ಮಾಧ್ಯಮ ಜಗತ್ತಿನ ‘ಮುರ್ಧಾಕೈಸೇಷನ್’ = ಭಾರತೀಯ ಮಾಧ್ಯಮಗಳ ‘ಆನಿಫಿಕೇಷನ್’

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರಿಕ್ ಓಬ್ರಿಯಾನ್ ಅವರು ರಾಜ್ಯಸಭೆಯಲ್ಲಿ ಫೆ.03ರಂದು ಮಾತನಾಡಿ, ಭಾರತದ ಮಾಧ್ಯಮ ರಂಗಕ್ಕೆ ಒಂದು ಎಚ್ಚರಿಕೆ ನೀಡಿದ್ದರು. ಜನಪ್ರತಿನಿಧಿಗಳಾಗಿ ನಮ್ಮ ಲೆಕ್ಕಾಚಾರ ಕೇಳುವ ಮಾಧ್ಯಮಗಳು ತಮ್ಮ ಮಾಲಕವರ್ಗದ ‘ಹಿತಾಸಕ್ತಿ ದ್ವಂದ್ವ’ಗಳನ್ನು ಯಾಕೆ ಬಹಿರಂಗಪಡಿಸುವುದಿಲ್ಲ? ಅವರು ಸ್ವಲ್ಪವಾದರೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ, ಮುಂದಿನ ಸಂಸತ್ ಅಧಿವೇಶನದಲ್ಲಿ ಅವರ ಹೆಸರುಗಳನ್ನು ಉಲ್ಲೇಖಿಸಿ, ಇದನ್ನೆಲ್ಲ ಬಹಿರಂಗಪಡಿಸಬೇಕಾಗುತ್ತದೆ ಎಂದು ಅವರು ಕಟುವಾಗಿ ಹೇಳಿದ್ದರು.
US $ 2,300 ಕೋಟಿ ತೂಗುವ ಜಾಗತಿಕ ಮಾಧ್ಯಮ ದೊರೆಗಳಾದ ರೂಪರ್ಟ್ ಮುರ್ಧಾಕ್ ಕುಟುಂಬವು ಸ್ಕೈ, ಫಾಕ್ಸ್ ಇತ್ಯಾದಿ ಚಾನೆಲ್‌ಗಳ ಸಹಿತ ಜಗತ್ತಿನಾದ್ಯಂತದ 150ಕ್ಕೂ ಮಿಕ್ಕಿ ಪ್ರಮುಖ ಮಾಧ್ಯಮಗಳ ಒಡೆತನ ಹೊಂದಿದೆ. 80ರ ದಶಕದಿಂದೀಚೆಗೆ ಜಗತ್ತಿನಾದ್ಯಂತ ವೇಗವಾಗಿ ನಡೆದಿರುವ ಜಾಗತೀಕರಣದ ಅಲೆಯ ಬೆನ್ನೇರಿ, ಸುದ್ದಿಮನೆಗಳ ಮೇಲೆ ಮುರ್ಧಾಕ್ ಬಳಗ ಮಾಡಿದ ದಾಳಿಯನ್ನು ಜಗತ್ತು ಇಂದು, ‘ಮಾಧ್ಯಮ ರಂಗದ ಮುರ್ಧಾಕೈಸೇಷನ್’ ಎಂದೇ ಗುರುತಿಸುತ್ತಿದೆ. ಅವರ ಈ ದಾಳಿ ಮೂರು ಅಲುಗುಗಳದು. ಅವು ಯಾವುವೆಂದರೆ: ಸುದ್ದಿಮಾಧ್ಯಮಗಳ ಮಾಲಕತ್ವವನ್ನು ವಶಪಡಿಸಿಕೊಂಡು, ಅಲ್ಲಿನ ಸುದ್ದಿಮನೆಗಳ ಸ್ವಾಯತ್ತೆಯನ್ನು ಮುರಿದು, ಅಲ್ಲಿ ತಮ್ಮ ಮ್ಯಾನೇಜ್‌ಮೆಂಟ್ ಪ್ರತಿನಿಧಿಗಳ ಸಾರ್ವಭೌಮತ್ವವನ್ನು ಸ್ಥಾಪಿಸುವುದು; ಬೆಲೆ ತಗ್ಗಿಸುವ ಸಮರದ ಮೂಲಕ ಮಾಧ್ಯಮ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸುವುದು; ಮತ್ತು