಪ್ರತಿನಿಧಿಸುವವರು ಹೇಗಿರಬೇಕು, ಎಷ್ಟು ಪ್ರಜಾತಾಂತ್ರಿಕವಾಗಿರಬೇಕು, ಸಂವಿಧಾನಕ್ಕೆ ಅವರ ಬದ್ಧತೆ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಇದಕ್ಕಿಂತ ಸಕಾಲ ಇನ್ನೆಲ್ಲಿ?
ಏನೆಲ್ಲ ಆಯಿತು?
► ಈ ಲೋಕಸಭೆಯ 15 ಅಧಿವೇಶನಗಳಲ್ಲಿ 11ನ್ನು ನಿಶ್ಚಿತ ಅವಧಿ ಮುಗಿಯುವ ಮುನ್ನವೇ ಮುಂದೂಡಲಾಯಿತು. ಹಾಗಾಗಿ, ಸುಮಾರು 40 ದಿನಗಳ ಅಧಿವೇಶನ ನಡೆಯಲಿಲ್ಲ. ಹಾಗಂತ ಮೊದಲ ಅಧಿವೇಶನ ನಿಗದಿತ ಅವಧಿಗಿಂತ ಏಳುದಿನ ಮತ್ತು ಕೊನೆಯ ಅಧಿವೇಶನ ನಿಗದಿತ ಅವಧಿಗಿಂತ ಒಂದು ದಿನ ಹೆಚ್ಚು ನಡೆದವು.
► 17ನೇ ಲೋಕಸಭೆಯಲ್ಲಿ ಸಂಸದರನ್ನು ಸದನದಿಂದ ಅಮಾನತುಗೊಳಿಸುವ ಒಟ್ಟು 206 ಘಟನೆಗಳು ನಡೆದವು. ಇದರಲ್ಲಿ, 146 ಮಂದಿಯ ಅಮಾನತು, 2023ರ ಚಳಿಗಾಲದ ಅಧಿವೇಶನದಲ್ಲಿ ನಡೆಯಿತು.
► 17ನೇ ಲೋಕಸಭೆಯಲ್ಲಿ ಬಜೆಟ್ ಸಂಬಂಧಿ ಮಸೂದೆಗಳನ್ನು ಹೊರತುಪಡಿಸಿ, ಒಟ್ಟು 179 ಮಸೂದೆಗಳು ಅಂಗೀಕಾರಗೊಂಡವು. ಆದರೆ ಅವುಗಳಲ್ಲಿ ಶೇ. 58 ಮಸೂದೆಗಳು ಸದನದಲ್ಲಿ ಮಂಡನೆಯಾದ ಎರಡು ವಾರಗಳ ಒಳಗೇ ಅನುಮೋದನೆಗೊಂಡವು; ಅರ್ಥಾತ್ ಸಂಸತ್ತಿನ ಬಹುಮುಖ್ಯ ಕರ್ತವ್ಯವಾದ ಕಾನೂನುಗಳ ಚರ್ಚೆ-ನಿರೂಪಣೆ ಸಾಕಷ್ಟು ನಡೆಯಲಿಲ್ಲ. ಶೇ. 70 ಮಸೂದೆಗಳಿಗೆ ಚರ್ಚೆ ನಡೆದದ್ದು ಮೂರುಗಂಟೆಗಳಿಗಿಂತ ಕಡಿಮೆ. ಶೇ. 35 ಮಸೂದೆಗಳಿಗೆ ಚರ್ಚೆ ನಡೆದದ್ದು ಒಂದು ಗಂಟೆಗೂ ಕಡಿಮೆ!
► ಸಂಸತ್ತು ಅಂಗೀಕರಿಸಿದ ಪ್ರಮುಖ ಮಸೂದೆಗಳೆಂದರೆ ಮಹಿಳಾ ಮೀಸಲಾತಿ ಮಸೂದೆ 2023, ಜಮ್ಮು ಮತ್ತು ಕಾಶ್ಮೀರ ಮರುಸಂರಚನೆಯ ಮಸೂದೆ 2019, ಮುಖ್ಯ ಚುನಾವಣಾ ಕಮಿಷನರ್ ನೇಮಕಾತಿ ಮಸೂದೆ 2023; ಮೂರು ಕಾರ್ಮಿಕ ಕಾನೂನುಗಳು; ಡಿಜಿಟಲ್ ಡೇಟಾ ಸಂರಕ್ಷಣಾ ಮಸೂದೆ 2023; ಮೂರು ಕೃಷಿ ಕಾಯ್ದೆಗಳು (ಕಡೆಗೆ ಇವನ್ನು ರೈತರ ಪ್ರತಿಭಟನೆಗಳ ಬಳಿಕ ಹಿಂದೆಗೆದುಕೊಳ್ಳಲಾಯಿತು); IPC, CrPC ಮತ್ತು ಸಾಕ್ಷ್ಯ ಕಾಯ್ದೆಗಳ ಜಾಗದಲ್ಲಿ ಹೊಸ ಮೂರು ಮಸೂದೆಗಳು.
► ಸಾಮಾನ್ಯವಾಗಿ ಮಹತ್ವದ ಮಸೂದೆಗಳಿಗೆ ಹೆಚ್ಚಿನ ಪರಿಶೀಲನೆ ಅಗತ್ಯವಿದ್ದಾಗ, ಅದನ್ನು ಸದನಸಮಿತಿಗಳಿಗೆ ಒಪ್ಪಿಸುವುದು ಸಂಪ್ರದಾಯ. ಕೇವಲ ಶೇ. 16 ಮಸೂದೆಗಳು ಮಾತ್ರ ಈ ಪರಿಶೀಲನೆಗೆ ಒಳಪಟ್ಟವು. ಬರೀ ನಾಲ್ಕು ಮಸೂದೆಗಳು ಮಾತ್ರ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಪಟ್ಟವು.
► ಸದನ ಸಮಿತಿಗಳ ಹೆಚ್ಚುವರಿ ಪರಿಶೀಲನೆಗೆ ಒಳಗಾದ ಮಸೂದೆಗಳಲ್ಲಿ ಅತಿ ಹೆಚ್ಚಿನ ಚರ್ಚೆ ಆದದ್ದು ಡಿಜಿಟಲ್ ಡೇಟಾ ಸಂರಕ್ಷಣಾ ಕಾಯ್ದೆಯ ಕುರಿತು (78 ಸಭೆಗಳು). ಅದು ಬಿಟ್ಟರೆ ಹೆಚ್ಚು ಚರ್ಚೆ ಆದದ್ದು ಜೈವಿಕ ವೈವಿಧ್ಯತೆ (ತಿದ್ದುಪಡಿ) ಕಾಯ್ದೆ 2021 (15 ಸಭೆಗಳು). ಉಳಿದವು ಸರಾಸರಿ ಒಂಭತ್ತು ಸಭೆಗಳಲ್ಲೇ ಮುಗಿದಿವೆ.
► ಸದನದಲ್ಲಿ ಮಂಡನೆಯಾಗಿ ಹಾಗೇ ವಾಯಿದೆ ತೀರಲು ಬಿಟ್ಟ ಮಸೂದೆಗಳು ನಾಲ್ಕು. ಅವು ಯಾವುವೆಂದರೆ, ಅಂತರ್ ರಾಜ್ಯ ನದಿ ವಿವಾದಗಳ (ತಿದ್ದುಪಡಿ) ಮಸೂದೆ, 2019; ಬಾಲವಿವಾಹ ಪ್ರತಿಬಂಧ (ತಿದ್ದುಪಡಿ) ಕಾಯ್ದೆ 2021; ವಿದ್ಯುತ್ (ತಿದ್ದುಪಡಿ) ಕಾಯ್ದೆ 2022. ಇದರಲ್ಲಿ ಕೊನೆಯ ಎರಡನ್ನು ಸದನ ಸಮಿತಿಗಳ ಪರಾಮರ್ಶೆಗೆ ನೀಡಲಾಗಿತ್ತು.
► 17ನೇ ಲೋಕಸಭೆಯಲ್ಲಿ ಅತ್ಯಂತ ಹೆಚ್ಚು, ಅಂದರೆ 729 ಖಾಸಗಿ ಸದಸ್ಯರ ಮಸೂದೆಗಳು ಮಂಡಿತವಾಗಿದ್ದವಾದರೂ, ಸದನ ಚರ್ಚೆ ನಡೆಸಿದ್ದು ಅವುಗಳಲ್ಲಿ ಕೇವಲ ಎರಡನ್ನು ಕುರಿತು; ಅಂಗೀಕಾರಗೊಂಡದ್ದು ಶೂನ್ಯ.
