ಕೋವಿಡ್ ಕಾಸು ನುಂಗಿದಿರಾ?... ಅರಗಿಸಿಕೊಂಡಿರಾ?
ಏನೇ ಬಾನಗಡಿ ಮಾಡಿದರೂ ಜನ ಮಾತನಾಡುವುದಿಲ್ಲ ಎಂಬುದು ಖಚಿತವಾಗಿ ಗೊತ್ತಾಗಿಬಿಟ್ಟಿದೆ. ಹಾಗಾಗಿ, ಜನರ ‘ಕಣ್ಣುಬಂಗಾಳಿ’ ಮಾಡುವುದಕ್ಕೆ ತಂತ್ರಗಾರಿಕೆ ಕೂಡ ಈಗ ಪಕ್ವಗೊಂಡಿದೆ. ಸಾರ್ವಜನಿಕ ದುಡ್ಡು ಹೇರಾಫೇರಿ ಮಾಡಿದ ಹಗರಣವೊಂದು ಬೆಳಕಿಗೆ ಬಂದಾಗ ಸಾಮಾನ್ಯವಾಗಿ ಏನಾಗುತ್ತದೆ? ತಕ್ಷಣ ಅದರ ತನಿಖೆಗೊಂದು ಆಯೋಗ ನೇಮಕ; ಆಯೋಗ ವರದಿ ಸಲ್ಲಿಸುವುದಕ್ಕೆ ದಿನಾಂಕ ವಿಸ್ತರಿಸುತ್ತಾ ಹೋಗುವುದು; ಹಗರಣದ ಸಂಭಾವ್ಯ ಆರೋಪಿಗಳನ್ನು ರಾಜಕೀಯವಾಗಿ ಹಣಿಯಬೇಕೆಂದಾದರೆ, ಸರಿಯಾದ ಸಮಯ ನೋಡಿಕೊಂಡು ವರದಿಯ ಆಯ್ದ ಕೆಲವು ಭಾಗಗಳನ್ನು ಬಹಿರಂಗಪಡಿಸುವುದು ಮತ್ತು ಕೆಸರೆರಚಾಟದಲ್ಲಿ ತೊಡಗಿಕೊಳ್ಳುವುದು; ಸಮಯ ತೀರಿದ ಕೂಡಲೆ (ಉದಾ: ಚುನಾವಣೆ) ಆ ಇಡಿಯ ಹಗರಣವನ್ನು ನನೆಗುದಿಗೆ ಹಾಕುವುದು. ಈ ವಿನ್ಯಾಸ ಈಗ ಪ್ರತೀಬಾರಿ ಕಾಣಸಿಗುತ್ತಿದೆ. ಈ ಯಶಸ್ವೀ ತಂತ್ರದ ಪರಿಪೂರ್ಣ ಫಲಾನುಭವಿಗಳು ಅದೇ ರಾಜಕಾರಣಿಗಳು. ಸಾರ್ವಜನಿಕ ದುಡ್ಡು ಹೀಗೆ ಮಂಗಮಾಯ ಆಗುವಾಗ ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಾ ನಿಲ್ಲುವವರು ಜನಸಾಮಾನ್ಯರು.
ಇದಲ್ಲ ಎಂದಾದರೆ, ಕರ್ನಾಟಕದಲ್ಲಿ ಇಲ್ಲಿಯ ತನಕ ನೇಮಕಗೊಂಡ ‘ಆಯೋಗ’ಗಳ, ಲೋಕಾಯುಕ್ತ/ಸಿಒಡಿ/ಎಸ್‌ಐಟಿ ಇತ್ಯಾದಿ ತನಿಖಾ ವರದಿಗಳ, ಸರಕಾರ ಅಥವಾ ವಿಧಾನಮಂಡಲ ಸ್ವೀಕರಿಸಿರುವ ವಿವಿಧ ಆಯೋಗಗಳ ವರದಿಗಳ ಪಟ್ಟಿ ಬಹಿರಂಗಗೊಳಿಸಿ; ಅವುಗಳಲ್ಲಿ ಸರಕಾರ ಕ್ರಮಕ್ಕೆ ಆದೇಶಿಸಿದ, ತಾರ್ಕಿಕ ಅಂತ್ಯಕ್ಕೆ ತಲುಪಿದ ಹಗರಣಗಳ ಪಟ್ಟಿ ಕೊಡಿ.