ಮೂರನೆಯದಾಗಿ, ಆ ಭೌಗೋಳಿಕ ವ್ಯಾಪ್ತಿಯ ರಾಜಕೀಯಸ್ಥರೊಂದಿಗೆ ಪರಸ್ಪರ ಲಾಭದ ಹೊಂದಾಣಿಕೆ ಮಾಡಿಕೊಂಡು, ಅದಕ್ಕೆ ಪ್ರತಿಫಲ ರೂಪದಲ್ಲಿ, ಅವರಿಗೆ ಬೇಕಾದಂತೆ ಸಕಾಲಿಕ ಕಂಟೆಂಟ್ ಬೆಂಬಲ/ತಿರುವು ಒದಗಿಸುವುದು. ಇದು ಮುರ್ಧಾಕೈಸೇಷನ್‌ನ ಸ್ಥೂಲ ಸ್ವರೂಪ ಎಂದು ಹೇಳಿದರೆ, 2010ರಿಂದ ಈಚೆಗೆ ಭಾರತದಲ್ಲಿ ವೇಗವಾಗಿ ನಡೆದಿರುವ ‘ಆನಿಫಿಕೇಷನ್’ ಎಂದರೇನೆಂದು ಸುಲಭವಾಗಿ ಅರ್ಥವಾಗಿಬಿಡುತ್ತದೆ.
ಕಳೆದ 30 ವರ್ಷಗಳಿಂದ ಭಾರತೀಯ ಮಾಧ್ಯಮವು ‘ಇಂಡಸ್ಟ್ರಿ’ ಆಗಿ ಬೆಳೆಯುತ್ತಿದೆ. 2017ರಲ್ಲಿ 1.5 ಲಕ್ಷ ಕೋಟಿ ರೂ.ಗಳದಾಗಿದ್ದ ಮಾಧ್ಯಮ ಮಾರುಕಟ್ಟೆ, 2028ರ ಹೊತ್ತಿಗೆ 3.65 ಲಕ್ಷ ಕೋಟಿ ರೂ.ಗಳ ಗಾತ್ರದ್ದಾಗುವ ನಿರೀಕ್ಷೆಯನ್ನು ಆರ್ಥಿಕ ಪರಿಣತರು ವ್ಯಕ್ತಪಡಿಸುತ್ತಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಮಾಧ್ಯಮರಂಗದ ವಾರ್ಷಿಕ ಬೆಳವಣಿಗೆಯ ಕಾಂಪೌಂಡ್ ಮಾಡಲಾದ ದರವು (ಅಂಉಖ) ಶೇ. 9ರ ಆಸುಪಾಸಿನಲ್ಲಿದ್ದು, ಇದು ದೇಶದ ಜಿಡಿಪಿ ಬೆಳವಣಿಗೆಯ ದರಕ್ಕಿಂತ ಹೆಚ್ಚು! ಮಾಧ್ಯಮ ರಂಗದ ಈ ಬದಲಾವಣೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು, ಒಂದು ಲೆಕ್ಕಾಚಾರ ಕೇಳಿ. 30 ವರ್ಷಗಳ ಹಿಂದೆ, ಮಾಧ್ಯಮಗಳ ಒಟ್ಟು ಆದಾಯದ ಶೇ. 55-77ರಷ್ಟು ಭಾಗವು ಪತ್ರಿಕೆಗಳ ಓದುಗರಿಂದ (ಚಂದಾದಾರಿಕೆ, ಮಾರಾಟ) ಬರುತ್ತಿತ್ತು. ಆದರೆ ಇಂದು, ಜಾಹೀರಾತುಗಳು ತರುವ ಆದಾಯ, ಪತ್ರಿಕೆಯ ಒಟ್ಟು ಆದಾಯದ ಶೇ. 60ಕ್ಕಿಂತ ಹೆಚ್ಚು. ಟೆಲಿವಿಷನ್ ಚಾನೆಲ್‌ಗಳಲ್ಲಂತೂ ಇದು ಶೇ. 70-80ರಷ್ಟು. ಮಾಧ್ಯಮಗಳು ಓದುಗರ ಮುಲಾಜು ಕಳಚಿಕೊಂಡು, ಉದ್ಯಮಪತಿಗಳ ಹಿಂದೆ ಹೊರಟದ್ದಕ್ಕೆ ಮೂಲ ಕಾರಣ ಇದು.
