ಪಿಎಲ್‌ಐ ಎಂಬುದು ಎಷ್ಟು ‘ಆತ್ಮನಿರ್ಭರ’?
ಭಾರತದಲ್ಲಿ ಉದಾರೀಕರಣ ಆದ ಬಳಿಕ ಸೇವಾಕ್ಷೇತ್ರದ್ದೇ ಅಬ್ಬರ. ಕೈಗಾರಿಕಾ ಉತ್ಪಾದನೆಗಳು ಚಿಗುರಿಕೊಳ್ಳಲಿಲ್ಲ. ಈಗ ಭಾರತದ ಆರ್ಥಿಕತೆಯಲ್ಲಿ ಸೇವಾ ಕ್ಷೇತ್ರದ ಪಾಲು ಅಂದಾಜು ಶೇ. 53 ಆದರೆ, ಕೃಷಿ ಇತ್ಯಾದಿ ಚಟುವಟಿಕೆಗಳ ಪಾಲು ಶೇ. 21 ಮತ್ತು ಕೈಗಾರಿಕೋದ್ಯಮಗಳ ಪಾಲು ಶೇ. 26. ಕೈಗಾರಿಕೆಗಳಲ್ಲಿ ವೃದ್ಧಿ ಆಗದೇ ಉದ್ಯೋಗ ಸೃಷ್ಟಿ ಆಗುವುದಿಲ್ಲ ಎಂಬುದು ಸಾಮಾನ್ಯವಾಗಿ ಇರುವ ಕಲ್ಪನೆ. ಹಾಲೀ ಭಾರತ ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ದೇಶದ ಒಳಗೆ ಉತ್ಪಾದನೆ ಹೆಚ್ಚಿಸಬೇಕು ಹಾಗೂ ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ 2021-22ರ ಬಜೆಟ್‌ನಲ್ಲಿ 13 (ಈಗ 14) ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನೆಗಳಿಗೆ ಲಿಂಕ್ ಮಾಡಲಾಗಿರುವ ಪ್ರೋತ್ಸಾಹಧನ (Production Linked Incentives- PLI) ನೀಡಲು 1.97 ಲಕ್ಷ ಕೋಟಿ ರೂ.ಗಳ ಬೃಹತ್ ಬಜೆಟರಿ ಅನುದಾನವನ್ನು ಪ್ರಕಟಿಸಿತ್ತು.
ಆಟೊ ಬಿಡಿಭಾಗಗಳು, ವಾಹನಗಳು, ಡ್ರೋನ್‌ಗಳು, ಸ್ಟೋರೇಜ್ ಬ್ಯಾಟರಿ, ಇಲೆಕ್ಟ್ರಾನಿಕ್ ಹಾರ್ಡ್‌ವೇರ್, ವೈದ್ಯಕೀಯ ಪರಿಕರಗಳು, ಉಕ್ಕು, ಔಷಧಿ ಮೂಲವಸ್ತುಗಳು, ಸೌರ ಪ್ಯಾನಲ್‌ಗಳು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಕೈಗಾರಿಕಾ ಬಳಕೆಯ ಟೆಕ್ಸ್‌ಟೈಲ್, ಏರ್‌ಕಂಡೀಷನರ್ ಇತ್ಯಾದಿ ವೈಟ್‌ಗೂಡ್ಸ್ ಹಾಗೂ ಸಿರಿಧಾನ್ಯಗಳು ಈ 14 ಕ್ಷೇತ್ರಗಳಲ್ಲಿ ಸೇರಿವೆ. ಇವು ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕೋಟಿ ರೂ. ಮೌಲ್ಯದ ಹೆಚ್ಚುವರಿ ಕೈಗಾರಿಕಾ ಉತ್ಪಾದನೆ ಮತ್ತು 60 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣ ಆಗಬೇಕೆಂಬುದು ಸರಕಾರದ ಉದ್ದೇಶ. ಈ ಪಿಎಲ್‌ಐ ಯೋಜನೆಯಡಿ ಬರುವ ಕೈಗಾರಿಕೆಗಳಲ್ಲಿ ಭಾರತದ ಒಳಗೆ ಉತ್ಪಾದನೆ ಆದ ಸರಕುಗಳಿಗೆ ಶೇ. 