ಸಣ್ಣ ಉದಾಹರಣೆ ಬೇಕಿದ್ದರೆ, ಕರಾವಳಿಯದೇ ಎರಡನ್ನು ಕೊಡುತ್ತೇನೆ. ಕರಾವಳಿಯ ಮಹಾಹಗರಣ ‘ವಾರಾಹಿ’ ಬಗ್ಗೆ ಲೋಕಾಯುಕ್ತ ತನಿಖಾವರದಿಯನ್ನು ಸರಕಾರ ಸ್ವೀಕರಿಸಿದ್ದು ಯಾವಾಗ? ಆ ಬಳಿಕ ಎಷ್ಟೆಲ್ಲ ಸರಕಾರಗಳು ಬಂದವು? ಆ ವರದಿಯ ಕಥೆ ಏನಾಯಿತು? ಅದು ಬಿಡಿ. ಕೋವಿಡ್ ಕಾಲದಲ್ಲಿ ವಿಧಾನ ಪರಿಷತ್ತಿನ ಒಳಗೇ ಸಭಾಪತಿಗಳ ಪದಚ್ಯುತಿ ಗದ್ದಲ ನಡೆಯಿತು. ಅದರ ತನಿಖೆಗೆ ಸದನ ಸಮಿತಿ ನೇಮಕವಾಯಿತು. ಮಧ್ಯಂತರ ವರದಿಯೂ ಬಂತು. ಆ ಬಳಿಕ ಏನಾಯಿತು? ಎಷ್ಟು ಸರಕಾರಗಳು ಬಂದು ಹೋದವು?
ಇದನ್ನೆಲ್ಲ ಮಾಡಿ ಅರಗಿಸಿಕೊಳ್ಳುವುದು ಸಾಧ್ಯ ಆಗುತ್ತಿದೆ ಏಕೆಂದರೆ... ಸಾರ್ವಜನಿಕ ನೆನಪು ಈಗ ಮಹಾಕ್ಷೀಣ.
ಈ ಪೀಠಿಕೆಗೂ ನಾನು ಮುಂದೆ ಹೇಳುವುದಕ್ಕೂ ನೇರ ಸಂಬಂಧ ಇಲ್ಲ. ನಾನು ಇಲ್ಲಿ ಹೇಳಹೊರಟಿರುವುದು ಕೋವಿಡ್ ಎಂಬ ಶತಮಾನದ ಮಹಾಹಗರಣದ ಕುರಿತು. ರಾಜಕೀಯ ಪಕ್ಷ ಯಾವುದೇ ಇರಲಿ, ಅವರೆಲ್ಲರೂ ಮಾಡಿದ್ದು ಒಂದೇ ಕೆಲಸವನ್ನು. ತಿಂದದ್ದು, ತೇಗಿದ್ದು ಮತ್ತು ತಿಂದ ತಮ್ಮದೇ ಬಿರಾದರಿಯವರನ್ನು ರಕ್ಷಿಸಿದ್ದು!
ಕೋವಿಡ್ ಕಾಲದಲ್ಲಿ ಏನೆಲ್ಲ ಹಗರಣಗಳು ನಡೆದಿರಬಹುದು ಎಂಬ ಪಟ್ಟಿಯೇ ಮಾರುದ್ದದ್ದು. ಖರೀದಿಯಲ್ಲಿ ಹೇರಾಫೇರಿ (ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್, ಪಲ್ಸ್ ಆಕ್ಸಿಮೀಟರ್, ಕೇರ್ ಸೆಂಟರ್ ಬೆಡ್, ಡಿಸ್‌ಇನ್ಫೆಕ್ಷನ್ ಟನೆಲ್‌ಗಳು ಇತ್ಯಾದಿ); ಔಷಧಿಗಳ ಒದಗಿಸುವಿಕೆಯಲ್ಲಿ ಹೇರಾಫೇರಿ (ಹೈಡ್ರಾಕ್ಸಿಕ್ಲೋರೊಕ್ವಿನ್, ರೆಮ್ಡೆಸಿವಿಯರ್, ಸ್ಟೀರಾಯ್ಡ್‌ಗಳು, ಐವರಮೆಕ್ಟಿನ್, ಆಯುಷ್ ಔಷಧಿಗಳು, ಪ್ಲಾಸ್ಮಾ ತೆರಪಿ ಇತ್ಯಾದಿ); ಉಪಕರಣಗಳ ಒದಗಿಸುವಿಕೆಯಲ್ಲಿ ಹೇರಾಫೇರಿ (ಟೆಸ್ಟ್ ಕಿಟ್‌ಗಳು, ವೆಂಟಿಲೇಟರ್, ಸಿಟಿ ಸ್ಕ್ಯಾನರುಗಳು, ಆಮ್ಲಜನಕ ಪೂರೈಕೆ ವ್ಯವಸ್ಥೆ ಇತ್ಯಾದಿ); ವ್ಯವಸ್ಥೆಯ ಅಪಾರದರ್ಶಕತೆ (ಪಿಎಂ ಕೇರ್ಸ್, ಆರೋಗ್ಯಸೇತು, ಖಾಸಗಿ ಆಸ್ಪತ್ರೆಗಳ ಬಿಲ್ವಿದ್ಯೆ, ಕೋವಿಡ್ ಸಾವುಗಳ ಸಂಖ್ಯೆ, ಲಸಿಕೆ ವಿತರಣೆ/ಪರಿಣಾಮಗಳು, ಕೋವಿಡ್ ಸಾವುಗಳಿಗೆ ಪರಿಹಾರ ಇತ್ಯಾದಿ) ಇಂತಹ ಇನ್ನೂ ಹತ್ತಾರು ಸಂಗತಿಗಳನ್ನು ಪಟ್ಟಿ ಮಾಡಬಹುದು.