1954ರಲ್ಲಿ ಭಾರತದ ಮೊದಲ ಪತ್ರಿಕಾ ಆಯೋಗವು, ದೇಶದಲ್ಲಿ ಮಾಧ್ಯಮಗಳ ಮಾಲಕತ್ವ ಸ್ವರೂಪದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, 1982ರಲ್ಲಿ ಎರಡನೇ ಪತ್ರಿಕಾ ಆಯೋಗವು ಮಾಧ್ಯಮಗಳಲ್ಲಿ ಏಕಸ್ವಾಮ್ಯವನ್ನು ಕೊನೆಗೊಳಿಸಲು, ದೇಶದ ದೊಡ್ಡ ಪತ್ರಿಕಾ ಬಳಗಗಳನ್ನು ಸರಕಾರೀಕರಣಗೊಳಿಸಬೇಕೆಂಬ ವಾದವನ್ನು ಮುಂದಿಟ್ಟಿತ್ತಂತೆ. ಆದರೆ, ಆ ಬಳಿಕ ಬಂದ ಉದಾರೀಕರಣದ ಅಲೆಯು ಮಾಧ್ಯಮಗಳನ್ನು ಎಲ್ಲಿಗೆ ತಲುಪಿಸಿತೆಂದರೆ, ಟೈಮ್ಸ್ ಆಫ್ ಇಂಡಿಯಾ ಬಳಗದ ನಿರ್ದೇಶಕ ವಿನೀತ್ ಜೈನ್ ಅವರು, ಈಗ ಪ್ರಸಿದ್ಧವಾಗಿರುವ ಅವರ ಸಂದರ್ಶನವೊಂದರಲ್ಲಿ (ನ್ಯೂಯಾರ್ಕರ್ ಪತ್ರಿಕೆಗೆ), ‘‘ನಮ್ಮದೀಗ ಸುದ್ದಿ ಪತ್ರಿಕೆಗಳ ವ್ಯವಹಾರ ಅಲ್ಲ, ಬದಲಾಗಿ, ಜಾಹೀರಾತು ವ್ಯವಹಾರ. ತನಿಖಾವರದಿಗಳು, ಸಂಪಾದಕೀಯ ವರದಿಗಳಿಗಿಂತ ಕಂಪೆನಿಯ ಬ್ಯಾಲೆನ್ಸ್ ಶೀಟ್ ಮಹತ್ವದ್ದು’’ ಎಂದು ಧ್ವನಿಸುವ ಮಾತುಗಳನ್ನಾಡಿದ್ದರು.
