APAAR ID -ಡೇಟಾ ಅರಾಜಕತೆಯ ಮಗದೊಂದು ಕಥೆ
‘ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್’ ಎಂಬ ಹೊಸ ಹತ್ಯಾರನ್ನು ಮುಂದಿಟ್ಟುಕೊಂಡು, ಡೇಟಾ ಸುರಕ್ಷೆಯ ಯಾವುದೇ ತಳಪಾಯ ಇಲ್ಲದೆ ಹಲವು ಡೇಟಾ ಮಹಾಸೌಧಗಳನ್ನು ಕಟ್ಟಲಾಗುತ್ತಿದೆ. ಡೇಟಾ ಮಾಲಕರಿಗೆ ಯಾರಿಗೂ ತಮ್ಮ ಸ್ವಂತ ಜಾಗದ ಮೇಲೆ ಇನ್ಯಾರೋ ಈ ಸೌಧಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂಬ ಖಬರು ಇನ್ನೂ ಇಲ್ಲ. ಇಂತಹ ಸೌಧಗಳ ದೊಡ್ಡ ಪಟ್ಟಿಯೇ ಇದೆ (ಹಲವನ್ನು ಈ ಲೇಖಕ ವಿವಿಧ ಸಂದರ್ಭಗಳಲ್ಲಿ ಚರ್ಚಿಸಿದ್ದಾರೆ), ಆ ಪಟ್ಟಿಗೆ ಈಗ ಹೊಸ ಸೇರ್ಪಡೆ ಈ ಆಟೊಮ್ಯಾಟಿಕ್ ಪರ್ಮನೆಂಟ್ ಅಕಾಡಮಿಕ್ ಅಕೌಂಟ್ ರಿಜಿಸ್ಟ್ರಿ (APAAR). 2023ರ ಜುಲೈನಲ್ಲಿ ಭಾರತ ಸರಕಾರವು One Nation; One Student ID ಘೋಷಣೆಯಡಿ ಈ ‘ಆಧಾರ್’ ಆಧರಿತ ವಿದ್ಯಾರ್ಥಿ ಅನನ್ಯ ಗುರುತು ಸಂಖ್ಯೆ ಕಾರ್ಯಕ್ರಮವನ್ನು ಪ್ರಕಟಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ 2020) ಭಾಗವಾಗಿ, ದೇಶದ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿ ಜೀವನದುದ್ದಕ್ಕೂ ತಮ್ಮ ಶೈಕ್ಷಣಿಕ ದಾಖಲೆಗಳು, ಮಾಹಿತಿಗಳು ಮತ್ತು ಸಾಧನೆಗಳನ್ನು ಡಿಜಿಟಲ್ ಆಗಿ ಸಂಗ್ರಹಿಸಿಟ್ಟುಕೊಳ್ಳಲು ಈ ವ್ಯವಸ್ಥೆ ಎಂದು ಹೇಳಲಾಗುತ್ತಿದೆ. ಸಾಂವಿಧಾನಿಕವಾಗಿ ಜಂಟಿ ಪಟ್ಟಿಯಲ್ಲಿ ಬರುವ ‘ಶಿಕ್ಷಣ’ವನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳಲು ಭಾರತ ಸರಕಾರವು ೨೦೨೩ರ ಅಕ್ಟೋಬರಿನಲ್ಲೇ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಿ, ಆಯಾ ರಾಜ್ಯಗಳ ವಿದ್ಯಾರ್ಥಿಗಳನ್ನೆಲ್ಲ ಅಪಾರ್ ಐಡಿ ರಚಿಸಿಕೊಳ್ಳಲು ಪ್ರೇರಿಸುವಂತೆ ಸೂಚಿಸಿತ್ತು. (DONo. 23-4/2023-States Dated 11-10-2023). ಮಾತ್ರವಲ್ಲದೆ, ವಯಸ್ಕರಲ್ಲದ ಈ ಮಕ್ಕಳ ಡೇಟಾ ಸಂಗ್ರಹಕ್ಕೆ ಹೆತ್ತವರ ಒಪ್ಪಿಗೆ ಪಡೆಯಲು, ಶಾಲೆಗಳಲ್ಲಿ ಹೆತ್ತವರ-ಶಿಕ್ಷಕರ ಸಭೆ (ಪಿಟಿಎಂ) ಕರೆಯುವುದಕ್ಕೆ ಸೂಚಿಸಿತ್ತು. ಸಭೆಯಲ್ಲಿ ಹೆತ್ತವರಿಂದ ಈ ಬಗ್ಗೆ ಸಾಮೂಹಿಕವಾಗಿ ಲಿಖಿತ ಒಪ್ಪಿಗೆ ಪಡೆಯುವುದಕ್ಕೆ ಪ್ರೊಫಾರ್ಮಾ ಒಂದನ್ನು ಕೂಡ ಆ ಪತ್ರದ ಜೊತೆಗೆ ಕಳುಹಿಸಿತ್ತು.
ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾರ್ಯಾಂಗಗಳು, ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಈಗಾಗಲೇ ಈ ಅಪಾರ್ ನೋಂದಣಿಯನ್ನು ವೇಗವಾಗಿ ಆರಂಭಿಸಿವೆ. 2024ರ ಮೇ ಹೊತ್ತಿಗಾಗಲೇ ದೇಶದಲ್ಲಿ 25 ಕೋಟಿಗೂ ಮಿಕ್ಕಿ ಮಕ್ಕಳು ಈ ನೋಂದಣಿ ಮಾಡಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ದೇಶದ ನಾಗರಿಕರ ಡೇಟಾ ಸಂರಕ್ಷಣೆಗೆಂದು ಭಾರತ ಸರಕಾರ ಜಾರಿಗೆ ತಂದಿರುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆ್ಯಕ್ಟ್-2023 ಜಾರಿಗೆ ಬಂದದ್ದೇ 2023ರ ಸೆಪ್ಟಂಬರ್ 01ರಂದು ಅರ್ಥಾತ್ ಸುತ್ತೋಲೆ ಹೊರಡುವ ಒಂದು ತಿಂಗಳ ಮೊದಲು. ಆ ಕಾನೂನಿನ ಅಡಿಯಲ್ಲಿ ನಿಯಮಗಳೆಲ್ಲ ಈಗಷ್ಟೇ ರೂಪುಗೊಳ್ಳುತ್ತಿವೆ. ಅಂದರೆ, ಈ ಅಪಾರ್ ಯೋಜನೆ ಅವಸರದ ಹೆರಿಗೆ ಎಂಬುದು ಸ್ಪಷ್ಟ! ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಭಾರತ ಸರಕಾರ [(2019) 1 SCC1]ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವಂತೆ ಭಾರತದ ಪ್ರಜೆಗೆ ಖಾಸಗಿತನದ ಹಕ್ಕು ಸಾಂವಿಧಾನಿಕವಾದುದಾಗಿದ್ದು, ಅದನ್ನು ಮೀರಿ ಖಾಸಗಿತನದಲ್ಲಿ ಸರಕಾರದ ಹಸ್ತಕ್ಷೇಪ ನಡೆಯಬೇಕಿದ್ದರೆ, ಅದಕ್ಕೆ ಕಾನೂನಿನ ಬಲ ಬೇಕಿರುತ್ತದೆ. ನಿರ್ದಿಷ್ಟ ನೀತಿ ಇಲ್ಲದೆ, ಶಾಲೆಗಳ ಮಟ್ಟದಲ್ಲಿ ಬಹುತೇಕ ಬಲವಂತವಾಗಿಯೇ (ಕಳೆದ ವಾರ ಮಹಾರಾಷ್ಟ್ರದಲ್ಲಿ ಈ ಯೋಜನೆಯಡಿ ಮಕ್ಕಳ ನೋಂದಣಿ ನಡೆದಿರುವ ಬಗ್ಗೆ ಹೆತ್ತವರಿಂದ ಆತಂಕ ವ್ಯಕ್ತವಾದ ಪ್ರಕರಣಗಳು ಪತ್ರಿಕಗಳಲ್ಲಿ ವರದಿ ಆಗಿದ್ದವು) ನಡೆಯುತ್ತಿರುವ ಈ ಡೇಟಾ ಸಂಗ್ರಹ ಬಹಳ ಆತಂಕಕಾರಿ. ಸರಕಾರಕ್ಕೆ ಈ ರೀತಿಯ ಬಲವಂತ ಈಗ ಅಭ್ಯಾಸ ಆದಂತಿದೆ. ಆಧಾರ್ ಕಡ್ಡಾಯ ಎಂದು ಒತ್ತಾಯಿಸಿ, ನ್ಯಾಯಾಲಯ ಸ್ಪಷ್ಟೀಕರಣ ಕೇಳಿದಾಗ ಅದು ‘ಸ್ವ-ಇಚ್ಛೆಯದು’ ಎಂದು ಹೇಳಿದ್ದು; ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹಲವೆಡೆ ಕಾನೂನು ಬಾಹಿರವಾಗಿ ಕಡ್ಡಾಯಗೊಳಿಸಿದ್ದು... ಇಂತಹ ಒತ್ತಡ ತಂತ್ರಗಳ ಯಶಸ್ಸಿನ ಮುಂದುವರಿಕೆಯಗಿಯೇ ಈ ಅಪಾರ್ ಐಡಿ ಇರುವಂತೆ ಕಾಣಿಸುತ್ತಿದೆ. ಶಾಲೆಗಳಲ್ಲಿ ಹೆತ್ತವರಿಗೆ ಮನಸ್ಸಿಲ್ಲದಿದ್ದರೂ, ತಮ್ಮ ಮಗುವಿನ ಡೇಟಾ ಸಂಗ್ರಹಕ್ಕೆ ಒಪ್ಪಿಗೆ ಪತ್ರವನ್ನು ಸಹಿಮಾಡುವುದು ಈ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿಬಿಡುತ್ತದೆ ಮತ್ತು ಇದು ಆತಂಕಕಾರಿ ಸನ್ನಿವೇಶ.
2024ರ ಸಾರ್ವತ್ರಿಕ ಚುನಾವಣೆಗಳ ವೇಳೆ ಬಿಜೆಪಿ ಬಿಡುಗಡೆಗೊಳಿಸಿದ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪೂರ್ವಪ್ರಾಥಮಿಕದಿಂದ ಉನ್ನತ ಶಿಕ್ಷಣದ ತನಕ ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಜಾರಿಗೆ ತಂದು ಶೇ. 100 ಸಾಧನೆ ಮಾಡಲಿರುವುದಾಗಿ ಹೇಳಿಕೊಂಡಿತ್ತು. ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿ ಈ ಅನುಷ್ಠಾನವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಕರ್ನಾಟಕದಂತಹ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳೂ ಎತ್ತಲೇಬೇಕಾಗಿದ್ದ ಸಾಂವಿಧಾನಿಕ ಪ್ರಶ್ನೆಗಳನ್ನೆತ್ತದೆ, ಕಾರ್ಯಾಂಗದ ಅಡಿಯಾಳಿನಂತೆ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ದಯನೀಯ ಸ್ಥಿತಿ ಮತ್ತು ನಾವು ಆರಿಸಿರುವ ಜನಪ್ರತಿನಿಧಿಗಳ ಗುಣಮಟ್ಟದ ದ್ಯೋತಕ.