ಈ ಎಲ್ಲ ಸಂಗತಿಗಳು ಕಳೆದೆರಡು ವರ್ಷಗಳಿಂದ ಮಾಧ್ಯಮಗಳಲ್ಲಿ ಗಮನಿಸುತ್ತಾ ಬಂದವರಿಗೆ ಹೊಸದೇನಲ್ಲ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೋವಿಡ್ ಕಾಲದಲ್ಲಿ ಯಾವ ರಾಜಕೀಯ ಪಕ್ಷ ಆಡಳಿತದಲ್ಲಿತ್ತೋ, ಅದರ ವಿರೋಧ ಪಕ್ಷಗಳು ತಮ್ಮ ರಾಜ್ಯದಲ್ಲಿ ಕೋವಿಡ್ ಹಗರಣ ನಡೆದಿದೆ; ಸಾವಿರಾರು ಕೋಟಿ ರೂ.ಗಳ ಹೇರಾಫೇರಿ ಆಗಿವೆ ಎಂದು ಗದ್ದಲ ಮಾಡಿವೆ, ಹಲವು ರಾಜ್ಯಗಳಲ್ಲಿ ತನಿಖೆಗಳೂ ನಡೆದಿವೆ. ದಿಲ್ಲಿ, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಕೇರಳ, ಪ. ಬಂಗಾಲ, ಒಡಿಶಾ, ಕರ್ನಾಟಕ... ಹೀಗೆ ರಾಜ್ಯಗಳ ವಿವರ ನೀಡುತ್ತಾ ಹೋಗಬಹುದು. ಈ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳೂ ತಮ್ಮದೇ ಆಡಳಿತ ಇರುವ ರಾಜ್ಯಗಳಲ್ಲಿ ಮಾತ್ರ, ತಾವು ‘ಮಹಾ ಸಂಭಾವಿತರು’ ಎಂದು ಸೋಗು ಹಾಕಿಕೊಂಡು ಕುಳಿತಿವೆ. ಅವರ ಪರಾಕ್ರಮ ಏನಿದ್ದರೂ ಅವರು ವಿರೋಧ ಪಕ್ಷ ಆಗಿದ್ದಲ್ಲಿ ಮಾತ್ರ.
ಇದರ ಮಧ್ಯೆ ಇನ್ನೂ ಒಂದು ಕುತೂಹಲಕರ ಸಂಗತಿ ಎಂದರೆ, ಬಹುತೇಕ ಎಲ್ಲ ರಾಜ್ಯಗಳೂ ಕೋವಿಡ್ ಹಗರಣದ ಗದ್ದಲದಲ್ಲಿ ಮುಳುಗಿದ್ದರೆ, ಭಾರತ ಸರಕಾರ ಮಾತ್ರ ಈ ಹಗರಣದಿಂದ ‘ಶಾಶ್ವತ ಇಮ್ಯೂನಿಟಿ ಲಸಿಕೆ’ ಪಡೆದು ಕುಳಿತಂತಿದೆ. ಅಲ್ಲಿರುವವರಿಗೆ ಹಗರಣ ಎಂದರೇನು ಎಂಬುದೇ ಗೊತ್ತಿಲ್ಲ. ಶತಮಾನದ ಜಗನ್ಮಾರಿಯನ್ನು ಭಾರತ ಸರಕಾರ ಹೇಗೆ ನಿರ್ವಹಿಸಿತೆಂಬುದನ್ನು ವಿವರವಾಗಿ ನೋಡಬೇಕೆಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರಿಗೂ ಅನ್ನಿಸಿಲ್ಲ!