ಭಾರತದಲ್ಲಿ ಇಂದು ಜನ ಏನು ಓದಬೇಕು, ಕೇಳಬೇಕು, ನೋಡಬೇಕು ಎಂಬುದನ್ನು ಕೇವಲ 6-7 ಮಂದಿ ಉದ್ಯಮ ದೊರೆಗಳು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಅದಾನಿ ಬಳಗದAMG News, ಅಂಬಾನಿ ಬಳಗದ News 18, ದೇಶದ ಬಹುಪಾಲು ಸುದ್ದಿ-ಕಂಟೆಂಟ್ ಮತ್ತದರ ತಿರುವುಗಳನ್ನು ನಿರ್ಧರಿಸುತ್ತದೆ. ಈ ಪ್ರಕ್ರಿಯೆ ಆರಂಭಗೊಂಡದ್ದು 2012ರಲ್ಲಿ. News 18ಗೆ ಉಂಟಾಗಿದ್ದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಒದಗಿಸಿದ ಅಂಬಾನಿ ಬಳಗ, ಆ ಸಂಸ್ಥೆಯಲ್ಲಿ ಶೇ. 78 ಮಾಲಕತ್ವವನ್ನು ಖರೀದಿಸುತ್ತದೆ. 2022ರ ಹೊತ್ತಿಗೆ, ಎನ್‌ಡಿಟಿವಿ, ಕ್ವಿಂಟ್‌ನಂತಹ ಸುದ್ದಿಮಾಧ್ಯಮಗಳನ್ನಲ್ಲದೇ IANS ಎಂಬ ಸುದ್ದಿಮೂಲ ಸಂಸ್ಥೆಯನ್ನೂ ಖರೀದಿಸಿದ ಅದಾನಿ ಬಳಗದ AMG ಮೀಡಿಯಾ ನೆಟ್‌ವರ್ಕ್ಸ್, ಈಗ INS ಸುದ್ದಿಮೂಲ ಸಂಸ್ಥೆಯಲ್ಲೂ ಹೂಡಿಕೆ ಹೊಂದಿದೆ. ಸ್ಥೂಲವಾಗಿ ಹೇಳಬೇಕೆಂದರೆ, ಇಂದು ಭಾರತೀಯ ಮಾಧ್ಯಮರಂಗದ ಶೇ. 75 ಪಾಲು ಎರಡು ‘ಆನಿ’ ಬಳಗಗಳ ಕೈಯಲ್ಲಿದ್ದರೆ, ಉಳಿದ ಶೇ. 25 ಮಾತ್ರ ಉಳಿದವರ ಕೈಯಲ್ಲಿ ಇರುವಂತಿದೆ. ಇದು ಭಾರತೀಯ ಮಾಧ್ಯಮಗಳ ‘ಆನಿಫಿಕೇಷನ್’ ಪ್ರಕ್ರಿಯೆಯ ಸ್ಥೂಲ ಚಿತ್ರಣ.
ಹತ್ತಾರು ವ್ಯಾವಹಾರಿಕ ಹಿತಾಸಕ್ತಿಗಳನ್ನು ಹೊಂದಿರುವ ಈ ರೀತಿಯ ಉದ್ಯಮಪತಿಗಳು, ತಾವೇ ಸ್ವತಃ ಮಾಧ್ಯಮಪತಿಗಳೂ ಆದಾಗ ‘ಹಿತಾಸಕ್ತಿಯ ದ್ವಂದ್ವ’ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಮುರ್ಧಾಕ್ ಬಳಗದ ಚರಿತ್ರೆಯಿಂದ ಹೆಕ್ಕಿ ನೀಡುತ್ತೇನೆ. ಅದು ಅರ್ಥವಾದರೆ, ಭಾರತದಲ್ಲಿ ಇಂದಿನ ‘ಆನಿಫಿಕೇಷನ್’ನ ಸ್ವರೂಪ ಸುಲಭವಾಗಿ ಅರ್ಥವಾದೀತು. 1990ರ ಗಲ್ಫ್ ಕದನದ ಸಮಯದಲ್ಲಿ, ಮುರ್ಧಾಕ್ ಅವರ ಮಾಲಕತ್ವದ ಎಲ್ಲ 150 ಪತ್ರಿಕೆಗಳೂ ಅಮೆರಿಕವು ಇರಾಕಿನ ಮೇಲೆ ನಡೆಸಿದ ದಾಳಿಯನ್ನು ಜಗತ್ತಿನಾದ್ಯಂತ ಸಮರ್ಥಿಸಿಕೊಂಡವು. ಈ ಸಹಾಯಕ್ಕೆ ಪ್ರತಿಯಾಗಿ, ಅಮೆರಿಕವು ತನ್ನ ಎಲ್ಲ ಆಂತರಿಕ ಕಾನೂನುಗಳನ್ನು ಬದಿಗೆ ಸರಿಸಿ, ಅಮೆರಿಕದಲ್ಲಿ ಅಂಗಡಿ ತೆರೆಯಲು ಮುರ್ಧಾಕ್‌ಗೆ ಅವಕಾಶ ತೆರೆದಿತ್ತು!
ಭಾರತದಲ್ಲಿ 2014ಕ್ಕಿಂತ ಮೊದಲು, ಮಾಧ್ಯಮ ವರದಿಗಳು ಸರಕಾರಗಳನ್ನೇ ಅಲ್ಲಾಡಿಸಿದ/ಉರುಳಿಸಿದ ಕೆಲವಾದರೂ ‘ಘಟನೆ’ಗಳನ್ನು ನೆನಪಿಸಿಕೊಳ್ಳಬಹುದು. ಬೊಫೋರ್ಸ್‌ನಿಂದ ಹಿಡಿದು, ಅದೆಷ್ಟೋ ಸೊನ್ನೆಗಳ 2ಜಿ ಹಗರಣದ ತನಕ. ಆದರೆ, ಅಲ್ಲಿಂದೀಚೆಗೆ 11ವರ್ಷಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅಥವಾ ಪರ್ಯಾಯ ಮಾಧ್ಯಮಗಳೆಂದು ಗುರುತಿಸಿಕೊಳ್ಳುವ ಮಾಧ್ಯಮಗಳಲ್ಲಿ ಬಿಟ್ಟರೆ, ಮೇನ್‌ಸ್ಟ್ರೀಮ್ ಮಾಧ್ಯಮಗಳಲ್ಲಿ ಪ್ರಭುತ್ವದ ವಿರುದ್ಧ ಬಂದಿರುವ ಕನಿಷ್ಠ ಒಂದು ಗಮನಾರ್ಹವಾದ ವರದಿಯನ್ನು ನೆನಪಿಸಿಕೊಳ್ಳಿ ನೋಡೋಣ? ಯಾವುದೂ ಇಲ್ಲ! ಭಾರತವು 2024ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆಯ ಸೂಚ್ಯಂಕದಲ್ಲಿ 180 ದೇಶಗಳಲ್ಲಿ 96ನೇ ಸ್ಥಾನದಲ್ಲಿದೆ. ಆದರೂ, ಪ್ರಭುತ್ವದ ವಿರುದ್ಧ ಮಾಧ್ಯಮಗಳಲ್ಲಿ ಚಕಾರ ಇಲ್ಲ ಎಂದರೆ ಅಚ್ಚರಿ ಆಗುವುದಿಲ್ಲವೆ? ಈ ರೀತಿಯ ಕಾರಣಗಳಿಗಾಗಿಯೇ ಭಾರತದ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕವು 180 ದೇಶಗಳಲ್ಲಿ 159ನೇ ಸ್ಥಾನಕ್ಕೆ ಇಳಿದಿದೆ ಎಂಬುದಕ್ಕೆ ಸಂಶಯ ಬೇಡ.