ಈ ಬಗ್ಗೆ ಸಂಸತ್ತಿನಲ್ಲಿ ನಿರ್ದಿಷ್ಟವಾಗಿ ಕೇಳಲಾದ ಪ್ರಶ್ನೆಗೂ ಸರಕಾರ ಸುತ್ತುಬಳಸಿ ಉತ್ತರಿಸಿದೆ. ಭಾರತ ಸರಕಾರ ಹೊಸ ಶಿಕ್ಷಣ ನೀತಿಯನ್ವಯ 2021ರ ಜುಲೈ ತಿಂಗಳಲ್ಲಿ ಅಕಾಡಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ)ಯೋಜನೆ ಆರಂಭಿಸಿದ್ದು ಅದರ ಭಾಗವಾಗಿ ಶೈಕ್ಷಣಿಕ ಎಕೊಸಿಸ್ಟಂನ ಸ್ಟೇಕ್‌ಹೋಲ್ಡರ್‌ಗಳಿಗೆ ಅಡ್ಡಿ ರಹಿತ ಸಂವಹನ ಸಾಧ್ಯವಾಗಲು ಅನನ್ಯ ಐಡಿಗಳನ್ನು ರೂಪಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಉತ್ತರಿಸಿದ್ದರು (ಲೋಕಸಭೆಯಲ್ಲಿ ಚುಕ್ಕೆ ಸಹಿತ ಪ್ರಶ್ನೆ 12, ದಿನಾಂಕ 04-12-2023).
ಈ ಡೇಟಾ ಸಂಗ್ರಹ ಆದಾಗ ಏನಾಗಬಹುದು?
ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ೧೨ ಅಂಕಿಗಳ ಅಪಾರ್ ಐಡಿ ಸಿಗಲಿದೆ. ದೇಶ ವೇಗವಾಗಿ ಖಾಸಗೀಕರಣಗೊಳ್ಳುತ್ತಿರುವಾಗ, ನಾಳಿನ ಪ್ರಜೆಗಳಾಗಲಿರುವ, ಉದ್ಯೋಗಿ ಗಳಾಗಲಿರುವ ಇಂದಿನ ವಿದ್ಯಾರ್ಥಿಗಳ ಈ ಖಾಸಗಿ ಡೇಟಾಗಳ ಪರಿಶೀಲನೆಯಂತಹ ಕೆಲಸಗಳನ್ನು ಮಾಡಲಿರುವವರು ಖಾಸಗಿಯವರು. ಈಗಾಗಲೇ ಸಿಕ್ಕಸಿಕ್ಕಲ್ಲಿ ಆಧಾರ್ ಕಾರ್ಡ್ ಪ್ರತಿ ಕೊಟ್ಟು, ಡಿಜಿಟಲ್ ವಂಚನೆಯಂತಹ ಹಲವು ಸಿಕ್ಕುಗಳಲ್ಲಿ ಜನ ಸಿಕ್ಕಿಹಾಕಿಕೊಂಡು ಆರ್ಥಿಕವಾಗಿ, ಮಾನಸಿಕವಾಗಿ ನರಳುತ್ತಿದ್ದಾರೆ. ನಾಳೆ ವಿದ್ಯಾರ್ಥಿಗಳ ಈ ಅಪಾರ್ ಕಾರ್ಡ್ ಎಲ್ಲ ಶಾಲೆಗಳಲ್ಲಿ ಉಳಿದುಕೊಳ್ಳಲಿದೆ. ಅಲ್ಲಿನ ಡೇಟಾ ಸಂಗ್ರಹ-ನಿರ್ವಹಣೆಗಳಿಗೆ ಯಾವುದೇ ಸ್ಪಷ್ಟ ನೀತಿ ಇನ್ನೂ ರೂಪುಗೊಂಡಿಲ್ಲ. ಹಾಗಾಗಿ, ಆಧಾರ್ ಕಾರ್ಡಿನ ರಂಪಗಳದೇ ಅಪರಾವತಾರ, ನಾಳೆ ವಿದ್ಯಾರ್ಥಿಗಳ ಅಪಾರ್ ಕಾರ್ಡ್‌ಗಳ ಮೂಲಕವೂ ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆಲ್ಲ ಹೊಣೆ ಹೊರುವವರೂ ಯಾರೂ ಇಲ್ಲ. ಏಕೆಂದರೆ, ವಿದ್ಯಾರ್ಥಿಗಳ ಹೆತ್ತವರು ಸಹಿ ಮಾಡಿ ಕೊಟ್ಟಿರುವ ಒಪ್ಪಿಗೆ ಪತ್ರದಲ್ಲೇ, ‘‘ಯಾವುದಾದರೂ ಹಂತದಲ್ಲಿ ಒಪ್ಪಿಗೆಯನ್ನು ಹಿಂದೆಗೆದುಕೊಂಡರೆ, ಅದಾಗಲೇ ಸಂಸ್ಕರಣೆಗೊಂಡಿರುವ ಡೇಟಾದ ಮೇಲೆ ಅದು ಪರಿಣಾಮ ಬೀರಲಾರದು’’ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಸರಕಾರ ಇಂತಹ ಸಂವಿಧಾನಬಾಹಿರ ಡೇಟಾ ಸಂಬಂಧಿ ಚಟುವಟಿಕೆಗಳನ್ನು ನಡೆಸಿದಾಗಲೆಲ್ಲ ಅದಕ್ಕೆ ಕ್ಯಾತೆ ತೆಗೆಯುವುದು ಅನಿವಾರ್ಯ. ಡೇಟಾ ಸಂರಕ್ಷಣೆಗೆ ಸಂಬಂಧಿಸಿ ಬಲವಾದ ಕಾನೂನುಗಳಿರುವ ಹಲವು ದೇಶಗಳಲ್ಲಿ ಇಂತಹ ಯೋಜನೆಗಳು ಬಹಳ ಸುವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿವೆ. ಅಲ್ಲಿ ಡೇಟಾ ಬಳಕೆ, ಸಂಗ್ರಹ, ಉದ್ದೇಶಪೂರ್ತಿಯ ಬಳಿಕ ಅಳಿಸುವಿಕೆ, ಸಂಗ್ರಾಹಕರ ಜವಾಬ್ದಾರಿಗಳು ಎಲ್ಲವನ್ನೂ ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಅದರಲ್ಲೂ ಮಕ್ಕಳ ಡೇಟಾಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ನಿಯಮಗಳಿವೆ. ಹಾಗಾಗಿ, ಡೇಟಾದಾತರಿಗೆ ತಮ್ಮ ಡೇಟಾದ ಸ್ಥಿತಿ ಏನೆಂಬುದು ಖಚಿತವಾಗಿ ಗೊತ್ತಿರುತ್ತದೆ ಮತ್ತು ಡೇಟಾ ಅಪಬಳಕೆ ಆದಾಗ ಅದಕ್ಕೆ ಕಾನೂನುಬದ್ಧ ಪರಿಹಾರ ಪಡೆಯುವುದಕ್ಕೂ ದಾರಿಗಳಿವೆ. ಆದರೆ ಭಾರತದಲ್ಲಿ, ದೇಶದ ಅತಿದೊಡ್ಡ ಡೇಟಾ ಸಂಗ್ರಾಹಕ (ಫಿಡ್ಯೂಷರಿ) ಆಗಿರುವ ಭಾರತ ಸರಕಾರ ತನ್ನನ್ನು ತಾನು ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ. ಅಂದರೆ ಸರಕಾರಕ್ಕೆ ತಾನು ಸಂಗ್ರಹಿಸುವ ಡೇಟಾಕ್ಕೆ ಸಂಬಂಧಿಸಿದಂತೆ ಆ ಕಾನೂನಿನ ಜವಾಬ್ದಾರಿಗಳ ಹಂಗು ಇಲ್ಲ. ಇದು ಅತ್ಯಂತ ಆತಂಕಕಾರಿ ಸ್ಥಿತಿ.