► ಸಂಸತ್ತಿನಲ್ಲಿ ನಡೆದ ಶೇ. 31 ಚರ್ಚೆಗಳು ಶಾಸನ ರಚನೆ ಮತ್ತು ಬಜೆಟ್‌ಗೆ ಸಂಬಂಧಿಸಿದವಾಗಿರಲಿಲ್ಲ. ಸಂಸತ್ತಿಗೆ 75 ವರ್ಷಗಳಾದ ಹಿನ್ನೆಲೆಯಲ್ಲಿ, ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳ ಬಗ್ಗೆ ವಿಶೇಷ ಚರ್ಚೆಗಳು ನಡೆದವು. 13 ಅಲ್ಪಾವಧಿಯ ಚರ್ಚೆಗಳು ನಡೆದಿದ್ದು, ಅವುಗಳಲ್ಲಿ ಹವಾಮಾನ ಬದಲಾವಣೆ, ಬೆಲೆ ಏರಿಕೆ, ಕ್ರೀಡೆಗಳಿಗೆ ಪ್ರೋತ್ಸಾಹ, ಉಕ್ರೇನ್‌ನಲ್ಲಿನ ಪರಿಸ್ಥಿತಿಗಳು ಚರ್ಚೆ ಆಗಿವೆ. ಕುತೂಹಲಕರ ಸಂಗತಿ ಎಂದರೆ ಹಾಲಿ ಸರಕಾರದ ಎರಡೂ ಅವಧಿಗಳಲ್ಲಿ ಒಂದೇ ಒಂದು ನಿಲುವಳಿ ಸೂಚನೆಯನ್ನು ಸ್ಪೀಕರ್ ಪೀಠ ಅಂಗೀಕರಿಸಿಲ್ಲ. 2023ರ ಆಗಸ್ಟ್ ತಿಂಗಳಿನಲ್ಲಿ ಒಮ್ಮೆ ಸರಕಾರದ ವಿರುದ್ಧ ಅವಿಶ್ವಾಸಮತದ ಚರ್ಚೆ 20 ಗಂಟೆಗಳ ಕಾಲ ನಡೆದಿದೆ.
► ಸದನದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸಂಗತಿಗಳ ಕುರಿತಾದಂತೆ ಸಚಿವರ ಸ್ವಯಂಪ್ರೇರಿತ ಹೇಳಿಕೆಗಳು ದಾಖಲಾದದ್ದು ಈ ಹಿಂದಿನ ಎರಡು ಲೋಕಸಭೆಗಳಿಗೆ ಹೋಲಿಸಿದರೆ ತೀರಾ ಕಡಿಮೆ, ಕೇವಲ 28 ಬಾರಿ. ಪ್ರಶ್ನೋತ್ತರ ಅವಧಿ ನಿಗದಿತ ಸಮಯದ ಕೇವಲ ಶೇ. 60ರಷ್ಟು ಮಾತ್ರ ಕಾರ್ಯರೂಪಕ್ಕೆ ಬಂತು. ಕೋವಿಡ್ ಅವಧಿಯಲ್ಲಿ (ಮುಂಗಾರು ಅಧಿವೇಶನ, 2020) ಪ್ರಶ್ನೋತ್ತರ ಅವಧಿಯನ್ನೇ ರದ್ದು ಮಾಡಲಾಗಿತ್ತು.
ಬಜೆಟ್ ಮೇಲಣ ಚರ್ಚೆಗಳು ತೀರಾ ಕಡಿಮೆ ಆಗಿದ್ದು, 17ನೇ ಲೋಕಸಭೆಯಲ್ಲಿ 2019ರಿಂದ 2023ರ ನಡುವೆ ಶೇ. 80ರಷ್ಟು ಬಜೆಟ್ ಚರ್ಚೆ ಇಲ್ಲದೆ ಅಂಗೀಕಾರ ಆಯಿತು. 2023ರ ಬಜೆಟ್ ಮೇಲೆ ಚರ್ಚೆಯೇ ನಡೆಯಲಿಲ್ಲ. ಅದು ಹಾಗೆಯೇ ಅಂಗೀಕಾರವಾಯಿತು.
(ಗಮನಿಸಿ: ಇಲ್ಲಿ ನೀಡಲಾಗಿರುವ ಅಂಕಿಸಂಖ್ಯೆಗಳಿಗೆ ಆಧಾರ PRSLR ವಿಶ್ಲೇಷಣೆ)