ಈ ಹಿನ್ನೆಲೆಯಲ್ಲಿ, ರಾಜ್ಯಸಭಾ ಸದಸ್ಯ ಡೆರಿಕ್ ಓಬ್ರಿಯಾನ್ ಅವರು ಸಂಸತ್ತಿನಲ್ಲಿ ನೀಡಿದ ಎಚ್ಚರಿಕೆ ಸಕಾಲಿಕವಾದುದು. ಮಾಧ್ಯಮಪತಿಗಳು ತಮ್ಮ ‘ಹಿತಾಸಕ್ತಿಯ ದ್ವಂದ್ವ’ಗಳನ್ನು ಬಹಿರಂಗಪಡಿಸುವ ‘ನೈತಿಕ’ ಕೆಲಸ ಈಗಾಗಲೇ ಆಗಬೇಕಿತ್ತು. ಒಂದು ದೇಶದ ಸಾಮಾಜಿಕ ಮೌಲ್ಯ-ಭಾಷೆ ಮತ್ತು ವರ್ತನೆಗಳ ಮೇಲೆ ಗಾಢ ಪರಿಣಾಮ ಬೀರಬಲ್ಲ ಮಾಧ್ಯಮಗಳು, ತಾವು ಪ್ರಜಾತಂತ್ರದ ನಾಲ್ಕನೇ ಕಂಬ ಎಂದು ಸ್ವಯಂ ಘೋಷಿಸಿಕೊಂಡ ಬಳಿಕ, ಆ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಮಾಧ್ಯಮ ರಂಗದಲ್ಲಿ ತಂತ್ರಜ್ಞಾನವು ಇಂದು ಕನ್ವರ್ಜೆಂಟ್ ಮಾಧ್ಯಮಗಳ ಹೊಸ್ತಿಲಿನಲ್ಲಿರುವಾಗ, ದೇಶ-ಭಾಷೆಗಳ ಗಡಿಗಳು ಮಾಧ್ಯಮರಂಗದ ಮಟ್ಟಿಗೆ ಮಸುಕಾಗುತ್ತಿರುವಾಗ, ಸುದ್ದಿ-ಮಾಹಿತಿಗಳು ಅಂಗೈಯೆಟುಕಿನಲ್ಲಿಯೇ ರಿಯಲ್ ಟೈಮಿನಲ್ಲಿ ಲಭ್ಯವಾಗುತ್ತಿರುವಾಗ, ಬದಲಾದ ಕಾಲಮಾನಕ್ಕೆ ತಕ್ಕಂತೆ ಮಾಧ್ಯಮೋದ್ಯಮಕ್ಕೆ ಕಾನೂನಿನ ಒಂದು ಸಮಕಾಲೀನ ಚೌಕಟ್ಟು, ಪ್ರಸ್ತುತವೆನ್ನಿಸಬಲ್ಲ ಮಾಧ್ಯಮ ನೀತಿ ಮತ್ತು ಅಗತ್ಯ ಬಿದ್ದರೆ ಕಚ್ಚಲು ಹಲ್ಲುಗಳಿರುವ ನಿಯಂತ್ರಕ ಸಂಸ್ಥೆಯೊಂದು ರೂಪುಗೊಳ್ಳಬೇಕಿದೆ. ಉದ್ಯಮಪತಿಗಳ ಹಿಡಿತದ ಹೊರತಾಗಿಯೂ, ಮಾಧ್ಯಮಗಳಲ್ಲಿ ಕಾನೂನುಬದ್ಧವಾಗಿಯೇ ಕಾರ್ಪೊರೇಟ್ ಮತ್ತು ಎಡಿಟೋರಿಯಲ್ ಗವರ್ನೆನ್ಸ್ ಗಳು (ಸುದ್ದಿಮನೆ) ಪ್ರತ್ಯೇಕಗೊಳ್ಳಬೇಕು ಮತ್ತು ಸುದ್ದಿಮನೆ ಮತ್ತೊಮ್ಮೆ ಸ್ವಾಯತ್ತಗೊಳ್ಳಬೇಕು. ಇದು ಇವತ್ತಿನ ಚಾರಿತ್ರಿಕ ತುರ್ತು.