4-6ರಷ್ಟು ಪ್ರೋತ್ಸಾಹಧನವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಭಾರತ ‘ಆತ್ಮನಿರ್ಭರ’ಗೊಳ್ಳಲು ಸಹಾಯವಾಗಲಿದೆ ಎಂಬುದು ಸರಕಾರದ ನಂಬಿಕೆ. ( https://www.investindia.gov.in/production-linked-incentives-schemes-india ) ಮತ್ತು (PIB Release ID: 1884181)
ಮೇಲಿನ ಕೈಗಾರಿಕಾ ವಲಯಗಳ ಪಟ್ಟಿಯನ್ನು ಮತ್ತು ಅದಕ್ಕಾಗಿ ಉತ್ಪಾದನೆಗೆಂದು ಮುಂದೆ ಬಂದಿರುವ ಕಂಪೆನಿಗಳನ್ನು ಗಮನಿಸಿದರೆ, ಒಂದು ವಿಷಯ ಸ್ಪಷ್ಟ. ಅದೇನೆಂದರೆ ಇವೆಲ್ಲವೂ ಪರಿಪೂರ್ಣ ಉತ್ಪಾದನಾ ವಲಯಗಳಲ್ಲ. ಬದಲಾಗಿ, ಪಟ್ಟಿಯಲ್ಲಿರುವ ಹೆಚ್ಚಿನವು ಜಗತ್ತಿನ ವಿವಿಧ ಕಡೆಗಳಲ್ಲಿ ಉತ್ಪಾದನೆ ಆಗಿರುವ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು, ಪುರಾತನ ‘ಸ್ಕ್ರೂಡ್ರೈವರ್’ ತಂತ್ರಜ್ಞಾನ ಬಳಸಿ, ಜೋಡಿಸಿ ಮಾರುಕಟ್ಟೆಗೆ ಒದಗಿಸುವ ‘ಅಸೆಂಬ್ಲಿ’ ಉದ್ಯಮಗಳು. 80ರ ದಶಕದಿಂದಲೂ ಕಂಪ್ಯೂಟರ್ ಹಾರ್ಡ್‌ವೇರ್‌ಗಳನ್ನು ಈ ಹಾದಿಯಲ್ಲಿ ಅಸೆಂಬ್ಲಿ ಮಾಡುವ ಉದ್ಯೋಗ ಭಾರತದಲ್ಲಿ ಸಕ್ರಿಯವಾಗಿದೆ. ಈ ಅನುಭವದ ಆಧಾರದಲ್ಲಿ ಹೇಳಬೇಕೆಂದರೆ, ಇದು ತಳಮಟ್ಟದ ಅರೆಕುಶಲ ಕೆಲಸಗಾರರಿಗೆ ಹೊಟ್ಟೆಪಾಡು ಒದಗಿಸುವ ವ್ಯವಸ್ಥೆಯೇ ಹೊರತು, ದೇಶದ ಒಳಗೆ ಭದ್ರವಾದ ಕೈಗಾರಿಕಾ ಉತ್ಪಾದನೆ ವಲಯವನ್ನು ಕಟ್ಟುವ ಮತ್ತು ದೀರ್ಘಕಾಲಿಕ ನೆಲೆಯಲ್ಲಿ ಉದ್ಯೋಗ ಒದಗಿಸುವ ಅಥವಾ ಕೌಶಲಗಳನ್ನು ವೃದ್ಧಿಸುವ ಸಮಗ್ರ ವ್ಯವಸ್ಥೆ ಅಲ್ಲವೇ ಅಲ್ಲ.
ಇತ್ತೀಚೆಗೆ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಈ ಪಿಎಲ್‌ಐ ಪೊಳ್ಳುತನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಹಿರಿಯ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಅವರು, ಇದು ಹೇಗೆ ವಿದೇಶಿ ಕೈಗಾರಿಕೆಗಳನ್ನು ದುಡ್ಡುಕೊಟ್ಟು ಕರೆದು ನಮ್ಮಲ್ಲಿ ಉತ್ಪಾದನೆ ಮಾಡಲು ಹೇಳುವ ವಿವೇಚನಾರಹಿತ ಕ್ರಮ ಎಂದು ವಿವರಿಸಿದ್ದಾರೆ. ಥೈವಾನ್ ಮೂಲದ ಫಾಕ್ಸ್‌ಕಾನ್ ಸಂಸ್ಥೆಯು ಐಫೋನ್‌ಗಳ ಪ್ರಮುಖ ಉತ್ಪಾದಕ ಕಂಪೆನಿಯಾಗಿದ್ದು, ಅದು ಭಾರತದಲ್ಲಿ ಐಫೋನ್‌ಗಳ ಉತ್ಪಾದನೆ (ಅಸೆಂಬ್ಲಿ ಎಂದು ಓದಿಕೊಳ್ಳಿ) ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುವ ಸುದ್ದಿ ಇತ್ತೀಚೆಗೆ ಬಹಳ ಚಾಲ್ತಿಯಲ್ಲಿದೆ. ತಮಿಳುನಾಡಿನಲ್ಲಿ ಬೃಹತ್ ಐಫೋನ್ ಕಾರ್ಖಾನೆಯ ಬಳಿಕ, ಕರ್ನಾಟಕದಲ್ಲೂ ಅಂದಾಜು 4,500 ಕೋಟಿ ರೂ. ವೆಚ್ಚದಲ್ಲಿ ಎರಡು ಐಫೋನ್ ಅಸೆಂಬ್ಲಿ ಸ್ಥಾವರಗಳನ್ನು ನಿರ್ಮಿಸುವ ಬಗ್ಗೆ ಆ ಸಂಸ್ಥೆ ಹೇಳಿರುವುದು ಮತ್ತು ಕರ್ನಾಟಕ ಸರಕಾರ ಅದಕ್ಕೆ ರತ್ನಗಂಬಳಿ ಹಾಸುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ರಘು ಅವರ ಈ ಸಂದರ್ಶನ ಮಹತ್ವದ್ದೆನ್ನಿಸುತ್ತದೆ. ರಘು ಅವರು ಐಫೋನ್ ಉತ್ಪಾದನೆಯ ಬಗ್ಗೆಯೇ ಉದಾಹರಣೆ ನೀಡುತ್ತಾ, ಪಿಎಲ್‌ಐ ಯೋಜನೆಗಳು ಮುಂದೆ ನಮ್ಮನ್ನು ಎಲ್ಲಿಗೆ ತಲುಪಿಸಲಿವೆ ಎಂದು ಊಹಿಸಿದ್ದಾರೆ. ಒಂದು ಐಫೋನ್‌ನ ಅಂತಿಮ ಬೆಲೆಯ ಪ್ರತೀ ನೂರು ರೂಪಾಯಿಗಳಲ್ಲಿ, ಅದರ ಮೂಲ ಉತ್ಪಾದನಾ ವೆಚ್ಚ 30-40ರೂ.ಗಳು ಮತ್ತು ಅದರ ವಿನ್ಯಾಸ, ಅದರ ಸಾಫ್ಟ್ ವೇರ್ ಇತ್ಯಾದಿಗಳ ಇಂಟಲೆಕ್ಚುವಲ್ ಪ್ರಾಪರ್ಟಿ, ಮಾರುಕಟ್ಟೆ, ಪ್ರಚಾರ ಇತ್ಯಾದಿಗಳ ವೆಚ್ಚ 60-65ರೂ. ಆಗುತ್ತದೆ. ಅದರ ಅಸೆಂಬ್ಲಿಗೆ ತಗಲುವ ವೆಚ್ಚ ಕೇವಲ 4 ರೂ. ಈ ಕಾರಣಕ್ಕಾಗಿಯೇ ಐಫೋನ್ ಕಂಪೆನಿಯ ಮಾರುಕಟ್ಟೆ ಮೌಲ್ಯ ಮೂರು ಲಕ್ಷ ಕೋಟಿ ಡಾಲರ್‌ಗಳಾದರೆ, ಅದರ ನೈಜ ಉತ್ಪಾದಕ ಫಾಕ್ಸ್‌ಕಾನ್‌ನ ಮಾರುಕಟ್ಟೆ ಮೌಲ್ಯ 500 ಕೋಟಿ ಡಾಲರ್‌ಗಳು! (ಸಂದರ್ಶನದ ಪೂರ್ಣ ಪಾಠ ಇಲ್ಲಿದೆ: https://www.youtube.com/watch?v=t4pd7BVJ5Vw )