ಕರ್ನಾಟಕದಲ್ಲಿ ಸೋರಿಕೆಯದೇ ಸಂಭ್ರಮ
ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಅವರು ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ಹೇರಾಫೇರಿಗಳ ಕುರಿತಂತೆ ತನ್ನ ನೇತೃತ್ವದ ವಿಚಾರಣಾ ಆಯೋಗದ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಗಳಿಗೆ ಅಕ್ಟೋಬರ್ ಎರಡನೇ ವಾರದಲ್ಲಿ ಸಲ್ಲಿಸಿದ್ದಾರೆ. ಸುಮಾರು 1,500 ಪುಟಗಳ ಈ ವರದಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿಗಳು, ವರದಿಯನ್ನು ಅಂತಿಮಗೊಳಿಸಿಕೊಡಲು ಆಯೋಗಕ್ಕೆ ಇನ್ನಾರು ತಿಂಗಳ ಸಮಯಾವಧಿ ನೀಡಿದ್ದಾರೆ. ಈ ಮಧ್ಯಂತರ ವರದಿಯಲ್ಲಿ, ಕರ್ನಾಟಕದ ಒಳಗೆ ಕೋವಿಡ್ ಕಾಲದಲ್ಲಿ ಸುಮಾರು 7,223 ಕೋಟಿ ರೂ.ಗಳಿಗೂ ಮಿಕ್ಕಿ ಹಣಕಾಸಿನ ಅವ್ಯವಹಾರ ಸಂಭವಿಸಿದೆ ಎಂದು ಹೇಳಲಾಗಿದೆಯಂತೆ. ರಾಜ್ಯ ಸಚಿವ ಸಂಪುಟ ಸಭೆಯ ಎದುರು ಬಂದ ಈ ಮಾಹಿತಿಯ ಕುರಿತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲರು ಹೇಳಿದ್ದನ್ನು ಪತ್ರಿಕೆಗಳು ವರದಿ ಮಾಡಿದ್ದವು. ಮುಖ್ಯಮಂತ್ರಿಗಳು ಈ ಹಗರಣವನ್ನು ವಿವರವಾಗಿ ಗಮನಿಸಲು ಸಂಪುಟ ಉಪಸಮಿತಿಯೊಂದನ್ನು ರಚಿಸಿರುವುದಾಗಿಯೂ, ಪ್ರಕರಣದ ಕುರಿತು ಎಸ್‌ಐಟಿ ರಚಿಸಿ ಪ್ರಕರಣದ ತನಿಖೆ ನಡೆಸಲಾಗುವುದೆಂದೂ ಗುರುವಾರ ಸಂಪುಟ ಸಭೆಯ ಬಳಿಕ ಸಚಿವ ಪಾಟೀಲರು ಪ್ರಕಟಿಸಿದ್ದಾರೆ.
ಅಧಿಕಾರ-ಗೋಪ್ಯತೆಯ ಪ್ರಮಾಣವಚನ ಸ್ವೀಕರಿಸಿರುವ ಸಚಿವ ಸಂಪುಟದ ಸ್ವಾಧೀನದಲ್ಲಿರುವ ಜಾನ್ ಮೈಕೆಲ್ ಡಿ’ ಕುನ್ಹಾ ಆಯೋಗದ ವರದಿಯ ಒಂದೊಂದೇ ಅಂಶಗಳು ಕಳೆದೊಂದು ವಾರದಿಂದೀಚೆಗೆ ಪ್ರತಿದಿನವೆಂಬಂತೆ ಮಾಧ್ಯಮಕ್ಕೆ ಸೋರಿಕೆ ಆಗುತ್ತಿದ್ದು, ಈ ಸೋರಿಕೆಗಳು ರಾಜ್ಯದಲ್ಲಿ ನಡೆದಿರುವ ಉಪಚುನಾವಣೆ ಪ್ರಚಾರಕ್ಕೆ ‘ರಂಗೇರಿಸಿವೆ’. ಇದು ವರದಿಯನ್ನು ರಾಜಕೀಯವಾಗಿ ಕಲುಷಿತಗೊಳಿಸುತ್ತಿದೆ ಎಂಬ ಪರಿವೆಯೂ ಸರಕಾರಕ್ಕೆ ಇದ್ದಂತಿಲ್ಲ. ಯುದ್ಧಕಾಲದಲ್ಲಿ ಏನು ಮಾಡಿದರೂ ತಪ್ಪಲ್ಲ ಎಂಬ ನಾಣ್ಣುಡಿಗೆ ಅನುಸಾರವಾಗಿ, ಕೋವಿಡ್ ಕಾಲದಲ್ಲಿ ಆಡಳಿತದಲ್ಲಿದ್ದ ಪಕ್ಷ ಮತ್ತು ಹಾಲೀ ಅಧಿಕಾರದಲ್ಲಿರುವ ಪಕ್ಷಗಳೆರಡೂ ಈ ಸೋರಿಕೆಯನ್ನು ಹಿಡಿದು ಮನಸೋ ಇಚ್ಛೆ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ. ಸ್ವತಃ ತನಿಖೆ ನಡೆಸಿದ ನ್ಯಾಯಮೂರ್ತಿಗಳನ್ನೂ ಅವರು ಬಿಟ್ಟಿಲ್ಲ. ಭಾರತ ಸರಕಾರದ ಘನ ಸಚಿವರೊಬ್ಬರು, ತನಿಖೆ ನಡೆಸಿದ ನ್ಯಾಯಮೂರ್ತಿಗಳು ಹಾಲಿ ಆಡಳಿತ ಪಕ್ಷದ ‘ಏಜೆಂಟ್’ ಎಂದು ಅಪ್ಪಣೆಕೊಡಿಸಿದ್ದಾರೆ.
ಈ ರೀತಿ, ಸಾರ್ವಜನಿಕರ ದುಡ್ಡು ಪೋಲಾದಾಗ ಅದನ್ನು ಗಂಭೀರವಾಗಿ ಪರಿಗಣಿಸದೆ, ಕೇವಲ ರಾಜಕೀಯ ದಾಳವಾಗಿ ಬಳಸಿಕೊಳ್ಳುವುದು ಮತ್ತು ಕೆಸರೆರಚಾಟಕ್ಕೆ ಸೀಮಿತಗೊಳಿಸಿ ಮರೆತುಬಿಡುವುದು ಈಗೀಗ ಒಂದು ‘ಪ್ಯಾಟರ್ನ್’ ಆಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಕೋವಿಡ್ ಕಾಲದಲ್ಲಿ ಸಂಭವಿಸಿದ್ದು ಕೇವಲ ಆರ್ಥಿಕ ಹಗರಣ ಮಾತ್ರವಲ್ಲ; ಅದೊಂದು ನೈತಿಕ ಹಗರಣ ಕೂಡ ಹೌದು. ರಾಷ್ಟ್ರ ಮಟ್ಟದಲ್ಲಿ ಸಮಗ್ರವಾಗಿ ಈ ಎಲ್ಲ ಬಾನಗಡಿಗಳ ಸಮಗ್ರ ಪರಿಶೀಲನೆಯನ್ನು ಸ್ವತಂತ್ರವಾದ ಸಾಂವಿಧಾನಿಕ ವ್ಯವಸ್ಥೆಯೊಂದು (ಉದಾ: ಸಿಎಜಿ) ನಡೆಸುವುದು ಸೂಕ್ತ. ಇಂತಹದೊಂದು ಹಾಡಹಗಲ ದರೋಡೆಯನ್ನೂ ಅದರ ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ಸಾಧ್ಯ ಆಗದಿದ್ದರೆ, ದುಡ್ಡಿನ ರುಚಿ ಸಿಕ್ಕವರು ದುಡ್ಡು ಹೊಡೆಯುವುದಕ್ಕಾಗಿಯೇ ಕಾಲಕಾಲಕ್ಕೆ ಹೊಸಹೊಸ ಜಗನ್ಮಾರಿಗಳನ್ನು ಸೃಷ್ಟಿಸಿಕೊಂಡು ಬಂದರೂ ಅಚ್ಚರಿ ಇಲ್ಲ. ಈ ಹಗರಣ ಪ್ರಜಾತಂತ್ರದ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿ ಪರಿಗಣಿತವಾಗಬೇಕು.