ಈಗ ಭಾರತದ ಪಿಎಲ್‌ಐ ಯೋಜನೆಯನ್ನು ಗಮನಿಸಿ. ಇಲ್ಲಿ ‘ಉತ್ಪಾದನೆ’ ನಡೆಸುವ ಕಂಪೆನಿಗಳಿಗೆ ನೂರಕ್ಕೆ 4ರಿಂದ 6 ರೂ.ಗಳ ಪಿಎಲ್‌ಐ ಸಬ್ಸಿಡಿ ಒದಗಿಸಲಾಗುತ್ತಿದೆ. ಅಂದರೆ ಕಂಪೆನಿಗೆ ನಾಲ್ಕು ರೂ.ಗಳ ವೆಚ್ಚ ಬೀಳುವ ಐಫೋನ್ ಬಿಡಿಭಾಗಗಳ ಅಸೆಂಬ್ಲಿ ಕೆಲಸವನ್ನು ಭಾರತದಲ್ಲಿ ಮಾಡಿಸಿದರೆ ಆ ಕಂಪೆನಿಗೆ ಆರು ರೂ.ಗಳ ಸಬ್ಸಿಡಿ ಸಿಗುತ್ತದೆ!! ಇಂತಹ ಆಫರ್‌ಗೆ ಯಾರು ತಾನೇ ಸಿದ್ಧರಿರುವುದಿಲ್ಲ? ಹಾಗಾಗಿಯೇ ಕಂಪೆನಿಗಳು ನಾಮುಂದು ತಾಮುಂದು ಎಂದು ಪಿಎಲ್‌ಐ ಯೋಜನೆಗೆ ಬರುತ್ತಿವೆ. ಆರಂಭದಲ್ಲಿ ಇವು ಸ್ವಲ್ಪ ಉದ್ಯೋಗ ಸೃಷ್ಟಿ ಮಾಡಬಹುದು. ಆದರೆ, ಅವು ಆ ಉದ್ಯೋಗಿಗಳಲ್ಲಿ ಕೌಶಲ ವೃದ್ಧಿ ಮಾಡುವುದಿಲ್ಲ. ಇನ್ನು ಐದು ವರ್ಷಗಳ ಬಳಿಕ ಒಂದು ವೇಳೆ ಪಿಎಲ್‌ಐ ಸಬ್ಸಿಡಿ ನಿಲ್ಲಿಸಿದರೆ, ಆ ಕಂಪೆನಿಗಳು ಇಲ್ಲಿ ಮುಂದುವರಿಯುವ ಗ್ಯಾರಂಟಿಯೂ ಇಲ್ಲ. ಇದು ಸಮಸ್ಯೆಯ ಒಂದು ಮುಖ, ಇನ್ನೊಂದೆಡೆ, ಈ ಅಸೆಂಬ್ಲಿ ಮಾಡಬೇಕಾದ ಬಿಡಿಭಾಗಗಳ ಆಮದು ದೊಡ್ಡ ಪ್ರಮಾಣದಲ್ಲಿ ಹೆಚ್ಚಲಿದೆ. ಆ ಗಾತ್ರಕ್ಕೆ ಅನುಗುಣವಾಗಿ ಅಂತಿಮ ಉತ್ಪನ್ನದ ರಫ್ತು ಹೆಚ್ಚುವುದಿಲ್ಲ. ಅದರ ಫಲಿತಾಂಶಗಳು ಈಗಾಗಲೇ ಕಾಣಿಸತೊಡಗಿದ್ದು, ವಾಣಿಜ್ಯ ಕೊರತೆ (trade deficit) ಈಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಇಂತಹದೊಂದು ಅಪಾಯಕಾರಿ ಸುಳಿಯಲ್ಲಿ ಸಿಲುಕಿಕೊಂಡು, ಅದರ ಕೊನೆಯಲ್ಲಿ ದೇಶ ಆರ್ಥಿಕವಾಗಿ ಹೊರೆಯನ್ನು ಅನುಭವಿಸುವ ಜೊತೆಗೆ, ದೇಶದ ಒಳಗಿನ ದುಡಿಮೆಗಾರರ ಕೌಶಲಗಳಲ್ಲೂ ವೃದ್ಧಿ ಆಗದಿರುವ ಸನ್ನಿವೇಶ ಎದುರಾಗಬಹುದು ಎಂದು ರಘುರಾಂ ರಾಜನ್ ಈ ಸಂದರ್ಶನದಲ್ಲಿ ಎಚ್ಚರಿಸಿದ್ದಾರೆ. ಬಡತನ ದೊಡ್ಡ ಪ್ರಮಾಣದಲ್ಲಿರುವ ದೇಶದಲ್ಲಿ ಕೃಷಿಗೆ ಮತ್ತು ಆಹಾರಕ್ಕೆ ಸಬ್ಸಿಡಿ ನೀಡುವುದು ತಪ್ಪು ಎಂಬ ವಾದ ಹುಟ್ಟುತ್ತಿರುವಾಗ, ಉದ್ಯೋಗಸೃಷ್ಟಿಯ ಹೆಸರಲ್ಲಿ ಕೈಗಾರಿಕೆಗಳಿಗೆ ಈ ಪ್ರಮಾಣದ ಅನಗತ್ಯ ಸಬ್ಸಿಡಿ ನೀಡುವುದು ಎಷ್ಟು ನೈತಿಕ? ಈ ಹಿನ್ನೆಲೆಯಲ್ಲಿ ಕನಿಷ್ಠ ಕರ್ನಾಟಕ ಸರಕಾರವಾದರೂ ತನ್ನ ಕೈಗಾರಿಕಾ ನೀತಿಯಲ್ಲಿ ದೀರ್ಘಕಾಲಿಕ ದೃಷ್ಟಿಕೋನವನ್ನು ಇರಿಸಿಕೊಂಡು ಮುಂದುವರಿಯುವುದು ಹೆಚ್ಚು ಸುರಕ್ಷಿತವಾದ ಹಾದಿ ಅನ್ನಿಸುತ್ತದೆ.